-->
ಜಗಲಿ ಕಟ್ಟೆ : ಸಂಚಿಕೆ - 23

ಜಗಲಿ ಕಟ್ಟೆ : ಸಂಚಿಕೆ - 23

ಜಗಲಿ ಕಟ್ಟೆ : ಸಂಚಿಕೆ - 23
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ



       ಮಧ್ಯಾವಧಿಯ ರಜೆ ಕಳೆದು ಮತ್ತೆ ಶಾಲಾರಂಭವಾಗಿದೆ.. ರಜಾ ಸಮಯದಲ್ಲಿ ತುಂಬಾ ವಿದ್ಯಾರ್ಥಿಗಳು ಚಿತ್ರ, ಕಥೆ, ಕವನ, ಲೇಖನಗಳನ್ನು ಕಳುಹಿಸಿ ಮಕ್ಕಳ ಜಗಲಿಯ ಚಟುವಟಿಕೆಯಲ್ಲಿ ಭಾಗವಹಿಸಿದ್ದೀರಿ. ಹೀಗೆ ರಜಾ ಸಮಯವನ್ನು ಸದುಪಯೋಗಪಡಿಸಿಕೊಳ್ಳುವ ಹವ್ಯಾಸ ಸದಾ ಇರಲಿ ಎನ್ನುವುದೇ ನಮ್ಮ ಆಶಯ.
      ದಸರಾ ರಜೆ ಸಿಕ್ಕಿ ಎರಡು ದಿನಗಳು ಕಳೆದಿರಬಹುದು. ಜಗಲಿಯ ಒಬ್ಬಳು 5ನೇ ತರಗತಿಯ ಪುಟ್ಟ ಹುಡುಗಿಯ ಕರೆ ಬಂದಿತ್ತು... "ಸರ್ ನನಗೆ ರಜೆ ಸಿಕ್ಕಿದೆ. ನಾನು ನನ್ನ ದೊಡ್ಡಮ್ಮನ ಮನೆಗೆ ಬಂದಿದ್ದೇನೆ. ಇಲ್ಲಿ ನಾನು ಕಥೆ ಬರೆದು ಕಳಿಸಬೇಕೆಂದಿದ್ದೇನೆ.. ಕಳುಹಿಸಬಹುದಾ. ರಜೆ ಕಳೆಯುವ ತನಕ ನನ್ನ ದೊಡ್ಡಮ್ಮನ ಮೊಬೈಲಿಂದ ಕಳಿಸುತ್ತೇನೆ." ಅಂದಳು. 
       ಹೀಗೆ ಮಾತಾಡಿದ ಪುಟ್ಟ ಹುಡುಗಿಯಲ್ಲಿ ಆತ್ಮವಿಶ್ವಾಸ ಕಾಣುತ್ತಿತ್ತು. ರಜಾ ಸಮಯದಲ್ಲಿ ಹೊರಗೆ ತಿರುಗಾಡುವುದು, ಆಟವಾಡುವುದು, ಟಿವಿ , ಕಂಪ್ಯೂಟರ್, ಮೊಬೈಲ್ ನೋಡುವ ಮನೋಸ್ಥಿತಿಯ ಇಂದಿನ ಮಕ್ಕಳಲ್ಲಿ ತಾನು ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು ಚಟುವಟಿಕೆಯಲ್ಲಿ ನಿರತರಾಗಬೇಕೆನ್ನುವ ಯೋಚನೆಗೆ ನಿಜವಾಗಲೂ ಪ್ರಶಂಶಿಸಲೇಬೇಕು. ಮಕ್ಕಳ ಜಗಲಿಯಲ್ಲಿ ಭಾಗವಹಿಸುತ್ತಿರುವ ಪ್ರತಿಯೊಬ್ಬ ಮಕ್ಕಳು ಕೂಡ ಮಾದರಿಯಾಗುತ್ತಿದ್ದಾರೆ.      
     ನಾವು ಆಯೋಜನೆ ಮಾಡಿರುವ ರಾಜ್ಯಮಟ್ಟದ ಕಥೆ ಮತ್ತು ಕವನ ಸ್ಪರ್ಧೆಯ ಕೊನೆಯ ದಿನಾಂಕ ಮುಗಿದಿದೆ. ಈ ಬಾರಿಯೂ ರಾಜ್ಯದ ಎಲ್ಲಾ ಭಾಗಗಳ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ದೊರೆತಿದೆ. ಭಾಗವಹಿಸಿದವರಿಗೆಲ್ಲಾ ವಾಟ್ಸಪ್ ಮೂಲಕ ಪ್ರಮಾಣ ಪತ್ರವನ್ನು ಕಳುಹಿಸುತ್ತೇವೆ. ನವೆಂಬರ್ 14ರಂದು ಇದರ ಫಲಿತಾಂಶವನ್ನು ಘೋಷಣೆ ಮಾಡಲಿದ್ದೇವೆ. ಏನಾದರೂ ಬದಲಾವಣೆಗಳಿದ್ದರೆ ನಿಮಗೆ ನಾವು ತಿಳಿಸುತ್ತೇವೆ.... ನಮಸ್ಕಾರ


