ಓ ಮುದ್ದು ಮನಸೇ ...…...! ಸಂಚಿಕೆ - 33
Thursday, October 12, 2023
Edit
ಓ ಮುದ್ದು ಮನಸೇ ...…...! ಸಂಚಿಕೆ - 33
ಲೇಖಕರು : ಡಾ. ಗುರುರಾಜ್ ಇಟಗಿ
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : 63610 07190
ಜಗತ್ತೆ ಹಾಗೆ ಕೆಲವರಿಗೆ ತಿನ್ನೋಕೆ ಕಡಲೆಯಿದೆ ಆದರೆ ಹಲ್ಲಿಲ್ಲ, ಇನ್ನು ಕೆಲವರಿಗೆ ಹಲ್ಲಿದೆ ಆದರೆ ಕಡಲೆಯಿಲ್ಲ. ದೇಶದ ಶೇಖಡಾ 40 ರಷ್ಟು ಸಂಪತ್ತನ್ನ ಇಲ್ಲಿನ ಕೇವಲ 1ಪ್ರತಿಶತ ಜನರು ಅನುಭವಿಸುತ್ತಿದ್ದಾರೆ ಎಂದರೆ ನೀವೇ ಊಹಿಸಿಕೊಳ್ಳಿ. ದೇವರ ಸೃಷ್ಠಿಯೇ ವಿಚಿತ್ರ. ಕೆಲವರು ತಲೆಮಾರುಗಳಿಗಾಗುವಷ್ಟು ಆಸ್ತಿಯ ಒಡೆಯರಾಗಿದ್ದರೆ ಇನ್ನು ಕೆಲವರು ಒಂದು ಹೊತ್ತಿನ ತುತ್ತಿಗೂ ಪರದಾಡುತ್ತಿದ್ದಾರೆ. ಜಗತ್ತಿನಲ್ಲಿ ಪ್ರತಿ ನಾಲ್ಕು ಸೆಕೆಂಡಿಗೆ ಒಬ್ಬ ವ್ಯಕ್ತಿ ಹಸಿವಿನಿಂದ ಸಾವನ್ನಪ್ಪುತ್ತಿದ್ದಾನೆ. ಅಭಿವೃದ್ಧಿಶೀಲ ಭಾರತದಲ್ಲಿ ಸಂಪೂರ್ಣ ಬಡತನವನ್ನು ನಿರ್ಮೂಲನೆ ಮಾಡಲು ಇವತ್ತಿಗೂ ಸಾಧ್ಯವಾಗಿಲ್ಲ.
"ಅಯ್ಯೋ ಈ ದೇವ್ರು ಯಾಕಾದ್ರೂ ನನ್ನ ಬದುಕಿಸಿದ್ದಾನೋ ಗೊತ್ತಿಲ್ಲ. ಪ್ರತಿದಿನ ಮೈಸುಡ ಬಿಸ್ಲಾಗೆ ಮಣ ಬಾರದ್ ಈ ಬಟ್ಟೆ ಹೊತ್ತು ಹೊಳೆಗಂಟ ಹೋಗೋದು ಅಂದ್ರೆ ಸುಲ್ಬಾನಾ. ನನ್ ಕಾಲಲ್ಲಾ ಬಿದ್ದೋದ್ವು". ಎನ್ನುತ್ತ ಮಂಜಕ್ಕ ಮೇಲಿನ ಕೇರಿಯ ದೊಡ್ಡ ಸಾಹುಕಾರರ ಮನೆಯಿಂದ ಬಟ್ಟೆಗಳನ್ನು ತನ್ನ ಬಿದಿರಿನ ಬುಟ್ಟಿಯೊಂದರಲ್ಲಿ ತುಂಬಿಕೊಂಡು ಮೂರ್ನಾಲ್ಕು ಕಿಲೋಮೀಟರ್ ದೂರದ ನದಿಯತ್ತ ಹೆಜ್ಜೆ ಹಾಕುವಾಗ ಗೊಣಗಿದಳು. ಬಡಪಾಯಿ ಹೆಣ್ಣು ಮಂಜಕ್ಕ ಒಂಟಿ ಜೀವಿ. ಅದೆಷ್ಟು ದೇವರಿಗೆ ಹರಕೆ ಹೊತ್ತಳೋ ಗೊತ್ತಿಲ್ಲ ಮದುವೆ ಆಗಿ ಹತ್ತು ವರ್ಷಗಳ ವರೆಗೆ ಅವಳಿಗೆ ಮಕ್ಕಳಾಗಿರಲಿಲ್ಲ. ಗಂಡ ದುಡಿದ ದುಡ್ಡೆಲ್ಲ ಅವನ ಹೆಂಡಕ್ಕೆ ಸರಿಹೋಯ್ತು. ಒಮ್ಮೆ ಕುಡಿಯೋಕೆ ಅಂತ ಮನೆಯಿಂದ ಹೊರಗೆ ಹೋದವನು ಹೆಣವಾಗಿ ಬಿಟ್ಟ. ಅಲ್ಲಿಂದ ಮಂಜಕ್ಕನ ಒಂಟಿ ಜೀವನ ಶುರುವಾಯಿತು. ಹೊಟ್ಟೆ ತುಂಬಿಸಿಕೊಳ್ಳೋಕೆ ಬೇರೆ ದಾರಿಯಿಲ್ಲದೆ ದೊಡ್ಡ ಸಾಹುಕಾರರ ಮನೆಯ ಬಟ್ಟೆ ತೊಳೆಯೋ ಕಾಯಕಕ್ಕೆ ಕೈ ಹಾಕಿದಳು. ಪ್ರತಿದಿನ ಅವರ ಮನೆಗೆ ಹೋಗಿ ಅವರು ತೊಟ್ಟು ಬಿಚ್ಚಿಟ್ಟ ಬಟ್ಟೆಗಳನ್ನು ಸಂಗ್ರಹಿಸಿ ಅಲ್ಲಿಂದ ಸುಮಾರು ಮೂರ್ನಾಲ್ಕು ಕಿಲೋಮೀಟರ್ ದೂರದ ಹಳ್ಳ ಕೊಂಡೊಯ್ದು ತೊಳೆದು ಒಣಗಿಸಿ ಮತ್ತದೆ ಸುಡುಬಿಸಿಲಿನ ದಾರಿಯಲ್ಲಿ ಹೊತ್ತು ತಂದು ಕೊಡುವ ಕಾಯಕ. ಸಾಹುಕಾರರ ಮನೆಗೂ ತನ್ನ ಮನೆಗೂ ಬಹಳ ದೂರವೇನಿಲ್ಲ ಆದರೆ ಮನೆಯಲ್ಲೇ ಬಟ್ಟೆ ತೊಳೆಯೋಕೆ ಬಚ್ಚಲಿನಲ್ಲಿ ಚಪ್ಪಟೆಯಾದ ಕಲ್ಲಿಲ್ಲ. ಬಟ್ಟೆ ತೊಳೆದು ಬರುವ ಬಿಡಿಗಾಸು ಮೂರೊತ್ತು ಹೊಟ್ಟೆಗೇ ಸಾಕಾಗದು ಇನ್ನು ಕಾಸು ಕೊಟ್ಟು ಹಾಸುಗಲ್ಲನ್ನು ಎಲ್ಲಿಂದ ತಂದಾಳು? ಪ್ರತಿದಿನ ಮಣಭಾರದ ಮೂಟೆ ಹೊತ್ತು ನದಿಗೆ ಹೋಗುವಾಗ ದಾರಿಯುದ್ದಕ್ಕೂ ದೇವರಿಗೆ ಅವಳ ಬೈಗುಳ ತಪ್ಪಿದ್ದಲ್ಲ. "ಯಾಕೆ ನಿಂಗೆ ನನ್ಮೇಲೆ ಇಷ್ಟು ಕೋಪ? ಈ ಬಡ್ಪಾಯಿ ಇಷ್ಟು ಕಷ್ಟ ಪಡ್ತಿದ್ದಾಳೆ ನಿಂಗೆ ಕರ್ಣೆ ಇಲ್ವಾ?"
