-->
ಸುಂದರ ಮಲೆನಾಡ ಪ್ರವಾಸ - ಪ್ರವಾಸ ಕಥನ

ಸುಂದರ ಮಲೆನಾಡ ಪ್ರವಾಸ - ಪ್ರವಾಸ ಕಥನ

ಪ್ರವಾಸ ಲೇಖನ : ಸುಂದರ ಮಲೆನಾಡ ಪ್ರವಾಸ
ರಚನೆ: ಧನ್ವಿತಾ ಕಾರಂತ್
9ನೇ ತರಗತಿ 
ಶ್ರೀ ಸತ್ಯ ಸಾಯಿ ಲೋಕ ಸೇವಾ 
ಪ್ರೌಢ ಶಾಲೆ, ಅಳಿಕೆ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

       ನಾನು ಈಗ ಬರೆಯುತ್ತಿರುವ ಪ್ರವಾಸ ಕಥನವು ನನ್ನ ಸುಂದರ ಮಲೆನಾಡು ಪ್ರವಾಸಗಳಲ್ಲೊಂದು. ಈ ಪ್ರವಾಸವನ್ನು ನಾನು ಕಳೆದ ಆಗಸ್ಟ್‌ 6 - 2023 ರ ಭಾನುವಾರದಂದು ನನ್ನ ತಂದೆ, ತಾಯಿ, ತಂಗಿ, ಅಕ್ಕಂದಿರು ಮತ್ತು ಗೆಳತಿಯ ಜೊತೆ ಕೈಗೊಂಡಿದ್ದೆ.
         ನಾವು ಹೋಗುವ ದಾರಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವಿರುವುದರಿಂದ ಮೊದಲಿಗೆ ಅಲ್ಲಿಗೆ ಹೋದೆವು. ಅಲ್ಲಿ ಹೊರಗಿನಿಂದಲೇ ದೇವರ ದರ್ಶನ ಮಾಡಿ, ನಂತರ ತಿಂಡಿ ತಿನ್ನಲು ಅಲ್ಲೇ ಹತ್ತಿರವಿದ್ದ ನಿಯೋ ಮೈಸೂರು ಕೆಫೆಗೆ ಹೋದೆವು. ಇಡ್ಲಿ ಮತ್ತು ಪುಲಾವ್‌ ತಿಂದೆವು. ಅಲ್ಲಿ ಹತ್ತಿರದಲ್ಲಿದ್ದ ಅಂಗಡಿಯಲ್ಲಿ ನಮಗಿಷ್ಟದ ವಸ್ತುಗಳನ್ನು ಕೊಂಡೆವು. ನಾವು ಹೋಗುವ ದಾರಿಯಲ್ಲಿ ಅನೇಕ ಜಲಪಾತಗಳಿದ್ದವು. 
     ನಮ್ಮ ಪ್ರವಾಸದ ಎರಡನೇ ಸ್ಥಳ ಬಿಸಿಲೆ ಘಾಟಿ ವ್ಯೂ ಪಾಯಿಂಟ್.‌ ನಾವು ಅಲ್ಲಿ ಇಡೀ ಮಲೆನಾಡಿನ ಚಿತ್ರಣ ಕಾಣಬಹುದೆಂದು ಹೋದರೆ, ಅಲ್ಲಿ ಬಿಳಿ-ಬಿಳಿ ಮಂಜು ಬಿಟ್ಟರೆ ಬೇರೇನೂ ಕಾಣಲಿಲ್ಲ. ನಂತರ ಅಲ್ಲಿಂದ ಹೊರ ಬಂದ ಮೇಲೆ ಸಣ್ಣ ಸಣ್ಣ ಮಂಗಗಳನ್ನು ನೋಡಿ ಕಾರಿಗೆ ಹತ್ತಿದೆವು. ಅಲ್ಲಿಂದ ಪಟ್ಲ ಬೆಟ್ಟಕ್ಕೆ ಹೋದೆವು. ಅಲ್ಲಿನ ಅನುಭವ ನನ್ನ ಮನಸ್ಸಲ್ಲಿ ಯಾವತ್ತೂ ಮರೆಯದಂತೆ ಅಚ್ಚೊತ್ತಿದೆ. ಪಟ್ಲ ಬೆಟ್ಟಕ್ಕೆ ಹೋಗುವ ದಾರಿಯು ಸರಿ ಇಲ್ಲದ್ದರಿಂದ ಪಿಕಪ್‌ ಅಥವಾ ಕಾಲ್ನಡಿಗೆಯಲ್ಲಿ ಹೋಗಬೇಕು. ನಾವು ಅಲ್ಲಿ ತಲುಪಿದಾಗ ಮಳೆಯೂ ಪ್ರಾರಂಭವಾಗಿತ್ತು. ನಾವು ವಾತಾವರಣವನ್ನು ಆನಂದಿಸುತ್ತಾ, ಎಲ್ಲಿ ಕೆಳಗೆ ಬೀಳುತ್ತೇವೋ ಎಂಬ ಭಯದಲ್ಲಿ ದೊಡ್ಡ ದೊಡ್ಡ ಕಲ್ಲುಗಳ ಮೇಲೆ ಚಲಿಸುವ ಪಿಕಪ್‌ ನಲ್ಲಿ ಹೋದೆವು. ಕೆಸರಲ್ಲಿ ಎಲ್ಲಿ ಬೀಳುತ್ತೇವೋ ಎಂಬ ಭಯ, ಮಳೆ, ನಮ್ಮನ್ನು ಹಾರಿಸಿಕೊಂಡು ಹೋಗುವಂತೆ ಬೀಸುತ್ತಿದ್ದ ಶೀತ ಗಾಳಿ, ಇವೆಲ್ಲದರ ಛಳಿ, ಭಯ, ಪಿಕಪ್ ನ ಹಾರಾಟ.... ನಮ್ಮ ಕೂಗಾಟಕ್ಕೆ ಆನೆ ಸಹ ಓಡಿ ಹೋಗಬಹುದಿತ್ತು. ನಾವು ಕಷ್ಟಪಟ್ಟು ಒಂದಷ್ಟು ದೂರ ಬೆಟ್ಟ ಹತ್ತಿ ತುತ್ತತುದಿ ತಲುಪಿದಾಗ ನಮ್ಮ ಸುತ್ತಲ ಯಾವುದೇ ದೃಶ್ಯ ಕಾಣದಷ್ಟು ಮಂಜು ಕವಿದಿತ್ತು. ಮತ್ತೆ ಪಿಕಪ್‌ ನಲ್ಲಿ ಕೆಳಗೆ ಇಳಿದು ಕಾರಿಗೆ ಹತ್ತಿ ಹೊರಟೆವು.
   ನಮ್ಮ ಮುಂದಿನ ಸ್ಥಳ ಮಲ್ಲಳ್ಳಿ ಜಲಪಾತ. ಇದು ನನಗೆ ನನ್ನ ಜೀವಮಾನದ ಸುಂದರ ಕ್ಷಣಗಳನ್ನು ಕೊಟ್ಟಿದೆ. ಆದರೆ ನಮಗೆ ಇಲ್ಲಿಗೆ ಹೋಗಬೇಕಾದರೆ 592 ಮೆಟ್ಟಿಲುಗಳನ್ನು ಹತ್ತಿ ಇಳಿಯಬೇಕು ಎಂದು ಯಾರೂ ಮಾಹಿತಿ ನೀಡಿರಲಿಲ್ಲ. ಅಲ್ಲಿ ತಲುಪುವಾಗ ಕಾಲು ನಡುಗುತ್ತಿತ್ತು. ಹೋದ ತಕ್ಷಣ ನೋಡಿದ ದೃಶ್ಯ ಇವೆಲ್ಲವನ್ನೂ ಮರೆಸಿತು. ತುಂಬಾ ಎತ್ತರದಿಂದ ಬೀಳುವ ದೊಡ್ಡ ಜಲಪಾತವು ಕೆಳಗೆ ಧುಮುಕುವಾಗ ತನ್ನ ನೀರಹನಿಗಳನ್ನು ಪ್ರವಾಸಿಗರ ಇಡೀ ದೇಹಕ್ಕೆ ಪನ್ನೀರು ಎರಚಿದಂತೆ ಹಾಕುತ್ತಿತ್ತು. ನಮ್ಮ ಇಡೀ ದೇಹ ನೆನೆದು ಒದ್ದೆಯಾಗಿತ್ತು. ಆಗಲೇ ಅಲ್ಲಿ ಹುಲ್ಲಿನ ಮೇಲೆ ಕಾಮನ ಬಿಲ್ಲು ಮೂಡಿದ ದೃಶ್ಯವು ಕಂಡಿತು. ನಾವು ನಂತರ ಅಲ್ಲೆಲ್ಲಾ ಸುತ್ತಾಡಿ, ಸ್ವಲ್ಪ ಫೋಟೋಗಳನ್ನು ಕ್ಲಿಕ್ಕಿಸಿಕೊಂಡೆವು. ಅಲ್ಲಿಂದ ಕಾರಿಗೆ ಹತ್ತಿ ಹೊರಟೆವು.
