-->
ಜಗಲಿ ಕಟ್ಟೆ : ಸಂಚಿಕೆ - 21

ಜಗಲಿ ಕಟ್ಟೆ : ಸಂಚಿಕೆ - 21

ಜಗಲಿ ಕಟ್ಟೆ : ಸಂಚಿಕೆ - 21
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.

ಇದು ನಿಮ್ಮ ಮನೆಯ
ಮಕ್ಕಳ ಜಗಲಿ
www.makkalajagali.com
   
ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ

       ಚಿತ್ರಕಲಾ ಶಿಕ್ಷಣದಲ್ಲಿ ಒಂದು ಮಾತಿದೆ, "ಚಿತ್ರಕಲೆ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ."   ಈ ಮಾತು ಬಹುಶಃ ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸಬಹುದು. ವಿವಿಧ ಕ್ಷೇತ್ರಗಳಲ್ಲಿ ಅಭಿರುಚಿ, ಆಸಕ್ತಿ ಇರುವ ಅನೇಕ ಮಂದಿಯನ್ನು ಕಾಣುತ್ತೇವೆ. ಆದರೆ ಆಸಕ್ತಿ ಇರುವ ಪ್ರತಿಯೊಂದು ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಕಷ್ಟ ಸಾಧ್ಯ. ಅವುಗಳಲ್ಲಿ ಹೆಚ್ಚು ಇಷ್ಟವಾಗುವ ಅಥವಾ ಸಾಧಕರ ಪ್ರಭಾವದಿಂದಲೊ ಇನ್ನು ಕೆಲವು ಕಾರಣಗಳಿಂದ ನಾವು ನಿರ್ದಿಷ್ಟ ಕ್ಷೇತ್ರವನ್ನು ಆರಿಸಿಕೊಳ್ಳುತ್ತೇವೆ..

