-->
ಮಕ್ಕಳ ಕಥೆಗಳು

ಮಕ್ಕಳ ಕಥೆಗಳು

ಮಕ್ಕಳ ಕಥೆಗಳು
ರಚನೆ ಮಾಡಿರುವ ವಿದ್ಯಾರ್ಥಿಗಳು :
◾ಭಾಗ್ಯಲಕ್ಷ್ಮೀ , 9ನೇ ತರಗತಿ 
◾ಕೆ. ವಿ. ಶರಣ್ಯ. ಭಟ್, 5ನೇ ಎ‌ ತರಗತಿ
◾ಚರಿತಾ, 10ನೇ ತರಗತಿ
◾ಜಿ ಎಂ ಆತ್ಮಿಕ, 4ನೇ ತರಗತಿ 
◾ಹರ್ಷಿತಾ ಎಂ ನಾಯ್ಕ್, 6ನೇ ತರಗತಿ 
◾ಅನುಷ್ಕಾ, 5ನೇ ತರಗತಿ
◾ಶಿಫಾನ , ಪ್ರಥಮ ಪಿಯುಸಿ                                                   

              

     ಒಂದು ಊರಿನಲ್ಲಿ ಒಬ್ಬ ರೈತನಿದ್ದನು. ಅವನು ಒಂದು ಸಣ್ಣ ಮನೆಯಲ್ಲಿ ವಾಸವಾಗಿದ್ದನು. ಅವನಿಗೆ ಮೂವರು ಮಕ್ಕಳು. ಮೊದಲನೆಯವನು ಮೀನುಗಾರ. ಅವನು ಮೀನು ಹಿಡಿದು ತನ್ನ ಜೀವನ ಸಾಗಿಸುತ್ತಿದ್ದನು. ಎರಡನೆಯವನು 10ನೇ ತರಗತಿಯಲ್ಲಿ ಓದುತ್ತಿದ್ದನು. ಮೂರನೆಯವನು 6ನೇ ತರಗತಿಯಲ್ಲಿ ಓದುತ್ತಿದ್ದನು. ಅವನು ದಿನಾಲೂ ಶಾಲೆಗೆ ಹೋಗಿ ಚೆನ್ನಾಗಿ ಓದಿ ವೈದ್ಯನಾಗಬೇಕು ಎನ್ನುವುದು ಅವನ ಕನಸಾಗಿತ್ತು. ರೈತನಿಗೆ ವಯಸ್ಸಾಯಿತು. ಅವನು ಹಾಸಿಗೆ ಹಿಡಿದನು. ಮೀನುಗಾರನ ಮೊದಲನೆಯ ಮಗ ಚೆನ್ನಾಗಿ ದುಡಿದು ತರುತ್ತಿದ್ದನು. ಅದು ಅವರ ಮನೆಯ ಖರ್ಚಿಗಾಗಿ ಸಾಲುತ್ತಿರಲಿಲ್ಲ. ಆಗ ಎರಡನೇ ಮಗ ಶಾಲೆಗೆ ಹೋಗದೆ ಕೆಲಸ ಹುಡುಕಿದನು. ಯಾವುದೇ ಒಂದೇ ಒಂದು ಕೆಲಸವು ಸಿಗಲಿಲ್ಲ. ಅನಂತರ ಒಂದು ದಟ್ಟವಾದ ಕಾಡಿಗೆ ಹೋಗಿ ಅಳತೊಡಗಿದನು. ಅತ್ತು, ಅತ್ತು ಅವನಿಗೆ ಬಾಯಾರಿಕೆಯಾಯಿತು. ನೀರು ಕುಡಿಯಲು ನದಿಯ ಬಳಿ ಹೋದನು. ಅಲ್ಲಿಯೇ ಪಕ್ಕದಲ್ಲಿ ಯಾರೋ ಬಿಲ್ಲು, ಬಾಣವನ್ನು ಎಸೆದು ಹೋಗಿದ್ದರು. ಇದೇ ಒಂದು ನನ್ನ ಪಾಲಿನ ಅತಿ ದೊಡ್ಡ ಅಸ್ತ್ರ ಎಂದು ತಿಳಿದುಕೊಂಡು ಕಾಡಿನಲ್ಲಿರುವ ದೊಡ್ಡ-ದೊಡ್ಡ ಪ್ರಾಣಿ, ಪಕ್ಷಿಗಳನ್ನು ಬೇಟೆಯಾಡತೊಡಗಿದನು. ಅವನಿಗೆ ಒಳ್ಳೆಯ ಆದಾಯ ಬಂತು. ಆಗ ತನ್ನ ತಮ್ಮನನ್ನು ಚೆನ್ನಾಗಿ ಓದಿಸಿ ವೈದ್ಯನಾಗಿ ಮಾಡಿದನು. ಇವರಿಬ್ಬರ ದುಡಿಮೆಯಿಂದ ತಮ್ಮ ಮನೆಯ ಖರ್ಚು ಸಾಗಿತು. ರೈತ ಅಲ್ಲಿಂದಲೇ ನೋಡಿ ಸಂತೋಷ ಪಟ್ಟನು.
ನೀತಿ :- ನಮಗೆ ಕಷ್ಟ ಬಂದಾಗ ಹೆದರಬಾರದು ಧೈರ್ಯವಾಗಿ ಎದುರಿಸಬೇಕು.
............................................... ಭಾಗ್ಯಲಕ್ಷ್ಮೀ 
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಕೊಕ್ರಾಡಿ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************

