-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 23

ನಿಷ್ಪಾಪಿ ಸಸ್ಯಗಳು : ಸಂಚಿಕೆ - 23

ನಿಷ್ಪಾಪಿ ಸಸ್ಯಗಳು : ಸಂಚಿಕೆ - 23
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

        
ಪ್ರೀತಿಯ ಮಕ್ಕಳೇ ಹೇಗಿದ್ದೀರಿ...?
      ಹಬ್ಬಗಳ ಸಾಲಲ್ಲಿ ದೀಪಗಳ ಹಬ್ಬ ನಮ್ಮೆದುರಿಗಿದೆಯಲ್ಲವೇ..? ತಮಗೆಲ್ಲರಿಗೂ ಬೆಳಕಿನ ಹಬ್ಬವಾದ ದೀಪಾವಳಿಯ ಶುಭಾಶಯಗಳು.
        ಭತ್ತದ ಗದ್ದೆಗಳು ಫಸಲಿನಿಂದ ತುಂಬಿ ತೊನೆದಾಡುವ ಕಾಲವಿದು. ರೈತರು ತಾವು ಬೆಳೆದ ಭತ್ತದ ಫಸಲನ್ನು ಮನೆಯಂಗಳಕ್ಕೆ ತರುವ ಮೊದಲು ಗಣೇಶ ಚತುರ್ಥಿ, ನವರಾತ್ರಿ ಅಥವಾ ದೀಪಾವಳಿಯ ಶುಭದಿನಗಳಲ್ಲಿ ಯಾವುದಾದರೂ ಒಂದು ದಿನ ಮನೆತುಂಬಿಸುವ ಕಾರ್ಯವೆಂದು ಭತ್ತದ ತೆನೆಯನ್ನು ಸಕಲ ಗೌರವಾದರಗಳ ಜೊತೆಗೆ ಮನೆಯೊಳಗೆ ತರುತ್ತಾರೆ. ಸಾಂಪ್ರದಾಯಿಕವಾದ ಈ ಆಚರಣೆಯ ಹಿಂದಿನ ದಿನವೇ ಶುಭ ಸಸ್ಯಗಳಾದ ಹಲಸು, ಮಾವು, ಗರಿಕೆ, ತೆಗ್ಗಿ, ಮನೆಯಲ್ಲಿ ಬೆಳೆದ ಕೆಸುವು, ಹರಿವೆ, ಮುಳ್ಳುಸೌತೆ, ಹೀರೆ, ದಡ್ಡಾಲ ನಾರು ಮೊದಲಾದುವುಗಳನ್ನ ಭತ್ತದ ತೆನೆಗಳ ಜೊತೆ ತುದಿ ಬಾಳೆಯೆಲೆಯಲ್ಲಿ ತುಳಸಿಕಟ್ಟೆ ಯಲ್ಲಿರಿಸುತ್ತಾರೆ. ಮರುದಿನ ಬೆಳಗ್ಗೆ ಮನೆತುಂಬಿಸುವ ಕ್ರಮ ನಡೆದ ಬಳಿಕ ತೆಗ್ಗಿ ಎಲೆಯ ಮೇಲೆ ಇತರೆಲ್ಲಾ ಎಲೆಗಳನ್ನಿಟ್ಟು ಭತ್ತದ ತೆನೆಯಿರಿಸಿ ದಡ್ಡಾಲ ನಾರಿನಿಂದ ಕಟ್ಟಿ ಮನೆಯ ಶ್ರೇಷ್ಠ ವೆಂಬ ಭಾಗಗಳಿಗೆ ಕಟ್ಟುತ್ತಾರೆ. ಹೀಗೆ ಕಟ್ಟಿದ ಎಲೆಗಳು ಮುಂದಿನ ವರ್ಷದವರೆಗೂ ಹಾಗೇ ಇರುತ್ತವೆ. ಇದರಲ್ಲಿ ಹೊರಭಾಗದಲ್ಲಿ ಇರಿಸಲ್ಪಡುವ ತೆಗ್ಗಿ ಗಿಡ ಕೃಷಿಕರಿಗೆ ಎಷ್ಟು ಪವಿತ್ರವಾದುದು ಎಂದು ನಾವಿದರಿಂದ ತಿಳಿಯಬಹುದು.
