-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 89

ಸ್ಫೂರ್ತಿಯ ಮಾತುಗಳು : ಸಂಚಿಕೆ - 89

ಸ್ಫೂರ್ತಿಯ ಮಾತುಗಳು : ಸಂಚಿಕೆ - 89
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                   

     ವ್ಯಕ್ತಿಯ ವಿಕಾಸದಲ್ಲಿ ಶ್ರವಣಕ್ಕೆ ವಿಶೇಷವಾದ ಸ್ಥಾನವಿದೆ. ಶ್ರವಣವೆಂದರೆ ಕಿವಿಯೊಡ್ಡಿ ಆಲಿಸುವುದು ಮತ್ತು ಮನಃಪಟಲದಲ್ಲಿ ಅಚ್ಚೊತ್ತಿಕೊಳ್ಳುವ ಗುಣ. ಕೇಳಿಸಿ ಕೊಳ್ಳುವುದೆಲ್ಲವೂ ಶ್ರವಣವಾಗದು. ಜಾತ್ರೆಯಲ್ಲಿ ಬಹಳಷ್ಟು ಕೇಳಿಸಿಕೊಂಡರೂ ಅದು ಮನಮುಟ್ಟದು. ತಕ್ಷಣವೇ ವಿಸ್ಮರಣೆಯಾಗುತ್ತದೆ. ಕೇಳಿಸಿಕೊಂಡುದು ಅರಿವಿಗೆ ಕಾರಣವಾದರೆ, ಕೇಳಿಸಿಕೊಂಡುದು ಅರ್ಥವಾದರೆ, ಕೇಳಿಸಿಕೊಂಡುದರ ಅನುಸರಣೆಯಾದರೆ, ಕೇಳಿಸಿಕೊಂಡುದರಿಂದ ಸಕಾರಾತ್ಮಕ ಬದಲಾವಣೆಗೊಳಗಾದರೆ ಅದು ಶ್ರವಣ
     ಶ್ರೋತೃ ಎಂಬ ಪದವು ಶ್ರವಣ ಸಂಬಂಧಿಯಾಗಿದೆ. ಶ್ರವಣ ಮಾಡುವವರು ಮಾತ್ರ ಶ್ರೋತೃಗಳಾಗುತ್ತಾರೆಯೇ ವಿನಹ ಸಭೆಯಲ್ಲಿರುವವರೆಲ್ಲರೂ ಶ್ರೋತೃಗಳು ಎನ್ನಲಾಗದು. ಶ್ರುತಿಯ ಧ್ವನಿಯು ಶ್ರವಣೀಯ. ಶ್ರವಣವು ಕಿವಿಗಳಿಂದ ಆರಂಭವಾಗಿ ಮನಸ್ಸಿನಲ್ಲಿ ಸ್ಥಾಪಿತವಾಗಿ ಬುದ್ಧಿಗೆ ಬಲನೀಡುತ್ತದೆ. ಶ್ರವಣ ಮಾಡಲು ಎರಡು ಕಿವಿಗಳಿವೆ. ಆದರೆ ಮಾತಿಗೆ ಒಂದೇ ಬಾಯಿ ಮತ್ತು ಒಂದೇ ನಾಲಿಗೆ, ಆಲಿಸುವುದು ಇಮ್ಮಡಿಯಾಗಬೇಕು, ಒಳಿತು ಕೆಡುಕುಗಳೆರಡನ್ನೂ ಸಮಾನವಾಗಿ ಶ್ರವಣ ಮಾಡಬೇಕು ಎಂಬುದಕ್ಕೆ ಕಿವಿಗಳೆರಡಿರುವುದೇ ಪುಷ್ಟಿ ನೀಡುತ್ತದೆ. ಆದುದರಿಂದ ಆಲಿಸುವಿಕೆ ಮತ್ತು ಪಾಲಿಸುವಿಕೆಯಾದಾಗ ಮಾತ್ರ ಶ್ರವಣ ನಡೆದಿದೆ ಎಂದು ತಿಳಿಯಬಹುದು. ಕಥಾ ಶ್ರವಣ, ಹರಿಕಥಾ ಶ್ರವಣ, ಭಾಗವತ ಶ್ರವಣ ಎಂದು ಹೇಳುತ್ತಾರೆ. ಈ ಕಾರ್ಯಕ್ರಮಗಳ ಹಿಂದೆ ಶ್ರವಣವಾಗಾಬೇಕೆಂಬ ಆಶಯವಿರುತ್ತದೆ.
