-->
ಹೃದಯದ ಮಾತು : ಸಂಚಿಕೆ - 16

ಹೃದಯದ ಮಾತು : ಸಂಚಿಕೆ - 16

ಹೃದಯದ ಮಾತು : ಸಂಚಿಕೆ - 16
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ


              
        ರಾತ್ರಿ ಎರಡು ದಾಟಿದೆ. ಶಾಂತಾ ಚಾಪೆಯ ಮೇಲೆ ಈಗಷ್ಟೆ ಮಲಗಿದ್ದಾಳೆ. ಮಕ್ಕಳಿಬ್ಬರು ಆಗಲೇ ಗಾಢ ನಿದ್ರೆಯಲ್ಲಿದ್ದಾರೆ.‌ ಆಕೆಗೆ ನಿದ್ರೆ ಸುಳಿಯುತ್ತಿಲ್ಲ. ತಲೆಯಲ್ಲಿ ನೂರಾರು ಯೋಚನೆಗಳು. ಸ್ವಸಹಾಯ ಸಂಘದಿಂದ ಪಡೆದ ಸಾಲದ ಕಂತು ನಾಳೆ ತುಂಬ ಬೇಕು. ಮಗಳು ಕಾಲೇಜು ಫೀಸು ಕಟ್ಟುವಂತೆ ವಾರದಿಂದ ಹಟ  ಬಿದ್ದಿದ್ದಾಳೆ. ಈ ಮಧ್ಯೆ ನಾಳೆಯ ಪಾಠದ ತಯಾರಿ ಇನ್ನೂ ನಡೆಸಿಲ್ಲ. ಬೆಳಿಗ್ಗೆ ಬೇಗನೆ ಎದ್ದು, ತಿಂಡಿ ತಯಾರಿಸಿ, ತಾನು ಪಾಠ ಟಿಪ್ಪಣಿ ತಯಾರಿಸಿ ಹೊರಡಬೇಕು. 

      ಶಾಲೆಯಲ್ಲಿ ಎರಡನೇ ಅವಧಿ. ಶಾಂತ ಒಂಭತ್ತನೇ ತರಗತಿ ಬೋಧಿಸುತ್ತಿದ್ದಾಳೆ. ಆಕೆ ಬಿ.ಎಡ್. ಶಿಕ್ಷಣಾರ್ಥಿ. ಪಾಠ ಮಾಡುವಾಗ ತಡವರಿಸುತ್ತಿದ್ದಾಳೆ. ತರಬೇತಿ ಹಂತದಲ್ಲಿ ಕಲಿತ ಹಂತಗಳು ಕೈಕೊಡುತ್ತಿದೆ. ಸಮಯದ ಹೊಂದಾಣಿಕೆಯೂ ಸಾಧ್ಯವಾಗುತ್ತಿಲ್ಲ. ಹಿಂದಿನ ಬೆಂಚಿನಲ್ಲಿ ತನ್ನ ಉಪನ್ಯಾಸಕರು ಕುಳಿತಿದ್ದಾರೆ. ಅಲ್ಲದೆ ನಾಲ್ಕೈದು ಮಂದಿ ಸಹಪಾಠಿಗಳು ಇವಳನ್ನೇ ಕೆಕ್ಕರಿಸಿ ನೋಡುತ್ತಿದ್ದಾರೆ. ಉಪನ್ಯಾಸಕರತ್ತ ಒಮ್ಮೆ ದೃಷ್ಟಿ ಬೀರುತ್ತಾಳೆ. ಅಷ್ಟೇ ಸಾಕಿತ್ತು ಮೈಯೆಲ್ಲಾ ಬೆವರ ತೊಡಗುತ್ತದೆ. ಅಷ್ಟರಲ್ಲಿ ಅವಧಿ ಮುಗಿಯುತ್ತದೆ. ಬೋಧನೆಯ ಎರಡನೇ ಹಂತವೇ ಮುಗಿದಿರಲಿಲ್ಲ. 

     ಶಾಂತ ತರಗತಿಯಿಂದ ಕೊಠಡಿಗೆ ಬಂದಳು. ಅದಾಗಲೇ ಅವಳನ್ನು ಉಪನ್ಯಾಸಕರು ಕಾಯುತ್ತಿದ್ದಾರೆ. ಸಹಪಾಠಿಗಳು ಜೊತೆಗಿದ್ದಾರೆ. ಶಾಂತ ಭಯದಿಂದಲೇ ಕೊಠಡಿಯೊಳಗೆ ಬರುತ್ತಾಳೆ. ಆಕೆಯ ಪಾಠದ ಬಗ್ಗೆ ವಿಮರ್ಶೆ ತೀವ್ರವಾಗುತ್ತದೆ. ಪಾಠ ಟಿಪ್ಪಣಿಯೂ ಪೂರ್ಣ ಬರೆದಿರಲಿಲ್ಲ. ಚಾರ್ಟ್ ಅರ್ಧಂಬರ್ಧವಿತ್ತು. ಎಲ್ಲರೂ ಆಕೆಯನ್ನು ಜಾಡಿಸುತ್ತಿದ್ದಾರೆ. ಶಾಂತ ಮೌನವಾಗಿ ನಿಂತಿದ್ದಾಳೆ. ತಪ್ಪನ್ನು ಒಪ್ಪಿಕೊಂಡು, ಕ್ಷಮಿಸುವಂತೆ ಬೇಡುತ್ತಿದ್ದಾಳೆ. ನಾಳೆಯಿಂದ ಸರಿ ಪಡಿಸುವುದಾಗಿ ತಿಳಿಸುತ್ತಾಳೆ.

     ಶಾಲೆಯಲ್ಲಿ ತರಬೇತಿಗೆ ಬಂದು ವಾರ ಎರಡು ಕಳೆದರೂ ಶಾಂತಳಲ್ಲಿ ಬದಲಾವಣೆ ಕಾಣಲಿಲ್ಲ. ಬೆಳಿಗ್ಗೆ ಹತ್ತು ನಿಮಿಷ ತಡವಾಗಿಯೇ ಶಾಲೆಗೆ ಬರುತ್ತಿದ್ದಳು. ಪಾಠ ಯೋಜನೆಗಳು ಯಾವುದೂ ಪೂರ್ತಿಯಾಗಿರುತ್ತಿರಲಿಲ್ಲ. ಮನದಲ್ಲಿ ಅದ್ಯಾವುದೋ ಯೋಚನೆಗಳೇ ತುಂಬಿರುತ್ತಿತ್ತು. ಪಾಠ ವೀಕ್ಷಕರಿಂದ ದಿನಾ ಮಂಗಳಾರತಿ ನಡೆಯುತ್ತಿತ್ತು. ಕೆಲವೊಮ್ಮೆ ಆಕೆಯ ಕಣ್ಣುಗಳು ತೇವಗೊಳ್ಳುತ್ತಿತ್ತು. ಆಕೆ ಇದೀಗ ಎಲ್ಲರಿಗೂ ಒಂದು ಪ್ರಶ್ನಾರ್ಥಕವಾಗಿದ್ದಳು. ಈ ಮಧ್ಯೆ ಎಲ್ಲವನ್ನೂ ಗಮನಿಸುತ್ತಿದ್ದ ಮುಖ್ಯ ಶಿಕ್ಷಕ ರವಿಗೆ ಶಾಂತಾಳ ವ್ಯಕ್ತಿತ್ವ ವಿಚಿತ್ರವಾಗಿ ತೋರುತ್ತದೆ. ರವಿಗೆ ಆಕೆ ಬದುಕಿನಲ್ಲಿ ಯಾವುದೋ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾಳೆ ಎಂಬುವುದು ಅರ್ಥವಾಗುತ್ತಿತ್ತು. ಆ ಬಗ್ಗೆ ಆಕೆಯಿಂದ ತಿಳಿದುಕೊಳ್ಳುವ ಕುತೂಹಲ. ಒಂದು ಸಂದರ್ಭ ನೋಡಿ ಆಕೆಯನ್ನು ಮಾತಾಡಿಸುತ್ತಾನೆ. ಆರಂಭದಲ್ಲಿ ಅಳುಕು ಇದ್ದರೂ, ಆಕೆ ತನ್ನ ವೃತ್ತಾಂತವನ್ನು ರವಿಯ ಮುಂದೆ ಹೇಳತೊಡಗಿದಳು.

      ಆಕೆ ಬಡ ಕುಟುಂಬದ ಹೆಣ್ಣು ಮಗಳು. ಅಪ್ಪ ಅಮ್ಮನ ಕಷ್ಟದ ಬದುಕು ಈಕೆಯ ಮೇಲೆ ಬಹಳನೇ ಪ್ರಭಾವ ಬೀರಿತ್ತು. ಅಪ್ಪನಿಗೆ ಆರು ಮಕ್ಕಳು. ನಾಲ್ಕು ಗಂಡು, ಇಬ್ಬರು ಹೆಣ್ಣು. ಶಾಂತಾಳಿಗೆ ಮೂರು ಮಂದಿ ಅಣ್ಣಂದಿರು. ಒಬ್ಬ ತಮ್ಮ ಹಾಗೂ ಒಬ್ಬಳು ತಂಗಿ. ಅಪ್ಪನಿಗೆ ಮಕ್ಕಳನ್ನು ಹಸಿವಿನಿಂದ ಕಾಪಾಡುವುದೇ ಬಹುದೊಡ್ಡ ಸಾಹಸವಾಗಿತ್ತು. ಅಮ್ಮ ತಾನೂ ದುಡಿದು ಸಂಸಾರಕ್ಕೆ ಹೆಗಲು ಕೊಡುತ್ತಿದ್ದಳು. ಶಾಂತ ಪಕ್ಕದ ಶಾಲೆಯಲ್ಲಿ ನಾಲ್ಕನೇ ತರಗತಿ ಕಲಿಯುತ್ತಿದ್ದಳು. ಮುಂದೆ ಆಕೆಯನ್ನು ಶಾಲೆಗೆ ಕಳುಹಿಸಲು ಅಪ್ಪ ಅಶಕ್ತನಾಗಿದ್ದ. ಕಲಿಕೆಯಲ್ಲಿ ಚುರುಕಾಗಿದ್ದ ಶಾಂತಾ ಅಪ್ಪ ಶಾಲೆ ಬಿಡಿಸುವ ಯೋಚನೆ ಮಾಡಿದಾಗ ತೀರಾ ವಿಚಲಿತಳಾಗಿದ್ದಳು. ಸಣ್ಣವಳಾಗಿದ್ದರೂ ಆಕೆಗೆ ಕಲಿಕೆಯ ಬಗ್ಗೆ ತುಂಬಾ ಆಸಕ್ತಿ. ಆಕೆ ಹಟ ಮಾಡಿದಾಗ, ಅಪ್ಪ ದೂರದ ಆಶ್ರಮ ಶಾಲೆಗೆ ಸೇರಿಸಿ ಬಂದಿದ್ದ. ಅವಳು ಮನೆ ಬಿಟ್ಟು ಆಶ್ರಮ ಸೇರಿದರೂ ಎದೆಗುಂದಿರಲಿಲ್ಲ. ಮನೆಯಿಂದ ದೂರವಾದ ಚಿಕ್ಕ ಹುಡುಗಿ ಮನನೊಂದರೂ ಆಶ್ರಮ ಬಿಡಲಿಲ್ಲ. 

     ಆಶ್ರಮದಲ್ಲಿ ಮೂರು ವರ್ಷ ಕಳೆದ ಆಕೆ ಏಳನೇ ತರಗತಿಯಲ್ಲಿ ಪೂರ್ಣಗೊಳಿಸಿದ್ದಳು. ಶಿಕ್ಷಕರ ಮೆಚ್ಚುಗೆ ಪಡೆದಿದ್ದ ಆಕೆ ಮುಂದೆ ಪ್ರೌಢಶಾಲೆ ಸೇರಬೇಕಿತ್ತು. ಮನೆಯವರು ಅದಕ್ಕೆ ಸಮ್ಮತಿಸಲಿಲ್ಲ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಈಕೆ ಮನೆಯಲ್ಲಿದ್ದು ಅಕ್ಕ ಪಕ್ಕದ ಮನೆಯಲ್ಲಿ ದುಡಿದು ಅಷ್ಟೋ ಇಷ್ಟೋ ಸಂಪಾದಿಸಿದರೆ ಮನೆ ಖರ್ಚಿಗೆ ಸಹಾಯವಾಗಬಹುದೆಂಬುವುದು ಅವರ ಯೋಚನೆ. ಶಾಂತಾ ತೀರಾ ಖಿನ್ನಳಾಗಿದ್ದಳು. ಓದಬೇಕೆಂಬುವುದು ಆಕೆಯ ಬಯಕೆ. ಎಲ್ಲಾ ಮಕ್ಕಳಂತೆ ನಾನು ಕಲಿಯಬೇಕೆಂದು ಬಯಸಿದ್ದಳು. ಇವಳ ಹಟಕ್ಕೆ ಮಣಿದ ಅಮ್ಮ ದೂರದ ಊರಿನಲ್ಲಿ ಹಾಸ್ಟೇಲ್ ಗೆ ಸೇರಿಸಿ, ಅಲ್ಲಿಂದಲೇ ಎಂಟನೇ ತರಗತಿಗೆ ಸೇರಿಸಿದ್ದಳು.

     ಶಾಂತಾ ಎಂಟನೇ ತರಗತಿ ಪರೀಕ್ಷೆ ಮುಗಿಸಿ ಮನೆಗೆ ಬಂದಿದ್ದಾಳೆ. ಅದು ಬೇಸಿಗೆ ರಜೆ. ಅದೇ ರಜೆಯಲ್ಲಿ ಅಣ್ಣನಿಗೆ ಮದುವೆ. ಆತನದ್ದು ಮದುವೆಯಾಗುವ ವಯಸ್ಸಂತೂ ಆಗಿರಲಿಲ್ಲ. ಆದರೂ ಹಟ ಹಿಡಿದು ಮದುವೆಯಾಗಿದ್ದ. ಮದುವೆಯಾಗಿ ಅತ್ತಿಗೆ ಮನೆಗೆ ಬಂದು ತಿಂಗಳೊಂದು ಇನ್ನೂ ದಾಟಿರಲಿಲ್ಲ. ಅತ್ತೆ - ಸೊಸೆಯ ಮಧ್ಯೆ ಬಿರುಕು ಮೂಡಿತ್ತು. ಅವರಿಗೆಂದೂ ಒಮ್ಮೆಯೂ ಕೂಡಿ ಬರಲೇ ಇಲ್ಲ. ಪರಿಸ್ಥಿತಿ ವಿಪರೀತಕ್ಕೆ ಹೋದಾಗ, ಅಣ್ಣ ಆಕೆಯೊಂದಿಗೆ ಮನೆ ಬಿಟ್ಟು ದೂರದ ಊರಿನಲ್ಲಿ ಸಂಸಾರ ಹೂಡಿದ. ಅಣ್ಣನ ನಿರ್ಗಮನ ಶಾಂತಾಳ ಮೇಲೆ ನೇರ ಪ್ರಭಾವ ಬೀರಿತ್ತು. ಮನೆಯವರು ಆಕೆಯನ್ನು ಶಾಲೆ ಬಿಡಿಸಿ, ದುಡಿಮೆಗೆ ಹಚ್ಚಿದರು. ಆಕೆಯ ಕಲಿಯುವ ಕನಸಿಗೆ ಕೊಳ್ಳಿ ಇಡಲಾಗಿತ್ತು. ಅವಳ ವಯಸ್ಸಿನ ಮಕ್ಕಳು ಶಾಲೆಗೆ ಹೋಗುವ ದೃಶ್ಯ ಕಂಡರಂತೂ, ಆಕೆ ಮರೆಯಲ್ಲಿ ನಿಂತು ಅಳುತ್ತಿದ್ದಳು.

      ಆಕೆ ಶಾಲೆ ಬಿಟ್ಟು ಮೂರು ವರ್ಷ ಸಂದಿತ್ತು. ಆಕೆಗಿನ್ನೂ ಹದಿನಾರರ ಹರೆಯ. ಅಷ್ಟರಲ್ಲೇ ಮನೆಯಲ್ಲಿ ಮದುವೆ ಮಾಡುವ ತಯಾರಿ. ಆಕೆಗೆ ಮದುವೆ ಸುತರಾಂ ಇಷ್ಟವಿಲ್ಲ. ತಾನು ಕಂಡ ಕನಸ್ಸುಗಳೆಲ್ಲಾ ನುಚ್ಚು ನೂರಾಗಿತ್ತು. ಬದುಕಿದ್ದು ಬಡತನದಲ್ಲಾದರೂ ಬೆಟ್ಟದಷ್ಟು ಕನಸು ಹೊತ್ತವಳಾಕೆ. ಇದೀಗ ಮನೆಯವರು ಹರಕೆ ಕುರಿಯಂತೆ ಶಾಂತಾಳನ್ನು ಹಸೆಮನೆಯಲ್ಲಿ ಕೂರಿಸಿದ್ದರು. ಆಕೆಯದು ಮದುವೆಯ ವಯಸ್ಸಂತೂ ಆಗಿರಲೇ ಇಲ್ಲ. ಹಸೆಮನೆಯಲ್ಲಿ ಕುಳಿತಿದ್ದ ಆಕೆಯ ಕಣ್ಣುಗಳು ಹನಿಗಳನ್ನು ಉದುರಿಸುತ್ತಿತ್ತು. ವ್ಯವಸ್ಥೆಯ ಮುಂದೆ ಆಕೆ ಮೂಕಳಾಗಿದ್ದಳು.

