-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 85

ಸ್ಫೂರ್ತಿಯ ಮಾತುಗಳು : ಸಂಚಿಕೆ - 85

ಸ್ಫೂರ್ತಿಯ ಮಾತುಗಳು : ಸಂಚಿಕೆ - 85
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

                  
   “A friend in need is a friend indeed”. ಬಹಳ ಸೊಗಸಾದ ಮಾತಿದು. ನೈಜ ಗೆಳೆಯನ ಲಕ್ಷಣ ಇಲ್ಲಿದೆ. ಕಷ್ಟದಲ್ಲಿರುವಾಗಲೂ ಬಿಟ್ಟು ಹೋಗದ, ಸಹಕರಿಸುತ್ತಲೇ ಇರುವವನು ದೇವದುರ್ಲಭ ಗೆಳೆಯ. ನಮಗೆ ಸಾವಿರಾರು ಮಂದಿಯ ಸಂಪರ್ಕವಿರುತ್ತದೆ. ಅವರು ಗೆಳೆಯರೆಂದೇ ಬಿಂಬಿತರಾಗುತ್ತಲೂ ಇರುತ್ತಾರೆ. ಕಷ್ಟಕಾಲಕ್ಕೆ ಕೈಕೊಡುವವರು ಯಾರು? ಕೈ ನೀಡಿ ಸಹಕರಿಸುವವರು ಯಾರು ಎಂಬುದನ್ನು ಪತ್ತೆ ಹಚ್ಚುವುದು ಬಹಳ ಕಷ್ಟ ಸಾಧ್ಯ. ಕಡಿದಾದ ಗುಹೆಯೊಳಗಿರುವುದನ್ನೂ ಶ್ರಮಿಸಿದರೆ ಪತ್ತೆ ಹಚ್ಚಬಹುದು. ಆದರೆ ಹೃದಯೊದಳಗಿರುವುದನ್ನು ಯಾರಿಗೂ ಪತ್ತೆ ಹಚ್ಚಲಾಗದು. ಮುಖವು ಹೃದಯದ ಕನ್ನಡಿಯೆನ್ನುತ್ತೇವೆ. ಕೆಲವು ಸಂದರ್ಭಗಳಲ್ಲಿ ಈ ನುಡಿ ಸಮಂಜಸವಾಗಬಹುದು. ಆದರೆ ಗೊಮುಖ ವ್ಯಾಘ್ರರು ಇರುತ್ತಾರಲ್ಲವೇ? ಅವರ ಮುಖ ಭಾವ ಸತ್ಯವನ್ನು ಅನಾವರಣಗೊಳಿಸದು. ಅವರ ಮನದೊಳಗಿನ ಗುಟ್ಟು ರಟ್ಟಾಗದು.
     ಗೆಳೆಯನ ಆಯ್ಕೆಗೆ ಮಾನದಂಡವೇನು? ಉತ್ತಮ ಗೆಳೆಯನನ್ನು ಹೇಗೆ ಆಯ್ಕೆ ಮಾಡಬೆಕೆಂಬುದೇ ಎಲ್ಲರ ಸಂಶಯ. ಆದರೆ ಮಿತ್ರರ ಆಯ್ಕೆಗೆ ಮಾನದಂಡವಿರದು. ಆತನಿಂದೊದಗುವ ಕಹಿ ಅನುಭವಗಳೇ ಮಾನದಂಡಗಳು. ಕಹಿ ಅನುಭವವಾದೊಡನೆ ಅಂತಹವರನ್ನು ನಿರ್ಲಕ್ಷಿಸುವುದಕ್ಕಿಂತ ಹೊರತಾದ ಮಾರ್ಗ ಇರದು. ಆದರೆ ಕಹಿ ಅನುಭವಗಳಾದರೂ ಅವರನ್ನು ನಂಬುವ, ನೆಚ್ಚುವ, ವಿಶ್ವಸಿಸುವ ಮೂರ್ಖರು ನಾವಾಗಬಾರದು. ಅದಕ್ಕಾಗಿಯೇ ಮಿತ್ರರ ಮೇಲೆ ನಮ್ಮ ಮೂರನೇ ಕಣ್ಣು ನಿರಂತರ ಜಾಗೃತವಾಗಿರಬೇಕು. ಹಾಲೋ ಹಾಲಾ ಹಲವೋ ಎಂಬುದರ ಅವಲೋಕನವು ಗೆಳೆತನವನ್ನು ಮುಂದುವರಿಸಲು ಇರುವ ಭದ್ರ ಅಡಿಪಾಯ, ಅವಲೋಕನವಿರದೇ ಇದ್ದರೆ ಅಪಾಯ ಖಚಿತ.
      “ಚಡ್ಡಿ ದೋಸ್ತ್” ಎಂದು ನಾವು ಭಾವಿಸಿಕೊಂಡವರೂ ಶತ್ರುವಾಗುವ ಸಂದರ್ಭಗಳಿರುತ್ತವೆ. ಗೆಳೆಯನ ತಪ್ಪುಗಳನ್ನು ತಿದ್ದಲು ಹೊರಟಾಗಲೂ ಗೆಳೆತನ ಜಾರುತ್ತದೆ. ಮಾತಿಗೆ ಬೆಲೆ ಕೊಡಲಿಲ್ಲ, ಸಾಲ ಕೊಡಲಿಲ್ಲ, ಪರವಾಗಿ ನಿಲ್ಲಲಿಲ್ಲ, ನಾನು ಹೇಳಿದವರಿಗೆ “ಓಟು” ಮಾಡಲಿಲ್ಲ ಎಂಬಿತ್ಯಾದಿಯಾದ ಕ್ಷುಲ್ಲಕ ಕಾರಣಗಳಿಗೆ ಗೆಳೆತನದ ಬಂಧ ಕಳಚುವುದಿದೆ. ಕ್ಷುಲ್ಲಕವಾದವುಗಳನ್ನು “ಮಹಾ” ಎಂದು ಪರಿಗಣಿಸುವವರು ಜೀವದ ಗೆಳೆಯರಾಗಲು ಸಾಧ್ಯವಿಲ್ಲ. ಅವರು ಸ್ವಹಿತಕ್ಕೆ ನಮ್ಮನ್ನು ಬಳಸಲು ಉದ್ದೇಶಿಸುವ ಮೋಸದ (ಮೋಹ)ದ ಗೆಳೆಯರು. ಗೆಳೆಯರೊಂದಿಗಿನ ಭಿನ್ನಾಂಶಗಳಿಗೆ ಕಾರಣ ಶೋಧನೆ ಮಾಡುವ ಗುಣ ಮನಸ್ಕರು ಬಂಧದಿಂದ ಎಂದೆಂದಿಗೂ ಹೊರ ನಡೆಯದೆ ಹಿಂದಿನ ಅನ್ಯೋನ್ಯತೆಯನ್ನೇ ಮುಂದುವರಿಸುತ್ತಾರೆ.
      “ನೀನು ತಪ್ಪು ಮಾಡಿರುವೆ” ಎಂದು ಗೆಳೆಯ ಹೇಳಿದಾಗ, ತನ್ನ ತಪ್ಪುಗಳನ್ನು ಮನನ ಮಾಡಿಕೊಂಡು ತನ್ನನ್ನು ತಾನು ತಿದ್ದಿಕೊಳ್ಳುವ ಗೆಳೆಯರು ನಂಬಲರ್ಹರು. ಮೋಸ, ಕೊಲೆ, ಸುಲಿಗೆ ಮುಂತಾದ ವಿಕೃತಿಗಳ ಪರವಾಗಿ ನಿಲ್ಲುವವನ ಗೆಳೆತನ ಸಾಧುವಲ್ಲ. ತಪ್ಪುಗಳಿಗೆ ಪ್ರತಿರೋಧ, ಒಪ್ಪುಗಳಿಗೆ ಬೆಂಬಲ ನೀಡುವ ಗೆಳೆಯ ಸ್ವೀಕಾರಾರ್ಹ. ಗೆಳೆತನಕ್ಕೆ ರೂಪ, ಸಂಪತ್ತು, ವಿದ್ವತ್ತು, ಸ್ಥಾನಮಾನ, ಮತ ಜಾತಿ ಅಮುಖ್ಯ. ಆದರೆ ಗೆಳೆತನದ ಧರ್ಮ ಅತ್ಯಂತ ಪ್ರಮುಖ. ಶ್ರೀಕೃಷ್ಣ ಮತ್ತು ಸುಧಾಮ (ಕುಚೇಲ)ರ ಗೆಳೆತನ ಉತ್ತಮ ಪೌರಾಣಿಕ ದೃಷ್ಟಾಂತ. ಗೆಳೆತನಕ್ಕೆ ಸಂಪತ್ತಿನ ದಾರಿರ್ದ್ಯ ತಡೆಯಾಗದು, ರೂಪ ಮತ್ತು ಅಂಗ ಶೂನ್ಯತೆ ದೊಡ್ಡ ಅಡ್ಡಗೋಡೆಯಾಗದು. ವ್ಯಕ್ತಿತ್ವ ಶೂನ್ಯತೆ ಮಹಾಗೋಡೆಯಾಗುತ್ತದೆ.
       ನೀರಿಗೆ ಹಾಲು ಸೇರಿದರೆ ನೀರಿನ ಗುಣ ಶ್ರೇಷ್ಠವಾಗುತ್ತದೆ. ಹಾಲಿಗೆ ಕಲ್ಲು ಸಕ್ಕರೆ ಸೇರಿದರೆ ಹಾಲಿನ ರುಚಿ ಉನ್ನತವಾಗುತ್ತದೆ. ಹಾಲಿಗೆ ಹುಳಿ ಸೇರಿದರೆ ಹಾಲೇ ನಾಶವಾಗುತ್ತದೆ. ಗೆಳೆತನ ಮಾಡುವಾಗ ನಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗದ ಜಾಣ ನಡೆ ಬೇಕು. “ಫೇಸ್ ಬುಕ್ ಫ್ರೆಂಡ್”, ವಾಟ್ಸಾಪ್ ಫ್ರೆಂಡ್, ಪೆನ್ ಫ್ರೆಂಡ್, ಫೋನ್ ಫ್ರೆಂಡ್ ಹೀಗೆ ಮುಖವನ್ನೂ ನೋಡದೆ ಗೆಳೆಯರನ್ನು ಪಡೆಯುವ “ಹುಚ್ಚು ಚಟ” ಇಂದು ಸಾಮಾನ್ಯ. ನಾವು ತೋಡುವ ಹಳ್ಳದಲ್ಲಿ ನಾವೇ ಮೀಯುವಂತಾಗುವ ದುಃಸ್ಥಿತಿಗಳಿಗಿಳಿಯುವುದರ ಮೊದಲು, ಸಾವಿರ ಬಾರಿ ಯೋಚಿಸುವ ಅಗತ್ಯವಿದೆ. ನಾವು “ಪ್ಯೂರ್ ಸೊಸೈಟಿ” ಯಲ್ಲಿದ್ದೇವೆ ಎಂಬ ಭ್ರಮೆ ನಮಗಿದೆ. ಈ ಭ್ರಮೆಯಲ್ಲಿ ಗೆಳೆತನ ಮಾಡಬಾರದು. ನಮ್ಮ ನಡುವೆ “Valuless” ವ್ಯಕ್ತಿತ್ವಗಳೂ ಇವೆ ಎಂಬ ಕಟ್ಟೆಚ್ಚರದೊಂದಿಗೆ ಗೆಳೆಯರನ್ನು ಆಯುವ ಜಾಣ ಜಾಣೆಯರಾಗೋಣ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 



Ads on article

Advertise in articles 1

advertising articles 2

Advertise under the article