-->
ಜಗಲಿ ಕಟ್ಟೆ : ಸಂಚಿಕೆ - 19

ಜಗಲಿ ಕಟ್ಟೆ : ಸಂಚಿಕೆ - 19

ಜಗಲಿ ಕಟ್ಟೆ : ಸಂಚಿಕೆ - 19
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


       ಒಂದು ಬಾರಿ ಕಲಾವಿದ ಗೋಪಾಡ್ಕರ್ ನನ್ನನ್ನು ದಾವಣಗೆರೆಗೆ ಜತೆಗೆ ಕರ್ಕೊಂಡು ಹೋಗಿದ್ದರು. ಅಲ್ಲೊಂದು ಬಾಲಕಾರ್ಮಿಕ ಮಕ್ಕಳ ವಸತಿ ಶಾಲೆ ಇತ್ತು. ಗೋಪಾಡ್ಕರ್ ಅವರ ಆತ್ಮೀಯರಾದ ರಾಘವೇಂದ್ರ ಎನ್ನುವವರು ಸರಕಾರೇತರ ಸಂಸ್ಥೆಯನ್ನು ನಡೆಸುತ್ತಾ ಇದ್ದರು. ಶಾಲೆಯಿಂದ ಹೊರಗುಳಿದ, ಬಾಲಕಾರ್ಮಿಕರಾಗಿ ದುಡಿಯುತಿದ್ದ ಮಕ್ಕಳನ್ನು ಮನವೊಲಿಸಿ ಮತ್ತೆ ಶಾಲೆಗೆ ಸೇರಿಸುವ ಕೆಲಸವನ್ನು ಮಾಡುತ್ತಾ ಇದ್ದರು. ಹೀಗೆ ಮರಳಿ ಶಾಲೆಗೆ ಬಂದ ಮಕ್ಕಳಿಗಾಗಿ ಸೃಜನಶೀಲ ಅಭಿವೃಕ್ತಿ ಮೂಡಿಸುವ ಶಿಬಿರವನ್ನು ಆಯೋಜನೆ ಮಾಡಿದ್ದರು.
         ವಸತಿ ಶಾಲೆ.... ಸುಮಾರು 40 ರಿಂದ 50 ವಿದ್ಯಾರ್ಥಿಗಳು ಅಲ್ಲಿದ್ದರು. ಹೆಚ್ಚಿನ ಮಕ್ಕಳು ಪೋಷಕರಿಲ್ಲದೆ ಅನಿವಾರ್ಯವಾಗಿ ಬಾಲಕಾರ್ಮಿಕರಾಗಿ ತೆರಳಿದವರಾದರೆ ಕೆಲವರು ಹೆತ್ತವರ ಸರಿಯಾದ ಮಾರ್ಗದರ್ಶನ ಇಲ್ಲದೆ ಈ ಹಾದಿ ತುಳಿದವರು. ಶಾಲಾ ಶಿಕ್ಷಣದ ಗಂಭೀರತೆಯನ್ನು ಅರಿಯದೆ ಬಾಲ್ಯವನ್ನು ಕಳೆದುಕೊಳ್ಳುವ ಮಕ್ಕಳಾಗಿದ್ದರು. ಶುಚಿತ್ವದ ಪರಿವೆಯೇ ಇಲ್ಲದೆ ಹೋದರೂ ಭಾವನಾತ್ಮಕವಾಗಿ ನಿಷ್ಕಲ್ಮಶ ಮನಸ್ಸುಳ್ಳವರಾಗಿದ್ದರು.
        ಸುಮಾರು 2 ರಿಂದ 3 ದಿನ ಅವರ ಜೊತೆ ಉಳಿದುಕೊಳ್ಳುವ ಅವಕಾಶ ನಮ್ಮದಾಗಿತ್ತು. ಚಿತ್ರ ಕ್ರಾಫ್ಟ್ ಹೀಗೆ ಅನೇಕ ರೀತಿಯ ಕೌಶಲ ತುಂಬುವ ಚಟವಟಿಕೆಯಲ್ಲಿ ತುಂಬಾ ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಮನ ಬಿಚ್ಚಿ ಮಾತನಾಡುತ್ತಿದ್ದ ಮಕ್ಕಳು ತುಂಬಾ ಕನಸುಗಳನ್ನು ತನ್ನ ಒಡಲಲ್ಲಿ ತುಂಬಿಕೊಳ್ಳುತ್ತಿದ್ದರು. ಮ್ಯಾನೇಜರ್ ಆಗಬೇಕು, ಪೋಲೀಸ್ ಆಗಬೇಕು, ಆಫೀಸರ್ ಹೀಗೆ ನಾನಾ ತರ ಪ್ರಕಟವಾದಾಗ ಮುಗ್ಧ ಮಕ್ಕಳು ಎಷ್ಟೊಂದು ಕಳೆದುಕೊಳ್ಳುತ್ತಿದ್ದಾರೆ ಅನ್ನಿಸಿತು. ಮಕ್ಕಳು ಕಳೆದುಕೊಳ್ಳುವುದಕ್ಕೆ ಯಾರು ಕಾರಣರು...? ಎನ್ನುವ ಪ್ರಶ್ನೆ ನನ್ನನ್ನು ಕಾಡತೊಡಗಿತು...!!
        ಕ್ಯಾಂಪ್ ಮುಗಿಸಿ ವಾಪಾಸು ಮಂಗಳೂರಿಗೆ ಬಂದ ನನಗೆ ಕೆಲವೇ ದಿನಗಳಲ್ಲಿ ಆ ಮಕ್ಕಳಿಂದ ಫೋನ್ ಬಂದಿತ್ತು. ಸಾರ್ವಜನಿಕವಾಗಿ ಲಭ್ಯವಿರುತ್ತಿದ್ದ ಕಾಯಿನ್ ಫೋನ್ ಗಳು ಆಗ ಇರುತ್ತಿದ್ದವು. 1ರೂ ಕಾಯಿನ್ ಹಾಕಿ ಡಯಲ್ ಮಾಡಿದರೆ 1 ನಿಮಿಷ ಮಾತನಾಡಬಹುದಿತ್ತು... ಸುಮಾರು 10 ರಿಂದ 15 ಮಕ್ಕಳು ಸಾಲಾಗಿ ಸಾರ್ ನಾನು ರವಿ, ಸಾರ್ ನಾನು ಮಹೇಶ, ಹೀಗೆ ಎಲ್ಲರೂ ತನ್ನ ಹೆಸರು ಹೇಳುವುದರೊಳಗಾಗಿ ಫೋನ್ ಕಟ್ ಆಗಿತ್ತು.... ಈ ರೀತಿ ಸುಮಾರು ತಿಂಗಳಿಗೆ 2 ಬಾರಿಯಾದರೂ ನಿರಂತರ ಫೋನ್ ಮಾಡುತಿದ್ದುದನ್ನು ಕಂಡಾಗ ಮಕ್ಕಳ ಪ್ರೀತಿ, ಅಭಿಮಾನ ಅವರೊಳಗಿನ ಭಾವನೆ ನನ್ನನ್ನು ಮಕ್ಕಳ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ತೊಡಗಿಸಿಕೊಳ್ಳಲು ಪ್ರೇರಣೆಯಾಯಿತು...!!

