-->
ಜಗಲಿ ಕಟ್ಟೆ : ಸಂಚಿಕೆ - 24

ಜಗಲಿ ಕಟ್ಟೆ : ಸಂಚಿಕೆ - 24

ಜಗಲಿ ಕಟ್ಟೆ : ಸಂಚಿಕೆ - 24
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ



       ನಾವು ಈಗಾಗಲೇ ರಾಜ್ಯಮಟ್ಟದ ಕವನಸಿರಿ ಮತ್ತು ಕಥಾಸಿರಿ ಪ್ರಶಸ್ತಿಗಾಗಿ ಆಯೋಜಿಸಿರುವ ಸ್ಪರ್ಧೆಗಳಿಗೆ ರಾಜ್ಯದ ಎಲ್ಲಾ ಭಾಗಗಳಿಂದ ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿರುವುದು ತುಂಬಾ ಸಂತಸ. ಮಕ್ಕಳ ಜಗಲಿಯಲ್ಲಿ ನಿತ್ಯ ಬರೆಯುವವರ ಹೊರತಾಗಿಯೂ ಹೊಸದಾಗಿ ಜಗಲಿಯ ಪರಿಚಯ ಮಾಡಿಕೊಂಡವರು ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
        ಇಲ್ಲಿ ನಾವು ಕಾರಣಗಳನ್ನಿಟ್ಟುಕೊಂಡು ಬೆಳೆಯಲು ಅವಕಾಶಗಳನ್ನು ಪಡೆಯುವುದು ಉತ್ತಮ. ಸ್ಪರ್ಧೆಗಳ ಕಾರಣಕ್ಕಾಗಿ ಬರೆಯುವುದು ಒಂದಾದರೆ... ಮಕ್ಕಳ ಜಗಲಿಯಲ್ಲಿ ನಿರಂತರವಾಗಿ ತನ್ನ ಬರಹಗಳು ಪ್ರಕಟವಾಗಬೇಕೆನ್ನುವ ನೆಲೆಯಲ್ಲಿ ಬರೆಯುವುದು ಇನ್ನೂ ಉತ್ತಮ. ಬರೆಯಲು ಕಾರಣಗಳನ್ನು ಸೃಷ್ಟಿಸಿಕೊಳ್ಳುವುದರಿಂದ ಬರವಣಿಗೆ ನಿರಂತರವಾಗಲು ಸಾಧ್ಯವಿದೆ. ನಿರಂತರ ಬರೆಯುತ್ತಾ ಬರೆಯುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು ಹಾಗೂ ಪಕ್ವಗೊಳಿಸುವುದು ಅನುಕೂಲವಾಗುತ್ತದೆ.
        ಬರೆಯಲು ತೊಡಗುವ ಎಲ್ಲಾ ವಿದ್ಯಾರ್ಥಿಗಳಿಗೆ ಇನ್ನೂ ಒಂದು ಹೆಚ್ಚು ಲಾಭವಾಗಲಿದೆ. ಬರೆಯುವ ಕಾರಣಕ್ಕಾಗಿ ಓದುವ ಹವ್ಯಾಸ ಜೊತೆ ಜೊತೆಗೆ ಕೂಡಿಬರುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳ ಮೇಲೆ ದೊಡ್ಡ ಅಪವಾದವಿದೆ. ಆಧುನಿಕ ತಂತ್ರಜ್ಞಾನಗಳ ಬಳಕೆ ಮಾಡುವ ವೇಗದಲ್ಲಿ ಓದುವ, ಬರೆಯುವ ಹವ್ಯಾಸಗಳನ್ನು ಕಳಚುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಆತಂಕವಿದೆ. ಇಂತಹ ವಿದ್ಯಾಮಾನಗಳಿಂದ ವಿದ್ಯಾರ್ಥಿಗಳು ಬಚಾವಾಗಬೇಕಾದರೆ ಸಾಹಿತ್ಯದತ್ತ ಒಲವು ತೋರಿಸಿ ಮುನ್ನಡೆಯುವುದು ಉತ್ತಮ.