        ಒಂದು ಬಾರಿ ನನ್ನ ಆತ್ಮೀಯ ಹಿರಿಯರೊಬ್ಬರನ್ನು ಭೇಟಿಯಾಗಿದ್ದೆ. ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಆದ ಹೆಸರನ್ನು ಗಳಿಸಿಕೊಂಡವರು. ಅವರಿಗೆ ಕಲೆಯಲ್ಲಿ ಬಹಳ ಆಸಕ್ತಿ. ನಮ್ಮ ಅನೇಕ ಕಾರ್ಯಕ್ರಮಗಳಲ್ಲಿ ಪ್ರೋತ್ಸಾಹ ಕೊಡುತ್ತಿದ್ದಂತಹ ವ್ಯಕ್ತಿಯಾಗಿದ್ದರು. ಹಾಗೆ ಅವರ ಮನೆಯಲ್ಲಿ ಚಹಾ ಕುಡಿಯುತ್ತ ಕಾರ್ಯಕ್ರಮಗಳ ಸವಿನೆನಪುಗಳನ್ನು ಮೆಲುಕು ಹಾಕುತ್ತಿದ್ದೆವು. ಕಲೆಯ ವಿಚಾರವಾಗಿ ಮಾತನಾಡುತ್ತಾ ತನ್ನ ಮಗನ ಅಭಿರುಚಿಯ ಕುರಿತಾಗಿ ಅಭಿಮಾನದಿಂದ ಹೇಳತೊಡಗಿದರು.
       ಅವರ ಮಗ ಓದಿದ್ದು ಮಾನವ ಸಂಪನ್ಮೂಲ ಅಭಿವೃದ್ಧಿ ವಿಚಾರದಲ್ಲಿ. ಪದವಿಗಳಿಸಿ ಉತ್ತಮ ಉದ್ಯೋಗವೂ ದೊರಕಿತು. ಓದುತ್ತಿರುವಾಗಲೇ ಫೋಟೋಗ್ರಫಿ ಬಗ್ಗೆ ವಿಶೇಷ ಒಲವು. ಕಲಾತ್ಮಕವಾಗಿ ಫೋಟೋ ತೆಗೆಯುವ ಕೌಶಲ್ಯವನ್ನು ಬೆಳೆಸಿಕೊಂಡು ತನ್ನ ತಂದೆಯಲ್ಲಿ ಫೋಟೋಗ್ರಫಿಯ ಕುರಿತು ತುಂಬಾ ಸಲ ಹೇಳಿದ್ದಿದೆ. ಆದರೆ ತಂದೆ ಮಾತ್ರ ಫೋಟೋಗ್ರಫಿಯ ಬಗ್ಗೆ ಅನುಭವವಿಲ್ಲದೆ ಆ ಕ್ಷೇತ್ರವನ್ನು ನಿರಾಕರಿಸಿದ್ದರು. ಒಂದೊಳ್ಳೆಯ ಕ್ಯಾಮರಾ ವನ್ನು ತೆಗೆದುಕೊಡುವಂತೆ ಒತ್ತಾಯಿಸಿದಾಗಲೂ ಮಗನ ಬಾಲಿಶ ಆಸೆಗಳಿರಬಹುದೆಂದು ಹೆಚ್ಚು ಗಮನ ನೀಡಿರಲಿಲ್ಲ. ಮಗನ ಹಠ ಆಸಕ್ತಿ ತುಡಿತಗಳನ್ನು ಕೆಲವು ತಿಂಗಳು ಗಮನಿಸುತ್ತಾ ಬಂದರು.
      ಹೀಗೆ ಒಂದು ದಿನ ಫೋಟೋಗ್ರಫಿಯ ಬಗ್ಗೆ ವಿಶೇಷ ಒಲವಿರುವ ಆತ್ಮೀಯರೊಬ್ಬರು ಮನೆಗೆ ಬಂದರು. ಮಗನ ಬಗ್ಗೆ ಆತನ ಆಸಕ್ತಿಯ ಕುರಿತಾಗಿ ಮಾತನಾಡಿದರು. "ಒಂದೊಳ್ಳೆಯ ಉದ್ಯೋಗದಲ್ಲಿದ್ದರೂ ತನ್ನ ಮಗನಿಗೆ ಮಾತ್ರ ಫೋಟೋಗ್ರಫಿಯ ಬಗ್ಗೆ ವಿಶೇಷ ಒಲವು. ಫೋಟೋಗ್ರಫಿಯನ್ನು ನೆಚ್ಚಿಕೊಂಡು ಹೋದರೆ ಯಶಸ್ಸು ಸಿಗಬಹುದೇ..?" ಬಹಳ ಆತಂಕದಿಂದಲೇ ಕೇಳಿದರು.. ಮಗನನ್ನು ಜೊತೆಗೆ ಕುಳ್ಳಿರಿಸಿ, "ಏನಯ್ಯ.... ಎಂ ಎಚ್ ಆರ್ ಡಿ ವ್ಯಾಸಂಗವನ್ನು ಮಾಡಿ ನಿಮ್ಮ ಮಗ ಈಗ ಉತ್ತಮ ಸಂಪಾದನೆ ಮಾಡುತ್ತಿದ್ದಾನೆ ಎಂಬುದು ಗೊತ್ತು. ಆದರೆ ಆತನಿಗೆ ಆಸಕ್ತಿ ಇರುವುದು ಫೋಟೋಗ್ರಫಿಯಲ್ಲಿ. ಆತನ ಸೃಜನಶೀಲಶಕ್ತಿಗೆ ಬೆಂಬಲ ಕೊಡಬೇಕಾಗಿದೆ. ಈತ ಮನಸ್ಸು ಮಾಡಿದರೆ ಈಗ ಬರುವ ಸಂಪಾದನೆಗಿಂತ ನಾಲ್ಕು ಪಟ್ಟು ಹೆಚ್ಚು ಸಂಪಾದನೆ ಮಾಡಬಹುದು." ಎಂದಾಗ ಆಶ್ಚರ್ಯ ಚಕಿತರಾದರು.
      ತಂದೆಯ ಮುಖದಲ್ಲಿ ಬದಲಾವಣೆಯ ವಿನ್ಯಾಸ ಗೋಚರಿಸಿತು. ಮಗನ ಮುಖದಲ್ಲಿ ಮಂದಹಾಸ. ಏನೋ ಸಾಧಿಸಲು ಹೊರಟ ಮಗನಿಗೆ ಮೊದಲ ಯಶಸ್ಸು. ಅಂದೇ ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ಕ್ಯಾಮರ ಹೆಗಲೇರಿಸಿಕೊಂಡ. ರಾಜ್ಯ , ರಾಷ್ಟ್ರ,  ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡನು. ಇಂದು ದೇಶದ ಪ್ರತಿ ಮೂಲೆ ಮೂಲೆಗಳಿಂದ ಬರುವ ಕರೆಗಳಿಗೆ ಸ್ಪಂದಿಸುವ ಮೂಲಕ ಅತ್ಯಂತ ಬ್ಯುಸಿಯಾಗಿರುವ ಛಾಯಾಚಿತ್ರಗ್ರಾಹಕರಲ್ಲಿ ಒಬ್ಬರಾಗಿದ್ದಾರೆ ಎಂದರೆ ನಂಬಲೇ ಬೇಕು. ಇಂತಹ ಉದಾಹರಣೆಗಳು ಸಾಕಷ್ಟು ಇವೆ. ನೀವು ಕೂಡ ಈ ತರಹದ ಉದಾರಣೆಗಳನ್ನು ಗಮನಿಸಿರಬಹುದು.
     ಮಕ್ಕಳ ಆಸಕ್ತಿಗೆ ಪೂರಕ ಅವಕಾಶ ಒದಗಿಸುವ ಇಂತಹ ಪೋಷಕರು ನಿಜವಾಗಲೂ ಅಭಿನಂದನೆಗೆ ಅರ್ಹರು ಅಲ್ಲವೇ....?. ನಮಸ್ಕಾರ
      

