-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 19

ನಿಷ್ಪಾಪಿ ಸಸ್ಯಗಳು : ಸಂಚಿಕೆ - 19

ನಿಷ್ಪಾಪಿ ಸಸ್ಯಗಳು : ಸಂಚಿಕೆ - 19
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

        
ಪ್ರೀತಿಯ ಮಕ್ಕಳೇ,
      ಹೇಗಿದ್ದೀರಿ? ನಾನಿಂದು ಆಯುರ್ವೇದ ಔಷಧಗಳಲ್ಲಿ ಬಹಳವಾಗಿ ಬಳಸಲ್ಪಡುವ ವಿಶೇಷ ಸಸ್ಯವೊಂದರ ಬಗ್ಗೆ ಪರಿಚಯ ಮಾಡಬೇಕೆಂದಿದ್ದೇನೆ.
       ಮಳೆಗಾಲದ ಆರಂಭದ ದಿನಗಳಲ್ಲಿ ಅಂದರೆ ಜೂನ್ ತಿಂಗಳಲ್ಲಿ ನಮ್ಮ ನೆರೆಮನೆಯ ಲಲಿತಾಂಬಿಕೆಯವರ ಕೈಯಲ್ಲಿ ಒಂದು ಸ್ಟೀಲ್ ಪಾತ್ರೆಯೊಳಗೆ ಮಲ್ಲಿಗೆಯಂತಹ ಬಿಳೀ ಹೂಗಳ ಗೊಂಚಲುಗಳನ್ನು ನೋಡಿದೆ. ಹೂಗಳಿಗೆ ನಾಲ್ಕು ಎಸಳುಗಳಿದ್ದವು. ತೊಟ್ಟಿನಿಂದ ಬಿಳಿ ಹಾಲು ಸ್ರವಿಸುತ್ತಿತ್ತು. ಅದಕ್ಕೆ ವಿಶಿಷ್ಟವಾದ ಸುವಾಸನೆಯೂ ಇತ್ತು. ನಾಲ್ಕಾರು ಗಿಡಗಳ ಎಲ್ಲ ಹೂಗಳನ್ನೂ, ಮೊಗ್ಗನ್ನೂ ಕೂಡ ತಂದಂತಿತ್ತು. ಆವರೆಗೆ ಅಂತಹ ಹೂಗಳನ್ನು ನಾನು ನೋಡಿರಲಿಲ್ಲ. ಅಷ್ಟೊಂದು ಮೋಹದಿಂದ ಕಾಡು ಹೂ ಕೊಯ್ದು ತಂದ ಕಾರಣ ಹಾಗೂ ಹೆಸರು ಏನೆಂದು ಕೇಳಿದೆ. ಆಗ ಹೂವು ತಂಬುಳಿಗೆಂದೂ ಅದರ ಹೆಸರು ಕೊಡಸಿಗ ಅಂತ ತಿಳಿಸುವ ಜೊತೆಗೆ ಹೂ ತುಂಬಾ ಕಹಿ, ತುಪ್ಪದಲ್ಲಿ ಹುರಿದು ಉಪ್ಪು, ಹುಳಿ, ಬೆಲ್ಲ ಹಾಗೂ ಮಜ್ಜಿಗೆ ಸೇರಿಸಿ ತಂಬುಳಿ ಮಾಡಬೇಕೆಂದೂ ತಿಳಿಸಿದರು. ಹೂವಿಗೆ ಉಪ್ಪು ಸೇರಿಸಿ ಒಣಗಿಸಿಟ್ಟು ಕೊಂಡರೂ ಬೇಕಾದಾಗ ಬಳಸಬಹುದು ಮಾತ್ರವಲ್ಲದೆ ಇದರ ಎಳೆಯ ಬೀನ್ಸ್ ನಂತಹ ಕೋಡುಗಳಿಂದ ಪಲ್ಯ, ಮೆಣಸ್ಕಾಯಿ, ಸಾಂಬಾರು, ಗೊಜ್ಜಿಗಾಗಿ ಬಳಸಬಹುದೆಂದು ತಿಳಿಯಿತು.
