-->
ಜೀವನ ಸಂಭ್ರಮ : ಸಂಚಿಕೆ - 113

ಜೀವನ ಸಂಭ್ರಮ : ಸಂಚಿಕೆ - 113

ಜೀವನ ಸಂಭ್ರಮ : ಸಂಚಿಕೆ - 113
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
              

         ಮಕ್ಕಳೇ, ಈ ಕತೆ ಓದಿ..... 
ಮುಕ್ತಾಯಕ್ಕ ಎಂಬ ಶರಣೆ ಸುಮಾರು 900 ವರ್ಷಗಳ ಹಿಂದೆ ಇದ್ದಳು. ಮುಕ್ತಾಯಕ್ಕನ ವಯಸ್ಸು ಸುಮಾರು 18 ರಿಂದ 20 ಇರಬಹುದು. ಅಣ್ಣ ಅಜಗಣ್ಣನೊಂದಿಗೆ ವಾಸವಾಗಿದ್ದಳು. ಅಜಗಣ್ಣ ಶ್ರೇಷ್ಠ ಪರಮ ಜ್ಞಾನಿ. ಮುಕ್ತಾಯಕ್ಕ ಚಿಕ್ಕ ವಯಸ್ಸಿನಲ್ಲಿ ಮುಕ್ತಾವಸ್ತೆ ಅನುಭವಿಸಿದವಳು. ಅಲ್ಲಮಪ್ರಭು ಇವರ ಸಮೀಪಕ್ಕೆ ಬರುತ್ತಾರೆ. ಅಲ್ಲಮಪ್ರಭುವನ್ನು ಎದುರಿಸಿದವರು ಯಾರೂ ಇರಲಿಲ್ಲ. ಮುಕ್ತಾಯಕ್ಕ ಅಲ್ಲಮಪ್ರಭುವನ್ನೇ ಎದುರಿಸಿದಳು. ಅವರೇ ಮೆಚ್ಚುಗೆ ವ್ಯಕ್ತಪಡಿಸಿ ಹೇಳುತ್ತಾರೆ... "ನಿನ್ನನ್ನು ಹೇಗೆ ವರ್ಣಿಸಲಿ" ಎಂದು. ಆಕೆ ಸ್ವಚ್ಛ, ಸುಂದರ, ಅದ್ಭುತ ಜೀವನ ಸಾಗಿಸಿದವಳು. ಆಕೆ ಬಳಿ ಏನಿಲ್ಲ. ದೊಡ್ಡ ಮನೆ ಇಲ್ಲ. ಆದರೆ ಎಲ್ಲರೂ ತಲೆಬಾಗಿಸಿ ನಮಿಸಬೇಕು ಹಾಗೆ ಬದುಕಿದವಳು. ಆಕೆ ಜೀವನ ಸಾರ್ಥಕ ವಾಗಲು ಮೂರು ಮಾತು ಹೇಳುತ್ತಾಳೆ. ಅದು ಏನೆಂದರೆ....
"ಜ್ಞಾನಮೂಲ ಗುರು ಸೇವೆ ಎಂಬೆ, ಐಶ್ವರ್ಯ ಮೂಲ ಲಿಂಗಾರ್ಚನೆಯೆಂಬೆ, ಮೋಕ್ಷ ಮೂಲ ಘಟ ಸಂತೃಪ್ತಿ ಎಂಬೆ, ಅಜಗಣ್ಣ ತಂದೆ ನೀ ಸಾಕ್ಷಿಯಾಗಿ.
    ಆಕೆಯ ದೃಷ್ಟಿಯಲ್ಲಿ ಜೀವನ ಸಾರ್ಥಕವಾಗಲೂ ಮೂರು ಸಂಗತಿ ಬೇಕು.
1. ಜ್ಞಾನ 
2. ಐಶ್ವರ್ಯ ಮತ್ತು 
3. ಶಾಂತಿ ಸಮಾಧಾನ ಮತ್ತು ಸಂತೃಪ್ತಿ.
     ಜೀವನದಲ್ಲಿ ಪಡೆಯುವುದೇ ಈ ಮೂರು ಸಂಪತ್ತು. ಜ್ಞಾನ ಸಂಪತ್ತು, ಐಶ್ವರ್ಯ ಸಂಪತ್ತು ಮತ್ತು ಶಾಂತಿಯ ಸಂಪತ್ತು. ಇವುಗಳಲ್ಲಿ ಕೊರತೆಯಾಗುವವನೇ ಬಡವ.

