-->
ಜೀವನ ಸಂಭ್ರಮ : ಸಂಚಿಕೆ - 110

ಜೀವನ ಸಂಭ್ರಮ : ಸಂಚಿಕೆ - 110

ಜೀವನ ಸಂಭ್ರಮ : ಸಂಚಿಕೆ - 110
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ     ಮಕ್ಕಳೇ, ಈ ಮೂರು ಘಟನೆಗಳನ್ನು ಓದಿ. ನಾವೆಲ್ಲ ಮಾಲ್ ಗಳಿಗೆ ಹೋಗುತ್ತೇವೆ. ಅಲ್ಲಿ ಅವರು ಅಲ್ಲಿರುವ ವಸ್ತುಗಳನ್ನು ಸುಂದರವಾಗಿ ಜೋಡಿಸಿರುತ್ತಾರೆ. ಯಾವುದು ಮೊದಲು ಕಾಣಬೇಕು.? ಯಾವುದು ಕೊನೆಯಲ್ಲಿ ಇರಬೇಕು.? ಹೇಗೆ ಜೋಡಿಸಿದರೆ ಆಕರ್ಷಕವಾಗಿ ಕಾಣುತ್ತದೆ..?. ಅದನ್ನು ನೋಡಬೇಕು. ಅನಾವಶ್ಯಕವೂ ಅದುದನ್ನು ಮೊದಲಿಗೆ ಆಕರ್ಷಕವಾಗಿ ಜೋಡಿಸುತ್ತಿರುತ್ತಾರೆ. ಅದಕ್ಕೆ ರಿಯಾಯಿತಿ ಏನು ಅನ್ನುವುದನ್ನು ಅಂದವಾಗಿ ಹಾಕಿರುತ್ತಾರೆ. ಬದುಕಿಗೆ ಬೇಕಾದುದ್ದನ್ನು, ಆಹಾರ ಪದಾರ್ಥಗಳು ಕೊನೆಯಲ್ಲಿ ಇರುತ್ತದೆ. ಎಲ್ಲವನ್ನು ಸ್ವಚ್ಛವಾಗಿ ಇಟ್ಟಿರುತ್ತಾರೆ. ಹಿತವಾದ ತಂಪಾದ ಗಾಳಿ, ಬೆಳಕು ಅಷ್ಟು ಆನಂದ ಕೊಡುವಂತೆ ಮಾಡಿರುತ್ತಾರೆ. ಅಲ್ಲಿ ಕೆಲಸ ಮಾಡುವವರು ಸಮವಸ್ತ್ರದಿಂದ ಬಂದವರಿಗೆ ಆ ವಸ್ತುಗಳನ್ನು ಖರೀದಿಸುವಂತೆ ಬಣ್ಣ ಬಣ್ಣದ ಮಾತುಗಳನ್ನಾಡಿ ಸೆಳೆಯುತ್ತಾರೆ. ನಾವೆಲ್ಲ ಆಕರ್ಷಣೆಗೆ ಒಳಗಾಗಿ ಬೇಡದ ವಸ್ತುಗಳನ್ನು ಖರೀದಿಸಿ, ಬೇಕಾದ ಆಹಾರ ಪದಾರ್ಥಗಳಿಗೆ ಹಣ ಸಾಲದಿದ್ದರೆ ಅದನ್ನು ಬಿಟ್ಟು, ಬೇಡವಾದದ್ದನ್ನು ತರುತ್ತೇವೆ.
 
     ಎರಡನೇ ಘಟನೆ : ನಾವೆಲ್ಲ ನಮ್ಮ ನಮ್ಮ ಮನೆಗಳನ್ನು ನೋಡೋಣ. ಮನೆಯಲ್ಲಿ ಇರುವ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಹೇಗೇಗೋ ಬಿದ್ದಿರುತ್ತದೆ. ಯಾರಾದರೂ ಅತಿಥಿ ಬರುವವರಿದ್ದರೆ, ಆ ವಸ್ತುಗಳನ್ನು ಒಂದು ಕೊಠಡಿಗೆ ಹಾಕಿ, ಅದರ ಮೇಲೆ ಬಟ್ಟೆ ಹೊದಿಸಿ, ಕೊಠಡಿಗೆ ಬಾಗಿಲು ಹಾಕಿ, ಬಂದ ಅತಿಥಿಗಳಿಗೆ ಸಂತೋಷವಾಗುವಂತೆ ಮಾಡುತ್ತೇವೆ. ಹಾಗೆ ಮಾಡುವುದಲ್ಲ. ಪ್ರತಿ ವಸ್ತುವನ್ನು ಸ್ವಚ್ಛವಾಗಿ ಸುಂದರವಾಗಿ ಜೋಡಿಸಬೇಕು.

