-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 31

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 31

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 31
ಲೇಖಕರು : ಪ್ರಶಾಂತ್ ಅನಂತಾಡಿ
ಆಂಗ್ಲ ಭಾಷಾ ಶಿಕ್ಷಕರು
ಸರಕಾರಿ ಪದವಿ ಪೂರ್ವ ಕಾಲೇಜು 
ಕಡಬ (ಪ್ರೌಢಶಾಲಾ ವಿಭಾಗ)
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 97416 69646
             

     ಪ್ರತಿದಿನವೂ ಶಿಕ್ಷಕರ ಕೊಠಡಿಯಲ್ಲಿ ಶಿಕ್ಷಕರ ನಡುವೆ ನಡೆಯುತ್ತಿದ್ದ ಸಂಭಾಷಣೆಗಳಲ್ಲಿ 'ಚಿದಾನಂದ' ನ ಆ ದಿನದ ಅಟ್ಟಹಾಸ, ಉಪಟಳಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಅಷ್ಟಕ್ಕೂ ಚಿದಾನಂದನು ಅನುದಿನವೂ ಓರ್ವ ಚರ್ಚಾರ್ಹ ವಿದ್ಯಾರ್ಥಿಯೇ ಆಗಿದ್ದನು. ಆತನು ಒಂದನೇ ತರಗತಿಗೆ ಆ ಶಾಲೆಗೆ ಸೇರಿದ ಲಾಗಾಯ್ತಿನಿಂದಲೂ ಆತನ ಹದ್ದುಮೀರಿದ ವರ್ತನೆಗಳಿಗೆ ಬಲಿಪಶುಗಳಾಗಿದ್ದ ಆತನ ಸಹವರ್ತಿಗಳ ಸಂಖ್ಯೆ ದೊಡ್ಡದೇ ಆಗಿತ್ತು. ಆತನ ತರಗತಿಗಿಂತ ಹಿರಿಯ ವಿಭಾಗದ ವಿದ್ಯಾರ್ಥಿಗಳಿಗೂ ಆತನೊಬ್ಬ ಭಯಂಕರ ಎನಿಸುವಷ್ಟರ ಮಟ್ಟಿಗೆ ಛಾಪು ಮೂಡಿಸಿದ್ದ.
        ನಾನು ಆ ಶಾಲೆಗೆ ಕರ್ತವ್ಯಕ್ಕೆ ಸೇರಿಕೊಂಡಾಗ ಆತ ನಾಲ್ಕನೇ ತರಗತಿಯೆಂಬ ಸಾಮ್ರಾಜ್ಯದ ಒಡೆಯನಾಗಿ ಮೆರೆದಾಡುವವನಂತೆ ಶಾಲೆಯಿಡೀ ಪ್ರಸಿದ್ಧಿಯಾಗಿದ್ದ. ಕಾರಣವಿಲ್ಲದೆ ಸಹವರ್ತಿಗಳ ಮೇಲೆ ಏರಿ ಹೋಗುವುದು, ಅವರ ಕೈ, ಕಾಲುಗಳನ್ನು ತಿರುಚುವುದು, ಕೆಳಕ್ಕೆ ಬೀಳಿಸಿ ಒದೆಯುವುದು ಹೀಗೆ ಇವೆಲ್ಲ ದೈಹಿಕ ಬಲದ ಆತನ ಉಪಟಳಗಳಾಗಿದ್ದರೆ ಇದಕ್ಕಿಂತಲೂ ಭಯಾನಕವೆನಿಸುತ್ತಿದ್ದುದು ಆತನ ಬಾಯಿಯಿಂದ ಬಳಕೆಯಾಗುತ್ತಿದ್ದ ಪದಗಳ ಶೈಲಿ. ವಯಸ್ಸಾದವರು ಬೈದಾಡಿಕೊಳ್ಳುವಾಗ ಬಳಸಿಕೊಳ್ಳುವ ಎಲ್ಲ ಋಣಾತ್ಮಕ ಪದಗಳು ಯಾವುದೇ ಭಿಡೆಯಿಲ್ಲದೆ ಆತನ ಬಾಯಿಯಿಂದ ಸಹಜವಾಗಿಯೇ ಪ್ರಯೋಗಿಸಲ್ಪಡುತ್ತಿದ್ದವು. ಆತನಿಂದ ಸಂತ್ರಸ್ತರಾದ ಸಹಪಾಠಿಗಳು ಆತನ ಬಗ್ಗೆ ದೂರು ಹೇಳಲು ತೊಡಗಿದಾಗ ಆತನು ಪ್ರಯೋಗಿಸಿದ ಪದಗಳನ್ನು ಕೇಳಲು ನಾವೂ ಮುಜುಗರ ಪಟ್ಟುಕೊಳ್ಳುವಂತಾಗುತ್ತಿತ್ತು. ಚಿದಾನಂದನ ಉಪಟಳವು ಮಕ್ಕಳ ವಿರಾಮದ ಅವಧಿಯಲ್ಲಿ ಮತ್ತು ಶಿಕ್ಷಕರ ಗೈರುಹಾಜರಿಯ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದವು. ಮುಖ್ಯಶಿಕ್ಷಕರಿಗೂ ಆತನೊಂದು ತಲೆನೋವಿನ ವಿದ್ಯಾರ್ಥಿಯಾಗಿಬಿಟ್ಟಿದ್ದ! ಬಹುಬಾರಿ ಆತನ ತಾಯಿಯನ್ನು ಶಾಲೆಗೆ ಕರೆಸಿ ಮಾತುಕತೆ ನಡೆಸಿದರೂ ಚಿದಾನಂದನ ಕತೆಯಲ್ಲಿ ಬದಲಾವಣೆಯೇ ಆಗಲಿಲ್ಲ! ಆತನ Observation ಎಷ್ಟಿತ್ತೆಂದರೆ ಶಾಲೆಯ ಖಾಯಂ ಶಿಕ್ಷಕರು ತರಗತಿ ನಡೆಸುವಾಗ ಸುಮ್ಮನಿರುತ್ತಿದ್ದವ ಕೆಲವೊಮ್ಮೆ ತರಬೇತಿಯ ಪ್ರಶಿಕ್ಷಣಾರ್ಥಿಗಳು ತರಗತಿ ನಡೆಸುವಾಗ ಎಲ್ಲ ಚೇಷ್ಟೆಗಳನ್ನು ಎಗ್ಗಿಲ್ಲದೆ ನಡೆಸುತ್ತಿದ್ದ. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಎರಡೆರಡು ಕಂಪ್ಲೇಂಟ್ ಗಳ ಆಧಾರದಲ್ಲಿ ಆತನಿಗೆ ಶಿಕ್ಷೆ, ದಂಡನೆಗಳು ಪ್ರಾಪ್ತಿಯಾಗುತ್ತಿದ್ದವು. ಆದರೆ ಯಾವುದೇ ನಮೂನೆಯ ದಂಡನೆ, ವಿಚಾರಣೆಗಳಿಗೆ ವಿಚಲಿತನಾಗದ ಮನಸ್ಥಿತಿಯ ಚಿದಾನಂದ ನನಗೊಂದು ಚಿದಂಬರ ರಹಸ್ಯವೇ ಆಗಿಹೋಗಿದ್ದ. ಆದರೆ ನನಗೆ ಆತನಿರುವ ತರಗತಿಗೆ ಯಾವುದೇ ಪಾಠ ಬೋಧನೆಗೆ ಹೋಗಲು ಅವಕಾಶವಿಲ್ಲದಿದ್ದುದರಿಂದ ನಾನು ಆತನ ದೂರು, ವಿಚಾರಣೆಗಳ ಸಂದರ್ಭದಲ್ಲಿ ಓರ್ವ ಪ್ರೇಕ್ಷಕನಾಗಿ ಮಾತ್ರ ಭಾಗವಹಿಸುವಂತಾಗಿತ್ತು. ಏಕೆಂದರೆ ಆ ದಿನಗಳಲ್ಲಿ ತರಗತಿ ಶಿಕ್ಷಕರು ಮಾತ್ರ ಆಯಾಯ ತರಗತಿಯ ಮಕ್ಕಳಿಗೆ ಜವಾಬ್ದಾರರು ಎನ್ನುವ ಅಲಿಖಿತ ಕ್ರಮವೊಂದು ನಮ್ಮ ಶಾಲೆಯಲ್ಲಿ ಜಾರಿಯಲ್ಲಿದ್ದುದರಿಂದ ಏಳನೇ ತರಗತಿವರೆಗೆ ನಾನು ಮೂರನೇ ಪಾರ್ಟಿಯಾಗಿ ಸುಮ್ಮನೆ ನೋಡುತ್ತಿದ್ದೆ.
       ಏಳನೇ ತರಗತಿಗೆ ಬಂದಾಗ ಆತ ದೈಹಿಕವಾಗಿಯೂ ದೃಢವಾಗಿ ಬೆಳೆದು ಆತನಿಂದಾಗುತ್ತಿದ್ದ ಉಪಟಳದ ಪರಿಣಾಮವೂ ಒಮ್ಮೊಮ್ಮೆ ಹೆಚ್ಚೇ ಆಗುತ್ತಿದ್ದವು. ಇವೆಲ್ಲದರ ನಡುವೆ ಒಂದು ಅತೀವ ಅಚ್ಚರಿಯ ಸಂಗತಿಯು ನನ್ನ ಗಮನಕ್ಕೆ ಬರಲಾರಂಭಿಸಿತು! ಆತನ ಅತಿರೇಕದ ವರ್ತನೆ ಹಾಗೂ ವಿಚಾರಣೆಯ ಸಂದರ್ಭಗಳಲ್ಲಿ ಶಿಕ್ಷಕರ ಮುಂದೆ Aggressive ಆಗಿಬಿಡುತ್ತಿದ್ದ ಚಿದಾನಂದ ಆಕಸ್ಮಾತ್ ನಾನು ಅಲ್ಲಿ ಕಂಡೊಡನೆ ತೀರಾ Cool ಆಗಿಬಿಡುತ್ತಿದ್ದ. ವಿದ್ಯಾರ್ಥಿಗಳ ನಡುವೆ ವಾದವಿವಾದಗಳಲ್ಲಿದ್ದ ಸಂದರ್ಭಗಳಲ್ಲಿಯೂ ನನ್ನ ಮುಖ ಕಂಡೊಡನೆಯೇ ತೀರಾ ತಣ್ಣಗಾಗಿಬಿಡುತ್ತಿದ್ದ. ನನಗೆ ಇದು ಇನ್ನೊಂದು ರೀತಿಯ ಭಯಕ್ಕೆ ಕಾರಣವಾಯಿತು. ಅರೆ! ಈತ ಯಾಕೆ ನನ್ನನ್ನು ನೋಡಿದೊಡನೆ ತಲೆತಗ್ಗಿಸಿ ಏನೂ ಆಗಿಲ್ಲವೆಂಬಂತೆ ಇದ್ದಾನೆ ಎಂಬ ಯೋಚನೆ ಕಾಡಲಾರಂಭಿಸಿತು. ಆತನ ಆ ತಣ್ಣಗಿನ ಭಾವದೊಳಗಿರುವ ಕ್ರೌರ್ಯ ಇನ್ನಾವುದೋ ರೂಪದಲ್ಲಿ ಸ್ಫೋಟಿಸಬಹುದೇ ಎಂಬ ಆತಂಕ ನನಗಾಗುತ್ತಿತ್ತು. ಈ ನಡುವೆ ಆತನನ್ನು ಏಳನೇ ತರಗತಿ ಮುಗಿಸಿದ ನಂತರ ಎಂಟನೇ ತರಗತಿಗೆ ಬೇರೆ ಶಾಲೆಗೆ ಕಳಿಸುವ ಪ್ರಯತ್ನಗಳು ಬಹಳ ಬೇಗನೇ ಪ್ರಾರಂಭಗೊಂಡಿದ್ದವು. 'ಆತ ಎಂಟನೇ ತರಗತಿಗೂ ಇಲ್ಲೇ ಉಳಿದರೆ ಶಾಲೆಯನ್ನು ಇಡ್ಲಿಕ್ಕಿಲ್ಲ' ಎನ್ನುವ ಅಭಿಪ್ರಾಯ ಶಾಲೆಯಿಡೀ ವ್ಯಾಪಿಸಿತ್ತು! ನನಗೂ ಕುತೂಹಲ. ಆತ ಎಂಟನೇ ತರಗತಿಗೆ ನಮ್ಮ ಶಾಲೆಯಲ್ಲಿಯೇ ಉಳಿದರೆ ಆತ ನನ್ನ ತರಗತಿಗೆ ಬರುತ್ತಾನೆ...!!! ಎಂಟನೇ 'ಬಿ ' ವಿಭಾಗಕ್ಕೆ ನಾನು ತರಗತಿ ಶಿಕ್ಷಕನಾಗಿದ್ದೆ..! ಯಾರೆಷ್ಟೇ ಹೇಳಿದರೂ ಚಿದಾನಂದ ಬೇರೆ ಶಾಲೆಗೆ ಹೋಗಲು ಒಪ್ಪಲೇ ಇಲ್ಲ. ಎಂಟನೆಗೆ ತಾನು ಇಲ್ಲೇ ಬರುವುದಾಗಿ ಘೋಷಿಸಿದ...! ಮುಂದಿನ ಒಂದು ವರ್ಷದ ಬಹು ಸವಾಲಿನ Caretaker ಆಗಿ ನನ್ನನ್ನು ನಾನು ಸಿದ್ಧಪಡಿಸಿಕೊಳ್ಳಬೇಕಿತ್ತು..! ರಜಾದಿನಗಳು ಕಳೆದು ಹೊಸ ಶೈಕ್ಷಣಿಕ ವರ್ಷದ ತರಗತಿಗಳು ಪ್ರಾರಂಭಗೊಂಡವು. ಎಂಟನೇ 'ಬಿ' ವಿಭಾಗದ ತರಗತಿಗೆ ಮಕ್ಕಳೆಲ್ಲ ಬಂದು ಸೇರಿದ ಮೊದಲನೇ ದಿನ. ಸಂಭ್ರಮ, ಉತ್ಸಾಹ, ಹೊಸತನಗಳು ಮೇಳೈಸಿದ್ದ ಕ್ಷಣಗಳವು...! ತರಗತಿಗೆ ಪ್ರವೇಶಿಸಿ ನನ್ನ ಯಾವತ್ತಿನ ಕ್ರಮದಂತೆ ವಿದ್ಯಾರ್ಥಿಗಳನ್ನು ಹೊಸತರಗತಿಗೆ ಸ್ವಾಗತಿಸಿದೆ. ವಿದ್ಯಾರ್ಥಿಗಳು ಎದ್ದುನಿಂತು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ನಾನು ಮಾತಾಡಬೇಕಿತ್ತು. "ಹೊಸ ತರಗತಿಗೆ ಬಂದಿದ್ದೀರಿ. ಇದು ಬಹಳ ಚಂದವಾದ ಕ್ಲಾಸ್ ರೂಮ್. ನಾನು ನಿಮ್ಮೆಲ್ಲರನ್ನೂ ಬಹಳವಾಗಿ ಪ್ರೀತಿಸ್ತೇನೆ. ನಿಮ್ಮೆಲ್ಲರನ್ನೂ ತುಂಬಾ ಗೌರವಿಸುತ್ತೇನೆ ಮತ್ತು ನಿಮ್ಮಿಂದಲೂ ಅದನ್ನು ನಿರೀಕ್ಷಿಸುತ್ತೇನೆ. 8 B ಎನ್ನುವುದು ಒಂದು ಟೀಮ್. ಇಲ್ಲಿ ಪ್ರತಿಯೊಬ್ಬರೂ ಒಬ್ಬರನ್ನೊಬ್ಬರು ಗೌರವಿಸಬೇಕು. ನಮ್ಮ ಎಲ್ಲ ಕೆಲಸಗಳೂ ಹೊಸತನದಿಂದಿರಬೇಕು. ಇಲ್ಲಿನ ಗೋಡೆಗಳನ್ನು ಇನ್ನಷ್ಟು ಚೆಂದ ಮಾಡಬೇಕು. ಕಳೆದ ವರ್ಷದವರು ಮಾಡಿದ ಚಿತ್ರಗಳನ್ನು ಅಳಿಸದೆ, ಅದಕ್ಕೆ ನೀವೊಂದಷ್ಟು ಸೇರಿಸಬೇಕು. ನಿಮ್ಮ ಒಳ್ಳೆಯ ನೆನಪುಗಳನ್ನು ನಾನು ಬರುವ ವರ್ಷದ ಮಕ್ಕಳ ಜೊತೆ ಹಂಚಿಕೊಳ್ಳಬೇಕು. ಇಲ್ಲಿನ ಅಕ್ವೇರಿಯಂನ ಜವಾಬ್ದಾರಿ ಇನ್ಮುಂದೆ ನಿಮ್ಮದು...." ಹೀಗೆ ದೃಢವಾಗಿ ನನ್ನ ಮಾತುಗಳು ಸಾಗಿದ್ದವು. ಮೂರನೇ ಬೆಂಚಿನ ಮಧ್ಯದಲ್ಲಿ ಕುಳಿತ್ತಿದ್ದ ಚಿದಾನಂದ ಕೇಳಿಸಿಕೊಳ್ಳುತ್ತಿದ್ದ. ಸ್ವಲ್ಪ ಹೊತ್ತಿನ ನಂತರ ಏನೋ ಬರೆಯುತ್ತಿದ್ದ ನನಗೆ "ಸರ್" ಎಂದು ಯಾರೋ ಕರೆದುದನ್ನು ಕೇಳಿ ತಲೆಯೆತ್ತಿದರೆ ಚಿದಾನಂದ! "ಏನು ಚಿದಾನಂದ?" ಅಂದೆ. "ಅದೂ, ಅಕ್ವೇರಿಯಂನ ಜವಾಬ್ದಾರಿ ನೀವು ನನಗೆ ಕೊಡ್ತೀರಾ...?" ಅಂತ ಕೇಳಿದ. ಹುಡುಗಿಯರು ಕಿಸಕ್ಕನೆ ನಕ್ಕರು. ಅವರಿಗೆ ಇವನ ಕೈಗೆ ಸಿಲುಕುವ ಮೀನುಗಳ ಪರಿಸ್ಥಿತಿ ನೆನಪಾಗಿ ನಗುಬಂತೋ ಏನೋ ಗೊತ್ತಿಲ್ಲ. "ಸರಿ, ನೀನೇ ಅದಕ್ಕೆ ಸೂಕ್ತವಾದ ಜನ. ಇದರಲ್ಲಿ ಬಹಳಷ್ಟು ಜವಾಬ್ದಾರಿ ಮತ್ತು ಕೆಲಸವಿದೆ. ಅದನ್ನು ಅರ್ಥಮಾಡಿಕೊಂಡು Maintain ಮಾಡ್ಬೇಕು" ಎಂದು ದೃಢವಾದ ಸ್ವರದಲ್ಲಿ ಹೇಳಿದೆ. ಅದೇನೋ ಗೊತ್ತಿಲ್ಲ ಚಿದಾನಂದ ಆ ಹೊತ್ತಿಗೆ ಶಿಲ್ಪವಾಗಿ ಕಡೆಯಲು ತಯಾರಾಗಿ ವಿನೀತಭಾವದಿಂದ ನಿಲ್ಲುವ ಶಿಲೆಯಂತೆ ಕಾಣುತ್ತಿದ್ದ. "ಚಿದಾನಂದ, ನನ್ನದೊಂದು Request ನಿನ್ನ ಬಳಿ ಇದೆ" ಅಂದೆ. "ಏನ್ಸಾರ್?" "ಈ ವರ್ಷ ನನ್ನ ಚಿದಾನಂದ ಯಾವುದೇ ಕಂಪ್ಲೇಂಟ್ ನಲ್ಲಿ ಸಿಲುಕಿ ಶಿಕ್ಷಕರ ಕೊಠಡಿಯಲ್ಲಿ ವಿಚಾರಣೆಗೆ ನಿಲ್ಲುವಂತಾಗಬಾರದು" ಎಂದೆ. ಮಾತಿರಲಿಲ್ಲ ಆತನಲ್ಲಿ. ಮುಂದೆ ನಮ್ಮ ಆ ವರ್ಷದ Classroom Contract ಗಳ ಕುರಿತಂತೆ ವಿದ್ಯಾರ್ಥಿಗಳ ಜೊತೆ ಚರ್ಚೆ ನಡೆಯಿತು. ನಿಧಾನಕ್ಕೆ ಚಿದಾನಂದನ ಕೌಟುಂಬಿಕ ಹಿನ್ನೆಲೆಯನ್ನು ಪರಿಶೀಲಿಸಲಾರಂಭಿಸಿದೆ. ಆತನೊಬ್ಬ Single Parent Child ಆಗಿದ್ದ. ತಾಯಿಯ ಅತಿಯಾದ ಮುದ್ದು, ತಂದೆಯ ಪ್ರೀತಿಯ ಕೊರತೆ ಆತನಲ್ಲಿ ವ್ಯಗ್ರತೆಯನ್ನು ತುಂಬಿಸಿತ್ತು. ತನ್ನ ಸಹಪಾಠಿಗಳ ಮೇಲೆ ಏರಿಹೋಗಿ ಅವರನ್ನು ತದಕಿ ನಂತರ ಶಿಕ್ಷಕರ ಕೈಯಿಂದ ವಿಚಾರಣೆ ನಡೆಸಿಕೊಂದು ದಂಡನೆ ಪಡೆದುಕೊಳ್ಳುವುದನ್ನು ಒಂದು ಅಭ್ಯಾಸವನ್ನಾಗಿ ಮಾಡಿಕೊಂಡಿದ್ದ!
