-->
ಹೃದಯದ ಮಾತು : ಸಂಚಿಕೆ - 12

ಹೃದಯದ ಮಾತು : ಸಂಚಿಕೆ - 12

ಹೃದಯದ ಮಾತು : ಸಂಚಿಕೆ - 12
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ      ವೃದ್ದಾಶ್ರಮದಿಂದ ನಿರಾಳ ಭಾವದಿಂದ ರಾಜ ಮತ್ತು ಗೀತಾ ಹಿಂತಿರುಗುತ್ತಿದ್ದಾರೆ. ರಾಜನಿಗಿಂತಲೂ ಗೀತಾ ಉಲ್ಲಸಿತಳಾಗಿದ್ದಾಳೆ. ಸಂಜೆ ಸಮಯ. ದಾರಿ ಮಧ್ಯೆ ಮಗನ ಶಾಲೆ. ಶಾಲೆ ಬಿಡುವ ಸಮಯ. ಮಗನನ್ನು ಶಾಲೆಯಿಂದ ಒಟ್ಟಿಗೆ ಕಾರಲ್ಲಿ ಕರೆದುಕೊಂಡು ಬರುತ್ತಿದ್ದಾರೆ. ರಾಜ ಹೆಂಡತಿಯ ಒತ್ತಾಯಕ್ಕೆ ಅಮ್ಮನನ್ನು ಒಪ್ಪಿಸಿ ವೃದ್ದಾಶ್ರಮ ಸೇರಿಸಿದ್ದ. ರಾಜ ಕಂಪೆನಿಯೊಂದರ ಮೆನೇಜರ್. ಗೀತಾ ಸಾಫ್ಟ್ವೇರ್ ಕಂಪೆನಿಯ ಉದ್ಯೋಗಿ. ಸ್ವಂತ ಮನೆ, ಕಾರು ಎಲ್ಲವೂ ಇತ್ತು. ಮಗ ಪ್ರತಿಷ್ಢಿತ ಶಾಲೆಯಲ್ಲಿ ಒಂದನೇ ತರಗತಿ ಕಲಿಯುತ್ತಿದ್ದ. ಅಜ್ಜಿಯ ಮೇಲೆ ಅಪಾರ ಪ್ರೀತಿ ಆತನಿಗೆ. ಅಜ್ಜಿಯ ಜೊತೆನೇ ಹೆಚ್ಚು ಹೊತ್ತು ಇರಲು ಬಯಸುತ್ತಿದ್ದ. ರಾಜನ ಅಮ್ಮ ಸುಮ. ಅರವತ್ತೈದರ ಆಸುಪಾಸು. ಆದರೆ ಬಹಳನೇ ಕಷ್ಟದ ಜೀವನ ದೇಹವನ್ನು ವಯಸ್ಸಿಗಿಂತ ಹೆಚ್ಚು ಮಾಗಿಸಿತ್ತು. ದೇಹದಲ್ಲಿ ತ್ರಾಣ ಬಹಳನೇ ಕಡಿಮೆ ಇತ್ತು. ಏಳನೇ ತನಕ ಕಲಿತಿದ್ದ ಆಕೆ ಜಾಣೆಯಾಗಿದ್ದಳು. ಶಾಲಾ ದಿನಗಳಲ್ಲಿ ಸುಮಾಳ ಕೈಬರಹ ಮುತ್ತಿನಂತೆ ಅಂದವಾಗಿತ್ತು. ಆದರೆ ಬೆಟ್ಟದಷ್ಟು ಆಸೆ ಹೊತ್ತು ಮಗನಿಗೆ ಗೀತಾಳೊಂದಿಗೆ ಮದುವೆ ಮಾಡಿಸಿದ್ದಳು. ಸುಮಾ ಗೀತಾಳ ಪಾಲಿಗೆ ಹೊರೆಯಾಗಿದ್ದಳು. ನಮ್ಮ ಎಲ್ಲಾ ಸುಖಗಳಿಗೆ ಅತ್ತೆ ಅಡ್ಡಿಯೆಂಬ ಭಾವನೆ ಅವಳಲ್ಲಿತ್ತು. ಅದಕ್ಕೆ ರಾಜ ಅಮ್ಮನನ್ನು ಅತೀ ಹೆಚ್ಚು ಪ್ರೀತಿಸುತ್ತಿದ್ದದ್ದೇ ಕಾರಣ. ಮನೆಯಲ್ಲಿ ಪ್ರತಿದಿನ ಗಂಡ ಹೆಂಡತಿ ಮಧ್ಯೆ ಸುಮಾಳ ವಿಷಯದಲ್ಲಿ ಜಗಳ ನಡೆಯುತ್ತಿತ್ತು. ಅಂದು ಗೀತಾ ದೃಢ ನಿರ್ಧಾರ ತಾಳಿದ್ದಳು. ರಾಜನಿಗೆ ಅತ್ತೆಯನ್ನು ವೃದ್ದಾಶ್ರಮ ಸೇರಿಸುವ ಸಲಹೆ ನೀಡಿದ್ದಳು. ಸಾಧ್ಯವಾಗದಿದ್ದರೆ ಡೈವೋರ್ಸ್ ಪಡೆಯುವ ಬೆದರಿಕೆ ಒಡ್ಡಿದ್ದಳು. ರಾಜ ದಿಕ್ಕೆಟ್ಟಿದ್ದ. ಆ ದಿನ ಆಫೀಸ್ ನಿಂದ ಬೇಗನೇ ಬಂದವ ಅಮ್ಮನಲ್ಲಿ ವಿಷಯ ಪ್ರಸ್ತಾಪಿಸಿದ್ದ. ಅಮ್ಮನಿಂದ ವಿರೋಧ ನಿರೀಕ್ಷೆ ಮಾಡಿದ್ದ ಆತನಿಗೆ ಆಶ್ಚರ್ಯವಾಗಿತ್ತು. ಅಮ್ಮ ಯಾವುದೇ ಪ್ರತಿಕ್ರಿಯೆ ನೀಡದೆ ಒಪ್ಪಿಕೊಂಡಿದ್ದಳು. ರಾಜನಿಗೆ ದೊಡ್ಡ ಸಮಸ್ಯೆ ಪರಿಹಾರವಾದಂತೆ ಅನ್ನಿಸಿತು. ಗೀತಾ ಬಂದಾಗ ವಿಷಯ ತಿಳಿಸಿದ. ಆಕೆಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಮನೆಯಲ್ಲಿ ಅಂತೂ ಕೆಲಸದವಳಿದ್ದಾಳೆ. ಅತ್ತೆಯ ಬಾಧೆ ತಪ್ಪಿದರೆ ಇಷ್ಟದಂತೆ ಜೀವನದ ಖುಷಿ ಅನುಭವಿಸಬಹುದೆಂದು ಕನಸು ಕಂಡವಳಾಕೆ. ಇಂದು ಅಮ್ಮನನ್ನು ಬೀಳ್ಕೊಟ್ಟು ಮರಳುತ್ತಿರುವ ಅವರಿಬ್ಬರು ಮನೆಗೆ ತಲುಪುವಾಗ ಮುಸ್ಸಂಜೆ. ಗೀತಾಳಿಗೆ ಇನ್ಮುಂದೆ ಸ್ವತಂತ್ರ ಬದುಕು. ಆದರೆ ರಾಜನಿಗೆ ಮನಸ್ಸು ನೋಯುತ್ತಿತ್ತು. ಹೃದಯ ಭಾರವೆನಿಸುತ್ತಿತ್ತು. ಆತ ಅಮ್ಮನ ಕೋಣೆಯೊಳಗೆ ಬಂದ. ಅಲ್ಲಿ ಅಮ್ಮ ಏನನ್ನೂ ಬಿಟ್ಟಿರಲಿಲ್ಲ. ಎಲ್ಲವನ್ನೂ ತನ್ನ ಚೀಲದಲ್ಲಿ ತುಂಬಿಸಿದ್ದಳು. ಆಕೆ ಮನೆಬಿಟ್ಟು ಹೋಗುವ ಖುಷಿಯಲ್ಲಿದ್ದ ಗೀತಾ ಅತ್ತೆಯನ್ನು ಪ್ರಶ್ನಿಸುವ ಗೋಜಿಗೆ ಹೋಗಿರಲಿಲ್ಲ. ರಾಜನಿಗೆ ಅಮ್ಮನ ಕೋಣೆಯಲ್ಲಿ ಒಂದು ಡಬ್ಬ ಕಾಣಿಸಿತು. ಅದು ಅಮ್ಮ ತನ್ನಲ್ಲಿದ್ದ ಪುಡಿಗಾಸು ಹಾಕುತ್ತಿದ್ದ ಡಬ್ಬ. ಅಮ್ಮ ಮನೆಯಲ್ಲಿ ಇಟ್ಟು ಹೋದ ಆಸ್ತಿ ಅದೊಂದೇ. ಅದನ್ನು ತೆರೆದು ನೋಡಬೇಕೆಂದೆನಿಸಿತು. ತೆರೆದಾಗ ಅದರಲ್ಲಿ ಕೆಲವು ನಾಣ್ಯಗಳು ಹಾಗೂ ಹಳತಾದ ಹತ್ತು ರೂಗಳ ಕೆಲವು ನೋಟುಗಳಿದ್ದವು. ಅಲ್ಲದೆ ಅದರಲ್ಲಿ ಒಂದು ಬಿಳಿಹಾಳೆ ಮಡಿಚಿ ಇಟ್ಟಿದ್ದಳು ಅಮ್ಮ. ಏನಿರಬಹುದೆಂದು ನಿಧಾನವಾಗಿ ಬಿಡಿಸಿದಾಗ ಅದರಲ್ಲಿ ಅಮ್ಮ ಮಗನಿಗೆ ಸುದೀರ್ಘವಾದ ಪತ್ರವೊಂದನ್ನು ಬರೆದಿದ್ದಳು. ಅಲ್ಲೇ ಮಂಚದಲ್ಲಿ ಕುಳಿತು ಪತ್ರ ಓದತೊಡಗಿದ. "ಮಗನೇ, ನೀನು ನನ್ನನ್ನು ಆಶ್ರಮಕ್ಕೆ ಸೇರಿಸಲು ಒದ್ದಾಡುತ್ತಿರುವುದು ನಾನು ಬಲ್ಲೆ. ನನಗಾಗಿ ನಿನ್ನ ಸಂಸಾರ ಹಾಳಾಗುವುದು ನನಗಿಷ್ಟವಿಲ್ಲ. ನೀನು ನನ್ನ ಮುದ್ದು ಮಗ. ನೀನು ಚಿಕ್ಕವನಿದ್ದಾಗ ನಿನ್ನ ಅಪ್ಪನನ್ನು ಕಳೆದುಕೊಂಡೆ. ಮೊದಲೇ ಅನಾಥೆಯಾಗಿದ್ದ ನನಗೆ ನನ್ನವರು ಯಾರೂ ಇರಲಿಲ್ಲ. ನನ್ನ ಸೌಂದರ್ಯ ಹಾಗೂ ಚಿಕ್ಕ ಪ್ರಾಯ ನೋಡಿ ಮರುಮದುವೆ ಯಾಗುವಂತೆ ಒತ್ತಾಯಿಸಿದರು. ಆದರೆ ನನ್ನ ಕಣ್ಣಮುಂದೆ ಪುಟ್ಟಹೆಜ್ಜೆಯಿಡುತ್ತಿದ್ದ ನೀನಿದ್ದೆ. ಅನೇಕ ಮಂದಿ ನನ್ನ ದೇಹ ಸುಖ ಬಯಸಿ ಬಂದರು. ಏಕೆಂದರೆ ನಾನು ಗತಿಹೀನಳು. ಆದರೆ ನಾನೆಂದೂ ದಾರಿ ತಪ್ಪಲಿಲ್ಲ. ಅದೆಷ್ಟೋ ದುಡ್ಡು ಸುರಿಯುವವರಿದ್ದರು. ಆದರೂ ನಾನು ವಿಚಲಿತನಾಗಲಿಲ್ಲ. ಗುಡಿಸಲಿನಲ್ಲಿ ಮರ್ಯಾದೆಯ ಬದುಕು ಸಾಗಿಸಿದೆ. ಬದುಕಲು ದಾರಿ ಬೇಕಿತ್ತು. ಹತ್ತಾರು ಮನೆಯಲ್ಲಿ ನೆಲ ಒರೆಸಿದೆ. ಕಂಡವರ ಮನೆಯ ಚಾಕರಿ ಮಾಡಿದೆ. ಗಳಿಸಿದ ದುಡ್ಡಿನಲ್ಲಿ ಖರ್ಚು ಕಳೆದು ಇದೇ ಡಬ್ಬದಲ್ಲಿ ಹಾಕುತ್ತಿದ್ದೆ. ನನ್ನ ಆರೋಗ್ಯದ ಬಗ್ಗೆ ವಿಚಾರಿಸಲು ಯಾರೂ ಇರಲಿಲ್ಲ. ಅದೆಷ್ಟೇ ಕಷ್ಟ ಬಂದರೂ ನಾನು ಬದುಕ ಬೇಕಿತ್ತು. ಏಕೆಂದರೆ ಅದು ನಿನಗಾಗಿ. ನಿನ್ನನ್ನು ಶಾಲೆಗೆ ಸೇರಿಸಿದ ಮೊದಲದಿನ ನೀನು ಹಟಹಿಡಿದು ಅತ್ತಾಗ ಸುರಿದ ಕಣ್ಣೀರಿಗೆ ಕಟ್ಟೆಯಿರಲಿಲ್ಲ. ನೀನು ಆ ದಿನ ಮನೆಗೆ ಬರುವ ತನಕ ಒಂದು ತೊಟ್ಟು ನೀರು ಕುಡಿಯದೆ ನಿನಗಾಗಿ ಕಾಯುತ್ತಿದ್ದೆ. ನಿನಗೆ ಜ್ವರ ಬಂದರೆ ಪೂರ್ತಿ ರಾತ್ರಿ ನಿನ್ನ ಪಕ್ಕ ನಿದ್ರೆ ಮಾಡದೆ ಕಾಯುತ್ತಿದ್ದೆ. ನಡುರಾತ್ರಿ ನಿನ್ನನ್ನು ಹೆಗಲ ಮೇಲೆ ಹೊತ್ತು ವೈದ್ಯರ ಬಳಿ ಹೋದದ್ದಿದೆ. ನೀನು ಬೆಳೆಯುತ್ತಿದ್ದಂತೆ ನಿನ್ನ ನೋಡಿ ಎಲ್ಲಾ ಕಷ್ಟ, ನೋವು ಮರೆಯುತ್ತಿದ್ದೆ. ಹೆಚ್ಚು ಖರ್ಚು ಮಾಡದೆ ನಿನಗಾಗಿ ಉಳಿಸುತ್ತಿದ್ದೆ. ನೀನು ಶಾಲೆ ಬಿಟ್ಟು ಸಂಜೆ ಓಡೋಡಿ ಬಂದು ತಿನ್ನಲು ಕೇಳುತ್ತಿದ್ದೆ. ಏಕೆಂದರೆ ನಿನಗೆ ಹಸಿವು ಜಾಸ್ತಿ. ನಾನು ದಿನಾಲೂ ನಿನಗೆ ಏನಾದರೂ ಮಾಡಿ ಇಡುತ್ತಿದ್ದೆ. ಆದರೆ ಮಗನೇ ನಾನು ಅದೆಷ್ಟೋ ದಿನ ಹೊಟ್ಟೆಗೆ ಏನೂ ತಿನ್ನದೆ ನಿನಗಾಗಿ ಎತ್ತಿಡುತ್ತಿದೆ. ಏಕೆಂದರೆ ನನಗೆ ನೀನೇ ಮುಖ್ಯವಾಗಿದ್ದೆ. ನಿನಗೆ ಹೊಸ ಬಟ್ಟೆ ಕೇಳಿದಾಗ ಕೊಡುತ್ತಿದ್ದೆ. ಹೊಸ ಚಪ್ಪಲಿ ಕೇಳಿದರೆ ಇಲ್ಲ ಅನ್ನಲಿಲ್ಲ. ಮಗನೇ ನನ್ನ ಕಾಲಲ್ಲಿ ಚಪ್ಪಲಿ ಇಲ್ಲದೇ ಅದೆಷ್ಟೋ ದಿನ ನಡೆದಿದ್ದೇನೆ. ನಾನು ಹೊಸ ಸೀರೆ ಉಡದೆ ಎಷ್ಟೋ ವರ್ಷಗಳಾಗಿರಬಹುದು. ಅದ್ಯಾವುದೋ ದುರಾಸೆ ನನ್ನಲ್ಲಿ. ಒಂದು ಹೊಸ ಸೀರೆ ಉಡಬೇಕೆಂದು. ಅದಕ್ಕಾಗಿ ಸ್ವಲ್ಪ ಉಳಿಸಿ ಮಡಕೆ ತುಂಬಿಸಿದ್ದೆ. ಆದರೆ ಅದೊಂದು ದಿನ ನೀನು ಬಂದು ಶಾಲೆಯಲ್ಲಿ ಪ್ರವಾಸ ಇದೆ. ಎಲ್ಲರೂ ಹೋಗುತ್ತಿದ್ದಾರೆ. ನಾನೂ ಹೋಗುತ್ತೇನೆ ಎಂದು ಹಟ ಮಾಡಿದೆ. ನಿನ್ನನ್ನು ನಿರಾಸೆ ಮಾಡಲು ನನ್ನ ಹೃದಯ ಒಪ್ಪಲಿಲ್ಲ. ಸೀರೆಗಾಗಿ ಆಸೆಯಿಂದ ತೆಗೆದಿರಿಸಿದ್ದ ಹಣವನ್ನೆಲ್ಲಾ ನಿನ್ನ ಕೈಗಿತ್ತು ಪ್ರವಾಸಕ್ಕೆ ಕಳಿಸಿದ್ದೆ. ವಯಸ್ಸು ದಾಟುತ್ತಿದ್ದಂತೆ ನಿನ್ನ ಬಗ್ಗೆ ಚಿಂತೆ ಹೆಚ್ಚಾಯಿತು. ನೀನು ಪದವಿ ಮುಗಿಸಿ, ನನ್ನ ಮುಂದೆ ನಿಂತಾಗ ಭೂಮಿ ಮೇಲೆ ನನ್ನಷ್ಟು ಸುಖಿ ಯಾರೂ ಇಲ್ಲ ಅಂತ ಭಾವಿಸಿದ್ದೆ. ನಿನಗೆ ಕೆಲಸ ಸಿಕ್ಕಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೂ ನನಗೆ ನಿನ್ನದೇ ಯೋಚನೆ. ನನಗೆ ವಯಸ್ಸಾಯಿತು. ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತಿದೆ. ನಿನ್ನನ್ನು ನೋಡಿಕೊಳ್ಳಲು ನಿನಗೊಬ್ಬಳು ಜೊತೆ ಬೇಕಿತ್ತು. ಗೀತಾಳನ್ನು ಹುಡುಕಿ ನಿನಗೆ ಮದುವೆ ಮಾಡಿಸಿದೆ. ಅವಳ ಮೇಲೆ ತುಂಬಾನೇ ಆಸೆ ಇಟ್ಟಿದ್ದೆ. ಆದರೆ ಆಕೆಗೆ ನಾನ್ಯಾವತ್ತೂ ಇಷ್ಟವಾಗಲೇ ಇಲ್ಲ. ಅವಳ ಸುಖಕ್ಕೆ ಅಡ್ಡಿಯಾಗಬಾರದೆಂದು ನಾನು ಕಡಿಮೆ ಮಾತಾಡ ತೊಡಗಿದೆ. ಜ್ವರ ಬಂದು ನಡುಗಿದಾಗಲೂ ನಿಮ್ಮಲ್ಲಿ ಹೇಳುತ್ತಿರಲಿಲ್ಲ. ಪ್ರತಿಯೊಂದನ್ನೂ ನಿಮ್ಮ ಸುಖಕ್ಕಾಗಿ ಸಹಿಸಿಕೊಂಡೆ. ಮೊಮ್ಮಗನಲ್ಲಿ ಆಟವಾಡುತ್ತಿದ್ದೆ. ಅವನಲ್ಲಿ ನಿನ್ನದೇ ಹೋಲಿಕೆ ಇತ್ತು. ಜೀವನದಲ್ಲಿ ಸಹಿಸಿಕೊಳ್ಳಲು ಉಳಿದದ್ದೂ ಏನೂ ಇರಲಿಲ್ಲ. ಗೀತಾ ನನ್ನನ್ನು ದೂರ ಕಳುಹಿಸಲು ಪ್ರಯತ್ನಿಸುತ್ತಿರುವುದು ನನಗೆ ಗೊತ್ತಿತ್ತು. ಆದರೂ ನಿನ್ನ ಮುಖ, ಮೊಮ್ಮಗನನ್ನು ನೋಡದೆ ಹೇಗಿರಲಿ. ನಿನ್ನ ಅಪ್ಪ ಸತ್ತ ದಿನದಿಂದ ಈ ತನಕ ಎದ್ದವಳು ಮೊದಲು ನೋಡುತ್ತಿದ್ದದ್ದೇ ನಿನ್ನ ಮುಖ. ನಿನ್ನ ಮುಖ ನೋಡದೆ ಹೇಗಿರುವುದು? ಎಂಬುವುದೇ ನನಗೆ ತಿಳಿದಿರಲಿಲ್ಲ. ಅದಕ್ಕಾಗಿ ಇಷ್ಟು ದಿನ ನಿಮಗೆ ತೊಂದರೆ ಕೊಟ್ಟೆ. ಒಂದು ದಿನಾನೂ ನನಗೆ ಅದು ಇಲ್ಲ ಇದು ಇಲ್ಲ ಎಂದು ನಿನ್ನಲ್ಲಿ ಕೇಳಿಲ್ಲ. ನೀವು ಕೊಟ್ಟದ್ದು ತಿಂದೆ. ಹೇಳಿದಲ್ಲಿ ಕುಳಿತೆ, ಮಲಗಿದೆ. ಏಕೆಂದರೆ ಎಷ್ಟು ಸಾಧ್ಯವೋ ಅಷ್ಟು ದಿನ ನಿನ್ನ ಮುಖ ನೋಡುವಾಸೆ. ಆದರೆ ಇನ್ನು ಹೆಚ್ಚು ದಿನ ಸಾಧ್ಯವಿಲ್ಲ ಎಂದು ಗೊತ್ತಾಗಿದೆ. ನಾನು ನಿನ್ನ ನಿರ್ಧಾರ ಒಪ್ಪಲೇಬೇಕು. ಇಲ್ಲದಿದ್ದರೆ ನನ್ನ ಜೀವನವಿಡೀ ಮಾಡಿದ ತ್ಯಾಗ, ಕಂಡ ಕನಸು ವ್ಯರ್ಥವಾಗುತ್ತದೆ. ನಾನಾದರೂ ಇನ್ನೆಷ್ಟು ದಿನ ಇರಬಲ್ಲೆ. ನನ್ನ ಸ್ವಾರ್ಥಕ್ಕಾಗಿ ಮಗನೇ ನಿನ್ನ ಬಾಳನ್ನು ಹಾಳುಮಾಡಲಾರೆ. ನಾನು ಹೋಗಲು ಮಾನಸಿಕವಾಗಿ ಯಾವತ್ತೂ ಸಿದ್ಧಳಾಗಿದ್ದೆ. ದೈಹಿಕವಾಗಿ ಇವತ್ತು ತಯಾರಾಗಿದ್ದೇನೆ. ನನ್ನ ಮೊಮ್ಮಗನ್ನು ಚೆನ್ನಾಗಿ ನೋಡಿಕೋ. ನನ್ನನ್ನು ಮತ್ತೆ ಕರೆದುಕೊಂಡು ಬರುವ ಪ್ರಯತ್ನ ಮಾಡಬೇಡ. ಮನಸ್ಸಿದ್ದರೆ ಯಾವತ್ತಾದರೂ ಬಂದು ನೋಡುತ್ತಿರು. ಉಸಿರಿರುವ ತನಕ ಆಶ್ರಮದಲ್ಲಿ ಬದುಕುತ್ತೇನೆ. ಇತೀ ನಿನ್ನ ಪ್ರೀತಿಯ ಅಮ್ಮ" ಪತ್ರ ಓದಿ ರಾಜನ ಕಣ್ಣಲ್ಲಿ ಕಟ್ಟೆಯೊಡೆದ ಕಣ್ಣೀರು. ಅಷ್ಟೊತ್ತಿಗೆ ಮಗ ಒಳಗೆ ಬಂದವನೇ "ಅಪ್ಪ ಅಜ್ಜಿಯನ್ನು ಆಶ್ರಮದಲ್ಲಿ ಬಿಟ್ಟು ಬಂದೆಯಂತೆ. ವಯಸ್ಸಾದರೆ ಆಶ್ರಮದಲ್ಲಿರಬೇಕಂತೆ. ಅಮ್ಮ ಹೇಳಿದಳು. ನನಗೂ ಆಶ್ರಮ ತೋರಿಸು ಅಪ್ಪಾ. ನಿನಗೆ ವಯಸ್ಸಾದಾಗ ನಾನು ಅಲ್ಲೇ ಬಿಟ್ಟು ಬರುತ್ತೇನೆ" ಎಂದು ಮುದ್ದಾಗಿ ಹೇಳಿದಾಗ ರಾಜ ಅಲ್ಲೇ ಕುಸಿದುಬಿದ್ದ.
...................... ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************


ನನ್ನ ಲೇಖನಗಳ ಸಂಗ್ರಹ (ಒಟ್ಟು62) ಪುಸ್ತಕದ ರೂಪದಲ್ಲಿ ಲಭ್ಯವಿದೆ. ಆಸಕ್ತಿಯುಳ್ಳ ಓದುಗರು ಸಂಪರ್ಕಿಸಬಹುದು....... 
ಯಾಕೂಬ್ ಎಸ್ ಕೊಯ್ಯೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************Ads on article

Advertise in articles 1

advertising articles 2

Advertise under the article