     ಅಂದ ಹಾಗೆ ಮಕ್ಕಳ ಜಗಲಿಯಿಂದ ಆಯೋಜನೆಯಾಗಿರುವ 2023 ನೇ ಸಾಲಿನ ರಾಜ್ಯಮಟ್ಟದ ಕಥೆ ಮತ್ತು ಕವನ ಸ್ಪರ್ಧೆ ರಾಜ್ಯದ ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ... ಇನ್ನೂ ಹೆಚ್ಚಿನ ಮಕ್ಕಳು ಭಾಗವಹಿಸುವಿಕೆಯಲ್ಲಿ ಹಾಗೂ ರಾಜ್ಯದ ಎಲ್ಲಾ ಭಾಗಗಳ ಮಕ್ಕಳಿಗೂ ಈ ಸುದ್ದಿಯನ್ನು ತಲುಪಿಸುವಲ್ಲಿ ನಿಮ್ಮೆಲ್ಲರ ಪ್ರೀತಿಯ ಸಹಕಾರ ಖಂಡಿತ ಅಗತ್ಯ ಇದೆ.... ಇದು ನಿಮ್ಮ ಮನೆ ಮಕ್ಕಳ ಜಗಲಿ.... ಆ ಪ್ರೀತಿ ಸದಾ ಇರಲಿ ಎಂದೆಂದಿಗೂ ಇರಲಿ...!! ನಮಸ್ಕಾರ


