-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 28

ನಿಷ್ಪಾಪಿ ಸಸ್ಯಗಳು : ಸಂಚಿಕೆ - 28

ನಿಷ್ಪಾಪಿ ಸಸ್ಯಗಳು : ಸಂಚಿಕೆ - 28
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

        
        ಪ್ರೀತಿಯ ಮಕ್ಕಳೇ... ಹೇಗಿದ್ದೀರಿ...? ನಿಮ್ಮ ತರಗತಿಗಳಲ್ಲಿ ಪ್ರತೀ ವಿದ್ಯಾರ್ಥಿ/ನಿಯೂ ಕೂಡ ಸುಂದರವಾದ ಹೆಸರುಗಳನ್ನು ಹೊಂದಿದವರೇ ಆಗಿದ್ದಾರಲ್ವಾ... ಬಹಳಷ್ಟು ಹುಡುಕಾಡಿ ಅಪ್ಪ ಅಮ್ಮ ಮುದ್ದಾದ, ಆಪ್ತವಾದ ಹೆಸರೊಂದನ್ನು ಹತ್ತಾರು ಆಪ್ತರ ಸಲಹೆ ಸೂಚನೆಗಳನ್ನು ಪಡೆದು ಆರಿಸಿರುತ್ತಾರೆ. ಅದು ಒಂದು ಹೆಸರಿಗೆ ನಡೆಸುವ ದೊಡ್ಡ ಸರ್ಕಸ್ಸೇ ಅಗಿರುತ್ತದೆ. ಇಂದು ನಾನು ನಿಮಗೆ ಮುದ್ದಾದ ಹಲವಾರು ಹೆಸರುಗಳಿರುವ ಒಂದು ಬಳ್ಳಿಯ ಪರಿಚಯ ಮಾಡಿಕೊಡಲಿದ್ದೇನೆ.
       ನೀವೆಲ್ಲರೂ ಈ ಬಳ್ಳಿಯನ್ನು ಖಂಡಿತಾ ನೋಡಿರುತ್ತೀರಿ. ಮಾರ್ಗದ ಬದಿಗಳಲ್ಲಿ, ಬೇಲಿ, ಕಾಡು ಸವರಿದ ಜಾಗಗಳಲ್ಲಿ, ಮನೆ ಕಟ್ಟಲೆಂದು ಸಮತಟ್ಟು ಮಾಡಿದ ಜಾಗ ಮಾತ್ರವಲ್ಲದೆ ಉದ್ಯಾನವನ, ಮನೆಗಳ ಇದಿರಿನ ನೆರಳ ಚಪ್ಪರವಾಗಿಯೂ ಕಾಣಿಸಿಕೊಂಡಿರಬಹುದು. ವರ್ಷದ ಬಹುಕಾಲ ಹೂಗಳಿಂದ ಕಂಗೊಳಿಸುವ ಈ ಸಸ್ಯವನ್ನು ಪುಷ್ಪಾರಾಧಕರು ಪ್ರೀತಿಯಿಂದ ಮುಂಬಯಿ ಮಲ್ಲಿಗೆ, ಮಧುಮಾಲತಿ, ಮಧುಮಾಲ್ತಿ, ಮದ್ರಾಸ್ ಮಲ್ಲಿಗೆ, ರಂಗೂನ್ ಕ್ರೀಪರ್, ಚೆಂಬರ್ತಿ ಹೂ, ಕೋಲು ಮಲ್ಲಿಗೆ, ತೋರಣ ಮಲ್ಲಿಗೆ, ಮಾಧವಿ ಲತಾ, ವಸಂತ ಜಾಜಿ ರಾಧಾ ಮನೋಹರ, ರಾತ್ರಿ ಮಲ್ಲಿಗೆ, ರಾತ್ರಿ ರಾಣಿ, ಚನಬರ್ತಿ ಗಿಡ, ಮಧು ಮಂಜರಿ ಎಂದೂ ತುಳುವಿನಲ್ಲಿ ಅವಲಕ್ಕಿಯ ಹಾಗೆ ಕಾಣಿಸುತ್ತಿದೆ ಎಂಬ ಕಾರಣಕ್ಕೆ ಬಜಿಲ್ ಪೂ ಎಂದೂ ಕರೆಯುತ್ತಾರೆಂದರೆ ಆ ಹೂವಿಗೆಷ್ಟು ಪ್ರಾಧಾನ್ಯತೆ ಇರಬಹುದು... ಯೋಚಿಸಿ. ಅದರ ಸೌಂದರ್ಯ ನಾವೇಕೆ ಅರಿಯಲಿಲ್ಲವೆಂಬ ಸೋಜಿಗವೇ..!?
