-->
ಜಗಲಿ ಕಟ್ಟೆ : ಸಂಚಿಕೆ - 27

ಜಗಲಿ ಕಟ್ಟೆ : ಸಂಚಿಕೆ - 27

ಜಗಲಿ ಕಟ್ಟೆ : ಸಂಚಿಕೆ - 27
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


       ಮಕ್ಕಳ ಜಗಲಿಯ ಮೂಲಕ ವಿದ್ಯಾರ್ಥಿಗಳಿಗೆ ನಿರಂತರ ಚಟುವಟಿಕೆಗಳನ್ನು ನೀಡುತ್ತಾ ಸಕ್ರಿಯಗೊಳಿಸುವುದು ನಮ್ಮ ಉದ್ದೇಶ. ಈಗಾಗಲೇ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳ ಪ್ರಶಸ್ತಿ ಪತ್ರಗಳು ಸಿದ್ಧವಾಗ್ತಾ ಇದೆ. ಸದ್ಯದಲ್ಲೇ ಅಂಚೆ ಮೂಲಕ ಕಳುಹಿಸಲಿದ್ದೇವೆ.
    ಈಗ ಇನ್ನೊಂದು ಸ್ಪರ್ಧೆಯ ಸಂಭ್ರಮದಲ್ಲಿದ್ದೇವೆ. ಮೂರನೇ ವರ್ಷದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಈ ಸ್ಪರ್ಧೆಯಲ್ಲೂ ಕೂಡ ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸುವಂತೆ ನಿಮ್ಮೆಲ್ಲರ ಸಹಕಾರ ಬೇಕು. ಕರ್ನಾಟಕದ ಮೂಲ ನಿವಾಸಿ ವಿದ್ಯಾರ್ಥಿಗಳು ದೇಶದ ಯಾವ ಭಾಗದಲ್ಲೇ ಇದ್ದರೂ ಭಾಗವಹಿಸಲು ಅವಕಾಶ ನೀಡಲಾಗಿದೆ. ಈ ಸ್ಪರ್ಧೆಯ ಪ್ರತಿ ವಿಭಾಗದಲ್ಲಿ ಮೂವರು ವಿದ್ಯಾರ್ಥಿಗಳಿಗೆ ಮಕ್ಕಳ ಜಗಲಿ ಕಲಾ ಪ್ರಶಸ್ತಿಯನ್ನು ನೀಡುತ್ತೇವೆ. ಒಂದು ಬಾರಿ ಕಲಾ ಪ್ರಶಸ್ತಿಯನ್ನು ಪಡೆದುಕೊಂಡ ವಿದ್ಯಾರ್ಥಿಯ ಪ್ರತಿಭೆಯನ್ನು ಅತ್ಯುತ್ತಮವೆಂದು ಪರಿಗಣಿಸಲಾಗುವುದು. ಒಂದೇ ವಿಭಾಗದಲ್ಲಿ ಎರಡೆರಡು ಬಾರಿ ಪ್ರಶಸ್ತಿಗಳನ್ನು ನೀಡಲಾಗುವುದಿಲ್ಲ. ಹಾಗಾಗಿ ಅದೇ ವಿಭಾಗದಲ್ಲಿ ಮತ್ತೊಮ್ಮೆ ಭಾಗವಹಿಸಿದರೂ ಪ್ರಶಸ್ತಿಗೆ ಪರಿಗಣಿಸದೆ ಮೆಚ್ಚುಗೆ ಬಹುಮಾನ ನೀಡಲಾಗುವುದು. ಈ ಕಾರಣದಿಂದ ಹೊಸ ಪ್ರತಿಭೆಗಳ ಬೆಳಕಿಗೆ ಪ್ರೇರಣೆಯಾಗುತ್ತದೆ..
