-->
ಪೂರ್ವ ಕರಾವಳಿಯ ಅಪೂರ್ವ ಪ್ರವಾಸ : ಭಾಗ - 1

ಪೂರ್ವ ಕರಾವಳಿಯ ಅಪೂರ್ವ ಪ್ರವಾಸ : ಭಾಗ - 1

ಪ್ರವಾಸ ಕಥನ : ಪೂರ್ವ ಕರಾವಳಿಯ ಅಪೂರ್ವ ಪ್ರವಾಸ : ಭಾಗ - 1
ಲೇಖಕಿ : ಚಿತ್ರಾಶ್ರೀ ಕೆ ಎಸ್
ಸಹ ಶಿಕ್ಷಕರು (ಕಲಾ), 
ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು, 
ಮಂಗಳೂರು ಉತ್ತರ ವಲಯ. 
ದಕ್ಷಿಣ ಕನ್ನಡ ಜಿಲ್ಲೆ
   

    ವಿಶಾಖಪಟ್ಟಣ! ಹೆಸರೇ ಹೇಳುವಂತೆ ಇದು ವಿಶೇಷ ಶಾಖ ಇರುವ ಪಟ್ಟಣವೇ ಸರಿ..! ಮೊದಲೇ ಬಿಸಿಲಿನಲ್ಲಿ ಬೇಯುವ ಮಂಗಳೂರಿನಲ್ಲಿ ವಾಸಿಸುವ ನಮಗೆ ಎಲ್ಲಾದರೂ ತಂಪಿರುವ ಜಾಗಕ್ಕೆ ಪ್ರವಾಸ ಹೊರಡುವ ಮನಸಿರುತ್ತದೆ. ಅದನ್ನು ಬದಿಗಿರಿಸಿ ಪೂರ್ವ ಕರಾವಳಿಯ ವಿಶಾಖಪಟ್ಟಣದ ಕಡೆಗೆ ಹೊರಟೆವು. ನಮ್ಮೂರಿನಂತೆಯೇ ಕಡಲ ತೀರದ ಈ ಪಟ್ಟಣವಿರಬಹುದೆಂದು ಭಾವಿಸಿ ತೆರಳಿದ್ದ ನಮಗೆ, ಅದು ನಮ್ಮ ಮಂಗಳೂರಿಗೆ ಮಾದರಿ ಎನಿಸುವಂತಹಾ ಹಲವು ವಿಶೇಷಗಳ ನಗರವಾಗಿದ್ದಿದ್ದು ನೋಡಿ ಅಚ್ಚರಿಯಾಯಿತು! 

     ಅಚ್ಚುಕಟ್ಟಾದ, ಗುಂಡಿಗಳಿಲ್ಲದ, ಅಗಲವಾದ ರಸ್ತೆಗಳು ಅಲ್ಲಿ ನಮ್ಮ ಗಮನ ಮೊದಲು ಸೆಳೆದವು. ರಸ್ತೆಗಳ ನಡುವೆ ಹಾಗೂ ಬದಿಗಳಲ್ಲಿ ಹಸಿರನ್ನು ಬೆಳೆಸಿ ಉಳಿಸಿರುವ ರೀತಿಯೂ ಗಮನಾರ್ಹ. ಮುಖ್ಯ ಮಾರ್ಗಗಳಲ್ಲಿ ಬಸ್ ಚಲಿಸಲು ವಿಶೇಷ ಮಾರ್ಗವಿದೆ. ಅದರಲ್ಲಿ ಬಸ್ ಹೊರತುಪಡಿಸಿದರೆ ಆಂಬುಲೆನ್ಸ್ ಮಾತ್ರ ಚಲಿಸುವ ವ್ಯವಸ್ಥೆ ಇದೆ. ಆ ರಸ್ತೆ ಖಾಲಿ ಇದ್ದರೂ ಬೇರೆ ಯಾವ ವಾಹನಗಳೂ ಅಲ್ಲಿಗೆ ಪ್ರವೇಶಿಸುವುದಿಲ್ಲ. 
     ಪಶ್ಚಿಮದ ಅರಬ್ಬೀ ಸಮುದ್ರದ ದಂಡೆಯಲ್ಲಿರುವ ನಮಗೆ ಸಮುದ್ರ ತೀರದ ನೋಟ ಅಪರೂಪವೇನಲ್ಲ. ಆದರೂ ವಿಶಾಖ ಪಟ್ಟಣದ ಸಮುದ್ರ ತೀರ ಗಮನಸೆಳೆಯಿತು. ಕಾರಣ- ಅದು ಸ್ವಚ್ಛ ಹಾಗೂ ಸುಂದರವಾಗಿತ್ತು. ಸಮುದ್ರ ತೀರದ ಸಮೀಪದಲ್ಲೇ ಸಾಗುವ ಮುಖ್ಯ ರಸ್ತೆಯುದ್ದಕ್ಕೂ ಕಾಣುವ ಅಲೆಗಳ ಸುಮನೋಹರ ನೋಟ! ಅದೆಲ್ಲಿಂದಲೋ ತಂದು ನೆಟ್ಟಿರುವ ತೆಂಗಿನ ಮರಗಳನ್ನು ನೋಡುತ್ತಿದ್ದರೆ, ಮೊದಲೇ ಸುಂದರವಾದ ಕಡಲ ತೀರವನ್ನು ಮತ್ತಷ್ಟು ಹಸಿರಿನಿಂದ ಅಲಂಕರಿಸುವ ಅಲ್ಲಿನವರ ಆಲೋಚನೆ ಖುಷಿ ನೀಡಿತು. ಏನೇನೋ ಕಟ್ಟಿ ಕೆಡವಿ ಸಮುದ್ರ ತೀರ ಸುಂದರವಾಗಿಸುವ ಆಲೋಚನೆಗಳಿಗಿಂತ ಇದು ವಿಭಿನ್ನ.