        ಹೌದು ಮಕ್ಕಳೇ, ಕೆಲವೊಮ್ಮೆ ನಮಗೆ ಗೊತ್ತೇ ಇರದೆಯೂ ಪ್ರಸಿದ್ಧ ಸಸ್ಯಗಳು ನಮ್ಮ ಒಡನಾಡಿಗಳಾಗಿ ಇದ್ದಿರಬಹುದು. ಈ ರಂಗೂನ್ ಬಳ್ಳಿಯನ್ನು 17ನೇ ಶತಮಾನದಲ್ಲಿ ಡಚ್ ವ್ಯಾಪಾರಿ ಜಾರ್ಜ್ ಎಬರ್ ಹಾರ್ಡ್ ರಂಫಿಯಸ್ ಎಂಬಾತ ಮ್ಯಾನ್ಮಾರ್ ನಲ್ಲಿ ದಾಖಲಿಸಿದ. ಏಷ್ಯಾದ್ಯಂತ ಶತಮಾನಗಳಿಂದ ಪಸರಿಸಿದ ಈ ಸಸ್ಯ ಇತ್ತೀಚಿನ ದಿನಗಳಲ್ಲಿ ವಿಶ್ವವ್ಯಾಪಿಯಾಗಲು ಹವಣಿಸುತ್ತಿದೆ. ಭಾರತದಲ್ಲಂತೂ ಸರ್ವವ್ಯಾಪಿ. 
     ಮಧುಮಾಲತಿ ಎಂದು ಎಲ್ಲರೂ ಕರೆಯುವ, ಇಷ್ಟಪಡುವ ಇದರ ಹೂವು ಗೊಂಚಲು ಗೊಂಚಲಾಗಿ ಮೂಡುತ್ತದೆ. 'ಕಿವಿಯಾಭರಣ ಕೆನ್ನೆಗೆ ಶೋಭೆ' ಎಂಬಂತೆ ಜೋಕಾಲಿಯಾಡುವ ಹೂ ಗೊಂಚಲುಗಳು ಬಳ್ಳಿಗೇ ಮಾನ್ಯತೆ ನೀಡುವಂತೆ ಮಾಡುತ್ತವೆ. ಉದ್ದನೆಯ ಕೊಳವೆಯಾಕಾರಾದ ತೊಟ್ಟಿನಲ್ಲಿ ಸುಂದರವಾಗಿ ಅರಳಿದ ಐದು ಎಸಳುಗಳ ಪುಷ್ಪಗಳು ಮಾದಕ ಸುವಾಸನೆ ಯನ್ನು ಹರಡುತ್ತವೆ. ಮುಸ್ಸಂಜೆಯಾಗುತ್ತಿದ್ದಂತೆ ಅರಳತೊಡಗುವ ಬಿಳಿಯದಾದ ಮೊಗ್ಗುಗಳು ಮುಗ್ಧ ಮಗುವಿನ ಹಾಲುಗಲ್ಲದಂತಿರುತ್ತವೆ. ರಾತ್ರಿಯೆಲ್ಲಾ ಕಂಪು ಸೂಸುವ ಬಿಳಿ ಹೂಗಳು ಮರುದಿನದ ಸಂಜೆಗೆ ಗುಲಾಬಿ ವರ್ಣಕ್ಕೆ ತಿರುಗುತ್ತದೆ. ಮೂರನೇ ದಿನ ಅದೇ ಹೂವು ಗಾಢ ಕೆಂಪು ವರ್ಣಕ್ಕೆ ತಿರುಗಿ ಮತ್ತೆರಡು ದಿನಗಳಲ್ಲಿ ಒಣಗಿ ಬೀಳುತ್ತದೆ. ಒಂದು ಗೊಂಚಲಿನಲ್ಲಿ ಒಮ್ಮೆಲೇ ಎಲ್ಲ ಹೂಗಳೂ ಅರಳಲಾರವು. ಮೊಗ್ಗು ಮೂಡುತ್ತಾ ಗೊಂಚಲು