-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 87

ಸ್ಫೂರ್ತಿಯ ಮಾತುಗಳು : ಸಂಚಿಕೆ - 87

ಸ್ಫೂರ್ತಿಯ ಮಾತುಗಳು : ಸಂಚಿಕೆ - 87
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
        
               
      ಕವಿ ಮಿತ್ರ ಭಾಸ್ಕರ ಅಡ್ವಳರ, “ಎಚ್ಚೆತ್ತಿರುವ ಪ್ರಜೆಗಳು” ಎಂಬ ಕವನವು ಇತ್ತೀಚೆಗೆ ನನ್ನ ಕಣ್ಣಿಗೆ ಬಿತ್ತು. ಆ ಕವನವನ್ನು ವಿಮರ್ಶಿಸಿ ಮಕ್ಕಳ ಮುಂದೆ ಸಾದರಪಡಿಸುವ ಮನಸ್ಸಾಯಿತು. ಭಾವ ಕೆಡದಿರಲು ಕವನವನ್ನು ಚರಣ ಚರಣಗಳಲ್ಲಿ ವಿಮರ್ಶಿಸುವುದು ಉತ್ತಮವೆನಿಸುತ್ತದೆ. ಮಗುವನ್ನು ಹಕ್ಕಿಯಾಗಿ ಚಿತ್ರಿಸುವುದರ ಮೂಲಕ ಮಾನವ ಜೀವನಕ್ಕೆ ಅಗತ್ಯವಾದ ಅತ್ಯಂತ ಮಹತ್ವದ ಸಂದೇಶವನ್ನು ಈ ಕವನದಲ್ಲಿ ಸಾರುವ ಪ್ರಯತ್ನ ಆಗಿದೆ. ಅಡ್ವಳರ ಎಲ್ಲ ರಚನೆಗಳೂ ಮೌಲ್ಯವನ್ನು ಎತ್ತಿ ಹಿಡಿಯುವ ಸದುದ್ದೇಶದ ಕವನಗಳೆಂಬುದು ಅವರ ಹೆಗ್ಗಳಿಕೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳೇ ಆವರ ಕವನಗಳಿಗೆ ಮೇವನ್ನು ನೀಡುತ್ತವೆ. ಅವರ ಎಚ್ಚೆತ್ತಿರುವ ಪ್ರಜೆಗಳು ಇದರ ಮೊದಲ ಚರಣವು,

 ವಿಕಾರಗಳು ಮನದಿ ತುಂಬಿ
 ಮೊಟ್ಟೆಯಿಟ್ಟು ಕಾವು ಕೊಟ್ಟು |
 ದಿನಗಳುರುಳೆ ಕಾವು ಬಲಿತು
 ಮೊಟ್ಟೆಗಳೊಡೆಯಲು ಮರಿಗಳು  
       ಮನುಷ್ಯನ ಮನಸ್ಸಿನಲ್ಲಿ ವಿಕಾರಗಳು ಹುಟ್ಟುತ್ತವೆ. ದಿನಗಳುರುಳಿದಂತೆ ಮನಸ್ಸು ನೂರಾರು ವಿಕೃತವಾದ ಯೋಚನೆಗಳ ಬಲಿಷ್ಠ ಸಾಮ್ರಾಜ್ಯವಾಗುತ್ತದೆ.

 ಒಕ್ಕಿ ಒಕ್ಕಿ ತಿನಿಸ ನೀಡಿ
 ಬೆಳೆದ ಮರಿಗಳೆಲ್ಲ ಹಾರಿ |
 ಎಡವಟ್ಟುಗಳ ದುಡುಕಿ ಗೈದು
 ಎಸೆದ ಕಲ್ಲು ಮಣ್ಣು ಬಿದ್ದು  
     ಈ ವಿಕೃತಿಗಳು ಒಂದು ರೀತಿಯ ಅಂಟು ಜಾಡ್ಯ. ವಿಕೃತಗೊಂಡ ಮನಸ್ಸು ಮನಸೋ ಇಚ್ಚೆ ಎಡವಟ್ಟುಗಳನ್ನೇ ಮಾಡುತ್ತಿರುತ್ತದೆ. ಈ ಎಡವಟ್ಟುಗಳಿಗೆ ಸಾರ್ವಜನಿಕರಿಂದ ನಾನಾ ರೀತಿಯ ದಂಡನೆಗಳಾಗುತ್ತವೆ

 ಅವಿವೇಕವು ಮತ್ತೆ ಹೆಚ್ಚಿ
 ಆರಕ್ಷಕ ಹಿಡಿತ ಬಡಿತ |
 ಬಂಧನಕ್ಕೆ ತಳ್ಳಿ ಸಾಗೆ
 ನ್ಯಾಯವಾದಿ ಮಂತ್ರ ಹೇಳೆ  
ಜನರ ದಂಡನೆಗೂ ಬಾಗದ ವಿಕೃತರ ಅವಿವೇಕಿತನದ ಚರ್ಯೆಗಳು ನೂರ್ಮಡಿಸುತ್ತವೆ. ಪೋಲೀಸರ ಬಡಿತ, ಸೆರೆಮನೆ ವಾಸ, ನ್ಯಾಯಾಲಯದಲ್ಲಿ ಛೀಮಾರಿ ಎಲ್ಲವೂ ಒದಗಿ ಬರುತ್ತದೆ.