     ಪ್ರವಾಸದಲ್ಲಿ ನಾವು ಹಲವು ಸ್ಥಳಗಳನ್ನು ವೀಕ್ಷಿಸಿದ್ದರೂ ವಿಶೇಷವೆನ್ನಿಸಿದ ಕೆಲವನ್ನು ಮಾತ್ರ ಇಲ್ಲಿ ವಿವರಿಸಲು ಇಷ್ಟಪಡುತ್ತೇನೆ.
      
            ದಕ್ಷಿಣ ಏಷ್ಯಾದಲ್ಲಿ ಸ್ಥಾಪನೆಯಾದ ಮೊದಲ ಸಬ್ಮೆರೈನ್ ಮ್ಯೂಸಿಯಂ ನಮ್ಮ ದೇಶದಲ್ಲಿದೆ! ಅಪರೂಪದ ಮ್ಯೂಸಿಯಂಗಳಲ್ಲಿ ಒಂದಾದ INS ಕುರ್ಸುರಾ ಸಬ್ಮೆರೈನ್ ಮ್ಯೂಸಿಯಂ ನಮ್ಮ ದೇಶದ ಹೆಮ್ಮೆ. ರಷ್ಯಾ ದೇಶ 1969ನಲ್ಲಿ ನಿರ್ಮಿಸಿ ಭಾರತಕ್ಕೆ ನೀಡಿದ್ದ ಈ ಸಬ್ಮೆರೈನ್ ಭಾರತ- ಪಾಕಿಸ್ತಾನದ ನಡುವೆ ನಡೆದ 1971ರ ಕದನದಲ್ಲಿ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿತ್ತು. 2001ರಲ್ಲಿ ಕಾರ್ಯನಿರ್ವಹಣೆಯಿಂದ ನಿವೃತ್ತವಾದ ಇದನ್ನು ಸಮುದ್ರ ತೀರಕ್ಕೆ ತಂದು ನಿಲ್ಲಿಸಿ 2002ರಿಂದ ಪ್ರವಾಸಿಗರಿಗೆ ಪ್ರವೇಶ ಕಲ್ಪಿಸಲಾಯಿತು. ಸಬ್ಮೆರೈನ್ ಒಳಗೆ ಇರುವ ವ್ಯವಸ್ಥೆಗಳು, ಅದರ ವಿವಿಧ ಭಾಗಗಳು ಹಾಗೂ ಅದರೊಳಗಿನ ನಾವಿಕರ ಜೀವನ ವಿಧಾನ ತಿಳಿಯುವ ಅಪೂರ್ವ ಅವಕಾಶ ನಮ್ಮದಾಯ್ತು. 