     ಆಕೆಗಿನ್ನೂ ಹದಿನಾರು. ಕೈಹಿಡಿದ ಆತನಿಗೆ ಮೂವತ್ತ ನಾಲ್ಕು. ಆತ ದೂರದ ಯಾವುದೋ ಊರಿನಲ್ಲಿ ಉದ್ಯಮಿಯೆಂದು ಹೇಳಿದ್ದ. ಮನೆಯಳಿಯ ಉದ್ಯಮಿಯಾಗಿರುವುದು ಮನೆಯವರಿಗೆ ಸಮಾಧಾನ ತಂದಿತ್ತು. ಮಗಳಾದರೂ ಸುಖವಾಗಿರಬಹುದೆಂಬ ಆಶಾವಾದ. ಮನೆಯವರ ಅವಸರದ ನಿರ್ಧಾರ ಮುಗ್ಧ ಮನಸ್ಸಿನ ಶಾಂತಾಳ ಬದುಕನ್ನು ಕದಡಿತ್ತು. ‌ನಾಟಿ ಮಾಡದೆ ಒಣಗಿ ಒಡೆದ ಗದ್ದೆಯಂತೆ ಆಕೆಯ ಬದುಕು ಬಿರುಕು ಬಿಡತೊಡಗಿತ್ತು.

      ಆಕೆಯ ಗಂಡ ದೂರದ ಊರಿನಲ್ಲಿ ಹೋಟೇಲು ಒಂದರಲ್ಲಿ ದಿನಗೂಲಿಯಾಗಿದ್ದ. ಆತ ಉದ್ಯಮಿಯೆಂದು ಹೇಳಿದ್ದು ಸುಳ್ಳಾಗಿತ್ತು. ಆ ಸುಳ್ಳನ್ನು ಮನೆಯವರು ನಂಬಿದ್ದರು. ಮದುವೆಯಾಗಿ ಇನ್ನೂ ತಿಂಗಳು ದಾಟಿರಲಿಲ್ಲ. ಮನೆಯ ಮುಂದೆ ಪೋಲೀಸರು ನಿಂತಿದ್ದು ಕಂಡು ಮನೆಯವರು ದಂಗಾಗಿದ್ದರು. ಮನೆಯಲ್ಲಿ ಸಹಿಸಲಾರದ ಬಡತನವಿದ್ದರೂ ಮರ್ಯಾದೆಗೇನೂ ಕೊರತೆಯಿರಲಿಲ್ಲ. ಶಾಂತಾಳಂತೂ ಸದ್ಗುಣವನ್ನು ಬಹಳನೇ ರೂಢಿಸಿಕೊಂಡಿದ್ದಳು. ಆಕೆಗೆ ಅದು ಅಮ್ಮನಿಂದ ರಕ್ತಗತವಾಗಿ ಬಂದಿತ್ತು. ಪೋಲೀಸರು ಬಂದವರೇ ಶಾಂತಾಳ ಗಂಡನ ಬಗ್ಗೆ ವಿಚಾರಿಸ ತೊಡಗಿದರು.

       ಶಾಂತಾಳ ಗಂಡ ರಾಜು ನಂಬಿಕಸ್ತನಂತೂ ಆಗಿರಲಿಲ್ಲ. ಆತನ ಕೈ ಹಿಡಿದ ಶಾಂತಾ ಕಷ್ಟ ಸುಖಗಳನ್ನು ಅರಿತುಕೊಳ್ಳುವಷ್ಟು ಮಾಗಿಯೂ ಇರಲಿಲ್ಲ. ಶಾಂತಾಳನ್ನು ವರಿಸುವ ಮುಂಚೆಯೇ ಆತ ಮತ್ತೊಬ್ಬಳ ತೆಕ್ಕೆಯೊಳಗೆ ಬಿದ್ದಿದ್ದ. ಆಕೆಯೊಂದಿಗೆ ಮದುವೆಯಾಗುವುದಾಗಿಯೂ ನಂಬಿಸಿದ್ದ. ಇದೀಗ ಆಕೆಗೆ ವಂಚಿಸಿ ಶಾಂತಾಳ ಕೈ ಹಿಡಿದಿದ್ದ. ಅಮಾಯಕ ಶಾಂತಾಳಿಗೆ ಇವೆಲ್ಲವನ್ನೂ ಅರಗಿಸಿಕೊಳ್ಳುವ ಶಕ್ತಿ ಇರಲಿಲ್ಲ. ರಾಜು ಪ್ರೇಮಿಸಿ, ವಂಚಿಸಿದ್ದ ಆ ಹುಡುಗಿಯ ಮನೆಯವರು ಪೋಲೀಸರಿಗೆ ದೂರು ನೀಡಿದ್ದರು. ಮನೆಯಲ್ಲಿ ರಾಜು ಇಲ್ಲದ್ದು ಅರಿತ ಪೋಲೀಸರು ಹಿಂತಿರುಗಿದ್ದರು. ಮುಂದೆ ಅದೇನೋ ನಡೆದು ಕೇಸನ್ನು ಮುಗಿಸಲಾಗಿತ್ತು.

      ಸುಮಾರು ಒಂದು ವರ್ಷ ಮದುವೆಯಾದರೂ, ಗಂಡನ ಮನೆಗೆ ತೆರಳದ ಶಾಂತ ಇಂದು ಗಂಡನೊಂದಿಗೆ ಹೊರಟಿದ್ದಳು. ಇದೀಗ ಆಕೆಗೆ ಪುಟ್ಟ ಪುಟ್ಟ ನಿರೀಕ್ಷೆಗಳು ಚಿಗುರೊಡೆಯುತ್ತಿತ್ತು. ಮುಗ್ಧ ಶಾಂತಾ ಗಂಡನೊಂದಿಗೆ ಹೆಜ್ಜೆ ಹಾಕಿದ್ದಳು. ರಾಜು ಶಾಂತಾಳನ್ನು ಕರೆದೊಯ್ದದ್ದು ತಾನು ದುಡಿಯುತ್ತಿದ್ದ ದೂರದ ಊರಿಗಾಗಿತ್ತು. ಅಲ್ಲಿ ಆತನಿಗೆ ವಾಸಿಸುವ ಮನೆಯೂ ಇರಲಿಲ್ಲ. ಕೂಲಿ ಮಾಡುತ್ತಿದ್ದ ಹೋಟೇಲಿನಲ್ಲಿಯೇ ಶಾಂತಾ ಹಲವು ದಿನ ಕಳೆಯಬೇಕಾಯಿತು. ಮದುವೆ-ಸಂಸಾರವೆಂದರೆ ಇದುವೆನಾ? ಎಂದು ಆಕೆ ಮನದಲ್ಲೇ ಪ್ರಶ್ನಿಸುತ್ತಿದ್ದಳು. ಅದ್ಹೇಗೋ ಆತ ಒಂದು ಚಿಕ್ಕ ಮನೆಯನ್ನು ಬಾಡಿಗೆಗೆ ಪಡೆದಾಗ ಶಾಂತಾ ಸ್ವಲ್ಪ ನಿರಾಳವಾದಳು.

     ಶಾಂತಾ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಳು. ಬಾಡಿಗೆ ಮನೆಯಲ್ಲಿ ಗಂಡನೊಂದಿಗೆ ಇರಲು ಆಕೆಗೆ ಕಷ್ಟವಾದಾಗ ತಾಯಿ ಮನೆಗೆ ರಾಜು ಬಿಟ್ಟು ಹೋಗಿದ್ದ. ಎಷ್ಟಾದರೂ ಕೊಟ್ಟ ಹೆಣ್ಣು ಕುಲಕ್ಕೆ ಹೊರಗಲ್ಲವೇ?... ಮನೆಯಲ್ಲಿ ಆಕೆಗೆ ಸರಿಹೊಂದುತ್ತಿರಲಿಲ್ಲ. ಆಕೆಗೆ ಅಮ್ಮನೇ ಸಾಂತ್ವಾನವಾಗಿದ್ದಳು. ಈ ಮಧ್ಯೆ ಅದ್ಹೇಗೋ ಸಂಘವೊಂದಕ್ಕೆ ಸೇರಿ, ಸಾಲ ಪಡೆದು ಒಂದು ಚಿಕ್ಕ ನಿವೇಶನ ಖರೀದಿ ಮಾಡಿದಳು. ಅದು ತಾಯಿ ಮನೆಯ ಸಮೀಪವೇ ಆಗಿತ್ತು. ಅಪ್ಪನ ಸಾವು ಶಾಂತಾಳ ಬದುಕಿನ ಮತ್ತೊಂದು ದುರಂತವಾಗಿತ್ತು. ಆಕೆ ಕಷ್ಟವನ್ನೇ ಹೊತ್ತು ಹುಟ್ಟಿ ಬಂದವಳಂತೆ ಬದುಕುತ್ತಿದ್ದಳು ಇಲ್ಲವೇ ಆಕೆಯ ಬದುಕನ್ನು ಕಂಡವರಿಗೆ ಆ ಭಾವನೆ ಮೂಡುತ್ತಿತ್ತು.