     ಬಳಿಕ ನಾನು ಆ ಸಸ್ಯದ ಪರಿಚಯ ಮಾಡಿಕೊಂಡಾಗ ತಿಳಿದುದೇನೆಂದರೆ ನಮ್ಮ ಅಮ್ಮ ಮನೆಯಲ್ಲಿ ಮಕ್ಕಳಿಗೇನಾದರೂ ಅಸೌಖ್ಯವಾದಾಗ ಸೋಂಕಿನ ಮದ್ದು ಎಂದು ನೀಡುತ್ತಿದ್ದ ತೊಗಟೆಯ ಕಹಿ ಒಣ ಹುಡಿಯೂ ಇದೇ ಗಿಡದ್ದೆಂದು ತಿಳಿಯಿತು. ಪ್ರಕೃತಿಗಿಂತ ದೊಡ್ಡ ವೈದ್ಯ ಈ ಜಗತ್ತಿನಲ್ಲಿ ಯಾರೂ ಇಲ್ಲ. ಆಯುರ್ವೇದದಲ್ಲಿ ಸುಮಾರು ನೂರರಷ್ಟು ಔಷಧಿಗಳಲ್ಲಿ ಈ ಕೊಡಸಿಗೆಯ ಪಾಲಿದೆ. ಪಶ್ಚಿಮಘಟ್ಟಗಳಲ್ಲಿ ಹೇರಳವಾಗಿರುವ ಈ ಸಸ್ಯ ಹಿಮಾಲಯದ ತಪ್ಪಲು, ಬಯಲುಸೀಮೆ ಹೀಗೆ ಎಲ್ಲ ವಾತಾವರಣಕ್ಕೂ ಒಗ್ಗಿ ಬೆಳೆಯುತ್ತದೆ. ಬಳ್ಳಾರಿಯಂತಹ ಬಿಸಿಲುನಾಡಿನಲ್ಲಿ ನಗುನಗುತ್ತಾ ಹೂ ಅರಳಿಸುತ್ತವೆ. ಹತ್ತು ಹನ್ನರೆಡು ಅಡಿಗಳಿಗಿಂತ ಹೆಚ್ಚು ಎತ್ತರ ಬೆಳೆಯದು. ಹಲ್ಲು ನೋವಿಗೆ ಎಲೆಯನ್ನು ಕಿತ್ತಾಗ ಬರುವ ಬಿಳಿ ಹಾಲನ್ನು ಬಳಸುತ್ತಾರೆ. ಕುಟಜ, ಕೊಡಸ, ಕೊಡಸಿಗ, ಕೊಡಗಾಸನ, ಗಿರಿಮಲ್ಲಿಕಾ ಎಂದೆಲ್ಲ ಕರೆಯಲ್ಪಡುವ ಈ ಗಿಡವನ್ನು ಇಂಗ್ಲೀಷ್ ಭಾಷೆಯಲ್ಲಿ ಈಸ್ಟರ್ ಟ್ರೀ ಎನ್ನುತ್ತಾರೆ. ಈ ನಿಷ್ಪಾಪಿ ಸಸ್ಯದ ಹೂ, ಕಾಯಿ, ಬೀಜ, ಎಲೆ, ತೊಗಟೆ, ಬೇರು ಕೂಡ ಕಹಿಯಾಗಿದ್ದರೂ ಔಷಧವಾಗಿ ಬಳಕೆಯಾಗುತ್ತದೆ. ಜಿಟಿಜಿಟಿ ಮಳೆಗೆ ಇಣುಕುವ ಸೂರ್ಯಕಿರಣಗಳ ನಡುವೆ ಕಾಣಿಸಿಕೊಳ್ಳುವ ಜ್ವರ, ನೆಗಡಿ, ಕೆಮ್ಮು, ಆಮಶಂಕೆ, ಅಜೀರ್ಣ, ಹೊಟ್ಟೆ ಹುಳದ ಸಮಸ್ಯೆಗಳಿಗೆ ಕುಟಜ ದಿವ್ಯೌಷಧವಾಗಿದೆ.
         ರಕ್ತದ ನಂಜಿ, ಮೂಲವ್ಯಾಧಿ, ಭೇದಿ ಗಳಿಗೆ ರಾಮಬಾಣವಾದ ಈ ಕುಟಜ ಶ್ವಾಸಕೋಶದ ಸೋಂಕು, ಅತಿಸಾರ, ಕರುಳಿನ ಹುಣ್ಣು, ರಕ್ತಸ್ರಾವ, ಕಫ, ಪಿತ್ತದೋಶ, ಜ್ವರ, ಹೊಟ್ಟೆಯ ಆರೋಗ್ಯ, ಹೊಟ್ಟೆ ಹುಳ, ತುರಿಕೆ, ತೊನ್ನು ಇತ್ಯಾದಿಗಳಿಗೆ ಉಪಶಮನ ನೀಡುತ್ತದೆ. ಕುಟಜಾರಿಷ್ಟ ಔಷಧಿ ಅಂಗಡಿಗಳಲ್ಲಿ ಇರುವ ಖ್ಯಾತ ಔಷಧಿಯಾಗಿದೆ.
