-->
ಲೇಖನ : ಪುಸ್ತಕ ಯಶಸ್ಸಿನ ಕೀಲಿ ಕೈ - ರಚನೆ: ಕೆ. ಮಿಕ್ದಾದ್

ಲೇಖನ : ಪುಸ್ತಕ ಯಶಸ್ಸಿನ ಕೀಲಿ ಕೈ - ರಚನೆ: ಕೆ. ಮಿಕ್ದಾದ್

ಲೇಖನ : ಪುಸ್ತಕ ಯಶಸ್ಸಿನ ಕೀಲಿ ಕೈ
ರಚನೆ: ಕೆ. ಮಿಕ್ದಾದ್
10ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
                        

     ಕನ್ನಡದಲ್ಲಿ ನುಡಿಯೊಂದಿದೆ, 'ಗ್ರಂಥಗಳಿಲ್ಲದ ಕೋಣೆ ಆತ್ಮವಿಲ್ಲದ ದೇಹದಂತೆ' ಎಂಬುವುದು ಒಪ್ಪಲೇಬೇಕಾದ ವಿಷಯ. ಕಾರಣ ಒಂದು ಪುಸ್ತಕದಲ್ಲಿ ಅಡಗಿರುವ ಮೌಲ್ಯಗಳು ಮತ್ತು ತತ್ವಗಳು ನಮ್ಮ ಜೀವನಕ್ಕೆ ದಾರಿ ದೀಪವಾಗಿದೆ. ಹಾಗೂ ಅವು ನಮ್ಮ ಜೀವನಕ್ಕೆ ಬೆಳಕನ್ನು ಚೆಲ್ಲುತ್ತವೆ ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ.
       ಪುಸ್ತಕಗಳು ಬಾಳಿಗೊಂದು ನಿರ್ಧಿಷ್ಟ ಗುರಿಯನ್ನೊದಗಿಸುತ್ತದೆ. ನನ್ನ ಜೀವ ಪುಸ್ತಕಗಳಾಗಿವೆ. ನಾನೂ ಕೂಡ ಒಬ್ಬ ಸಾಧಾರಣ ಮನುಷ್ಯರ ಹಾಗೆ, ಜೀವನದಲ್ಲಿ ಅತೀವೇಗನೆ ಯಶಸ್ಸನ್ನುಕಾಣಬೇಕು ಎನ್ನುವುದು ಬಹಳ ದೊಡ್ಡ ಆಸೆಯಾಗಿತ್ತು. 
      ನಾನು ಪ್ರೈಮರಿಯಲ್ಲಿ ಕಲಿಯುತ್ತಿರುವಾಗಲೇ ನನಗೆ ಪ್ರೌಡ ಶಾಲೆಯಾದ ಕೆಯ್ಯೂರಿನಲ್ಲಿ ಕಲಿಯಬೇಕು ಎಂಬುವುದು ನನ್ನ ಆಸೆಯಾಗಿತ್ತು. ಅಂತು ಇಂತು ಕೊನೆಗೆ 6ನೇ ತರಗತಿ ಮುಟ್ಟೇ ಬಿಡ್ತು. ಏನೊ ಸ್ವಲ್ಪ ಆಚೆ ಈಚೆ ನೋಡ್ತಾ ಹಲ್ಲು ಕಚ್ಚಿ ನಿಂತು ನನ್ನ 6ನೇ ತರಗತಿ ಮುಗಿವಷ್ಟರಲ್ಲಿ ಬಂದೇ ಬಿಡ್ತು ನಮ್ಮ ನೆಂಟ್ರು (ಕೊರೋನಾ). ಒಂದು ವರ್ಷವಿತ್ತು ನನ್ನ ಪ್ರೈಮರಿ ಕಾಲ ಮುಗಿಯಲು ಏನೋ ದೇವರು ಕೊಟ್ಟ ತೀರ್ಥ
ಅಂದುಕೊಂಡು ಮಗದೊಂದು ವರ್ಷ ಹಲ್ಲು ಕಚ್ಚಿ ಕುಳಿತು ಕಾದೆ. ಆದರೆ ನಮ್ಮ ಬಂದ ನೆಂಟ್ರು ಹೋಗ್ತಾನೆಯಿಲ್ಲ.