1. ಜ್ಞಾನ ಸಂಪತ್ತು : ಮನುಷ್ಯನಿಗೆ ಅತಿ ಅಗತ್ಯವಾದ ಸಂಪತ್ತು ಇದು. ಜೀವನಕ್ಕೆ ಬೆಳಕು ತೋರುತ್ತದೆ. ಹೆಜ್ಜೆ ತಪ್ಪು ಇಡದಂತೆ ಕಾಪಾಡುತ್ತದೆ. ಈ ಜ್ಞಾನ ಪಡೆಯಬೇಕಾದರೆ ಯಾರು ಜ್ಞಾನಿಗಳು, ಅನುಭಾವಿಗಳೊ ಅವರ ಬಳಿ ಹೋಗಬೇಕು. ಜ್ಞಾನಿಗಳು, ಅನುಭಾವಿಗಳು ಹೇಗಿದ್ದರೇನಂತೆ. ಅವರು ಕಪ್ಪಾಗಿದ್ದರೇನು...? ಕೆಂಪಾಗಿದ್ದರೇನು...? ಗಿಡ್ಡವಾಗಿದ್ದರೇನು...? ಉದ್ದವಾಗಿದ್ದರೇನು..? ಹೆಣ್ಣಾದರೇನು...? ಗಂಡಾದರೇನು...? ಮನೆಯಲ್ಲಿದ್ದರೇನು ? ರಸ್ತೆಯಲ್ಲಿದ್ದರೇನು...? ಸುಂದರವಾಗಿದ್ದರೇನು..? ಕುರೂಪವಾಗಿದ್ದರೇನು...? ಜ್ಞಾನ ಯಾರ ಬಳಿ ಇದೆಯೋ ಅವರ ಬಳಿ ಹೋಗಿ ಜ್ಞಾನ ಪಡೆಯಬೇಕು.

