-->
ಹಕ್ಕಿ ಕಥೆ : ಸಂಚಿಕೆ - 123

ಹಕ್ಕಿ ಕಥೆ : ಸಂಚಿಕೆ - 123

ಹಕ್ಕಿ ಕಥೆ : ಸಂಚಿಕೆ - 123
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
           

     ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ... ಕಡಲಿನ ಮೇಲೆ ಹಾರುವ ಇನ್ನೊಂದು ವಿಶಿಷ್ಟ ಹಕ್ಕಿ ನೋಡಿದ ಕಥೆಯೊಂದಿಗೆ ಈ ವಾರ ಬಂದಿದ್ದೇನೆ.
       ಕಡಲಿನ ಮೇಲೆ ಸಾಮಾನ್ಯವಾಗಿ ಕಾಣಸಿಗುವ ಹಕ್ಕಿಗಳೆಂದರೆ ರೀವಗಳು (Terns). ನಮ್ಮ ಬೋಟಿನಲ್ಲಿದ್ದ ಕೆಲವರಿಗೆ ದೂರದಲ್ಲಿ ಹತ್ತಾರು ರೀವಗಳು ಕಡಲಿಗೆ ಧುಮುಕುತ್ತಿರುವುದು (ಡೈವ್ ಹೊಡೆಯುತ್ತಿರುವುದು) ಗಮನಕ್ಕೆ ಬಂತು. ನಮ್ಮ ನಾವೆಯೂ ಅದೇ ದಿಕ್ಕಿನಲ್ಲಿ ಚಲಿಸುತ್ತಿದ್ದುದರಿಂದ ಎಲ್ಲರೂ ಕಾತರವಾಗಿ ಹಕ್ಕಿಗಳನ್ನು ಸರಿಯಾಗಿ ನೋಡಲು ಕಾಯುತ್ತಿದ್ದೆವು. ಆ ಜಾಗ ಹತ್ತಿರ ಬರುತ್ತಿದ್ದಂತೆ ಹಕ್ಕಿಗಳಿಗೆ ತೊಂದರೆ ಆಗದಿರಲಿ ಎಂದು ನಮ್ಮ ನಾವಿಕ ಬೋಟ್ ಅನ್ನು ನಿಧಾನಗೊಳಿಸಿ ಒಂದೆಡೆ ನಿಲ್ಲಿಸಿದ. ಹಲವಾರು ರೀವಗಳು ನೀರಿಗೆ ಧುಮುಕಿ ತಮಗೆ ಬೇಕಾದಷ್ಟು ಮೀನು ಹಿಡಿದು ತಿನ್ನುತ್ತಿದ್ದವು. ಕೆಲವು ಹಿಡಿದ ‌ಮೀನನ್ನು ಕಚ್ಚಿಕೊಂಡು ಹಾರುತ್ತಿದ್ದವು. ಕಡಲಿನ ಹಕ್ಕಿಗಳು ಈ ರೀತಿ ಗುಂಪಾಗಿ ಬೇಟೆಯಾಡುತ್ತಿವೆ ಎಂದಾದರೆ ಅಲ್ಲಿ ಮೀನು ಯಥೇಚ್ಛವಾಗಿದೆ ಎಂದರ್ಥ, ನಾವೂ ಇಂತಹ ಸ್ಥಳವನ್ನು ಹುಡುಕಿ ಅಲ್ಲಿ ಬಲೆ ಬೀಸಿ ಮೀನು ಹಿಡಿಯುತ್ತೇವೆ ಎಂದ ನಮ್ಮ ನಾವಿಕ. ಈಗ ಕೆಲವು ಹೊಸ ವಿಧಾನಗಳೂ ಬಂದಿವೆ. ಮೀನು ಸಿಗುವ ಜಾಗವನ್ನು ಹುಡುಕಿ ಅಲ್ಲಿ ಬಲೆ ಬೀಸಿ ಆ ಜಾಗಕ್ಕೆ ರಾತ್ರಿ ದೊಡ್ಡ ಹ್ಯಾಲೋಜನ್ ಬೆಳಕು ಹಾಕುತ್ತಾರಂತೆ. ಬೆಳಕಿಗೆ ಆಕರ್ಷಿತವಾಗಿ ಮೀವುಗಳು ಮೇಲಕ್ಕೆ ಬಂದು ಬಲೆಯಲ್ಲಿ ಬೀಳುತ್ತವೆ ಎಂದು ಹೊಸ ಪದ್ಧತಿಯನ್ನು ವಿವರಿಸಿದ ನಮ್ಮ ನಾವಿಕ. ಅಷ್ಟರಲ್ಲಿ ನಮ್ಮ ತಂಡದ ಶಿವಶಂಕರ್ ಸ್ಕುವಾ ಎಂದು ಕೂಗಿದಂತಾಯ್ತು. ಇದ್ಯಾಕೆ ಕಣ್ಣಾಮುಚ್ಚಾಲೆ ಆಟ ಆಡೋ ಯೋಚನೆಯೇ ಎಂದು ಯೋಚಿಸುತ್ತಾ ಅವರು ತೋರಿಸಿದ ಕಡೆ ನೋಡಿದರೆ ನಮಗೆ ಅಚ್ಚರಿ ಕಾದಿತ್ತು. 