      ವಿಶಾಖಪಟ್ಟಣದ ಹಲವು ವಸ್ತು ಸಂಗ್ರಹಾಲಯಗಳಲ್ಲಿ ನಮ್ಮನ್ನು ವಿಶೇಷವಾಗಿ ಸೆಳೆದ ಸ್ಥಳವಿದು. ಇಲ್ಲಿ 1971ರ ಭಾರತ- ಪಾಕಿಸ್ತಾನ ಯುದ್ಧದ ಆರಂಭದ ಹಿಂದಿನ ರಾತ್ರಿ ನಮ್ಮ ದೇಶದ INS ವಿಕ್ರಾಂತ್ ಎಂಬ ಆಗ ಭಾರತದಲ್ಲಿದ್ದ ಏಕೈಕ ವಿಮಾನವಾಹಕ ಯುದ್ಧನೌಕೆಯನ್ನು ನಾಶಪಡಿಸಲು ಗುಟ್ಟಾಗಿ ಬಂದ ಪಾಕಿಸ್ತಾನದ ಆ ಕಾಲದಲ್ಲಿದ್ದ ಅತಿ ವೇಗದ ದಾಳಿಗೆ ಪ್ರಸಿದ್ಧವಾಗಿದ್ದ PNS ಗಾಝಿ಼ಯನ್ನು ಬಂಗಾಳಕೊಲ್ಲಿಯಲ್ಲಿ ಎದುರಿಸಿದ ರೋಮಾಂಚಕ ಘಟನೆಯ ಅವಶೇಷಗಳು ಇಲ್ಲಿವೆ!  

      INS ರಜಪೂತ್ ಎಂಬ ನಮ್ಮ ದೇಶದ ಸಬ್ಮೆರೈನ್ 'ಯುದ್ಧ ಆರಂಭವಾಗಿಲ್ಲ, ದಾಳಿ ಮಾಡುವ ಪರಿಸ್ಥಿತಿ ತಂದುಕೊಳ್ಳಬೇಡಿ' ಎಂಬ ಸ್ಪಷ್ಟ ಆದೇಶ ಹೊತ್ತು ಗಸ್ತು ತಿರುಗಲು ಹೊರಟಿದ್ದರೂ ಅತಿ ಅಪರೂಪದ ಪರಿಸ್ಥಿತಿಯಲ್ಲಿ ಸಿಲುಕಿ ತನ್ನ ಮೇಲೆ ದಾಳಿ ನಡೆಸಲು ಬಂದ PNS ಗಾಝಿಯನ್ನು ಪ್ರತಿದಾಳಿ ನಡೆಸಿ ನಾಶಪಡಿಸಿದ ದಾಖಲೆಗಾಗಿ ಇರಿಸಿದ ಅದರ ಅವಶೇಷಗಳಿವೆ.

      ಇತಿಹಾಸದ ಸಾಕ್ಷಿಗಳನ್ನು ಕಣ್ಣೆದುರು ನೋಡುವ ರೋಮಾಂಚನಕ್ಕೆ ಬೆಲೆ ಕಟ್ಟಲಾದೀತೇ? ನಮ್ಮ ದೇಶದ ನೌಕಾಪಡೆಯ ಕಾರ್ಯನಿರ್ವಹಣೆಯ ಸಾಹಸಗಳ ಸಾಧನೆಗಳ ವಿವರಗಳನ್ನು ಓದುತ್ತಾ, ಅಲ್ಲಿರುವ ಮಾದರಿಗಳನ್ನು ನೋಡಿ ತಿಳಿಯುತ್ತಾ ನೌಕಾಸೇನೆಯ ಬಗೆಗೆ ಇದ್ದ ಹೆಮ್ಮೆ ಇನ್ನಷ್ಟು ಹೆಚ್ಚಿತು.