                     
          

     ಒಂದು ಊರಿನಲ್ಲಿ ಒಬ್ಬಳು ಪೂಜಾ‌ ಎಂಬ ಹೆಸರಿನ ಹುಡುಗಿ ಇದ್ದಳು. ಅವಳಿಗೆ ಬೆಕ್ಕು ಎಂದರೆ ತುಂಬಾ ಇಷ್ಟ. ಆದರೆ ಅವಳಿಗೆ ಬೀದಿಯಲ್ಲಿ ತಿರುಗಾಡುವ ಬೆಕ್ಕು ಎಂದರೆ ಇಷ್ಟವಿರಲಿಲ್ಲ. ಒಂದು ದಿನ ಅವಳ ಮನೆಗೆ ಒಂದು ಬೀದಿಯಲ್ಲಿ ತಿರುಗಾಡುವ ಬೆಕ್ಕು ಬಂತು. ಆ ಬೆಕ್ಕು ಇನ್ನೇನು ಮರಿ ಹಾಕಲು ತಯಾರಾಗಿತ್ತು. ಆ ವಿಷಯ ಅವಳಿಗೆ ತಿಳಿದಿರಲಿಲ್ಲ. ಅವಳು‌ ಯಾವಾಗಲೆಲ್ಲ ಆ ಬೆಕ್ಕು ಬರುತ್ತದೋ, ಅವಳು ಪೂರಕೆಯನ್ನು ತಿರುಗಿಸಿ ಅದಕ್ಕೆ ಹೊಡೆಯುತ್ತಿದ್ದಳು. ಹಾಗೆ ತುಂಬಾ ದಿನಗಳು ಕಳೆಯಿತು. ಒಂದು ದಿನ ಆ‌ ಬೆಕ್ಕು ಅವಳ ಮನೆಯಲ್ಲೇ ಮರಿ ಹಾಕಿತು. ಅವು ತುಂಬಾ ಮುದ್ದಾಗಿದ್ದವು. ಆ ದಿನದಿಂದ ಅವಳು ಯಾವುದೇ ಪ್ರಾಣಿಗೆ ಹೊಡೆಯುವುದು ಅಥವಾ ಹಾನಿ ಮಾಡಲಿಲ್ಲ.
ಕಥೆಯ ನೀತಿ: ಪ್ರಾಣಿಗಳಿಗೆ ಹಿಂಸೆ ಮಾಡಬಾರದು.
.................................... ಕೆ. ವಿ. ಶರಣ್ಯ. ಭಟ್
5ನೇ ಎ‌ ತರಗತಿ
ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ  
ಕಿಲ್ಪಾಡಿ‌ ಮುಲ್ಕಿ.
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
*******************************************
 
                 