       ಸಾಮಾನ್ಯವಾಗಿ ಕಳೆಗಿಡದಂತೆ ಎಲ್ಲೆಂದರಲ್ಲಿ ಬೆಳೆಯುವ, ಬೇರು ಮತ್ತು ಬೀಜದ ಮೂಲಕ ಸಂತಾನವನ್ನು ಸಾವಿರ ಮಾಡಿಕೊಳ್ಳುವ ಈ ತೆಗ್ಗಿ ಗಿಡವನ್ನು ಕೆಲವರು ಪವಿತ್ರ ಗಿಡ ಎಂಬ ನೆಲೆಯಲ್ಲಿ ಕಡಿಯದೆ ಬಿಟ್ಟರೆ ಕೆಲವರು ಕಳೆಯಾಗಿ ಪರಿಣಮಿಸಿತೆಂದು ನಾಶಮಾಡಲೂ ಕಷ್ಟ ಪಡುತ್ತಾರೆ. ತುಂಡು ಬೇರು ಉಳಿದರೂ ಈ ಸಸ್ಯ ಮತ್ತೆ ಎದ್ದು ನಿಲ್ಲುತ್ತದೆ.
     ಮಳೆಗಾಲ ಬಂತೆಂದರೆ ತೆಗ್ಗಿ ಗಿಡಕ್ಕೆ ಬಹಳ ಹಿಗ್ಗು. ತುಪ್ಪಳದಂತಹ ಮೃದುವಾದ ಚಿಗುರು ಬೆಳೆದು ಹೃದಯದಾಕಾರದ ಅರ್ಧ ಅಡಿಯಷ್ಟು ಉದ್ದದ ಎಲೆಗಳ ಜೊತೆ ನಾಲ್ಕೈದು ಅಡಿಗಳೆಷ್ಟೆತ್ತರ ಬೆಳೆಯುತ್ತದೆ. ಆಗಸ್ಟ್ ತಿಂಗಳಿಂದ ಫೆಬ್ರವರಿಯವರೆಗೆ ರಥದಂತೆ ಬಿಳೀ ಪುಷ್ಪಗಳ ಗೊಂಚಲ ಸೌಂದರ್ಯ ಕಣ್ಮನ ತುಂಬುತ್ತದೆ. ನೀರೆರೆಯದೆ, ಗೊಬ್ಬರ ಹಾಕದೆ ಕೀಟನಾಶಕಗಳ ಹಂಗಿರದೆ ಜೈವಿಕ ಗಡಿಯಾರದ ಋತುಗಾನದಲ್ಲಿ ಮೈದಳೆವ ಪುಷ್ಪತೋರಣ ಚಿಟ್ಟೆಗಳಿಗೆ ನಿತ್ಯನೂತನ. ಈ ಬಿಳೀ ಹೂಗಳಿಗೆ ಕಡು ಸುವಾಸನೆ ಇದ್ದು ಕೆಂಪು ಪುಷ್ಪ ಪತ್ರೆಯಲ್ಲಿ ಕಪ್ಪಾದ ಕಾಯಿಗಳಾಗುತ್ತವೆ.
       ತೆಗ್ಗಿ ಗಿಡ, ಇಟ್ಟೇವು, ಹಿಂಟೆಂಘ ಎಂದು ಕರೆಯಲ್ಪಡುವ ಈ ಸಸ್ಯದ ವೈಜ್ಞಾನಿಕ ಹೆಸರು clerodendrum viscosum. ಕ್ಲೀರೋಡೊಂಡ್ರೆಮ್ ಅಂದರೆ ಅದೃಷ್ಟದ ಮರವೆಂದೂ ವಿಸ್ಕೋಸಂ ಅಂದರೆ ಅಂಟಿಕೊಳ್ಳುವಂತಹ ಗುಣವೆಂದೂ ಅರ್ಥವಂತೆ. ಇದು verbenaceae ಕುಟುಂಬಕ್ಕೆ ಸೇರಿದೆ. ಕೇರಳೀಯರ ಓಣಂ, ಕರಾವಳಿಯ ಚೂಡಿಹಬ್ಬದಲ್ಲಿ ಇಟ್ಟೇವು ಹೂಗಳಿಗೆ ಪ್ರಾಶಸ್ತ್ಯವಿದೆ. ಉತ್ತರ ಭಾರತದ ಶಿವಾಲಯಗಳಲ್ಲಿ ಶಿವಾರ್ಚನೆಗೆ ಇದು ಪ್ರಧಾನ ಪುಷ್ಪ. ಅಲ್ಲಿ ಅಲ್ಕಾ ಎಂದು ಕರೆಯುತ್ತಾರೆ. ಉದ್ದನೆಯ ಕೇಸರಗಳಿರುವ ಇದರ ಹೂಗಳು ಮಧುವನ್ನು ಹೊಂದಿದ್ದು ಸಣ್ಣ ಪುಟ್ಟ ಚಿಟ್ಟೆಗಳು ಸದಾ ಸ್ನೇಹದಿಂದಿರುತ್ತವೆ.
        ತೆಗ್ಗಿ ಗಿಡ ಅಪೂರ್ವ ಔಷಧ ಕೇಂದ್ರವಾಗಿಯೂ ರೂಪುಗೊಂಡಿದೆ. ವಿಷಜಂತು ಕಡಿತ, ಹೆಚ್ಚಿದ ರಕ್ತದೊತ್ತಡ, ಅಸ್ತಮಾ, ಕೆಮ್ಮು, ಚರ್ಮರೋಗ, ಜೀರ್ಣಶಕ್ತಿಗೆ, ಏಡಿಬಾವು, ವಾತ, ತೊನ್ನು, ಕುಷ್ಟ, ಹುಣ್ಣು, ಶ್ವಾಸನಾಳದ ಸೋಂಕು, ಗಾಯಗಳಾದಾಗ, ಮಲೇರಿಯಾ, ಉಗುರುಸುತ್ತು, ತಲೆಕೂದಲು ಉದುರುವಿಕೆ, ಬಾಯಿ ದುರ್ಗಂಧ ಇತ್ಯಾದಿಗಳಿಗೆ ಪಾರಂಪರಿಕ ಆಯುರ್ವೇದ, ಯುನಾನಿ ಪದ್ಧತಿಗಳಲ್ಲಿ ಬಳಸುತ್ತಾರೆ. ಎಲೆಯ ರಸದ ರುಚಿ ಕಹಿ. ಹೊಟ್ಟೆ ಹುಣ್ಣು, ಒಸಡು ಗಟ್ಟಿಯಾಗಲು ಉಪಯುಕ್ತವಾಗಿದೆ. ಇದು ದಶಮೂಲಗಳಲ್ಲಿ ಒಂದು. ಜಾನುವಾರುಗಳ ಹೊಟ್ಟೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ. ಇದರ ಬೇರಿನ ತೊಗಟೆಯ ತಂಬುಳಿಯನ್ನೂ ಔಷಧವಾಗಿ ಬಳಕೆ ಮಾಡುತ್ತಾರೆ. ತೆಗ್ಗಿ ಗಿಡ ಉತ್ತಮ ರೋಗ ನಿರೋಧಕ, ವೈರಾಣು ನಾಶಕ ಗುಣ ಹೊಂದಿದೆ.
        ಹಸಿ ಅರಶಿನದ ಕೊಂಬು ಬೇಯಿಸುವಾಗ ಅದರೊಂದಿಗೆ ಇಟ್ಟೇವು ಸೊಪ್ಪು ಹಾಕುವ ಕ್ರಮವಿದೆ. ಬಾಳೆ ಹಣ್ಣಿನ ಗೊನೆ ಸಮಯಕ್ಕೆ ಹಣ್ಣಾಗದಿದ್ದರೆ ಯೋಚನೆ ಬೇಡ. ಗೊನೆಯ ಮೇಲೆ ಇದರ ಸೊಪ್ಪು ಹರಡಿ ಒಂದೆರಡು ಗೋಣಿ ಹಾಕಿದರಾಯಿತು...! ರೈತರಿಗೆ ಭತ್ತದ ಸಸಿ ಮಾಡಲು ಭತ್ತವನ್ನು ಮೊಳಕೆಬರಿಸುವುದೂ ಒಂದು ಸಾಹಸದ ಕೆಲಸವಾಗುವುದಿದೆ. ಸಕಾಲದಲ್ಲಿ ಮೊಳಕೆ ಬಾರದೆ ಹೋದರೆ ಮತ್ತೆ ಬೇಸಾಯವನ್ನು ಮುಂದುವರಿಸಲಾಗದ ಸಂಕಷ್ಟ ಎದುರಾಗುತ್ತದೆ. ಹಾಗಾಗಬಾರದೆಂದು ಮುನ್ನೆಚ್ಚರಿಕೆ ವಹಿಸುವ ರೈತರು ಭತ್ತದ ಬೀಜದ ಮುಡಿಯನ್ನು 12 ಗಂಟೆ ಕಾಲ ನೀರಲ್ಲಿ ಮುಳುಗಿಸಿಟ್ಟು ಬಳಿಕ 24 ಗಂಟೆ ಕಳೆದ ಮೇಲೆ ಸೆಗಣಿ ನೀರು ಸವರಿ ಭತ್ತದ ಬೀಜದ ಮುಡಿಯ ಅಡಿ ಮತ್ತು ಮೇಲ್ಭಾಗಕ್ಕೆ ಇಟ್ಟೇವು ಎಲೆಗಳನಿಟ್ಟು ಭಾರವಾದ ಕಲ್ಲು ಇಟ್ಟರೆ ಮೊಳಕೆ ಬರುವುದರಲ್ಲಿ ಸಂಶಯವಿರುವುದಿಲ್ಲ. ತರಕಾರಿ ಬೀಜಗಳ ಮೊಳಕೆ ಬರಿಸಲೂ ಇಟ್ಟೇವನ್ನು ಬಳಸುತ್ತಾರೆ. ಅಂದರೆ ಈ ಸಸ್ಯ ಕೇವಲ ಕಳೆಗಿಡವಲ್ಲ. ರೈತನಿಗೆ ಮಿತ್ರನೂ ಹೌದು. ಗ್ರಾಮೀಣ ಪ್ರದೇಶಗಳಲ್ಲಿ ಹಿಂದೆ ನಡೆಸುತ್ತಿದ್ದ ಶರಾಬು ತಯಾರಿಯಲ್ಲಿ ಅದರ ಗುಣಮಟ್ಟ ಉತ್ತಮ ಪಡಿಸಲೂ ಇಟ್ಟೇವು ಬಳಕೆಯಾಗುತ್ತಿತ್ತು.
       ಮಕ್ಕಳೇ ಕಳೆಯೆಂದು ಭಾವಿಸುವ ಸಸ್ಯಗಳೆಲ್ಲ ಕಳೆಯಲ್ಲ. ಪರಿಸರದ ಹಾಗೂ ಮಾನವರ ಕಳೆಯನ್ನು ಹೆಚ್ಚಿಸಬಲ್ಲ ನಿಷ್ಪಾಪಿ ಸಸ್ಯಗಳವು. ಅವುಗಳನ್ನು ಅರ್ಥೈಸಿಕೊಂಡು, ಸ್ನೇಹ ಮಾಡಿಕೊಂಡು ಜೊತೆಜೊತೆಗೆ ಹೆಜ್ಜೆ ಹಾಕಬೇಕಾದವರು ನಾವಲ್ಲವೇ? 
       ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.... ನಮಸ್ಕಾರ
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************




Ads on article

Advertise in articles 1

advertising articles 2

Advertise under the article