     ಶಾಂತಾ ಒಂದು ಗಂಡು ಮತ್ತು ಹೆಣ್ಣು ಮಗುವಿನ ತಾಯಿಯಾಗಿದ್ದಳು. ಗಂಡ ಕೆಲಸ ಬಿಟ್ಟು ಮನೆಯಲ್ಲೇ ಇರತೊಡಗಿದ. ಊರಿನಲ್ಲೇ ಕೂಲಿಗಾಲಿ ಮಾಡಿ ಅಷ್ಟೋ ಇಷ್ಟೋ ಸಂಪಾದಿಸುತ್ತಿದ್ದ. ಶಾಂತಾಳ ದುಡಿಮೆಯೂ ಸಂಸಾರಕ್ಕೆ ಪೂರಕವಾಗಿತ್ತು. ಪುಟ್ಟ ಮಕ್ಕಳನ್ನು ಮಡಿಲಲ್ಲಿ ಹೊತ್ತ ಶಾಂತಾಳ ಬದುಕು ಒಂದು ಹೋರಾಟವೇ ಆಗಿತ್ತು. ಅದು ಕೊನೆಯಿಲ್ಲದ ಹೋರಾಟ. ಅಂತ್ಯವಿಲ್ಲದ ಕಿರಣದಂತೆ ತೋಚುತ್ತಿತ್ತು. ಬದುಕಿಗಾಗಿ ಆಕೆ ಬೀಡಿ ಸುತ್ತುತ್ತಿದ್ದಳು. ತಾಯಿ ಮನೆ ತೊರೆದು ಬೇರೆ ಮನೆಯಲ್ಲಿ ಗಂಡನೊಂದಿಗೆ ವಾಸಿಸತೊಡಗಿದ ಆಕೆಗೆ ಆಸರೆಯಾಗುವವರು ಇಲ್ಲವಾಗಿದ್ದರು. ಅಲ್ಪ ಸ್ವಲ್ಪ ಗಂಡನೇ ಆಕೆಗೆ ನಿರೀಕ್ಷೆಯಾಗಿದ್ದ.

     ಮನೆಯಲ್ಲಿ ಬೀಡಿಸುತ್ತಿ ಮಕ್ಕಳನ್ನು ಸಲಹುತ್ತಿದ್ದ ಶಾಂತಾಳಿಗೆ ಕಂಪ್ಯೂಟರ್ ಕಲಿಯುವ ಆಸೆ ಮೂಡಿತು. ಅವಳ ಗುಪ್ತ ಮನಸ್ಸಿನಲ್ಲಿ ಕಲಿಯುವ ಆಸೆಯಿನ್ನೂ ಜೀವಂತವಿತ್ತು. ಆದರೆ ಕನಿಷ್ಟ ಹತ್ತನೇ ತರಗತಿ ಪಾಸಾದರೆ ಕಂಪ್ಯೂಟರ್ ಕಲಿತರೆ ಪ್ರಯೋಜನವಿದೆ. ಅದಿಲ್ಲದಿದ್ದರೆ ನಿಷ್ಪ್ರಯೋಜಕ ಎಂದು ತಿಳಿದಾಗ ಬಹಳನೇ ಬೇಸರಗೊಂಡಳು. ಆಕೆ ಒಂದು ಛಲಗಾತಿ. ನಾನ್ಯಾಕೆ ಹತ್ತನೇ ತರಗತಿ ಪರೀಕ್ಷೆ ಬರೆಯಬಾರದು?.. ಎಂದು ದಿನ ಪೂರ್ತಿ ಯೋಚಿಸತೊಡಗಿದಳು. ಮಕ್ಕಳಿಬ್ಬರು ಇನ್ನೂ ಚಿಕ್ಕವರು. ಇದು ಪರೀಕ್ಷೆ ಬರೆಯುವ ಸಮಯವೇ? ಎಂದು ಒಳ ಮನಸ್ಸು ಹೇಳ ತೊಡಗಿತು. ಆರಂಭದಲ್ಲಿ ವಿರೋಧಿಸಿದರೂ ನಂತರ ಗಂಡನನ್ನು ಒಪ್ಪಿಸುವಲ್ಲಿ ಸಫಲಳಾದಳು. 

     ಶಾಂತಾ ಕಲಿಕೆಯಲ್ಲಿ ಪ್ರತಿಭಾವಂತೆ ಇದ್ದದ್ದು ನಿಜ. ಆದರೆ ಆಕೆ ದುರಾದೃಷ್ಟವಂತೆ. ಕಲಿಕೆಯಿಂದ ವಂಚಿತಳಾಗಿದ್ದಳು. ಬಹಳನೇ ವರ್ಷಗಳ ನಂತರ ಪರೀಕ್ಷೆ ಬರೆಯಳು ಸಿದ್ಧಳಾಗಿದ್ದಳು. ಆಕೆಗೆ ಗಣಿತ ಮತ್ತು ವಿಜ್ಞಾನ ಸಂಪೂರ್ಣ ಮರೆತು ಹೋಗಿತ್ತು. ಅದು ಓದಿದ ಕೂಡಲೇ ಅರ್ಥವಾಗುವಂತಹ ವಿಷಯವೂ ಅಲ್ಲ. ಹಾಗಾಗಿ ಆ ಎರಡು ವಿಷಯಗಳಿಗೆ ಟ್ಯೂಷನ್ ಪಡೆಯಬೇಕಿತ್ತು. ಇಬ್ಬರು ಮಕ್ಕಳನ್ನು ಎತ್ತಿಕೊಂಡೇ ಟ್ಯೂಷನ್ ಕ್ಲಾಸಿಗೆ ಹಾಜರಾಗುತ್ತಿದ್ದ ಆಕೆ ಅಸಾಧಾರಣ ಹೆಣ್ಣಾಗಿದ್ದಳು. ಆಕೆ ಒಂದೆಡೆ ಬೀಡಿಗೆ ಲೇಬಲ್ ಸುತ್ತುತ್ತಾ, ಸಮಯ ಸಿಕ್ಕಾಗ ಬೀಡಿ ಸುತ್ತುತ್ತಾ, ಮಕ್ಕಳ ಪಾಲನೆ ಮಾಡುತ್ತಾ ಪರೀಕ್ಷೆಗೆ ಸಿದ್ಧಳಾದಳು. 

     ವರ್ಷಪೂರ್ತಿ ಅಪ್ಪ ದುಡಿದು, ಅಮ್ಮ ಬೇಯಿಸಿ ಹಾಕಿದ್ದನ್ನು ಹೊಟ್ಟೆ ತುಂಬಾ ತೇಗು ಬರುವಷ್ಟು ತಿಂದು, ಬಿಂದಾಸ್ ಆಗಿ ಸುತ್ತಾಡಿ, ಅಂತಿಮ ಪರೀಕ್ಷೆಯಲ್ಲಿ ಫೇಲಾಗಿ, ಪೋಷಕರ ನಿರೀಕ್ಷೆಗಳಿಗೆ ಎಳ್ಳು ನೀರು ಬಿಡುವ ಮಕ್ಕಳ ಮಧ್ಯೆ, ಹಲವು ವರ್ಷಗಳ ನಂತರ, ಹಟ ಹಿಡಿದು ಪರೀಕ್ಷೆ ಬರೆದ ಶಾಂತಾ ಅನನ್ಯವಾಗಿ ಕಾಣುತ್ತಾಳೆ. ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಾಗ ಶಾಂತಾ ಉತ್ತೀರ್ಣಳಾಗಿದ್ದಳು. ಅವಳ ಸಂತಸಕ್ಕೆ ಪಾರವೇ ಇರಲಿಲ್ಲ. ಅರೆಕ್ಷಣ ಅವಳ ನೋವುಗಳನ್ನು ಮೊದಲ ಬಾರಿ ಆಕೆ ಮರೆತು ಖುಷಿಪಟ್ಟಿದ್ದಳು. ಆಕೆ ವಿರಮಿಸಲಿಲ್ಲ. ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸಲು ಮರು ಕ್ಷಣವೇ ಸಜ್ಜಾದಳು. ಆ ಪರೀಕ್ಷೆಯೂ ಮುಗಿದು ಫಲಿತಾಂಶ ಬಂದಾಗ ಆಕೆಯೇ ಆಶ್ಚರ್ಯಗೊಂಡಿದ್ದಳು. ಶಾಂತಾ ದ್ವಿತೀಯ ಪಿಯುಸಿ ಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣಗೊಂಡಿದ್ದಳು.

     ಬದುಕಿನ ಬವಣೆಗಳೇನೂ ಬದಲಾವಣೆಯಾಗದಿದ್ದರೂ, ಪಿಯುಸಿ ಯ ಉತ್ತೀರ್ಣತೆ ಆಕೆಯ ಬದುಕಿನಲ್ಲಿ ಒಂದು ಹೊಸ ಆಶಾಭಾವವನ್ನು ಮೂಡಿಸಿತು. ಮಳೆಗಾಲದ ಕಾರ್ಮೋಡಗಳ ಮಧ್ಯೆ ಬೆಳಕಿನ ಕಿರಣವೊಂದು ಇಣುಕಿಬಂದಂತೆ ಆಕೆಯ ಜೀವನದಲ್ಲಿ ಬೆಳಕೊಂದು ಮೂಡಿದ ಅನುಭವ. ಶಾಂತಾಳ ಕಲಿಯಬೇಕೆಂಬ ಅದಮ್ಯ ಬಯಕೆಯನ್ನು ಕಂಡ ಹಿತೈಸಿಗಳು ಪದವಿ ಪರೀಕ್ಷೆ ಬರೆಯುವಂತೆ ಸಲಹೆ ನೀಡಿದರು. ಒಂದೆಡೆ ಶಾಲೆಗೆ ಹೋಗುತ್ತಿರುವ ಪುಟ್ಟ ಮಕ್ಕಳು. ಮತ್ತೊಂದೆಡೆ ಮನೆಯಲ್ಲಿ ಖರ್ಚಿಗಾಗಿ ಪರದಾಟ. ಗಂಡನ ದುಡಿಮೆ ಮನೆ ನಿರ್ವಹಣೆಗೆ ಸಾಲದು. ಶಾಂತಾಳ ಬೀಡಿ ಲೇಬಲ್ ಹಾಗೂ ಬೀಡಿ ಕಟ್ಟುವಿಕೆಯ ಅಲ್ಪ ಸ್ವಲ್ಪ ಆದಾಯ ಹೇಗೋ ಮನೆಯ ಖರ್ಚನ್ನು ಸರದೂಗಿಸುತ್ತಿತ್ತು. ಕಷ್ಟವೋ ಸುಖವೋ ಜೀವನ ಸಾಗುತ್ತಿತ್ತು.‌ ಇದರ ಮಧ್ಯೆ ಶಾಂತಾಳಿಗೆ ಕಲಿಕೆಯ ಹುಚ್ಚು. 

     ಅಂದು ಆಕೆ ಗಂಡನ ಮುಂದೆ ತಾನು ಪದವಿ ತರಗತಿಗೆ ಸೇರುವ ವಿಚಾರ ಪ್ರಸ್ತಾಪಿಸಿದಳು. ಗಂಡ ಸುತರಾಂ ಒಪ್ಪಲು ತಯಾರಿಲ್ಲ. ಆತನೇನೂ ವಿದ್ಯಾವಂತನಾಗಿರಲಿಲ್ಲ. ಶಾಲೆಗೆ ಹೋಗುತ್ತಿರುವ ಇಬ್ಬರು ಮಕ್ಕಳು ಮನೆಯಲ್ಲಿರುವಾಗ ಶಾಂತಾ ಕಾಲೇಜಿಗೆ ಹೋಗುವುದು ಆತನಿಗೆ ಇಷ್ಟವಿರಲಿಲ್ಲ. ಅಲ್ಲದೆ ಸಂಬಂಧಿಕರ ತೀವ್ರ ಆಕ್ಷೇಪ ಬೇರೆ. ಅವಳಿಗ್ಯಾಕೆ ಕಾಲೇಜು ಸೇರುವ ಹುಚ್ಚು? ... ಎಂದು ಹೀಯಾಳಿಸತೊಡಗಿದ್ದರು. ಬದುಕಿನಲ್ಲಿ ಕಷ್ಟಪಟ್ಟಾಗ, ಸಾಸಿವೆ ಕಾಳಿನಷ್ಟೂ ಸಹಾಯಕ್ಕಿಲ್ಲದ ಸಂಬಂಧಿಕರು ಪುಕ್ಕಟೆ ಸಲಹೆ ನೀಡಲು ಒಬ್ಬರಿಗಿಂತ ಒಬ್ಬರು ಮುಂದೆ ಬರುತ್ತಿದ್ದರು. ಸಂಸಾರದಲ್ಲಿ ಅದೆಷ್ಟೇ ತಾಪತ್ರಯಗಳಿದ್ದರೂ, ತನ್ನ ಬಗ್ಗೆ ಅದೇನೇ ಟೀಕೆ ಬಂದರೂ ಶಾಂತಾ ದೃತಿಗೆಡಲಿಲ್ಲ. ಆಕೆ ಈಗ ಬಹಳನೇ ಮಾಗಿದ್ದಳು. ಅವಳು ಇನ್ನು ಕಳಕೊಳ್ಳುವಂತಹದ್ದು ಏನೂ ಉಳಿದಿರಲಿಲ್ಲ. ಬದಲಾಗಿ ಕಳೆದು ಕೊಂಡದ್ದನ್ನು ಪಡೆಯುವ ಹಂಬಲ ಆಕೆಗಿತ್ತು. ಗಂಡನ ಸಮ್ಮತಿ ಸಿಗದಿದ್ದರೂ ಕಾಲೇಜು ಸೇರುವ ಆಕೆಯ ಇಚ್ಛೆ ದೃಢವಾಗಿತ್ತು. 

       ಶಾಂತ ಕಡೆಗೂ ಕಾಲೇಜು ಸೇರಿಯೇ ಬಿಟ್ಟಳು. ಅದೊಂದು ಸರಕಾರಿ ಕಾಲೇಜು. ಸಹಪಾಠಿಗಳಿಗೆ ಈಕೆಯೊಂದು ವಿಚಿತ್ರವಾಗಿ ಕಾಣಿಸುತ್ತಿದ್ದಳು. ಆಕೆಗೀಗ ಮೂವತ್ತರ ಹರೆಯ. ಹದಿನೆಂಟರ ಹರೆಯದ ಸಹಪಾಠಿಗಳು. ಅದೊಂದು ವಿಚಿತ್ರ ಪಯಣವೇ ಆಗಿತ್ತು. ಆಕೆ ಇಬ್ಬರು ಮಕ್ಕಳನ್ನು ಸಲಹಬೇಕು. ಅವರ ಬೇಕು ಬೇಡಗಳನ್ನು ಪೂರೈಸಬೇಕು. ಮನೆಯಲ್ಲಿ ಹದಗೆಟ್ಟ ಆರ್ಥಿಕ ಪರಿಸ್ಥಿತಿ. ಬೆಳಿಗ್ಗೆ ಮಕ್ಕಳಿಬ್ಬರನ್ನು ಶಾಲೆಗೆ ಬಿಟ್ಟು ತಾನು ಕಾಲೇಜಿಗೆ ಹೋಗಬೇಕಿತ್ತು. ಸಂಜೆ ಕಾಲೇಜು ಮುಗಿಸಿ ಬರುವಾಗ ಮಕ್ಕಳನ್ನು ಶಾಲೆಯಿಂದ ಜತೆಯಲ್ಲಿ ಕರೆದುಕೊಂಡು ಬರುತ್ತಿದ್ದಳು. ಅಕ್ಕ ಪಕ್ಕದವರಿಗೆ ಆಕೆಯ ಈ ನಿರ್ಧಾರ ಹಾಸ್ಯಾಸ್ಪದವಾಗಿತ್ತು. 

     ಕಲಿಕೆ ಆಕೆಗೆ ಸುಲಭವಾಗಿರಲಿಲ್ಲ. ಆಕೆಯಲ್ಲದೆ ಇತರರಿಗೆ ಅದೂ ಸಾಧ್ಯವೂ ಆಗಿರಲಿಲ್ಲ. ಆಕೆಯ ದೃಢತೆ ಅದ್ಭುತವಾಗಿತ್ತು. ಬಡತನದ ನೋವುಗಳಿಗೆ ಆಕೆಯ ನಿರ್ಧಾರವನ್ನು ಬದಲಿಸುವ ಶಕ್ತಿ ಇರಲಿಲ್ಲ. ಛಲಬಿಡದ ವಿಕ್ರಮನಂತೆ ಅದೇನೇ ಬಂದರೂ, ಪದವಿಯನ್ನು ಮುಗಿಸಿಯೇ ಬಿಟ್ಟಲು. ಎಂಟನೇ ತರಗತಿಯಲ್ಲಿ ಶಾಲೆ ತೊರೆದ ಆಕೆ, ಹದಿನಾರರ ಹರೆಯದಲ್ಲೇ ಹಸೆಮಣೆ ತುಳಿದು, ಎರಡು ಮಕ್ಕಳ ಅಮ್ಮನಾಗಿ ಇಂದು ಮೂವತ್ತರ ಹರೆಯದಲ್ಲಿ ಪದವಿ ಪಡೆದ ಆಕೆಯ ನಡಿಗೆ ಬೆರಗು ಮೂಡಿಸುವಂತಿತ್ತು. 