      ಒಂದಾನೊಂದು ಊರಿನಲ್ಲಿ ಒಂದು ದಟ್ಟವಾದ ಕಾಡು ಇತ್ತು. ಆ ಕಾಡಿನ ಅಧಿಪತಿ ಹುಲಿ ಆಗಿತ್ತು. ಆ ಕಾಡಿನಲ್ಲಿ ಜೀವಿಸುತ್ತಿದ್ದ ಎಲ್ಲಾ ಪ್ರಾಣಿಗಳ ರಕ್ಷಣೆಯ ಜವಾಬ್ದಾರಿಯನ್ನು ಹುಲಿಯೇ ವಹಿಸಿಕೊಂಡಿತ್ತು. ಆದರೆ ದಿನಗಳು ಕಳೆದಂತೆ ಸಣ್ಣಪುಟ್ಟ ಪ್ರಾಣಿಗಳನ್ನಷ್ಟೆ ಅಲ್ಲದೆ, ದೊಡ್ಡ ದೊಡ್ಡ ಪ್ರಾಣಿಗಳನ್ನು ತನ್ನ ಆಹಾರವಾಗಿ ಸ್ವೀಕರಿಸುತ್ತಿತ್ತು. ಇದರಿಂದಾಗಿ ಕಾಡಿನಲ್ಲಿದ್ದ ಬಹುತೇಕ ಪ್ರಾಣಿಗಳು ನಾಶವಾದವು. ಆದರೆ ಅದೇ ಕಾಡಿನಲ್ಲಿದ್ದ ಕಾಡೆಮ್ಮೆಯನ್ನು ಹುಲಿಯು ಆಹಾರವಾಗಿ ಸ್ವೀಕರಿಸಿರಲಿಲ್ಲ. ಏಕೆಂದರೆ ಕಾಡಿನಲ್ಲಿ ಬೇರೆ ಯಾವುದೇ ಪ್ರಾಣಿಯನ್ನು ಹುಲಿಯು ಉಳಿಸಿರಲಿಲ್ಲ. ಆದರಿಂದ ಯಾವುದಾದರೂ ಒಂದು ಪ್ರಾಣಿಯಾದರು ಉಳಿದಿರಲಿ ಅನ್ನುವ ಉದ್ದೇಶ ಹುಲಿಗೆ ಇದ್ದಿತು. ಇದನ್ನು ತಿಳಿದುಕೊಂಡ ಕಾಡೆಮ್ಮೆಯು ಧೈರ್ಯವಾಗಿ ಹುಲಿಯ ಬಳಿಗೆ ತೆರಳಿ "ನೀನು ಕಾಡಿನಲ್ಲಿದ್ದ ಪ್ರಾಣಿಗಳನ್ನು ಹಿಡಿದು ತಿನ್ನುವುದು ಸರಿಯಲ್ಲ" ಎಂದು ಕಾಡೆಮ್ಮೆ ಯು ಹುಲಿಯ ಬಳಿ ಆಕ್ಷೇಪಿಸಿತು. ಈ ಕಾಡೆಮ್ಮೆ ಯ ಮಾತನ್ನು ಕೇಳಿದ ಹುಲಿಗೆ ಸಿಟ್ಟು ನೆತ್ತಿಗೇರಿತು. ಇದು ನನ್ನ ಕಾಡು. ನನಗೆ ಇಲ್ಲಿ ಏನು ಬೇಕಾದರೂ ಮಾಡಬಹುದುದಾದ ಅಧಿಕಾರವಿದೆ. ಸುಮ್ಮನಿರದೆ ಇದ್ದರೆ ನಿನ್ನನ್ನೇ ತಿನ್ನುವೆ ಎಂದು ಬೆದರಿಕೆ ಹಾಕಿತು. ಹುಲಿಯನ್ನು ಎದುರಿಸುವ ಶಕ್ತಿ ಇಲ್ಲದಿದ್ದರಿಂದ ಕಾಡೆಮ್ಮೆ ಸುಮ್ಮನಾಯಿತು. ಆದರೆ ಹುಲಿಯ ಸೊಕ್ಕು ಮುರಿಯಲು ಯೋಚಿಸತೊಡಗಿತು.
      ಇತ್ತ ಕಾಡಿನಲ್ಲಿ ಪ್ರಾಣಿಗಳು ಖಾಲಿಯಾಗಿದ್ದರಿಂದ, ಆಹಾರ ಸಿಗದೇ ಹುಲಿ ಕಾಡಿನಂಚಿನ ಹಳ್ಳಿಗಳತ್ತ ನುಗ್ಗತೊಡಗಿತು. ಆ ಊರಿನ ಮನೆಗಳಲ್ಲಿ ಇದ್ದಂತಹ ನಾಯಿಗಳನ್ನು ಹಿಡಿದು ತಿನ್ನಲು ಪ್ರಾರಂಭಿಸಿತು. ಸುಮಾರು ಐದಾರು ನಾಯಿಗಳು ಹುಲಿಯ ಬಾಯಿಗೆ ಆಹಾರವಾದವು. ಇದರಿಂದ ಹಳ್ಳಿಯಲ್ಲಿದ್ದ ನಾಯಿಗಳು ಆತಂಕಕ್ಕೆ ಈಡಾದವು. ಎಲ್ಲ ಮನೆಗಳ ನಾಯಿಯೂ ಒಂದೆಡೆ ಸೇರಿದವು. ಹುಲಿಯನ್ನು ಹೀಗೇ ಬಿಟ್ಟರೇ ನಮ್ಮ ಪ್ರಾಣಕ್ಕೆ ಅಪಾಯ ಎಂದುಕೊಂಡು ಅದರ ವಿರುದ್ಧ ಹೋರಾಡಲು ಉಪಾಯ ಯೋಚಿಸತೊಡಗಿದವು. ಕಾಡಿನಲ್ಲಿ ಹುಲಿಯ ಬಗ್ಗೆ ಕೋಪದಿಂದಿರುವ ಕಾಡೆಮ್ಮೆ ಯ ಬಗ್ಗೆ ತಿಳಿದುಕೊಂಡು ಅದರ ಬಳಿಗೆ ತೆರಳಿದವು. ಹುಲಿಯಿಂದ ಅವುಗಳು ಎದುರಿಸುತ್ತಿರುವ ತೊಂದರೆಯನ್ನು ತಿಳಿಸಿದವು. ಹುಲಿಯ ವಿರುದ್ದವಾಗಿ ಹೋರಾಡಲು ಸಹಾಯವನ್ನು ಕೇಳಿಕೊಂಡವು. ಅದಕ್ಕಾಗಿ ಕಾಡೆಮ್ಮೆ ಎಲ್ಲಾ ರೀತಿಯ ಮಾರ್ಗದರ್ಶನವನ್ನು ನೀಡಿತು. ನಾಯಿಗಳು ಹಳ್ಳಿಯತ್ತ ಬಂದವು. ಕಾಡಿನಲ್ಲಿ ಕಾಡೆಮ್ಮೆ ಮತ್ತು ಹುಲಿ ಭೇಟಿಯಾದವು. ಹಳ್ಳಿಯ ಮನೆಯೊಂದರಲ್ಲಿ ದೊಡ್ಡ ನಾಯಿಯೊಂದಿದೆ. ಅದನ್ನು ಹಿಡಿದು ತಂದರೆ ನಿನಗೆ ಎರಡು ದಿನದ ಆಹಾರ ಸಾಕಾಗುತ್ತದೆ. ಇಂದೇ ರಾತ್ರಿ ಆ ಮನೆಯ ನಾಯಿಯನ್ನು ತೆಗೆದುಕೊಂಡು ಬಾ ಎಂದು ಕಾಡೆಮ್ಮೆಯು ಹುಲಿಗೆ ಸಲಹೆ ನೀಡಿತು. ಇದರಿಂದ ಸಂತೋಷಗೊಂಡ ಹುಲಿಯು ಕಾಡೆಮ್ಮೆಗೆ ಧನ್ಯವಾದ ಸಮರ್ಪಿಸಿತು. ನಂತರ ಕಾಡಿನಿಂದ ಕಾಲ್ಕಿತ್ತ ಕಾಡೆಮ್ಮೆ ಹಳ್ಳಿಗೆ ಧಾವಿಸಿತು. ನಂತರ ಆ ನಾಯಿಗಳ ಹಿಂಡು ಇರುವಲ್ಲಿಗೆ ತೆರಳಿತು. ಹುಲಿಗೆ ತಾನು ಹೇಳಿದ ಮಾತನ್ನು ನಾಯಿಗಳಿಗೆ ತಿಳಿಸಿ, ಇಂದೇ ರಾತ್ರಿ ಹುಲಿ ಬರುವುದನ್ನು ತಿಳಿಸಿತು. ಎಲ್ಲರೂ ಸೇರಿ ಅದರ ವಿರುದ್ಧ ದಾಳಿ ನಡೆಸಲು ಉಪಾಯ ತಿಳಿಸಿತು. ಕಾಡೆಮ್ಮೆ ಮತ್ತು ನಾಯಿಗಳ ಹಿಂಡು ಅದೇ ಮನೆಯ ಹಿಂದಿರುವ ಪೊದೆಯಲ್ಲಿ ಅವಿತುಕೊಂಡವು. ಅದಾಗಲೇ ಹುಲಿರಾಯ ಆ ಮನೆಯ ಅಂಗಳದಲ್ಲಿ ನಾಯಿಯನ್ನು ಹುಡುಕತೊಡಗಿತು. ಆಗ ಏಕಾಏಕಿ ಕಾಡೆಮ್ಮೆ ಮತ್ತು ನಾಯಿಗಳು ಹುಲಿಯ ಮೇಲೆ ಎರಗಿ ಹುಲಿಯನ್ನು ಕೊಂದು ಹಾಕಿದವು.
................................................. ಚರಿತಾ
10ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************

