-->
ಜೀವನ ಸಂಭ್ರಮ : ಸಂಚಿಕೆ - 105

ಜೀವನ ಸಂಭ್ರಮ : ಸಂಚಿಕೆ - 105

ಜೀವನ ಸಂಭ್ರಮ : ಸಂಚಿಕೆ - 105
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
               

      ಮಕ್ಕಳೇ, ಈ ಕಥೆ ಓದಿ. ಒಂದು ಅರಣ್ಯ ಇತ್ತು, ಅದರಲ್ಲಿ ಒಂದು ಸುಂದರ ಮರವಿತ್ತು. ಹಣ್ಣುಗಳು ಮರದ ತುಂಬಾ ತುಂಬಿತ್ತು. ಆ ಮರದಲ್ಲಿ ಬಗೆ ಬಗೆಯ ಪಕ್ಷಿಗಳು ವಾಸವಾಗಿದ್ದವು, ಗೂಡು ಕಟ್ಟಿಕೊಂಡಿದ್ದವು. ಕೆಲವು ಅದರಲ್ಲಿ ತತ್ತಿ ಇಟ್ಟಿದ್ದವು. ಎಲ್ಲಾ ಹಣ್ಣು ತಿಂದುಕೊಂಡು, ಹಾರಿಕೊಂಡು ಮತ್ತು ಹಾಡಿಕೊಂಡು ಇದ್ದವು. ಆಗ ಇದ್ದಕ್ಕಿದ್ದಂತೆ ಅರಣ್ಯಕ್ಕೆ ಬೆಂಕಿ ಬಿದ್ದಿತ್ತು. ಅರಣ್ಯ ನಾಶವಾಯಿತು. ಮರದಲ್ಲಿದ್ದ ಗೂಡು, ತತ್ತಿಗಳು ಮತ್ತು ಮರಿಗಳು ನಾಶವಾದವು. ಆಗ ಪಕ್ಷಿಗಳು ಅರಣ್ಯದಿಂದ ಹಾರಿ ಹೋಗುತ್ತಿದ್ದವು. ಮಾರ್ಗ ಮಧ್ಯೆ ಗಾಳಿ, ಪಕ್ಷಿಗಳನ್ನು ಕೇಳಿತು. "ಎಲ್ಲಾ ಮುಗಿದು ಹೋಯಿತು. ಗೂಡು, ತತ್ತಿ ಎಲ್ಲಾ ಹಾಳಾಯಿತು. ಎಲ್ಲಿಗೆ ಹೋಗುತ್ತಿರುವಿರಿ...?" ಎಂದಿತು. ಆಗ ಪಕ್ಷಿಗಳು ಹೇಳಿದವು. "ನಾವು ಇದನ್ನೇ ನಂಬಿ ಬದುಕಿದ್ದೀವಿ ಏನು? ನಮಗೆ ಹಾರುವುದಕ್ಕೆ ಬರುತ್ತದೆ. ದೂರ ದೂರಕ್ಕೆ ಹಾರುತ್ತೇವೆ. ಹಸಿರು ಎಲ್ಲಿದಿಯೋ ಅಲ್ಲಿ ಹೋಗುತ್ತೇವೆ. ಅಲ್ಲಿ ಬದುಕು ಕಟ್ಟಿಕೊಳ್ಳುತ್ತೇವೆ. ಇದೊಂದೇ ಅರಣ್ಯನಾ...? ಸಾವಿರ ಸಾವಿರಾ ಅರಣ್ಯಗಳಿವೆ. ಗೂಡು ಮಹತ್ವದಲ್ಲ. ಗೂಡು ಕಟ್ಟುವ ಕಲೆ ಇದೆಯಲ್ಲ, ಆ ಕಲೆ ಮಹತ್ವದ್ದು. ಆ ಕಲೆ ನಾಶವಾಗಿಲ್ಲ. ಮತ್ತೊಂದು ಕಡೆ ಹೋಗ್ತೀವಿ. ಗೂಡು ಕಟ್ತೀವಿ, ಎರಡು ತತ್ತಿ ಇಡ್ತೀವಿ ಮತ್ತು ಮಕ್ಕಳು ತಯಾರು ಮಾಡ್ತೀವಿ. ನಾವ್ಯಾಕೆ ಹೆದರಲಿ..? ನಾವು ಇರುವುದು, ಜೀವನವನ್ನು ಸಂತೋಷದಿಂದ ಅನುಭವಿಸಲು, ಆಕಾಶದಲ್ಲಿ ಹಾರಲು, ಹೃದಯದಿಂದ ಮಧುರ ಹಾಡನ್ನು ಹಾಡಲು, ಬೇರೆ ಬೇರೆ ನದಿ, ಕೆರೆಯ ನೀರು ಕುಡಿಯಲು, ಬಗೆ ಬಗೆಯ ಕಾಳು, ಹಣ್ಣುಗಳನ್ನು ತಿನ್ನಲು ಬಂದಿದ್ದೇವೆ. ನಾವು ಬದುಕಲು ಬಂದಿದ್ದೇವೆ" ಎಂದವು. 