      ಪದವಿ ಪಡೆದ ಆಕೆ ಯಾವುದಾದರೂ ಕೆಲಸಕ್ಕೆ ಪ್ರಯತ್ನಿಸುತ್ತಿದ್ದಳು. ಆಕೆಯ ಪ್ರಯತ್ನಗಳು ವಿಫಲವಾದವು. ಮಗ ಎಂಟರಲ್ಲಿ ಕಲಿಯುತ್ತಿದ್ದ. ಮಗಳು ಆರನೇ ತರಗತಿ. ಇಬ್ಬರ ಜವಾಬ್ದಾರಿಯೂ ಆಕೆಯ ಮೇಲಿತ್ತು. ಮುಂದೇನು? ಎಂದು ಯೋಚಿಸುತ್ತಿದ್ದಳು. ಶಾಂತಾಳಿಗೆ ಶಿಕ್ಷಕಿಯಾಗಬೇಕೆಂಬ ಆಸೆ ಚಿಗುರೊಡೆಯ ತೊಡಗಿತು. ಬಿ.ಎಡ್. ಕಲಿಯಬೇಕೆಂಬ ಬಯಕೆ ಮೂಡಿತು. ಅದಕ್ಕಾಗಿ ಹಣವನ್ನು ಹೊಂದಿಸಲು ಸಾಧ್ಯವಾಗದೆ ಬಿ.ಎಡ್. ಆಸೆಯನ್ನು ಕೈ ಚೆಲ್ಲಿದಳು. ಅದೊಂದು ದಿನ ಮಕ್ಕಳನ್ನು ಶಾಲೆಗೆ ಕಳುಹಿಸಿ, ಲೇಬಲ್ ಮಾಡಿದ ಬೀಡಿಯನ್ನು ಕಂಪೆನಿಗೆ ಒಪ್ಪಿಸಲು ಸಿದ್ಧಳಾಗುತ್ತಿದ್ದಂತೆ ಆಕೆಗೊಂದು ಕರೆ ಬಂತು. ಸುದ್ದಿ ಕೇಳಿ ಆಕೆ ಕುಸಿದು ಬಿದ್ದಿದ್ದಳು.

      ಶಾಂತಾ ಬದುಕಿನಲ್ಲಿ ಬಹಳಷ್ಟು ನೊಂದಿದ್ದವಳು. ಸುಖ ಆಕೆಯ ಬದುಕಿನುದ್ದಕ್ಕೂ ಮರೀಚಿಕೆಯೇ ಆಗಿತ್ತು. ಅಮ್ಮನ ಸಾಂತ್ವಾನದ ನುಡಿಗಳು ಮಾತ್ರವೇ ಅವಳಿಗೆ ಸಮಾಧಾನ ಕೊಡುತ್ತಿತ್ತು. ಆಕೆ ಅಮ್ಮನನ್ನು ಬಹಳನೇ ಹಚ್ಚಿಕೊಂಡಿದ್ದಳು. ಇಂದು ಬಂದ ಸುದ್ದಿ ಆಕೆಯ ಜಂಘಾಬಲವನ್ನೇ ಹುದುಗಿಸಿತ್ತು. ಕುಸಿದು ಬಿದ್ದ ಆಕೆ ಸಾವರಿಸಿಕೊಂಡರೂ, ಮನಸ್ಸನ್ನು ಸಮಾಧಾನ ಪಡಿಸಲಾಗುತ್ತಿಲ್ಲ. ಅಟೋ ಹತ್ತಿ, ಶಾಲೆಯಿಂದ ಮಕ್ಕಳನ್ನು ಕರೆದು ಕೊಂಡು ತಾಯಿ ಮನೆಯತ್ತ ತೆರಳಿದಳು. ಈ ಮಧ್ಯೆ ಗಂಡನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಳು.‌ ಮಕ್ಕಳಿಬ್ಬರಿಗೂ ವಿಷಯವೇನೆಂದು ತಿಳಿಯದು. ಅಮ್ಮನ ಅಳುವಿಗೆ ಅವರು ಮೂಕ ಪ್ರೇಕ್ಷಕರಾಗಿದ್ದರು. ಆಕೆ ಮಧ್ಯಾಹ್ನ ತವರು ಮನೆ ತಲುಪಿದಾಗ ಮನೆ ಮುಂದೆ ಒಂದಷ್ಟು ಜನ ನೆರೆದಿದ್ದರು.

     ಎಂದಿನಂತೆ ಶಾಂತಾಳ ಅಮ್ಮ ಕೂಲಿ ಕೆಲಸಕ್ಕೆ ಹೊರಟಿದ್ದಳು. ಪ್ರತಿದಿನ ಆಕೆ ಕಾಲ್ನಡಿಗೆಯಲ್ಲಿಯೇ ಕೆಲಸಕ್ಕೆ ಹೋಗುತ್ತಿದ್ದಳು. ಸುಮಾರು ಒಂದು ಗಂಟೆಯ ಅವಧಿಯ ದಾರಿ.‌ ದಾರಿ ಮಧ್ಯೆ ಆಕೆಯ ಬಳಿ ಅಟೋ ರಿಕ್ಷಾವೊಂದು ಬಂದು ನಿಂತಿತ್ತು. ಆತ ಪರಿಚಯದ ಹುಡುಗ. "ತಾನೂ ಆ ಕಡೆಗೆ ಹೋಗುವವನು, ಬನ್ನಿ" ಅಂದ. ಇಷ್ಟವಿಲ್ಲದಿದ್ದರೂ ಆತನ ಒತ್ತಾಯಕ್ಕೆ ಅಟೋ ಹತ್ತಿದಳು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಯಮರಾಯ ಅಟೋದ ರೂಪದಲ್ಲಿ ಆಕೆಯನ್ನು ಕರೆದೊಯ್ಯಲು ಬಂದಿದ್ದ. ಕ್ಷಣ ಮಾತ್ರದಲ್ಲಿ ಅಪಘಾತಕ್ಕೀಡಾದ ಅಟೋದಲ್ಲಿ ಅವರಿಬ್ಬರೂ ಪ್ರಾಣ ಕಳೆದುಕೊಂಡಿದ್ದರು. ಶಾಂತಾಳಿಗೆ ಸಂತೈಸುವ ಜೀವವೊಂದು ಕಾಲದೊಂದಿಗೆ ಲೀನವಾಗಿತ್ತು.

      ಅಮ್ಮನ ಅಗಲುವಿಕೆ ಶಾಂತಾಳ ತಂಗಿಯ ವಿದ್ಯಾಭ್ಯಾಸಕ್ಕೆ ಹೊಡೆತ ಕೊಟ್ಟಿತ್ತು. ಅಣ್ಣಂದಿರು ಯಾರೂ ಆಕೆಯ ಸಹಾಯಕ್ಕೆ ಬರಲಿಲ್ಲ. ಆದರೆ ತಾನು ತೀರಾ ಕಷ್ಟದಲ್ಲಿದ್ದರೂ ಶಾಂತಾ ಆಕೆಯ ನೆರವಿಗೆ ಬಂದಳು. ಸಂಘದಿಂದ ಸಾಲ ಪಡೆದು ತಂಗಿಯನ್ನು ಡಿ.ಎಡ್. ಓದಿಸಿದಳು. ಸಾಲದ ಕಂತನ್ನು ತಾನೇ ಕಟ್ಟಿ ತಂಗಿಗೆ ಆಸರೆಯಾದಳು. ಡಿ.ಎಡ್.ಪೂರ್ಣಗೊಳಿಸಿದ ತಂಗಿಗೆ ಅದೃಷ್ಡ ಖುಲಾಯಿಸಿತು. ಆಕೆಗೆ ಸರಕಾರಿ ಶಾಲೆಯಲ್ಲಿ ಖಾಯಂ ಕೆಲಸವೂ ದೊರೆಯಿತು. ಅದನ್ನು ಕೇಳಿ ಎಲ್ಲರಿಗಿಂತ ಹೆಚ್ಚು ಖುಷಿ ಪಟ್ಟಿದ್ದಳು ಶಾಂತಾ. ಆದರೆ ಶಾಂತಾಳ ಸಂತೋಷ ಹೆಚ್ಚು ದಿನ ಉಳಿದಿರಲಿಲ್ಲ. ಆಕೆಯ ತಂಗಿ ಇವರ್ಯಾರಿಗೂ ತಿಳಿಯದಂತೆ ಹುಡುಗನೊಬ್ಬನನ್ನು ಪ್ರೀತಿಸಿ ಮದುವೆಯಾದಳು. ಆತನೊಂದಿಗೆ ಎಲ್ಲರನ್ನೂ ಬಿಟ್ಟು ದೂರವಾದಳು. 