      ಜ್ಞಾನ ಎಂದರೇನು...? 
ಜ್ಞಾನ ಎಂದರೆ ಈ ಜಗತ್ತು ಹೇಗಿದೆ..? ಅದರ ಸ್ವರೂಪ ಏನು...? ನಮ್ಮ ಬದುಕು ಹೇಗಿರಬೇಕು...? ಕೊನೆಗೆ ಏನು ಉಳಿಯುತ್ತದೆ...? ಅಂದರೆ ಇಂತಹ ವಿಶ್ವಜ್ಞಾನಿಯಾಗ ಬೇಕಾಗುತ್ತದೆ. ಉದಾಹರಣೆಗೆ ನಮ್ಮ ಶರೀರ ಖಾಯಂ ಅಲ್ಲ. ಜಗತ್ತು ಇದ್ದ ರೂಪದಲ್ಲಿ ಇರುವುದಿಲ್ಲ, ಸದಾ ಬದಲಾಗುತ್ತದೆ. ಯಾರು ನಮ್ಮ ಸಮೀಪಕ್ಕೆ ಬರುತ್ತಾರೋ ಅವರು ಕಾಯಂ ಆಗಿ ನಮ್ಮ ಬಳಿ ಇರುತ್ತಾರೆ ಅಂತ ಹೇಳುವ ಹಾಗಿಲ್ಲ. ಯಾವುದು ನಮಗೆ ದೊರೆಯುತ್ತದೆ ಅದು ಶಾಶ್ವತವಾಗಿ ನಮ್ಮ ಹತ್ತಿರ
ಇರುತ್ತದೆ ಅಂತ ಹೇಳುವ ಹಾಗಿಲ್ಲ. ಇಷ್ಟೆಲ್ಲಾ ಬದಲಾದರೂ ಕೂಡ ವಿಶ್ವದಲ್ಲಿ ಒಂದು ಶ್ರೇಷ್ಠ ವಸ್ತು ಇದ್ದ ಹಾಗೆ ಇರುತ್ತದೆ. ಅದು ನನ್ನೊಳಗೆ, ನಮ್ಮೊಳಗೆ ಇರುತ್ತದೆ. ಅದೇ ಆತ್ಮವಸ್ತು. ಮೋಡ ಬರುತ್ತದೆ ಹೋಗುತ್ತದೆ. ಆಕಾಶ ಹಾಗೆ ಇರುತ್ತದೆ. ಸೂರ್ಯ
ಬರುತ್ತಾನೆ ಹೋಗುತ್ತಾನೆ. ನಕ್ಷತ್ರಗಳು ಮೂಡುತ್ತವೆ ಹೋಗುತ್ತವೆ. ಬೆಳಕು ಬರುತ್ತದೆ ಹೋಗುತ್ತದೆ. ಆಕಾಶ ಹಾಗೆ ಇರುತ್ತದೆ. ಅದು ಶಾಶ್ವತ. ಉದಯಿಸಿದ ಸೂರ್ಯ ಅಸ್ತಂಗತ ಆಗಲೇಬೇಕು. ಹುಣ್ಣಿಮೆಯಲ್ಲಿ ಪೂರ್ಣ ಕಾಣುವ ಚಂದ್ರ ಅಮವಾಸ್ಯೆಯಲ್ಲಿ ಇರುವುದಿಲ್ಲ. ಬೆಳೆದ ವೃಕ್ಷ ಒಂದು ದಿನ ಮಣ್ಣಾಗಲೇಬೇಕು. ಮಣ್ಣಲ್ಲಿ ಬಿದ್ದ ಒಂದು ಬೀಜ ಚಿಗುರಲೇಬೇಕು, ಮರವಾಗಲೇಬೇಕು. ಅದರ ಒಳಗಿರುವ ಶಕ್ತಿ ಹಾಗೆ ಇರುತ್ತದೆ. ಇದೇ ಆಕಾಶಕ್ಕೆ ಶರಣರು ಬಟ್ಟ ಬಯಲು ನೋಡ ಎಂದರು. ಇದನ್ನೇ ದೇವರು ಎಂದರು. ದೇವರು ಎಂದರೆ ಎಲ್ಲದಕ್ಕೂ ಪೋಷಣೆ, ರಕ್ಷಣೆ, ಆಶ್ರಯ ನೀಡುವವನು. ಇದೇ ಭೂಮಿ, ನಕ್ಷತ್ರ, ಗ್ರಹ, ಉಪಗ್ರಹ ಎಲ್ಲದಕ್ಕೂ ಆಶ್ರಯ ನೀಡಿರುವುದೇ ಈ ಬಯಲು. ಆಕಾಶ ಇದಕ್ಕೆ ರೂಪವಿಲ್ಲ, ಆಕಾರವಿಲ್ಲ. ಆದರೆ ಎಲ್ಲಾ ಶಕ್ತಿ ಅದರಲ್ಲೇ ಅಡಗಿದೆ. ಇದಕ್ಕೆ ಪರಮ ಆತ್ಮ, ಪರಮಾತ್ಮ ಎನ್ನುವರು. ಇದು ನಾಶವಾಗುವುದಿಲ್ಲ. ಅದು ಸದಾ ಇರುತ್ತದೆ. ಎಲ್ಲಾ ಶಕ್ತಿ ಅದರಲ್ಲೇ ಇರುವುದು. ಯಾವುದೇ ಶಕ್ತಿ ಕಾಣುವುದಿಲ್ಲ. ವಿದ್ಯುತ್ ಕಾಂತಿಯ ಶಕ್ತಿ, ವಿದ್ಯುತ್ ಶಕ್ತಿ, ಗುರುತ್ವಾಕರ್ಷಣ ಶಕ್ತಿ ಯಾವುದೂ ಕಾಣುವುದಿಲ್ಲ. ಕಾಣುವುದಿಲ್ಲ ಎಂದರೆ ಇಲ್ಲ ಎಂದಲ್ಲ. ಎಲ್ಲಾ ವಿಧದ ಶಕ್ತಿ ಈ ಬಯಲಲ್ಲಿ ಇದೆ, ಆಕಾಶದಲ್ಲಿ ಇದೆ. ಶಕ್ತಿ ನಿತ್ಯತೆಯ ನಿಯಮದಂತೆ "ಶಕ್ತಿಯನ್ನು ಸೃಷ್ಟಿಸಲು ಸಾಧ್ಯವಿಲ್ಲ, ನಾಶಗೊಳಿಸಲು ಸಾಧ್ಯವಿಲ್ಲ, ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾಯಿಸಬಹುದು" ಆ ಶಕ್ತಿ ಹಾಗೆ ಇರುತ್ತದೆ ಅನ್ನುವ ಜ್ಞಾನ ಇರಬೇಕು.