ಒಮ್ಮೆ ಮಂಜಕ್ಕ ದೇವರಿಗೆ ಹಿಡಿಶಾಪ ಹಾಕುತ್ತಾ ಮೊಣಕಾಲುದ್ದದ ನೀರಲ್ಲಿ ಬಟ್ಟೆ ಜಾಲಾಡುವಾಗ ಮಾರು ದೂರದಲ್ಲಿ ಫಳ ಫಳ ಹೊಳೆಯುವ ಹಾಸುಗಲ್ಲೊಂದು ಕಣ್ಣಿಗೆ ಬಿತ್ತು. ಹತ್ತಿರ ಹೋಗಿ ನೋಡಿದಳು "ಚಪ್ಪಟೆ ಕಲ್ಲು, ಅದೆಷ್ಟು ಚೆನ್ನಾಗಿದೆ! ಮೊನ್ನೆ ಸುರಿದ ಭಾರಿ ಮಳೆಗೆ ಕೊಚ್ಚಿಕೊಂಡು ಬಂದಿರಬೇಕು. ಆ ದೇವರೇ ನನ್ನ ಬೈಗುಳ ತಾಳಲಾರದೆ ಕಳುಹಿಸಿಕೊಟ್ಟಂತಿದೆ. ಅಂತು ಇಂತು ಪ್ರತಿದಿನ ಇಷ್ಟುದೂರ ಬರೋದು ತಪ್ಪಿತು" ಎನ್ನುತ್ತ ಹಳ್ಳದ ಗುಂಟ ಮನೆಕಡೆ ಹೋಗುತ್ತಿದ್ದ ತಿಮ್ಮಣ್ಣನ ಸಹಾಯದಿಂದ ಹಾಸುಗಲ್ಲನ್ನು ತನ್ನ ಬಚ್ಚಲುಮನೆಗೆ ಸಾಗಿಸಿದಳು. ಬಚ್ಚಲಿನಲ್ಲಿದ್ದ ತುಣುಕು ಕಲ್ಲುಗಳನ್ನು ಕಿತ್ತು ತೆಗೆದು ಅವುಗಳ ಜಾಗದಲ್ಲಿ ಫಳ ಫಳ ಹೊಳೆಯುತ್ತಿದ್ದ ಈ ಚಪ್ಪಟೆಗಲ್ಲನ್ನು ಸರಿಯಾಗಿ ಜೋಡಿಸಿದಳು. ಪ್ರತಿನಿತ್ಯ ಬಟ್ಟೆ ತೊಳೆಯೋಕೆ ಇದೇ ಕಲ್ಲನ್ನು ಬಳಸಲು ಶುರುಮಾಡಿದಳು. ಹಳ್ಳದ ತನಕ ಬಟ್ಟೆ ಹೊತ್ತು ನಡೆಯುವ ಕಷ್ಟವೇನೋ ತಪ್ಪಿತು ಆದರೆ ಅವಳ ದಿನನಿತ್ಯದ ಸಂಪಾದನೆಯಲ್ಲಿ ಏನೂ ಬದಲಾವಣೆಯಿಲ್ಲ.
