-->
ಹಕ್ಕಿ ಕಥೆ : ಸಂಚಿಕೆ - 119

ಹಕ್ಕಿ ಕಥೆ : ಸಂಚಿಕೆ - 119

ಹಕ್ಕಿ ಕಥೆ : ಸಂಚಿಕೆ - 119
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

              
     ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಒಮ್ಮೆ ಗೆಳೆಯ ರಂಗನಾಥರ ಊರಾದ ಹಗರಿಬೊಮ್ಮನಹಳ್ಳಿಗೆ ಹೋಗಿದ್ದೆ. ಅಲ್ಲೇ ಸಮೀಪದಲ್ಲಿ ತುಂಗಭದ್ರಾ ನದಿಯ ಹಿನ್ನೀರಿನ ಬಳಿ ಅಂಕಸಮುದ್ರ ಎಂಬ ಸಂರಕ್ಷಿತ ಪ್ರದೇಶ ಇದೆ. ನೀರನ್ನೇ ಆಹಾರಕ್ಕಾಗಿ ಆಶ್ರಯಿಸಿ ಬದುಕುವ ಹಲವಾರು ಹಕ್ಕಿಗಳು ಅಲ್ಲಿ ಬಂದು ಆಶ್ರಯ ಪಡೆಯುತ್ತವೆ ಮತ್ತು ಸಂತಾನಾಭಿವೃದ್ಧಿ ಮಾಡುತ್ತವೆ. ಜಾಲಿ ಮುಳ್ಳು ಮತ್ತು ಇತರೆ ಜಾತಿಯ ಮರಗಳ ಮೇಲೆ ಹಕ್ಕಿಗಳು ಗೂಡುಮಾಡಿಕೊಂಡು ಬದುಕಿದ್ದವು. ಪಕ್ಕದಲ್ಲೇ ರೈತರ ಜಮೀನುಗಳು ಇದ್ದವು. ಅಲ್ಲಿ ದಾಳಿಂಬೆ ಕೃಷಿ ಹೇರಳವಾಗಿ ನಡೆದಿತ್ತು. ನಾವು ಹೋದ ದಿನ ಅಂಕಸಮುದ್ರ ಪಕ್ಷಿಹಬ್ಬ ನಡೆದಿತ್ತು. ಬೆಳಗ್ಗಿನ ಉದ್ಘಾಟನಾ ನಮಾರಂಭ ಮುಗಿದ ನಂತರ ನಮ್ಮನ್ನು ಗುಂಪುಗಳನ್ನಾಗಿ ವಿಂಗಡಿಸಿ ಬೇರೆಬೇರೆ ಪ್ರದೇಶಗಳಿಗೆ ಪಕ್ಷಿ ವೀಕ್ಷಣೆಗಾಗಿ ಕಳುಹಿಸಿದರು. 
ಅಲ್ಲೊಂದು ತೆರೆದ ನೀರಿನ ಪ್ರದೇಶ ಇತ್ತು. ಆ ಪ್ರದೇಶದಲ್ಲಿ ಸುಮಾರು ಎರಡು ಅಡಿ ಆಳ ನೀರು ನಿಂತಿತ್ತು. ಸ್ವಲ್ಪ ಕೆಸರೂ ಇತ್ತು. ಅಲ್ಲಿ ಒಂದು ಉದ್ದಕತ್ತಿನ ಬೂದು ಬಣ್ಣದ ಹಕ್ಕಿ ನಿಂತಿರುವುದು ತಕ್ಷಣ ನಮ್ಮ ಗಮನಕ್ಕೇ ಬರಲಿಲ್ಲ. ಅದು ನಿಧಾನವಾಗಿ ಕೆಸರಿನಲ್ಲಿ ಕಾಲು ಎತ್ತಿ ಮುಂದೆ ಚಲಿಸಲು ಪ್ರಾರಂಭ ಮಾಡಿದಾಗಲೇ ನಮ್ಮ ಗಮನಕ್ಕೆ ಬಂದದ್ದು. ಕೆಸರಿನಲ್ಲಿ ನಡೆಯುತ್ತಿದ್ದರೂ ಅದರ ದೇಹಕ್ಕೆ ನೀರಾಗಲೀ ಕೆಸರಾಗಲೀ ಅಂಟುತ್ತಿರಲಿಲ್ಲ. ಕಾರಣ ಅದರ ಕಾಲುಗಳು ಅಷ್ಟೊಂದು ಉದ್ದವಾಗಿದ್ದವು. ಕಾಲುಗಳಂತೆಯೇ ಅದರ ಕುತ್ತಿಗೆಯೂ ಉದ್ದವಾಗಿತ್ತು. ಚೂಪಾದ ಬಾಣದಂತಹ ಕೊಕ್ಕು ತಲೆಯ ಮೇಲೊಂದು ಜುಟ್ಟು ಎದ್ದುಕಾಣುತ್ತಿತ್ತು. ದೇಹ ರೆಕ್ಕೆಗಳು ಬೂದು ಬಣ್ಣದವುಗಳಾಗಿದ್ದು ರೆಕ್ಕೆ ಮತ್ತು ಕತ್ತಿನಲ್ಲಿ ವಿಶಿಷ್ಟ ಬಗೆಯ ವಿನ್ಯಾಸ ಅವುಗಳನ್ನು ಸುಂದರವಾಗಿ ಕಾಣುವಂತೆ ಮಾಡುತ್ತಿದ್ದವು. ಅದರ ಬೂದು ಬಣ್ಣ ಬಿಸಿಲಿನ ಝಳ ಎದುರಿಸಲು ಸಹಕಾರಿಯಾಗುವಂತಿತ್ತು.