        ಶ್ರವಣದಿಂದ ನವೋತ್ಥಾನ ಆಗಲಿ ಎಂಬ ಹಾರೈಕೆ ಇದೆ. ಆದರೆ ಶ್ರವಣಕ್ಕೆಂದು ಆಗಮಿಸಿದ ಸಭೆಯು ಯಾವುದನ್ನೂ ಮನನ ಮಾಡುವ ಗೋಜಿಗೆ ಹೋಗದೆ ಸಭೆಯಿಂದ “ಮಣ ಮಣ” ಮಾತೇ ಆರಂಭವಾಗಿ ಜಾತ್ರೆಯ ಗದ್ದಲದ ರೂಪಕ್ಕೆ ಪಲ್ಲಟವಾಗುವುದನ್ನು ಕಾಣುತ್ತೇವೆ. ಮುಂದಿನ ಸಾಲುಗಳಲ್ಲಿ ಕುಳಿತವರು ಶ್ರದ್ಧೆಯಿಂದ ಆಲಿಸುವವರು ಎಂಬ ಹೇಳಿಕೆಯಿದೆ. ಅವರು ಆಲಿಸಲೆಂದು ಬಂದವರಾದರೂ ಅವರೊಡನೆ ಇರುವ ಚರವಾಣಿ (ಮೊಬೈಲ್)ಯು ಕಥಾ ಶ್ರವಣಕ್ಕಿಂತ ಹೊರಗಿನ ವ್ಯಕ್ತಿಗಳ ಮಾತುಗಳ ಶ್ರವಣವನ್ನೇ ಉತ್ತೇಜಿಸುತ್ತದೆ. ಒಂದು ಕರೆಯ ಹಿಂದೆ ಮತ್ತೊಂದು ಕರೆ ಬರಲಾರಂಭಿಸಿದರೆ ಅವನೂ ಶ್ರವಣ ಮಾಡುವಂತಿಲ್ಲ. ಪಕ್ಕದವನಿಗೂ ಚರವಾಣಿಯ ಸಂವಾದ ಕಿರಿ ಕಿರಿಯಾಗುತ್ತದೆ. ಕೆಲವರು ಎಲ್ಲರಿಗೂ ಕಾಣಿಸಲೆಂದು ಮುಂದಿನ ಸಾಲಿನಲ್ಲಿ ವಿರಾಜಮಾನರಾಗುತ್ತಾರೆ ಎಂದು ಹೇಳುವವರೂ ಇದ್ದಾರೆ. ಈ ಹೇಳಿಕೆಯನ್ನು ಸಂಪೂರ್ಣವಾಗಿ ಅಲ್ಲಗಳೆಯುವಂತಿಲ್ಲ.
ಏಕಾಗ್ರತೆಯ ಆಲಿಸುವಿಕೆ ನಮ್ಮನ್ನು ಉನ್ನತಿಗೇರಿಸುತ್ತದೆ. ಎಡದ ಕಿವಿಯಿಂದ ಆಲಿಸಿ ಬಲದ ಕಿವಿಯಿಂದ ಹೊರಗೆ ಕಳುಹಿಸುವ ಜಾಣ ಶ್ರೋತೃಗಳೂ ಇದ್ದಾರಲ್ಲವೇ? ಎತ್ತನ್ನು ನೀರಿನ ಬಳಿಗೆ ಒಯ್ಯುವ ಕೆಲಸವನ್ನು ಮಾಡಲು ಎಲ್ಲರಿಗೂ ಸಾಧ್ಯ. ಆದರೆ ನೀರನ್ನು ಕುಡಿಯುವ ಕೆಲಸವನ್ನು ಎತ್ತು ಹೊರತಾಗಿ ಬೇರೆಯವರಿಂದ ಮಾಡಿಸಲು ಅಸಾಧ್ಯ. ಮನಸ್ಸಿನ ಬಾಗಿಲು ಮುಚ್ಚಿದ ಶ್ರೋತೃಗಳು ಎಷ್ಟಿದ್ದರೇನು ಫಲ? ಮನದ ಕದ ತೆರೆದು ಆಲಿಸುವ ಮನೋಗುಣ ಇರುವಲ್ಲಿ ಮಾತ್ರವೇ ಶ್ರವಣ. ಸಭೆಯ ಸಂಖ್ಯೆ ಹೆಚ್ಚಿಸುವವರಲ್ಲಿ ನಾವೂ ಒಬ್ಬರಾಗುವುದಕ್ಕಿಂತ ಮನೆಯ ಶಯನಾಗಾರವೇ ಉತ್ತಮ. ಶ್ರವಾಣಾಗರ ಬೇಡವೇ ಬೇಡ. ಸತ್ಸಂಗ ಬಯಸುವ ಪುಣ್ಯಾತ್ಮರು ಮಾತ್ರವೇ ಶ್ರವಣಿಗಳಾಗಿದ್ದರೆ ಎಲ್ಲ ವಿಧದ ಶ್ರವಣ ಕಾರ್ಯ ಕ್ರಮಗಳು ಒಬ್ಬಟ್ಟು ಊಟವಾಗುವವು.
      ಒಳ್ಳೆಯ ಮತ್ತು ಕೆಟ್ಟ ವಿಚಾರ ಇವುಗಳೆರಡರ ಶ್ರವಣವೂ ಆಗಬೇಕು, ಕೆಡುಕಾಗಿರುವವುಗಳನ್ನು ಒಂದು ಕಿವಿಯಿಂದ ಆಲಿಸಿ ಇನ್ನೊಂದು ಕಿವಿಯಿಂದ ಹೊರದಬ್ಬಬೇಕು. ಒಳಿತಾದುವುಗಳನ್ನು ಎರಡೂ ಕಿವಿಗಳಿಂದ ಆಲಿಸಿ ಎದೆಯುಬ್ಬಿಸಬೇಕು. ನಮಸ್ಕಾರ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 



Ads on article

Advertise in articles 1

advertising articles 2

Advertise under the article