         

     ಹಿಂದೆ ಒಬ್ಬ ಬಡವನಿಗೆ ಏಳು ಮಂದಿ ಗಂಡು ಮಕ್ಕಳಿದ್ದರು. ಅವರಿಗೆಲ್ಲಾ ಊಟ ಕೊಡಲು ಅಸಾಧ್ಯವಾದುದರಿಂದ ಅವನು ಅವರನ್ನು ಒಂದೇ ಕಾಡಿನಲ್ಲಿ ಬಿಟ್ಟ. ಆ ಮಕ್ಕಳು ಮನೆಗೆ ವಾಪಾಸು ಹೋಗುವುದಕ್ಕೆ ಪ್ರಯತ್ನಪಟ್ಟರಾದರೂ ಅವರಿಗೆ ಮನೆಯ ದಾರಿ ಸಿಗಲಿಲ್ಲ. ಅವರಿಗೆ ಆಗ ಒಂದು ಕೋಟೆ ಕಾಣಿಸಿತು. ಅಲ್ಲಿ ಒಬ್ಬ ದೈತ್ಯನು ತನ್ನ ಏಳು ಮಂದಿ ಹೆಣ್ಣು ಮಕ್ಕಳೊಂದಿಗೆ ವಾಸ ಮಾಡುತ್ತಿದ್ದ. ಅವರು ಅಲ್ಲಿ ಆ ರಾತ್ರಿ ಉಳಿದುಕೊಳ್ಳಬಹುದೆಂದು ದೈತ್ಯ ಹೇಳಿದ. ಅವನು ಅವರನ್ನು ಕೊಂದು ತಿನ್ನಲು ಉದ್ದೇಶಿಸಿದ್ದ. ಅವನು ಅವರನ್ನು ತನ್ನ ಏಳು ಮಂದಿ ಹೆಣ್ಣು ಮಕ್ಕಳ ಶಯಾಗಾರಕ್ಕೆ ಕರೆದೊಯ್ದ. ಅವರೆಲ್ಲರೂ ಅಲ್ಲಿ ಒಂದು ದೊಡ್ಡದಾದ ಹಾಸಿಗೆಯಲ್ಲಿ ಮಲಗಿ ನಿದ್ರಿಸುತ್ತಿದ್ದರು. ಎಲ್ಲರೂ ತಲೆಯ ಮೇಲೆ ಚಿಕ್ಕ ಕಿರೀಟ ಧರಿಸಿದ್ದರು. ದೈತ್ಯನು ಅದೇ ಕೋಣೆಯಲ್ಲಿ ಏಳು ಮಂದಿ ಗಂಡು ಮಕ್ಕಳಿಗೆ ಮಲಗಲು ಇನ್ನೊಂದು ಹಾಸಿಗೆ ಹಾಕಿದ. ದೈತ್ಯನು ಹೋದ ಮೇಲೆ ಗಂಡು ಮಕ್ಕಳು ಹೆಣ್ಣು ಮಕ್ಕಳ ಕಿರೀಟಗಳನ್ನು ತಮ್ಮ ಟೊಪ್ಪಿಗಳೊಂದಿಗೆ ಬದಲಿಸಿ ತಾವು ಕಿರೀಟಗಳನ್ನು ಧರಿಸಿದರು. ತಡರಾತ್ರಿ ಅವರನ್ನು ಕೊಂದು ತಿನ್ನಲು ಬಂದ ದೈತ್ಯನು ಟೊಪ್ಪಿಗಳನ್ನು ಧರಿಸಿ ಮಲಗಿದ್ದ ತನ್ನ ಹೆಣ್ಣು ಮಕ್ಕಳನ್ನೇ ಗಂಡು ಹುಡುಗರೆಂದು ಭಾವಿಸಿ ಅವರನ್ನೆಲ್ಲ ತಿಂದುಬಿಟ್ಟ. ಈ ಗದ್ದಲದಲ್ಲಿ ಗಂಡು ಮಕ್ಕಳು ಅಲ್ಲಿದ್ದ ಬಂಗಾರದ ನಾಣ್ಯಗಳನ್ನು ಎತ್ತಿಕೊಂಡು ಮನೆ ಸೇರಿದರು. ನಂತರ ಶ್ರೀಮಂತರಾಗಿ ಜೀವಿಸಿದರು.
............................................. ಜಿ ಎಂ ಆತ್ಮಿಕ 
4ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಏಮಾಜೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************

        