        ನಂತರ ಸ್ಥಳವು ನನಗೆ ಖುಷಿ ಕೊಟ್ಟಂತಹ ಶ್ರೀ ಶಾಂತ ಮಲ್ಲಿಕಾರ್ಜುನ ದೇವಸ್ಥಾನ. ಈ ದೇವಳವು ತುಂಬಾ ಶಾಂತವಾಗಿತ್ತು. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಸಾವಿರಾರು ವರ್ಷಗಳ ಇತಿಹಾಸವಿರುವ ಬೃಹತ್‌ ಸಂಪಿಗೆ ಮರ. ಅಲ್ಲೇ ನಾಗಬನವೂ ಇದೆ. ಅಲ್ಲಿನ ಅರ್ಚಕರು ನಮ್ಮೆಲ್ಲರ ಹಣೆಗೆ ಮೊದಲು ಗಂಧ ಹಚ್ಚಿ ನಂತರ ಅದರ ಮೇಲೆ ಅಕ್ಷತೆ ಹಾಕಿದರು. ಸಂಪಿಗೆ ಮರದ ಕೆಳಗಿನ ಜಾಗದಲ್ಲಿ ಒಂದು ಕೆರೆ ಇದೆ. ಕೆರೆಯ ವಿರುದ್ಧ ದಿಕ್ಕಿನಲ್ಲಿ ಮೇಲೆ ಬೆಟ್ಟದಿಂದ ಹರಿದು ಬರುವ ಬಹು ತಂಪಾದ ನೀರಿನ ಸಣ್ಣ ಕಣಿ ಇತ್ತು. ನಾವು ದೇವರನ್ನು ನೋಡಿ ಬರುವಾಗ ಮಧ್ಯಾಹ್ನವಾಗಿದ್ದರಿಂದ, ಹೋಟೇಲ್‌ ನಿಂದ ಕಟ್ಟಿಸಿಕೊಂಡು ಹೋಗಿದ್ದ ಪುಲಾವ್‌ ನ್ನು ಅಲ್ಲೇ ತಿಂದೆವು. ನಂತರ ಆ ಕಣಿಯಲ್ಲಿರುವ ನೀರಿನಲ್ಲಿ ಕೈ ತೊಳೆದು ಮುಂದಿನ ಸ್ಥಳ ನೋಡಲು ಹೊರಟೆವು.
      ನಂತರದ ಸ್ಥಳವು ಮೂಕನಮನೆ ಜಲಪಾತವಾಗಿತ್ತು. ಇಲ್ಲಿಗೆ ನಾವು ಸುಮ್ಮನೆ ಹೋದ ಹಾಗಾಯಿತು. ಏಕೆಂದರೆ ಅಲ್ಲಿ ಇನ್ನೂ ದುರಸ್ತಿ ಕಾರ್ಯ ನಡೆಯುತ್ತಿತ್ತು ಹಾಗೂ ಜಲಪಾತಕ್ಕೆ ಇಳಿಯಲು ಆಗುತ್ತಿರಲಿಲ್ಲ. ಅದು ರಭಸವಾಗಿ ಹರಿಯುತ್ತಿತ್ತು. ಅಲ್ಲಿ ಕೆಳಗೆ ಹರಿಯುತ್ತಿದ್ದ ನದಿಯಲ್ಲಿ ಸ್ವಲ್ಪ ಹೊತ್ತು ಆಟವಾಡಿ ನಂತರ ನಾವು ಹೊರಟೆವು. ಆಗ ಎಲ್ಲರಿಗೂ ಏನಾದರೂ ಚಾ, ಕಾಫಿ ಕುಡಿಯಬೇಕು ಅನಿಸಿತು. ಹಾಗಾಗಿ ನಾವು ಒಂದು ಹೋಟೆಲ್‌ ಗೆ ಹೋಗಿ ಕೆಲವರು ಮಸಾಲೆ ದೋಸೆ, ಈರುಳ್ಳಿ ದೋಸೆ ತಿಂದೆವು. ಹಾಗೂ ಚಾ, ಕಾಫಿ ಕುಡಿದೆವು.