     ನೀರಿಗೆ ಹಾರಿ ಮೀನು ಹಿಡಿಯುತ್ತಿದ್ದ ರೀವಗಳ ಕಡೆಗೆ ಅವುಗಳಿಗಿಂತ ತುಸು ದೊಡ್ಡ ಹಕ್ಕಿಯೊಂದು ಗೂಳಿಯಂತೆ‌ ನುಗ್ಗುತ್ತಾ ಬರುತ್ತಿತ್ತು. ಆ ಹಕ್ಕಿ ಬಂದದ್ದೇ ತಡ ರೀವಗಳೆಲ್ಲ ಮೀನು ಕಚ್ಚಿಕೊಂಡು ಬೇರೆ ಬೇರೆ ದಿಕ್ಕಿನಲ್ಲಿ ಚೆಲ್ಲಾಪಿಲ್ಲಿಯಾಗಿ ಹಾರತೊಡಗಿದವು. ತನ್ನ ಗುರಿಯನ್ನು ನಿರ್ಧರಿಸಿಕೊಂಡಂತೆ ಬರುತ್ತಿದ್ದ ಆ ದೊಡ್ಡ ಹಕ್ಕಿ ಒಂದು ರೀವದ ಕಡೆಗೆ ನುಗ್ಗಿಬಂತು. ಸ್ಕುವಾ ತನ್ನೆಡೆಗೇ ಬರುತ್ತಿದೆ ಎಂದು ಮನದಟ್ಟಾದ ರೀವ ತನ್ನೆಲ್ಲಾ ಶಕ್ತಿ ಹಾಕಿ ಹಾರತೊಡಗಿತು. ಆದರೂ ಬಲಶಾಲಿಯಾದ ಸ್ಕುವಾದ ಹಾರಾಟ ಅದನ್ನು ಇನ್ನೇನು ಹಿಡಿದೇ ಬಿಡುವಂತಿತ್ತು. ಅಷ್ಟರಲ್ಲಿ ರೀವ ತನ್ನ ದಿಕ್ಕನ್ನು ಬದಲಾಯಿಸಿತು. ಆದರೆ ಸ್ಕುವಾ ಅಷ್ಟೇ ವೇಗವಾಗಿ ರೀವನನ್ನು ಹಿಂಬಾಲಿಸಿ ತನ್ನ ಕೊಕ್ಕಿನಿಂದ ರೀವನ ಬಾಲ ಹಿಡಿಯಲು ಪ್ರಯತ್ನಿಸಿತು. ರೀವ ಮತ್ತೆ ತಿರುಗಿ ದಿಕ್ಕು ಬದಲಿಸಿತು, ಮೇಲೆ, ಕೆಳಗೆ, ಆಚೆ, ಈಚೆ ಎಲ್ಲಕಡೆ ತನ್ನ ಸಾಮರ್ಥ್ಯ ಬಳಸಿ ತಪ್ಪಿಸುತ್ತಿತ್ತು. ಆದರೆ ಸ್ಕುವಾ ಅಷ್ಟೇ ಲೀಲಾಜಾಲವಾಗಿ ಅದನ್ನು ಹಿಂಬಾಲಿಸಿಕೊಂಡು ಬಂದು ಆಗಾಗ ಇದನ್ನು ಹಿಡಿಯಲು ಪ್ರಯತ್ನಿಸುತ್ತಿತ್ತು. ರೀವನ ಕಥೆ ಮುಗಿಯಿತು ಇನ್ನು ಸ್ಕುವಾ ಅದನ್ನು ಹಿಡಿದೇ ಬಿಡುತ್ತದೆ ಎಂದುಕೊಂಡು ತುದಿಗಾಲಲ್ಲಿ ನಿಂತು ನೋಡುತ್ತಿದ್ದ ನಮಗೆ ಆಶ್ಚರ್ಯ ಎನಿಸುವಂತೆ ಸ್ಕುವಾ ರೀವನ ಬಾಲ ಹಿಡಿದು ಝಾಡಿಸಿತು. ಸೋಲೊಪ್ಪಿಕೊಂಡೆ ಎಂಬಂತೆ ರೀವ ತಾನು ಹಿಡಿದು ನುಂಗಿದ್ದ ಕೆಲವು ಮೀನುಗಳನ್ನು ಬಾಯಿಯಿಂದ ಹೊರಹಾಕಿತು. ಹಾಗೆ ರೀವನ ಬಾಯಿಯಿಂದ ಹೊರಬಿದ್ದ ಮೀನುಗಳನ್ನು ನೀರಿಗೆ ಬೀಳುವ ಮೊದಲೇ ಹಿಡಿದು ನುಂಗಿಬಿಟ್ಡಿತು