     ರಾಜು ತಗತಿಯ ಬುದ್ದಿವಂತ ವಿದ್ಯಾರ್ಥಿ ಯಾಗಿದ್ದನು. ಅಬ್ಯಾಸದಲ್ಲಿ ಆಟೋಟ ಸ್ಪರ್ಧೆಗಳಲ್ಲಿ ಯಾವಾಗಲೂ ಮೊದಲ ಬಹುಮಾನ ಪಡೆಯುತ್ತಿದ್ದನು. ಅವನು ತುಂಬಾ ಪ್ರಾಮಾಣಿಕ ಹುಡುಗನಾಗಿದ್ದನು. ಹೀಗಿರುವಾಗ ಒಂದು ದಿನ ಅವನು ಆಟ ಆಡುವಾಗ ಅವನು ಮೋಸ ಮಾಡಿದ್ದನ್ನು ಅವನ ಶಿಕ್ಷಕರು ನೋಡಿದರು. ರಾಜುವನ್ನು ಕರೆದು ಅವನು ಮಾಡಿದ ತಪ್ಪಿಗೆ ಕಿವಿಮಾತನ್ನು ಹೇಳಿದರು. ಇದರಿಂದ ಅವನಿಗೆ ಶಿಕ್ಷಕರ ಮೇಲೆ ತುಂಬಾ ಕೋಪ ಬಂತು ಮತ್ತು ಬೇಸಾರವಾಯಿತು. ಆದರಿಂದ ಅವನು ಸಪ್ಪೆ ಮುಖಮಾಡಿಕೊಂಡು ಮನೆಗೆ ಹಿಂತಿರುಗಿದನು. ಅಲ್ಲಿ ಅವನ ಮುಖವನ್ನು ನೋಡಿದ ತಾಯಿಗೆ "ಇವನು ಏಕೆ ತುಂಬಾ ಬೇಸರದಲ್ಲಿ ಇರುವಂತೆ ಕಾಣುತ್ತಿದೆ" ಎಂದು ಅನಿಸುತ್ತದೆ. ಅದಕ್ಕೆ ಅವಳು , "ಮಗು ರಾಜು ಏನಾಯಿತು ನಿನಗೆ" ಎಂದು ಕೇಳಿದಳು. ಅದಕ್ಕೆ ಅವನು ಶಾಲೆಯಲ್ಲಿ ನಡೆದ ಘಟನೆಯನ್ನು ವಿವರವಾಗಿ ಹೇಳಿದನು. "ನಾನು ಇದಕ್ಕೂ ಮೊದಲು ಯಾವಾಗಲೂ ತಪ್ಪು ಮಾಡಿರಲ್ಲಿಲ್ಲವಾಗಿತ್ತು. ಆದರೂ ನನಗೆ ಶಿಕ್ಷಕರು ಗದರಿಸಿದರು" ಎಂದನು. ಆಗ ಅವನ ಅಮ್ಮನು ಒಂದು ಬಿಳಿ ಹಾಳೆಯನ್ನು ತೆಗೆದುಕೊಂಡು ಬಂದರು. ಅದರ ಮೇಲೆ ಸ್ವಲ್ಪ ಮಸಿಯನ್ನು ಹಾಕಿದರು. ರಾಜುವಿಗೆ ಹೇಳಿದರು "ನೋಡು ಈ ಹಾಳೆಯು ಒಂದು ಹನಿ ಮಸಿಯಿಂದ ಕೊಳೆಯಾಯಿತು. ಅದೇ ರೀತಿ ನೀನು ಎಷ್ಟೇ ಒಳ್ಳೆಯ ವಿದ್ಯಾರ್ಥಿಯಾಗಿದ್ದರೂ ನೀನು ಮಾಡಿದ ಒಂದು ತಪ್ಪಿನಿಂದ ನಿನ್ನ ಹೆಸರು ಹಾಳಾಗುತ್ತದೆ. ಆದರಿಂದ ಇನ್ನು ಮುಂದೆ ಈ ತಪ್ಪುಗಳನ್ನು ಮಾಡಬೇಡ" ಎಂದು ಹೇಳಿದಳು. ಆಗ ಅವನಿಗೆ ತನ್ನ ತಪ್ಪಿನ ಅರಿವಾಯಿತು. ಅದರಿಂದ ತನ್ನ ಅಮ್ಮನಿಗೆ ಕ್ಷಮೆಯನ್ನು ಕೇಳುತ್ತಾನೆ. ಆಗ ಅಮ್ಮ ಹೇಳುತ್ತಾಳೆ, "ಮಗು ರಾಜು ನೀನು ನಿನ್ನ ಶಿಕ್ಷಕರ ಹತ್ತಿರ ಹೋಗಿ ಕ್ಷಮೆ ಕೇಳು ಅಂದಳು. ಅವನು ಸರಿ ಎಂದು ಮರುದಿನ ಶಾಲೆಗೆ ಹೋದನು. ಅಲ್ಲಿ ಅವನು ಶಿಕ್ಷಕರ ಬಳಿ ಕ್ಷಮೆಯನ್ನು ಕೇಳಿದ. ಶಿಕ್ಷಕರು ಹೇಳುತ್ತಾರೆ ನೀನು ನಿನ್ನ ತಪ್ಪನ್ನು ತಿದ್ದುಕೊಂಡೆಯಲ್ಲ ಅದೇ ನಮಗೆಲ್ಲಾ ಸಂತೋಷವಾಯಿತು ಎಂದರು. ರಾಜು ಮನೆಗೆ ಬಂದು ಅಮ್ಮನಿಗೆ ಮಾತು ಕೊಟ್ಟನು. ನಾನು ಇನ್ನು ಮುಂದೆ ಯಾವಾಗಲು ಸುಳ್ಳು ಹೇಳುವುದಿಲ್ಲ. ನನಗೆ ನನ್ನ ತಪ್ಪು ತಿಳಿಯಿತು. ಅಮ್ಮ ನಿನಗೆ ನೂರು ನಮನ ಎಂದನು. 
      ಈ ಕಥೆಯಿಂದ ವಿದ್ಯಾರ್ಥಿಗಳಾದ ನಾವು ತಿಳಿದುಕೊಳ್ಳುವುದೇನೆಂದರೆ ನಾವು ಯವಾಗಲೂ ಸತ್ಯವನ್ನೇ ಮಾತನಾಡಬೇಕು. ಯಾರಿಗೂ ಮೋಸಮಾಡಬಾರದು. ಶಿಕ್ಷಕರು ನಮಗೆ ಯಾವುದಾದರೂ ಒಂದು ವಿಷಯಕ್ಕೆ ಬಯ್ಯುತ್ತಾರೆಂದರೆ ಅದು ನಮ್ಮ ಒಳ್ಳೆಯದಕ್ಕೆ ಅಂತ ನಾವು ತಿಳಿದುಕೊಳ್ಳಬೇಕು. ಅದರ ಬದಲು ನಾವು ಅವರಿಗೆ ಎದುರು ಮಾತನಾಡಿದರೆ ಅದು ನಮ್ಮ ದೊಡ್ಡ ತಪ್ಪಾಗುತ್ತದೆ. ಗುರುಗಳು ಅಂದರೆ ದೇವರ ಸಮಾನ. ನಾವು ದೇವರನ್ನು ಹೇಗೆ ನಮಸ್ಕರಿಸುತ್ತೇವೆಯೋ ಅದೇ ರೀತಿ ನಾವು ಗುರುಗಳಿಗೂ ಕೂಡ ನಮಸ್ಕರಿಸಿ, ವಂದಿಸಬೇಕು. 
................................. ಹರ್ಷಿತಾ ಎಂ ನಾಯ್ಕ್
6ನೇ ತರಗತಿ 
ದಿನಕರ ಇಂಗ್ಲಿಷ್ ಮೀಡಿಯಂ 
ಸ್ಕೂಲ್, ಧಾರೇಶ್ವರ 
ಕುಮಟಾ ತಾಲೂಕು, ಉತ್ತರ ಕನ್ನಡ ಜಿಲ್ಲೆ
*******************************************