      ನಂತರ ನಾವು ಬಿಸಿಲೆ ಘಾಟಿ ಇಳಿದು ಬಂದು ಕೇಪು ಎಂಬಲ್ಲಿರುವ ಪಂಚಮುಖಿ ಆಂಜನೇಯ ದೇವಸ್ಥಾನಕ್ಕೆ ಹೋದೆವು. ಅಲ್ಲಿ ದೇವರ ದರ್ಶನ, ಎಳ್ಳಿನಾರತಿ ಮಾಡಿ, ನಂತರ ರಕ್ಷೆ ತೆಗೆದುಕೊಂಡೆವು. 
     ಅಲ್ಲಿಂದ ಮುಂದೆ ನಮ್ಮ ಕೊನೆಯ ಸ್ಥಳ ಸೌತಡ್ಕ ಶ್ರೀ ಗಣಪತಿ ದೇವಸ್ಥಾನಕ್ಕೆ ಹೋದೆವು. ಅಲ್ಲಿ ಪ್ರಸಾದ ತೆಗೆದುಕೊಂಡು ದೇವರಿಗೆ ನಮಸ್ಕರಿಸಿದೆವು. ರಾತ್ರಿ ಊಟಕ್ಕೆ ಉಪ್ಪಿನಂಗಡಿಯ ಆದಿತ್ಯ ಹೋಟೆಲ್‌ ಗೆ ಹೋದೆವು. ನನಗೆ ಆನ್ ಲೈನ್ ನಲ್ಲಿ ಸಂಗೀತ ಸ್ಪರ್ಧೆ ಇದ್ದುದರಿಂದ ನಾನು ಮತ್ತು ಅಮ್ಮ ಕೊನೆಯದಾಗಿ ಊಟ ಮಾಡಿದೆವು. ಎಲ್ಲರಿಗೂ ಸಂಜೆಯದ್ದೇ ಕರಗಿರಲಿಲ್ಲ. ಹಾಗಾಗಿ ಸ್ವಲ್ಪ ಸ್ವಲ್ಪ ಏನಾದರೂ ತಿಂದರು. ನಾನು ಜ್ಯೂಸ್‌ ಕುಡಿದೆ. ಅಕ್ಕಂದಿರನ್ನು ವಿಟ್ಲದಲ್ಲಿ ಮತ್ತು ಗೆಳತಿಯನ್ನು ಅವಳ ಮನೆಗೆ ಬಿಟ್ಟು ನಾವು ಮನೆಗೆ ತಲುಪುವಾಗ ರಾತ್ರಿ ಒಂಭತ್ತೂವರೆ ಆಗಿತ್ತು. ಕೈಕಾಲು ಬಳಲುತ್ತಿತ್ತು. ಸ್ನಾನ ಮಾಡಿ ಸುಸ್ತಾಗಿ ನಿದ್ರೆಗೆ ಜಾರಿದೆವು. 
............................................. ಧನ್ವಿತಾ ಕಾರಂತ್
9ನೇ ತರಗತಿ 
ಶ್ರೀ ಸತ್ಯ ಸಾಯಿ ಲೋಕ ಸೇವಾ 
ಪ್ರೌಢ ಶಾಲೆ, ಅಳಿಕೆ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
*******************************************




Ads on article

Advertise in articles 1

advertising articles 2

Advertise under the article