      ಮಕ್ಕಳ ಜಗಲಿಯ ಆರಂಭದಿಂದ ಚಿತ್ರಗಳನ್ನು ಮಾಡ್ತಾ ಮಕ್ಕಳ ಜಗಲಿಯಲ್ಲಿ ಪ್ರಕಟಗೊಳಿಸ್ತಾ ಬೆಳೆದ ಮಕ್ಕಳನ್ನು ನಾನು ಇಲ್ಲಿ ಗಮನಿಸಿದ್ದೇನೆ. ಅನೇಕ ವಿದ್ಯಾರ್ಥಿಗಳು ಯಾವುದೇ ತಜ್ಞ ಶಿಕ್ಷಕರ ತರಬೇತಿಯಿಲ್ಲದೆ ಸ್ವಂತ ಪರಿಶ್ರಮದಿಂದ ಬೇರೆಯವರ ಕಲಾಕೃತಿಗಳನ್ನು ಗಮನಿಸುತ್ತಾ ಬೆಳೆದ ಹಂತಗಳನ್ನು ಗುರುತಿಸಿದ್ದೇವೆ. ಇಲ್ಲಿ ಸ್ಪರ್ಧೆಗಳು ಅನ್ನುವುದು ಸಾಂಕೇತಿಕವಾದರೂ ನಿರಂತರ ಶ್ರಮ, ಅಭ್ಯಾಸಗಳು ಅನ್ನೋದು ಪ್ರತಿಭೆಗಳನ್ನು ಖಂಡಿತವಾಗಲೂ ಬೆಳೆಸುತ್ತದೆ. ಮಕ್ಕಳ ಜಗಲಿಯ ಉದ್ದೇಶ ಕೇವಲ ಸ್ಪರ್ಧೆಗಳನ್ನು ನಡೆಸುವುದಾಗಿ ಅಲ್ಲ. ಬದಲಾಗಿ ಸ್ಪರ್ಧೆಗಳ ಕಾರಣಕ್ಕಾಗಿ ವಿದ್ಯಾರ್ಥಿಗಳನ್ನು ಸೇರಿಸಿ ಆ ಮೂಲಕ ವಿದ್ಯಾರ್ಥಿಗಳಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುವುದು. 
       ಇತ್ತೀಚೆಗೆ ಕಥೆ ಮತ್ತು ಕವನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಹಾಗೂ ಮೆಚ್ಚುಗೆ ಬಹುಮಾನ ಪಡೆದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಬರೆದು ಕಳಿಸಿದ್ದರು. ಅವರ ಒಟ್ಟು ಆಶಯ ಹಾಗೂ ಬದಲಾವಣೆಗಳು ಈ ನಾಡಿಗೆ ಶ್ರೇಷ್ಠ ಮಕ್ಕಳನ್ನು ಕೊಡುಗೆಯಾಗಿ ನೀಡಲಿದೆ. ಮಕ್ಕಳ ಜಗಲಿ ಆಶಯವೂ ಇದೇ.... ಪ್ರತಿಯೊಬ್ಬ ಮಗು ಶ್ರೇಷ್ಠನಾಗಬೇಕು. ಯಾವುದಾದರೂ ಒಂದು ಕಲೆಗಳಲ್ಲಿ ಪರಿಣತಿ ಪಡೆದು ಈ ನಾಡಿಗೆ ಸಂಪನ್ಮೂಲವಾಗಬೇಕು. ಆ ಮೂಲಕ ಸಂಸ್ಕಾರವಂತ ಮಗು ಈ ನಾಡಿಗೆ ಕೊಡುಗೆಯಾಗಬೇಕೆನ್ನುವುದಾಗಿದೆ. ನಮಸ್ಕಾರ
     

ಕಳೆದ ಸಂಚಿಕೆಯ ಜಗಲಿಕಟ್ಟೆ - 26 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ ಮತ್ತು ವಿದ್ಯಾ ಗಣೇಶ್ ಚಾಮೆತ್ತಮೂಲೆ.... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