ದೀರ್ಘವಾಗುತ್ತದೆ. ಒಂದೇ ಗೊಂಚಲಲ್ಲಿ ಕಿರು ಮೊಗ್ಗು, ಬೆಳೆದ ಮೊಗ್ಗು , ಬಿಳಿ ಹೂವು, ಗುಲಾಬಿ ಹಾಗೂ ಕಡು ಕೆಂಪಿನ ಹೂಗಳನ್ನು ಏಕಕಾಲದಲ್ಲಿ ಕಾಣಬಹುದು. ಹೆಚ್ಚಾಗಿ ಬಳ್ಳಿಯ ಎಲ್ಲಾ ಕವಲುಗಳ ಎಲೆಗಳೆಡೆಯಲ್ಲೂ ಹೂ ಗೊಂಚಲುಗಳು ತುಂಬಿ ಗಿಡದ ಅಸ್ತಿತ್ವವನ್ನೇ ಮರೆಮಾಚುತ್ತವೆ. ಪ್ರತಿ ದಿನವೂ ಗಾಢ ಪರಿಮಳ ಹರಡುತ್ತಾ, ಚಿತ್ತಾಕರ್ಷಕವಾಗಿ ಬೆಳೆಯುವ ಈ ಬಳ್ಳಿಯನ್ನು ಹಗ್ಗ, ಕಬ್ಬಿಣದ ಸರಿಗೆ, ಪ್ಲಾಸ್ಟಿಕ್ ವಯರಿಗೆ ಅಥವಾ ಮರಕ್ಕೆ ಹಬ್ಬಿಸಿಯೂ ಸಂತಸ ಪಡಬಹುದು. ಉಯ್ಯಾಲೆ ಕಟ್ಟಿ ಅದರ ಮೇಲೆ ಈ ಬಳ್ಳಿ ಹಬ್ಬಿಸಿ ಕಣ್ತಣಿಸಿಕೊಳ್ಳುವುದನ್ನೂ ಅಲ್ಲಲ್ಲಿ ನೋಡಬಹುದು. ಬಣ್ಣ ವ್ಯತ್ಯಾಸಗಳಿಂದ ಏಕಕಾಲದಲ್ಲಿ ಗಮನಾರ್ಹ ದೃಶ್ಯಪ್ರದರ್ಶನ ನೀಡುವ ಈ ನಿಷ್ಪಾಪಿ ಸಸ್ಯದ ವಿದ್ಯಮಾನವನ್ನು ಎಲ್ಲರೂ ವಿಸ್ಮಯದಿಂದ ಆನಂದಿಸುತ್ತಾರೆ. ಇದರ ಹೂವುಗಳನ್ನು ಜಡೆಯಂತೆ ಹೆಣೆದು ಕಟ್ಟಬಹುದು. ಬಾಳೆ ನಾರಿನಿಂದಲೂ ಮೊಗ್ಗು ಕೊಯ್ದು ಕಟ್ಟಿ ಅರಳುವುದು ನೋಡಲು ಆಕರ್ಷಕವಾಗಿರುತ್ತದೆ.
      ಸಣ್ಣ ಬಳ್ಳಿಯಾಗಿ ಜೀವನ ಆರಂಭಿಸುವ ಈ ಗಿಡ ಬಲಿಷ್ಟವಾದ ಗಟ್ಟಿ ಬಳ್ಳಿಯಾಗಿ ಕಾಣಿಸಬಹುದು, ಬೆಳೆದಂತೆ ಪೊದೆಯಾಗಿ ಬೆಳೆಯಬಹುದು ಅಥವಾ ಮರದಂತೆಯೂ ಆಧಾರದ ಜೊತೆ ಸೇರಿ ಏರಿ ನಗಬಹುದು. ಮುಕ್ತವಾಗಿ ಬೆಳೆಯಬಯಸುವ ಈ ಸಸ್ಯವನ್ನು ಚಟ್ಟಿಗಳಲ್ಲಿ ಬೆಳೆಸಲು ಕಷ್ಟವಾದರೂ ಇತ್ತೀಚೆಗೆ ಬಂದ ಹೈಬ್ರೀಡ್ ಬಳ್ಳಿಗಳು, ಕುಬ್ಜ ತಳಿಗಳು ಸಣ್ಣ ಗಾತ್ರದಲ್ಲಿ ಬೆಳೆದು ಹೆಚ್ಚು ಹರಡಿಕೊಳ್ಳದೆ ಸಾಧಾರಣ ಗಾತ್ರದ ಹೂಗಳನ್ನು ನೀಡಿ ನಿಮ್ಮನ್ನು ಮುದಗೊಳಿಸುತ್ತವೆ. ದಟ್ಟವಾದ ಎಲೆ, ಬಣ್ಣದ ಹೂಗಳ ಹೊದಿಕೆ ಇದನ್ನು ಅಲಂಕಾರಿಕ ಸಸ್ಯವಾಗಿ ಪರಿಗಣಿಸುವಂತೆ ಮಾಡಿದೆ.
