-->
ಹೃದಯದ ಮಾತು : ಸಂಚಿಕೆ - 06

ಹೃದಯದ ಮಾತು : ಸಂಚಿಕೆ - 06

ಹೃದಯದ ಮಾತು : ಸಂಚಿಕೆ - 06
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
           
 
     ಕ್ಲಾಸ್ ಟೀಚರ್ ವಿದ್ಯಾರ್ಥಿಗಳ ಪ್ರಗತಿ ಪತ್ರಕ್ಕೆ ಷರಾ ಬರೆಯುತ್ತಿದ್ದಾಳೆ. ಅದು ಐದನೇ ತರಗತಿ. ಮಕ್ಕಳ ಪ್ರಗತಿ ಉತ್ತಮವಾಗಿತ್ತು. ಇದ್ದಕ್ಕಿದ್ದಂತೆ ಆಕೆಯ ಸಿಟ್ಟು ನೆತ್ತಿಗೇರಿತು. ಇದೊಂದು ಪ್ರಗತಿ ಪತ್ರ ಮಾತ್ರ ಆಕೆಯ ನೆಮ್ಮದಿಯನ್ನು ಹಾಳುಮಾಡಿತ್ತು. ಸಿಡುಕಿನಿಂದಲೇ ಪ್ರಗತಿ ಪತ್ರದ ಮೇಲೆ ಕೆಂಪುಶಾಯಿಯಲ್ಲಿ ಗೀಚಿದಳು. ಷರಾದಲ್ಲಿ "ತೀರಾ ಕಳಪೆ ಸಾಧನೆ. ಸೋಮಾರಿ, ದಡ್ಡ ವಿದ್ಯಾರ್ಥಿ" ಎಂದು ಬರೆದು ಬಿಟ್ಟಳು. ಜವಾನನನ್ನು ಕರೆದು ಪ್ರಗತಿ ಪತ್ರಗಳನ್ನು ಮುಖ್ಯಶಿಕ್ಷರ ಸಹಿಗೆ ಕಳುಹಿಸಿಕೊಟ್ಟಳು.

     ಮಿಸ್ಸೆಸ್ ಥಾಮ್ಸನ್, ಐದನೇ ತರಗತಿಗೆ ಕ್ಲಾಸ್ ಟೀಚರಾಗಿ ಬಂದ ಮೊದಲನೇ ದಿನ. "ನಾನು ಎಲ್ಲಾ ವಿದ್ಯಾರ್ಥಿಗಳನ್ನು ಸಮಾನವಾಗಿ ಪ್ರೀತಿಸುತ್ತೇನೆ" ಎಂದಿದ್ದಳು. ಅದು ಸತ್ಯವಾಗಲು ಸಾಧ್ಯವೇ ಇರಲಿಲ್ಲ. ಮೊದಲ ಬೆಂಚಿನ ಹುಡುಗನೊಬ್ಬ ಆಕೆಯ ಮನಸ್ಸನ್ನೇ ಕೆಡಿಸಿದ್ದ. ಅವನಿಷ್ಟ ಬಂದಂತೆ ಕೂರುತ್ತಿದ್ದ. ಎಲ್ಲೋ ನೋಡುತ್ತಿದ್ದ. ನೀಟ್ನೆಸ್ ಅನ್ನೋದು ಇರಲೇ ಇಲ್ಲ. ತಲೆಗೂದಲು ಬಾಚದೆ ಬರುತ್ತಿದ್ದ. ಕೆಲವೊಮ್ಮೆ ಡೆಸ್ಕ್ ಮೇಲೆ ತಲೆಯಿಟ್ಟು ನಿದ್ರೆನೂ ಮಾಡುತ್ತಿದ್ದ. ಬಟ್ಟೆ ಕೊಳಕಾಗಿ ಕೆಲವೊಮ್ಮೆ ಅಸಹ್ಯವಾಗಿ ಕಾಣುತ್ತಿದ್ದ. ಮಿಸ್ಸೆಸ್ ಥಾಮ್ಸನ್ ಅವನ ಬಗ್ಗೆ ತೀರಾ ಅಸಮಾಧಾನ ಹೊಂದಿದ್ದಳು. ಅವನ ಮೇಲೆ ಆಗಾಗ ರೇಗಾಡುತ್ತಿದ್ದಳು.

       ಮಿಸೆಸ್ಸ್ ಥಾಮ್ಸನ್ ತರಗತಿ ಮುಗಿಸಿ ಕ್ಲಾಸಲ್ಲಿ ಕುಳಿತಿದ್ದಳು. ವಿದ್ಯಾರ್ಥಿಗಳು ಅದಾಗಲೇ ಮನೆಗೆ ತೆರಳಿದ್ದರು. ಟೀಚರ್ಸ್ ಏನಾದರೂ ಕೆಲಸವಿದ್ದರೆ ಸ್ವಲ್ಪ ಸಮಯ ಕ್ಲಾಸಲ್ಲೇ ಇರುತಿದ್ದರು. ಜವಾನ ಪ್ರಗತಿ ಪತ್ರಗಳನ್ನು ಮುಖ್ಯ ಶಿಕ್ಷಕರ ಸಹಿ ಮಾಡಿಸಿ ಟೀಚರ್ ಟೇಬಲ್ ಮೇಲೆ ತಂದಿಟ್ಟ. ಅದರೊಟ್ಟಿಗೆ ಆಕೆಗೆ ಕೊಡುವಂತೆ ಒಬ್ಬ ವಿದ್ಯಾರ್ಥಿಯ ಎಲ್ಲಾ ಹಿಂದಿನ ನಾಲ್ಕು ವರ್ಷಗಳ ಪ್ರಗತಿ ಪತ್ರವನ್ನು ಮುಖ್ಯಶಿಕ್ಷಕರು ಕಳುಹಿಸಿ ಕೊಟ್ಟಿದ್ದರು. 