ಕಳೆದ ಸಂಚಿಕೆಯ ಜಗಲಿಕಟ್ಟೆ - 18 ಅಂಕಣದಲ್ಲಿ ಶ್ರೀರಾಮ ಮೂರ್ತಿ, ನಿವೃತ್ತ ವಿಜ್ಞಾನ ಶಿಕ್ಷಕರು , ವಿಜಯಾ ಬಿ ಶೆಟ್ಟಿ ಸಾಲೆತ್ತೂರು ಮತ್ತು ಶ್ರೀಮತಿ ನಂದನ ಜೋಶಿ.. ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....

    "ಕಲ್ಲು ಹೃದಯ ಕರಗಿದಾಗ" (ಲೇಖಕರು : ಯಾಕೂಬ್ ಎಸ್ ಕೊಯ್ಯೂರು) ತಮ್ಮ.. ಹೃದಯದ ಮಾತು ಸಂಚಿಕೆಯ ೧೦ನೇ ಲೇಖನ.. "ಪ್ರೀತಿಯ ಜಾಫರ್" ನಿಗೆ ಬರೆದ ಪತ್ರ ಓದಿ, ತುಂಬಾ ಸಂತೋಷವಾಯಿತು ಸರ್.. ಅಷ್ಟೇ ಮನವೂ ಕೂಡ ಮಿಡಿಯಿತು ಸರ್.. ಅದು ತುಂಬಾನೇ ಉಪಯುಕ್ತ ಪತ್ರ ಆಗಿರೋದ್ರಿಂದ, ನಮ್ಮ ಮನೆಯಲ್ಲಿ ಎಲ್ರೂ ಸಹ ಓದಿ.. ಜಾಫರ್ ನ ಬದುಕು ಬದಲಾಯಿಸಿದ ತಮ್ಮ ಪ್ರಯತ್ನ ನಿಜಕ್ಕೂ ಅದ್ಭುತ..! ಅದರಲ್ಲೂ, ಆ ತಾಯಿ-ಮಗುವಿನ "ಹೃದಯ ಸ್ಪರ್ಷಿ ಅಪ್ಪುಗೆ" ಯಂತೂ ಆನಂದ ಭಾಷ್ಪವನ್ನೇ ತರಿಸಿತು..!! ಅಂತ ಪ್ರತಿಕ್ರಿಯಿಸಿದರು ಸರ್.. ಇಂತಹ, ಮೌಲ್ಯಯುತ ಬರಹಕ್ಕಾಗಿ ನಮ್ಮೆಲ್ಲರ ಪರವಾಗಿ ತಮಗಿದೋ ಅಭಿನಂದನೆಗಳು ಸರ್.. ಧನ್ಯವಾದಗಳು.
............................................. ಸಲೀಂ ಪಾಶಾ
ಪ್ರಾಥಮಿಕ ಶಾಲಾ ಶಿಕ್ಷಕರು, ಬಿಜಾಪುರ
******************************************



      "ಚಿಟ್ಟೆಗಳಿಗೆ ರೆಕ್ಕೆ ಹಚ್ಚುವ ಪುಟ್ಟ ಬಾಲಕ - ಕೃಷ್ಣ" ಸಂಪೂರ್ಣ ಪ್ರತಿಭಾ ಪರಿಚಯದ ಒಂದೊಂದು ವಾಕ್ಯವು ಸಹ ಉತ್ಸಾಹಕಾರಿಯಾಗಿದೆ. ಲಾಕ್ ಡೌನ್ ಕೆಲವರಿಗೆ ಶಾಪವಾದರೆ ಇನ್ನೂ ಕೆಲವರಿಗೆ ವರವಾಗಿದೆ ಇನ್ನುವುದಕ್ಕೆ ಈ ಲೇಖನವೇ ಉದಾಹರಣೆ....
       ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎನ್ನುವಂತೆ ಇಂತಹ ಹೊಸತನದ ಹುಮ್ಮಸ್ಸಿನ ಈ ಬಾಲಕನ ಪ್ರತಿಭೆಗೆ ಹಾಗೂ ಕುತೂಹಲಕ್ಕೆ ನಿಜವಾಗಲು ಮೆಚ್ಚಲೇ ಬೇಕು......
      ಮಕ್ಕಳ ಜಗಲಿ ಎಂಬ ಡಿಜಿಟಲ್ ವೇದಿಕೆಯು ಇಂತಹ ಪ್ರತಿಭೆಗಳನ್ನು ಪರಿಚಯಿಸುವುದರ ಮೂಲಕ ಲೇಖನವನ್ನು ಓದಿದ ಪ್ರತಿಯೊಬ್ಬರಿಗೂ ಮಾದರಿಯಾಗುತ್ತದೆ ಎಂದು ಹೇಳಿದರೆ ತಪ್ಪಾಗಲಾರದು.....
............... ಪೂರ್ಣಿಮ ಕೋಟ್ಯಾನ್ ಮಾರ್ನಾಡ್
******************************************



