ಹಕ್ಕಿ ಕಥೆ : ಸಂಚಿಕೆ - 124
Wednesday, November 8, 2023
Edit
ಹಕ್ಕಿ ಕಥೆ : ಸಂಚಿಕೆ - 124
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿಕಥೆಗೆ ಸ್ವಾಗತ. ಸಮುದ್ರದ ಮೇಲೆ ಕಂಡ ಹಕ್ಕಿಗಳ ಬಗ್ಗೆ ಕಳೆದ ಕೆಲವು ವಾರಗಳಿಂದ ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ. ಚಳಿಗಾಲದಲ್ಲಿ ಭಾರತದ ಕಡಲ ಕಿನಾರೆ ಮತ್ತು ಒಳನಾಡಿನ ಜಲಮೂಲಗಳಿಗೆ ವಲಸೆ ಬರುವ ಹಕ್ಕಿಯೊಂದು ನಮಗೆ ನೋಡಲು ಸಿಕ್ಕಿದ ಘಟನೆಯನ್ನು ಹೇಳುತ್ತೇನೆ.
ಕಡಲಿನ ಮೆಲೆ ದಿನವಿಡೀ ತಿರುಗಾಡಿ ಮತ್ತೆ ತೀರದ ಕಡೆಗೆ ಮರಳುತ್ತಿದ್ದೆವು. ನಾವು ಪೂರ್ವ ದಿಕ್ಕಿಗೆ ಮುಖ ಮಾಡಿ ಮಂಗಳೂರು ಕಡಲಕಿನಾರೆ ಕಡೆಗೆ ಬರುತ್ತಿದ್ದರೆ ಸೂರ್ಯ ನಿಧಾನವಾಗಿ ನಮ್ಮ ಬೋಟಿನ ಹಿಂಬದಿಗೆ ಸರಿಯುತ್ತಿದ್ದ. ದಿನವಿಡೀ ಎಲ್ಲ ಕಡೆಯೂ ನೀಲ ಸಮುದ್ರವೇ ಕಾಣುತ್ತಿದ್ದ ನಮಗೆ ಈಗ ನಿಧಾನವಾಗಿ ಭೂಮಿ ಕಾಣಲಾರಂಭಿಸಿತು. ಸಮುದ್ರಯಾನದಲ್ಲಿ ಮತ್ತೆ ಭೂಮಿ ಕಾಣುವುದು ಎಂದರೆ ಹೇಗಿರುತ್ತದೆ ಎಂಬ ಅನುಭವವೊಂದು ನಮಗೂ ಆಯಿತು. ನಮ್ಮೂರೇ ಆದ್ದರಿಂದ ಅರೆ ಇದು ನಮ್ಮ ಬಂದರು, ಇದು ಆ ದೊಡ್ಡ ಕಟ್ಟಡ ಎಂದೆಲ್ಲ ಪರಸ್ಪರ ಚರ್ಚೆ ಮಾಡುತ್ತಿದ್ದೆವು. ನಿಧಾನವಾಗಿ ಕಡಲಿನ ತೀರದ ಕಡೆ ಬರುತ್ತಿದ್ದ ನಮಗೆ ದೂರದ ದೋಣಿಯಲ್ಲಿ ಕುಳಿತಿದ್ದ ಹಲವು ಹಕ್ಕಿಗಳು ಕಾಣಿಸಿದವು. ನಮ್ಮ ಹಿಂಬದಿಯಿಂದ ಬೆಳಕು ಬಹಳ ಚೆನ್ನಾಗಿದ್ದುದರಿಂದ ಹಕ್ಕಿಗಳೂ ಸುಂದರವಾಗಿ ಕಾಣುತ್ತಿದ್ದವು. ಬಿಳಿ ಬಣ್ಣದ ದೇಹ, ಬೂದು ಬಣ್ಣದ ರೆಕ್ಕೆ ಹಾಗೂ ಕಂದು ಬಣ್ಣದ ಬಾಲದ ಸುಮಾರು ಕಾಗೆಯ ಗಾತ್ರದ ಹಕ್ಕಿಗಳು ಇತರೆ ಹಕ್ಕಿಗಳ ಜೊತೆ ಕಡಲಕಿನಾರೆಯ ದೋಣಿಯೊಂದರಲ್ಲಿ ಕುಳಿತಿದ್ದವು. ಮೀನು ಹಿಡಿದು ಮರಳಿದ ದೋಣಿಯಲ್ಲಿ ಉಳಿದ ಏನಾದರೂ ಸಿಗುತ್ತವೆಯೇ ಎಂದು ಆ ಹಕ್ಕಿಗಳು ಹುಡುಕುತ್ತಿದ್ದವು. ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಭಾರತದ ಕಡಲ ಕಿನಾರೆಗೆ ವಲಸೆಬರುವ ಈ ಹಕ್ಕಿ ಎಪ್ರಿಲ್ ತಿಂಗಳಿನಲ್ಲಿ ತನ್ನ ಊರಾದ ಲಧಾಕ್ ಮತ್ತು ಟಿಬೆಟ್ ಕಡೆಗೆ ವಲಸೆ ಹೋಗುತ್ತದೆಯಂತೆ. ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಅಲ್ಲಿನ ಸರೋವರಗಳ ಆಸುಪಾಸಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆಯಂತೆ. ಕೆಲವೊಮ್ಮೆ ನೂರಾರು ಸಂಖ್ಯೆಯಲ್ಲಿಯೂ ಕಾಣಸಿಗುತ್ತವೆ. ಇದನ್ನು ಕೆಲವು ಕಡೆ ಕಡಲಕಾಗೆ ಎಂದೂ ಕರೆಯುತ್ತಾರೆ. ನೀವೂ ಕಡಲ ಕಿನಾರೆಗೆ ಹೋದರೆ ಈ ಹಕ್ಕಿ ಕಾಣಸಿಗುತ್ತದೆಯೇ ಎಂದು ಪ್ರಯತ್ನಿಸಿ. ನೋಡಲು ಸಿಗಬಹುದು
ಇಂಗ್ಲೀಷ್ ಹೆಸರು : Brown-headed Gull
ವೈಜ್ಞಾನಿಕ ಹೆಸರು : Chroicocephalus brunnicephalus
ಚಿತ್ರ ಕೃಪೆ : ಅಂತರ್ಜಾಲ
ಮುಂದಿನವಾರ ಇನ್ನೊಂದು ಕಡಲಿನ ಹಕ್ಕಿಯನ್ನು ನೋಡಿದ ಕಥೆಯೊಂದಿಗೆ ಮತ್ತೆ ಭೇಟಿಯಾಗೋಣ...
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************