-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 88

ಸ್ಫೂರ್ತಿಯ ಮಾತುಗಳು : ಸಂಚಿಕೆ - 88

ಸ್ಫೂರ್ತಿಯ ಮಾತುಗಳು : ಸಂಚಿಕೆ - 88
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 


                           
     ಅಡುಗೆಯಲ್ಲಿ ನಿಪುಣ, ಕೃಷಿಯಲ್ಲಿ ನಿಪುಣ, ಕಲಿಕೆಯಲ್ಲಿ ನಿಪುಣ, ನೃತ್ಯದಲ್ಲಿ ನಿಪುಣ ಎಂಬಿತ್ಯಾದಿ ನಿಪುಣ ಗುಣವಾಚಕ ಪದಗಳನ್ನು ಗಮನಿಸಿದ್ದೇವೆ. ನಿಪುಣತೆ ಎಂಬುದು ವ್ಯಕ್ತಿಯಲ್ಲಿರುವ ವಿಶೇಷ ಸಾಮರ್ಥ್ಯ. ನಿಪುಣತೆಯ ಗಳಿಕೆಗೆ ಅತ್ಯುನ್ನತವಾದ ಸ್ವಪ್ರಯತ್ನ ಮತ್ತು ಪರಿಣತರ ಮಾರ್ಗದರ್ಶನಗಳು ಸಮನ್ವಯಗೊಳ್ಳಬೇಕಾಗುತ್ತದೆ. ಹುಟ್ಟಿದ ಪ್ರತಿಯೊಬ್ಬನಲ್ಲಿಯೂ ನಿಪುಣತೆಯಿದ್ದೇ ಇರುತ್ತದೆ. ಎಲ್ಲ ನಿಪುಣತೆಗಳೂ ವ್ಯಕ್ತಿಯಲ್ಲಿ ಸುಪ್ತವಾಗಿರುತ್ತವೆ. ಕೆಲವೊಮ್ಮೆ ನಮ್ಮ ನಿಪುಣತೆ ನಮ್ಮ ಅರಿವಿಗೇ ಬಾರದಿರಬಹುದು. ನಿಪುಣತೆಯನ್ನು ಗುರುತಿಸುವ ಕೆಲಸಗಳಾದಾಗ, ನಿಪುಣತೆಯನ್ನು ಬೆಳೆಸುವ ಬೆಂಬಲಿಗರಿದ್ದಾಗ ಆ ನಿಪುಣತೆ ಸಮಾಜಕ್ಕೆ ಲಾಭವಾಗಿ ಮೂಡಿ ಬರುತ್ತದೆ. ಪ್ರತಿಯೊಬ್ಬರ ನಿಪುಣತೆಯೂ ರಾಷ್ಟ್ರೀಯ ಸಂಪನ್ಮೂಲ. ನಿಪುಣರ ಬಾಹುಳ್ಯವೇ ದೇಶದ ವಿಕಾಸಕ್ಕೆ ಮೂಲ.
      ಉತ್ತಮ ಶಾರೀರವಿದ್ದವರನ್ನು ಉಲ್ಲೇಖಿಸಿ ಮಾತನಾಡುವಾಗ ದೇವರ ವರ ಪ್ರಸಾದವದು ಎಂದು ಹೇಳುವುದಿದೆ. ಯಾವುದೇ ನಿಪುಣತೆಗೂ ದೇವರ ವರವನ್ನು ಜೋಡಿಸುವುದೂ ಇದೆ. ದೇವರ ವರವಾಗಿ ವ್ಯಕ್ತಿಯೊಬ್ಬನಲ್ಲಿ ಯಾವುದೇ ನಿಪುಣತೆಯು ಸಾಕ್ಷಾತ್ಕಾರವಾಗಲು