ಒಮ್ಮೆ ಹಬ್ಬಕ್ಕೆಂದು ಅವಳ ಮನೆಗೆ ಬಂದಿದ್ದ ಅತಿಥಿಯೊಬ್ಬರು ಊಟದ ನಂತರ ಕೈತೊಳೆಯಲು ಬಚ್ಚಲಿಗೆ ಬಂದರು. ಬಚ್ಚಲಿನಲ್ಲಿದ್ದ ಚಪ್ಪಟೆ ಕಲ್ಲು ನೋಡಿ ದಂಗಾದರು! ಮಂಜಕ್ಕನನ್ನು ಕರೆದು ಕೇಳಿದರು. ಇದೇನು? "ಹಾಸುಗಲ್ಲು, ಒಮ್ಮೆ ಬಟ್ಟೆತೊಳೆಯುವಾಗ ಹಳ್ಳದಲ್ಲಿ ಸಿಕ್ಕಿದೆ. ಅದನ್ನು ತಂದು ಬಟ್ಟೆ ತೊಳೇಯೋಕೆ ಬಳಸುತ್ತಿದ್ದೇನೆ" ಮಂಜಕ್ಕ ಹೇಳಿದ್ದನ್ನು ಕೇಳಿ ಅತಿಥಿ ಹೌಹಾರಿದರು. "ನಿನಗೆ ಬಟ್ಟೆ ತೊಳೆಯೋಕೆ ಒಂದು ವಾಶಿಂಗ್ ಮಶಿನ್ ಕೊಡಿಸುತ್ತೇನೆ. ಯಾವ ಶ್ರಮವೂ ಇಲ್ಲದೆ ಬಟ್ಟೆ ತೊಳೆಯಬಹುದು" ಅಂದರು. ಮಂಜಕ್ಕನಿಗೆ ಇನ್ನಿಲ್ಲದ ಖುಷಿ! "ಅದಕ್ಕೆ ಬದಲಾಗಿ ನನಗೆ ಈ ಕಲ್ಲು ಕೊಟ್ಟರೆ ಸಾಕು." "ಅಯ್ಯೊ ಈ ಕಲ್ಲು ಇಟ್ಕೊಂಡು ನಾನೇನು ಮಾಡ್ಲಿ? ಅದೆಂತದ್ದೋ ಮಶಿನ್ ನಲ್ಲಿ ಬಟ್ಟೆ ತೊಳಿತಾರೆ ಅಂತ ಕೇಳಿದ್ದೆ ನೀವು ಅದ್ನ ನಂಗೆ ಕೊಡ್ಸಿದ್ರೆ ಅಷ್ಟೇ ಸಾಕು" ಅಂದಳು. ಮಂಜಕ್ಕನ ಮನೆಗೆ 20 ಸಾವಿರ ಬೆಲೆಯ ಹೊಸದೊಂದು ವಾಶಿಂಗ್ ಮಶಿನ್ ಬಂದಿತು. ಇನ್ನಿಲ್ಲದ ಖುಷಿ! ಸಾಕ್ಷಾತ್ ದೇವರೇ ನನ್ನ ಮನೆಗೆ ಅತಿಥಿ ರೂಪದಲ್ಲಿ ಬಂದಂಗಾತು ಎನ್ನುತ್ತ ಬಚ್ಚಲಿನಲ್ಲಿದ್ದ ಚಪ್ಪಟೆ ಕಲ್ಲನ್ನು ಅತಿಥಿಗೆ ಕೊಟ್ಟು ಕಳುಹಿಸಿದಳು.
ಮಂಜಕ್ಕನ ಬಚ್ಚಲಲ್ಲಿ ಇಷ್ಟು ದಿನ ಬಿದ್ದಿದ್ದ ಕಲ್ಲು ಕಲ್ಲಲ್ಲ ಕೇಜಿಗಟ್ಟಲೆ ತೂಗುವ ಬಂಗಾರದ ಗಟ್ಟಿಯದು! 20 ಸಾವಿರದ ವಾಶಿಂಗ್ ಮಶಿನ್ನಿನ ಆಸೆಗೆ ಬಿದ್ದ ಮಂಜಕ್ಕ ಕೋಟಿ ಬೆಲೆಬಾಳುವ ಬಂಗಾರದ ಕಲ್ಲನ್ನು ಕಳೆದುಕೊಂಡಳು!
"ಬಡವನಾಗಿ ಹುಟ್ಟೋದು ತಪ್ಪಲ್ಲ, ಬಡವನಾಗಿ ಸಾಯೋದು ತಪ್ಪು." ಹುಟ್ಟುತ್ತಾ ಎಲ್ಲರೂ ಬಡವರೇ ಅದು ದೇವರ ಇಚ್ಛೆ. ಬದುಕು ನಮ್ಮ ಇಚ್ಚೆ. ಉತ್ತಮ ಬದುಕು ಕಟ್ಟಿಕೊಳ್ಳೋದಕ್ಕೆ ದೇವರು ಎಲ್ಲಾ ಅವಕಾಶಗಳನ್ನು ಕೊಟ್ಟಿದ್ದಾನೆ ಅದನ್ನು ಗುರುತಿಸುವ, ಬಳಸಿಕೊಳ್ಳುವ ಪ್ರಯತ್ನ ನಮ್ಮಿಂದಾಗಬೇಕಷ್ಟೇ. ನಾವು ಎಲ್ಲಿಯ ತನಕ ನಮ್ಮ ಕಷ್ಟಗಳ ಪರಿಮಿತಿಯಲ್ಲೇ ಯೋಚಿಸುತ್ತೇವೋ ಅಲ್ಲಿಯ ತನಕ ನಮ್ಮ ಸಂಕುಚಿತ ಮನಸ್ಸು ಅದರಿಂದಾಚೆ ಇಣುಕುವುದೇ ಇಲ್ಲ. ಮಂಜಕ್ಕ ಬಟ್ಟೆತೊಳೆಯಲು ಕಲ್ಲು ಸಿಕ್ಕಿತೆನ್ನುವ ಖುಷಿಯಲ್ಲಿ ತನ್ನ ಬದುಕನ್ನೇ ಬದಲಾಯಿಸ ಬಲ್ಲ ಬಂಗಾರವನ್ನು ಯಾವತ್ತೂ ನೋಡಲೇ ಇಲ್ಲ. ಈ ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬ ಮನುಷ್ಯನಿಗೂ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಇನ್ನೊಬ್ಬರನ್ನು ದೂರುವ ಬದಲು ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ನಿರಂತರವಾಗಿ, ಪ್ರಾಮಾಣಿಕತೆಯಿಂದ ಪ್ರಯತ್ನಶೀಲರಾದರೆ ಬಡತನವನ್ನೂ ಮೀರಿದ ನೆಮ್ಮದಿಯನ್ನು ಹೊಂದಲು ಸಾಧ್ಯವಾಗುತ್ತದೆ. ನಮ್ಮ ದೇಹ, ಮನಸ್ಸು, ಅಲೋಚನಾ ಶಕ್ತಿ, ಮಾತು, ಜ್ಞಾನ ಇವು ದೇವರು ನಮ್ಮೊಳಗಿಟ್ಟಿರುವ ಬಂಗಾರ. ಕುಟುಂಬ, ಪರಿಸರ, ಸಮಾಜ ಇವು ನಮ್ಮ ಸುತ್ತಲೂ ದೇವರು ನಿರ್ಮಿಸಿರುವ ಬಂಗಾರ. ಇವೆರೆಡನ್ನೂ ಅರಿತು, ಗೌರವಿಸುತ್ತ ಸದ್ಬಳಕೆ ಮಾಡಿಕೊಂಡರೆ ಯಶಸ್ಸಿನೊಂದಿಗೆ ಸಾರ್ಥಕ ಬದುಕು ನಮ್ಮದಾಗುತ್ತದೆ. ಇಂತಹದ್ದೊಂದು ಪ್ರಯತ್ನವನ್ನು ಇಂದಿನಿಂದಲೇ ಆರಂಭಿಸೋಣವೇ?
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : 63610 07190
********************************************