       ಮಿಸೆಸ್ಸ್ ಥಾಮ್ಸನ್ ಆ ಪ್ರಗತಿ ಪತ್ರಗಳು ಯಾರದ್ದಿರಬಹುದು? ಎಂದು ಯೋಚಿಸುತ್ತ ತೆರೆದಳು. ಹೌದು ಅದು ಆಕೆ ತೀರಾ ಅಸಹ್ಯಪಡುತ್ತಿದ್ದ ಅದೇ ವಿದ್ಯಾರ್ಥಿಯ ಪ್ರಗತಿ ಪತ್ರ. ಮೊದಲನೇ ತರಗತಿಯ ಪ್ರಗತಿ ಪತ್ರ ಕೈಗೆತ್ತಿಕೊಂಡಾಗ 'ಟೆಡ್ಡಿ ಸ್ಲಾಟ್ಟರ್' ಎಂದು ದಪ್ಪ ಅಕ್ಷರಗಳಲ್ಲಿ ಬರೆದಿತ್ತು. ಅದು ಆಕೆ ತೀರಾ ಇಷ್ಟಪಡದ ಹೆಸರು. ಪುಟ ತೆರೆಯುತ್ತಿದ್ದಂತೆ ಆಕೆ ಅವಕ್ಕಾದಳು. ಅದರಲ್ಲಿ ಒಂದನೇ ತರಗತಿ ಕ್ಲಾಸ್ ಟೀಚರ್ ಬರೆದ ಷರಾ ಇತ್ತು. "ಟೆಡ್ಡಿ ಈಸ್ ಬ್ರಿಲಿಯೆಂಟ್, ಹಿ ಈಸ್ ಪ್ರೆಂಡ್ಲೀ ವಿದ್ ಅದರ್ಸ್". ಮಿಸೆಸ್ ಥಾಮ್ಸನ್ ಆಶ್ಚರ್ಯಗೊಂಡು, ಎರಡನೇ ತರಗತಿ ಪ್ರಗತಿ ಪತ್ರ ಬಿಡಿಸುತ್ತಾಳೆ. ಅಲ್ಲೂ ಆಕೆ ಬೆರಗುಗೊಳ್ಳುತ್ತಾಳೆ. "ಟೆಡ್ಡಿ ಈಸ್ ಎಕ್ಸೆಲೆಂಟ್ ಸ್ಟೂಡೆಂಂಟ್. ಹಿ ಈಸ್ ವೆರಿ ಪ್ರೆಂಡ್ಲೀ ವಿದ್ ಹಿಸ್ ಪ್ರೆಂಡ್ಸ್" ಎಂದು ಕ್ಲಾಸ್ ಟೀಚರ್ ಅಂದವಾಗಿ ಬರೆದಿದ್ದಳು. ಕುತೂಹಲದಿಂದ ಮಿಸ್ಸೆಸ್ ಥಾಮ್ಸನ್ ಮೂರನೇ ತರಗತಿ ಪ್ರಗತಿ ಪತ್ರ ನೋಡುತ್ತಾಳೆ. ಕ್ಲಾಸ್ ಟೀಚರ್ ಬರೆದ ಷರಾ ಓದಿದಾಗ "ಟೆಡ್ಡಿಗೆ ತಾಯಿಯ ಅನಾರೋಗ್ಯದಿಂದ ಓದಿನ ಮೇಲೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ. ಆತನ ಕಲಿಕೆಯ ಮಟ್ಟ ಕಡಿಮೆಯಾಗುತ್ತಿದೆ" ಎಂದು ಬರೆದಿತ್ತು. ಮಿಸ್ಸೆಸ್ ಥಾಮ್ಸನ್ ಮನದಲ್ಲೇ ಕಳವಳಗೊಳ್ಳುತ್ತಿದ್ದಳು. ನಾಲ್ಕನೇ ತರಗತಿಯ ಪ್ರಗತಿ ಪತ್ರ ಆಕೆಯ ಕೈಯಲ್ಲಿತ್ತು. "ಟೆಡ್ಡಿಯ ತಾಯಿ ಕ್ಯಾನ್ಸರ್ ನಿಂದ ತೀರಿಕೊಂಡಿದ್ದಾಳೆ. ತಾಯಿಯ ಸಾವು ಟೆಡ್ಡಿಯ ಮೇಲೆ ಅಪಾರ ಪರಿಣಾಮ ಬೀರಿದೆ. ಟೆಡ್ಡಿ ಕಲಿಕೆಯಲ್ಲಿ ತೀರಾ ಹಿಂದುಳಿದಿದ್ದಾನೆ. ಆತ ಯಾವುದರಲ್ಲೂ ಆಸಕ್ತಿ ತೋರಿಸುತ್ತಿಲ್ಲ" ಎಂದು ಕ್ಲಾಸ್ ಟೀಚರ್ ಬರೆದಿದ್ದರು.

       ಮಿಸ್ಸೆಸ್ ಥಾಮ್ಸನ್ ಗೆ ದುಃಖ ಉಮ್ಮಳಿಸಿ ಬಂತು. ಆಕೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಸುಮಾರು ಒಂದು ಗಂಟೆ ಆಕೆಯ ಅಳು ನಿಲ್ಲಲಿಲ್ಲ. ತರಗತಿಯ ಮುಂದಿನ ಬೆಂಚಿನಲ್ಲಿ ಕುಳಿತಿದ್ದ ಟೆಡ್ಡಿ ಆಕೆಯ ಮುಂದೆ ಹಾದು ಬರುತ್ತಿದ್ದ. ಆತನ ಕೆದರಿದ ತಲೆಗೂದಲು, ಆತ ತರಗತಿಯಲ್ಲಿ ಆಚೀಚೆ ದಿಟ್ಟಿಸುತ್ತಿದ್ದದ್ದು, ಡೆಸ್ಕ್ ಮೇಲೆ ನಿದ್ರೆ ಮಾಡುತ್ತಿದ್ದದ್ದು ಎಲ್ಲಾ ದೃಶ್ಯಗಳು ಸುರುಳಿಯಾಗಿ ಆಕೆಯ ಮುಂದೆ ಸುತ್ತುತ್ತಿದ್ದವು. ನಾನು ಬಹಳ ದೊಡ್ಡ ತಪ್ಪು ಮಾಡುತ್ತಿದ್ದೆ ಎಂದು ಆಕೆಗೆ ಅನ್ನಿಸತೊಡಗಿತು. ಭಾರವಾದ ಹೃದಯದಿಂದ ಆಕೆ ಮನೆ ಕಡೆ ಹೆಜ್ಜೆ ಹಾಕಿದಳು.