ಕಳೆದ ಸಂಚಿಕೆಯ ಜಗಲಿಕಟ್ಟೆ - 20 ಅಂಕಣದಲ್ಲಿ  ಶ್ರೀರಾಮ ಮೂರ್ತಿ, ನಿವೃತ್ತ ವಿಜ್ಞಾನ ಶಿಕ್ಷಕರು..   ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....

     ಎಲ್ಲರಿಗೂ ನಮಸ್ಕಾರಗಳು. ಸಮಯ ಹಾಗೂ ಸಾಗರದಲೆಗಳು ಎಂದಿಗೂ ಯಾರಿಗೂ ಕಾಯಲಾರವು. ತಮ್ಮ ಪಾಲಿನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುವ, ನಿಷ್ಠೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ರೀತಿಯೇ ಅಮೋಘ.
         ಈ ನಿಟ್ಟಿನಲ್ಲಿ ನೋಡಿದರೆ, ನಮ್ಮ 'ಮಕ್ಕಳ ಜಗಲಿ'ಯ ಎಲ್ಲಾ ಅಂಕಣಗಳ ಲೇಖಕರು ಪ್ರತೀ ವಾರವೂ ಹೊಸ- ಹೊಸ ತರಹದ ಮಾಹಿತಿಗಳನ್ನು ಕಲೆ ಹಾಕಿ, ಅವುಗಳನ್ನು ಕೇವಲ ಮಕ್ಕಳಿಗಾಗಿ ಮಾತ್ರವಲ್ಲ, ಜ್ಞಾನದ ಹಸಿವಿರುವ ಪ್ರತಿಯೋರ್ವರಿಗೂ ಉಣಬಡಿಸುವ ರೀತಿ ನಿಜಕ್ಕೂ ಶ್ಲಾಘನೀಯ. ಸಕಾರಾತ್ಮಕವಾಗಿ ಜೀವನದ ಹಾದಿಹಿಡಿಯಲು ಬೇಕಾದ ಉತ್ತಮ ಮಾರ್ಗದರ್ಶನವನ್ನು ನೈಜ ಅಥವಾ ನೀತಿಕತೆಗಳ ಮುಖೇನ ಸಾದರ ಪಡಿಸುತ್ತಿರುವ ಜಗಲಿಯ ಎಲ್ಲಾ ಲೇಖಕರಿಗೂ ಮನದಾಳದ ಅಭಿನಂದನೆಗಳು. ತಮ್ಮ ಪಾಲಿನ ಕರ್ತವ್ಯವನ್ನು ಸೊಗಸಾಗಿ ನಿರ್ವಹಿಸುತಿರುವ ತಮ್ಮೆಲ್ಲರ ಲೇಖನಗಳನ್ನು ಮಾತ್ರವಲ್ಲ,  ಸಮಯಪ್ರಜ್ಞೆ, ಕರ್ತವ್ಯನಿಷ್ಠೆಯನ್ನೂ ನಾವು ಗೌರವಿಸಬೇಕು.
    ಸಮಯದ ಅಭಾವ ಕಾಡದೇ ಹೋದರೂ ಕೆಲವೊಮ್ಮೆ ಏರಿಳಿತಗೊಳ್ಳುವ ನಮ್ಮ ಜೀವನ ಎಲ್ಲವನ್ನೂ ಮರೆಸಿಬಿಡುತ್ತದೆ. ಆದರೆ ಮತ್ತೆ - ಮತ್ತೆ ಚಿಗುರಿ ಬೆಳೆಯಲು ಪ್ರೇರಣೆ ನೀಡುವ ಕೆಲವೊಂದು ಸಲಹೆ, ಸಂದೇಶ, ಹಿತ-ನುಡಿಗಳು ನನಗೂ ಜಗಲಿಯ ವೇದಿಕೆಯಿಂದ ದೊರಕಿದೆ ಎಂಬ ಹೆಮ್ಮೆಯಿದೆ.
   ಪ್ರತೀ ಸಾರಿ ನಾವು ನಿರಾಶರಾದಾಗ ಅಥವಾ ಕೆಲವೊಂದು ಸನ್ನಿವೇಶಗಳನ್ನು ಗಮನಿಸಿದಾಗ, 'ಕಾಲ ಸರಿಯಿಲ್ಲ ಕೆಟ್ಟೋಯ್ತು'. ಎಂದು ಮುನಿಸಿಕೊಳ್ಳುವುದು ಸಾಮಾನ್ಯ. ಆದರೆ ಕಾಲ ಬದಲಾದಂತೆ ಕಾಣಲು ನಾವುಗಳೇ ಕಾರಣ ಎಂಬ ನೈಜಾಂಶದ ಬಗ್ಗೆ ನಮಗೇ ಗೊಡವೆಯೇ ಇರುವುದಿಲ್ಲ. ರಮೇಶ್ ಬಾಯಾರ್ ಸರ್ ರವರ 'ಕಾಲ ಬದಲಾಗಿದೆಯೇ' ಎಂಬ ಲೇಖನ ಓದುತ್ತಾ ನನ್ನ ಬಾಲ್ಯಾವಸ್ಥೆಗೆ ಹೋಗಿ ಬಂದಂತಾಯಿತು.