    Quisqualis indica ಎಂಬ ವೈಜ್ಞಾನಿಕ ಹೆಸರಿರುವ ರಂಗೂನ್ ಬಳ್ಳಿ ಕಾಂಬ್ರೆಟೇಸಿ ಕುಟುಂಬಕ್ಕೆ ಸೇರಿದೆ. ನೆಲದ ಮೇಲೆಯೇ ಬೆಳೆಸಬಹುದಾದ ಈ ಬಳ್ಳಿಗೆ ಯಾವುದೇ ಹೆಚ್ಚಿನ ಕಾಳಜಿ ಬೇಕಾಗಿಲ್ಲ. ಭಾಗಶಃ ನೆರಳಿದ್ದು ಹೆಚ್ಚು ಬಿಸಿಲಿಗೆ ಅಪೇಕ್ಷಿಸುವ ಇದು ಬರಸಹಿಷ್ಣುವಾಗಿದ್ದು ಹೊರಾಂಗಣ ಸಸ್ಯವಾಗಿದೆ. ದೀರ್ಘಕಾಲಿಕ ಆರೋಹಿ ಸಸ್ಯ. ಬೀಜ ಹಾಗೂ ಬೇರು, ಕಾಂಡಗಳಿಂದಲೂ ವಂಶಾಭಿವೃದ್ಧಿ ನಡೆಸುತ್ತದೆ.
      ಹೂಗಳನ್ನು ಪೂಜೆಗೆ ಬಳಸುತ್ತಾರಲ್ಲದೆ ಜೇನು, ಪುಟ್ಟಪಕ್ಷಿ, ಅಳಿಲುಗಳಿಗೂ ಆಸರೆಯಾಗಿದೆ. ಇದರ ಬಳ್ಳಿ ಬುಟ್ಟಿ, ಮೀನಿನ ಬಲೆ ಮಾಡಲು ಬಳಕೆಯಾದರೆ ಚರ್ಮರೋಗ, ತಲೆನೋವು, ಹಲ್ಲು ನೋವು, ಮೂತ್ರಪಿಂಡದ ಉರಿಯೂತ, ಕರುಳಿನಲ್ಲಿರುವ ಪರಾವಲಂಬಿಗಳ ಚಿಕಿತ್ಸೆಗೆ ಔಷಧಿಯಾಗಿಯೂ ಉಪಯೋಗ ವಾಗುತ್ತದೆ‌.
     ನೋಡಿದಿರಲ್ಲಾ ಮಕ್ಕಳೇ, ಎಷ್ಟು ಸೊಗಸಾದ ಮಾಧುರ್ಯದ ಸಸ್ಯ ನಮ್ಮ ಸುತ್ತಮುತ್ತಲಿದೆ ಅಲ್ವಾ.. ಸಾಧ್ಯವಾದರೆ ಬೇಲಿಯಲ್ಲಾದರೂ ಒಂದು ಗೆಲ್ಲನೂರಿ ಬಣ್ಣ ಬದಲಿಸುವ ಪುಷ್ಪಗಳ ಕಂಪನ್ನು ಆಸ್ವಾದಿಸಿರಿ. ಪ್ರಕೃತಿಯ ವೈಶಿಷ್ಟ್ಯಗಳನ್ನು ಗೌರವಿಸೋಣ ಅಲ್ಲವೇ?
    ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.... ನಮಸ್ಕಾರ
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************





Ads on article

Advertise in articles 1

advertising articles 2

Advertise under the article