      ನಮಸ್ಕಾರಗಳು ಸರ್.... ಸಾತ್ವಿಕ ಗಣೇಶ್ ಅವರ ಮನಮೋಹಕ ಚಿತ್ರಗಳಿಂದ ಈ ವಾರದ ಜಗಲಿಯ ಓದು ಆರಂಭವಾಯಿತು. 7ಜನ ವಿದ್ಯಾರ್ಥಿಗಳು ಬರೆದಿರುವ ಕತೆ ವೈವಿಧ್ಯಮಯವಾಗಿ ರಂಜನೀಯವಾಗಿತ್ತು. ಶಾನ್ವಿಯ ಪೇಪರ್ ಕ್ರಾಪ್ಟ್, ಅನುಷಾ ವಾಲ್ಡರ್ ಬಿಡಿಸಿದ ಚಿತ್ರಗಳು ಸುಂದರವಾಗಿತ್ತು. ಐಶ್ವರ್ಯ ರಚಿಸಿರುವ ಆರು ಕವನಗಳು ಮನಸ್ಸಿಗೆ ಮುದ ನೀಡಿತು. ನಿಷ್ಪಾಪಿ ಸಸ್ಯಗಳು. ಸಂಚಿಕೆಯಲ್ಲಿ ವಿಜಯ ಮೇಡಂ ಅರಾರೂಟ್ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ. ಮುಂದಿನ ವಾರ ಯಾವ ಸಸ್ಯದ ಬಗ್ಗೆ ತಿಳಿಸುತ್ತಾರೆ ಎಂಬ ಕುತೂಹಲವಿರುತ್ತದೆ. ಸೊಗಸಾಗಿ ಮೂಡಿ ಬರುತ್ತಿದೆ ಅವರ ಸಂಚಿಕೆ. ಶಿಕ್ಷಣಾಧಿಕಾರಿಗಳಾದ ಜ್ಞಾನೇಶ್ ಸರ್ ಅವರ ಜೀವನಸಂಭ್ರಮ ಹಾಗೂ ರಮೇಶ್ ಸರ್ ಬರೆದಿರುವ ಚಮಚ ಮತ್ತು ಚಮಚಾ ಪದಗಳ ಅರ್ಥವನ್ನು ವಿವರಿಸಿರುವ ಲೇಖನ ಇಷ್ಟ ವಾಯಿತು. ಹಕ್ಕಿಕಥೆಯಲ್ಲಿ ಕೆನ್ನೀಲಿ ಬಕದ ಕುರಿತಾದ ಮಾಹಿತಿಯು ಮಹತ್ವಪೂರ್ಣವಾಗಿತ್ತು. ಪದದಂಗಳದಲ್ಲಿ ಪದಜೋಡಿಸುವುದು ಸಂತೋಷನ್ನು ನೀಡುತ್ತದೆ. ಹಾಗೂ ನಮ್ಮ ಪದ ಭಂಡಾರವನ್ನು ವೃದ್ಧಿಸುತ್ತದೆ. ಪುಟ್ಟ ಬಾಲಕ ಕೃಷ್ಣಕುಮಾರನ ಪರಿಸರದ ಜೀವಿಗಳ ಬಗೆಗಿನ ಆಸಕ್ತಿ, ಅವುಗಳ ವೈಜ್ಞಾನಿಕ ಹಿನ್ನೆಲೆಯಿಂದ ಅದರ ಬೆಳವಣಿಗೆಯನ್ನು ಅಭ್ಯಸಿಸುವ ರೀತಿ ತುಂಬಾ ಮೆಚ್ಚುಗೆಯಯಿತು. 
ಇವನ್ನೆಲ್ಲಾ ಓದುವ ಸುಖವನ್ನು ನೀಡಿದ ನಿಮಗೆಲ್ಲ ನನ್ನ ಗೌರವಪೂರ್ವಕ ನಮನಗಳು.
...................................... ಕವಿತಾ ಶ್ರೀನಿವಾಸ 
 W/o ಶ್ರೀನಿವಾಸ ದೈಪಲ 
'ಚೈತನ್ಯ ' ನೆಲ್ಯಡ್ಕ, ಅಂತರ
ನರಿಕೊಂಬು ಅಂಚೆ ಮತ್ತು ಗ್ರಾಮ  
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


