-->
ಹಕ್ಕಿ ಕಥೆ : ಸಂಚಿಕೆ - 127

ಹಕ್ಕಿ ಕಥೆ : ಸಂಚಿಕೆ - 127

ಹಕ್ಕಿ ಕಥೆ : ಸಂಚಿಕೆ - 127
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

              
      ಮಕ್ಕಳೇ ನಮಸ್ತೇ.... ಈ ವಾರದ ಹಕ್ಕಿ ಕಥೆಗೆ ಸ್ವಾಗತ. ದೀಪಾವಳಿ ರಜೆಗೆ ಅಂತ ಮೈಸೂರಿಗೆ ಹೋದ ನಾವು ಮೊದಲನೇ ದಿನ ಕುಕ್ಕರಹಳ್ಳಿ ಕೆರೆಯಲ್ಲಿ ಪಕ್ಷಿವೀಕ್ಷಣೆಗೆ ಹೋಗಿದ್ದೆವು. ಎರಡನೇ ದಿನ‌ ಕಾರಂಜಿ ಕೆರೆ ಉದ್ಯಾನಕ್ಕೆ ಹೋಗುವುದು ಎಂದು ನಿರ್ಧಾರವಾಗಿತ್ತು. ಕಾರಂಜಿ ಕೆರೆ ಸಾರ್ವಜನಿಕರಿಗೆ ತೆರೆದುಕೊಳ್ಳುವುದು ಒಂಭತ್ತು ಗಂಟೆಗೆ. ನಾವು ಅಲ್ಲಿಗೆ ತಲುಪುವಾಗ ಆಗಲೇ 9.30 ಆಗಿತ್ತು. ಕುಕ್ಕರಹಳ್ಳಿ ಕೆರೆಯ ಸುತ್ತ ಏರಿಯಮೇಲೆ ನಡೆಯಲು ಸಾಧ್ಯ. ನಡೆಯುವಾಗ ಕೆರೆ ಎಲ್ಲ ಕಡೆಯಿಂದಲೂ ಸುಂದರವಾಗಿ ಕಾಣುತ್ತದೆ. ಆದರೆ ಕಾರಂಜಿಕೆರೆ ಉದ್ಯಾನವನ ಆದ್ದರಿಂದ ನಡೆಯುವ ದಾರಿಯ ಎರಡೂ ಬದಿಗೆ ಎತ್ತರದ ಅಲಂಕಾರಿಕ ಮರಗಳನ್ನು ಬೆಳೆಸಲಾಗಿತ್ತು. ಅಲ್ಲಿ ಕೆರಯನ್ನು ನೋಡಬೇಕೆಂದರೆ ಬೋಟ್ ಹತ್ತಿ ನಾವೇ ಪೆಡಲ್ ಮಾಡಿಕೊಂಡು ಸುತ್ತಾಡಿಕೊಂಡು ಬರಬೇಕು. ಕಾರಂಜಿ ಕೆರೆಯ ಕೊನೆಯಲ್ಲೊಂದು ಚಿಟ್ಟೆ ಪಾರ್ಕ್ ಇದೆ ಅಲ್ಲಿಗೆ ಹೋಗೋಣ ಎಂದು ಎಲ್ಲರೂ ಹೇಳಿದರು. ಸರಿ ಎಂದು ನಿಧಾನಕ್ಕೆ ನಡೆಯುತ್ತಾ ಆ ತುದಿ ತಲುಪಿದರೆ ರಿಪೇರಿಯ ಕಾರಣಕ್ಕೆ ಚಿಟ್ಟೆ ಉದ್ಯಾನವನ ಮುಚ್ಚಲಾಗಿತ್ತು. ನಾಲ್ಕಾರು ಮಕ್ಕಳು ಅಯ್ಯೋ ಇನ್ನು ಮತ್ತೆ ಹಿಂದೆ ನಡೆಯಬೇಕಾ ಎಂದು ಅಲವತ್ತುಕೊಂಡರು. ಹೇಗೋ ಅವರಿಗೆಲ್ಲಾ ಗಾಳಿ ಹಾಕಿ ಸ್ವಲ್ಪದೂರ ನಡೆದುಕೊಂಡು ಬಂದು ಅಲ್ಲೇ ಇದ್ದ ಕಲ್ಲುಬೆಂಚಿನ ಮೇಲೆ ಕುಳಿತುಕೊಂಡೆವು. ನಾವು ತಂದಿದ್ದ ನೀರು ಮತ್ತು ಜ್ಯೂಸ್ ಕುಡಿದು ದಣಿವಾರಿಸಿ ಕೊಳ್ಳುತ್ತಿದ್ದೆವು. ಕಲ್ಲುಬೆಂಚಿನ ಆ ಕಡೆಗೆ ಬಿದಿರಿನ ಹಿಂಡು ಸಮೃದ್ಧವಾಗಿ ಬೆಳೆದಿತ್ತು. ಅದರ ಹಿಂಬದಿಯಲ್ಲೇ ಕೆರೆಯೂ ಇತ್ತು. ನಾವು ಕುಳಿತು ನಮ್ಮ ಪಾಡಿಗೆ ಮಾತನಾಡುತ್ತಿದ್ದಾಗ ಅಲ್ಲೊಂದು ಹಕ್ಕಿ ಓಡಾಡುತ್ತಿರುವುದು ಕಾಣಿಸಿತು. 
