-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 18

ನಿಷ್ಪಾಪಿ ಸಸ್ಯಗಳು : ಸಂಚಿಕೆ - 18

ನಿಷ್ಪಾಪಿ ಸಸ್ಯಗಳು : ಸಂಚಿಕೆ - 18
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

        
ಪ್ರೀತಿಯ ಮಕ್ಕಳೇ, ಹೇಗಿದ್ದೀರಿ....?
   ಒಂದಿಷ್ಟು ಓದಿನ ಬಳಿಕ ಮಧ್ಯಾವಧಿ ರಜೆಯ ನಿರೀಕ್ಷೆಯಲ್ಲಿದ್ದೀರಿ... ಓದಿಗೊಂದಿಷ್ಟು ವಿರಾಮ ನೀಡಿ ಇತರ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲು ಇದು ಸಕಾಲ.
        ಈ ರಜೆಯಲ್ಲಿ ನೀವು ನಿಮ್ಮ ಹಿರಿಯರ ಮೂಲಕ ಕೆಲವಾದರೂ ಸಸ್ಯಗಳ ಪರಿಚಯವನ್ನು ಮಾಡಿಕೊಳ್ಳಲು ಪ್ರಯತ್ನಿಸುತ್ತೀರಲ್ವಾ?
      ಈ ಬಾರಿ ನಿಮಗೆ ನಾನೊಂದು ವಿಶೇಷವಾದ ಗಿಡದ ಪರಿಚಯ ಮಾಡಿಕೊಡುತ್ತಿದ್ದೇನೆ. ಅದರ ಹೆಸರು ತುಳು ಭಾಷೆಯಲ್ಲಿ ಬಂದನಾರು. ಕನ್ನಡದಲ್ಲಿ ಅಕ್ಷತೆ ಬಳ್ಳಿ, ಬಿಸಿಲ ಬಳ್ಳಿ ಎಂದೂ ಕರೆಯುತ್ತಾರೆ.
    ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎಂಬ ಮಾತನ್ನು ನೀವು ಕೇಳಿರಬೇಕಲ್ಲ. ಹೌದು ಮಕ್ಕಳೇ, ತಾಯಿಗಿಂತ ಬಂಧುವಿಲ್ಲ ನಿಜ. ಮಗುವಿಗೆ ಹುಟ್ಟಿದ ಕ್ಷಣದಿಂದ ತಾಯಿ ಎದೆಹಾಲು ನೀಡಿ ಕಾಪಾಡುತ್ತಾಳೆ. ಆ ಹಾಲು ಮಗುವಿನ ಹೊಟ್ಟೆ ತುಂಬುವುದು ಮಾತ್ರವಲ್ಲದೆ‌ ಮಗುವಿನ ಬೆಳವಣಿಗೆ, ರೋಗ ನಿರೋಧಕ ಶಕ್ತಿಗೆ ಅಮೃತವೇ ಆಗಿರುತ್ತದೆ. ಆದರೆ ಕೆಲವೊಮ್ಮೆ ಬೇರೆ ಬೇರೆ ಕಾರಣಗಳಿಂದಾಗಿ ಮಗುವಿಗೆ ತಾಯಿಹಾಲು ಸಿಗದೆಯೂ ಇರಬಹುದು. ಆಗ ಆ ಪುಟ್ಟ ಶಿಶುವನ್ನು ಸಾಕುವುದು ಒಂದು ಸವಾಲಿನ ಕೆಲಸವಾಗುತ್ತದೆ. ಮಗುವಿನ ಮೃದು ಅವಯವಗಳಿಗೆ ಹಾನಿಯಾಗದ ರೀತಿ ಕಾಪಾಡಲು ಹರಸಾಹಸ ಪಡುವವರ ನೆರವಿಗೆ ಬರುವುದೇ ಈ ಬಂದನಾರು. ಮಗುವಿನ ಬೆಳವಣಿಗೆಯ ಪ್ರತಿಹಂತದಲ್ಲೂ ಅಗತ್ಯ ಪೋಷಕಾಂಶಗಳ ಕೊರತೆಯಾಗದಂತೆ ಪ್ರಕೃತಿಯೇ ಒದಗಿಸಿರುವ ಪರ್ಯಾಯ ಶಕ್ತಿ ಈ ಬಂದನಾರು.
     ವೈಜ್ಞಾನಿಕವಾಗಿ Briedelia Scandens ಎಂದು ಕರೆಯಲ್ಪಡುವ ಈ ಸಸ್ಯ Euphorbiaceae ಕುಟುಂಬಕ್ಕೆ ಸೇರಿದೆ. ತಾಯಿಯ ಎದೆ ಹಾಲು ಸಾಕಾಗದಿದ್ದಾಗ, ಎಲುಬು ಮುರಿತ, ವಾತರೋಗ, ರಕ್ತಸ್ರಾವ ಗಳಿಗೆ ಇದು ಸಹಕಾರಿಯಾಗಿದೆ. ಈ ಗಿಡ ಗುಡ್ಡ ಬೆಟ್ಟಗಳಲ್ಲಿ ಎಲ್ಲ ಕಡೆಯೂ ಕಾಣಸಿಗುವುದಾದರೂ ಈಗ ಅಪರೂಪದ ಗಿಡವಾಗಿ ಅಲ್ಲಿ ಇಲ್ಲಿ ಎಂಬಂತೆ ಬೆರಳೆಣಿಕೆಯ ಮರಗಳು ಕಾಣಸಿಗುತ್ತಿವೆ. ಅದೂ ವಿರಳವಾಗಿ ಕಾಣಿಸುವ ಈ ಗಿಡದಲ್ಲಿ ತೊಗಟೆಯೇ ಇರುವುದಿಲ್ಲ! ಏಕೆಂದರೆ ಎಲ್ಲರೂ ಕೆತ್ತಿ ಕೆತ್ತಿ ಕೊಂಡೊಯ್ಯುವವರೇ. ಮರದ ಮುಖ ನೋಡಲು ವ್ಯವಧಾನವಾದರೂ ಎಲ್ಲಿದೆ!
       ಕರಾವಳಿಯಲ್ಲಿ ಬೇಲಿಯಲ್ಲೂ ಕಂಡುಬರುವ ಬಂದನಾರಿಗೆ ಮುದ್ದಾದ ಕೆಂಪು ಚಿಗುರಿನ ಅಂಡಾಕಾರದ ಮದ್ಯಮ ಗಾತ್ರದ ಎಲೆಗಳಿವೆ. ಎಲೆಗಳಲ್ಲಿ ನರಗಳು ಸ್ಪಷ್ಟವಾಗಿ ಗೋಚರವಾಗುತ್ತವೆ. ಪೊದೆಗಿಂತ ಎತ್ತರವಾಗಿ ಬೆಳೆಯುವ ಈ ಮರದ ಸಿಪ್ಪೆ ನಾರಿನಂತಿರುತ್ತದೆ. ಆ ನಾರಿನ ಕಷಾಯಕ್ಕೆ ಊರಿನ ದನದ ಹಾಲು ಸೇರಿಸಿ ಮಕ್ಕಳಿಗೆ ಕುಡಿಸುವುದು ಒಂದು ಪಾರಂಪರಿಕ ಔಷಧವಾಗಿದೆ. ಹಲವು ಪೋಷಕಾಂಶಗಳನ್ನು ಹೊಂದಿರುವ ಈ ಗಿಡ ಅಮೃತ ಸಮಾನ. ತಾಯಿ ಮಗುವಿನ ಕರುಳಬಳ್ಳಿ ಸಂಬಂಧವೇ ಈ ಬಂಧ..ನಾರು! ಸಹಜವಾಗಿ ಪ್ರಾಕೃತಿಕವಾಗಿ ಲಭ್ಯವಾಗುವ ವಿಟಮಿನ್ ಗಳು ದೇಹಕ್ಕೂ ಹಿತ. ನಿಸರ್ಗ ಮಾನವನಿಗೆ ಎಂತಹ ಅದ್ಭುತ ಸಹಕಾರವನ್ನು ಈ ಮರದ ಮೂಲಕ ಮಾಡಿದೆ...! ಈ ನಿಷ್ಪಾಪಿ ಸಸ್ಯವನ್ನು ಕಂಡು ಹಿಡಿದು ಬಳಸಿಕೊಂಡ ನಮ್ಮ ಹಿರಿಯರೆಷ್ಟು ಜ್ಞಾನಿಗಳು...! ಇದರ ನೀಲಿ ಮಿಶ್ರಿತ ಕಪ್ಪು ಹಣ್ಣುಗಳು ದಣಿವು ನಿವಾರಕವಾಗಿರುತ್ತವೆ. ಕಾಡಿನಲ್ಲಿ ಕೆಲಸಕಾರ್ಯ ನಡೆಸುವವರು ಬಾಯಾರಿಕೆಯಾದಾಗ, ಬಿಸಿಲಿನ ಝಳಕ್ಕೆ ಬಸವಳಿದಾಗ ಈ ಮರದ ಹಣ್ಣುಗಳನ್ನು ತಿಂದರೆ ತಕ್ಷಣಕ್ಕೆ ಶಕ್ತಿ ತುಂಬುವ ಕಾರಣ ಇದನ್ನು ಬಿಸಿಲಹಣ್ಣು ಎಂದೂ ಕರೆಯುತ್ತಾರೆ.
       ನಿಮ್ಮ ಸುತ್ತಮುತ್ತಲೂ ಕೂಡ ಈ ಬಂದನಾರಿನ ಗಿಡಮರಗಳಿರಬಹುದು. ಹುಡುಕಿ ರಕ್ಷಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಲಿ. ನಾವು ಸುಲಭವಾಗಿ ಈ ಗಿಡವನ್ನು ಬೆಳೆಯಲಾರೆವು. ಆದ್ದರಿಂದ ಎಲ್ಲಿದೆಯೋ ಅಲ್ಲಿಯೇ ಉಳಿಸಿಕೊಳ್ಳೋದು ನಮ್ಮ ಭವಿಷ್ಯದ ದೃಷ್ಟಿಯಲ್ಲಿ ಅತ್ಯಗತ್ಯ ಅಲ್ಲವೇ...?
     ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುವೆ. ನಮಸ್ಕಾರ.
.......................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************



Ads on article

Advertise in articles 1

advertising articles 2

Advertise under the article