     ನಮಗೇನಾದರೂ ಹೀಗಾಗಿದ್ದರೆ ಸಾಯುವುದೇ ಮೇಲು ಎನ್ನುತ್ತಿದ್ದೆವು. ಯಾವುದೇ ಹಕ್ಕಿಗೆ ಬ್ಯಾಂಕಿನಲ್ಲಿ ಖಾತೆ ಇಲ್ಲ. ಶೇರು ಖರೀದಿಸಿಲ್ಲ. ಸಂತೋಷವಾಗಿ ಹಾಡುತ್ತಾ, ಹಾರುತ್ತಾ ಇರುತ್ತವೆ. ನಮಗೆ ಊಟಕ್ಕೆ, ಕುಡಿಯೋದಕ್ಕೆ, ವಾಸಕ್ಕೆ, ಬಟ್ಟೆ ಬರೆ ಎಲ್ಲ ಇದೆ. ಆದರೆ ನಮಗೆ ಬದುಕಲು ಬರುತ್ತಿಲ್ಲ. ಕೆಲವರು ಹೇಳುತ್ತಾರೆ, ನಾವು ಪಾಪ ಮಾಡಿ ಬಂದಿದ್ದೀವಿ ಎಂದು. ನಾವು ಪಾಪ ಮಾಡಿ ಬಂದಿದ್ದೇವೆ ಏನು...? ಇಲ್ಲ , ನಾವೆಲ್ಲ ಪುಣ್ಯ ಮಾಡಿ ಬಂದಿರುವುದು. ಇದೊಂದು ವಿಶೇಷ ಅವಕಾಶ. ನಾವು ಚೆನ್ನಾಗಿ ಬದುಕಿರಬೇಕು. ಹೇಗೆ ಬದುಕಬೇಕು ಅಂದರೆ ದೇಹ ಮತ್ತು ಮನಸ್ಸು ಕೆಡದಂತೆ ಬದುಕಬೇಕು. ಹೇಗೋ ಬದುಕುವುದಲ್ಲ. ಏನೋ ಸಿಕ್ಕಿದ್ದು ತಿನ್ನೋದು, ಏನೋ ಸಿಕ್ಕಿದ್ದು ಕುಡಿಯೋದು, ಏನೋ ಮಾಡಿ ಬದುಕುವುದಲ್ಲ. ಸಣ್ಣ ಪಕ್ಷಿಗೆ ನಮಗೆ ಇರುವಂತೆ ಕೈ ಇಲ್ಲ, ದೇಹ ಇಲ್ಲ. ಎಷ್ಟು ಅದ್ಭುತವಾಗಿ ಬದುಕುತ್ತವೆ...? ಸಾಯುವ ವಿಚಾರ ಮಾಡದೆ ಬದುಕುತ್ತವೆ. ನಾವು ಒಂದು ಮಗು ಹುಟ್ಟಿದ ಕೂಡಲೇ ಜಾತಕ ಬರೆಸುತ್ತೇವೆ. ಆ ಮಗು ಎಷ್ಟು ವರ್ಷ ಬದುಕುತ್ತದೆ?. ಎಷ್ಟು ವರ್ಷಕ್ಕೆ ಸಾಯುತ್ತದೆ? ಎಂದು. ಅರಳುವಾಗ ಬಾಡೋದು ಬರಿಸುವುದು ಸರಿಯೇ?. ನಾವು ಆಲಸಿಯಾಗಿ ಬದುಕುವುದಲ್ಲ. ಮಲಗಿ ಬದುಕುವುದಲ್ಲ. ಏನೋ ಕೆಲಸ ಮಾಡಿ ಬದುಕುವುದಲ್ಲ. ಸುಂದರ ಕೆಲಸ ಮಾಡುತ್ತಾ ಬದುಕಬೇಕು. ಯಾವ ಕೆಲಸ ಮಾಡಿದರೆ ಮನಸ್ಸು ಅರಳುತ್ತದೆಯೋ? ಬದುಕಿಗೆ ಕಳೆ ಬರುತ್ತದೆಯೋ? ಆ ಕೆಲಸ ಮಾಡಿಕೊಳ್ಳುತ್ತಾ ಬದುಕಬೇಕು. ಮುಖ ಬಾಡುವ ಕೆಲಸ ಮಾಡಬಾರದು. ಜೀವನ ಅಂದರೆ ಕೆಲಸ. ಕೆಲಸ ಅಂದ್ರೆ ಜೀವನ. ನಿಸರ್ಗ ನೋಡಿ ಪ್ರತಿ ಗಿಡ ಹಗಲು ರಾತ್ರಿ ಕೆಲಸ ಮಾಡುತ್ತಿದೆ, ಬೆಳಿಗ್ಗೆ ಹೊತ್ತಿಗೆ ಸುಂದರ ಹೂಗಳನ್ನು ನೀಡಿ ಜಗತ್ತನ್ನು ಸುಂದರ ಮಾಡುತ್ತವೆ. ಹೂವಿನಲ್ಲಿ ಮಕರಂದ ತುಂಬಿ, ತನ್ನ ಸುತ್ತಮುತ್ತ ಸುಗಂಧ ಹರಡುತ್ತವೆ. ಆದರೆ ನಾವು ಬೆಳಗ್ಗೆ 10 ಗಂಟೆಯಿಂದ ಸಂಜೆ 5:30ರ ವರೆಗೆ ಕೆಲಸ ಮಾಡುತ್ತೇವೆ. ಅದರಲ್ಲಿ ಊಟದ ವಿರಾಮ, ಟಿ ವಿರಾಮ ಇರುತ್ತದೆ. ಆದರೆ ನಿಸರ್ಗದಲ್ಲಿ ಇಲ್ಲ. ನಿರಂತರ ಸುಂದರ ಕೆಲಸ ನಡೆಯುತ್ತಿದೆ. ನಮ್ಮ ದೇಹದ ವಿವಿಧ ಅವಯವಗಳು ನಿರಂತರವಾಗಿ ಕೆಲಸ ಮಾಡುತ್ತವೆ. ಅವುಗಳಿಗೆ ವಿಶ್ರಾಂತಿ ಇಲ್ಲ. ನಾವು ಎಲ್ಲಿ ಕೆಲಸ ಮಾಡಬೇಕೆಂದರೆ ನಾವು ಎಲ್ಲಿದ್ದೇವೆ ಅಲ್ಲಿ. ಆದರೆ ನಾವು ಕೆಲಸ ಮಾಡಲು ಬೆಂಗಳೂರು, ಮುಂಬೈ, ಅಮೆರಿಕಕ್ಕೆ ಹೋದಮೇಲೆ ಅಂತ ಹೇಳುತ್ತೇವೆ. ಅಲ್ಲ. ನಾವಿರುವಲ್ಲೇ ಚೆನ್ನಾಗಿ ಸುಂದರ ಕೆಲಸ ಮಾಡುತ್ತಾ ನೂರು ವರ್ಷ ಬದುಕಬೇಕು. ಅದಕ್ಕಾಗಿ ವಿದೇಶಿ ಚಿಂತಕ ಹೇಳಿದ... ಹೇಗೆ ಬದುಕಬೇಕೆಂದರೆ...? ಕೋಗಿಲೆ ಹಾಡಿದಂತೆ ಹಾಡಿಕೊಳ್ಳುತ್ತಾ ಬದುಕಬೇಕು. ನದಿ ಹರಿಯುವಂತೆ ಹರಿಯುತ್ತಾ ಬದುಕಬೇಕು. ಹೂವು ತನ್ನ ಸುತ್ತಮುತ್ತ ಸೌಂದರ್ಯ ಮತ್ತು ಸುಗಂಧ ಹರಡಿದಂತೆ ನಮ್ಮಲ್ಲಿರುವ ಸಾಮರ್ಥ್ಯವನ್ನು ಜಗತ್ತಿಗೆ ಪ್ರಕಟಿಸಬೇಕು. ಜೇನು ನೊಣ ಮಧುರ ಜೇನು ಸಂಗ್ರಹಿಸುವಂತೆ, ನಾವು ಸುಂದರ ಕೆಲಸ ಮಾಡುತ್ತಾ ಬದುಕಬೇಕು. ಅಲ್ಲವೇ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ 
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************Ads on article

Advertise in articles 1

advertising articles 2

Advertise under the article