  ಜ್ಞಾನ, ಅನುಭವ, ಅನುಭಾವಗಳು ಒಂದಕ್ಕೊಂದು ಸಮರ್ಪಕವಾಗಿ ಬೆಸೆದರೆ ಮಾತ್ರವೇ ಉತ್ತಮ ಜ್ಞಾನಿಯಾಗಿ ರೂಪಗೊಳ್ಳಬಹುದು ಎಂಬ ಜ್ಞಾನೇಶ್ ಸರ್ ರವರ ಲೇಖನವೂ ಸೊಗಸಾಗಿತ್ತು.
ಹಕ್ಕಿಕತೆಯಲ್ಲಿ ಈ ವಾರ ನಾವು ಕೇವಲ ಹಕ್ಕಿಯ ಬಗ್ಗೆ ಮಾತ್ರವಲ್ಲ, ನಮ್ಮ 'ಕುಡ್ಲ'ದ ಹಿನ್ನೆಲೆಯ ಬಗ್ಗೆಯೂ ಮಾಹಿತಿ ದೊರೆತಂತಾಯಿತು. ನಿಷ್ಪಾಪಿ ಸಸ್ಯಗಳು ಹಾಗೂ ಹಕ್ಕಿಕತೆಯ ಲೇಖಕರು ಪ್ರತೀವಾರವೂ ನಮಗೆಲ್ಲರಿಗೂ ಮಾಹಿತಿ ನೀಡುವ ಉತ್ಸಾಹದಿಂದ, ಸಸ್ಯಗಳ ಮತ್ತು ಹಕ್ಕಿಗಳ ಅನ್ವೇಷಣೆ ಮಾಡುತ್ತಾ ವಿಚಾರ ಕಲೆ ಹಾಕುವ ರೀತಿಯೇ ಅದ್ಭುತವಾದದ್ದು.
   ಬಹುಶ: ನಾನೂ ಇಂದು ಒಂದಿಷ್ಟು ವಾಕ್ಯಗಳನ್ನು ರಚಿಸಬಲ್ಲೆನೆಂದರೆ, ನನ್ನ ಬಾಲ್ಯದಲ್ಲಿ ನಾನು ಓದುತಿದ್ದ, ಬಾಲ ಮಂಗಳ, ಚಿತ್ರಕತೆ ಚಂಪಕಾ ತುಂತುರು, 'ಮಂಗಳಾ ' ದಂತಹ ಪತ್ರಿಕೆಗಳೂ ಕಾರಣವಾಗಿವೆ. 'ಮಂಗಳಾ ' ವಾರಪತ್ರಿಕೆಯಲ್ಲಿ ಪ್ರಸಾರವಾಗುತ್ತಿದ್ದ ಕೆಲವೊಂದು ಅಂಕಣಗಳು ಮೆದುಳಿಗೆ ಮೇವು ನೀಡುತ್ತಿದ್ದುದನ್ನು ನಾವೆಂದೂ ಮರೆಯುವಂತಿಲ್ಲ. ಅಂತಹ ಪತ್ರಿಕೆ ಇಂದು ವಿರಾಮದ ಸ್ಥಿತಿಗೆ ಜಾರುತ್ತಿದೆಯೆಂದರೆ ಓದುಗರ ಅಭಾವವೇ ಕಾರಣವಾಗಿದೆಯೇನೋ? ಎಲ್ಲವೂ ಅಂತರ್ಜಾಲದ ಲೀಲೆ!!! 
      ತಾರನಾಥ ಸರ್ ತಾವು ಈ ಹಿಂದಿನ ಲೇಖನಗಳಲ್ಲಿ ಪ್ರಸ್ತುತ ಪಡಿಸಿದ್ದ, ಶಾಲೆಯ ಗೋಡೆಯಲ್ಲಿ  ಬಳಸಿದ್ದ ವರ್ಲಿ ಕಲೆಯ ಚಿತ್ರಣದ ಮಾಹಿತಿಯನ್ನು ನನ್ನ ಮನೆ - ನೆರೆ - ಮನೆ ಮಕ್ಕಳಿಗೆ ತಿಳಿಸಿದ್ದೆ. ಅದರಲ್ಲಿ ಒಬ್ಬಳು ಇತ್ತೀಚೆಗೆ ಪಾಲ್ಗೊಂಡಿದ್ದ ಶಿಬಿರದಲ್ಲಿ ತಾವೂ ಭಾಗವಹಿಸಿ ವರ್ಲಿ ಕಲೆಯ ಬಗ್ಗೆ ನೀಡಿದ ಮಾಹಿತಿ, ಮಕ್ಕಳೂ ಕಲೆಯೊಳಗೇ ತಲ್ಲೀನರಾದ ರೀತಿಯನ್ನು ತಿಳಿಸಿರುತ್ತಾಳೆ. ತುಂಬಾನೇ ಖುಷಿಯಾಯಿತು. ವರ್ಲಿ ಕಲೆ ಇನ್ನಷ್ಟೂ ಬೆಳೆಯುವಂತಾಗಲಿ.
"ಮಕ್ಕಳ ಜಗಲಿಯ" ಎಲ್ಲಾ ಬಂಧುಗಳಿಗೂ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳೊಂದಿಗೆ .................

..................... ವಿದ್ಯಾಗಣೇಶ್ ಚಾಮೆತ್ತಮೂಲೆ
ಕೊಣಾಲು ಗ್ರಾಮ
ಕಡಬ ತಾಲೂಕು,  ದಕ್ಷಿಣ ಕನ್ನಡ ಜಿಲ್ಲೆ
Mob : +91 99453 11853
****************************************** 
        

   ರಮೇಶ್ ಎಂ. ಬಾಯರು ಅವರ ಲೇಖನ 'ಮನೆಗೆ ನೆಂಟರು ಬಂದರೆ...' ಸೊಗಸಾಗಿತ್ತು. ನೆಂಟರು ಬಂದರೆ ಕೂಡಲೆ ಹೊರಡುತ್ತಾರೆ.. ಮನೆಯವರೂ ಬ್ಯುಸಿ.. ಹಿಂದೆ ಹೊರಡಲಿ ಎಂದು ಹಪಹಪಿಸುತ್ತಾರೆಂಬ ಮಾತುಗಳು ವಾಸ್ತವತೆಗೆ  ಚುಚ್ಚುವಂತಿವೆ. ಕಾಲ ಬದಲಾಗಿಲ್ಲ.. ನಿಜಕ್ಕೂ ಮನಸ್ಸು ಬದಲಾಗಿದೆ. ಮಾನವ ಸಂಬಂಧ ಗಳು 'ಕಳೆ' ಕಳೆದುಕೊಂಡಿವೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ ,  ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

