ಜೀವನ ಸಂಭ್ರಮ : ಸಂಚಿಕೆ - 109
Monday, October 30, 2023
Edit
ಜೀವನ ಸಂಭ್ರಮ : ಸಂಚಿಕೆ - 109
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ... ಈ ಘಟನೆ ಓದಿ... ಒಂದು ನಗರದಲ್ಲಿ ಇಬ್ಬರು ಅಧಿಕಾರಿ ಮಿತ್ರರು ಇದ್ದರು. ಆ ಎರಡು ಕುಟುಂಬಗಳು ಒಂದೇ ನಗರದಲ್ಲಿ ವಾಸವಾಗಿದ್ದರು. ಒಮ್ಮೆ ಒಬ್ಬ ಅಧಿಕಾರಿ ರವಿಯ ಅತ್ತೆಯ ಅನಾರೋಗ್ಯ ನಿಮಿತ್ತ ಪತ್ನಿ ಮಗನೊಂದಿಗೆ ತವರು ಮನೆಗೆ ಹೋಗಿದ್ದಳು. ಆಗ ಇನ್ನೊಬ್ಬ ಅಧಿಕಾರಿ ರಮೇಶ ಹೇಳಿದ, "ನೀನು ಚೆನ್ನಾಗಿ ಅಡುಗೆ ಮಾಡುತ್ತೀಯಾ.... ನಿನ್ನ ಊಟ ಸವಿಯಬೇಕು. ನಾನು ಬರುತ್ತೇನೆ. ಬರುವಾಗ ಡ್ರಿಂಕ್ಸ್ ಕೂಡಾ ತರುತ್ತೇನೆ" ಎಂದು ಹೇಳಿದ. ಅಧಿಕಾರಿ ರವಿ ಒಬ್ಬನೇ ಇದ್ದುದರಿಂದ ಸಂತೋಷವಾಯಿತು. ಮಾಂಸ ತಂದು ಚೆನ್ನಾಗಿ ಅಡುಗೆ ಮಾಡಿದನು. ರಮೇಶ ಮತ್ತು ಆತನ ಸಿಬ್ಬಂದಿ ಇಬ್ಬರು ಜೊತೆಗೂಡಿ ಮಿತ್ರ ರವಿಯ ಮನೆಗೆ ಬಂದರು. ಇಬ್ಬರೂ ಬಂದು ಊಟಕ್ಕೆ ಕುಳಿತಾಗ, ರವಿ, "ನಾನು ಪ್ರತಿದಿನ ಅಡುಗೆ ಮಾಡಲು ಆಗುವುದಿಲ್ಲ. ಅದಕ್ಕಾಗಿ ಹೆಚ್ಚಿಗೆ ಮಾಂಸ ತಂದು ಅಡುಗೆ ಮಾಡಿದ್ದೇನೆ. ನಿಮಗೆ ಸಾಕಷ್ಟು ಬಳಸಿ ಉಳಿಸಬೇಕು." ಎಂದ. ರಮೇಶ ಮತ್ತು ಆತನ ಮಿತ್ರ ಕೇಳಿಸಿಕೊಂಡರು. ಆದರೂ ಮದ್ಯಪಾನದ ಅಮಲಿನಲ್ಲಿ ತಿಂದದ್ದೇ ತಿಳಿಯಲಿಲ್ಲ. ಮಾಡಿದ ಅಡುಗೆಯಲ್ಲಿ ಮುಕ್ಕಾಲು ಪಾಲು ಮುಗಿಸಿದರು.