      ಅಬ್ಬಬ್ಬಾ...! ಇಲ್ಲಿಗೆ ಮುಗೀತ... ನಾನು ಬೆಟ್ಟದಷ್ಟು ಏರಿಸಿದ್ದ ನನ್ನ ಕನಸು ಈ ವೇಳೆ ನಾನ್ ಏನ್ ಮಾಡ್ಬೇಕು, ದೇವರಲ್ಲಿ ಕುಳಿತು ಪ್ರಾರ್ಥಿಸಿದೆ. ಇದು ಸಾಕಾಗ್ಲಿಲ್ಲವೋ ಅಂದು ಕೊಂಡು ನಿಂತು ಪ್ರಾರ್ಥಿಸಿದೆ. ಇದೆಲ್ಲಾ ಮುಗೀತಾ ಬರುವಾಗ ಮರೆತೇಬಿಟ್ಟೇ ನನ್ನ ಕನಸು. ಇದರ ಕೋಪದಲ್ಲಿ ಅಮ್ಮನಲ್ಲಿ ಗೊಣಗಿದ್ದೂ ಇದೆ. ಈ ಮಾರಿ ಕೊರೋನಾ ಮೊದ ಮೊದಲಿಗೆ ನನಗೆ ಆಪ್ತ ಸ್ನೇಹಿತನಾಗಿದ್ದ... ಕೊನೇಗೆ ನನಗೆ ಶತ್ರು ಆಗೇ ಬಿಟ್ಟ.  
      ಏನೋ ಕೆಮ್ಮುವ ಶಬ್ದವಾಗಲಿ ಶೀನುವ ಶಬ್ದವಾಗಲಿ ಕೇಳಿಸಿದ್ರೆ ಕೆಟ್ಟಿದ್ದೇ, ಮತ್ತೆ ಅವ್ನು ಓಡಿದ ಓಟದಲ್ಲಿ ಹುಲ್ಲು ಬೆಳೆಯಲು ಸಾಧ್ಯವಿಲ್ಲ. ಊರವರಿಗೆಲ್ಲಾ ಚೀಲ ತುಂಬುವಷ್ಟು ಚಿಂತೆ ಈ ಮಧ್ಯೆ ನನಗಂತೂ ಅದಕ್ಕಿಂತ ದೊಡ್ಡ ಚಿಂತೆ ಯಾವಾಗ ಶಾಲೆಗೆ ಹೋಗೋದು. ಬೆರಳೆಣಿಕೆಯ ದಿನಗಳ ನಂತರ ಬಂದೇ ಬಿಡ್ತು. ನನಗೆ ಹೊಟ್ಟೆ ತುಂಬುವಷ್ಟು ಖುಷಿ. "ಶಾಲಾ ಕಾಲೇಜುಗಳು ನಾಳೆಯಿಂದ ಶುರು" ಎಂದಾಗಿತ್ತು. ಇದನ್ನು ಕೇಳಿದ ತಕ್ಷಣ ಎಲ್ಲೋ ಇದ್ದ ನನ್ನ ಪ್ರಾಣ ಬಂದಿತು.
ಶಾಲೆಗೆ ಹೋಗುವ ಖುಷಿಯಲ್ಲಿ, ಚೀಲ ಹಾಕಿ ಓಡಿದ್ರಲ್ಲಿ ಗುಂಡಿಗೆ ಬೀಳದ್ದು ಪುಣ್ಯ. ಅಲ್ಲಿ ಹೋಗಿ ಹೊಸ ಗೆಳೆಯರ ಪರಿಚಯ, ಹೊಸ ಶಿಕ್ಷಕರು ಇದೆಲ್ಲಾ ನನ್ನ ಮನ ಮುಟ್ಟಿತು. ಆದರೆ ಇಲ್ಲಿಯೂ ಕೂಡ ನನ್ನ ವಿದ್ಯಾರ್ಥಿ ಜೀವನ ಕಲಿಕೆಯದ್ದಾಗಿರಲಿಲ್ಲ. ಅತಿಯಾಗಿ ಹಾಳು ಹರಟೆಯಲ್ಲಿ ಮುಳುಗಿರುವುದು, ಗೆಳೆಯರ ಜೊತೆ ಹಾರಾಟ-ಚೀರಾಟ. ಶಿಕ್ಷಕರು ತರಗತಿಯೊಳಗೆ ಬರುವವರೆಗೆ ಆಟ-ಕಿರುಚಾಟ ಇದೂ ಸಾಲದೆ, ಇದ್ದ ತರಗತಿಯೊಳಗಿರುವ ವಸ್ತುಗಳನ್ನಾಗಲಿ ಇನ್ನೊಂದಾಗಲಿ ಕಣ್ಣೆದುರಿಗೆ ಸಿಕ್ಕಿದ್ದನ್ನೆಲ್ಲಾ ಹೊಡೆದು ಹಾಳು ಮಾಡುವುದು ಮತ್ತು ಶಿಕ್ಷಕರು ತರಗತಿಯಲ್ಲಿ ಪಾಠ ಮಾಡುತ್ತಿರುವಾಗ ಕೇಳಿದ ಪ್ರಶ್ನೆಗೆ ಗುಂಪಿನಲ್ಲಿ ಹರಕೆ ಮಾಡಿ ಬಿಡುವುದು. ಇದೆಲ್ಲಾ ಸಾಲದೆ ದಿನಾ ಮಾಸ್ತರ ಪೆಟ್ಟು. ಇದೆಲ್ಲಾ ಮುಗಿವಷ್ಟರಲ್ಲಿ ನನ್ನ ಒಂದು ವರುಷ ಅಲ್ಲಿ ಮುಗಿದೇ ಹೋಯಿತು.