 ಸಂಸ್ಕಾರವು ಸೇರಲಿಲ್ಲ
 ದುಷ್ಟ ಆಕಾರದ ಬಲಕೆ | 
 ಜೀವಾವಧಿ ಘೋರ ಶಿಕ್ಷೆ
 ಮತ್ತೆ ಬರುವುದೇ ಪಾಸಿಯು  
ಇಷ್ಟೆಲ್ಲ ರೀತಿಯ ದೈಹಿಕ ಮಾನಸಿಕ ಹಿಂಸೆಗಳೊದಗಿದರೂ ವಿಕೃತರಲ್ಲಿ ಸಂಸ್ಕಾರ ಮೊಳೆಯಲಿಲ್ಲ, ಅವರ ದುಷ್ಟತನವೇ ಬಲಶಾಲಿಯಾಗುತ್ತದೆ. ಘೋರವಾದ ಜೀವಾವಧಿ ಶಿಕ್ಷೆಯೂ ಒದಗುತ್ತದೆ. ಮರಣ ದಂಡನೆಯೂ ಮುಂದೆ ಕಾದಿರುತ್ತದೆ.

 ವಯಸು ತಿನಿಸು ಸಂಗದೋಷ
 ಸಂಪತ್ತು ಅಧಿಕಾರ ಬಲ |
 ಸೌಂದರ್ಯ ವೇಷ ಜನಬಲ
 ಕಣ್ಣಿಗೆ ಪರೆ ಕುರುಡುತನವು 
ವಯಸ್ಸು, ಸೇವಿಸುವ ಆಹಾರ, ಬೆರೆಯುವ ಮಂದಿ, ಒದಗಿದ ಸಂಪತ್ತು, ಪಡೆದ ಅಧಿಕಾರ, ದೇಹ ಸೌಷ್ಟವ, ಕೆಡುಕರ ಬಲ ಮನುಷ್ಯನ ಮನದೊಳಗೆ ಕುರುಡುತನದ ಪೊರೆಯನ್ನೇರ್ಪಡಿಸುತ್ತದೆ. ಅಂತಹ ಸಂದರ್ಭದಲ್ಲಿ ಸರಿಯಾದುದೂ ಅವರಿಗೆ ಸರಿ ಬರುವುದಿಲ್ಲ. ವಿಕೃತಿಯೇ ಅವರಿಗೆ ಸುಂದರವಾಗಿ ಗೋಚರಿಸುತ್ತದೆ.

 ಕೇಳಿ ತಿಳಿದ ಜನರೆಲ್ಲರು
 ಅಷ್ಟಾಂಗ ಯೋಗದಿ ನಡಿಗೆ |
 ನಾಗರಿಕತೆ ಸಂಸ್ಕಾರದಿ
 ಎಚ್ಚೆತ್ತಿರುವ ಪ್ರಜೆಗಳು 
ನಾವು ಎಚ್ಚೆತ್ತುಕೊಳ್ಳಬೇಕು. ವಿಕೃತಿಗಳಿಗೆ ದೇಶ ಮತ್ತು ಸಮಾಜ ನೀಡುವ ಶಿಕ್ಷೆ, ಅಗೌರವ ಮತ್ತು ಅಮಾನ್ಯತೆಗಳನ್ನು ಮನನ ಮಾಡಿಕೊಳ್ಳಬೇಕು. ಅಷ್ಟಾಂಗ ಯೋಗವು ಸಾರುವ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿಗಳನ್ನು ನಮ್ಮದಾಗಿಸಿ ಕೊಳ್ಳಬೇಕು. ಇದರಿಂದ ನಮ್ಮಲ್ಲಿ ನಾಗರಿಕತೆ, ಸಂಸ್ಕಾರ ಮೈದಳೆದು ಜಾಗೃತಾವಸ್ಥೆ ಯಲ್ಲಿದ್ದುಕೊಂಡು ಸುಕೃತವಾದುವುಗಳನ್ನು ಮಾತ್ರವೇ ಅನುಸರಿಸುವವರಾಗುತ್ತೇವೆ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 



Ads on article

Advertise in articles 1

advertising articles 2

Advertise under the article