ತೀರ್ಪುಗಾರರ ಅನಿಸಿಕೆಗಳು : ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2023
Monday, November 13, 2023
Edit
ಮಕ್ಕಳ ಜಗಲಿ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2023
ಮಕ್ಕಳ ಜಗಲಿ ಕವನ ಸಿರಿ ಪ್ರಶಸ್ತಿ - 2023
ಮತ್ತು
ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು
ಎಲ್ಲಾ ಕಥೆ, ಕವನಗಳನ್ನು ಓದಿದೆ.... ಒಂದು ಆಯಾಮದ ಪ್ರಕಾರ ಎಲ್ಲವೂ ಚೆನ್ನಾಗಿದೆ, ಮೌಲ್ಯ, ಬಹುಮಾನ ಎಂಬ ಮಾನದಂಡದ ಆಚೆಗೆ ಒಮ್ಮೆ ಇಣುಕಿದಾಗ... ಇಲ್ಲಿ ಇಷ್ಟು ಮಕ್ಕಳು ಬರೆದು ಕಳುಹಿಸಿದ್ದೇ ಒಂದು ಶುಭಕರ ಸೂಚನೆ. ಇಂದಿನ ಮಕ್ಕಳು ಸಾಹಿತ್ಯ ಓದುವವರಿಲ್ಲ, ಬರೆಯುವವರಿಲ್ಲ ಎನ್ನುವ ಈ ಸಂದರ್ಭದಲ್ಲಿ ಬರೆದು ಕಳುಹಿಸಿದ ಇಷ್ಟೂ ಮಕ್ಕಳು ವಿಜಯಿಗಳೇ, ಬಹುಮಾನಿತರೇ ಆಗಿರುತ್ತಾರೆ. ಆದರೂ ಸಾಹಿತ್ಯ ನಿರೂಪಣೆ, ಪದ ಚಮತ್ಕಾರ, ವಸ್ತು ವಿಚಾರ, ಜಾಗೃತಿ, ಸಂದೇಶ ಇಂತವುಗಳನ್ನು ಆಧಾರಿಸಿಕೊಂಡು ಆಯ್ಕೆ ಮಾಡಲಾಗಿದೆ. ಕೆಲವರಂತೂ ಅವರ ವಯಸ್ಸಿಗೆ ಮೀರಿದ ಪ್ರತಿಭೆಯನ್ನು ತೋರಣ ಕಟ್ಟಿದ್ದಾರೆ.. ಎಲ್ಲರಿಗೂ ವಂದನೆಗಳು.
ಸ್ಪರ್ಧಿಗಳು ತೆಗೆದುಕೊಂಡ ವಿಚಾರಗಳು ಉತ್ತಮವಾಗಿವೆ. ನಮ್ಮ ಪ್ರಕೃತಿ, ನಮ್ಮ ನಾಡು, ನಮ್ಮ ಸೈನಿಕರು, ಅಮ್ಮನ ಮಹತ್ವ, ಮಳೆಯ ಅಗತ್ಯ ಎಲ್ಲವೂ ಮಕ್ಕಳು ದಿನನಿತ್ಯ ಅರಿತುಕೊಳ್ಳಬೇಕಾದ ವಿಷಯಗಳು. ದೇಶ ಭಕ್ತಿ ಎಂದರೆ ಕೇವಲ ಸ್ವಾತಂತ್ರ್ಯ ದಿನಾಚರಣೆ ಮಾತ್ರವಲ್ಲ, ಹಗಲಿಡೀ ನಮ್ಮ ವೀರ ಯೋಧರು ನಮ್ಮ ದೇಶಕ್ಕಾಗಿ, ನಮ್ಮ ಭದ್ರತೆಗಾಗಿ ಸೇವಾ ನಿರತರಾಗಿರುವುದನ್ನು ನಾವು ಪ್ರತಿದಿನವೂ ಸ್ಮರಿಸಬೇಕು. ಹೆತ್ತು, ಹೊತ್ತು, ಸಾಕಿ, ಸಲಹಿರುವ ಅಮ್ಮನನ್ನು ಸೂಕ್ತ ಉದ್ಯೋಗ ಲಭಿಸಿದ ಮೇಲೆ ಮರೆತು ಬಿಡುವ ಇಂದಿನ ದಿನಗಳಲ್ಲಿ 'ಎಲ್ಲಾ ದೇವರಿಗಿಂತ ಮಿಗಿಲು ಅಮ್ಮ. ಅಮ್ಮನಿಂದ ದೊಡ್ಡ ದೇವರಿಲ್ಲ, ನೂರು ದೇವಸ್ಥಾನ ಸುತ್ತುವುದಕ್ಕಿಂತ ಅಮ್ಮನನ್ನು ಪೂಜಿಸುವುದು ಎಲ್ಲಕ್ಕಿಂತ ಮಹತ್ವವಾದದ್ದು, ಇದನ್ನು ಮಕ್ಕಳು ಬಾಲ್ಯದಿಂದಲೇ ಅರಿತರೆ ಅಮ್ಮನ ಮಹತ್ವ ಮತ್ತು ಅಗತ್ಯವನ್ನು ಎಂದಿಗೂ ಮರೆಯಲಾರರು.
ಪರಿಸರ ಸಂರಕ್ಷಣೆ ಎಂದರೆ ಕೇವಲ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯಲ್ಲ. ಪ್ರತಿದಿನವೂ ನಮ್ಮ ಬದುಕಿಗೆ ಸದಾ ಚೇತನಾ ಶಕ್ತಿಯನ್ನು ನೀಡುತ್ತಿರುವ ಪ್ರಕೃತಿಯನ್ನು ಪ್ರತಿ ದಿನವೂ ನಾವು ಗೌರವಿಸುತ್ತಾ, ಆರಾಧಿಸುತ್ತಾ ಇರಬೇಕು. ಇಂದು ಆಧುನಿಕ ತಂತ್ರ ಜ್ಞಾನ, ವಿಜ್ಞಾನ ಎಷ್ಟೇ ಎತ್ತರಕ್ಕೆ ಬೆಳೆಯಲಿ, ಆದರೆ ನಿಸರ್ಗದ ಎದುರು ಅವೆಲ್ಲವೂ ಶೂನ್ಯ. ನಾವು ಪ್ರಕೃತಿಯನ್ನು ಕಡೆಗಣಿಸುತ್ತಾ, ನಿರ್ಲಕ್ಷ್ಯ ಮಾಡುತ್ತಾ ಬಂದಿರುವುದರ ಪರಿಣಾಮ ಮತ್ತು ಫಲಿತಾಂಶವನ್ನು ಇಂದು ಅನುಭವಿಸುತ್ತಾ ಇದ್ದೇವೆ. ಈ ಸಲದ ಮಳೆಗಾಲವನ್ನು ಒಮ್ಮೆ ಅವಲೋಕಿಸಿದರೆ ನಮ್ಮ ಭವಿಷ್ಯದ ಬರಗಾಲವನ್ನು ನಾವು ಹೇಗೆ ಎದುರಿಸುವುದು ಎಂಬ ಆತಂಕ, ಚಿಂತೆ ತುಂಬಾ ಕಾಡುವಂತಹ ಗಂಭೀರ ವಿಚಾರ. ಬರಗಾಲ, ಚಂಡ ಮಾರುತ, ಪ್ರವಾಹ, ಭೂ ಕುಸಿತ, ಜಲ ಸ್ಫೋಟ, ಸುನಾಮಿ, ಕೊರೋನ.... ಇವೆಲ್ಲವೂ ಮಾನವ ನಿರ್ಮಿತ ಪ್ರಾಕೃತಿಕ ದುರಂತಗಳು. ಇನ್ನಾದರೂ ನಾವು ನಮ್ಮ ಪರಿಸರ, ನಮ್ಮ ಪಶ್ಚಿಮ ಘಟ್ಟವನ್ನು ಸಂರಕ್ಷಣೆ ಮಾಡದೇ ಇದ್ದರೆ ಭವಿಷ್ಯದಲ್ಲಿ ಆಗಲಿರುವ ಇನ್ನಷ್ಟು ಘೋರ ನೈಸರ್ಗಿಕ ದುರಂತಗಳಿಂದ ತಪ್ಪಿಸಿಕೊಂಡು ನೆಮ್ಮದಿಯಾಗಿ ಇರಬಹುದು.
ನನ್ನ ಪ್ರೀತಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರೇ ನೀವೇ ಈ ದೇಶದ, ಈ ನೆಲದ ಭವಿಷ್ಯದ ಪ್ರಜೆಗಳು. ಅಮ್ಮ, ದೇಶ, ಪ್ರಕೃತಿ.... ಈ ಮೂರು ವಿಚಾರಗಳಲ್ಲಿ ನಿಮ್ಮ ಪ್ರೀತಿ, ಕಾಳಜಿ, ಜಾಗೃತಿ ಸದಾ ಚಿರ ಸ್ಥಾಯಿಯಾಗಿ ಇರಲಿ. ಕತೆ, ಕವನಗಳಲ್ಲಿ ಬರೆದ ಈ ವಿಚಾರಗಳನ್ನು ನಿಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ನಿಮ್ಮ ಮನೆಯ ಮಾತೆ, ಪ್ರಕೃತಿ ಮಾತೆ, ಭಾರತ ಮಾತೆಯನ್ನು ಖುಷಿ ಪಡಿಸಬಹುದು. ಈ ಒಂದು ಸ್ಪರ್ಧೆಯಲ್ಲಿ (ಬಹುಮಾನ ಸಿಗಲಿ, ಸಿಗದೇ ಇರಲಿ) ನೀವು ಭಾಗವಹಿಸಿದ್ದು ಇದುವೇ ನಿಮಗೆ ಒಂದು ಜಾಗೃತ ರೂಪದ ವೇದಿಕೆಯಾಗಲಿ. ಇಲ್ಲಿಂದಲೇ ನಮ್ಮ ಅಮ್ಮ, ನಮ್ಮ ಪ್ರಕೃತಿ, ನಮ್ಮ ದೇಶ ಅಂತ ಗೌರವ, ಅಭಿಮಾನ ಬೆಳೆಯಲಿ. ಎಲ್ಲರಿಗೂ ವಂದನೆಗಳು.
ಖ್ಯಾತ ಲೇಖಕರು, ಪರಿಸರ ಚಿಂತಕರು
ಹಾಗೂ ಕಲಾವಿದರು
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob : +91 93411 16111
******************************************
ರಾಜ್ಯದ ವಿವಿಧ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಬರೆದ ಸ್ವ- ರಚನೆಗಳನ್ನು ಓದುತ್ತಿದ್ದಂತೆ ಅವರ ಪ್ರತಿಭೆ ಹಾಗೂ ಚಿಂತನೆಗಳನ್ನು ಕಂಡು ಸಂತಸಪಟ್ಟಿದ್ದೇನೆ. ಇಂತಹ ಪ್ರತಿಭೆಗಳಿಗೆ ಕಲಿಯುವ ಶಾಲೆಗಳಲ್ಲಿ ಹಾಗೂ ಊರಿನ ಸಂಘ-ಸಂಸ್ಥೆಗಳಿಂದ ಅವಕಾಶ ಕಲ್ಪಿಸುವ ಪ್ರೋತ್ಸಾಹದ ಕೆಲಸ ಇನ್ನಷ್ಟು ಆಗುವುದರ ಅಗತ್ಯವಿದೆ.
1. ಸ್ವ ರಚನೆ ಮಾಡುವಲ್ಲಿ ನಿಮ್ಮ ಸ್ವಂತಿಕೆ ಮುಖ್ಯವಾಗುತ್ತದೆ. ಇತರರು ವ್ಯಾಕರಣ ದೋಷ ಅಕ್ಷರ ದೋಷ ತಿದ್ದಬಹುದು. ವಿಚಾರ ದೋಷಗಳು ಆಗದಂತೆ ಹಿರಿಯರು ಬರಹಗಾರರ ಗಮನಕ್ಕೆ ತಂದು ಪ್ರೋತ್ಸಾಹಿಸಬಹುದು.