     ಅಮ್ಮನ ಅಗಲುವಿಕೆ, ತಂಗಿಯ ಹೃದಯ ಶೂನ್ಯತೆ ಶಾಂತಾಳಲ್ಲಿ ತಲ್ಲಣ ಸೃಷ್ಟಿಸಿದ್ದರೂ, ಆಕೆಗೆ ಕಲಿಕೆ ಮುಂದುವರಿಸುವ ಆಸೆ ಜೀವಂತವಿರಿಸಿದ್ದಳು. ಕಾಲೇಜಿನ ಪ್ರಾಂಶಪಾಲರೊಬ್ಬರು ದೂರ ಶಿಕ್ಷಣದ ಮೂಲಕ ಎಂ.ಎ. ಮಾಡುವ ಸಲಹೆ ನೀಡಿದರು. ಅದಕ್ಕಾಗಿ ಆಕೆಗೆ ಹಣ ಬೇಕಿತ್ತು. ಬೇರೆ ದಾರಿ ಇಲ್ಲದೆ ತಂಗಿಯ ಮೊರೆ ಹೋದಳು. ತಂಗಿ ಆಕೆ ಕಲಿಯುವುದನ್ನು ವಿರೋಧಿಸಿದ್ದಳು. "ಮಕ್ಕಳು ಕಲಿಯುವ ಸಮಯದಲ್ಲಿ ನಿನಗೆ ಕಲಿಯುವ ಹುಚ್ಚೇಕೆ?" ಎಂದು ತಗಾದೆ ಮಾಡಿದಳು. ಆದರೆ ಪುಣ್ಯಾತ್ಮರೊಬ್ಬರು ಆಕೆಗೆ ಎಂ.ಎ. ಸೇರಲು ಸಹಾಯ ಮಾಡಿದರು. ದೂರ ಶಿಕ್ಷಣ ಮೂಲಕ ಸ್ನಾತಕೋತ್ತರ ಕೋರ್ಸ್ ಗೆ ಸೇರಿದಾಗ, ಮನೆಯಲ್ಲಿ ರಂಪಾಟವೇ ನಡೆದಿತ್ತು.‌ ಗಂಡ ಹಾಗೂ ಇಬ್ಬರು ಮಕ್ಕಳ ತೀವ್ರ ವಿರೋಧವಿದ್ದರೂ ಆಕೆ ಎದೆಗುಂದಲಿಲ್ಲ. ಮುಂದಿಟ್ಟ ಹೆಜ್ಜೆ ಹಿಂದಿಡಲಿಲ್ಲ. ಆಕೆ ತನ್ನ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಿದ್ದಳು. ತಾನು ಕಲಿತು ಏನಾದರೂ ಉದ್ಯೋಗ ಪಡೆದರೆ ಜೀವನಕ್ಕೊಂದು ದಾರಿಯಾಗಬಹುದೆಂದು ಆಕೆ ಭಾವಿಸಿದ್ದಳು. ಸಂಬಂಧಿಕರೆಲ್ಲಾ ಶಾಂತಾಳನ್ನು ಟೀಕಿಸುತ್ತಿದ್ದರು. ಆದರೆ ಅವುಗಳನ್ನು ಲೆಕ್ಕಿಸದ ಶಾಂತಾ ತನ್ನ ಎಂ.ಎ. ಪದವಿಯನ್ನೂ ಪೂರ್ಣಗೊಳಿಸಿದ್ದು ಒಂದು ವಿಸ್ಮಯವೇ ಆಗಿತ್ತು.

      ಮಗ ದ್ವಿತೀಯ ಪಿಯುಸಿ ಮುಗಿಸಿ ಯಾವುದಾದರೂ ಕೋರ್ಸ್ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದ. ಆದರೆ ಆಕೆಯಲ್ಲಿ ಹಣವಿರಲಿಲ್ಲ. ಈಗಾಗಲೇ ಪಡೆದ ಸಾಲವನ್ನು ತೀರಿಸುವುದರಲ್ಲೇ ಹೈರಾಣಾಗಿದ್ದಳು. ಮಧ್ಯರಾತ್ರಿ ತನಕ ಬೀಡಿ ಲೇಬಲ್ ಹಾಕಿದರೂ ದಿನದ ಖರ್ಚಿಗೆ ಸಾಲುತ್ತಿರಲಿಲ್ಲ. ಗಂಡನ ದುಡಿಮೆ ಅಷ್ಟಕಷ್ಟೆ ಇತ್ತು. ಬೇರೆ ದಾರಿ ಕಾಣದೆ ಮಗ ಕಾಲೇಜು ತೊರೆದು ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಮಗಳು ಬಿ.ಕಾಂ. ಓದುತ್ತಿದ್ದಳು. 

      ಶಾಂತಾಳ ಮನದಾಳದಲ್ಲಿ ಹುದುಗಿದ್ದ ಆಸೆ ಶಿಕ್ಷಕಿಯಾಗುವುದು. ಇದೀಗ ಅವಳು ಸ್ನಾತಕೋತ್ತರ ಪದವೀಧರೆ. ಹಗಲು ಹೊತ್ತು ಯಾವುದಾದರೂ ಶಾಲೆಯಲ್ಲಿ ಶಿಕ್ಷಕಿಯಾಗಿ ದುಡಿದರೆ ರಾತ್ರಿ ಬೀಡಿ ಲೇಬಲ್ ಕೆಲಸ ಮಾಡಬಹುದೆಂದು ಯೋಚಿಸತೊಡಗಿದಳು. ಮನೆಯ ಸಮೀಪದ ಸರಕಾರಿ ಶಾಲೆಯೊಂದರಲ್ಲಿ ಗೌರವ ಶಿಕ್ಷಕಿಯಾಗಿ ಸೇರಿಕೊಂಡಳು. ಶಾಲೆಯಲ್ಲಿ ಸಿಗುತ್ತಿದ್ದ ಅಲ್ಪ ಮೊತ್ತ ಆಕೆಗೆ ಬಹಳನೇ ಉಪಯೋಗಕ್ಕೆ ಬಂದಿತ್ತು. ಶಿಕ್ಷಕಿಯಾಗಿ ಸೇರಿದ್ದರೂ ಮತ್ತೊಂದು ಸಮಸ್ಯೆ ಆಕೆಗಿತ್ತು. ಬಿ.ಎಡ್. ಮಾಡದೆ ಶಿಕ್ಷಕಿಯಾದ ಬಗ್ಗೆ ಇತರ ಶಿಕ್ಷಕಿಯರು ಗೇಲಿ ಮಾಡತೊಡಗಿದರು. ಇದರಿಂದ ಆಕೆ ತೀವ್ರ ನೊಂದಿದ್ದಳು.

    ಆಕೆಯಲ್ಲಿ ಬಿ.ಎಡ್. ಮಾಡಲೇ ಬೇಕೆಂಬ ಹಟವಿತ್ತು. ಇಲ್ಲಿಯೇ ಆಕೆಗೆ ವಕ್ಕರಿಸಿದ್ದು ಮತ್ತೊಂದು ದೊಡ್ಡ ಅಘಾತ. ಇದಕ್ಕಿದ್ದಂತೆ ಗಂಡ ಕುಸಿದು ಬಿದ್ದಿದ್ದ. ಆಸ್ಪತ್ರೆಗೆ ತರಾತುರಿಯಲ್ಲಿ ಸೇರಿಸಿದಾಗ ತಿಳಿದದ್ದು ಆತನಿಗೆ ಮೆದುಳಿನ ರಕ್ತಸ್ರಾವವಾಗಿತ್ತು. ಸುಮಾರು ಹದಿನೈದು ದಿನಗಳ ಜೀವನ್ಮರಣ ಹೋರಾಟದಲ್ಲಿ ಆತ ಪ್ರಾಣ ಬಿಟ್ಟಿದ್ದ. ಶಾಂತಾ ಗಂಡನನ್ನು ಉಳಿಸುವಂತೆ ನಂಬಿದ ದೇವರಲ್ಲಿ ಅದೆಷ್ಟೋ ಹರಕೆ ಹೊತ್ತಿದ್ದಳು. ಸಾಯುವ ತನಕವೂ ಆತನ ಸೇವೆ ಮಾಡಿದ್ದಳು. ಅದಕ್ಕಾಗಿ ಮತ್ತಷ್ಟು ಸಾಲವನ್ನೂ ಮಾಡಿದ್ದಳು. ಆತನ ವಿಮೆ ಹಣವಿತ್ತು. ಆದರೆ ದುರಾದೃಷ್ಟವೆಂದರೆ ಗಂಡ ಶಾಂತಾಳ ಬದಲು ತನ್ನ ಸ್ವಂತ ತಮ್ಮನನ್ನು ವಿಮಾ ಹಣದ ವಾರೀಸುದಾರನನ್ನಾಗಿ ನಮೂದಿಸಿದ್ದ. ಅಣ್ಣನ ಅಂತ್ಯಕ್ರಿಯೆಗೂ ಬಾರದಿದ್ದ ತಮ್ಮ ಮೆತ್ತಗೆ ಬಂದು ವಿಮೆಯ ಹಣವನ್ನು ಪಡೆದು, ಶಾಂತಾಳಲ್ಲಿ ಒಂದೂ ಮಾತಾಡದೆ ಹೊರಟು ಹೋಗಿದ್ದ. 

