-->
ಹಕ್ಕಿ ಕಥೆ : ಸಂಚಿಕೆ - 120

ಹಕ್ಕಿ ಕಥೆ : ಸಂಚಿಕೆ - 120

ಹಕ್ಕಿ ಕಥೆ : ಸಂಚಿಕೆ - 120
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

              
      ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಪಕ್ಷಿ ವೀಕ್ಷಣೆ ಎಂದರೆ ನೆಲದ ಮೇಲೆ, ಕೆರೆಯ ಬದಿಯಲ್ಲಿ ಸಮುದ್ರದ ಬದಿಯಲ್ಲಿ ಎಂದು ನಾನು ಬಹಳಕಾಲ ತಿಳಿದುಕೊಂಡಿದ್ದೆ. ಒಮ್ಮೆ ಕಾರ್ಕಳದ ಹಿರಿಯ ಪಕ್ಷಿವೀಕ್ಷಕ ಮಿತ್ರ ಶಿವಶಂಕರ್ ಕಾಲ್ ಮಾಡಿ ಮಾಸ್ಟ್ರೇ, ಪೆಲಾಜಿಕ್ ಉಂಟು ಬರ್ತೀರಾ ಅಂತ ಕೇಳಿದ್ರು. ಈ ವರೆಗೂ ಹಾಗೆಂದರೇನು ಎಂದೇ ಕೇಳದ ನಾನು ಹಾಗೇನು ಎಂದು ಕೇಳಿದ್ರೆ ನನ್ನನ್ನು ದಡ್ಡ ಎಂದು ಅಂದುಕೊಳ್ಳುತ್ತಾರೋ ಎಂಬ ಯೋಚನೆ ಒಮ್ಮೆ ಮನಸ್ಸಿಗೆ ಬಂತು. ಆದರೂ ಕಲಿಯಲು ವಯಸ್ಸಿಲ್ಲ, ತಿಳಿಯಲು ಕುತೂಹಲ ಇದ್ದರೆ ಸಾಕು, ಎಂಬ ಧೈರ್ಯದಿಂದ ಪೆಲಾಜಿಕ್ ಎಂದರೆ ಏನು ಎಂದು ಶಿವಶಂಕರ್ ಅವರನ್ನೇ ಮತ್ತೆ ಕೇಳಿದೆ. ಪೆಲಾಜಿಕ್ ಅಂದರೆ ಮತ್ತೇನಿಲ್ಲ ಮಾಷ್ಟ್ರೇ, ಬೋಟ್ ನಲ್ಲಿ ಸಮುದ್ರದ ಮೇಲೆ ಹೋಗುವುದು ಮತ್ತು ಅಲ್ಲಿ ಕಾಣುವ ಪಕ್ಷಿಗಳನ್ನು ನೋಡಿ, ಫೋಟೋ ತೆಗೆದು, ಅವುಗಳ ಗಣತಿ ಮಾಡುವುದು. ಜೊತೆಗೆ ನಸೀಬು ಚೆನ್ನಾಗಿದ್ದರೆ ಡಾಲ್ಫಿನ್, ಸಮುದ್ರದ ಆಮೆ, ಹಾವು ಮತ್ತು ಹಾರುವ ಮೀನುಗಳನ್ನೂ ನೋಡಬಹುದು ಎಂದಾಗ ಅದು ಹೇಗಿರಬಹುದು ಎಂಬ ಯೋಚನೆಯಲ್ಲೇ ನಾನು ಬಾಕಿಯಾಗಿ ಬಿಟ್ಟೆ. ಸ್ವಲ್ಪ ಹೊತ್ತು ನನ್ನ ಕಡೆಯಿಂದ ಯಾವುದೇ ಸ್ವರ ಹೊರಡದೇ ಇರುವುದನ್ನು ಗಮನಿಸಿ ಶಿವ ಬರ್ತೀರಲ್ಲ ಮಾಷ್ಟ್ರೇ ಎಂದು ಮತ್ತೊಮ್ಮೆ ಕೇಳಿದರು. ಏನಾದರೂ ಆಗಲಿ ಒಮ್ಮೆ ಹೋಗಿ ಬರೋಣ ಎಂದು ನಿರ್ಧರಿಸಿ ಬರ್ತೇನೆ ಎಂದುಬಿಟ್ಟೆ. 