     ಮಕ್ಕಳು ಕಲಿಯಲು ಶಿಕ್ಷಕರ ಹೆದರಿಕೆ, ಶಿಕ್ಷೆ ಬೇಕೇ ಬೇಕು ಎಂಬದು ಬಹುತೇಕ ಪೋಷಕರ ಮತ್ತು ಶಿಕ್ಷಕರ ನಂಬಿಕೆ ಕೂಡ ಆಗಿದೆ. ಬೆತ್ತ ಹಿಡಿಯದ ಶಿಕ್ಷಕರು ಅಪರಾಧಿಗಳು, ಮಕ್ಕಳ ಉದಾಸೀನತೆಗೆ ಕಾರಣವಾಗುವವರು ಎಂದು ಯೋಚಿಸುವ ವರ್ಗವೂ ಇದೆ. ಮಕ್ಕಳನ್ನು ಹೆದರಿಸಿ, ಶಿಕ್ಷಿಸಿ ಓದಿಸಿ ಎಂದು ಒತ್ತಾಯಿಸುವ ಮಂದಿಯೂ ಇಲ್ಲದಿಲ್ಲ. ಆದರೆ ಹೆದರಿಕೆ ಯಾವ ರೀತಿ ಎಳೆಯ ಮನಸ್ಸುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲದು ಎನ್ನುವುದನ್ನು ತಿಳಿಸುವ ಸೊಗಸಾದ ಬರಹ ಮತ್ತು ಚಂದದ ನಿರೂಪಣೆ. ಎಲ್ಲ ಪೋಷಕರೂ, ಶಿಕ್ಷಕರೂ ಓದಲೇಬೇಕಾದ ಕಣ್ತೆರೆಸುವ ಬರಹ... ಹೃದಯದ ಮಾತು ಸಂಚಿಕೆ -18.  
.......................................... ವಿದ್ಯಾ ಕಾರ್ಕಳ
ಸಹಶಿಕ್ಷಕಿ , ಸರಕಾರಿ ಹಿರಿಯ 
ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿ 
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************ಎಲ್ಲರಿಗೂ ನಮಸ್ಕಾರಗಳು,
     "ಮನಸ್ಸಿದ್ದರೆ ಮಾರ್ಗವಿದೆ" ಎನ್ನುವ ಗಾದೆ ಮಾತಿನಂತೆ ನಾವು ಮನಸ್ಸು ಮಾಡಿದಾಗ ಏನನ್ನು ಬೇಕಾದರೂ ಸಾಧಿಸಬಹುದೆಂಬ ಕಿವಿಮಾತಿನೊಂದಿಗೆ ಶ್ರೀ ಜ್ಞಾನೇಶ್ ಸರ್ ರವರ ಜೀವನ ಸಂಭ್ರಮ ಸಂಚಿಕೆ ಇಷ್ಟವಾಯಿತು.
    'ನೀ ನನಗಿದ್ದರೆ ನಾ ನಿನಗೆ ನೆನಪಿರಲಿ ನುಡಿ ನಮ್ಮೊಳಗೆ' ಎನ್ನುವ ಸಾರಾಂಶದ ಕೈಯಾರ ಕಿಂಞಣ್ಣ ರೈಯವರ ಪದ್ಯವನ್ನು ನಾನೂ ಕೂಡ ಪ್ರಾಥಮಿಕ ಶಾಲೆಯಲ್ಲಿ ಕಲಿತ ನೆನಪು. ಪರಸ್ಪರ ಸಹಕಾರವಿದ್ದಾಗ ಮಾತ್ರ ಜೀವನ ಸುಗಮ ಎನ್ನುವ ಸಾರವನ್ನು ರಮೇಶ್ ಸರ್ ರವರು ಮೇಲಿನ ಪದ್ಯದ ಉದಾಹರಣೆಯೊಂದಿಗೆ ಬಹಳ ಸೊಗಸಾಗಿ ವಿವರಿಸಿದ್ದಾರೆ.
    ನಾವೆಲ್ಲರೂ ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕೆನ್ನುವ ಕಿವಿಮಾತಿನೊಂದಿಗೆ ದಿವಾಕರ ಸರ್ ರವರ ಈ ಸಲದ ವಿಜ್ಞಾನದ ಕುರಿತಾದ ಸಂಚಿಕೆ ಚೆನ್ನಾಗಿತ್ತು.
