ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 1
Tuesday, November 7, 2023
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 1
ಲೇಖಕರು : ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ನವೆಂಬರ್ ತಿಂಗಳೆಂದ ಕೂಡಲೇ ರಾಜ್ಯೋತ್ಸವದ ಕಂಪು. ನಿಮಗೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ನಿಮ್ಮ ತಾರಾನಾಥ್ ಕೈರಂಗಳ ಸರ್ ತುಂಬಾ ದಿನಗಳಿಂದ ಲೇಖನ ಬರೆಯುವಂತೆ ಒತ್ತಾಯಿಸುತ್ತಿದ್ದರು. ಆದರೆ ಯಾಕೋ ಪೆನ್ನು ಕೈ ಹಿಡಿಯುತ್ತಿರಲಿಲ್ಲ. ನಿನ್ನೆ ಮತ್ತೆ ನೆನಪಿಸಿದರು ಅದಕ್ಕೆ ಪುಸ್ತಕ ತೆಗೆದುಕೊಂಡೆ. ಇನ್ನು ಸ್ವಲ್ಪ ದಿನ ನಿಯಮಿತವಾಗಿ ಬರೆಯಲು ಪ್ರಯತ್ನಿಸುವೆ.
ಓಹ್ ನಾನು ನನ್ನ ಪರಿಚಯ ಹೇಳಿಕೊಳ್ಳಬೇಕಲ್ಲವೇ. ನನ್ನ ಹೆಸರು ದಿವಾಕರ ಶೆಟ್ಟಿ ಎಚ್. ಎಚ್ ಎಂಬುದು ನನ್ನ ಊರು ಹಾಲಾಡಿ. ಇದು ವಾರಾಹಿ ನದಿ ದಂಡೆಯ ಮೇಲಿರುವುದು, ವಾರಾಹಿ ನದಿ ಹೊಸಂಗಡಿ ಸಮೀಪದಲ್ಲಿ ಭೂಗರ್ಭ ವಿದ್ಯುದಾಗಾರ ಹೊಂದಿರುವುದು ನಿಮಗೆ ಕೆಲವರಿಗಾದರೂ ತಿಳಿದಿರಬಹುದು. ಇದೀಗ ವಾರಾಹಿ ನದಿಯ ನೀರನ್ನು ಉಡುಪಿಯ ಕುಡಿಯುವ ನೀರಿಗೆ ಕೊಂಡೊಯ್ಯುತ್ತಿದ್ದಾರೆ. ನಾನೂ ನಿಮ್ಮ ತಾರಾನಾಥ ಸರ್ ಹಾಗೆಯೇ ಮಾಸ್ಟ್ರು. ನನಗೆ ಚಿತ್ರ ಬರೆಯಲು ಬರುವುದಿಲ್ಲ. ಆದರೆ ಅರವಿಂದ ಸರ್ ಹಾಗೆ ಬರೆಯುತ್ತೇನೆ. ಆಗ ಕೋವಿಡ್ ಬಂದಿತ್ತಲ್ಲ. ಶಾಲೆಗೆ ಹೋಗಲು ಇರಲಿಲ್ಲ. ಸಮಯ ಕಳೆಯುವುದು ಕಷ್ಟವಾಗುತ್ತಿತ್ತು. ಕಾಲ ಕ್ಷೇಪಕ್ಕಾಗಿ ಬರೆಯಲು ಆರಂಭಿಸಿದೆ. ನಾನು ವಿಜ್ಞಾನದ ಮಾಸ್ಟ್ರು. ಕನ್ನಡದಲ್ಲಿ ವಿಜ್ಞಾನ ಲೇಖನಗಳು ಕಡಿಮೆ ಆದ್ದರಿಂದ ಆ ಕೊರತೆ ತುಂಬಲು ಬರೆಯಲು ಆರಂಭಿಸಿದೆ. ಫೇಸ್ ಬುಕ್ ವಾಲ್ ನಲ್ಲಿ ಹಾಕತೊಡಗಿದೆ. ಓದುಗರ ಸಂಖ್ಯೆಯೂ ದೊಡ್ಡದಿದೆ. Divakara Shetty H ಎಂಬ ಫೇಸ್ ಬುಕ್ ಪೇಜ್ ತೆಗೆದರೆ ನನ್ನ ಲೇಖನಗಳು ಸಿಗುತ್ತವೆ. ಜ್ಞಾನ ಮುಕ್ತವಾದದ್ದು ಎಂಬ ಕಾರಣಕ್ಕೆ ನಾನು ಅದನ್ನು ಲಾಕ್ ಮಾಡಿಲ್ಲ. ನೀವು ಮಿತ್ರರಾಗಲೇ ಬೇಕೆಂಬ ನಿರ್ಬಂಧವಿಲ್ಲ. ಹಾಗೆಯೇ ಓದಬಹುದು. ಆದರೆ ನೀವು ಸ್ವಲ್ಪ ಹಿಂದಕ್ಕೆ ಹೋಗಬೇಕಾಗುತ್ತದೆ. ಏಕೆಂದರೆ ಇತ್ತೀಚಿನ ದಿನದಲ್ಲಿ ನನ್ನ ಬರೆವಣಿಗೆಯ ವಿಷಯವನ್ನು ಬದಲಾಯಿಸಿದ್ದೇನೆ.
