-->
ಮಕ್ಕಳ ಕಥೆಗಳು -  ರಚನೆ : ಆರ್ಯ ಎನ್ ನಾಯಕ್, 6ನೇ ತರಗತಿ

ಮಕ್ಕಳ ಕಥೆಗಳು - ರಚನೆ : ಆರ್ಯ ಎನ್ ನಾಯಕ್, 6ನೇ ತರಗತಿ

ಮಕ್ಕಳ ಕಥೆಗಳು
ಕಥೆ ರಚನೆ : ಆರ್ಯ ಎನ್ ನಾಯಕ್
6ನೇ ತರಗತಿ 
ಶ್ರೀ ರವಿಶಂಕರ ವಿದ್ಯಾ ಮಂದಿರ ಕಾರ್ಕಳ
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ

       
    ಅಮ್ಮ ಅಮ್ಮಾ ನನ್ನ ಪ್ರಶ್ನೆಗೆ ಉತ್ತರ ನೀಡುವೆಯಾ...? ನೀನು ಹೇಳಿದ ನಿನ್ನ ಬಾಲ್ಯ ಎಷ್ಟು ಸುಂದರ.. ಹಳ್ಳಿ ಮನೆ, ಮನೆ ತುಂಬಾ ಅಜ್ಜ , ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಅಣ್ಣ , ಅಕ್ಕ, ತಮ್ಮ, ತಂಗಿ, ಅತ್ತೆ , ಮಾವ, ಎಲ್ಲರೂ ಕೂಡಿ ಇರುವ ಸೊಗಸು ಆಹಾ! ಹಾಗೆ ಹಸು, ಎಮ್ಮೆ, ಕರುಗಳು ನಿನ್ನ ಮುದ್ದಿನ ಬೆಕ್ಕಿನ ಮರಿಗಳು.. ಮನೆಯ ಹತ್ತಿರದ ಕೆರೆ. ಅಲ್ಲಿ ನಿಮ್ಮ ಈಜಾಟ, ಹಸು ಕರುಗಳನ್ನು ಮೇಯಿಸಲು ಗುಡ್ಡ ಬೆಟ್ಟ ಹತ್ತಿ ಸುತ್ತೋದು, ಅಲ್ಲಿ ಸಿಗುವ ಅನೇಕ ರೀತಿಯ ಹಣ್ಣು ಕಾಯಿಗಳನ್ನು ತಿನ್ನುತ್ತ ಪ್ರಕೃತಿಯ ಹಸಿರಿನ ವನಸಿರಿಯ ಮಡಿಲಲ್ಲಿ ಮಲಗಿ ಕುಣಿದು ಕುಪ್ಪಳಿಸಿ ಮಳೆಯಲ್ಲಿ ನೆನೆಯುತ್ತಾ ಬಿಸಿಲಲ್ಲಿ ಕುಣಿಯುತ್ತ ಸಂಜೆ ಮನೆಗೆ ಬರುವುದು.
       ಕರುಗಳನ್ನು ಕೆರೆಗೆ ಸ್ನಾನ ಮಾಡಿಸಲು ಕರೆದುಕೊಂಡು ಹೋಗೋದು.. ಸ್ನೇಹಿತರೆಲ್ಲ ಸೇರಿ ಮರಕೋತಿ ಆಟ, ಜೂಟಾಟ, ಕುಂಟೆ ಬಿಲ್ಲೆ, ಗೋಲಿ, ಲಗೋರಿ, ಕಬ್ಬಡಿ, ಖೋಖೋ, ಹೇಳ್ತಾ ಹೋದ್ರೆ ಮುಗಿಯೋದೆ ಇಲ್ಲ.. ಮರಕ್ಕೆ ಹಗ್ಗ ಕಟ್ಟಿ ಜೋಕಾಲಿ ಆಡೋದು. ಹುಣಸೆ ಮರಕ್ಕೆ ಕಲ್ಲು ಹೊಡೆದು ಹುಣಸೆ ಹಣ್ಣು ಬೀಳಿಸಿ ಕೋಚುಂಡಿ ಮಾಡಿ ತಿನ್ನೋದು. ಮಾವಿನ ಮರ ಹತ್ತಿ ಮಾವಿನಕಾಯಿ ತೆಗೆಯೋದು. ನೇರಳೆ ಹಣ್ಣು,, ಸೀಬೇಹಣ್ನು ಎಷ್ಟು