ಹಕ್ಕಿ ಕಥೆ : ಸಂಚಿಕೆ - 121
Tuesday, October 17, 2023
Edit
ಹಕ್ಕಿ ಕಥೆ : ಸಂಚಿಕೆ - 121
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.... ಈ ವಾರದ ಹಕ್ಕಿಕಥೆಗೆ ಸ್ವಾಗತ. ಕಡಲಿನ ಮೇಲೆ ಹಕ್ಕಿ ನೋಡಲು ಹೋದ ಕಥೆಯನ್ನು ಕಳೆದ ವಾರ ಪ್ರಾರಂಭ ಮಾಡಿದ್ದೆ. ಕಡಲಿನ ಪ್ರಯಾಣ ನನಗೂ ಹೊಸತು. ನದಿ ಸಮುದ್ರ ಸೇರುವ ಜಾಗವನ್ನು ನಮ್ಮೂರಿನಲ್ಲಿ 'ಕೋಡಿ' ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇದನ್ನೇ ಬಳಸಿ ಕೆಲಸವೊಂದನ್ನು ಪೂರ್ತಿಗೊಳಿಸುವುದನ್ನು 'ಕೋಡಿ ಎತ್ತಾವುನೆ' ಎಂದೂ ಕರೆಯುತ್ತಾರೆ. ನಾವು ಮೀನುಗಾರಿಕಾ ದೋಣಿಯೊಂದರಲ್ಲಿ ಸಮುದ್ರದ ಮೇಲೆ ನಮ್ಮ ಪ್ರಯಾಣ ಆರಂಭ ಮಾಡಿದ್ದೆವು.
ಹೀಗೆ ಸಮುದ್ರದಲ್ಲಿ ಪ್ರಯಾಣ ಆರಂಭ ಮಾಡಿದ ನಮಗೆ ಒಂದೆಡೆ ಭೂಮಿ ದೂರವಾಗುತ್ತಿತ್ತು. ಆ ಕಡೆ ಕಡಲಿನ ಅಂಚು ಕಾಣುತ್ತಿತ್ತು. ಸುಮಾರು ಗಂಟೆಗೆ ಹತ್ತು ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದ್ದ ನಮ್ಮ ಮೋಟಾರ್ ದೋಣಿ (ಪರ್ಸೀನ್ ಬೋಟ್ ಎಂದೂ ಕರೆಯುತ್ತಾರೆ) ಎಷ್ಟು ದೂರ ಹೋದರೂ ದಿಗಂತದ ಆಕಡೆ ಕಾಣುತ್ತಲೇ ಇರಲಿಲ್ಲ. ದಿಗಂತ ಅಷ್ಟೇ ದೂರದಲ್ಲಿ ಕಾಣುತ್ತಿತ್ತು. ನಾವು ಭೂಮಿಯ ಮೇಲೆ ಎಸೆದ ಪ್ಲಾಸ್ಟಿಕ್ ಕಸ ಅಲ್ಲಲ್ಲಿ ಸಮುದ್ರದ ಮೇಲೆ ತೇಲುತ್ತಿತ್ತು. ಅದನ್ನು ನೋಡಿದಾಗಲೆಲ್ಲ ನಮ್ಮ ತಪ್ಪು ಮುಖಕ್ಕೆ ಹಿಡಿತಂತೆ ರಾಚುತ್ತಿತ್ತು. ಬೆಳಗ್ಗೆ ಸುಮಾರು ಒಂಭತ್ತು ಗಂಟೆಯಾಗಿತ್ತು. ಎಲ್ಲರಿಗೂ ಹಸಿವಾಗಿತ್ತು. ನಾವು ತೆಗೆದುಕೊಂಡು