ಸ್ಕುವಾ. ರೀವ ಹಾರಿ ತನ್ನ ಪ್ರಾಣ ಉಳಿಸಿಕೊಂಡಿತು. ಕಡಲಿನ ಮೇಲೆ ಹೀಗೊಂದು ಹಗಲು ದರೋಡೆ ನೋಡಿದ ನಾವು ಅವಾಕ್ಕಾಗಿ ನಿಂತೆವು. ರೀವನಿಗಿಂತ ಭಾರವಾದರೂ ಕಡಲಿನ ಮೇಲಿನ ಗಾಳಿ ಮತ್ತು ತೆರೆಗಳ ನಡುವೆ ಹಾರುವ ಸ್ಕುವಾ ಹಕ್ಕಿಯ ಸಾಮರ್ಥ್ಯ ಕಂಡು ಬೆರಗಾದೆವು.
         ಉತ್ತರ ಧ್ರುವದ ಆರ್ಕ್ಟಿಕ್‌ ಪ್ರದೇಶದಲ್ಲಿ ಅಂದರೆ ಕೆನಡಾ, ಗ್ರೀನ್ ಲ್ಯಾಂಡ್, ನಾರ್ವೆ ಮುಂತಾದ ದೇಶಗಳಲ್ಲಿ ಸಂತಾನೋತ್ಪತ್ತಿ ಮಾಡುವ ಈ ಹಕ್ಕಿ, ಅಲ್ಲಿ ಚಳಿಗಾಲ ಪ್ರಾರಂಭವಾಗಿ ನೀರು ಮಂಜುಗಡ್ಡೆಯಾದಾಗ ದಕ್ಷಿಣದ ಸಮುದ್ರದ ಕಡೆಗೆ ವಲಸೆ ಬರುತ್ತದೆ. ಕಡಲಿನ ಉಳಿದ ಹಕ್ಕಿಗಳು ಹಿಡಿಯುವ ಮೀನನ್ನು ಅವುಗಳಿಂದ ದರೋಡೆ ಮಾಡಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಹಾಗಾಗಿಯೇ ಇದಕ್ಕೆ ಸಮುದ್ರ ಗಿಡುಗ ಎಂಬ ಅನ್ವರ್ಥ ನಾಮ ಬಂದಿದೆ. ವಲಸೆ ಬಂದಾಗ ಸದಾ ಸಮುದ್ರದಲ್ಲೇ ಇರುವ ಈ ಹಕ್ಕಿ ತೀರಕ್ಕೆ ಬರುವುದಿಲ್ಲ. ಸಮುದ್ರದ ನಡುವೆ ಬಂಡೆಗಳಲ್ಲೇ ಉಳಿಯುತ್ತದೆ. ಈ ಹಕ್ಕಿಯನ್ನು ನೋಡಬೇಕಾದರೆ ಸಮುದ್ರದಲ್ಲಿ ಹೋಗಿಯೇ ಹುಡುಕಬೇಕು. 
ಕನ್ನಡದ ಹೆಸರು: ಸಮುದ್ರ ಗಿಡುಗ
ಇಂಗ್ಲೀಷ್ ಹೆಸರು: Arctic Skua
ವೈಜ್ಞಾನಿಕ ಹೆಸರು: Stercorarius parasiticus
ಚಿತ್ರಕೃಪೆ: ಕ್ಲಿಮೆಂಟ್ ಫ್ರಾನ್ಸಿಸ್
      ಮುಂದಿನವಾರ ಇನ್ನೊಂದು ಕಡಲಿನ ಹಕ್ಕಿಯನ್ನು ನೋಡಿದ ಕಥೆಯೊಂದಿಗೆ ಮತ್ತೆ ಭೇಟಿಯಾಗೋಣ...
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************



Ads on article

Advertise in articles 1

advertising articles 2

Advertise under the article