ಕಳೆದ ಸಂಚಿಕೆಯ ಜಗಲಿಕಟ್ಟೆ - 22 ಅಂಕಣದಲ್ಲಿ ಶ್ರೀರಾಮ ಮೂರ್ತಿ, ನಿವೃತ್ತ ವಿಜ್ಞಾನ ಶಿಕ್ಷಕರು.. ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


      ಜಗಲಿಕಟ್ಟೆಯ ಮೂಲಕ ತಾರಾನಾಥ ಸರ್ ಹಂಚಿಕೊಳ್ಳುತ್ತಿರುವ ಜೀವನಾನುಭವಗಳ ಓದು ನಮಗೆ ಬಹಳಷ್ಟು ಪ್ರೇರಣಾದಾಯಿ ಸಂಗತಿಗಳನ್ನು ನೀಡುತ್ತಿವೆ. ಮಕ್ಕಳ ಜಗಲಿ ಪದಬಂಧ, ಹಕ್ಕಿಕತೆ, ಪುಸ್ತಕ ಪರಿಚಯ, ಸಸ್ಯ ಪರಿಚಯ.. ಅಬ್ಬ! ಒಂದೇ, ಎರಡೇ.. ಬಹಳಷ್ಟು ವೈವಿಧ್ಯ ವಿಷಯಗಳನ್ನು ನೀಡುತ್ತಿದೆ. ಎಲ್ಲ ವಯೋಮಾನದವರೂ ನೋಡುವಂಥಹ, ಓದುವಂಥಹ, ಇಷ್ಟಪಡುವಂಥಹ ವಿಷಯಗಳು ಮಕ್ಕಳ ಜಗಲಿಯಲ್ಲಿವೆ. ಮಕ್ಕಳ ಚಿತ್ರಗಳು ಮತ್ತು ಆದಿಯ ಪತ್ರದಿಂದ ಸಣ್ಣ.. ಸಣ್ಣ ಹೆಜ್ಜೆಯಿಟ್ಟು ಆರಂಭವಾದ ಮಕ್ಕಳ ಜಗಲಿ ಇಂದು ಮೂರೇ ವರ್ಷದಲ್ಲಿ ತನ್ನ ರೆಂಬೆಕೊಂಬೆಗಳನ್ನು ಚಾಚಿಕೊಂಡು ವಿಸ್ತಾರವಾಗಿ, ವೈವಿಧ್ಯಮಯವಾಗಿ ಬೆಳೆದ ಪರಿ ಬೆರಗು.
............................. ವಿದ್ಯಾ ಕಾರ್ಕಳ, ಸಹ ಶಿಕ್ಷಕಿ
ಸರಕಾರಿ ಹಿರಿಯ ಪ್ರಾಥಮಿಕ 
ಶಾಲೆ ಹೊಕ್ಕಾಡಿಗೋಳಿ 
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************



ಎಲ್ಲರಿಗೂ ನಮಸ್ಕಾರಗಳು,
     ವಿಶಾಲ ಮರದಲ್ಲಿರುವ ಹಕ್ಕಿಗಳು ಮತ್ತು ಗೂಬೆಯ ಸುಂದರ ಕಥೆಯೊಂದಿಗೆ ದ್ವೇಷಿಸುವ ಬದಲು ಪ್ರೀತಿಸುವುದನ್ನು ಕಲಿಯಿರಿ ಎನ್ನುವ ಕಿವಿಮಾತಿನೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ರವರ ಜೀವನ ಸಂಭ್ರಮ ಸಂಚಿಕೆ ಮನೋಜ್ಞವಾಗಿತ್ತು.
     ಸಿಪ್ಪೆಯು ಸಪ್ಪೆಯಲ್ಲ ಬಹಳ ಸಾರವತ್ತಾಗಿರುತ್ತದೆ ಎನ್ನುವುದನ್ನು ತಮ್ಮ ಸ್ಪೂರ್ತಿಯ ಮಾತುಗಳಿಂದ ಬಹಳ ಅರ್ಥಪೂರ್ಣವಾಗಿ ಸುಂದರವಾಗಿ ನಿರೂಪಿಸಿದ್ದಾರೆ ರಮೇಶ್ ಸರ್. ಚೆನ್ನಾಗಿತ್ತು ಸರ್ ತಮ್ಮ ಲೇಖನ.
      ಕಡಲ ಪಯಣದೊಂದಿಗೆ ಈ ಸಲದ ಹಕ್ಕಿ ಕಥೆಯಲ್ಲಿ ಕಡಲ ಬಾತು ಎನ್ನುವ ಮತ್ತೊಂದು ಕಡಲಹಕ್ಕಿಯನ್ನು ಅರವಿಂದ ಸರ್ ರವರು ತಂಬಾ ಚೆನ್ನಾಗಿ ಪರಿಚಯಿಸಿದ್ದಾರೆ.
     ನಾಗೇಂದ್ರ ಬಂಜಗೆರೆಯವರ ವಿಶೇಷ ಲೇಖನವು ಕೊರೋನಾ ನಂತರದ ಕಾಲಘಟ್ಟದ ಮಕ್ಕಳ ಭವಿಷ್ಯದ ಕುರಿತು ಚಿಂತಿಸುವಂತೆ ಮಾಡಿದೆ. ಉತ್ತಮ ಲೇಖನ.
     ಪುಚ್ಚ ಸಸ್ಯಗಳು (pteridophytes) ಗುಂಪಿಗೆ ಸೇರಿದ ಅನೇಕ ಸಸ್ಯಗಳ ವಿವರಣಾತ್ಮಕ ಲೇಖನ ವಿಜಯಾ ಮೇಡಂರವರ ಈ ವಾರದ ನಿಷ್ಟಾಪಿ ಸಸ್ಯಗಳು ಸಂಚಿಕೆಯಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
     ಇನ್ನೂಬ್ಬರ ಜೀವಕ್ಕೆ ತೊಂದರೆಯಾಗದಂತೆ ವಾಹನ ಚಾಲನೆ ಮಾಡಬೇಕೆನ್ನುವ ಕಿವಿಮಾತಿನೊಂದಿಗೆ ಯಾಕೂಬ್ ಸರ್ ರವರ ಹೃದಯದ ಮಾತು ಸಂಚಿಕೆ ಚಿಕ್ಕದಾದರೂ ಚೊಕ್ಕದಾಗಿತ್ತು.   
     ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸುವ ವಾಣಿಯಕ್ಕನವರ ಪುಸ್ತಕ ಪರಿಚಯದಲ್ಲಿ ಗುಲಾಬೋ ಇಲಿಯಮ್ಮ ಮತ್ತು ಅವಳ ಬಲೂನುಗಳು ಪುಸ್ತಕದ ಪರಿಚಯ ಸೊಗಸಾಗಿತ್ತು.
     ನವರಾತ್ರಿ ಕುರಿತಂತೆ ಎಲ್ಲಾ ಮಕ್ಕಳ ಕವನಗಳು ಉತ್ತಮವಾಗಿವೆ ಹಾಗೂ ಮಕ್ಕಳ ಚಿತ್ರಗಳ ಸಂಚಿಕೆ ಕೂಡ ಚೆನ್ನಾಗಿ ಮೂಡಿ ಬಂದಿದೆ. ಅಭಿನಂದನೆಗಳು ಮಕ್ಕಳಿಗೆ. ರಮೇಶ ಉಪ್ಪುಂದರವರ ಪದದಂಗಳ ಸಂಚಿಕೆ ಸೊಗಸಾಗಿ ಮೂಡಿ ಬಂದಿದೆ..
     ಈ ವಾರದ ಜಗಲಿ ಸುಂದರ ಲೇಖನಗಳ ಮೂಲಕ ಇನ್ನಷ್ಟು ಸುಂದರವಾಗಿ ಮೂಡಿ ಬರಲು ಕಾರಣರಾದ ಎಲ್ಲಾ ಹಿರಿಯರಿಗೆ ಹಾಗೂ ಮಕ್ಕಳಿಗೆ ನನ್ನ ಪ್ರೀತಿಯ ನಮನಗಳು.
       ಎಲ್ಲರಿಗೂ ಮಗದೊಮ್ಮೆ ವಂದನೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************