ನೋಡಲು ಕೊಕ್ಕರೆಯಂತೆ ಕಾಣುತ್ತಿತ್ತು. ಉದ್ದನೆಯ ಕಂದು ಬಣ್ಣದ ಕಾಲುಗಳು, ಬೂದು ಮಿಶ್ರಿತ ಕಂದುಬಣ್ಣದ ದೇಹ, ಕಪ್ಪು ಬಣ್ಣದ ರೆಕ್ಕೆ, ರೆಕ್ಕೆಯ ನಡುವಿನಿಂದ ಇಣುಕುವ ಬಿಳಿ ಬಣ್ಣ, ಕುತ್ತಿಗೆಯಿಂದ ಮೇಲೆ ಕಪ್ಪು ತಲೆ, ತಲೆಯ ಮೇಲೊಂದು ಕೆಂಪು ಬಣ್ಣದ ಟೋಪಿ. ನೋಡಲು ಪಿಕಾಸಿಯಂಥ ಕೊಕ್ಕು. ಗಂಡು ಹೆಣ್ಣುಗಳೆರಡೂ ನೋಡಲು ಒಂದೇ ರೀತಿ. ನಮ್ಮ ಜೊತೆಗಿದ್ದ ಹರ್ಷ ಅರೇ ಇದು ಕೆಂಬರಲು ಅಲ್ವಾ ಎಂದು ಗುರುತಿಸಿಯೇ ಬಿಟ್ಟ.
    ಕೆರೆ, ನದಿ ಮೊದಲಾದ ನೀರಿನ ಮೂಲಗಳ ಆಸುಪಾಸಿನಲ್ಲಿ, ನೀರಿಗಿಂತ ತುಸುದೂರ, ಗದ್ದೆಗಳಲ್ಲಿ ನೆಲದಮೇಲೆ ನಡೆಯುತ್ತಾ ಆಹಾರ ಹುಡುಕುತ್ತಿರುತ್ತದೆ. ಕೀಟಗಳು, ಕಾಳುಗಳು ಮತ್ತು ನೆಲದ ಮೇಲೆ ಓಡಾಡುವ ಸಣ್ಣಪುಟ್ಟ ಜೀವಿಗಳೇ ಇದರ ಆಹಾರ. ನೀರಿನಿಂದ ದೂರ ಮರಗಳ ಮೇಲೆ ಕಡ್ಡಿಗಳನ್ನು ಜೋಡಿಸಿ ದೊಡ್ಡ ಬುಟ್ಟಿಯಾಕಾರದ ಗೂಡು ಮಾಡಿ ಮೊಟ್ಡೆ ಇಟ್ಟು ಮರಿ ಮಾಡುತ್ತದೆ. ದಕ್ಷಿಣ ಭಾರತದಲ್ಲಿ ನವೆಂಬರ್ ಡಿಸೆಂಬರ್ ಇದರ ಸಂತಾನಾಭಿವೃದ್ಧಿ ಕಾಲವಂತೆ. ಹಾ ಇನ್ನೊಂದು ವಿಷಯ, ಈ ಹಕ್ಕಿ ಕರ್ನಾಟಕದ ಬಯಲುಸೀಮೆ ಯಲ್ಲಿ ಎಲ್ಲ ಕಡೆ ಕಾಣಸಿಗುತ್ತದೆ. ಆದರೆ ಮಲೆನಾಡು ಮತ್ತು ಕರಾವಳಿಯಲ್ಲಿ ತೀರಾ ಅಪರೂಪ. ಕೆರೆಗಳ ಆಸುಪಾಸಿನಲ್ಲಿ, ಹೊಲಗದ್ದೆಗಳಲ್ಲಿ ನೀವೂ ಇದನ್ನು ನೋಡಬಹುದು.
ಕನ್ನಡದ ಹೆಸರು: ಕೆಂಪು ತಲೆಯ ಕೆಂಬರಲು
ಇಂಗ್ಲೀಷ್ ಹೆಸರು: Red-naped Ibis
ವೈಜ್ಞಾನಿಕ ಹೆಸರು: Pseudibis papillosa
ಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹಕ್ಕಿಯನ್ನು ನೋಡಿದ ಕಥೆಯೊಂದಿಗೆ ಮತ್ತೆ ಭೇಟಿಯಾಗೋಣ...
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************



Ads on article

Advertise in articles 1

advertising articles 2

Advertise under the article