       ನನ್ನ ಮನ ಮೆಚ್ಚಿದ "ಶ್ಯಾಮ್ ಸಿಂಗ ರಾಯ್" ಎಂಬ ಒಂದು ಚಲನ ಚಿತ್ರವಿದೆ. ಇದನ್ನು ನೋಡಿ ಏನೋ, ಮಾವನ ಮನೆಗೆ ರಾಯರು ಬಂದ ಹಾಗೆ‌, ಮನದಲ್ಲಿ ಒಂದು ಆಸೆ ನನಗೂ ಆ ತರಹ ಆಗ್ಬೇಕು, ಕಾರಣ ಇದರಲ್ಲಿ ಒಬ್ಬ ಕವಿಯ ಜೀವನದಲ್ಲಿ ನಡೆದ ಘಟನೆಯನ್ನು ಅತ್ಯಂತ ಸುಂದರವಾಗಿ ವಿವರಿಸಿದ್ದಾರೆ, ಆದ್ರೆ ಏನ್ಮಾಡೋದು ಒಬ್ಬ ಕವಿಯಾಗ್ಬೇಕು ಅಂದ್ರೆ ಪುಸ್ತಕ ಓದ್ಬೇಕೆ. ಶಾಲೆಯಲ್ಲಿ ಒಂದು ಲೈಬ್ರರಿ, ವಾರದಲ್ಲಿ ಒಮ್ಮೆ ಅಲ್ಲಿಗೆ ಭೇಟಿ, ಕಣ್ಮುಚ್ಚಿ ಕೈ ಹಾಕಿ ಒಂದು ಪುಸ್ತಕ ತೆಗೆದುಕೊಂಡು ಹೋಗಿ ಓದಲೆಂದು ಕುಳಿತರೆ, ದೇವರೇ.... ಎಲ್ಲಿಲ್ಲದ ನಿದ್ದೆ. ಮುಂದೆ ಯಾವಾಗೆಲ್ಲ ನಿದ್ದೆ ಬರದಿಲ್ಲವೋ ಅವಾಗೆಲ್ಲಾ ಪುಸ್ತಕ ಹಿಡ್ಕೊಂಡಿರುವುದು....!!
       ಹೀಗೆ ಓದಿದ ಪುಸ್ತಕದಲ್ಲಿ ಒಂದಾದ ನನ್ನ ಮೇಲೆ ಪ್ರಭಾವ ಬೀರಿದ ಡಾll ಚಂದ್ರಶೇಖರ್ ಚನ್ನಾವರ ಹಾಲಪ್ಪ ಇವರ "ಬದುಕಿನ ಬಣ್ಣ" ಎಂಬ ಕವನ ಸಂಕಲನದಲ್ಲಿ "ತನ್ನ ಮೊದಲನೆಯ ಪ್ರಯತ್ನದಲ್ಲೇ ಯಶಸ್ಸನ್ನು ಕಂಡಿದ್ದೀನಿ" ಎಂದು ವ್ಯಕ್ತ ಪಡಿಸಿದ್ದಾರೆ. ಕವಿಯವರ ಕವನದ ಸಾಲುಗಳು ನನ್ನ ಮನ ಮುಟ್ಟಿದ ಒಬ್ಭ ಮಹಾನ್ ಕವಿ. ಇನ್ನೊಂದು ಹೇಳಬೇಕಾದರೆ, ನನ್ನ ಜೀವನದಲ್ಲಿ ನಾನು ಅತಿಯಾಗಿ ಓದಿದ್ದು, ಕೇಳಿದ್ದು ಇಂಗ್ಲೀಷ್ ಕೃತಿಗಳು ಎಂದು ಹೇಳುವದರಲ್ಲಿ ಯಾವುದೇ ಸಂದೇಹವಿಲ್ಲ. ನಾನು ಅತಿಯಾಗಿ ಇಷ್ಟಪಡುವ ಪುಸ್ತಕಗಳು ಎಂದರೆ ಅದು ಇಂಗ್ಲಿಷ್ ಪುಸ್ತಕಗಳೇ... ಅಂದರೆ ಕನ್ನಡ ಪುಸ್ತಕಕ್ಕೆ ಅವಮಾನ ಮಾಡುವ ಉದ್ದೇಶವಲ್ಲ. ಕುವೆಂಪು ಅವರ "ನೆನಪಿನ ದೋಣಿಯಲ್ಲಿ" ಎಂಬ ಆತ್ಮ ಚರಿತ್ರೆಯು ಬಹಳ ಸುಂದರವಾದ ಕೃತಿ ಇದಾಗಿದೆ. ತನ್ನ ಜೀವನದಲ್ಲಿ ನಡೆದ ಎಲ್ಲಾ ಘಟನೆಗಳನ್ನು ಎಷ್ಟೋ ಸುಂದರವಾಗಿ ಬಿಡಿಸಿ ತಿಳಿಸಿದ್ದಾರೆ. ಇದು ನನ್ನನ್ನು ಬಹುಬೇಗ ಸೆರೆ ಹಿಡಿಯಿತು.