2. ಇತರ ಕಡೆಗಳಲ್ಲಿ ಕೇಳಿದ ಕಥೆ, ಕವನ ನೀವೇ ಬರೆದರೂ ಅದು ಸ್ವರಚನೆ ಆಗಲಾರದು. ಕೃತಿ ಚೌರ್ಯದ ಅಪವಾದ ತಟ್ಟುತ್ತದೆ.
3. ಬರವಣಿಗೆಯಲ್ಲಿ ಹೊಸತನದ ಯೋಚನೆಗಳಿದ್ದಾಗ ಹೆಚ್ಚು ಪರಿಣಾಮಕಾರಿ ಯಾಗುತ್ತದೆ ಎನ್ನುವುದು ನೆನಪಿರಲಿ ಪ್ರಯತ್ನಿಸಿ.
4. ಬರೆದ ಬರಹಗಳಿಗೆ ತಲೆಬರಹ ಶೀರ್ಷಿಕೆ ಬರೆಯುವುದು ಒಂದು ವಿಶೇಷ ನಾಮರ್ಥವಾಗಿದೆ. ಒಂದೆರಡು ಪದದ ತಲೆಬರಹವಿದ್ದು ಬರಹದೊಳಗಿನ ವಿಚಾರಗಳಿಗೆ ಅಡಕವಾಗಿದ್ದರೆ ಒಳ್ಳೆಯದು.
5. ಕಥೆ ಬರೆಯಲು ಒಂದು ಅಳತೆ ಗೋಲು ನಿಮ್ಮಲ್ಲಿರಲಿ. ಪ್ರಾರಂಭ, ವಿಸ್ತರಣೆ , ಘಟನೆಗಳು , ತಿರುವು , ಕುತೂಹಲ , ರಂಜನೆ, ಸಂದೇಶ , ಮುಕ್ತಾಯ ಮುಖ್ಯವಾಗುತ್ತದೆ.
6. ಕಥೆಯಲ್ಲಿ ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿದಂತೆ ಪರಿಚ್ಛೇದ (ಪ್ಯಾರ) ಇರಲೇಬೇಕು. ಪರಸ್ಪರ ಸಂಬಂಧವಿರಬೇಕು. ಸ್ಪಷ್ಟತೆ ಮುಖ್ಯವಾಗುತ್ತದೆ.
7. ಸಮಾನಾರ್ಥ ವಿವಿಧಾರ್ಥ ಪದಗಳ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಬಳಸಿದ ಪದವನ್ನು ಮತ್ತೆ ಮತ್ತೆ ಬಳಸದೆ ಸಮಾನಾರ್ಥ ಬಳಸಿದರೆ ಓದುಗರಿಗೆ ಹಿತವಾಗುತ್ತದೆ.
8. ಉತ್ತಮ ಬರಹಗಾರನಾಗಲು ಉತ್ತಮ ಓದುಗನಾಗಿರಬೇಕು. ಮೊದಲಿಗೆ ತೋಚಿದಂತೆ ಗೀಚಬೇಕು. ಮತ್ತೆ ತಿದ್ದಿ ರೂಪ ಕೊಡಬೇಕು.
9. ಸೂಕ್ಷ್ಮದೃಷ್ಟಿ ಮುಖ್ಯವಾಗಿರಲಿ. ಯೋಚಿಸುವ ಶಕ್ತಿ ವೃದ್ಧಿಸಲಿ. ಮನದ ಚಿಂತನೆಯು ತನ್ನದೇ ವಿಚಾರಗಳ ಮೂಲಕ ಹೆಪ್ಪುಗಟ್ಟಬೇಕು. ಆಸಕ್ತಿಯ ಬರಹ ಕ್ಷೇತ್ರದಲ್ಲಿ ಪ್ರಕಟಪಡಿಸುವುದು.