    ಎಲ್ಲರಿಗೂ ನಮಸ್ಕಾರಗಳು.... ಸಮಯ ಕೂಡ ಇತ್ತೀಚಿನ ದಿನಗಳಲ್ಲಿ ತನ್ನ ನಡಿಗೆಯ ವೇಗವನ್ನು ಮತ್ತಷ್ಟು ಹೆಚ್ಚಿಸುತ್ತಾ - ಹೆಚ್ಚಿಸುತ್ತಾ ಪಯಣಿಸುತ್ತಿದೆ. ವರುಷ, ತಿಂಗಳು, ವಾರಗಳು ಕ್ಷಣ ಕ್ಷಣವೆಂಬಂತೆ ನಮ್ಮ ಜೀವನದಲ್ಲಿ ಹಾದು ಹೋಗುತ್ತಿವೆ. ಗೋಡೆಯ ಮೇಲೆ ನೇತು ಹಾಕಿದ ಕ್ಯಾಲೆಂಡರ್ ಪಟ - ಪಟನೇ ತನ್ನ ದಿನಗಳ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿ ಮತ್ತೆ ಹೊಸತನವನ್ನು ಪಡೆಯಲು ಓಡುವಂತೆ ಭಾಸವಾಗುತ್ತಿದೆ. ಈ ಎಲ್ಲಾ ವಿಚಾರಗಳ ನಡುವೆ ನಮಗೆ ದೇವರು ನೀಡಿರುವ ಅಮೂಲ್ಯವಾದ ಆಯಸ್ಸು ಕೂಡ ಇಳಿಕೆ ಕ್ರಮದಲ್ಲಿ ಸವೆಯುತ್ತಿದೆ ಎಂಬ ಸತ್ಯಾಂಶವನ್ನು ಅಲ್ಲಗಳೆಯುವಂತಿಲ್ಲ. ಏನೇ ಇರಲಿ ದೊರೆತ ಜನ್ಮವನ್ನು ಸಾರ್ಥಕ ಗೊಳಿಸುವ ನಿಟ್ಟಿನಲ್ಲಿ ನಮ್ಮ ಬಾಳ ಪಯಣವನ್ನು ಸಾಗಿಸುವಂತವರಾಗೋಣ.
          ಈ ವಾರದ ಹೃದಯದ ಮಾತು ಶೀರ್ಷಿಕೆಯಡಿಯಲ್ಲಿ ಮೂಡಿ ಬಂದ ಯಾಕೂಬ್ ಸರ್ ರವರ ಲೇಖನ ನಿಜಕ್ಕೂ ಮನ ಮಿಡಿಯುವಂತಿತ್ತು. ಕೆಲವೊಂದು ಕ್ಷಣಗಳೇ ಹಾಗೆ, ಕಟ್ಟಿಕೊಂಡ ಸಹಸ್ರ ಕನಸುಗಳನ್ನೂ ಚಿಗುರಬೇಕಾದ ಗಿಡ ಮರಗಳನ್ನು ಶೂನ್ಯ ಅವಧಿಯೊಳಗೆ ನೆಲಕಪ್ಪಳಿಸುವ ಪ್ರಕ್ರೀಯೆ ವಿಷಾದನೀಯವಾದದ್ದು. ಇಂತಹ ಅಸಹನೀಯ ಘಟನೆಗಳಿಂದ ಚೇತರಿಸಿಕೊಳ್ಳುವುದು ಸುಲಭದ ಮಾತಲ್ಲ. ಒಂದಲ್ಲ ಒಂದು ಕಾರಣದಿಂದ ಎಲ್ಲರೂ ಪುರುಸೊತ್ತೇ ಇಲ್ಲದಷ್ಟೂ ಅವಿಶ್ರಾಂತ ಜೀವನ ನಡೆಸುವವರೇ ಹೌದು. ಈ ಕಾರಣದಿಂದ ತಾಳ್ಮೆ, ನಿಸ್ವಾರ್ಥತೆಯನ್ನು ಕಳೆದುಕೊಂಡು ಇನ್ನೊಬ್ಬರ ಪಾಲಿಗೆ ಮುಳುವಾದರೆ ಅದರಿಂದ ಆಗುವಂತಹ ನಷ್ಟವನ್ನು ಮತ್ತೆ ಭರಿಸಲು ನಮ್ಮಿಂದ ಸಾಧ್ಯವೇ? ದುಡುಕಿ ಚಿಂತೆಗೆ ಒಳಗಾಗುವುದಕ್ಕಿಂತ ನಿಧಾನವಾದರೂ ಸರಿ ಸಹನೆಯ ಚಾಲನೆಯಿಂದ ಒಂದಷ್ಟು ಜೀವಗಳನ್ನು ದಡ ಸೇರಿಸಿದ ಪುಣ್ಯವಾದರೂ ಸಿಗಬಹುದಲ್ಲ. ಬಹುಶಃ ಇನ್ನು ಮುಂದೆ ಕೇವಲ ಚಾಲಕರು ಮಾತ್ರ ಅಲ್ಲ ದಾರಿಹೋಕರು ಕೂಡ ಮೈ ಮೇಲೆ ಪ್ರಜ್ಞೆಯನ್ನು ಮರೆತರೆ ಜೀವನವನ್ನು ಸಾಗಿಸುವುದು ಅಷ್ಟೇ ಕಷ್ಟವಿದೆ.
