ನಿಷ್ಪಾಪಿ ಸಸ್ಯಗಳು : ಸಂಚಿಕೆ - 26
Wednesday, November 29, 2023
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 26
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದಲ್ಲಿ ಕಲೆಂಜಿಮಲೆ ಎಂಬ ಸರಕಾರೀ ರಕ್ಷಿತಾರಣ್ಯವಿದೆ.1960 ರ ಕಾಲಘಟ್ಟದಲ್ಲಿ ಅದೊಂದು ಕುಗ್ರಾಮ. ಮೂಡಣದ ಪಶ್ಚಿಮಘಟ್ಟಗಳು ಇಳಿಬಿಟ್ಟ ಪಾದಗಳಂತೆ ಈ ಕಲೆಂಜಿಮಲೆ. ಆ ಕಾಲದಲ್ಲಿ ಈ ಕಲೆಂಜಿಮಲೆ ಕಬ್ಬಿಣದ ಅದಿರಿನ ನಿಕ್ಷೇಪವಿರುವ ಸ್ಥಳವೆಂದು ಗುರುತಿಸಲ್ಪಟ್ಟಿತ್ತು. ಅದರ ಸಂಶೋಧನೆಗಾಗಿ ದೂರದ ಬಂಗಾಳದಿಂದ ಭಾರತ ವಿಭಜನೆಯಾದಾಗ ನಿರಾಶ್ರಿತರಾಗಿ ಬಂದ ಧೀರೇಂದ್ರ ನಾಥ ಭಟ್ಟಾಚಾರ್ಯರು ನೇಮಕವಾಗಿದ್ದರು. ಅವರು ಕಾರಣಾಂತರದಿಂದ ಆ ಕೆಲಸ ಬಿಟ್ಟು 1963 ರಲ್ಲಿ ಕನ್ಯಾನದ ಭಾರತ ಸೇವಾಶ್ರಮವನ್ನು ಕಟ್ಟಿ ಬೆಳೆಸಿದುದು ಈಗ ಇತಿಹಾಸ.
ಈ ಹಿನ್ನೆಲೆ ಏಕೆ ಹೇಳುತ್ತಿರುವೆನೆಂದರೆ ಅಂದು ಕಬ್ಬಿಣದ ಅದಿರು ತೆಗೆಯಲು ಗುಡ್ಡ ಕಾಡು ಬಗೆಯುತ್ತಿದ್ದರೆ ಇಂದು ರಕ್ಷಿತಾರಣ್ಯದ ಜಾಗವೇ ಬಂಜರಾಗುತ್ತಿತ್ತು ಅಲ್ಲವೇ? ದೊಡ್ಡ ಮರಗಳು ಕಣ್ಮರೆಯಾಗಿದ್ದರೂ ಕನಿಷ್ಟ ಒಂದಿಷ್ಟು ನೆರಳು, ಸಣ್ಣ ಪುಟ್ಟ ಸಸ್ಯಗಳು ಉಳಿದುಕೊಂಡಿವೆ. ಈಗ ಈ ರಕ್ಷಿತಾರಣ್ಯದ ನಡುವೆ ಉತ್ತಮ ಮಾರ್ಗದ ಸೌಲಭ್ಯವಿದೆ. ಹಾಗೆಯೇ ಅಲ್ಲಲ್ಲಿ ಮಾನವನ ಹೆಜ್ಜೆಗುರುತಾಗಿ ಪ್ಲಾಸ್ಟಿಕ್ ರಾಶಿಗಳೂ ಇವೆ.