ನಮಸ್ತೇ,
     "ಸಜ್ಜನರ ಸಂಗವದು ಹೆಜ್ಜೇನ ಸವಿದಂತೆ ದುರ್ಜನರ ಸಂಗದೊಡನಾಟ ಬಚ್ಚಲ ಕೊಚ್ಚೆಯಂತೆ" ಎನ್ನುವ ಸರ್ವಜ್ಞನವರ ನುಡಿಯಂತೆ ನಾವು ಒಳ್ಳೆಯವರ ಸಹವಾಸದಿಂದ ಒಳ್ಳೆಯವರಾಗಿಯೂ ದುರ್ಜನನರ ಸಹವಾಸದಿಂದ ನಾವು ಹೇಗೆ ಕೆಟ್ಟವರಾಗುತ್ತೇವೆ ಎನ್ನುವುದನ್ನು ಶಿಕ್ಷಣಾಧಿಕಾರಿಯವರಾದ ಜ್ಞಾನೇಶ್ ಸರ್ ತಮ್ಮ ಈ ಸಲದ ಸಂಚಿಕೆಯಲ್ಲಿ ಸುಂದರವಾಗಿ ನಿರೂಪಿಸಿದ್ದಾರೆ.
     ಚಮಚ ಉಪಯುಕ್ತ ವಸ್ತು. ಇದು ಪ್ರಮಾಣವನ್ನು ನಿರ್ಧರಿಸುತ್ತದೆ ಹಾಗೆ ಇನ್ನಿತರ ಕೆಲಸಗಳಿಗೆ ಉಪಯುಕ್ತ. ಆದರೆ ಚಮಚಾಗಿರಿ ಗುಲಾಮಿತನದ ಸಂಕೇತ. ಆದುದರಿಂದ ಚಮಚಾಗಿರಿಗಳಾಗದೆ ಇರೋಣ... ರಮೇಶ್ ಬಾಯಾರು ಇವರಿಂದ ಉತ್ತಮ ಲೇಖನ. 
      ಈ ಸಲದ ಹಕ್ಕಿ ಕಥೆಯಲ್ಲಿ ಅರವಿಂದ ಸರ್ ರವರ ಕೆನ್ನೀಲಿ ಬಕ ಪಕ್ಷಿಯ ಪರಿಚಯ ಸೊಗಸಾಗಿತ್ತು. ಗಿಡಗಳನ್ನು ಬೆಳೆಸುವ ಕಾಳಜಿಯೊಂದಿಗೆ ಆರಾರೂಟ್ ಗಿಡದ ಪರಿಚಯ ಮನೋಜ್ಞವಾಗಿತ್ತು. ಈ ಸಲದ ನಿಷ್ಟಾಪಿ ಸಸ್ಯಗಳು ಸಂಚಿಕೆ ತುಂಬಾ ಖುಷಿ ನೀಡಿತು ಮೇಡಂ.
     ಕೇವಲ ಜಾಫರ್ ಗೆ ಮಾತ್ರವಲ್ಲ. ಎಲ್ಲರಿಗೂ ಪ್ರೇರಣೆ ನೀಡುವ ಉತ್ತಮ ಸಂದೇಶ ಸಾರುವ ಪತ್ರ ನಿಮ್ಮದು ಸರ್. ಕಲ್ಲು ಹೃದಯದ ಜಾಫರ್ ಬದಲಾದ ಹಾಗೆ ಎಲ್ಲಾ ಮಕ್ಕಳಲ್ಲಿ ಸ್ಫೂರ್ತಿ ತುಂಬಬಲ್ಲ ಲೇಖನ - ಯಾಕೂಬ್ ಸರ್ ರವರಿಂದ.
     ಈ ವಾರದಲ್ಲಿ ಬಹಳಷ್ಟು ಮಕ್ಕಳು ಬರವಣಿಗೆಯಲ್ಲಿ ತೊಡಗಿಸಿಕೊಂಡದ್ದು ತುಂಬಾ ಖುಷಿಯಾಯಿತು. ಮಕ್ಕಳ ಕಥೆಗಳು ಕವನ, ಚಿತ್ರಗಳು ತುಂಬಾ ಚೆನ್ನಾಗಿವೆ. ಅಭಿನಂದನೆಗಳು ಎಲ್ಲಾ ಮಕ್ಕಳಿಗೆ.