      ಉಡುಪಿಯ ಬಳಿ ಮಲ್ಪೆಯಿಂದ ಸ್ವಲ್ಪ ದೂರದಲ್ಲಿ ಸೈಂಟ್ ಮೇರೀಸ್ ದ್ವೀಪಕ್ಕೆ ಹೋಗಿ ತಿಳಿದಿದ್ದ ನನಗೆ ನಾವೂ ಸಮುದ್ರದ ಮೇಲೆ ನಾವು ಯಾವುದೋ ದ್ವೀಪ ನೋಡಲು ಹೋಗಲಿದ್ದೇವೆ ಎಂದುಕೊಂಡಿದ್ದೆ. ಆದರೆ ಮಂಗಳೂರು ಕಡಲ ಕಿನಾರೆಯಿಂದ ಸಮುದ್ರದಲ್ಲಿ ಬಹಳ ದೂರದವರೆಗೂ ಅಂತಹಾ ಯಾವುದೇ ದ್ವೀಪಗಳು ಇರುವುದು ನನಗಂತೂ ತಿಳಿದಿರಲಿಲ್ಲ. ಆದರೂ ಸಮುದ್ರದಲ್ಲಿ ಒಮ್ಮೆಯೂ ಪ್ರಯಾಣ ಮಾಡದ ನನಗೆ ಅದು ಹೇಗೆ ತಿಳಿದಿರಬೇಕು ಎಂದುಕೊಂಡು ಸುಮ್ಮನಾದೆ. ಆಗೆಲ್ಲಾ ಮನಸ್ಸಿನಲ್ಲೊಂದು ಕಲ್ಪನೆ ಬರುತ್ತಿತ್ತು. ನಾವು ಸಮುದ್ರದ ಮೇಲೆ ಹೋಗುವಾಗ ಅಲ್ಲಿ ಯಾವುದೋ ಪುಟ್ಟ ದ್ವೀಪ ಅಥವಾ ಬಂಡೆಕಲ್ಲು ಸಿಗುತ್ತದೆ. ಆ ಬಂಡೆಕಲ್ಲಿನಲ್ಲಿ ನೂರಾರು ಹಕ್ಕಿಗಳು ಕುಳಿತಿರುತ್ತವೆ. ನಾವು ಅವುಗಳಿಂದ ಸ್ವಲ್ಪ ದೂರದಲ್ಲೇ ನಮ್ಮ ಬೋಟ್ ನಿಲ್ಲಿಸಿ ಅವುಗಳ ಫೋಟೋ ತೆಗೆಯಬಹುದು ಎಂದೆಲ್ಲ ಕನಸುಕಾಣುತ್ತಿದ್ದೆ. 
     ಅಂತೂ ನಾವು ಕಡಲಿಗೆ ಪಕ್ಷಿಗಳನ್ನು ನೋಡಲು ಹೋಗುವ ದಿನ ಬಂದೇ ಬಿಟ್ಟಿತು. ಎಲ್ಲರೂ ಬೆಳಗ್ಗೆ ಲಘು ಉಪಾಹಾರ ಸೇವಿಸಿ ವಾಂತಿ ಮತ್ತು ತಲೆನೋವಿನಿಂದ ಪಾರಾಗಲು ಟ್ಯಾಬ್ಲೆಟ್ ತೆಗೆದುಕೊಂಡೆವು. ಕಡಲಿನ ಮೇಲಿನ ಪ್ರಯಾಣ ನಮ್ಮೂರಿನ ನುಣುಪಾದ ರಸ್ತೆಗಳ ಮೇಲೆ ಹೋದಂತಲ್ಲ. ಕಡಲು ಸ್ವಲ್ಪ ಪ್ರಕ್ಷುಬ್ಧವಾಗಿದ್ದರೂ ನಾವು ಹೋಗಲಿರುವ ಪುಟ್ಟ ಹಡಗು ಕುಲುಕಿದಂತಾಗಿ ಹೊಟ್ಟೆಯಲ್ಲಿದ್ದುದೆಲ್ಲಾ ಬಾಯಿಗೆ ಬರುವ ಸಾದ್ಯತೆ ಇತ್ತು. ಇದನ್ನೇ ಸೀ ಸಿಕ್ ನೆಸ್ ಎಂದು ಇಂಗ್ಲೀಷ್ ನಲ್ಲಿ ಕರೆಯುತ್ತಾರೆ. ಹೀಗೆ ಸುಮಾರು ಹದಿನೈದು ಮಂದಿ ಬೇಕಾದ ಎಲ್ಲ ತಯಾರಿಗಳನ್ನು ಮಾಡಿಕೊಂಡು ದಿನಕ್ಕೆ ಬೇಕಾದ ತಿಂಡಿ, ಊಟ, ಪಾನೀಯ, ಕುಡಿಯುವ ನೀರು ಮತ್ತು ಹಣ್ಣುಗಳನ್ನು ಬೋಟ್ ನಲ್ಲಿ ಇರಿಸಿಕೊಂಡು ಬೆಳಗ್ಗೆ 7 ಗಂಟೆಗೆ ಮಂಗಳೂರಿನ ಹಳೆಬಂದರಿನಿಂದ ಸಮುದ್ರದತ್ತ ಹೊರಟೆವು. ಮಂಗಳೂರಿನ ಈ ಬಂದರು ಬಹಳ ವಿಶಿಷ್ಟವಾದದ್ದು. ದಕ್ಷಿಣಕನ್ನಡ ಜಿಲ್ಲೆಯ ಜೀವನಾಡಿಯಾಗಿ ಹರಿಯುವ ನೇತ್ರಾವತಿ ಮತ್ತು ಪಲ್ಗುಣಿ ಎಂಬ ಎರಡು ನದಿಗಳು ಪರಸ್ಪರ ಸಂಗಮವಾಗುವುದು ಇದೇ ಹಳೆಬಂದರು