ಅವಿರತ ಶ್ರಮವೂ ಬುನಾದಿಯಾಗಿರುತ್ತದೆ. ವರಕ್ಕಿಂತಲೂ ಮುಖ್ಯವಾಗಿ ಅಸಂಖ್ಯ ಅವಕಾಶಗಳನ್ನು ದೇವರು ನಮಗೆ ನೀಡುತ್ತಿರುತ್ತಾನೆ. ಆ ಅವಕಾಶಗಳನ್ನು ಬಳಸಿ ಉನ್ನತಿಯೆಡೆಗೇರಲು ಪ್ರಯತ್ನಿಸಿದಾಗ ನಿಪುಣತೆ ತನ್ನಿಂದ ತಾನಾಗಿಯೇ ನಮ್ಮಲ್ಲಿ ಬೆಳೆಯುತ್ತದೆ.
      ನಿಪುಣತೆಗೆ ಎದೆಗಾರಿಕೆಯೂ ಬಹಳ ಮುಖ್ಯ. ಕೆಲವೊಮ್ಮೆ ನಿಪುಣತೆಯನ್ನು ಬಳಸುವ ಹಾದಿಯಲ್ಲಿ ಸೋಲು ಬರುವುದಿದೆ. ಸೋಲಿಗೆ ಅಂಜಿ ಸಾಧನಾ ಪಥದಿಂದ ಹಿನ್ನಡೆದರೆ ಶಾಶ್ವತವಾಗಿ ದುಃಖವನ್ನೇ ಅನುಭವಿಸಬೇಕಾಗುತ್ತದೆ. ದೊಡ್ಡ ಸೋಲುಗಳನ್ನೂ ಎದುರಿಸಿ ಗೆಲ್ಲುವ ಛಲವಿದ್ದವರಿಗೆ ಹಿಡಿದ ಕಾರ್ಯದಲ್ಲಿ ಸಫಲತೆ ಪಡೆಯಲು ಸಾಧ್ಯ. ಸೋಲಿನ ಎದುರುಗಡೆ ಭಯ ಬಿಟ್ಟು ಎದ್ದು ನಿಲ್ಲುವುದೂ ನಿಪುಣತೆಯೇ ಆಗಿರುತ್ತದೆ.
       ನಿಪುಣತೆಯು ಪ್ರೋತ್ಸಾಹಗಳಿಂದಲೂ ಬಲಗೊಳ್ಳುತ್ತದೆ. ಯಕ್ಷಗಾನದ ಸಮರ್ಥ ಅರ್ಥಗಾರಿಕೆ, ಭಾಗವತಿಕೆ ಮತ್ತಿತರ ಹಿಮ್ಮೇಳದಲ್ಲಿ ಉತ್ತಮ ಪರಿಣತಿ ಪಡೆಯಲು ಎಳವೆಯಲ್ಲಿ ಮನೆಯವರು, ಸಂಬಂಧಿಗಳು, ಊರವರು ಹಾಗೂ ಸಮಾಜ ಪ್ರೋತ್ಸಾಹದಾಯಕ ಮಾತುಗಳನ್ನು ಹೇಳಿದರೆ ಅದುವೇ ಯಕ್ಷಗಾನದಲ್ಲಿ ನೈಪುಣ್ಯತೆ ಹೊಂದಲು ವರದಾನವಾಗುತ್ತದೆ. ನೈಪುಣ್ಯತೆಯು ರೂಢಿ ಅಥವಾ ಅಭ್ಯಾಸ ಮಾಡುವ ಪರಿಶ್ರಮಿಗೆ ಲಭಿಸುತ್ತದೆಯೇ ಹೊರತು ಆಲಸಿಗೆ ದಕ್ಕದು. ಆಚಾರಗಳು, ವಿಚಾರಗಳು, ವಿಧಾನಗಳು, ಪದ್ಧತಿಗಳು ನಿಂತ ನೀರಾಗಿರುವುದಿಲ್ಲ. ಮನೋ ವಿಕಾಸವಾಗುತ್ತಿದ್ದಂತೆ, ತಾರ್ಕಿಕತೆ ಪುಷ್ಟಿಗೊಂಡಂತೆ ಹೊಸತನಗಳು ಪ್ರತಿಯೊಂದರಲ್ಲೂ ಆವರಿಸಿಯೇ ಸಿದ್ಧ. ಹಾಗಾಗಿ ಯಾವುದೇ ಕಾಯಕ ಕ್ಷೇತ್ರದಲ್ಲಿ ನಿಪುಣತೆ ಹೆಚ್ಚಲು ಸುಧಾರಣೆಯನ್ನೂ ಅರಗಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನಗಳು ನಡೆಯುತ್ತಾ ಇರಬೇಕು. ಸುಮಾರು ಐವತ್ತು ವರ್ಷಗಳ ಹಿಂದಿನ ತಿಂಡಿಗಳಿಗೂ ಈಗಿನ ತಿಂಡಿಗಳಿಗೂ ಅಂತರವಿದ್ದೇ ಇರುತ್ತದೆ. ಈ ಅಂತರವು ಯಾಂತ್ರಕವಾಗಿ ಸಂಭವಿಸಿದುದಲ್ಲ. ಮಾಡಿದ ಲೋಪವೇ ಹೊಸ ರುಚಿಯಾಗಿ ರೂಪ ಪಡೆದಿರಬಹುದು. ಹಾಗೆಯೇ ಹೊಸ ಹೊಸ ಪ್ರಯೋಗಗಳ ಕಾರಣದಿಂದಾಗಿಯೂ ನಾವೀನ್ಯತೆ ಸಂಭವವಾಗಿರಬಹುದು. ಉದ್ದೇಶಿತ ಮತ್ತು ಅನುದ್ದೇಶಿತ ಕಾರಣಗಳಿಂದಾಗಿ ಎಲ್ಲ ಕ್ಷೇತ್ರಗಳೂ ಬದಲಾಗುತ್ತಲೇ ಇರುತ್ತವೆ.
      ಒಬ್ಬ ವಿದ್ಯಾರ್ಥಿಯ ನಿಪುಣತನವನ್ನು ಅಂಕಗಳಿಂದ ಅಳೆಯುವುದಿದೆ. ಅಂಕಗಳು ವಿದ್ಯಾರ್ಥಿಯ ನಿಪುಣತೆಯ ಒಂದು ಭಾಗ ಮಾತ್ರ. ಉತ್ತಮ ಅಂಕಗಳಿಸಿದವರೆಲ್ಲರೂ ಸ್ಮರಣೆಯ ಭಾಗದಲ್ಲಿ ಗಟ್ಟಿಗರೇ ಇರುತ್ತಾರೆ. ಅವರು ಆ ಒಂದು ಕ್ಷೇತ್ರಕ್ಕೆ ಹಾಕುವ ವಿಪರೀತ ಶ್ರಮದಿಂದಾಗಿ ಅಂಕಗಳಿಕೆಯಲ್ಲಿ ನಿಪುಣರಾಗುತ್ತಾರೆ. ಕೆಲವರ ಬೌದ್ಧಿಕತೆಯ ಮಟ್ಟ ಗರಿಷ್ಠವಾಗಿದ್ದು ಏನೂ ಪರಿಶ್ರಮವನ್ನು ಹಾಕದೆಯೂ ಹೆಚ್ಚು ಅಂಕಗಳಿಸಬಹುದು. ಇಂತಹವರ ಪ್ರಯತ್ನ ಗರಿಷ್ಟವಾದರೆ ಹೊಸ ದಾಖಲೆಯ ನಿರ್ಮಾಣವಾಗುತ್ತದೆ. ನಿಪುಣತೆಯ ಗರಿಷ್ಟ ಮಟ್ಟ ಹೊಸ ದಾಖಲೆ ಅಥವಾ ಸಾಧನೆಯೇ ಆಗಿರುವುದು. ಅಂಕದಲ್ಲಿ ಸಾಧನೆ ಮಾಡಿದವನು ಭರತನಾಟ್ಯದಲ್ಲಿ ಸಾಧನೆ ಮಾಡಿದರೆ ಅವನು ಅಂಕ ಸಾಧಕನಾಗಿ ಪಡೆಯುವ ಗೌರವಕ್ಕಿಂತ ಹೆಚ್ಚಿನ ಗೌರವ ಪಡೆಯುತ್ತಾನೆ. ವ್ಯಕ್ತಿಯ ಪರಿ ಪಕ್ವತೆ ಅಥವಾ ನಿಪುಣತೆ ಅನುಭವಗಳ ವಿಸ್ತಾರ ಮತ್ತು ಆಳವನ್ನು ಆಧರಿಸಿರುತ್ತದೆ. ಮಾಡಿದ ತಪ್ಪುಗಳು, ಮಾಡಿದ ಹೊಸ ಪ್ರಯೋಗಗಳು, ಮರಳಿ ಮಾಡುವ ಯತ್ನಗಳು, ಪರಿಶ್ರಮದ ಅವಧಿ ವಿಸ್ತರಣೆ, ಅನುಭವಿಗಳ ಜೊತೆ ಬೆರೆಯುವಿಕೆ, ಪಡೆದೇ ತೀರಬೇಕೆಂಬ ಹಠ, ಸೋಲುಗಳನ್ನು ಹಿಮ್ಮೆಟ್ಟಿ ಜಯದತ್ತವೇ ನೋಟ ಮತ್ತು ಆ ದಿಸೆಯತ್ತ ಸಾಗುವ ಓಟ, ಮನಸ್ಸಿನ ಏಕಾಗ್ರತೆ ಹೀಗೆ ಹಲವಾರು ಸಕಾರಾತ್ಮಕ ಲಕ್ಷಣಗಳು ನಿಪುಣತನದ ಮಹಾ ಸೂತ್ರಗಳು.
      ಕೆಲವರು ಹಲವದರಲ್ಲಿ ಎಳವೆಯಲ್ಲೇ ನಿಪುಣತೆ ತೋರುತ್ತಾರೆ, ಸಾಧನೆ ಮಾಡುತ್ತಾರೆ. ಅದೇ ಸಾಧನೆಯನ್ನು ಮಾಡಲು ಕೆಲವರು ಮುಪ್ಪಿನ ತನಕ ಕಾಯಬೆಕಾಗಿ ಬರುವುದೂ ಇದೆ. ವೈಯಕ್ತಿಕವಾಗಿ ನಾವು ಗಮನಿಸಿದರೆ ಎಲ್ಲರೂ ಒಂದೇ ಪ್ರಮಾಣದ ಸಾಮರ್ಥ್ಯವನ್ನು ಪಡೆದಿರಲು ಸಾಧ್ಯವಿಲ್ಲ. ಅದು ಸೃಷ್ಟಿಯ ನಿಯಮ. ಮಗುವಾಗಿದ್ದಾಗ ಆತ ಅಥವಾ ಆಕೆಗೆ ಯಾವುದೋ ಕಾಯಿಲೆ ಬಂದು ಸಾಧನೆಯ ವೇಗ ಕುಂಠಿತವಾಗಲು ಕಾರಣವಾಗಿರುವುದೂ ಇರಬಹುದು. ಪ್ರೋತ್ಸಾಹದ ಬದಲಿಗೆ ನಿರುತ್ಸಾಹ ತುಂಬುವವರೂ ಇರುತ್ತಾರೆ. ಇದರಿಂದಾಗಿಯೂ ಸಾಧನೆಯ ವೇಗಕ್ಕೆ ಮಿತಿ ಬರುವುದಿದೆ. ಆದರೆ ಒಂದು ಮಾತಂತೂ ಸಾಧ್ಯ, ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ, ಸಾಧಿಸುವ ಛಲವೊಂದಿದ್ದರೆ ಎಲ್ಲವೂ ಸಾಧ್ಯ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 

Ads on article

Advertise in articles 1

advertising articles 2

Advertise under the article