     ತಂದೆ -ತಾಯಿಯರ ನಡುವಿನ ನಿತ್ಯದ ಜಗಳಕ್ಕೂ ಆತನ ಮನಸ್ಸು ಸಾಕ್ಷಿಯಾಗಿತ್ತು. ಬಹಳ ಎಚ್ಚರಿಕೆಯಿಂದ ಆತನನ್ನು ನಿರ್ವಹಿಸುವ ಅಗತ್ಯವಿತ್ತು. ಆಶ್ಚರ್ಯವೆಂಬಂತೆ ಆ ಇಡೀ ವರ್ಷ ಚಿದಾನಂದನ ಯಾವುದೇ ತೆರನಾದ Complaint ಗಳಿಲ್ಲದೆ ಓರ್ವ ಧನಾತ್ಮಕವಾಗಿ ತನ್ನನ್ನು ತಾನು ರೂಪಿಸಿಕೊಂಡ ವಿದ್ಯಾರ್ಥಿಯಾಗಿ ಬದಲಾಗಿದ್ದ. ಶಾಲೆಯ ಎಲ್ಲ ಶಿಕ್ಷಕರು ಹಾಗೂ ಸಹವರ್ತಿಗಳಿಗೆ ಪ್ರೀತಿಯ ಚಿದಾನಂದನಾಗಿ ಪರಿವರ್ತನೆಗೊಂಡಿದ್ದ. ಮನಶಾಸ್ತ್ರಜ್ಞ ಡಾ. ಮೀನಗುಂಡಿ ಸುಬ್ರಹ್ಮಣ್ಯಂರವರು ಪ್ರಸ್ತಾಪಿಸುವ Positive Stroke ಗಳ ನಿರೀಕ್ಷೆಯಲ್ಲಿ ಚಿದಾನಂದನಿದ್ದ. ಅದು ಸಹಜವಾಗಿ ದೊರೆಯದಿದ್ದಾಗ ಗಮನಸೆಳೆಯುವ ತಂತ್ರವನ್ನು ಅನುಸರಿಸಿ ವಿಚಾರಣೆ, ದಂಡನೆಗಳ ಮೂಲಕ ಪಡೆದುಕೊಳ್ಳುತ್ತಿದ್ದ. Every Child Is Unique ಎನ್ನುವ ಅಭಿಪ್ರಾಯವನ್ನು ನನ್ನಲ್ಲಿ ಚಿದಾನಂದನ ಪ್ರಕರಣವು ಗಟ್ಟಿಗೊಳಿಸಿತು ಎನ್ನುವುದರಲ್ಲಿ ಅನುಮಾನವಿಲ್ಲ.
.................................. ಪ್ರಶಾಂತ್ ಅನಂತಾಡಿ
ಆಂಗ್ಲ ಭಾಷಾ ಶಿಕ್ಷಕರು
ಸರಕಾರಿ ಪದವಿ ಪೂರ್ವ ಕಾಲೇಜು 
ಕಡಬ (ಪ್ರೌಢಶಾಲಾ ವಿಭಾಗ)
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 97416 69646
*******************************************



Ads on article

Advertise in articles 1

advertising articles 2

Advertise under the article