ಚೆಂದ ಅಲ್ವಾ...? ವರ್ಷಕ್ಕೆ ಒಮ್ಮೆ ಯುಗಾದಿ ಹಬ್ಬಕ್ಕೆ ಮನೆಯವರಿಗೆಲ್ಲ ಹೊಸ ಬಟ್ಟೆ ಖರೀದಿಸುವ ಸಂಭ್ರಮ. ಎಲ್ಲರೂ ಒಟ್ಟಿಗೆ ಸೇರಿ ಭೇದ ಭಾವ ಇಲ್ಲದೆ ಪ್ರೀತಿ ವಿಶ್ವಾಸ ದಿಂದ ಹಬ್ಬವನ್ನು ಆಚರಿಸೋದು. ನಮ್ಮ ಆಚಾರ ವಿಚಾರ ಸಂಸ್ಕತಿಗಳನ್ನು ಹೆಚ್ಚಾಗಿ ಗೌರವಿಸುವುದು. ಎಲ್ಲ ಮಕ್ಕಳನ್ನು ಸುತ್ತಲೂ ಕೂರಿಸಿಕೊಂಡು ಅಜ್ಜಿ ದೊಡ್ಡಪ್ಪ ಸಂಜೆ ಕಥೆ ಹೇಳೋದು. ಹಾಗೆ ಎಲ್ಲರಿಗೂ ಮಂಡಕ್ಕಿ ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿ ಸವಿಯೋದು. ಬೆಳದಿಂಗಳ ಬೆಳಕಲ್ಲಿ ಎಲ್ಲರೂ ತಂಪಾದ ವಾತಾವರಣದಲ್ಲಿ ಸುತ್ತಾಡಿ ಬರೋದು. ಕೇಳೋಕೆ ಎಷ್ಟು ಸೊಗಸಾಗಿದೆ. ಮಕ್ಕಳೆಲ್ಲರ ಸಂತೋಷ, ಹಾಡು, ಜಗಳ, ಅಳು, ನಗು ಎಲ್ಲ ಒಂದೇ ಕಡೆ ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬೆಳೆದ ರೀತಿ ನಿಜಕ್ಕೂ ಧನ್ಯ. ಶಾಲೆಯಲ್ಲಿ ಪಠ್ಯ ವಿಷಯಕ್ಕಿಂತ ನೀತಿ ಪಾಠಗಳೇ ಹೆಚ್ಚಾಗಿದ್ದವು. ಶಾಲೆಯ ಬಗ್ಗೆ ಇದ್ದ ಪ್ರೀತಿ. ಗುರುಗಳ ಮೇಲಿನ ಭಯ ಭಕ್ತಿ. ಗೌರವಗಳು ಜೀವನದ ಮೌಲ್ಯಗಳನ್ನು ಕಲಿಯಲು ಇನ್ನಷ್ಟು ಉತ್ಸಾಹ ತುಂಬುತ್ತಿತ್ತು. ಅಜ್ಜನ ಕೋಪ, ಅಜ್ಜಿಯ ಪ್ರೀತಿ , ಅಮ್ಮನ ಮಮತೆ ಮರೆಯಲು ಸಾಧ್ಯವೇ ಜಾತ್ರೆಯಲ್ಲಿ ಅಪ್ಪ ದೊಡ್ಡಪ್ಪನ ಕೈ ಹಿಡಿದು ಮಾಡಿದ ಸುತ್ತಾಟ. ಅಲ್ಲಿ ತೊಗಲು ಗೊಂಬೆಯಾಟ, ಕಂಸಾಳೆ ಕುಣಿತ, ವೀರಗಾಸೆ, ಕೋಳಿ ಜಗಳ, ಸರ್ಕಸ್, ನೋಡಿ ಆನಂದಿಸಿದ ಅನುಭವ ಅನನ್ಯ. ಇದನ್ನೆಲ್ಲಾ ಕೇಳ್ತಾ ಇದ್ರೆ ನೀವು ಪ್ರತಿ ದಿನ ಪ್ರತಿ ಕ್ಷಣ ನಿಮ್ಮ ಬಾಲ್ಯವನ್ನು ಎಷ್ಟೊಂದು ಸುಂದರ, ವರ್ಣ ರಂಜಿತವಾಗಿ ಕಳೆದಿದ್ದೀರ ನಿಮ್ಮ ಇಡೀ ಜೀವನದ ಒಂದು ಸುಂದರ ಸವಿ ನೆನಪಾಗಿ ಸವಿದಿದ್ದೀರ. ಅಮ್ಮ ನಮಗೇಕೆ ಆ ಬಾಲ್ಯ ಸಿಗುತ್ತಿಲ್ಲ. ಅಷ್ಟೇನೂ ತಂತ್ರಜ್ಞಾನ ಇಲ್ಲದ ಆ ಕಾಲದಲ್ಲಿ ನೀವು ಎಷ್ಟೊಂದು ಖುಷಿಯಾಗಿ ಇದ್ರಿ. ನಾವು ಕೇವಲ ಅಂಕಗಳಿಕೆಯ ಮಶೀನಾಗಿದ್ದೇವೆ, ಈ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಮೊದಲು ಬರಬೇಕೆಂಬ ಒತ್ತಡ ಬಿಟ್ಟರೆ ಬೇರೇನೂ ಇಲ್ಲ. ಹೊರಗೆ ಹೋಗಲು ಆಡಲು ಸಮಯವೂ ಇಲ್ಲ. ಗೆಳೆಯರು ಇಲ್ಲ. ನಾಲ್ಕು ಗೋಡೆಯ ಮಧ್ಯೆ ಮೊಬೈಲ್, ಟಿವಿ, ವಿಡಿಯೋ ಗೇಮ್ ಗಳೇ ನಮ್ಮ ಆಟ. ಹೊರಗಿನ ಪರಿಸರ , ಗಿಡ ಮರ ಹೂವು ಹಣ್ಣು ನದಿ ಇದ್ಯಾವುದೂ ನಮಗೆ ಸಿಗೋದಿಲ್ಲ. ಹಸು ಕರುಗಳನ್ನು ನೋಡೋಕೆ ಗೋಶಾಲೆಗೆ ಹೋಗಬೇಕು. ಅಪ್ಪ ಅಮ್ಮ ಇಬ್ಬರೂ ಅವರ ಕೆಲಸಕ್ಕೆ ಆಫೀಸ್ ಗೆ ಹೋದ್ರೆ ನಾವು ಬುಕ್ ನೋಡಿ ಬರೆಯೋದೇ ಆಗಿದೆ. ಎಷ್ಟೇ ಅಂಕ ಗಳಿಸಿದರೂ ಕಡಿಮೆ. ಅದರ ಜೊತೆ ಡಾನ್ಸ್, ಸಂಗೀತ, ಡ್ರಾಯಿಂಗ್, ಕರಾಟೆ, ಯಕ್ಷಗಾನ, ತಬಲಾ, ಹೀಗೆ ಎಲ್ಲ ತರಗತಿಗಳಿಗೂ ಹೋಗಬೇಕು. ನಮಗೂ ಮನಸ್ಸಿದೆ, ನಿಮ್ಮಂತ ಸುಂದರ ಬಾಲ್ಯ ನಮಗೂ ಬೇಕು. ಹೊರಗಿನ ಪರಿಸರದಲ್ಲಿ ಬೆಟ್ಟ ಗುಡ್ಡ ಸುತ್ತಬೇಕು. ನದಿಯ ನೀರಿನಲ್ಲಿ ಮೀನಿನಂತೆ ಈಜಾಡಬೇಕು, ಆಕಾಶದಲ್ಲಿ ಹಕ್ಕಿಯಂತೆ ಹಾರಾಡಬೇಕು, ನವಿಲಿನಂತೆ ಗರಿಬಿಚ್ಚಿ ಕುಣಿಯಬೇಕು, ಪಕ್ಷಿಗಳ ಚಿಲಿಪಿಲಿ ಹಾಡು ಕೇಳಿ ನಾನು ಅವರೊಟ್ಟಿಗೆ ಹಾಡ ಬೇಕು. ಬೆಳದಿಂಗಳ ರಾತ್ರಿ ನಕ್ಷತ್ರ ಎಣಿಸಬೇಕು. ಇಷ್ಟೆಲ್ಲಾ ಆಸೆ ಕನಸುಗಳು ನನಗೂ ಇದೆ. ಆದರೆ ಇದು ಸಾಧ್ಯಾನಾ.....??
(ಚಿತ್ರ : ಅಂಕಿತ್ ಶರ್ಮ ಎಂ. ಜೆ, 4 ನೇ ತರಗತಿ)
................................. ಆರ್ಯ ಎನ್ ನಾಯಕ್
6ನೇ ತರಗತಿ 
ಶ್ರೀ ರವಿಶಂಕರ ವಿದ್ಯಾ ಮಂದಿರ ಕಾರ್ಕಳ
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article