-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 91

ಸ್ಫೂರ್ತಿಯ ಮಾತುಗಳು : ಸಂಚಿಕೆ - 91

ಸ್ಫೂರ್ತಿಯ ಮಾತುಗಳು : ಸಂಚಿಕೆ - 91
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

                          
      ನೋಟಕ್ಕೂ ಮನಸ್ಸಿಗೂ ನೇರ ಸಂಬಂಧವಿರುವಂತೆ ನೋಟಕ್ಕೂ ಯೋಚನೆಗೂ ನೇರ ಸಂಬಂಧ ಇದೆ. ನೋಟವನ್ನು ದೃಷ್ಟಿ ಅಥವಾ ದೃಷ್ಟಿಕೋನ ಎಂದೂ ಮನನ ಮಾಡಿದರೆ ಹೆಚ್ಚು ಅರ್ಥಪೂರ್ಣವಾಗುತ್ತದೆ. ನೋಡುವುದರಲ್ಲಿ ಗಮನದ ಕೇಂದ್ರೀಕರಣವಾದರೆ ಮನಸ್ಸಿಗೇನೋ ಹೊಳೆಯುತ್ತದೆ. ಕೇವಲ ಕಣ್ಣೋಡಿಸಿದ ಮಾತ್ರಕ್ಕೆ ಏನೇನೂ ಹೊಳೆಯದು. ನೋಟದ ಸಫಲತೆಯು ಶ್ರದ್ಧೆಯ ಗಮನವನ್ನು ಆಧರಿಸಿರುವುದರ ಜೊತೆಗೆ ಯೋಚನೆಯ ಕ್ಷಮತೆ ಮತ್ತು ಮಿತಿಯನ್ನು ಆಧರಿಸಿರುತ್ತದೆ.

       “ಸಂತೆಗೆ ಹೋದೆಯಾ?” ಹೌದು ಎಂದು ಉತ್ತರ ಬರುತ್ತದೆ. “ಆ ಸಂತೆಯಲ್ಲಿ ಎಷ್ಟು ತರಕಾರಿ ಅಂಗಡಿಯಿತ್ತು?” ಎಂಬ ಪ್ರಶ್ನೆಗೆ ನಿಖರವಾದ ಉತ್ತರವಿರದು. ಈ ರೀತಿ ಯಾಕಾಗುತ್ತದೆ? ನಾವೆಲ್ಲಿ ತಪ್ಪಿದ್ದೇವೆ? ನಮಗೆ ಎಲ್ಲಿ ಯಾರು ಮೋಸ ಮಾಡಿದ್ದಾರೆ? ಎಂದು ವಿಮರ್ಶಿಸಿದರೆ ಹೊಣೆಗಾರರನ್ನು ಪತ್ತೆ ಮಾಡುವುದು ಸುಲಭ. ಕಣ್ಣುಗಳ ತಪ್ಪೇ? ಊಹುಂ. ನಮ್ಮ ನೋಡುವ ದೃಷ್ಟಿಕೋನದ ತಪ್ಪು ಎಂಬುದೇ ದಿಟ. ಯಕ್ಷಗಾನದ ಸ್ತ್ರೀ ಪಾತ್ರದಲ್ಲಿ ಒಳ ಹೊಕ್ಕು ನೋಡಿದರೆ ಸ್ತ್ರೀಯೇ ಕಾಣಿಸುವಳು. ವೇಷವೆಂದು ಹೊರ ನೋಟದಿಂದ ತೀರ್ಮಾನಿಸಿದರೆ ಅದು ಪಾತ್ರಧಾರಿಯ ಆಧಾರದಲ್ಲಿ ನಿರೂಪಿವಾಗುತ್ತದೆ.