     ಏನಾದರೂ ಅಪಾಯ ಎದುರಾದಾಗ ಜೋರಾಗಿ ಕೂಗುತ್ತಾ ಅಲ್ಲಿಂದ ಹಾರಿ ಹೋಗಿ ಬೇರೆ ಕಡೆಯಲ್ಲಿ ಕುಳಿತುಕೊಳ್ಳುತ್ತದೆ. ಹಾರುವಾಗ ಅದರ ಕುತ್ತಿಗೆ ಇಂಗ್ಲೀಷ್ ಭಾಷೆಯ ಎಸ್ ಅಕ್ಷರದಂತೆ ಮಡಚಿಕೊಂಡಿರುತ್ತದೆ. ಹಾರುವಾಗ ಮಾತ್ರ ಅವುಗಳ ರೆಕ್ಕೆಯ ತುದಿಯ ಕಪ್ಪು ಬಣ್ಣ ಎದ್ದು ಕಾಣುತ್ತದೆ. ಈ ಹಕ್ಕಿ ಭಾರತದ ಹೆಚ್ಚಿನ ಭಾಗಗಳಲ್ಲಿ ಕಾಣಸಿಗುತ್ತದೆ ಆದರೆ ಕೆಲವೆಡೆ ಬೇಸಗೆಯಲ್ಲಿ ಕೆಲವೆಡೆ ಚಳಿಗಾಲದಲ್ಲಿ ವಾಸಮಾಡುತ್ತೆ. ಕೆರೆ, ಸರೋವರ, ನದಿಯ ಹಿನ್ನೀರು ಪ್ರದೇಶ, ಮಾತ್ರವಲ್ಲ ಸಮುದ್ರತೀರದ ಮ್ಯಾಂಗ್ರೋವ್ ಪ್ರದೇಶದಲ್ಲೂ ಈ ಹಕ್ಕಿ ಕಾಣಸಿಗುತ್ತೆ. ಪಶ್ಚಿಮ ಘಟ್ಟದ ದಟ್ಟ ಕಾಡಿನ ನಡುವೆ ಹರಿಯುವ ನದಿಗಳ ದಡದಲ್ಲಿಯೂ ಈ ಹಕ್ಕಿ ಚಳಿಗಾಲದಲ್ಲಿ ಕಾಣಸಿಗುತ್ತದೆ. ಎತ್ತರದ ಮರದಲ್ಲಿ ಇತರೆ ಕೊಕ್ಕರೆ ಮತ್ತು ಬಕಪಕ್ಷಿಗಳ ಜೊತೆ ಮರದ ಕಡ್ಡಿಗಳನ್ನು ಜೋಡಿಸಿ ಅಟ್ಟಳಿಗೆಯಂತಹ ಗೂಡು ಮಾಡಿ, ಅದರ ಮೇಲೆ ಹುಲ್ಲು ಹಾಸಿ ಮೊಟ್ಟೆ ಇಟ್ಟು ಕಾವು ಕೊಟ್ಟು ಮರಿಮಾಡುತ್ತವೆ. ಜಲವಾಸಿಗಳಾದ ಮೀನು, ಕಪ್ಪೆ, ಏಡಿ, ಮೃದ್ವಂಗಿಗಳು ಇದರ ಮುಖ್ಯ ಆಹಾರ. ಅಕ್ಟೋಬರ್ ರಜೆಯಲ್ಲಿ ಎಲ್ಲಾದರೂ ಪ್ರವಾಸಕ್ಕೆ ಹೋದಾಗ ನೀರಿನ ಆವಾಸಗಳ ಸಮೀಪ ಈ ಹಕ್ಕಿ ನಿಮಗೆ ಕಾಣಸಿಗಬಹುದು. 
ಕನ್ನಡ ಹೆಸರು: ಬೂದು ಬಕ
ಇಂಗ್ಲೀಷ್ ಹೆಸರು: Grey Heron 
ವೈಜ್ಞಾನಿಕ ಹೆಸರು: Ardea cinerea
ಚಿತ್ರ: ಅರವಿಂದ ಕುಡ್ಲ
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************


Ads on article

Advertise in articles 1

advertising articles 2

Advertise under the article