           
                  
     ಒಂದು ದಿನಮಕ್ಕಳ ಗುಂಪು ಒಟ್ಟಿಗೆ ಆಟವಾಡುತ್ತಿದ್ದರು. ಅವರೆಂದರೆ ಟಾಮ್, ಸೆರಾ, ಆನ್ ಮತ್ತು ಜಾನ್. ತೋಟದಲ್ಲಿ ಕಣ್ಣಾ ಮುಚ್ಚಾಳೆ ಆಡುತ್ತಿದ್ದರು. ಜಾನ್ ಮತ್ತು ಆನ್ ಓಡಿ ಹೋಗಿ ಕಸದ ತೊಟ್ಟಿಯ ಬಳಿ ಅವಿತು ಕೊಂಡರು. ಜಾನ್ ಹಸಿವಿನಿಂದ ತೊಳಲಾಡುವ ಬಡ ಕುಟುಂಬವೊಂದನ್ನು ನೋಡಿದನು. ನಂತರ ಈ ವಿಚಾರವನ್ನು ಸ್ನೇಹಿತರು ಮತ್ತು ಅವರ ಪೋಷಕರಿಗೆ ತಿಳಿಸಿದನು. ಸ್ನೇಹಿತರು ಮತ್ತು ಪೋಷಕರು ಅವರಿಗೆ ತಿಳಿದಂತಹ ಇನ್ನಿತರ ಸ್ನೇಹಿತರಿಗೂ, ಬಂಧುಗಳಿಗೂ ಈ ವಿಚಾರ ತಿಳಿಸಿದನು. ಅವರ ಕಷ್ಟವನ್ನರಿತ ಎಲ್ಲರೂ ಆ ಬಡ ಕುಟುಂಬಕ್ಕೆ ಪ್ರತಿದಿನ ಊಟವನ್ನು ವಿತರಿಸಲು ಪ್ರಾರಂಭಿಸಿದರು. ಅಂದಿನಿಂದ ಆ ಪ್ರದೇಶದಲ್ಲಿರುವ ಬಡ ಕುಟುಂಬಗಳ ಜನರೆಲ್ಲರೂ ಸಂತೋಷದಿಂದ ಬದುಕುತ್ತಿದ್ದರು.
................................................. ಅನುಷ್ಕಾ 
5ನೇ ತರಗತಿ
ಒನ್ ವಲ್ಡ್ ಇಂಟರ್ನ್ಯಾಷನಲ್ ಶಾಲೆ
ಬೆಂಗಳೂರು
*******************************************