     "ಕ್ರಿಯಾಶೀಲತೆ ಯಶಸ್ಸಿನ ಕೀಲಿ ಕೈಯಾಗಿದೆ" ಎಂದು ಡಾll ಎ.ಪಿ.ಜೆ ಅಬ್ದುಲ್ ಕಲಾಂ ಅವರು ಹೇಳುವಾಗ ನಾವುಗಳು ಬರೀ ಯೋಚನೆ ಮಾತ್ರ ಮಾಡವುದನ್ನು ಬಿಟ್ಟು ಅದನ್ನು ಮಾಡಿ ತೋರಿಸುವ ಛಲವಿರಬೇಕು. ಇದು ಮಾನವನ ಜೀವನಕ್ಕೆ ಚೆನ್ನಾಗಿ ಅನ್ವಯಿಸುತ್ತದೆ.
      ನಾನು ಓದಿದ ಇಂಗ್ಲಿಷ್ ಕೃತಿಗಳಲ್ಲಿ ಒಂದಾಗಿದೆ "ದಿ 5 ಎ.ಎಂ ಕ್ಲಬ್" ಎನ್ನುವ ಕೃತಿ. ಇಂಗ್ಲಿಷ್ ಕವಿಗಾರರಲ್ಲಿ ಒಬ್ಬರಾದ 'ರಾಬಿನ್ ಶರ್ಮಾ' ಎಂಬವರ ಕೃತಿಯಾಗಿದೆ. "ನಿಮ್ಮ ಮುಂಜಾನೆಗಳ ಒಡೆಯರಾಗಿ, ನಿಮ್ಮ ಬದುಕನ್ನು
ಎತ್ತರಿಸಿ" ಈ ಒಂದು ಸಾಲು ನನ್ನ ಜೀವನದ ಯಶಸ್ಸಿಗೆ ಕಾರಣವಾದ ಮೂಲಮಂತ್ರ. ಆ ಕ್ಷಣ ನಾನು ಇಂಗ್ಲೀಷಿನ ದೀಕ್ಷೆ ಹಿಡಿದೆ. ನಾವು ಯಾವಾಗ ತಮ್ಮ ಮುಂಜಾನೆಗಳ ಒಡೆಯರಾಗುತ್ತೀರೋ ಅವರು ಜೀವನದಲ್ಲಿ ಯಶಸ್ವಿಯಾದವರಲ್ಲಿ ಒಬ್ಬರಾಗಿದ್ದಾರೆ. ಅಷ್ಟು
ಸುಂದರವಾಗಿ, ಬಹಳ ಸೂಕ್ಷ್ಮತೆಯಿಂದ ವಿವರಿಸಲಾದ ಈ ಕೃತಿ ನನ್ನ ಮೇಲೆ ಪ್ರಭಾವ ಬೀರಿದ ಕಾರಣಗಳಲ್ಲಿ ಮತ್ತೊಂದಾಗಿದೆ. ನನ್ನ ಜೀವನಕ್ಕೆ ಪ್ರಭಾವ ಬೀರಿದ್ದು ಕೇವಲ ಪುಸ್ತಕಗಳು ಮಾತ್ರ ಎಂದು ಹೇಳಲು ಇಚ್ಛಿಸುವುದಿಲ್ಲ. ಆದರೆ ನಾನು ಪುಸ್ತಕಗಳ ಮಹತ್ವಕ್ಕೆ ಮಾರು ಹೋದೆ.
      ಕೊನೆಗೆ ಹೇಳಬೇಕಾದುದು ಒಂದಿದೆ, ನಾನಿನ್ನೂ ಹೆಚ್ಚು ಪುಸ್ತಕಗಳನ್ನು ಓದಬೇಕಾಗಿದೆ.
ಬೀಚಿಯವರು ಹೇಳಿದ ಹಾಗೆ, "ಓದಬೇಕಾದುದು ಬಹಳ ಇದೆ. ಆಯುಷ್ಯ ಮಾತ್ರ ಬಹಳ ಕಡಿಮೆ ಇದೆ". ಇದು ನನಗೂ ಅನ್ವಯವಾಗುತ್ತದೆ.
......................................... ಕೆ. ಮಿಕ್ದಾದ್
10ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article