ಹೋಗಿದ್ದ ಇಡ್ಲಿ ಸಾಂಬಾರ್ ಮತ್ತು ಚಹಾ ಸೇವಿಸಿದಾಗ ಸ್ವಲ್ಪ ಜೀವ ಬಂದ ಹಾಗಾಯಿತು. ಸುತ್ತ ಎಷ್ಟು ದೂರ ನೋಡಿದರೂ ಕೇವಲ ನೀಲಿ ಬಣ್ಣದ ಕಡಲು. ಕಡಲಿನ ಮಧ್ಯೆ ತೇಲುವ ಹಡಗಿನಲ್ಲಿ ಅದೂ ನಿಧಾನಕ್ಕೆ ಅಲ್ಲಾಡುವ ದೋಣಿಯಲ್ಲಿ ಕುಳಿತು ಚಹಾ ತಿಂಡಿ ಸವಿಯುವುದು ಒಂದು ವಿಶಿಷ್ಟ ಅನುಭವ. ಬಿಸಿಲಿನ ಝಳವೂ ಸಾಕಷ್ಟು ಹೆಚ್ಚಾಗಿತ್ತು. ಎಲ್ಲರೂ ನೆರಳಿನ ಜಾಗ ಆದರೆ ಕಡಲು ಸರಿಯಾಗಿ ಕಾಣುವ ಜಾಗದಲ್ಲಿ ನಮ್ಮ ಕ್ಯಾಮರಾ ಮತ್ತು ಬೈನಾಕುಲರ್ ಹಿಡಿದುಕೊಂಡು ನಿಂತಿದ್ದೆವು. ಸಣ್ಣದೊಂದು ಹಕ್ಕಿ ಹಾರಿದಂತೆ ಕಂಡರೂ ಆಕಡೆ ನಮ್ಮ ಬೈನಾಕುಲರ್ ತಿಗರುಗಿಸುತ್ತಿದ್ದೆವು. ನಮ್ಮ ಸುತ್ತ 360° ಕಡಲಿನಲ್ಲಿ ಒಬ್ಬೊಬ್ಬರೂ ಒಂದೊಂದು ದಿಕ್ಕಿಗೆ ಮುಖಮಾಡಿ ಕುಳಿತು ಸಮುದ್ರವನ್ನು ಗಮನಿಸುತ್ತಿದ್ದೆವು. ಯಾರಿಗೆ ಏನೇ ಕಂಡರೂ ಕೂಗಿ ಹೇಳುತ್ತಿದ್ದೆವು. ಅನೇಕ ಸಣ್ಣ ದೊಡ್ಡ ಬೋಟುಗಳು ಕಡಲಿನಲ್ಲಿ ಮೀನುಹಿಡಿಯಲೆಂದು ಹೊರಟಿದ್ದು ಅಲ್ಲಲ್ಲಿ ಕಾಣುತ್ತಿದ್ದವು. ಕೆಲವು ಮೀನು ಹಿಡಿದು ಮರಳುತ್ತಿದ್ದವು.
ನಮ್ಮ ದೋಣಿಯಲ್ಲೂ ಮುಂದುಗಡೆ ಎತ್ತರವಾದ ಗೋಪುರವೊಂದಿತ್ತು. ಅಲ್ಲಿ ಕುಳಿತು ದೋಣಿಯ ಸಿಬ್ಬಂದಿಯೊಬ್ಬರು ಮೀನು ಹುಡುಕುವಂತೆ ಹಕ್ಕಿ ಕಾಣುತ್ತದೋ ಎಂದು ನೋಡುತ್ತಿದ್ದರು. ಅವರಿಗೆ ಎಡಬದಿಗೆ ಸ್ವಲ್ಪ ದೂರದಲ್ಲಿ ಯಾವುದೋ ಹಕ್ಕಿ ಕಾಣಿಸಿತು. ದೋಣಿಯನ್ನು ಆಕಡೆಗೆ ತಿರುಗಿಸುವಂತೆ ಚಾಲಕನಿಗೆ ಸನ್ನೆ ಮಾಡಿದರು. ಚಾಲಕ ನಿಧಾನವಾಗಿ ಆಕಡೆಗೆ ದೋಣಿ ತಿರುಗಿಸಿದ. ಎಲ್ಲರ ಕ್ಯಾಮರಾ ಮತ್ತು ಬೈನಾಕುಲರ್ ಗಳು ಕಾತರವಾಗಿ ನೋಡುತ್ತಿದ್ದವು.