         Holarrhena antidysenterica ಎಂಬ ಶಾಸ್ತ್ರೀಯ ಹೆಸರು ಕೊಡಸಿಗೆಗಿದ್ದು Apoeynaceae ಕುಟುಂಬಕ್ಕೆ ಸೇರಿದೆ. ಇದರ ಎಲೆಯಲ್ಲಿ ತಂಬಾಕು ಇಟ್ಟು ಅಥವಾ ಬೀಡಿ ಸುತ್ತಿಯೂ ಸೇದುತ್ತಿದ್ದುದರಿಂದ ಬೀಡಿ ಎಲೆ ಎಂದೂ ಹೆಸರಿದೆಯಂತೆ.
       ಮಕ್ಕಳೇ, ಕೊರೊನಾದಂತಹ ರೋಗ ಬಂದಾಗ ಸಿದ್ದ ಔಷಧಗಳು ದೊರೆಯುವ ಬಗ್ಗೆ ಖಾತ್ರಿ ಇರಲಿಲ್ಲ. ಯೋಗ್ಯ ಸಮಯದಲ್ಲಿ ಯೋಗ್ಯ ಔಷಧಿಯನ್ನು ನೀಡಬಲ್ಲ ಸಾಧ್ಯತೆ ಇರುವುದು ವನಸ್ಪತಿಗಳಿಗೆ ಮಾತ್ರ. ಭವಿಷ್ಯದ ಕಾಲಗರ್ಭ ಅರಿತವರ್ಯಾರು! ಒಂದು ಕಾಲದಲ್ಲಿ ಸ್ವಲ್ಪ ಆಚೀಚೆ ಹೋದರೆ ಕೈಗೆ ಸಿಗುತ್ತಿದ್ದ ಕೊಡಸಿಗೆ ಇಂದು ಪ್ರಕೃತಿ ನಾಶದ ಜೊತೆ ಅಸ್ತಿತ್ವವನ್ನೇ ಕಳೆದುಕೊಂಡಿದೆ. ನ್ಯುಮೋನಿಯಾ ದಂತಹ ರೋಗಕ್ಕೆ ಬ್ಯಾಕ್ಟೀರಿಯಾ ವಿರೋಧಿಯಾದ ಕುಟಜ ಪರಿಣಾಮಕಾರಿ ಔಷಧಿ. ದೇಹಕ್ಕೆ ರೋಗಾಣು ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ. ವರ್ಷಕ್ಕೆ ಒಂದೆರಡು ಬಾರಿಯಾದರೂ ಈ ಸಸ್ಯದ ಬಳಕೆ ಮಾಡಿಕೊಂಡರೆ ದೇಹಾರೋಗ್ಯ ಸುಧಾರಿಸಿಕೊಳ್ಳಬಹುದು. ಆದ್ದರಿಂದ ನಮ್ಮ ಸುತ್ತಮುತ್ತ ಈ ಸಸ್ಯವಿದ್ದರೆ ಕಡಿಯದೆ ರಕ್ಷಣೆ ಮಾಡುವ ಕೆಲಸವನ್ನಾದರೂ ಮಾಡೋಣ. ಮುಂದಿನ ನಾಳೆಗಳಿಗೆ ಬೇಕಿತ್ತು.. ಬೇಕಿತ್ತು ಅಂತ ಅಗತ್ಯವಾಗಲೂ ಬಹುದು. ಏನಂತೀರಾ?
      ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.... ನಮಸ್ಕಾರ
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************



Ads on article

Advertise in articles 1

advertising articles 2

Advertise under the article