-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 4

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 4

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 4
ಲೇಖಕರು : ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


                  
      ಪ್ರೀತಿಯ ಮಕ್ಕಳೇ... ನಾವು ಬದುಕುವ ಪರಿಸರದಲ್ಲಿ ಎಲ್ಲ ವಸ್ತುಗಳನ್ನು ಕಾಣುತ್ತೇವೆ. ನಾನು, ನೀವು, ನಿಮ್ಮ ಮುದ್ದಿನ ಬೆಕ್ಕು, ಮನ ಮುದಗೊಳಿಸುವ ಗುಲಾಬಿಯ ಗಿಡ, ಹಣ್ಣು ಕೊಡುವ ಮಾವಿನ ಮರ, ಅಗೋಚರವಾಗಿದ್ದರೂ ಮೊಸರು, ಚಾಕ್ಲೇಟ್ ನೀಡುವ ಖಾಯಿಲೆ ಹರಡುವ ಬ್ಯಾಕ್ಟೀರಿಯಾಗಳು, ಕಲ್ಲು, ಮಣ್ಣು, ನೀರು, ಉಸಿರಾಡುವ ಗಾಳಿ, ಖನಿಜಗಳು ಹೀಗೆ. ಇವುಗಳ ಗುಣಗಳ ಬಗ್ಗೆ ತಿಳಿಯಬೇಕಾದರೆ ನಾವು ಇವುಗಳನ್ನು ಗುಂಪುಗಳಾಗಿ ಮಾಡಬೇಕು. 

       ನಮ್ಮ ಪುಸ್ತಕಗಳನ್ನು ಕಾದಂಬರಿಗಳು, ಸಣ್ಣ ಕಥೆಗಳು, ನಿಯತಕಾಲಿಕೆಗಳು, ಪಠ್ಯ ಪುಸ್ತಕಗಳು ಹೀಗೆ. ಪಠ್ಯ ಪುಸ್ತಕಗಳಿಗೆ ಬಂದಾಗ ಅವುಗಳನ್ನು ತರಗತಿವಾರು ಅಥವಾ ವಿಷಯವಾರು ಗುಂಪು ಮಾಡತ್ತೇವೆ. ವಿಜ್ಞಾನ ಪಠ್ಯ ಪುಸ್ತಕಗಳಿಗೆ ಬಂದಾಗ ಭೌತ, ರಸಾಯನ, ಜೀವ ಶಾಸ್ತ್ರ ಹೀಗೆ. ಈ ರೀತಿ ವೈಜ್ಞಾನಿಕವಾಗಿ ಗುಂಪು ಮಾಡುವುದನ್ನು ನಾವು ವರ್ಗೀಕರಣ (classification) ಎನ್ನುತ್ತೇವೆ. ವರ್ಗೀಕರಿಸುವಾಗ ನಾವು ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಒಂದು ಗುಂಪಿಗೆ ಸೇರುವ ವಸ್ತುಗಳು ಒಂದೇ ಗುಣ ಲಕ್ಷಣಗಳನ್ನು ಹೊಂದಿರಬೇಕು. ನಾನು ಆರಂಭದಲ್ಲಿ ಹೇಳಿದ ವಸ್ತುಗಳನ್ನು ವರ್ಗೀಕರಿಸಲು ಹೇಳಿದರೆ ನೀವು ಅವುಗಳನ್ನು ಸಜೀವಿಗಳು ಮತ್ತು ನಿರ್ಜೀವಿಗಳು ಎಂದು ಗುಂಪು ಮಾಡುತ್ತೀರಿ ಎಂದು ನನಗೆ ಗೊತ್ತಿದೆ. ಹಾಗಾದರೆ ಅವುಗಳ ನಡುವೆ ವ್ಯತ್ಯಾಸಗಳನ್ನು ಏನೇನು ಪಟ್ಟಿ ಮಾಡಿದ್ದೀರಿ ನೋಡೋಣ. ನಿಜ.

       ಜೀವಿಗಳು ಉಸಿರಾಡುತ್ತವೆ. ಆಹಾರ ಸೇವಿಸುತ್ತವೆ. ಆದರೆ ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ ಮತ್ತು ಅದೇ ಆಹಾರವನ್ನು ಉಸಿರಾಟಕ್ಕೆ ಬಳಸಿಕೊಳ್ಳುತ್ತವೆ. ಬೆಳವಣಿಗೆ ಹೊಂದುತ್ತವೆ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ತೋರಿಸುತ್ತವೆ. ನೀವು ಬಸ್ಸನ್ನು ನೋಡಿದ ಕೂಡಲೇ ರಸ್ತೆಯ ಪಕ್ಕಕ್ಕೆ ಸರಿಯುತ್ತೀರಿ. ಸಿಹಿ ತಿಂಡಿ ನೋಡಿದ ಕೂಡಲೇ ಬಾಯಿಯಲ್ಲಿ ನೀರೂರುತ್ತದೆ‌, ಜೀವಿಗಳು ಚಲಿಸುತ್ತವೆ. ತೆಂಗಿನ ಮರ ಬಿಸಿಲಿನ ಕಡೆಗೆ ವಾಲುವುದು, ಬೇರು ನೀರಿನ ಮೂಲದ ಕಡೆಗೆ ಬೆಳೆಯುವುದೂ ಚಲನೆಗಳೇ. ಜೀವಿಗಳು ತನ್ನದೇ ರೀತಿಯ ಇನ್ನೊಂದು ಜೀವಿಯನ್ನು ನೀಡುತ್ತವೆ‌. ಇದೇ ವಂಶಾಭಿವೃದ್ಧಿ. ಜೀವಿಗಳ ಮುಂದಿನ ಪೀಳಿಗೆಯಲ್ಲಿ ಕೆಲವೊಮ್ಮೆ ಹಠಾತ್ ಬದಲಾವಣೆಯಾಗುತ್ತವೆ. ಇದನ್ನು ಉತ್ಪರಿವರ್ತನೆ (mutation). ಈ ಎಲ್ಲಾ ಗುಣಗಳು ನಿರ್ಜೀವಿಗಳಿಗೆ ಇಲ್ಲ. ಆದರೆ ನಿರ್ಜೀವಿಗಳನ್ನು ಹರಳಿನ ರೂಪದಲ್ಲಿ ಪಡೆಯಬಹುದು. ಇನ್ನು ಮುಂದೆ ನಿಮಗೆ ವರ್ಗೀಕರಣ ಸುಲಭ.

       ನಮ್ಮ ನಡುವೆ ಒಂದು ವಸ್ತುವಿದೆ. ಅದು ಉಸಿರಾಡುವುದಿಲ್ಲ, ಆಹಾರ ಸೇವಿಸುವುದಿಲ್ಲ, ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ತೋರಿಸುವುದಲ್ಲ, ಚಲಿಸುವುದಿಲ್ಲ ಮತ್ತು ಇವುಗಳನ್ನು ಹರಳಿನ ರೂಪದಲ್ಲಿ ಪಡೆಯಬಹುದು. ಅಂದರೆ ಇವುಗಳು ನಿರ್ಜೀವಿಗಳೆಂದಾಯಿತು. ಆದರೆ ಇವು ವಂಶಾಭಿವೃದ್ಧಿ ಹೊಂದುತ್ತವೆ ಮತ್ತು ಉತ್ಪರಿವರ್ತನೆಗೊಳ್ಳುತ್ತವೆ. ಅಂದರೆ ಇವು ಜೀವಿಗಳು. ಜೀವಿಗಳೂ ಅಲ್ಲದ ನಿರ್ಜೀವಿಗಳು ಎಂದು ಹೇಳಲಾಗದ ಈ ಕಣಗಳನ್ನು ವೈರಸ್‌ಗಳು ಎನ್ನುತ್ತೇವೆ. ತರಗತಿಯಲ್ಲಿ ಹೌದು ಎನ್ನುವವರು ಕೈ ಎತ್ತಿ ಎಂದರೆ ಕೈ ಎತ್ತುತ್ತಾರೆ ಇಲ್ಲ ಎನ್ನುವಾಗ ಉಳಿದ ಕೆಲವರು. ಆದರೆ ಎರಡೂ ಸಂದರ್ಭಗಳಲ್ಲಿ ಕೈಯನ್ನೇ ಎತ್ತದೇ ಸುಮ್ಮನೇ ಕುಳಿತಿದ್ದಾರೆ ಅವರೇ ಈ ವೈರಸ್‌ಗಳು.
.................................... ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article