ನಾನು ಇತ್ತೀಚೆಗೆ ಈ ಮಾರ್ಗದಲ್ಲಿ ಸಂಚರಿಸಿದಾಗ ವಿಶಿಷ್ಟ ರಚನೆಯಲ್ಲಿ ಗೋಳಾಕಾರವಾಗಿ ಬಟಾಣಿಯಷ್ಟೆ ಗಾತ್ರದ ಹತ್ತು ಹದಿನೈದು ಕಾಯಿಗಳನ್ನು ಜೊತೆಸೇರಿಸಿಕೊಂಡ ಗೊಂಚಲುಗಳನ್ನು ನೋಡಿದೆ. ಮಾರ್ಗದ ಇಕ್ಕೆಲಗಳಲ್ಲಿ ಹಲವು ಕಡೆ ಇದರ ಬಳ್ಳಿಗಳು ಮರಗಳಿಂದ ಇಳಿಬಿದ್ದಿದ್ದವು. ಬಳ್ಳಿ ನಯವಾಗಿದ್ದು ಮುಳ್ಳುಗಳಿಂದ ಕೂಡಿದೆ. ಪರ್ಯಾಯ ರಚನೆಯಲ್ಲಿ ಅಂಡಾಕಾರವಾದ ರೋಮರಹಿತ ಎಲೆಗಳು ಅಗಲವಾಗಿದ್ದು ತುದಿಯಲ್ಲಿ ಚೂಪಾಗಿರುತ್ತವೆ. ಎಲೆಗಳಲ್ಲಿ ಐದು ದಪ್ಪ ಸಿರೆಗಳಿದ್ದು ಹೊಳಪಾಗಿರುತ್ತವೆ. ಹಳದಿ ಬಣ್ಣದ ಸುಂದರ ಪುಷ್ಪ ಮಂಜರಿಯನ್ನು ಹೊಂದಿರುವ ಈ ಬಳ್ಳಿ ಜಾನುವಾರುಗಳಿಗೆ ಮೇವಾಗಿದೆ. ಬೇರು ಹಾಗೂ ಬೀಜದ ಮೂಲಕ ಸಂತಾನಾಭಿವೃದ್ಧಿ ನಡೆಯುತ್ತದೆ. ಇದು ಭಾರತದಾದ್ಯಂತ ಹರಡಿರುವ ಬಹುವಾರ್ಷಿಕ ಸಸ್ಯ. ಉಷ್ಣವಲಯದ ಗುಡ್ಡಗಾಡು, ಕರಾವಳಿ, ಮಲೆನಾಡುಗಳ ಕಾಡು ಗುಡ್ಡ ಬೇಲಿಗಳ ಮೇಲೆಲ್ಲಾ ಹಂಬು ಕುಡಿಗಳನ್ನು ಬಳಸಿ ಮೇಲೇರಿ ಹಬ್ಬಿ ಹರಡುವ ಆರೋಹಿ ಸಸ್ಯ. ಇದನ್ನು ಸ್ಥಳೀಯವಾಗಿ ಚೆನರ ಬಳ್ಳಿಯೆಂದು ಕರೆದರೆ ಕನ್ನಡದಲ್ಲಿ ಕಾಡು ಹಂಬು, ಕಾಡು ಹಂಬು ತಾವರೆ ಅಥವಾ ಕುಮಾರಿಕಾ, ಕೆಂಗ್ರಣಿಗೆ ಬಳ್ಳಿ, ಎತ್ ಬೀಳು ಎನ್ನುವರು.