ಪ್ರದೇಶದಲ್ಲಿ. ಈ ಎರಡು ನದಿಗಳು ಪರಸ್ಪರ ಒಂದನ್ನೊಂದು ಸೇರುತ್ತಲೇ ಜೊತೆಗೆ ಸಮುದ್ರವನ್ನೂ ಸೇರುತ್ತವೆ. ನದಿ ಸಮುದ್ರವನ್ನು ಸೇರುವ ಇಂತಹ ಜಾಗಗಳನ್ನು ಅಳಿವೆಬಾಗಿಲು ಎಂದು ಹೇಳುತ್ತಾರೆ. ಭಾರತದ ಪಶ್ಚಿಮ ಕರಾವಳಿಯಲ್ಲಿ ಇಂತಹ ಎರಡು ನದಿಗಳು ಪರಸ್ಪರ ಸೇರುವ ಮತ್ತು ಸಮುದ್ರವನ್ನೂ ಸೇರುವ ಅಪರೂಪದ ಸ್ಥಳ ನಮ್ಮ ಕುಡ್ಲ. ಎರಡು ನದಿಗಳು ಸೇರುವ ʼಕೂಡಲʼ ಎಂಬ ಪದ ಬದಲಾಗುತ್ತಾ ಕುಡಾಲ ನಂತರ ಕುಡ್ಲ ಎಂಬ ಪದ ಆಯ್ತು ಎಂದು ತಿಳಿದವರು ಹೇಳುತ್ತಾರೆ. ನನ್ನೂರು ಕುಡ್ಲಕ್ಕೆ ಈ ಹೆಸರು ಬರಲು ಕಾರಣವಾದ ಜಾಗವನ್ನು ನೋಡಿದ್ದು ಮರೆಯಲಾರದ ಅನುಭವ. 
ಹೀಗೆ ನದಿಗಳು ಸಮುದ್ರ ಸೇರುವ ಜಾಗದಲ್ಲಿ ನೀರಿನ ರಭಸದಿಂದಾಗಿ ನಾವು ಪ್ರಯಾಣಿಸುತ್ತಿದ್ದ ದೋಣಿ ಒಂದಿಷ್ಟು ಅಲ್ಲೋಲ ಕಲ್ಲೋಲ ಆದಾಗ ಬೋಟ್ ನ ಚಾಲಕ ಇದೆಲ್ಲ ಮಾಮೂಲು ಏನಾಗುವುದಿಲ್ಲ ಎಂದು ಸಮಾಧಾನ ಹೇಳಿದ. ಒಂದಿಷ್ಟು ಸಮುದ್ರದೊಳಗೆ ಹೋಗುತ್ತಲೇ ಸಮುದ್ರ ಶಾಂತವಾಗತೊಡಗಿತು. ಒಂದು ಕಡೆ ಬಿಳೀ ಥರ್ಮಕೋಲ್ ತುಂಡೊಂದು ತೇಲುತ್ತಿತ್ತು. ಅದು ಕಂಡದ್ದೇ ಎಲ್ಲರ ಬೈನಾಕುಲರ್ ಮತ್ತು ಕ್ಯಾಮರಾಗಳು ಆ ಕಡೆ ತಿರುಗಿದವು. ನಮಗೆಲ್ಲ ಆಶ್ಚರ್ಯ ಎಂಬಂತೆ ಹಕ್ಕಿಯೊಂದು ಕಡಲಿನ ಅಲೆಗಳ ಏರಿಳಿತವನ್ನು ಲೆಕ್ಕಿಸದೆ ಹಾಯಾಗಿ ಅದರ ಮೇಲೆ ಕುಳಿತುಕೊಂಡಿತ್ತು. ಆ ಹಕ್ಕಿಯ
ಕನ್ನಡ ಹೆಸರು: ಕಂದುರೆಕ್ಕೆಯ ರೀವ
ಇಂಗ್ಲೀಷ್ ಹೆಸರು: Bridled Tern
ವೈಜ್ಷಾನಿಕ ಹೆಸರು: Sterna anaethetus
ಚಿತ್ರ ಕೃಪೆ: ಕ್ಲೀಮೆಂಟ್ ಫ್ರಾನ್ಸಿಸ್
ಕಡಲಿನಲ್ಲಿ ಕಂಡ ಇನ್ನಷ್ಟು ಹಕ್ಕಿಗಳ ಕಥೆಯೊಂದಿಗೆ ಮುಂದಿನವಾರ ಮತ್ತೆ ಸಿಗ್ತೇನೆ. ಬಾಯ್
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************



Ads on article

Advertise in articles 1

advertising articles 2

Advertise under the article