       ಸಪ್ಪೆ- ಸಪ್ಪೆಯೆಂದು ತಿಪ್ಪೆಗೆಸೆಯುವ ಸಿಪ್ಪೆಯೊಳಗೂ ನಾನಾ ವಿಧದ ಸತ್ವದ ಸಾರ ಅಡಗಿಹುದೆಂಬ ಮಾಹಿತಿಯ ಕಣಜ ತುಂಬಿದ ರಮೇಶ್ ಬಾಯಾರ್ ಸರ್ ರವರ ಲೇಖನ ಚೆನ್ನಾಗಿತ್ತು.
       ಇನ್ನು ಕೊರೋನದ ಬಗ್ಗೆ ಹೇಳುವುದಾದರೆ ಕೋರೊನ ಕೆಲವರಿಗೆ ಒಳಿತು ಮಾಡಿದರೆ ಇನ್ನೂ ಕೆಲವರಿಗೆ ಮಹಾ ನಷ್ಟವನ್ನು ಉಂಟುಮಾಡಿದೆ ಎಂದರೆ ತಪ್ಪಿಲ್ಲ. ಎಷ್ಟೋ ವಿಧ್ಯಾರ್ಥಿಗಳ ಭವಿಷ್ಯವನ್ನೇ ಬುಡಮೇಲು ಮಾಡಿದ ಹರಿಕಾರ ಎನ್ನಬಹುದೇನೋ? ಈ ವಿಚಾರಕ್ಕೆ ಪೂರಕವಾಗಿ ವಿಶೇಷ ಲೇಖನ ಸಂಚಿಕೆಯಲ್ಲಿ ಪ್ರಕಟವಾದ ಲೇಖನವೂ ನೈಜತೆಯ ಪ್ರತೀಕವಾಗಿತ್ತು.
    ಮಕ್ಕಳ ಕವನಗಳು ಹಾಗೂ ಮಕ್ಕಳ ಚಿತ್ರಗಳ ಮುಖೇನ ಈ ವಾರ ಮೂಡಿ ಬಂದ ನಾಡ ಹಬ್ಬ ದಸರದ ಸೊಬಗು ಆಹ್ಲಾದಕರವಾಗಿತ್ತು.
     ಮತ್ತಷ್ಟು ಸೊಬಗಿನಿಂದ ಮಕ್ಕಳ ಜಗಲಿ ಮಿನುಗುವಂತಾಗಲಿ ಎಂಬ ಆಶಯದೊಂದಿಗೆ....
...................................... ವಿದ್ಯಾ ಗಣೇಶ್ 
ಚಾಮೆತ್ತಮೂಲೆ ಮನೆ
ಕೊಣಾಲು ಗ್ರಾಮ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************



      ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ವಿದ್ಯಾ ಗಣೇಶ್ ಚಾಮೆತ್ತಮೂಲೆ ಮನೆ, ವಿದ್ಯಾ ಕಾರ್ಕಳ, ಸಹ ಶಿಕ್ಷಕಿ.... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************




Ads on article

Advertise in articles 1

advertising articles 2

Advertise under the article