Smilax Zeylanica ವೈಜ್ಞಾನಿಕ ಹೆಸರಾಗಿದ್ದು Liliaceae ಕುಟುಂಬಕ್ಕೆ ಸೇರಿದೆ. ಸಾಂಪ್ರದಾಯಿಕ ವಾಗಿ ಈ ಕಾಡು ಹಂಬು ತುಳುನಾಡಿನಲ್ಲಿ ಬಳಕೆಯಲ್ಲಿದೆ. ದುಷ್ಟ ಶಕ್ತಿಗಳಿಂದ ರಕ್ಷಣೆ ಪಡೆಯಲು ಸಾಂಕೇತಿಕವಾಗಿ ಈ ಬಳ್ಳಿಯನ್ನು ಬಳಸುತ್ತಾರೆ. ಉದಾಹರಣೆಗೆ ಹೊಸದಾಗಿ ಮಗುವನ್ನು ತೊಟ್ಟಿಲಿಗೆ ಹಾಕುವ ಶಾಸ್ತ್ರವನ್ನು ಮಾಡುವಾಗ ತೊಟ್ಟಿಲಿನ ಸುತ್ತಲೂ ಈ ಕಾಡುಹಂಬು ಬಳ್ಳಿಯನ್ನು ಸುತ್ತಿ ಕಟ್ಟುತ್ತಾರೆ. ಹೊಸ ಮನೆಕಟ್ಟಿ ಗೃಹ ಪ್ರವೇಶವಾಗುವ ಹಿಂದಿನ ದಿನ ಮನೆಯ ಸುತ್ತಲೂ ಈ ಕಾಡುಹಂಬು ಬಳ್ಳಿ ಕಟ್ಟುತ್ತಾರೆ. ಇವು ಬಹು ಹಿಂದಿನಿಂದ ಇಂದಿನವರೆಗೂ ನಡೆದು ಬಂದ ಸಂಪ್ರದಾಯ. ಪೇಟೆಯಲ್ಲಿ ಮನೆಕಟ್ಟಿದವರೂ ಹಳ್ಳಿಯಿಂದ ದುಡ್ಡು ಕೊಟ್ಟು ತರಿಸಿಕೊಳ್ಳುತ್ತಾರೆ. ಇದೊಂದು ಪವಿತ್ರ ಸಸ್ಯ ಎಂಬ ನೆಲೆಯಲ್ಲಿ ಗೌರವ ಪಡೆದುಕೊಂಡಿದೆ.
ಈ ಚೆನರ ಬಳ್ಳಿ ಅಥವಾ ಕಾಡುಹಂಬು ತನ್ನೊಡಲಲ್ಲಿ ಹಲವಾರು ರೋಗಗಳಿಗೆ ಔಷಧಿಯನ್ನಿರಿಸಿಕೊಂಡಿದೆ. ಊತ, ಬಾವು, ಚರ್ಮದ ಕಾಯಿಲೆ, ಹುಣ್ಣು, ಸಂಧಿವಾತ, ಸಂತಾನಾಭಿವೃದ್ಧಿ , ಲೈಂಗಿಕ ರೋಗ, ಮೂತ್ರದ ಅಸ್ವಸ್ಥತೆಗಳಿಗೆ, ನರ ಮಂಡಲದ ಕಾಯಿಲೆ, ಭೇದಿ ಇತ್ಯಾದಿಗಳಿಗೆ ಪರಿಣಾಮಕಾರಿ ಔಷಧಿಯಾಗಿದೆ. ನಮ್ಮ ಅಜ್ಜಿ ತನ್ನ ಮಗನಿಗೆ ಮೂತ್ರಾಶಯದ ತೊಂದರೆಗೆಯಾಗಿದ್ದಾಗ ಇದರ ಕಾಯಿಯನ್ನು ಬೆಳ್ತಿಗೆಯ ಜೊತೆ ದಪ್ಪ ಕಡೆದು ಬೆಲ್ಲ ಸೇರಿಸಿ ಕುದಿಸಿ ಕಡೆಯುವ ಕಲ್ಲಿನ ಗುಂಡಿಗೆ ಒಂದಿಷ್ಟು ತುಪ್ಪ ಹಾಕಿ ಅದರ ಮೇಲೆ ಹೊಯ್ಯುತ್ತಿದ್ದರು. ಮುಂಜಾನೆ ಬೇಗ ಎದ್ದು ಅದನ್ನು