ಸಾಮಾನ್ಯವಾಗಿ ವಿಜ್ಞಾನ/ಗಣಿತ ವಿಷಯದವರಿಗೆ ಭಾಷೆ ಅಗತ್ಯವಿಲ್ಲ ಎಂದು ಹೇಳುವುದನ್ನು ನಾನು ಕೇಳಿದ್ದೇನೆ. ಇದು ತಪ್ಪು. 2+2 ಇದಕ್ಕೆ ಭಾಷೆ ಬೇಡ. ಆದರೆ ಪೂರ್ವದಿಂದ ಎರಡು ಕಾಗೆಗಳು ಹಾರಿ ಬಂದವು ಪಶ್ಚಿಮದಿಂದ ಇನ್ನೆರಡು ಹಾರಿಬಂದು ಒಂದೇ ಮರದ ಮೇಲೆ ಕುಳಿತರೆ ಒಟ್ಟು ಎಷ್ಟು ಕಾಗೆಗಳಾದವು? ಎಂಬುದನ್ನು ಉತ್ತರಿಸಲು ಭಾಷೆ ಗಟ್ಟಿಯಾಗಿರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವಾಗ ವೇಗವಾಗಿ ಓದಿ ಅರ್ಥೈಸಿಕೊಳ್ಳಲು ಭಾಷೆ ಬಲಿಷ್ಠವಾಗಿರಬೇಕು. 60 ನಿಮಿಷಗಳಲ್ಲಿ 90 ಪ್ರಶ್ನೆಗಳನ್ನು ಓದಿ, ಅರ್ಥೈಸಿ ಉತ್ತರಿಸಬೇಕೆಂದರೆ ಭಾಷೆಯಲ್ಲಿ ಪರಿಣತರಾದರಷ್ಟೇ ಸಾಧ್ಯ. ಐದನೆಯ ತರಗತಿಯ ಒಬ್ಬ ವಿದ್ಯಾರ್ಥಿ ಒಂದು ನಿಮಿಷಕ್ಕೆ 50 ಶಬ್ದಗಳನ್ನೂ 10ನೆಯ ತರಗತಿಯ ವಿದ್ಯಾರ್ಥಿ 120 ಶಬ್ದಗಳನ್ನು ಓದಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು. ನಿಮ್ಮ ಓದಿನ ವೇಗ ಎಷ್ಟಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ.
ಓದಿನ ವೇಗ ಹೆಚ್ಚಬೇಕಾದರೆ ಹೆಚ್ಚು ಹೆಚ್ಚು ಓದಬೇಕು. ಇದನ್ನು ಓದಿನ ಹಸಿವು ಎನ್ನುತ್ತೇವೆ. ವ್ಯಾಪಕವಾಗಿ ಓದುವವರನ್ನು ಇಂಗ್ಲೀಷ್ ನಲ್ಲಿ voracious reader ಎನ್ನುತ್ತೇವೆ. ನೀವೂ ಹಾಗೇ ಆಗಬೇಕೆಂಬುದು ನಮ್ಮೆಲ್ಲರ ಹಾರೈಕೆ. ಓದಲು ಪುಸ್ತಕವೇ ಬೇಕೆಂದಿಲ್ಲ. ಬೆಳಿಗ್ಗೆ ಎದ್ದು ಹಲ್ಲುಜ್ಜಲು ಪೇಸ್ಟ್ ಡಬ್ಬವನ್ನೂ ಓದಬಹುದು, ಚಾಕೊಲೇಟ್ ನ ಹೊದಿಕೆ, ಗೋಲಿ ಬಜೆ ಕಟ್ಟಿದ ಕಾಗದ ಹೀಗೆ ಓದಿನ ಹಸಿವಿರುವವನಿಗೆ ಎಸೆಯುವ ವಸ್ತುವಿನಲ್ಲಿಯೂ ಆಹಾರ ಸಿಗುತ್ತದೆ.
ಮಕ್ಕಳೇ ಎಲ್ಲರೂ ಹೆಚ್ಚು ಹೆಚ್ಚು ಓದುತ್ತಾ ನಮ್ಮ ಓದಿನ ವೇಗವನ್ನು ಹೆಚ್ಚಿಸಿಕೊಳ್ಳೋಣ. ಸ್ವಾಮಿ ವಿವೇಕಾನಂದರು ಎಂತಹ ಓದುವ ಸಾಮರ್ಥ್ಯವನ್ನು ಹೊಂದಿದ್ದರೆಂದರೆ ನಮ್ಮ ಹಾಗೆ ಅಕ್ಷರಗಳನ್ನು, ಶಬ್ದಗಳನ್ನು ಜೋಡಿಸಿ ಓದುತ್ತಿರಲಿಲ್ಲವಂತೆ ಪುಸ್ತಕ ಪುಸ್ತಕಗಳನ್ನೇ ಓದುತ್ತಿದ್ದರಂತೆ. ನೀವೂ ಹಾಗೆಯೇ ಆಗಬೇಕು.
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
********************************************