    ಅಬ್ಬಾ.... ಹಕ್ಕಿಗಳ ಅದ್ಭುತ ಛಾಯಾಚಿತ್ರ ಅರವಿಂದ ಸರ್ ರವರ ಕೆಮರಾದಿಂದ. ಜೊತೆಗೆ ಸುಂದರ ವಿವರಣಾತ್ಮಕ ಪರಿಚಯ. ಗಂಡು ಹಾಗೂ ಹೆಣ್ಣು ಹಕ್ಕಿಗಿರುವ ವ್ಯತ್ಯಾಸ ಛಾಯಾ ಚಿತ್ರದಲ್ಲೇ ಗುರುತಿಸಬಹುದು.
     ವಿಜಯಾ ಮೇಡಂರವರ ಈ ಸಲದ ಸಂಚಿಕೆಯಲ್ಲಿ ಉತ್ತರಾಣಿ ಗಿಡದ ಪರಿಚಯ ಸೊಗಸಾಗಿ ಮೂಡಿ ಬಂದಿದೆ.
     ವೃತ್ತಿಯಲ್ಲಿ ಶಿಕ್ಷಕರಾದ ಕಾರಣದಿಂದ ತನ್ನ ಮಗಳ ವೈಫಲ್ಯಕ್ಕೆ ಕಾರಣವನ್ನು ಹುಡುಕಿದ ತಂದೆ ಹಾಗೂ ಅದನ್ನು ಪರಿಹರಿಸಿದ ರೀತಿ ಅದ್ಭುತವಾಗಿತ್ತು. ಯಾಕೂಬ್ ಸರ್ ರವರ ಹೃದಯದ ಮಾತು ಈ ಸಲದ ಸಂಚಿಕೆ ಉತ್ತಮವಾಗಿತ್ತು.
     ವಾಣಿಯಕ್ಕ ನವರಿಂದ ಈ ಸಲ 'ಪರಿಸರದ ಉಪಾಸಕಿ' ಎನ್ನುವ ಸುಂದರ ಪುಸ್ತಕವನ್ನು ಪರಿಚಯಿಸಿದ್ದಾರೆ. ಕೊಂಡು ಓದಲೇ ಬೇಕಾದ ಪುಸ್ತಕ.
     ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಕನಿಕರಕ್ಕಿಂತ ಅವರ ಅಗತ್ಯತೆಯನ್ನು ಪೂರೈಸಿದಲ್ಲಿ ಆಗುವ ತೃಪ್ತಿ ಸಂತೋಷದ ಕುರಿತಾದ ರಾಜೇಶ್ ನೆಲ್ಯಾಡಿಯವರ ಚಿಕ್ಕದಾದ ಚೊಕ್ಕ ಅನುಭವದ ಮಾತು ಸೊಗಸಾಗಿತ್ತು. ರಮೇಶ್ ಉಪ್ಪುಂದರವರ ಪದಬಂಧ ಸಂಚಿಕೆ ಕೂಡ ಚೆನ್ನಾಗಿತ್ತು.
     ಮಕ್ಕಳ ಕವನಗಳಲ್ಲಿ ದೀಪ್ತಿಯವರ ಕವನಗಳು ಚೆನ್ನಾಗಿವೆ. ಮಕ್ಕಳ ಚಿತ್ರಗಳ ಸಂಚಿಕೆಗಳಲ್ಲಿ ಮಕ್ಕಳ ಎಲ್ಲಾ ಚಿತ್ರಗಳು ಚೆನ್ನಾಗಿವೆ. ಅದರಲ್ಲೂ ಬಿಂದು ಅವರ ಚಿತ್ರಗಳು ಅದ್ಭುತವಾಗಿವೆ. ಕವನ ಹಾಗೂ ಚಿತ್ರ ರಚಿಸಿದ ಮಕ್ಕಳಿಗೆ ಅಭಿನಂದನೆಗಳು.