        ಮಕ್ಕಳ ಜಗಲಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬರೆಯುವ ವಿದ್ಯಾರ್ಥಿಗಳು ಸೃಷ್ಟಿಯಾಗುತ್ತಿದ್ದಾರೆ. ಪ್ರತಿ ಶಾಲೆಯಲ್ಲಿ ಹಾಗೂ ಪ್ರತಿ ಮನೆಯಲ್ಲಿಯೂ ಕೂಡ ಈ ಬಗ್ಗೆ ಮಕ್ಕಳಿಗೆ ಸ್ಪೂರ್ತಿದಾಯಕ ಮಾತುಗಳನ್ನು ನೀಡಿ ಪ್ರೋತ್ಸಾಹಿಸುವ ಕೆಲಸವಾಗುತ್ತಿದೆ. ಮಕ್ಕಳ ಬರಹಗಳನ್ನು ಓದಿ ಇನ್ನೂ ಹೆಚ್ಚು ಬರೆಯಲು ಪ್ರೇರಣೆ ನೀಡುವ ಕೆಲಸ ಹಿರಿಯರಿಂದಾದರೆ ಮಕ್ಕಳಿಗೆ ಸಾಹಿತ್ಯದತ್ತ ಹೆಚ್ಚು ಒಲವು ಮೂಡಲು ಸಾಧ್ಯವಿದೆ. ಕೇವಲ ಸ್ಪರ್ಧೆಗಾಗಿ ಮಾತ್ರ ತಯಾರು ಮಾಡುವ ಬದಲಾಗಿ ನಿತ್ಯ ತನ್ನಲ್ಲಿ ಆ ಅಭಿರುಚಿಯನ್ನು ಮೂಡಿಸುವ ಪ್ರಯತ್ನವಾಗಬೇಕು. 
         ನವೆಂಬರ್ 14ರಂದು ರಾಜ್ಯಮಟ್ಟದ ಕಥೆ ಮತ್ತು ಕವನ ಸ್ಪರ್ಧೆಯ ಫಲಿತಾಂಶ ದೊರೆಯಲಿದೆ. ಏನಾದರೂ ತಾಂತ್ರಿಕ ಕಾರಣಗಳಿಂದ ವ್ಯತ್ಯಾಸವಾದರೆ ಫಲಿತಾಂಶದ ದಿನವನ್ನು ಮುಂದೂಡಲಾಗುತ್ತದೆ. ಈ ಬಗ್ಗೆ ಮಕ್ಕಳ ಜಗಲಿಯಲ್ಲಿ ನಿಮಗೆ ತಿಳಿಸಲಾಗುತ್ತದೆ.
        ನಾವು ಎಂದಿನಂತೆ ಈ ಬಾರಿಯೂ ಮೂರನೇ ವರ್ಷದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಿದ್ದೇವೆ. ಈ ಬಗ್ಗೆ ಮಾಹಿತಿಯನ್ನು ನವೆಂಬರ್ 14ರ ನಂತರ ನಿಮಗೆ ತಿಳಿಸುತ್ತೇವೆ. ರಾಜ್ಯದ ವಿವಿಧ ಭಾಗದ ಎಲ್ಲಾ ವಿದ್ಯಾರ್ಥಿಗಳು ಹಾಗೂ ಕರ್ನಾಟಕದ ನಿವಾಸಿಗಳು ದೇಶದ ಯಾವ ಭಾಗದಲ್ಲಿದ್ದರೂ ಭಾಗವಹಿಸಲು ಅವಕಾಶವಿದೆ.  
        ಪ್ರತಿಯೊಬ್ಬ ವಿದ್ಯಾರ್ಥಿಗಳ ನಿರಂತರ ಭಾಗವಹಿಸುವಿಕೆ ಹಾಗೂ ಕಲೆ ಮತ್ತು ಸಾಹಿತ್ಯದತ್ತ ಮಕ್ಕಳ ಒಲವನ್ನು ಸೃಷ್ಟಿಸುವುದು ನಮ್ಮ ಆದ್ಯತೆಯಾಗಿದೆ. ಮಕ್ಕಳ ಜಗಲಿ ಈ ನಿಟ್ಟಿನಲ್ಲಿ ಕಟಿ ಬದ್ಧವಾಗಿದೆ. ನಿಮ್ಮೆಲ್ಲರ ಪ್ರೀತಿಯ ಪ್ರೋತ್ಸಾಹ ಬೆಂಬಲದಿಂದ ಮಕ್ಕಳ ಜಗಲಿ ಬೆಳೆಯಲು ಕಾರಣವಾಗಿದೆ. ಇನ್ನೂ ವಿಸ್ತಾರವಾಗಲಿ. ಎಲ್ಲಾ ಮಕ್ಕಳಿಗೂ ನಿಮ್ಮ ಮೂಲಕ ಮನೆ - ಮನ ತಲುಪಲಿ. ಮಕ್ಕಳ ಜಗಲಿ ಅದು ನಿಮ್ಮ ಮನೆ ಮಕ್ಕಳ ಜಗಲಿಯಾಗಲಿ....

     
ಕಳೆದ ಸಂಚಿಕೆಯ ಜಗಲಿಕಟ್ಟೆ - 23 ಅಂಕಣದಲ್ಲಿ ಶ್ರೀರಾಮ ಮೂರ್ತಿ, ನಿವೃತ್ತ ವಿಜ್ಞಾನ ಶಿಕ್ಷಕರು.. ವಿದ್ಯಾ ಗಣೇಶ್ ಚಾಮೆತ್ತಮೂಲೆ ಮನೆ, ವಿದ್ಯಾ ಕಾರ್ಕಳ, ಸಹ ಶಿಕ್ಷಕಿ ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


    ಹಾಯ್.... ಮಕ್ಕಳ ಜಗಲಿ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ನನಗೆ ತುಂಬಾ ಇಷ್ಟವಾಯಿತು. ಮಕ್ಕಳಿಗಾಗಿ ಬರುವ ಸ್ಪರ್ಧಾತ್ಮಕ ಕಾರ್ಯಕ್ರಮಗಳು ಸ್ಫೂರ್ತಿದಾಯಕವಾಗಿದೆ. ಕುಡ್ಲ ಅವರ ಹಕ್ಕಿ ಕಥೆ ಮನ ಮುಟ್ಟುವಂತಿದೆ. ನಿಷ್ಪಾಪಿ ಸಸ್ಯ ಅದರ ಔಷಧೀಯ ಗುಣ ಅರೋಗ್ಯ ವರ್ಧಕ ಲೇಖನ ಸೊಗಸಾಗಿದೆ. ನಶಿಸುತ್ತಿರುವ ಗಿಡಗಳು ಈ ತಲೆಮಾರಿನವರಿಗೆ ಕಂಡು ಕಾಣುವುದೇ ವಿರಳ. ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ನನಗೆ ತುಂಬಾ ಇಷ್ಟವಾಯಿತು.
............................................... ಸ್ಮಿತಾ ಹೆಗ್ಡೆ
ಸೊರಬ ತಾಲೂಕು, ಶಿವಮೊಗ್ಗ ಜಿಲ್ಲೆ
******************************************