        ಜೇನು ಪೆಟ್ಟಿಗೆಯನ್ನು ನೋಡಿದರೆ ಅದು ಕೇವಲ ಪೆಟ್ಟಿಗೆ. ಕೇವಲ ಜೇನನ್ನು ನೋಡುವುದಾದರೆ ಅದು ಸಿಹಿಯಾದ ಜೇನು. ಜೇನು ನೊಣಗಳನ್ನು ಗಮನಿಸಿದರೆ ಅವು ಕೇವಲ ನೊಣಗಳು ಮಾತ್ರ. ಜೇನು ನೊಣ, ಜೇನು ಪೆಟ್ಟಿಗೆ, ಜೇನು ಇತ್ಯಾದಿಗಳನ್ನು ಒಳನೋಟಕ್ಕೊಳಪಡಿಸಿದರೆ ಜೇನು ನೊಣಗಳ ಶ್ರಮ, ಪೆಟ್ಟಿಗೆ ನೀಡುವ ಭದ್ರತೆ, ಹೂವುಗಳು, ಅವುಗಳಿಂದ ಬರುವ ಮಕರಂಧ, ಮಕರಂಧ ಹೀರುವ ಕೌಶಲ್ಯ, ಹೂವುಗಳನ್ನು ಬೆಳೆಯುವ ರೈತನ ತ್ಯಾಗ, ಗಿಡಗಳಿಗೆ ನೀರು, ಗಾಳಿ ಮತ್ತು ಬೆಳಕಿನೊಂದಿಗೆ ಆಹಾರವನ್ನು ಒದಗಿಸುವ ಪ್ರಕೃತಿ... ಹೀಗೆ ಹಲವಾರು ಸಂಗತಿಗಳ ಭಾಗೇದಾರಿಕೆಯ ಅರಿವಾಗುತ್ತದೆ. ಸಮಷ್ಠಿಯ ಹಿತದಲ್ಲಿ ಎಲ್ಲರ ಒಟ್ಟುಗೂಡುವಿಕೆಯ ಮಹತ್ವ ಮನನವಾಗುತ್ತದೆ.

      ಊಟ ಮಾಡುವಾಗ ವಿತರಣೆಯಾದ ಸಾರು ಕೆಲವರಿಗೆ ಅತ್ಯಂತ ರುಚಿಕರ, ಪರಿಮಳಯುಕ್ತ, ಸಮಪಾಕವಾಗಿ ಅನುಭವಕ್ಕೆ ಬರುತ್ತದೆ. ಕೆಲವರು ಉಪ್ಪು ಜಾಸ್ತಿಯಾಯಿತು, ತೆಳ್ಳಗಾಯಿತು, ಖಾರ ಜಾಸ್ತಿಯಾಯಿತು, ರುಚಿ ಸಾಲದು, ಪರಿಮಳವಿರಲಿಲ್ಲ... ಹೀಗೆ ಕೊರತೆಗಳ ಪಟ್ಟಿ ಬೆಳೆಯುತ್ತದೆ. ದೋಷ ಸಾರಿನದಲ್ಲ. ಋಣಾತ್ಮಕ ಚಿಂತಕರ ನೋಟ ಮತ್ತು ಧನಾತ್ಮಕ ಚಿಂತಕರ ನೋಟಗಳು ವೈರುಧ್ಯಮಯವಾಗಿರುವುದು ಸಹಜ. ಸರಕಾರಿ ಕಚೇರಿಗೆ ಬರುವ ಬಡವ ಮತ್ತು ಶ್ರೀಮಂತನನ್ನು ಉಪಚರಿಸುವ ವಿಧಾನದಲ್ಲಿ ವ್ಯತ್ಯಾಸವಾಗಲು ವ್ಯಕ್ತಿಗಳ “ನೋಟ” ಗಳೇ ಕಾರಣ.

     ಧನಾತ್ಮಕ ನೋಟಗಳು ಸಾಮಾಜಿಕ ನ್ಯಾಯಕ್ಕೆ ಹೇತು. ಋಣಾತ್ಮಕ ನೋಟಗಳು ಸಾಮಾಜವನ್ನು ಬೆಳೆಸವು. ನೋಟ ಸರಿಯಿಲ್ಲದೆ ಇದ್ದಾಗ ಅನ್ಯಾಯವೇ ಘಟಿಸುತ್ತದೆಂದು ಅರ್ಥೈಸಬೇಕು. ಎಲ್ಲರನ್ನೂ ಎಲ್ಲವನ್ನೂ ಸಮಾನ ಗೌರವದಿಂದ ನೋಡುವ ಧನಾತ್ಮಕ ನೋಟ ನಮಗಿರಲಿ. ಪ್ರತಿಯೊಬ್ಬರ ಚೈತನ್ಯಕ್ಕೂ ಪರಿಪೂರ್ಣವಾದ ಗೌರವ ಒದಗುತ್ತಿರಲಿ. ಸಮಾನತೆಯ ಭಾವ ಎಲ್ಲೆಡೆ ಹಬ್ಬಲಿ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 



Ads on article

Advertise in articles 1

advertising articles 2

Advertise under the article