    ಸುಮಾರು 150 ಮಿಲಿಯನ್ ವರ್ಷಗಳ ಹಿಂದೆ ರಚನೆಯಾದ ಇಂದಿಗೂ ರೂಪುಗೊಳ್ಳುತ್ತಲೇ ಇರುವ ಸುಣ್ಣದ ಕಲ್ಲಿನ ಗುಹೆ ಇದು. ಪಾಠದೊಳಗಿದ್ದ ಸುಣ್ಣದ ಕಲ್ಲಿನ ಗುಹೆಯ ವಿವಿಧ ವಿಧಗಳ ರಚನೆಗಳೆಲ್ಲವೂ ಕಣ್ಣೆದುರಿಗೆ ಬಣ್ಣದ ಬೆಳಕುಗಳಲ್ಲಿ ಮಿನುಗುತ್ತಾ ಕಿನ್ನರ ಲೋಕದಂತೆ ಕೈಬೀಸಿ ಕರೆಯುವ ಸ್ಥಳವಿದು! ನನ್ನೊಡನೆ ಇದ್ದ ಮಗಳಿಗೂ ಶಿಲೆಗಳ ರಚನೆ ಹಾಗೂ ವಿಧಗಳ ಬಗ್ಗೆ ಪಾಠ ಇದ್ದ ಕಾರಣ ಅವಳೊಂದಿಗೆ ಚರ್ಚಿಸುತ್ತಾ ನೋಡಿದ್ದು ವಿಶೇಷ ಅನುಭವ. ನನ್ನ ವಿದ್ಯಾರ್ಥಿಗಳ ನೆನಪಾಗಿ ಅವರಿಗೆ ತೋರಿಸಲು ಒಂದಿಷ್ಟು ಚಿತ್ರಗಳನ್ನು ವೀಡಿಯೋಗಳನ್ನು ಮಾಡಿಕೊಂಡು ಬಂದೆ. ಈ ಗುಹೆಗಳಲ್ಲಿ ಶಿಲಾಯುಗದ ಮಾನವರು ವಾಸಿಸಿದ್ದರಂತೆ. ಅಗಾಧ ಗಾತ್ರದ ಗುಹೆಯೊಳಗೆ ಸ್ಥಳೀಯರು ಹಾಗೂ ಪ್ರವಾಸಿಗಳು ವಿವಿಧ ಆಕಾರಗಳಿಗೆ ತಮ್ಮ ಕಲ್ಪನೆಗೆ ತಕ್ಕಂತೆ ವಿವಿಧ ಹೆಸರುಗಳನ್ನಿಟ್ಟಿದ್ದಾರೆ. 

     ಸುಣ್ಣದ ಅಂಶದೊಂದಿಗೆ ಕೆಳಗಿಳಿಯುವ ನೀರು ನದಿಯಾಗಿ ಹೊರಗೆ ಹರಿಯುವುದೂ ಇಲ್ಲಿನ ವಿಶೇಷತೆ. ವಿಶಾಖಪಟ್ಟಣಕ್ಕೆ ನೀರಿನ ಮೂಲವಾದ ಗೋಸ್ಥನಿ ನದಿಗೆ (ದನದ ಕೆಚ್ಚಲಿನ ಆಕಾರದ ಸುಣ್ಣದ ಕಲ್ಲಿನ ರಚನೆಗಳಿಂದ ಹರಿಯುವ ಅಮೃತ ಸಮಾನವಾದ ಶುದ್ಧ ನೀರಿನ ನದಿ) ಹೆಸರಿಟ್ಟ ಸ್ಥಳೀಯರ ನಂಬಿಕೆ ಹಾಗೂ ಪರಂಪರೆಗಳ ಬಗ್ಗೆ ಹೆಮ್ಮೆಯಾಯಿತು. 
ಗುಹೆಯಿಂದ ಹೊರಗೆ ನದಿ ಸಾಗಿಸಿದ ಸುಣ್ಣದ ಕಲ್ಲುಗಳು ರೂಪಾಂತರ ಶಿಲೆಗಳಾದ ಅಮೃತ ಶಿಲೆಗಳು (ಮಾರ್ಬಲ್) ನದಿಯ ಪಾತ್ರದುದ್ದಕ್ಕೂ ಕಂಡುಬರುತ್ತವೆ. ಇಂತಹಾ ಜೀವಂತ ಪಾಠಶಾಲೆಯಲ್ಲಿ ಕಲಿಯುವುದು ಅದೃಷ್ಟವೇ ಸರಿ! (ಮುಂದುವರಿಯುವುದು, ಭಾಗ - 2 ಮುಂದಿನ ಸಂಚಿಕೆಯಲ್ಲಿ)
........................................ ಚಿತ್ರಾಶ್ರೀ ಕೆ.ಎಸ್. 
ಸಹ ಶಿಕ್ಷಕರು (ಕಲಾ), 
ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು, 
ಮಂಗಳೂರು ಉತ್ತರ ವಲಯ. 
ದಕ್ಷಿಣ ಕನ್ನಡ ಜಿಲ್ಲೆ 
Mob : 9449946810
********************************************Ads on article

Advertise in articles 1

advertising articles 2

Advertise under the article