ಇನ್ನೊಂದು ಘಟನೆ.... ಒಬ್ಬ ಅಧಿಕಾರಿ ಆತ ಬಡತನದಿಂದ ಬಂದವನು. ಆತನಿಗೆ ಒಬ್ಬ ಮಗನಿದ್ದನು. ತನ್ನ ಮಗನನ್ನು ಹೆಸರಾಂತ ಕಾಲೇಜಿನಲ್ಲಿ ಪಿಯುಸಿಗೆ ಸೇರಿಸಿ, ಪಾಸಾದ ನಂತರ ಮೈಸೂರಿನ ಹೆಸರಾಂತ ಕಾಲೇಜಿಗೆ ಪದವಿಗೆ ಸೇರಿಸಿದನು. ಹಾಗೆ ಹೆಸರಾಂತ ಹಾಸ್ಟೆಲ್ ಗೂ ಸೇರಿಸಿದನು. ಆ ಅಧಿಕಾರಿಯ ಆಸೆ ತನ್ನ ಮಗ ಶೇಕಡಾ ನೂರರಷ್ಟು ಅಂಕ ಪಡೆದು, ಸಂಶೋಧನೆ ಮಾಡಿ ಒಳ್ಳೆಯ ಸಂಪಾದನೆ ಮಾಡಬೇಕೆಂಬುದಾಗಿತ್ತು. ಮೊಬೈಲ್ ಕರೆ ಮೂಲಕ ಪ್ರತಿದಿನ ಮಗನ ಜೊತೆ ಮಾತನಾಡುತ್ತಿದ್ದನು. ಮಾತನಾಡುವಾಗ ಮೊದಲನೇ ಪ್ರಶ್ನೆ, "ಹೇಗೆ ಓದುತ್ತಿದ್ದೀಯಾ...? ಚೆನ್ನಾಗಿ ಓದು... ಊಟ ಆಯ್ತಾ...." ಇಷ್ಟೇ... ಇದೇ ಮಾತನ್ನು ಪ್ರತಿದಿನ ಪದೇ ಪದೇ ಕೇಳಿ ಮಗನಿಗೆ ತುಂಬಾ ಬೇಸರವಾಗಿತ್ತು. ಪರೀಕ್ಷೆಯಲ್ಲಿ ತಂದೆಯ ಆಸೆ ಪೂರೈಸಲು ಮೊಬೈಲ್ ಇಟ್ಟುಕೊಂಡು ನಕಲು ಮಾಡುತ್ತಿದ್ದನು. ತಪಾಸಣಾಧಿಕಾರಿಗಳಿಗೆ ಸಿಕ್ಕಿಬಿದ್ದು ಎರಡು ವರ್ಷ ಡಿಬಾರ್ ಆದನು.
ಒಂದು ಬಾರಿ ಮಗನ ಸ್ನೇಹಿತರು ಅಧಿಕಾರಿಗೆ ಸಿಕ್ಕಿದಾಗ, "ನೀವು ಎಂದೂ ನಿಮ್ಮ ಮಗ ಹೇಗಿದ್ದೀಯಾ? ಸಂತೋಷವಾಗಿರು. ಸಂತೋಷವಾಗಿ ಕಲಿ, ನೀನು ಚೆನ್ನಾಗಿದ್ದರೆ ಎಲ್ಲಾ.. ಎಂಬ ಒಂದು ಮಾತೂ ಆಡದೆ ಕೇವಲ ಪರೀಕ್ಷೆ ಬಗ್ಗೆ ಮಾತನಾಡುತ್ತಿದ್ದಿರಿ, ಅದರ ಫಲ ಇದು." ಎಂದರು.
ಈ ಎರಡು ಘಟನೆ ನೋಡಿದಾಗ ಪತಂಜಲಿ ಮಹರ್ಷಿ ಸುಮಾರು 2,500 ವರ್ಷಗಳ ಹಿಂದೆ ಮನಸ್ಸಿನ ಕುರಿತು ಹೇಳಿದ ಮಾತು ನೆನಪಿಗೆ ಬರುತ್ತದೆ. ಕೇವಲ ಯೋಗಶಾಸ್ತ್ರಜ್ಞರಲ್ಲ, ಮನಶಾಸ್ತ್ರಜ್ಞರೂ ಹೌದು. ಆತ ಹೇಳುತ್ತಾನೆ, "ನಾವು ಸುಂದರವಾಗಿ ಬದುಕಬೇಕಾದರೆ ಬೇರೊಬ್ಬರ ಮನಸ್ಸಿನಲ್ಲಿ ಏನಿದೆ ಅನ್ನೋದನ್ನು ತಿಳಿದುಕೊಳ್ಳಬೇಕು" ಎಂದು ಹೇಳುತ್ತಾನೆ. ಇನ್ನೊಬ್ಬರ ಮನಸ್ಸಿನ ಬಗ್ಗೆ ತಿಳಿದು ಕೊಳ್ಳಬೇಕಾದರೆ, ಮೊದಲು ನಿನ್ನ ಮನಸ್ಸಿನ ಮೇಲೆ ಗಮನ ಕೇಂದ್ರೀಕರಿಸು. ಆಗ ಮನಸ್ಸಿನಲ್ಲಿ ಏನು ಮೂಡುತ್ತದೆ...? ಮನಸ್ಸಿನಲ್ಲಿ ಯಾವ ಭಾವ ಮೂಡಿದಾಗ, ನಮ್ಮ ದೇಹದಲ್ಲಿ ನಮ್ಮ ವರ್ತನೆ, ನಡುವಳಿಕೆ ಹೇಗಿರುತ್ತದೆ...? ಆಗ ನಮ್ಮ ಭಾಷೆ ಪ್ರಯೋಗ ಹೇಗಿರುತ್ತದೆ...? ಇದನ್ನು ತಿಳಿದುಕೋ" ಎಂದು ಹೇಳುತ್ತಾನೆ. ಇದರ ಅರ್ಥ ನಮ್ಮ ಮನಸ್ಸಿನಲ್ಲಿ ಏನು ಮೂಡುತ್ತದೆಯೋ, ಅದು ದೇಹದಲ್ಲಿ ಪ್ರಕಟವಾಗುತ್ತದೆ ಮತ್ತು ಮಾತಿನಲ್ಲಿ ಪ್ರಕಟವಾಗುತ್ತದೆ. ಅದೇ ರೀತಿ ದೇಹದಲ್ಲಿ ಏನಾದರೂ ಆದರೆ ಅದು ಮನಸ್ಸಿನಲ್ಲಿ ಪ್ರಕಟಿಸುತ್ತದೆ ಮತ್ತು ಮಾತಿನಲ್ಲೂ ಪ್ರಕಟಿಸುತ್ತದೆ. ಇವು ಮೂರು ಒಂದಕ್ಕೊಂದು ಪೂರಕವಾಗಿರುತ್ತದೆ. ಮನಸ್ಸಿನ ಭಾವನೆಗೆ ಅನುಗುಣವಾಗಿ ದೇಹ ಪ್ರತಿಕ್ರಿಯಿಸುತ್ತದೆ ಮತ್ತು ಭಾಷೆ ಬಳಕೆ ಆಗುತ್ತದೆ. ದೇಹಕ್ಕೆ ಅನುಗುಣವಾಗಿ ಮನಸ್ಸು, ಭಾವ ಬದಲಾಗುತ್ತದೆ. ಇದನ್ನು ಚೆನ್ನಾಗಿ ತಿಳಿದುಕೊಂಡರೆ, ಬೇರೊಬ್ಬರ ಮನಸ್ಸಿನಲ್ಲಿ ಏನಿದೆ ತಿಳಿದುಕೊಳ್ಳಬಹುದು.
ಉದಾಹರಣೆ ಒಬ್ಬ ವ್ಯಕ್ತಿಯಲ್ಲಿ ಕೋಪ ಇರುವುದನ್ನು ನಮ್ಮ ಮನಸ್ಸು ತಿಳಿಯುತ್ತದೆ. ಕೋಪ ಏತಕ್ಕೆ ಬಂತು ಅನ್ನುವುದನ್ನು ತಿಳಿಯುವುದಿಲ್ಲ. ಅದಕ್ಕೆ ಪತಂಜಲಿ ಹೇಳುವುದು. "ನಮ್ಮ ಬದುಕಿಗೆ ಎಷ್ಟು ಬೇಕೋ ಅಷ್ಟು ತಿಳಿದುಕೊಳ್ಳಬೇಕು. ಹೆಚ್ಚಿಗೆ ಬೇಕಾಗಿಲ್ಲ. ಆತನಿಗೆ ಕೋಪ ಬಂದಿರುವುದು ತಿಳಿದರೆ ಸಾಕು. ಏಕೆ ಬಂದಿದೆ ಎನ್ನುವುದು ಅನಾವಶ್ಯಕ. ಇದರಿಂದ ಆ ಸಂದರ್ಭವನ್ನು ನಿಭಾಯಿಸಲು ಅನುಕೂಲವಾಗುತ್ತದೆ. ನಿನ್ನ ಸುಂದರ ಬದುಕಿಗೆ ಅನುಗುಣವಾಗಿ ಹೇಗೆ ವರ್ತಿಸಬೇಕೆಂದು ತಿಳಿಯುತ್ತದೆ. ಇನ್ನೊಬ್ಬರ ಮನಸ್ಸನ್ನು ಅರಿತಾಗ ನಮ್ಮ ಬದುಕನ್ನು ಸುಂದರ ಮಾಡಿಕೊಳ್ಳುವುದರ ಬಗ್ಗೆ ನಮಗೆ ದಾರಿ ದೊರಕುತ್ತದೆ. ಅದಕ್ಕೆ ಪರಚಿತ್ತ ಎನ್ನುವರು. ಅಂದರೆ ಬೇರೆಯವರ ಮನಸ್ಸನ್ನು ಕನಿಷ್ಠ ತಿಳಿದುಕೊಳ್ಳಬೇಕು. ಪರಚಿತ್ತವನ್ನು ಗ್ರಹಿಸಿದಾಗ ಅವರಿಗೆ ನೋವಾಗದಂತೆ ನಮ್ಮ ಬದುಕನ್ನು ಸುಂದರಗೊಳಿಸಲು ಸಾಧ್ಯ. ಅಲ್ಲವೇ ಮಕ್ಕಳೇ.....
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************