ತಿನಿಸುತ್ತಿದ್ದರು. ಈ ಬಳ್ಳಿಯ ಚಿಗುರು ಮತ್ತು ದಂಟುಗಳನ್ನು ಹಾಕಿ ಬೇಯಿಸಿದ ಬಿಸಿನೀರಿನ ಸ್ನಾನ ಶಾರೀರಿಕ ನೋವು ನಿವಾರಕವಾಗಿದೆ ಹಾಗೂ ಹಳದಿ ರೋಗಕ್ಕೂ ಪ್ರಯೋಜನ ನೀಡುತ್ತದೆ. ಸಮೂಲವು ರಕ್ತಶುದ್ಧಿಗೆ ಬಳಸಲ್ಪಡುತ್ತದೆ. ಕ್ಯಾಲ್ಸಿಯಂ ಸಮೃದ್ಧವಾಗಿದೆ. ಕಚ್ಚಾ ಸಸ್ಯದ ಯಾವುದೇ ಭಾಗದ ಸೇವನೆ ಅಪಾಯಕಾರಿಯಾಗಿದೆ. ಔಷಧ ರೂಪವಾಗಿ ಸಸ್ಯದ ಭಸ್ಮ, ಕಷಾಯ, ಲೇಪ,ಮಣ್ಣಿಯ ರೂಪದಲ್ಲಿ ವೈದ್ಯರ ಮಾರ್ಗದರ್ಶನದಲ್ಲಿ ಬಳಸಬಹುದು. ಮಳೆಗಾಲದಲ್ಲಿ ಜಾನುವಾರುಗಳು ಮೇವು ಬಿಟ್ಟು ಕೂತರೆ ನಾಲಿಗೆಗೆ ಈ ಬಳ್ಳಿಯ ಮುಳ್ಳುಗಳಿಂದ ಗೀರಿ ಉಪ್ಪು , ಹುಳಿ, ಜೀರಿಗೆ, ಮೆಣಸು ಸೇರಿಸಿ ತಿಕ್ಕುತ್ತಿದ್ದರು.
ಈ ನಿಷ್ಪಾಪಿ ಸಸ್ಯವನ್ನು ನಾವು ಬೆಳೆಸದಿದ್ದರೂ ನಮ್ಮ ಹಿತ್ತಲಲ್ಲಿ ಪಕ್ಷಿಗಳ ಸಹಕಾರದಿಂದ ಗಿಡಗಳು ಹುಟ್ಟುತ್ತವೆ. ಕೆಲವು ಜಾತಿಯ ಚಿಟ್ಟೆಗಳು ಈ ಸಸ್ಯದ ಎಲೆಗಳ ಅಡಿಭಾಗದಲ್ಲಿ ಮೊಟ್ಟೆಗಳನ್ನಿಡುತ್ತವೆ. ಅವು ಕಂಬಳಿ ಹುಳಗಳಾಗಿ ಮತ್ತೆ ಬಣ್ಣ ಬಣ್ಣದ ಚಿಟ್ಟೆಗಳಾಗಲು ಕಾಡುಹಂಬು ಸಹಕಾರಿಯಾಗುತ್ತದೆ. ಪ್ರಕೃತಿಯಲ್ಲಿ ಎಲ್ಲ ಜೀವಿಗಳೂ ಎಲ್ಲ ಸಸ್ಯಗಳೂ ಒಂದಕ್ಕೊಂದು ಪೂರಕವಾಗಿ ಬಾಳುತ್ತವೆ. ಒಂದು ಅಳಿದರೆ ಇನ್ನೊಂದಿಲ್ಲ. ಹಂಬು ಬಳ್ಳಿ ಅಳಿದರೆ ಚಿಟ್ಟೆ ಬರದು.. ಸಂತಾನ ಬೆಳೆಯದು. ಇವೆಲ್ಲವನ್ನೂ ರಕ್ಷಿಸುವುದು ನಮ್ಮ ಕರ್ತವ್ಯವಲ್ಲವೇ...
ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.... ನಮಸ್ಕಾರ
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************