     ಶಿಕ್ಷಕರ ಡೈರಿಯಲ್ಲಿ ಶಾಂತಾ ಮೇಡಂ ರವರು ತಮ್ಮ ಅನುಭವವನ್ನು ಸೊಗಸಾಗಿ ಹಂಚಿಕೊಂಡಿದ್ದಾರೆ. ವಾಣಿಯಕ್ಕನವರ ಪುಸ್ತಕ ಪರಿಚಯ ಸೊಗಸಾಗಿದೆ. ಪುಸ್ತಕದ ಮುಖಪುಟವೇ ಓದಲು ಪ್ರೇರೇಪಿಸುವಂತಿದೆ.
        ಅದ್ಭುತ ಪ್ರತಿಭೆ ಕೃಷ್ಣ ಕುಮಾರ್ ನಲ್ಲಿ ಪ್ರಕೃತಿಯನ್ನು ಕಂಡುಕೊಳ್ಳುವ ಗುಣವಿದೆ. ಈ ಪ್ರತಿಭೆಯನ್ನು ನೀರೆರೆದು ಪೋಷಿಸುವ ಅವನ ಹೆತ್ತವರಿಗೆ ಹಾಗೂ ಅವನ ಶಾಲಾ ಶಿಕ್ಷಕರಿಗೆ ನನ್ನ ಹೃತ್ಪೂರ್ವಕ ವಂದನೆಗಳು. ಪ್ರತಿಭೆ ಇನ್ನಷ್ಟು ಬೆಳಗಲಿ ಎಂದು ಹಾರೈಸುವೆ.
      ಜಗಲಿಯಲ್ಲಿ ಕೈಯಾಡಿಸುವ ಎಲ್ಲರಿಗೂ ನನ್ನ ನಮನಗಳನ್ನು ಸಲ್ಲಿಸುತ್ತಾ ಈ ವಾರದ ನನ್ನ ಅನಿಸಿಕೆ ನಿಮಗೆಲ್ಲರಿಗೂ ಸ್ಪೂರ್ತಿದಾಯಕವಾಗಲಿ ಎನ್ನುವ ಸದಾಶಯಗಳೊಂದಿಗೆ ಮುಂದಿನ ವಾರ ಮತ್ತೆ ನಿಮ್ಮೊಂದಿಗೆ..... ವಂದನೆಗಳು....
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************



        ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡ ಮಕ್ಕಳ ಜಗಲಿ ಕುಟುಂಬದ ಶ್ರೀರಾಮ ಮೂರ್ತಿ, ನಿವೃತ್ತ ವಿಜ್ಞಾನ ಶಿಕ್ಷಕರು , ಕವಿತಾ ಶ್ರೀನಿವಾಸ, ಸಲೀಂ ಪಾಶಾ ಪ್ರಾಥಮಿಕ ಶಾಲಾ ಶಿಕ್ಷಕರು, ಬಿಜಾಪುರ ಮತ್ತು ಪೂರ್ಣಿಮ ಕೋಟ್ಯಾನ್ ಮಾರ್ನಾಡ್ .... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************



Ads on article

Advertise in articles 1

advertising articles 2

Advertise under the article