-->
ಜೀವನ ಸಂಭ್ರಮ : ಸಂಚಿಕೆ - 107

ಜೀವನ ಸಂಭ್ರಮ : ಸಂಚಿಕೆ - 107

ಜೀವನ ಸಂಭ್ರಮ : ಸಂಚಿಕೆ - 107
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
         

      ಮಕ್ಕಳೇ, ವಿದೇಶದಲ್ಲಿ ಗಿಗ್ಲಿ ಎನ್ನುವ ಶ್ರೇಷ್ಠ ಸಂಗೀತಗಾರನಿದ್ದನು. ಆತನ ಹಾಡು ಕೇಳಲು ಲಕ್ಷ ಲಕ್ಷ ಜನರು ಸೇರುತ್ತಿದ್ದರು. ಅವನ ಒಂದು ಹಾಡಿಗೆ ಸುಮಾರು 10 ಲಕ್ಷದಷ್ಟು ಹಣ ನೀಡಬೇಕಾಗಿತ್ತು. ಆತ ಒಂದು ದೊಡ್ಡ ಮಾಲಿನಲ್ಲಿ ವಾಸವಾಗಿದ್ದನು. ಹೀಗಿರಬೇಕಾದರೆ ಒಬ್ಬಾಕೆ ಬಡವಿ ಅದೇ ನಗರದಲ್ಲಿ ವಾಸವಾಗಿದ್ದಳು. ಆಕೆಗೆ ಒಬ್ಬ ಮಗನಿದ್ದನು. ಆತ ಜ್ವರದಿಂದ ನರಳುತ್ತಿದ್ದನು. ಚಿಕಿತ್ಸೆ ಮಾಡಿಸಲು ಆಕೆಯ ಬಳಿ ಹಣವಿರಲಿಲ್ಲ . ಜ್ವರ ಉಲ್ಬಣಗೊಂಡು ಇನ್ನೇನು ಪ್ರಾಣ ಬಿಡುವ ಸ್ಥಿತಿಯಲ್ಲಿದ್ದನು. ಆತನಿಗೆ ಗಿಗ್ಲಿಯ ಹಾಡೆಂದರೆ ಪಂಚಪ್ರಾಣ. ಆತ ತನ್ನ ಕಡೆ ಆಸೆಯನ್ನು ತನ್ನ ತಾಯಿಯ ಬಳಿ ಹೇಳಿದ, "ನಾನು ಗಿಗ್ಲಿ ಹಾಡನ್ನು ಕೇಳುತ್ತಾ ಸಾಯಬೇಕು. ಹೋಗಿ ಕರೆದುಕೊಂಡು ಬಾ" ಎಂದನು. ತಾಯಿ ಹೇಳುತ್ತಾಳೆ, "ನಾವು ಬಡವರು, ನಮ್ಮ ಬಳಿ ಹಣವಿಲ್ಲ, ನಮ್ಮಂತಹವರ ಮನೆಗೆ ಅವರು ಬರುತ್ತಾರೆಯೇ...?". ಹೀಗೆ ಏನೆಲ್ಲ ಹೇಳಿ ಆತನನ್ನು ಮನವೊಲಿಸಲು ಸಾಕಷ್ಟು ಪ್ರಯತ್ನ ಪಟ್ಟಳು. ಕೊನೆಗೆ ಸೋತು ಹೋಗಿ ಬೇರೆ ದಾರಿ ಇಲ್ಲದೆ ಗಿಗ್ಲಿ ಮನೆಗೆ ಹೋಗುತ್ತಾಳೆ. ಆ ಸಮಯದಲ್ಲಿ ಗಿಗ್ಲಿ ಊಟ ಮಾಡುತ್ತಿದ್ದನು. ಆಕೆ ಹೋಗಿ ಬಾಗಿಲು ಬಡಿದಳು. ಬಾಗಿಲು ತೆರೆದು ಈಕೆಯನ್ನು ನೋಡಿದ, ಬಡ ದೇಹ, ಹರಿದ ಬಟ್ಟೆ, ಕೆದರಿದ ಕೂದಲು, ಏನು ಬೇಕಮ್ಮ ಎಂದನು. ಆಕೆ ತನ್ನ ಸ್ಥಿತಿ, ಮಗನ ಉಲ್ಬಣಗೊಂಡ ಜ್ವರದ ಸ್ಥಿತಿ, ಇನ್ನೇನು ನನ್ನ ಮಗ ಹೆಚ್ಚು ದಿನ ಬದುಕುವುದಿಲ್ಲ. ಹಾಗಾಗಿ ಆತನ ಕೊನೆಯ ಆಸೆ ತಮ್ಮ ಹಾಡನ್ನು ಕೇಳಬೇಕೆಂದಿದ್ದಾನೆ ಎಂದು ಹೇಳಿ, ನನ್ನ ಬಳಿ ಹಣವಿಲ್ಲ ಎಂದಳು. ಆತ ಊಟದ ತಟ್ಟೆ ಮುಚ್ಚಿ, ನಡೆಯಿರಿ ಬರುತ್ತೇನೆ ಎಂದು ನಡೆದೇ ಬಿಟ್ಟ. ಸಣ್ಣ ಸಣ್ಣ ಗಲ್ಲಿ ದಾಟಿ ಗುಡಿಸಲ ಬಳಿ ಬಂದರು. ಅದು ಸಣ್ಣ ಗುಡಿಸಲು. ಗಿಗ್ಲಿ ಆ ಗುಡಿಸಲನ್ನು ಪ್ರವೇಶಿಸಿದನು. ಆತನನ್ನು ಕೂರಿಸಲು ಒಂದು ಸಣ್ಣ ಕುರ್ಚಿ ಕೂಡ ಇರಲಿಲ್ಲ. ಆ ಮಗುವಿನ ಪಕ್ಕ ಕುಳಿತುಕೊಂಡನು. ತಾಯಿ ಮಗನಿಗೆ ಹೇಳಿದಳು ನೋಡು ಮಗನೇ, ನಿನ್ನ ಪ್ರೀತಿಯ ಹೆಸರಾಂತ ಸಂಗೀತಗಾರ ಗಿಗ್ಲಿ ಅವರು ಬಂದಿದ್ದಾರೆ ಎಂದಳು. ತಕ್ಷಣ ಮಗ ಕಣ್ಬಿಟ್ಟು ನೋಡುತ್ತಾನೆ. ಆತನ ಆನಂದಕ್ಕೆ ಪಾರವೇ ಇಲ್ಲ. ಆತನ ಮುಖದಲ್ಲಿ ಅಷ್ಟು ಪ್ರಸನ್ನತೆ. ಇದನ್ನು ನೋಡಿ ಗಿಗ್ಲಿಗೆ ಬಹಳ ಆನಂದವಾಯಿತು. ಹಾಡಲು ಶುರು ಮಾಡಿದ. ಒಂದು ಗಂಟೆ, ಎರಡು ಗಂಟೆ ಹೀಗೆ ಮೂರು ಗಂಟೆ ಹಾಡಿದನು. ಗಿಗ್ಲಿ ಜೀವನದಲ್ಲಿ ನಡೆದ ಘಟನೆ, ಹಾಗೂ ಸಾವನ್ನು ಮರೆತು ಕೇಳುತಿದ್ದನು. ಹೀಗೆ ಕೇಳುತ್ತಾ ಕೇಳುತ್ತಾ ಪ್ರಸನ್ನತೆಯಿಂದ ಪ್ರಾಣ ಬಿಟ್ಟನು. ಸತ್ತ ಮುಖದಲ್ಲೂ ಪ್ರಸನ್ನತೆ ಎದ್ದು ಕಾಣುತ್ತಿತ್ತು. ತಾಯಿಗೆ ತನ್ನ ಮಗನ ಇಚ್ಚೆ ಪೂರೈಸಿದ ಸಮಾಧಾನವಿತ್ತು. ಗಿಗ್ಲಿ ಕಣ್ಣೀರು ಹಾಕಿದ. ತನ್ನ ಜೀವನ ಚರಿತ್ರೆಯಲ್ಲಿ ಇದನ್ನು ದಾಖಲು ಮಾಡುತ್ತಾನೆ. ನನ್ನ ಜೀವನದಲ್ಲಿ ಇಷ್ಟು ವರ್ಷ ಹಾಡಿದ್ದೇನೆ. ಆದರೆ ಇಂದು ಹಾಡಿದ್ದು ನನಗೆ ಸಾರ್ಥಕವೆನಿಸಿತು. ನನ್ನ ಹಾಡು ಕೇಳಿ ಸಾಕಷ್ಟು ಜನ ಸಂತೋಷಪಟ್ಟಿದ್ದಾರೆ. ಪ್ರಶಸ್ತಿ, ಬಹುಮಾನ ಮತ್ತು ಹಣ ಎಲ್ಲಾ ಬಂದಿದೆ. ಆದರೆ ಈ ದಿನದಷ್ಟು ಅತ್ಯದ್ಭುತ ಸಂತೋಷ ನನ್ನ ಜೀವಮಾನದಲ್ಲಿ ಆಗಲಿಲ್ಲ. ನನ್ನ ಜೀವನದಲ್ಲಿ ಇದೇ ಮೊದಲು, ಇದೇ ಕಡೆ ಅಂತ ಸಂತೋಷವನ್ನು ಅನುಭವಿಸಿದ್ದು ಎಂದು ದಾಖಲಿಸಿದ್ದಾನೆ. ಈ ರೀತಿ ನನ್ನ ಹಾಡನ್ನು ಕೇಳುವವರನ್ನು ನಾನು ಕಂಡೆ ಇಲ್ಲ. ಮರಣವನ್ನೇ ಮರೆತು ಕೇಳಬೇಕೆಂದರೆ ಆತ ಹೇಗೆ ಕೇಳಿರಬೇಕು?. ಮರಣ ಮರೆತು ಕೇಳಬೇಕೆಂದರೆ ಆತ ಹೇಗೆ ಹಾಡಿರಬೇಕು...? ಮಗು ಕೊನೆಯ ಕ್ಷಣವನ್ನು ಮಧುರಗೊಳಿಸಿದ್ದು ಸಾರ್ಥಕವಾಯಿತು. ಇದಕ್ಕಿಂತ ದೊಡ್ಡ ಪ್ರಶಸ್ತಿ ಬಹುಮಾನ ಯಾವುದು ಇದೆ...?
    ಇದು ಧರ್ಮ, ಕರ್ಮ ರೂಪದಲ್ಲಿ ಕೆಲಸ ಮಾಡಿದೆ. ಮರಣವನ್ನೇ ಮರೆಸುವಂತೆ ಮಾಡಿದ್ದು ಇಂತಹ ಸುಂದರ ಕರ್ಮ. ನಮ್ಮ ಹತ್ತಿರ ಇರುವುದನ್ನು, ನಮ್ಮಲ್ಲಿ ನಿಸರ್ಗ ಅಳವಡಿಸಿರುವುದನ್ನು ಹೀಗೆ ಬಳಸಬೇಕು. ಜಗತ್ತು ಸಂತೋಷ ಪಡುವಂತೆ ಬಳಸಬೇಕು. ಅದು ಹಣಕ್ಕಾಗಿ ಅಲ್ಲ, ಮಾನ, ಮರ್ಯಾದೆ, ಕೀರ್ತಿ ಮತ್ತು ಪ್ರಶಸ್ತಿಗಾಗಿ ಅಲ್ಲ. ಕೆಲವು ಸಲವಾದರೂ ಸಂತೋಷಕ್ಕೂ ಬಳಸಬೇಕು. ಅಲ್ಲವೇ ಮಕ್ಕಳೇ....
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ 
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************


Ads on article

Advertise in articles 1

advertising articles 2

Advertise under the article