ಹಕ್ಕಿ ಈಗ ಸ್ಪಷ್ಟವಾಗಿ ಕಣ್ಣಿಗೆ ಕಾಣುತ್ತಿತ್ತು. ಸುಮಾರು ಮೂರರಿಂದ ನಾಲ್ಕು ಹಕ್ಕಿಗಳು ನೀರಿನಮೇಲೆ ಹಾರುತ್ತಿದ್ದವು. ಹಕ್ಕಿಯ ಕಾಲು ನೀರಿನ ಮೇಲೆ ನಡೆಯುವಂತೆ ಕಾಣುತ್ತಿತ್ತು. ಮಕರಂದ ಹೀರುವ ಚಿಟ್ಟೆಯಂತೆ ನೀರಿನ ಮೇಲೆ ಏನನ್ನೋ ತನ್ನ ಕೊಕ್ಕುಗಳಿಂದ ಹೀರುತ್ತಿತ್ತು. ರೆಕ್ಕೆಗಳು ಪಟಪಟನೆ ಬಡಿಯುತ್ತಿದ್ದವು. ದೊಡ್ಡ ಹೂವಿನ ಗೊಂಚಲಿನ ಮೇಲೆ ರೆಕ್ಕೆ ಬಡಿಯುತ್ತಾ ಮಕರಂದ ಹೀರುವ ಚಿಟ್ಡೆಯಂತೆ ಸುಂದರವಾದ ದೃಶ್ಯ. ಸುಮಾರು ನಿಮಿಷ ಹಾಗೇ ಆಹಾರ ಹೀರಿ ಅಲ್ಲಿಂದ ಇನ್ನೆಲ್ಲಿಗೋ ಹಾರಿ ಹೋದವು. ಮಳೆಗಾಲ ಮುಗಿದ ಮೇಲೆ ಭಾರತದ ಅರಬ್ಬೀ ಸಮುದ್ರಕ್ಕೆ ವಲಸೆ ಬರುವ ಈ ಹಕ್ಕಿ ದಕ್ಷಿಣಾರ್ಧ ಗೋಳದ ನಿವಾಸಿ. ಕಂದು ಬಣ್ಣದ ದೇಹ, ಸೊಂಟದ ಭಾಗದಲ್ಲಿ ಬಿಳೀ ಪಟ್ಟಿ, ಉಳಿದಂತೆ ಮೈಮೇಲೆಲ್ಲ ಕಡು ಕಂದು ಬಣ್ಣ. ನೀರಿನ ಮೇಲೆ ನಡೆಯುತ್ತಾ ಅದೇನು ತಿಂದಿತೋ ಗೊತ್ತಿಲ್ಲ ಆದರೆ ಅದನ್ನು ನೋಡಿದ ಅನುಭವ ಮಾತ್ರ ಗಾಢವಾದದ್ದು.
ಕನ್ನಡದ ಹೆಸರು: ಕಡಲ ಕಪೋತ
ಇಂಗ್ಲೀಷ್ ಹೆಸರು: Wilson's Storm-Petrel
ವೈಜ್ಞಾನಿಕ ಹೆಸರು: Oceanites oceanicus
ಚಿತ್ರಕೃಪೆ: ಕ್ಲೀಮೆಂಟ್ ಫ್ರಾನ್ಸಿಸ್
ಮುಂದಿನವಾರ ಇನ್ನೊಂದು ಕಡಲಿನ ಹಕ್ಕಿಯನ್ನು ನೋಡಿದ ಕಥೆಯೊಂದಿಗೆ ಮತ್ತೆ ಭೇಟಿಯಾಗೋಣ...
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************