ನಮಸ್ತೇ,
     ಎರಡು ಘಟನೆಗಳ ಉದಾಹರಣೆಯೊಂದಿಗೆ ನಮ್ಮ ಮನಸ್ಸಿನ ಭಾವನೆಗಳನ್ನು ಅರಿಯುವುದರ ಜೊತೆಗೆ ಇನ್ನೊಬ್ಬರ ಮನಸ್ಸಿನ ಭಾವನೆಗಳನ್ನು ಅರಿತಾಗ ಬದುಕು ಸುಂದರ ಎನ್ನುವುದರ ಸಾರವನ್ನು ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ತಮ್ಮ ಈ ಸಲದ ಜೀವನ ಸಂಭ್ರಮ ಸಂಚಿಕೆಯಲ್ಲಿ ಸುಂದರವಾಗಿ ವಿವರಿಸಿದ್ದಾರೆ.
    ಕವಿ ಭಾಸ್ಕರ ಅಡ್ವಳರ 'ಎಚ್ಚೆತ್ತಿರುವ ಪ್ರಜೆಗಳು' ಕವನದ ವಿಶ್ಲೇಷಣೆಯು ರಮೇಶ್ ಸರ್ ರವರಿಂದ ಸುಂದರವಾಗಿ ಮೂಡಿ ಬಂದಿದೆ.
    ಅದ್ಭುತ ಬೇಟೆಗಾರ ಹಕ್ಕಿ ಸಮುದ್ರ ಗಿಡುಗದ ಹಕ್ಕಿಯ ಪರಿಚಯ ಹಾಗೂ ಅದರ ಬೇಟೆಯ ಪರಿ ಬಹಳ ಸೊಗಸಾಗಿತ್ತು ಅರವಿಂದ ಸರ್.
     ಶಾಲೆಯಲ್ಲಿ ನಾನು ಔಷಧೀಯ ಸಸ್ಯಗಳ ತೋಟವನ್ನು ನಿರ್ಮಿಸಿದ ಸಂದರ್ಭದಲ್ಲಿ ಈ ಬಳ್ಳಿಯನ್ನು ಬೆಳೆಸಿದ ನೆನಪು. ವಿವಿಧ ಔಷಧೀಯ ಸಸ್ಯಗಳನ್ನು ಕೈಯೂರು ಶಿವರಾಂ ಭಟ್ ರವರು ಒದಗಿಸಿದ್ದರು. ಈ ಸಲದ ಸಂಚಿಕೆಯಲ್ಲಿ ಸಂದು ಬಳ್ಳಿಯ ಕುರಿತು ವಿಸ್ತೃತವಾದ ಉತ್ತಮ ಲೇಖನ ವಿಜಯಾ ಮೇಡಂ ರವರಿಂದ.
      ಯಾಕೂಬ್ ಸರ್ ರವರ ಹೃದಯದ ಮಾತು ಸಂಚಿಕೆಯಲ್ಲಿ ತಪ್ಪು ಮಾಡದೆಯೂ ವಿದ್ಯಾರ್ಥಿನಿ ಯೋರ್ವಳು ಶಿಕ್ಷಕರ ಮೇಲೆ ಆರೋಪ ಹೊರಿಸಿದ ಮತ್ತು ಶಿಕ್ಷಕರು ಆರೋಪ ಮುಕ್ತರಾದ ಕಾಕತಾಳೀಯ ಘಟನೆ ಕುರಿತಾದ ಲೇಖನ ಸೊಗಸಾಗಿತ್ತು.
     ವಾಣಿಯಕ್ಕನವರ 'ನನ್ನ ಹೆಸರು ಗುಲಾಬಿ' ಪುಸ್ತಕ ಪರಿಚಯ ತುಂಬಾ ಸೊಗಸಾಗಿತ್ತು. ಹೆಸರಿನ ಕಾರಣಕ್ಕೆ ತಮಾಷೆ ಮಾಡುವವರಿಗೆ ಓದಲೇ ಬೇಕಾದ ಪುಸ್ತಕ.
     ಈ ವಾರ ಕನ್ನಡ ರಾಜ್ಯೊತ್ಸವದ ಕುರಿತಾದ ಮಕ್ಕಳ ಕವನಗಳ ಎರಡು ಸಂಚಿಕೆಗಳು ಹಾಗೂ ಮಕ್ಕಳ ಚಿತ್ರಗಳ ಎರಡು ಸಂಚಿಕೆಗಳು ತುಂಬಾ ಚೆನ್ನಾಗಿತ್ತು. ಕವನ ಹಾಗೂ ಚಿತ್ರ ರಚಿಸಿದ ಮಕ್ಕಳಿಗೆ ಅಭಿನಂದನೆಗಳು. ಇನ್ನಷ್ಟು ಕಥೆ, ಕವನ ಹಾಗೂ ಚಿತ್ರಗಳು ಮಕ್ಕಳಿಂದ ಮೂಡಿಬರಲಿ. ರಮೇಶ್ ಉಪ್ಪುಂದರವರ ಪದದಂಗಳ ಸಂಚಿಕೆ ಸೂಗಸಾಗಿದೆ.
   ಎಲ್ಲರಿಗೂ ಮತ್ತೊಮ್ಮೆ ನನ್ನ ಪ್ರೀತಿಯ ವಂದನೆಗಳು...
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************

ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ ಮತ್ತು ಸ್ಮಿತಾ ಹೆಗ್ಡೆ ಸೊರಬ ತಾಲೂಕು, ಶಿವಮೊಗ್ಗ ಜಿಲ್ಲೆ.... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************



Ads on article

Advertise in articles 1

advertising articles 2

Advertise under the article