     ಮೂರನೇ ಘಟನೆ: ನಾವೆಲ್ಲ ಕ್ಷೌರಿಕರ ಅಂಗಡಿಗೆ ತಲೆ ಕೂದಲು ಕತ್ತರಿಸಲು, ಗಡ್ಡ ತೆಗೆಯಲು, ಮೀಸೆ ಸುಂದರ ಮಾಡಿಸಲು ಹೋಗುತ್ತೇವೆ. ಕ್ಷೌರಿಕ ಒಂದೊಂದು ಬದಿ ಸುಂದರವಾಗಿ ಕತ್ತರಿಸುತ್ತಾ, ಅದರಲ್ಲೇ ಮನಸ್ಸನ್ನು ಏಕಾಗ್ರಗೊಳಿಸಿ, ಸುಂದರವಾಗಿ ತಲೆಕೂದಲು ಕತ್ತರಿಸುತ್ತಾನೆ. ಎಲ್ಲೆಲ್ಲಿ ಅನಾವಶ್ಯಕ ಕೂದಲಿದೆಯೋ ಅದನ್ನು ತೆಗೆದುಹಾಕಿ ಸುಂದರ ಮಾಡುತ್ತಾರೆ. ಜಗತ್ತಿನ ಒಂದು ಭಾಗವಾದ ಮನುಷ್ಯನನ್ನು ಸುಂದರ ಮಾಡುತ್ತಾರೆ.
    ಈ ಮೂರು ಘಟನೆಗಳನ್ನು ನೋಡಿ. ಮಾಲ್ ಇರುವುದು ಜಗತ್ತಿನ ಒಂದು ಭಾಗ. ನಮ್ಮ ಮನೆಯು ಕೂಡ ಜಗತ್ತಿನ ಒಂದು ಭಾಗ. ವ್ಯಕ್ತಿಯು ಕೂಡ ಜಗತ್ತಿನ ಒಂದು ಭಾಗ. ನಾವು ಎಲ್ಲಿರುತ್ತೇವೋ ಅದೆಲ್ಲ ಜಗತ್ತಿನ ಒಂದು ಭಾಗ. ನಾವು ಎಲ್ಲಿರುತ್ತೇವೆ ಆ ಸ್ಥಳವನ್ನ, ಏನನ್ನು ಬಳಸುತ್ತೇವೆ ಅದನ್ನು, ಸ್ವಚ್ಛವಾಗಿ, ಸುಂದರವಾಗಿ, ಅಚ್ಚುಕಟ್ಟಾಗಿ ಜೋಡಿಸಿದರೆ ಮತ್ತು ಬಳಸಿದರೆ, ನಾವು ಜಗತ್ತನ್ನು ಸುಂದರ ಮಾಡಿದೆವು ಎಂದು ಭಾವಿಸಬೇಕು. ಅದಕ್ಕಾಗಿ ನಾವೇನು ಮಾಡಬೇಕು ಉದಾಹರಣೆ ಯೊಂದಿಗೆ ಕೆಲವೊಂದನ್ನು ನೋಡೋಣ. 
1. ನಾವಿರುವ ಮನೆ ಸ್ವಚ್ಛವಾಗಿರಬೇಕು. ಮನೆಯ ಹೊರಗೆ ಕನಿಷ್ಠ ಹೂ ಗಿಡಗಳಾದರೂ ಇರಬೇಕು. ಮನೆಯಲ್ಲಿ ಯಾವ ವಸ್ತುಗಳು ಇದೆಯೋ ಅವುಗಳನ್ನು ಸ್ವಚ್ಛವಾಗಿ, ಸುಂದರವಾಗಿ ಜೋಡಿಸಬೇಕು. ಹೊರಗಿನಿಂದ ಸುಂದರವಾದದ್ದನ್ನು ಖರೀದಿಸಿ ತಂದು ಇಡಬೇಕು ಅಂತ ಅಲ್ಲ. ಇರುವುದನ್ನೇ ಚೆನ್ನಾಗಿ ಜೋಡಿಸಬೇಕು. ಬೇಡವಾದ ವಸ್ತುಗಳು ಇರಬಾರದು. ಅದಕ್ಕೆ ಪ್ರತ್ಯೇಕ ಸ್ಥಳದಲ್ಲಿ ಅವುಗಳನ್ನು ಚೆನ್ನಾಗಿ ನಿರ್ವಹಣೆ ಮಾಡಬೇಕು.

 2. ನಾವು ಯಾವ ವಸ್ತುಗಳನ್ನು ಬಳಸುತ್ತೇವೋ ಅದು ಸ್ವಚ್ಛವಾಗಿ ಸುಂದರವಾಗಿ ಇಟ್ಟುಕೊಳ್ಳಬೇಕು. ಅದು ಹಾಳಾಗದ ಹಾಗೆ ಬಳಸಬೇಕು. ಮುಂದಿನವರು ಬಳಸುವಂತೆ ಜೋಪಾನವಾಗಿ ಬಳಸಬೇಕು.