    ಎಲ್ಲವನ್ನು ಹಾಗೂ ಎಲ್ಲರನ್ನೂ ಕಳೆದುಕೊಂಡ ಶಾಂತಾಳ ನಿರೀಕ್ಷೆ ಆಕೆಯ ಇಬ್ಬರು ಮಕ್ಕಳಾಗಿದ್ದರು. ಮಗ ಅಂಗಡಿಯಲ್ಲಿ ದಿನಗೂಲಿಗೆ ದುಡಿಯುತ್ತಿದ್ದ. ದ್ವಿಚಕ್ರದ ಹುಚ್ಚಿಗೆ ಬಿದ್ದಿದ್ದ ಆತ ಸಾಲ ಮಾಡಿ ಅದನ್ನು ಖರೀದಿಸಿದ್ದ. ಆತನ ದುಡಿಮೆ ಅದರ ಸಾಲ ತೀರಿಸಲಷ್ಟೇ ಸಾಕಾಗುತ್ತಿತ್ತು. ಮಗಳ ಕಾಲೇಜು ಶುಲ್ಕ ಭರಿಸಲು ಶಾಂತಾ ಹೆಣಗಾಡುತ್ತಿದ್ದಳು. ಆಕೆ ಬಿ.ಎಡ್. ಮಾಡಲೇ ಬೇಕೆಂದು ಪಣ ತೊಟ್ಟಳು. ಮಗ ಹಾಗೂ ಮಗಳು ಇಬ್ಬರೂ ಆಕೆಯ ನಿರ್ಧಾರ ಒಪ್ಪಲಿಲ್ಲ. ಶಾಂತಾ ತನ್ನ ನಿರ್ಧಾರದಿಂದ ಹಿಂದೆ ಸರಿಯಲೇ ಇಲ್ಲ. ಬಿ.ಎಡ್. ಪ್ರವೇಶ ಪರೀಕ್ಷೆ ಬರೆದು ಸರಕಾರಿ ಕೋಟಾದಡಿ ಪ್ರವೇಶ ಗಿಟ್ಟಸಿ ಕೊಂಡಳು. ಆಕೆಯ ಛಲ ಗೆದ್ದಿತ್ತು. ಮೂವತ್ತೊಂಭತ್ತರ ಹರೆಯದಲ್ಲಿ ಆಕೆ ಬಿ.ಎಡ್.ವಿದ್ಯಾರ್ಥಿನಿಯಾಗಿ ಕಾಲೇಜು ಪ್ರವೇಶಿಸಿದ್ದಳು.

     ಆಕೆ ಎಲ್ಲರಂತೆ ನಿರಾಳವಾಗಿ ಬಿ.ಎಡ್. ತರಬೇತಿ ಪಡೆಯಲು ಸಾಧ್ಯವಿರಲಿಲ್ಲ. ಮನೆಯ ಜವಾಬ್ದಾರಿ ಆಕೆಯ ಭುಜದ ಮೇಲಿತ್ತು. ಮನೆಯ ಖರ್ಚು ನಿಭಾಯಿಸಬೇಕಿತ್ತು. ಮಗಳ ವಿದ್ಯಾಭ್ಯಾಸದ ಹೊಣೆ ಆಕೆಯ ಮೇಲಿತ್ತು. ಆದಾಯದ ಯಾವುದೇ ನಿರ್ಧಿಷ್ಟ ಮೂಲಗಳಿಲ್ಲ. ಮನೆಯಲ್ಲಿ ಎರಡು ದನಗಳನ್ನು ಸಾಕಿದ್ದಳು. ಅದನ್ನು ಆರೈಕೆ ಮಾಡಿ ಹಾಲು ಮಾರಿ ಸ್ವಲ್ಪ ಆದಾಯ ಪಡೆಯುತ್ತಿದ್ದಳು. ಅಲ್ಲದೆ ಹಿಂದಿನಿಂದ ರೂಢಿಯಾಗಿದ್ದ ಬೀಡಿ ಲೇಬಲ್ ಆಕೆಗೆ ಮತ್ತೊಂದು ಆಸರೆಯಾಗಿತ್ತು.

     ಸಂಜೆ ಮನೆಗೆ ಬಂದೊಡನೆ ಮನೆ ಕೆಲಸ ಮುಗಿಸಬೇಕು. ದನಗಳ ಆರೈಕೆ ಮಾಡಬೇಕು. ಹಾಲು ಕರೆಯಬೇಕು. ಅಡುಗೆ ಮುಗಿಸಿ ಮಕ್ಕಳಿಗೆ ಬಡಿಸಬೇಕು. ಎಲ್ಲಾ ಕೆಲಸ ಮುಗಿಸಿ ಬೀಡಿಗೆ ಲೇಬಲ್ ಹಾಕಬೇಕು. ಇಷ್ಟೆಲ್ಲಾ ಮುಗಿಯುವಾಗ ಪ್ರತಿದಿನ ರಾತ್ರಿ ಎರಡು ಗಂಟೆಯಾಗುತ್ತಿತ್ತು. ಚಾಪೆಗೆ ಒರಗಿ ನಿದ್ದೆ ಮಾಡಲು ಹೋದರೆ ನಾಳೆಯ ಬಗ್ಗೆ ನೂರಾರು ಯೋಚನೆಗಳು. ದಿನದ ನಿದ್ರೆ ಕೇವಲ ಎರಡು ಗಂಟೆಗೆ ಸೀಮಿತವಾಗಿರುತ್ತಿತ್ತು. ಇದರ ಮಧ್ಯೆ ಆಕೆ ಪಾಠ ಯೋಜನೆ ತಯಾರಿಸಬೇಕಿತ್ತು. ಪಾಠ ಟಿಪ್ಪಣಿ ಬರೆಯಬೇಕಿತ್ತು. ಚಾರ್ಟ್, ಮಾದರಿ ಸಿದ್ಧಗೊಳಿಸಬೇಕಿತ್ತು. ಸಾಮಾನ್ಯ ವ್ಯಕ್ತಿಯೊಬ್ಬರಿಂದ ಇದು ಅಸಾಧ್ಯದ ಮಾತೇ ಆಗಿತ್ತು. ಆದರೂ ಆಕೆ ಅಷ್ಟೋ ಇಷ್ಟೋ ಮಾಡಿಕೊಂಡು ತರಾತುರಿಯಿಂದ ಶಾಲೆಗೆ ಓಡಿಬರುತ್ತಿದ್ದಳು. ಅದೆಷ್ಟೇ ಬೇಗ ಹೊರಟರೂ ಶಾಲೆ ತಲುಪುವಾಗ ಹತ್ತು ನಿಮಿಷ ತಡವಾಗುವುದು ಸಹಜವಾಗಿತ್ತು.

     ಶಾಂತಾಳು ತನ್ನ ಕಥೆಯನ್ನು ಹೇಳುತ್ತಾ ಹೋಗಿದ್ದಳು. ರವಿ ಎಲ್ಲವನ್ನು ಕೇಳಿಸಿಕೊಳ್ಳುತ್ತಿದ್ದ. ಆಕೆಯಲ್ಲಿ ಕಣ್ಣೀರು ಬತ್ತಿ ಹೋಗಿದ್ದು ಆತ ಗಮನಿಸಿದ್ದ. ಜೀವನದಲ್ಲಿ ಸುಖವೆಂದರೇನು? ಎಂದೇ ತಿಳಿಯದ ಆಕೆ ಕಳೆದುಕೊಳ್ಳಲು ಏನೂ ಉಳಿದಿರಲಿಲ್ಲ. ನಾಳೆಯಿಂದ ಅವಳಲ್ಲಿ ದಿಢೀರ್ ಬದಲಾವಣೆ ಸಾಧ್ಯವೂ ಇರಲಿಲ್ಲ. ಆದರೆ ಬದುಕಬೇಕೆಂಬ ಆಕೆಯ ಹಟ ಆಕೆಯನ್ನು ಗೆಲ್ಲಿಸುತ್ತದೆ ಎಂದು ರವಿಗೆ ಮನದಟ್ಟಾಯಿತು. ಪ್ರತಿಯೊಬ್ಬರ ವರ್ತನೆಯ ಹಿಂದೆ ಕಥೆಯೊಂದು ಅಡಗಿರುತ್ತದೆ ಎಂದು ರವಿ ತಿಳಿದುಕೊಂಡ. ಶಾಂತಾಳನ್ನು ಸಂತೈಸಿದ. ಆಕೆಯ ಮೇಲೆ ಆತನಿಗೆ ಅತೀವ ಗೌರವ ಮೂಡಿತ್ತು.
...................... ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************




ನನ್ನ ಲೇಖನಗಳ ಸಂಗ್ರಹ (ಒಟ್ಟು62) ಪುಸ್ತಕದ ರೂಪದಲ್ಲಿ ಲಭ್ಯವಿದೆ. ಆಸಕ್ತಿಯುಳ್ಳ ಓದುಗರು ಸಂಪರ್ಕಿಸಬಹುದು....... ಯಾಕೂಬ್ ಎಸ್ ಕೊಯ್ಯೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************

Ads on article

Advertise in articles 1

advertising articles 2

Advertise under the article