ನನ್ನ ಹೆಸರು ನೇತ್ರಾವತಿ. ಎಸ್. ನಾನು ಮೀನಕಳಿಯ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದೇನೆ. ನಂಗೆ ಎಂ. ಪಿ ಜ್ಞಾನೇಶ್ ಅವರ  ಸಂಚಿಕೆ 106. ಜ್ಞಾನ, ಅನುಭವಿ ,  ಅನುಭಾವಿ  ಇದರ ವ್ಯತ್ಯಾಸ ತಿಳಿಸಿದ ಅವರಿಗೆ ಧನ್ಯವಾದಗಳು. ಇದನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಜ್ಞಾನೇಶ ಸರ್ ಗೆ ನನ್ನ ಕವನ ...
   ನಗು ನಗುತ ತರಗತಿಗೆ ಬಂದರ
   ಪುಟ್ಟಿ ಪುಟ್ಟ ಕಂದ ಎಂದು ಕರೆದರ
   ನಮ್ಮ ಆಡು ಭಾಷೆಯಲ್ಲೇ
   ವಿದ್ಯಾದ ಬಗ್ಗೆ ತಿಳಿಸಿದರ,                          
   ಮಕ್ಕಳಿಗೆ ನೀಡುವರು
   ಆಹಾರದ ಸಹಕಾರ,                                      
   ನಮಗೆ ಇವರ ಮಾತು ಮಂದಾರ 
   ನಮಗೆ ಇವರು
   ಜ್ಞಾನೇಶ ಹೆಸರಿನ ಒಡೆಯರ
....................................... ನೇತ್ರಾವತಿ ಎಸ್
ಹತ್ತನೇ ತರಗತಿ
ಸರ್ಕಾರಿ ಪ್ರೌಢ ಶಾಲೆ ಮೀನಕಳಿಯ
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************

    ನಮಸ್ಕಾರಗಳು............ ನಾನು ಧನ್ಯಶ್ರೀ 7 ನೇ ತರಗತಿಯಲ್ಲಿ ಓದುತ್ತಿದ್ದೇನೆ. ಮಕ್ಕಳ ಜಗಲಿಯಲ್ಲಿ ಪ್ರಕಟವಾದ ಮಕ್ಕಳ ಕಥೆಗಳು ತುಂಬಾ ಚೆನ್ನಾಗಿತ್ತು. ಬರೆದ ಎಲ್ಲಾ ವಿದ್ಯಾರ್ಥಿಗಳಿಗೂ ಧನ್ಯವಾದಗಳು. ಆ ಸಂಚಿಕೆಯಲ್ಲಿ ನಾ ಮೆಚ್ಚಿದ ಕಥೆಗಳಾಗಿತ್ತು... ಮುಂದಿನ ಸಂಚಿಕೆ ಯನ್ನು ನೋಡಲು ನಾನು ತುಂಬಾ ಕಾತುರದಿಂದ ಇದ್ದೇನೆ.. ಧನ್ಯವಾದಗಳೊಂದಿಗೆ......

......................................................... ಧನ್ಯಶ್ರಿ
7ನೇ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ
ಹನುಮಾನ್ ನಗರ ಕಲ್ಲಡ್ಕ
ಬಂಟ್ವಾಳ ತಾಲೂಕು,  ದಕ್ಷಿಣ ಕನ್ನಡ ಜಿಲ್ಲೆ
******************************************

    ಪುಟ್ಟ ಕಥೆ ಮನ ಮುಟ್ಟುವಂತದ್ದು. ಯಾಕೂಬ್ ಸರ್  ರವರ ಬರವಣಿಗೆ ಮನ ಮಿಡಿಯುವಂತಿದೆ. ಇಂದು ನಾವು ಮಕ್ಕಳಿಗೆ ನೀಡಬೇಕಾದ ಅತ್ಯಂತ ಜರೂರಿನ ಕೆಲಸವೆಂದರೆ ಅದು ನೈತಿಕ ಶಿಕ್ಷಣ. ಆ ಕೆಲಸ ಲೇಖಕರಾದ ಯಾಕೂಬ್ ರವರು ಮಾಡಿದ್ದಾರೆ.
.................................. ರಘು, ಮುಖ್ಯಶಿಕ್ಷಕರು
ಶ್ರೀ ಸತ್ಯಸಾಯಿ ಲೋಕ ಸೇವಾ
ಪ್ರೌಢ ಶಾಲೆ, ಅಳಿಕೆ.
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


ಎಲ್ಲರಿಗೂ ನಮಸ್ಕಾರ,
     ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರು ಈ ವಾರದ ಜೀವನ ಸಂಭ್ರಮ ಸಂಚಿಕೆಯಲ್ಲಿ  ಜ್ಞಾನಿ, ಅನುಭವಿ ಮತ್ತು ಅನುಭಾವಿಗಳ ನಡುವಿನ ವ್ಯತ್ಯಾಸಗಳನ್ನು ವಿವರಣಾತ್ಮಕವಾಗಿ ಸುಂದರವಾಗಿ ವಿವರಿಸಿದ್ದಾರೆ.
     ಸಂಬಂಧಗಳೇ ದೂರವಾಗಿರುವ ಈಗಿನ ಕಾಲಘಟ್ಟದಲ್ಲಿ ಸಂಬಂಧಗಳನ್ನು ಉಳಿಸುವ, ಹಿಂದಿನ ಕಾಲದ ನೆನಪುಗಳನ್ನು ಮೆಲುಕು ಹಾಕಿ ನೆನಪಿಸುವ ಚೆಂದದ ಲೇಖನ ರಮೇಶ್ ಸರ್ ರವರಿಂದ.
     ಅರವಿಂದ ಕುಡ್ಲರವರ ಹಕ್ಕಿ ಕಥೆಯಲ್ಲಿ ಕಡಲ ಪಯಣದ ಜೊತೆಗೆ ಕಡಲಿನ ಸುಂದರ ಹಕ್ಕಿಯೊಂದರ ಪರಿಚಯ ಸೊಗಸಾಗಿತ್ತು.
     ಅದ್ಭುತ ಔಷಧಿಗಳ ಆಗರವಾಗಿರುವ ನನಗೆ ಅತ್ಯಂತ ಪ್ರೀತಿಯ ಸಸ್ಯ ಕೊಡಸಿಗೆಯ ಅಂದದ  ಪರಿಚಯ. ಈಗ ಕೆಲವು ಕಡೆಗಳಲ್ಲಿ ಅಥವಾ ಗುಡ್ಡಗಳಲ್ಲಿ ಅಲ್ಲಲ್ಲಿ ಮಾತ್ರ ಕಾಣಿಸಿಗುವ ಅಪರೂಪದ ಸಸ್ಯವನ್ನು ಉಳಿಸುವ ಕಾಳಜಿಯೊಂದಿಗೆ ವಿಜಯಾ ಮೇಡಂ ರವರ ನಿಷ್ಪಾಪಿ ಸಸ್ಯಗಳ ಸಂಚಿಕೆ ಚೆನ್ನಾಗಿತ್ತು.
    ಈ ವಾರದ ಮಕ್ಕಳ ಕಥೆಗಳಲ್ಲಿ ಎಲ್ಲ ಕಥೆಗಳೂ ಚೆನ್ನಾಗಿವೆ. ಮಕ್ಕಳೆಲ್ಲರಿಗೂ ಅಭಿನಂದನೆಗಳು. 
     ಯಾಕೂಬ್ ಸರ್ ರವರ ಹೃದಯದ ಮಾತು ಸಂಚಿಕೆಯಲ್ಲಿ ಪ್ರೀತಿಪಾತ್ರಳಾದ ಅಮ್ಮನನ್ನು ವದ್ಧಾಶ್ರಮಮದಲ್ಲಿ ಬಿಡಬೇಕಾಗುವ ಸನ್ನಿವೇಶ ಕೊನೆಗೆ ಆತನಿಗೆ ಸಿಕ್ಕಿದ ಅಮ್ಮನ ಪತ್ರ ಎಲ್ಲವೂ
ಮನ ಮಿಡಿಯುವಂತಿತ್ತು. ಪ್ರಸ್ತುತ ಕಾಲಘಟಕ್ಕೆ ಸಂಬಂಧಿಸಿದಂತೆ ಸಕಾಲಿಕ ಲೇಖನ.
     ಬಹು ದಿನಗಳ ನಂತರ ಗುರುರಾಜ ಸರ್ ರವರ ಲೇಖನ ಜಗಲಿಯಲ್ಲಿ. ಜೀವನದಲ್ಲಿ ಅವಕಾಶಗಳು ಬರುತ್ತಾ ಇರುತ್ತವೆ. ಅವಕಾಶಗಳನ್ನು ಸದುಪಯೋಗಿಸಿಕೊಂಡಾಗ ಯಶಸ್ವಿ ಜೀವನ ನಡೆಸಲು ಸಾಧ್ಯ ಎನ್ನುವುದನ್ನು ಮಂಜಮ್ಮನ ಕಥೆಯ ಮೂಲಕ ಸುಂದರವಾಗಿ ನಿರೂಪಿಸಿದ್ದಾರೆ.
     ಒಂದನೇ ತರಗತಿಯಿಂದ 7ನೇ ತರಗತಿಯವರೆಗೆ ತುಂಟನಾದ ಚಿದಾನಂದ 8ನೇ ತರಗತಿಯಲ್ಲಿ ಯಾವುದೇ ದೂರುಗಳಿಲ್ಲದೆ ಬದಲಾವಣೆಯಾದ ಬಗ್ಗೆ ಶಿಕ್ಷಕರ ಡೈರಿಯಲ್ಲಿ ಪ್ರಶಾಂತ್ ಸರ್ ತಮ್ಮ ಅನುಭವವನ್ನು ಸುಂದರವಾಗಿ ಹಂಚಿಕೊಂಡಿದ್ದಾರೆ.