3. ನಾವು ಶಾಲೆಯಲ್ಲಿದ್ದರೆ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಇದ್ದರೆ, ಅದು ಸ್ವಚ್ಛವಾಗಿರುವಂತೆ ಮಾಡಬೇಕು. ಡೆಸ್ಕ್ ಗಳು ಕ್ರಮವಾಗಿ ಜೋಡಿಸಬೇಕು. ಬೆಂಚ್, ಟೇಬಲ್ ಮತ್ತು ಕುರ್ಚಿ ಸ್ವಚ್ಛವಾಗಿರಬೇಕು. ಶಿಸ್ತಾಗಿ ಜೋಡಿಸಿರಬೇಕು. ನಾವು ನಮ್ಮ ಸಾಮಗ್ರಿಗಳನ್ನು ಸ್ವಚ್ಛವಾಗಿ ಶಿಸ್ತಾಗಿ ಚೆನ್ನಾಗಿ ಜೋಡಿಸಿರಬೇಕು. ಡೆಸ್ಕ್ ನ ಮೇಲೆ ಕೆತ್ತುವುದಾಗಲಿ ಬರೆಯುವುದಾಗಲಿ ಮಾಡಬಾರದು.
 4. ಶೌಚಾಲಯವನ್ನು ಸ್ವಚ್ಛವಾಗಿ ಸುಂದರವಾಗಿ ಇಟ್ಟುಕೊಳ್ಳಬೇಕು. ನೀರನ್ನು ಬಳಸಿ ಸ್ವಚ್ಛವಾಗಿಟ್ಟುಕೊಳ್ಳುವುದು. ಗೋಡೆಯ ಮೇಲೆ ಏನನ್ನು ಬರೆಯಬಾರದು. ಅದರ ಅಂದ ಕೆಡಿಸಬಾರದು.

5. ನಾವು ಆಟವಾಡುವ ಸ್ಥಳ, ಪ್ರಾರ್ಥನಾ ಸ್ಥಳ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. 

6. ಶಾಲೆಯ ಹೊರಗೆ ಹೂದೋಟ, ಕೈತೋಟ ಮಾಡಿ ಆಕರ್ಷಕವಾಗುವಂತೆ ಮಾಡುವುದು.

7. ನಾವು ಶಾಲೆಯಿಂದ ಮನೆಗೆ ಹೋದಾಗ, ಧರಿಸಿದ ಬಟ್ಟೆ, ಕೈಚೀಲ ಎಲ್ಲೆಂದರಲ್ಲಿ ಹಾಕದೆ ಕ್ರಮವಾಗಿ ಜೋಡಿಸಬೇಕು.

8. ನಾವು ಪ್ರತಿದಿನ ಸ್ವಚ್ಛವಾಗಿ ಸುಂದರವಾಗಿ ಸ್ನಾನ ಮಾಡಿ, ಇಸ್ತ್ರಿ ಮಾಡಿದ ಬಟ್ಟೆ ಶಿಸ್ತಾಗಿ ಹಾಕಿ, ತಲೆ ಕೂದಲು ಚೆನ್ನಾಗಿ ಬಾಚಿ, ಉಗುರು ಕತ್ತರಿಸಿ ಹೋಗಬೇಕು.
    ಹೀಗೆ ಮಾಡುವ ಎಲ್ಲಾ ಕೆಲಸ, ಬಳಸುವ ಎಲ್ಲಾ ವಸ್ತು, ಇಡುವ ಸ್ಥಳ ಎಲ್ಲವನ್ನು ಸ್ವಚ್ಛವಾಗಿ ಸುಂದರವಾಗಿ ಮಾಡಬೇಕು. ಅದು ನನ್ನದು, ಬೇರೊಬ್ಬರದು ಎನ್ನುವ ಭಾವ ಬರಕೂಡದು. ಅದಕ್ಕೆ ಹಿರಿಯರು ಹೇಳಿದ್ದು. ನಾವು ಸೇರಿದಂತೆ ನಮ್ಮ ಮುಂದೆ ಏನಿದೆಯೋ ನಾವು ಬಳಸುವ ವಸ್ತು ಎಲ್ಲವೂ "ಜಗವಿಕ್ಕಿದ ವಿಧಿ". ಎಲ್ಲಾ ವಸ್ತುಗಳು ಜಗತ್ತಿನಿಂದಲೇ ಬಂದಿರುವುದು. ಎಲ್ಲಾ ವಸ್ತುಗಳ ಕಚ್ಚಾ ಸಾಮಗ್ರಿ ಜಗತ್ತಿನದೆ. ನಾವು ಕೂಡ ಜಗತ್ತಿನ ಒಂದು ಭಾಗ. ಹಾಗಾಗಿ ಅವುಗಳನ್ನು ಸುಂದರವಾಗಿ ಸ್ವಚ್ಛವಾಗಿ ಬಳಸಿದರೆ ಮತ್ತು ಇಟ್ಟರೆ ಜಗತ್ತನ್ನು ಶ್ರೀಮಂತ ಸುಂದರ ಮಾಡಿದಂತೆ. ಇದಕ್ಕೆ ನಿತ್ಯ ಕರ್ಮ ಎನ್ನುವರು. ಇದನ್ನು ಪ್ರತಿಯೊಬ್ಬರೂ ಪ್ರತಿದಿನ ಮಾಡಬೇಕು. ಆಗ ಜಗತ್ತನ್ನ ಸುಂದರ ಮಾಡಿದ ಭಾವನೆ ಉಂಟಾಗುತ್ತದೆ ಅಲ್ಲದೆ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************
Ads on article

Advertise in articles 1

advertising articles 2

Advertise under the article