10. ಓದುಗರು ಓದಲು ಆರಂಭಿಸಿದರೆ ಮತ್ತೆ ಮತ್ತೆ ಓದಿಸುವ ಬರಹ ಶೈಲಿಯನ್ನು ಬರಹಗಾರರು ಕಂಡುಕೊಳ್ಳುವುದು.
ಪ್ರತಿಯೊಬ್ಬರಿಗೂ ಶುಭವಾಗಲಿ....
ಗೌರವ ಸಲಹೆಗಾರರು, ಮಕ್ಕಳ ಕಲಾಲೋಕ
ಕರ್ನಾಟಕ ಸಾಹಿತ್ಯ ಪರಿಷತ್ತು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob: +91 6366 072 936
******************************************
ಆಯ್ಕೆಗೆ ಬಂದ ಕಥೆ ಮತ್ತು ಕವನಗಳನ್ನು ಪರಿಶೀಲಿಸಿದಾಗ ವಿದ್ಯಾರ್ಥಿಗಳಲ್ಲಿರುವ ಅಮಿತೋತ್ಸಾಹ, ಅದಮ್ಯ ಶ್ರದ್ಧೆ ಮತ್ತು ಪರಿಶ್ರಮ ಗಮನಸೆಳೆಯುತ್ತದೆ. ಪ್ರಶಸ್ತಿಗಾಗಿ ಆಯ್ಕೆ ಮಾಡಿದ ಮೇಲೂ ಬೆನ್ನುತಟ್ಟ ಬಹುದಾದ ಮತ್ತಷ್ಟು ಕಥೆ, ಕವನಗಳು ಉಳಿದುಕೊಂಡಿವೆ. ಅಪ್ಪ, ಅಮ್ಮ, ಹಕ್ಕಿ, ಮಳೆ, ಮರ, ರೈತ, ಸೈನಿಕ ಹೀಗೆ ವಿಷಯ ವೈವಿಧ್ಯದ ಸರಳ ಸುಂದರವಾದ ಕವನಗಳು ಖುಷಿ ಕೊಡುತ್ತವೆ.
ಕಥೆಗಳೂ ಅಷ್ಟೆ. ಆದರ್ಶ ಬದುಕು, ಪರಿಸರ ಪ್ರೀತಿ, ಪುಸ್ತಕ ಪ್ರೇಮ ಮುಂತಾದ ವಿಷಯಗಳನ್ನು ಚರ್ಚಿಸುತ್ತಾ ಕಥೆಯಾಗಿಸಿದ ಪ್ರಯತ್ನವನ್ನು ಅಭಿನಂದಿಸಲೇ ಬೇಕು. ಮಕ್ಕಳು ಹೆಚ್ಚು ಹೆಚ್ಚು ಸಾಹಿತ್ಯ ಕೃತಿಗಳನ್ನು ಓದುವುದರ ಮೂಲಕ ತಮ್ಮಲ್ಲಿರುವ ಬರೆಯುವ ಕೌಶಲವನ್ನು ಉತ್ತಮಪಡಿಸಿಕೊಳ್ಳಬಹುದು. ಸಾಹಿತ್ಯ ರಚನೆಯ ಮೂಲಕ ಮಕ್ಕಳ ಮನಸ್ಸುಅರಳಲು ಅವಕಾಶ ಒದಗಿಸಿದ ಮಕ್ಕಳ ಜಗಲಿಗೆ ಅಭಿನಂದನೆಗಳು.
.............................. ಚಂದ್ರಶೇಖರ ಪಾತೂರು ಸಾಹಿತಿಗಳು ಹಾಗೂ ಸ್ಥಾಪಕ ಸಂಚಾಲಕರು ಚಿತ್ತಾರ (ಕಲೆ, ಸಾಹಿತ್ಯ ಮತ್ತು ಸಮಾಜ ಸೇವಾಸಕ್ತರ ಬಳಗ)
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob : +91 99641 05598
******************************************