2.ಐಶ್ವರ್ಯ : ಯಾವುದೂ ಇಲ್ಲದೆ ಇದ್ದರೆ ಬದುಕು ಸಾಧ್ಯವಿಲ್ಲವೋ, ಅದು ಐಶ್ವರ್ಯ, ಸಂಪತ್ತು. ಅದು ಅನ್ನ, ನೀರು, ಗಾಳಿ, ಬೆಳಕು ಮತ್ತು ನಾಲ್ಕು ಜನ ಸ್ನೇಹಿತರು. ಇವೇ ಸಂಪತ್ತು. ಇದು ಕೊರತೆ ಆಗದಂತೆ ಇರುವುದೇ ಶ್ರೀಮಂತಿಕೆ.

3. ಶಾಂತಿ, ಸಮಾಧಾನ ಮತ್ತು ಸಂತೃಪ್ತಿ : ಮನುಷ್ಯ ಶಾಂತಿ ಸಮಾಧಾನ ಸಿಗುವುದು ಸಂತೃಪ್ತಿಯಿಂದ ಇರುವುದರಲ್ಲೇ ಸಂತೃಪ್ತಿ ಪಡಬೇಕು. ನಿಸರ್ಗ ನಮ್ಮಲ್ಲಿ ಏನು ಅಳವಡಿಸಿದಿಯೋ ಅದರಲ್ಲಿ ಸಂತೃಪ್ತಿ ಪಡಬೇಕು. ಬದುಕಲು ಇದೇ ಬೇಕು ಅದೇ ಬೇಕು ಅಂತ ಅಲ್ಲ. ಅದಕ್ಕೆ ಋಷಿ ಮುನಿಗಳು ಹೇಳಿದ್ದು ಅನ್ಯ ಆಶ್ರಯ ಸಲ್ಲದು. ಬದುಕಲು ಇದೇ ಬೇಕು ಅಂತ ಅಲ್ಲ. ಇದು ಸಿಕ್ಕಿದರೆ ಇದು. ಅದು ಸಿಕ್ಕಿದರೆ ಅದು. ಹೀಗೆ ಇರಬೇಕು, ಇಂತಹುದೇ ಬೇಕು, ಅಂತ ಅಲ್ಲ ಮತ್ತು ನಿತ್ಯ ತೃಪ್ತಿ ಇರಬೇಕು. ಇರುವುದರಲ್ಲಿ ತೃಪ್ತಿ ಪಡಬೇಕು. ಇದಕ್ಕೆ ವಿಲಿಯಂ ಶೇಕ್ಸ್ ಪಿಯರ್ ಹೇಳಿದ್ದು ನೆನಪಾಗುತ್ತಿದೆ "ನಾನು ರಾಜರ ರಾಜ, ನನ್ನ ಕಿರೀಟ ಚಿನ್ನ, ಮುತ್ತು ಮತ್ತು ರತ್ನದಿಂದ ಮಾಡಿದ್ದಲ್ಲ. ಅದು ಸಂತೃಪ್ತಿಯಿಂದ ಮಾಡಿದ್ದು. ಅದು ನನ್ನ ತಲೆಯ ಮೇಲಿಲ್ಲ. ಅದು
ನನ್ನ ಎದೆಯೊಳಗೆ ಇದೆ. ಚಿನ್ನದ ಕಿರೀಟ ಯಾರಾದರೂ ದೋಚಬಹುದು, ನನ್ನದನ್ನು ಯಾರು ದೋಚಲು ಸಾಧ್ಯವಿಲ್ಲ. ಏಕೆಂದರೆ ಅದು ಸಂತೃಪ್ತಿಯಿಂದ ಕೂಡಿದೆ. ಸಂತೃಪ್ತಿಯೇ ಶ್ರೀಮಂತಿಕೆ. ನಾವು ಹೊಂದಿರುವ ವಸ್ತುಗಳು ಒಡವೆಗಳಲ್ಲ ಅಲ್ಲವೇ. ಮಕ್ಕಳೇ .
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************Ads on article

Advertise in articles 1

advertising articles 2

Advertise under the article