     ಈ ವಾರದ ಮಕ್ಕಳ ಜಗಲಿಯಲ್ಲಿ ಲೇಖನಗಳ ಮೂಲಕ ಸ್ಪೂರ್ತಿ ತುಂಬಿದ ಹಿರಿಯರಿಗೆ ಹಾಗೂ ಮಕ್ಕಳಿಗೆ ನನ್ನ ನಮನಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************     ನಮಸ್ತೇ ಸರ್, ನಾನು ಬಂಟ್ವಾಳ ತಾಲೂಕಿನ ಕನ್ಯಾನ ಶಾಲೆಯ ಸಹ ಶಿಕ್ಷಕಿ. ಮಕ್ಕಳ ಜಗಲಿಯಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯು ಒಂದು ಅತ್ಯುತ್ತಮವಾದಂತಹ ಕಾರ್ಯಕ್ರಮವಾಗಿದೆ. ಇದರಿಂದ ರಾಜ್ಯದ ಪ್ರತಿ ಭಾಗದ ವಿದ್ಯಾರ್ಥಿಗಳು ಸುಲಭವಾಗಿ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ ಹಾಗೂ ಪ್ರಯೋಜನಕಾರಿಯಾಗಿದೆ. 
      ಸರ್, ನನ್ನದೊಂದು ಕೋರಿಕೆ:- ಚಿತ್ರಕಲಾ ಸ್ಪರ್ಧೆಯ ವಿಭಾಗದಲ್ಲಿ LKG-UKG ವಿಭಾಗ ಎಂದು ಒಂದು ವಿಭಾಗವನ್ನು ಪರಿಗಣಸಬಹುದೇ...? ಮಕ್ಕಳ ಜಗಲಿಯು ಸಣ್ಣ ಮಕ್ಕಳಿಂದ ಪಿಯುಸಿ ಯವರೆಗಿನ ವಿದ್ಯಾರ್ಥಿಗಳಿಗೋಸ್ಕರ ಇರುವಂತಹ ಒಂದು ಅತ್ಯುತ್ತಮವಾದಂತಹ ವೇದಿಕೆಯಾಗಿದೆ. ಇದರಲ್ಲಿ ಪ್ರಕಟವಾಗುವ LKG UKG ಮಕ್ಕಳ ಚಿತ್ರಗಳನ್ನು ನೋಡಿದ್ದೇನೆ ಹಾಗೂ ನಿಬ್ಬೆರಗಾಗಿ ಖುಷಿ ಪಟ್ಟಿದ್ದೇನೆ. ಯಾವುದೇ ಕಡೆಗಳಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ನಿಯೋಜಿಸುವಾಗ 1 ರಿಂದ 4 ನೇ ತರಗತಿ ಎಂದು ಪ್ರಾರಂಭವಾಗುತ್ತದೆ ಹೊರತು LKG UKG ವಿಭಾಗವೆಂದು ಪರಿಗಣಿಸುವುದಿಲ್ಲ. ಬಹುಮಾನವಿಲ್ಲದಿದ್ದರೂ ಪರವಾಗಿಲ್ಲ, ಮೆಚ್ಚುಗೆಯ ಪ್ರಶಸ್ತಿ ನೀಡಿ, ಮಕ್ಕಳ ಜಗಲಿಯಲ್ಲಿ LKG- UKG ವಿಭಾಗವೆಂದು ಇದ್ದಿದ್ದರೆ ಎಲ್ಲೂ ಸಿಗದ ಒಂದು ಅವಕಾಶ ಅವರಿಗೂ ಈ ಜಗಲಿಯಲ್ಲಿ ದೊರಕುತ್ತಿತ್ತು ಎನ್ನುವುದು ನನ್ನ ಅಭಿಪ್ರಾಯ.. ಧನ್ಯವಾದಗಳು
............................................. ಸುಮಿತಾ
ಸಹಶಿಕ್ಷಕಿ , ಕನ್ಯಾನ  
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************


   "ಮಕ್ಕಳ ಜಗಲಿ" ಎಂಬ ಪತ್ರಿಕೆಯ ಮೂಲಕ ಮಕ್ಕಳ ಪ್ರತಿಭೆಯನ್ನು ಹೊರಹೊಮ್ಮಿಸುವ ನಿಮ್ಮ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಚಿಕ್ಕ ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿ ಮೂಡಿಸಿ ಮುಂದಿನ ದಿನಗಳಲ್ಲಿ ಉತ್ತಮ ಸಾಹಿತಿ, ಲೇಖಕ, ಕವಿಗಳ ಹುಡುಕುವ ಪ್ರಯತ್ನ ತುಂಬಾ ಸಂತಸದಾಯಕ. ಚಿತ್ರಕಲೆಯ ಮೂಲಕ ಮನಸ್ಸಿನ ಭಾವನೆಗಳನ್ನು ವ್ಯಕ್ತ ಪಡಿಸಿ ಸುಂದರ ಪ್ರಪಂಚವನ್ನು ನಿರ್ಮಿಸುವ ಕಲೆಯ ಅನಾವರಣ ನಿಜಕ್ಕೂ ಮೆಚ್ಚುವಂತಹುದು. ನಿಮ್ಮ ಇಂತಹ ಕಾರ್ಯಕ್ರಮಗಳು ನಿರಂತರವಾಗಲಿ. ಸಂಘಟಿಸುವ ನಿಮಗೆ ಭಗವಂತನ ಕೃಪೆ ಇರಲಿ ಆಯುಷ್ಯ, ಆರೋಗ್ಯ ನೀಡಲಿ ಎಂಬ ಪ್ರಾರ್ಥನೆಯೊಂದಿಗೆ .....
................. ಎಸ್ ಪಿ ರಝೀಯಾ ಭದ್ರಾವತಿ
(ಇರ್ವತ್ತೂರು ಪದವು)
*****************************************


      ನಮಸ್ಕಾರಗಳು.... 3 ವರ್ಷಗಳ ಸಂಭ್ರಮವನ್ನು ತುಂಬಾ ಖುಷಿಯಿಂದ ಆಚರಿಸಿದೆವು. ಮಕ್ಕಳ ಜಗಲಿ ಎಂಬ ಡಿಜಿಟಲ್ ಪತ್ರಿಕೆ ಆರಂಭ ಆದದ್ದು ಸಂತೋಷದ ಸಂಗತಿ. ಹೌದು ಕೋರೋನ ಬಂದು ನಾವು ಮನೆಯಲ್ಲಿ ತುಂಬಾ ಬೇಜಾರಾಗಿ ಇದ್ದೆ. ಆವಾಗ ಈ ಮಕ್ಕಳ ಜಗಲಿ ವಿಷಯ ತಿಳಿದು ತುಂಬಾ ಖುಷಿ ಆಯ್ತು. ಈ ಮಕ್ಕಳ ಜಗಲಿ ಎಂಬುದು ಇದೆ ಅಂತ ಪರಿಚಯಿಸಿದ್ದು ನನ್ನ ಗೆಳತಿ ವೈಷ್ಣವಿ ಕಾಮತ್. ನನ್ನ ಜೀವನದಲ್ಲಿ ಎಷ್ಟೊಂದು ಅಂಶವನ್ನು ಅಳವಡಿಸಿ ಕೊಂಡಿದ್ದೇನೆ, ಅವಳಿಗೆ ಧನ್ಯವಾದ ಹೇಳುತ್ತ ಮುಂದಿನ ಪ್ರತಿ ಸಂಚಿಕೆಯನ್ನೂ ನೋಡಲು ಕುಶಿ ಪಡುತ್ತೇನೆ.....
............................................... ಧನ್ಯಶ್ರೀ
7ನೇ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ 
ಹನುಮಾನ್ ನಗರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ವಿದ್ಯಾ ಕಾರ್ಕಳ
ಸಹಶಿಕ್ಷಕಿ , ಸುಮಿತಾ ಸಹಶಿಕ್ಷಕಿ, ಎಸ್ ಪಿ ರಝೀಯಾ ಭದ್ರಾವತಿ, ಧನ್ಯಶ್ರೀ 7ನೇ ತರಗತಿ.... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************
Ads on article

Advertise in articles 1

advertising articles 2

Advertise under the article