     ವಾಣಿಯಕ್ಕನವರ ಪುಸ್ತಕ ಪರಿಚಯದಲ್ಲಿ 'ನನ್ನ ಕೆಲಸ ನಾನು ಮಾಡಬಲ್ಲೆ'- ಪುಸ್ತಕ ಪರಿಚಯ ಚೆನ್ನಾಗಿತ್ತು. ಪುಟ್ಟ ಮಗು ತನ್ನ ಕೆಲಸ ತಾನೇ ಮಾಡುವೆ ಸಂದೇಶವನ್ನು ಸಾರುವ ಈ ಪುಸ್ತಕ ಮಕ್ಕಳಿಗೆ ಬಲು ಉಪಯುಕ್ತವಾಗಬಹುದು.
     ಮಕ್ಕಳ ಚಿತ್ರಗಳ ಮೂರು ಸಂಚಿಕೆ ಗಳೂ ಚೆನ್ನಾಗಿ ಮೂಡಿ ಬಂದಿವೆ. ಅದರಲ್ಲೂ ಮೀಥ್ ಖಾರ್ವಿಯವರ ಚಿತ್ರಗಳು ಅದ್ಭುತವಾಗಿದ್ದುವು. ಚಿತ್ರ ಬಿಡಿಸಿದ ಮಕ್ಕಳಿಗೆ ಅಭಿನಂದನೆಗಳು. ದತ್ತು ಅರಕೇರಿಯವರ ಕವನಗಳು ಕೂಡ ಸೊಗಸಾಗಿವೆ. ರಮೇಶ ಉಪ್ಪುಂದರವರ ಪದಬಂಧ ಸಂಚಿಕೆ ಉತ್ತಮವಾಗಿತ್ತು.
     ಈ ವಾರದ ಜಗಲಿಯಲ್ಲಿ ಲೇಖನಗಳು ಕವನಗಳು ಹಾಗೂ ಚಿತ್ರಗಳ ಮೂಲಕ ಮನಸ್ಸಿಗೆ ಬಹಳಷ್ಟು ಮುದ ನೀಡಿದೆ. ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಇನ್ನೂ ಹೆಚ್ಚಿನ ಮಕ್ಕಳು ಜಗಲಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತಾಗಲಿ ಎಂಬ ಆಶಯದೊಂದಿಗೆ .
      ಮತ್ತೆ ಮುಂದಿನ ವಾರದಲ್ಲಿ ನಿಮ್ಮೊಂದಿಗೆ...

....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************

          ಓದುಗರ ಮಾತುಕತೆಯಲ್ಲಿ.....  ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ರಘು, ಮುಖ್ಯಶಿಕ್ಷಕರು ಶ್ರೀ ಸತ್ಯಸಾಯಿ ಲೋಕ ಸೇವಾ ಪ್ರೌಢ ಶಾಲೆ , ವಿದ್ಯಾಗಣೇಶ್ ಚಾಮೆತ್ತಮೂಲೆ , ವಿಜಯಾ ಬಿ ಶೆಟ್ಟಿ ಸಾಲೆತ್ತೂರು , ಧನ್ಯಶ್ರಿ 7ನೇ ತರಗತಿ  ಮತ್ತು ನೇತ್ರಾವತಿ ಎಸ್ ಹತ್ತನೇ ತರಗತಿ.... ಇವರಿಗೆ ಧನ್ಯವಾದಗಳು.
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ

................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************


Ads on article

Advertise in articles 1

advertising articles 2

Advertise under the article