                 
    ಒಂದು ಊರಿನಲ್ಲಿ ರಾಣಿ ಮತ್ತು ರಾಮ ಎಂಬ ದಂಪತಿಗಳು ಇದ್ದರು. ಅವರಿಗೆ ಗೀತಾ ಎಂಬ ಮಗಳಿದ್ದಳು. ಇವಳಿಗೆ ಪ್ರಾಯ ಆರು ವರ್ಷವಾಗಿದ್ದಾಗಲೇ ಅವಳ ತಾಯಿ ಅನಾರೋಗ್ಯದಿಂದ ತೀರಿಕೊಂಡರು. ಮನೆಯಲ್ಲಿ ಯಾರೂ ಇರಲಿಲ್ಲ. ಅಪ್ಪ ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಂಜೆ ಬರುತ್ತಿದ್ದರು. ಮನೆ ಕೆಲಸ ಗೀತಾ ಮಾಡಿ ಶಾಲೆಗೆ ಹೋಗುತ್ತಿದ್ದಳು. ಅವಳ ಅಪ್ಪನ ಕನಸು ನನ್ನ ಮಗಳು ಟೀಚರ್ ಆಗಬೇಕು ಎಂಬುದಾಗಿತ್ತು. ಸ್ವಲ್ಪ ಕಾಲದ ನಂತರ ಅಪ್ಪ ತೀರಿಕೊಂಡರು. ಮನೆಯಲ್ಲಿ ಇವಳು ಮಾತ್ರ ಇರುತ್ತಿದ್ದಳು. ಬೆಳಿಗ್ಗೆ ಎದ್ದು ಮನೆ ಕೆಲಸ ಮಾಡಿ ಶಾಲೆಗೆ ಹೋಗುತ್ತಿದ್ದಳು. ಅದರ ನಡುವೆ ಇವಳು ಮಾಡಿದಂತಹ ಚಹಾವನ್ನು ಮಾರುತಿದ್ದಳು. ನೆರೆಹೊರೆಯ ಶ್ರೀಮಂತರ ಮನೆಗಳಲ್ಲಿ ಮನೆ ಕೆಲಸವನ್ನು ಮಾಡುತ್ತಿದ್ದಳು. ರಾತ್ರಿ ಬಂದು ಅಡುಗೆ ಮಾಡಿ ರಸ್ತೆಯ ದೀಪದ ಅಡಿಯಲ್ಲಿ ಕುಳಿತು ಓದುತ್ತಿದ್ದಳು. ಇದೇ ರೀತಿ ಮುಂದುವರೆಯುತ್ತಿತ್ತು. ಪ್ರಾಥಮಿಕ ಶಿಕ್ಷಣವನ್ನು ತನ್ನ ಹಳ್ಳಿಯಲ್ಲಿ ಮುಗಿಸಿದಳು. ಅವಳಿಗೆ ತಾನು ಓದುತ್ತ ಹೋದಂತೆ ಇನ್ನಷ್ಟು ಓದಬೇಕು ಮತ್ತಷ್ಟು ಕಲಿಯಬೇಕು ಅಪ್ಪನ ಕನಸು ನನಸು ಮಾಡಬೇಕೆಂಬ ಉತ್ಸಾಹ ಮೂಡುತ್ತಿತ್ತು. ಆದರೆ ಬಡತನ. ಮನೆಯ ಪಕ್ಕದಲ್ಲಿಯೇ ಹೈಸ್ಕೂಲ್ ಇದ್ದುದರಿಂದ ಹೇಗೋ ಹೈಸ್ಕೂಲ್ ಶಿಕ್ಷಣ ಮುಗಿಯಿತು. ಕಾಲೇಜು ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣವನ್ನು ಪಾವತಿ ಮಾಡಬೇಕು. ಪ್ರತಿದಿನ ಅವಳಿಗೆ ಇದೇ ಚಿಂತೆ ಕಾಡುತ್ತಿತ್ತು. ಆದರೆ ಓದಬೇಕೆಂಬ ಆಸೆ ಬಿಟ್ಟು ಹೋಗಲಿಲ್ಲ. ಅವಳು ಅಂದಿನಿಂದ ರಜೆಯ ಸಮಯದಲ್ಲಿ ಹಗಲಿರುಳು ಲೆಕ್ಕಿಸದೆ ಕೆಲಸ ಮಾಡಿ ಹಣವನ್ನು ಕೂಡಿಟ್ಟಳು. ಕಾಲೇಜು ಪ್ರಾರಂಭವಾಯಿತು. ಕಾಲೇಜಿಗೆ ಸೇರಿಕೊಂಡಳು. ಅವಳು ತನ್ನ ಪಿಯುಸಿಯಲ್ಲಿ ಇತಿಹಾಸ ವಿಭಾಗ ತೆಗೆದುಕೊಂಡಿದ್ದಳು. ದಿನದಲ್ಲಿ ಆರು ಗಂಟೆಗಳ ಕಾಲ ಓದುತ್ತಿದ್ದಳು. ಉಳಿದ ಸಮಯ ಕೆಲಸಕ್ಕಾಗಿ ಮೀಸಲಿಡುತ್ತಿದ್ದಳು. ಅಂತಿಮ ಪರೀಕ್ಷೆಯ ಸಮಯದಲ್ಲೂ ಹೀಗೆ ಮಾಡುತ್ತಿದ್ದಳು. ಅಂತಿಮ ಪರೀಕ್ಷೆಯಲ್ಲಿ ಅವಳಿಗೆ ಪ್ರಥಮ ಸ್ಥಾನ ಬಂದಿತು. ಎಲ್ಲರೂ ಅವಳ ಬಗ್ಗೆ ಹೊಗಳುತ್ತಿದ್ದರು. ಅವಳಿಗೆ ಸನ್ಮಾನ ಪುರಸ್ಕಾರ ಹರಿದು ಬಂತು. ಇದನ್ನು ಕೇಳಿ ನೋಡಿ ಅವಳ ಜೀವನವೇ ಸಾರ್ಥಕವಾಯಿತು. ಅಪ್ಪನ ಕನಸಿನಂತೆ ಟೀಚರ್ ಆದಳು.
................................................. ಶಿಫಾನ 
ಪ್ರಥಮ ಪಿಯುಸಿ 
ಅನುಗ್ರಹ ಮಹಿಳಾ ಪದವಿ ಪೂರ್ವ 
ಕಾಲೇಜು, ಕಲ್ಲಡ್ಕ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************





Ads on article

Advertise in articles 1

advertising articles 2

Advertise under the article