-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 34

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 34

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 34
ಲೇಖಕರು : ಲೋಕೇಶ್ ಸರ್ಕುಡೇಲು
ಸಹಶಿಕ್ಷಕರು
ಸರಕಾರಿ ಪದವಿ ಪೂರ್ವ ಕಾಲೇಜು
ಬೆಳಿಯೂರುಕಟ್ಟೆ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 99018 57627

          
           
        ಶಿಕ್ಷಕ ವೃತ್ತಿ ಬದುಕಿನಲ್ಲಿ ವಿದ್ಯಾರ್ಥಿಗಳಾಗಿ ಬಂದವರಲ್ಲಿ ಕೆಲವೇ ಕೆಲವು ವಿದ್ಯಾರ್ಥಿಗಳು ವಿಶಿಷ್ಟ ಕಾರಣಗಳಿಗೆ ಸ್ಮೃತಿಪಟಲದಲ್ಲಿ ಉಳಿಯುತ್ತಾರೆ. ಹೆಚ್ಚಿನವರು ಮರೆತು ಹೋಗುತ್ತಾರೆ ಎಂದರೂ ತಪ್ಪಾಗದು.. ನಾನಾಗಲೇ ಶಿಕ್ಷಕರ ತರಬೇತಿ ಮುಗಿಸಿ ಹೊರಬಂದ ಖುಷಿಯಲ್ಲಿದ್ದೆ. ಅಷ್ಟರಲ್ಲಿ ನಾನು ಕಲಿತ ಶಾಲೆಯಲ್ಲಿ ಶಿಕ್ಷಕರ ಕೊರತೆ ಇತ್ತು. ಹಾಗಾಗಿ ಗೌರವ ಶಿಕ್ಷಕರ ನೆಲೆಯಲ್ಲಿ ನಾನು ಕಲಿತ ಶಾಲೆಯಲ್ಲಿ ಶಿಕ್ಷಕನಾದೆ. ಇದು ಎಲ್ಲರಿಗೂ ಸಿಗುವ ಅವಕಾಶವಲ್ಲ, ಅದಕ್ಕಾಗಿ ಖುಷಿಯಾಯಿತು. ಅದಕ್ಕಿಂತಲೂ ಹೆಮ್ಮೆ ಪಡುವ ವಿಚಾರವೆಂದರೆ ನನಗೆ ಪಾಠ ಮಾಡಿದ ಶಿಕ್ಷಕರೊಡನೆ ಇಂತಹ ಅಪೂರ್ವ ಸಂದರ್ಭ ಎಷ್ಟು ಜನರಿಗೆ ಸಿಕ್ಕಿದೆಯೋ ಗೊತ್ತಿಲ್ಲ. ಆದರೆ ನಾನು ಅಂತಹ ಅದೃಷ್ಟಶಾಲಿಯಾಗಿದ್ದೆ. 
    ನನಗೆ ಒಂದನೇ ತರಗತಿಯಲ್ಲಿ ಕೈಹಿಡಿದು ಅಕ್ಷರ ಧಾರೆ ಎರೆದ ಶಿಕ್ಷಕಿಯೇ ನನಗೆ ಮುಖ್ಯಶಿಕ್ಷಕಿ. ಏಳನೇ ತರಗತಿಯ ಗಣಿತ ಶಿಕ್ಷಕರು ಹಾಗೂ ಸಮಾಜವಿಜ್ಞಾನ ಬೋಧಿಸಿದ ಶಿಕ್ಷಕರು ನನಗೆ ಸಹೋದ್ಯೋಗಿಗಳು. ಈ ವಿಚಾರ ನೆನಪಿಸುವಾಗ ಈಗಲೂ ರೋಮಾಂಚನವನ್ನು ಅನುಭವಿಸುತ್ತೇನೆ.
    ನಾನಾಗ ಆರನೇ ತರಗತಿಯಲ್ಲಿ ಪಾಠ ಮಾಡುತ್ತಿದ್ದೆ. ಆ ತರಗತಿಯಲ್ಲಿ ತುಂಬಾ ಮಕ್ಕಳು. ಈಗ ಅವರೆಲ್ಲಾ ಎಲ್ಲೆಲ್ಲೋ ಇದ್ದಾರೆ. ಉದ್ಯೋಗಸ್ಥರು ವ್ಯಾಪಾರಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಬದುಕು ಕಂಡುಕೊಂಡಿದ್ದಾರೆ. ಆ ತರಗತಿಯಲ್ಲಿ ತೆಳ್ಳಗೆ ಬೆಳ್ಳಗೆ ಸಣಕಲು ದೇಹದ ಆದರೆ ಅಷ್ಟೇ ಚುರುಕಾದ ಹುಡುಗನ ಬಗ್ಗೆ ಹೇಳಬೇಕು. ನಾನು ವೃತ್ತಿ ಬದುಕಿಗೆ ಪಾದಾರ್ಪಣೆ ಮಾಡಿದ ಆರಂಭದ ದಿನಗಳಾಗಿದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳ ಮುಖ ಚರ್ಯೆ ಇಂದಿಗೂ ನೆನಪಿದೆ. ಆ ಹುಡುಗ ಕಲಿಕೆಯಲ್ಲಿ ಮುಂದಿದ್ದ. ಶಿಕ್ಷಕರ ವೃಂದದ ಅಚ್ಚುಮೆಚ್ಚಿನ ವಿದ್ಯಾರ್ಥಿ. ಜೊತೆಗೆ ಸುಂದರವಾಗಿ ಚಿತ್ರ ಬರೆಯುತ್ತಿದ್ದ ಎಂಬುದನ್ನು ಗಮನಿಸಿದ್ದೆ. ಬಹುಶಃ ಮುಂದೊಂದು ದಿನ ಆ ಆಸಕ್ತಿಯೇ ಅವನನ್ನು ಯಶಸ್ವಿ ಮತ್ತು ಜನಪ್ರಿಯ ವೃತ್ತಿಯಾಗಿಸುತ್ತದೆ ಎಂದು ಯೋಚಿಸಿರಲಿಲ್ಲ.
     ಈ ಹುಡುಗ ಈಗ ಪ್ರತಿಭಾವಂತ ಚಿತ್ರಕಲಾ ಶಿಕ್ಷಕ. ಜಿಲ್ಲೆಯಾದ್ಯಂತ ಎಲ್ಲೇ ಹೋದರೂ ತನ್ನ ಚಿತ್ರಗಳಿಂದಲೇ ಗುರುತಿಸಲ್ಪಡುವ ಸಾಧಕ. ವಿಶಿಷ್ಟವಾದ ಚಿತ್ರಕಲೆಯ ಮೂಲಕ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ. ಅನೇಕ ವಿದ್ಯಾರ್ಥಿಗಳ ವಿವಿಧ ಹವ್ಯಾಸಗಳಿಗೆ ಸ್ಪೂರ್ತಿ ಮತ್ತು ಅವಕಾಶಗಳನ್ನು ಸೃಷ್ಟಿಸಿದ ಕಲಾಪೋಷಕ. ಕೇವಲ ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗದೆ ಶಿಕ್ಷಕರಲ್ಲಿರುವ ಸೃಜನಶೀಲತೆಗೆ ಪೋಷಣೆ ಮತ್ತು ಅವಕಾಶಗಳನ್ನು ನೀಡಲು ನಿರಂತರವಾಗಿ ಶ್ರಮಿಸುತ್ತಿರುವ ಶ್ರಮಜೀವಿ. ಅನೇಕ ಬರಹಗಾರರನ್ನು ಮುನ್ನೆಲೆಗೆ ತರಲು ಪ್ರಯತ್ನಿಸುತ್ತಿರುವ ಸಾಧಕ. ತನ್ನ ಹೊಸ ಹೊಸ ಯೋಚನೆ ಯೋಜನೆ ಗಳ ಮೂಲಕ ಜಿಲ್ಲೆಯ ಗಡಿಯನ್ನು ಮೀರಿ ಹೆಸರು ಸಂಪಾದಿಸಿದ ಕ್ರಿಯಾಶೀಲ ಶಿಕ್ಷಕ. ಈ ವ್ಯಕ್ತಿ ಬೇರಾರೂ ಅಲ್ಲ, ಮಕ್ಕಳ ಜಗಲಿಯ ರೂವಾರಿ ತಾರಾನಾಥ ಕೈರಂಗಳ. ಒಂದು ವರ್ಷವಾದರೂ ನನ್ನ ವಿದ್ಯಾರ್ಥಿ. ಇವರು ನನ್ನ ಅಣ್ಣನಿಗೂ ವಿದ್ಯಾರ್ಥಿ.. ಕಿರು ಅವಧಿಯಲ್ಲೇ ಸಾಕಷ್ಟು ಸಾಧನೆ ಮಾಡಿರುವ ಇವರ ಬಗ್ಗೆ ಹೇಳಲು ಹೆಮ್ಮೆಯಾಗುತ್ತದೆ. ಇನ್ನು ಮುಂದೆಯೂ ಈ ಸಾಧನೆ ನಿರಂತರವಾಗಿರಲಿ. ಪ್ರಶಸ್ತಿಗಳು ಹುಡುಕಿ ಬರಲಿ ಎಂಬುದೇ ನಮ್ಮ ಹಾರೈಕೆ.                  
............................... ಲೋಕೇಶ್ ಸರ್ಕುಡೇಲು
ಸಹಶಿಕ್ಷಕರು
ಸರಕಾರಿ ಪದವಿ ಪೂರ್ವ ಕಾಲೇಜು
ಬೆಳಿಯೂರುಕಟ್ಟೆ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 99018 57627
*******************************************


Ads on article

Advertise in articles 1

advertising articles 2

Advertise under the article