      ಅಂದು ಆಕೆಗೆ ನಿದ್ರೆ ಹತ್ತಿರ ಸುಳಿಯಲೇ ಇಲ್ಲ. ಆಕೆಗೊಮ್ಮೆ ಟೆಡ್ಡಿಯನ್ನು ನೋಡಲೇ ಬೇಕಿತ್ತು. ಆತನನ್ನು ಅಪ್ಪಿಕೊಳ್ಳಬೇಕಿತ್ತು. ಮರುದಿನ ಎಲ್ಲರಿಗಿಂತ ಮುಂಚಿತವಾಗಿ ಶಾಲೆಗೆ ಬಂದವಳೇ ಟೆಡ್ಡಿಗಾಗಿ ಕಾಯುತ್ತಿದ್ದಳು. ಸ್ವಲ್ಪ ಹೊತ್ತಿನಲ್ಲೇ ಟೆಡ್ಡಿ ಅಸ್ತವ್ಯಸ್ತವಾಗಿ ಯೂನಿಫಾರಂ ಧರಿಸಿ ತರಗತಿಯೊಳಗೆ ಬಂದ. ಮಿಸ್ಸೆಸ್ ಥಾಮ್ಸನ್ ಆತನನ್ನು ಬರಸೆಳೆದು ಅಪ್ಪಿಕೊಂಡಳು. ಆತನ ತಲೆ ನೇವರಿಸಿದಳು. ಆಗಲೂ ಆಕೆಯ ಕಣ್ಣಾಲಿಗಳು ತುಂಬಿದ್ದವು. 

       ಟೆಡ್ಡಿ ತನ್ನ ಅಮ್ಮನ ಅಗಲುವಿಕೆಯ ನಂತರ ಮೊದಲ ಬಾರಿ ತನ್ನನ್ನು ಅಮ್ಮನಂತೆ ಪ್ರೀತಿಸುವವರನ್ನು ಕಂಡಿದ್ದ. ಆತನೂ ಟೀಚರನ್ನು ಬಿಗಿದಪ್ಪಿಕೊಂಡ. ಟೀಚರ್ ಆತನೊಂದಿಗೆ ಬಹಳನೇ ಪ್ರೀತಿಯಿಂದ, ಸಲುಗೆಯಿಂದ ಮಾತನಾಡಿದರು. ಅಂದು ಟೆಡ್ಡಿಯ ವರ್ತನೆಯಲ್ಲಿ ತೀರಾ ಬದಲಾವಣೆಯಾಗಿತ್ತು. ಮಿಸ್ಸೆಸ್ ಥಾಮ್ಸನ್ ಅಂದಿನಿಂದ ಆತನ ಬಗ್ಗೆ ಕಾಳಜಿ ವಹಿಸತೊಡಗಿದಳು.‌ ಟೆಡ್ಡಿಯ ಎಲ್ಲಾ ವರ್ತನೆಗಳು ಅಂದಿನಿಂದ ಬದಲಾದವು. ಮುಖದಲ್ಲಿ ನಗು ಮೂಡಿತು. ತರಗತಿಯಲ್ಲಿ ಲವಲವಿಕೆಯಿಂದ ಇರತೊಡಗಿದ. ಆತ ಕೆಲವೇ ಸಮಯದಲ್ಲಿ ಮತ್ತೆ ಬುದ್ದಿವಂತ ವಿದ್ಯಾರ್ಥಿ ಎನಿಸಿಕೊಂಡ.

     ಅಂದು ಕ್ರಿಸ್ಮಸ್. ಸಂಪ್ರದಾಯದಂತೆ ಆ ದಿನ ಎಲ್ಲಾ ವಿದ್ಯಾರ್ಥಿಗಳು ಕ್ಲಾಸ್ ಟೀಚರ್ ಗೆ ಗಿಫ್ಟ್ ಕೊಡುತ್ತಿದ್ದರು. ಟೆಡ್ಡಿಯ ಸರದಿ ಬಂದಾಗ ಹಳತು ಕಾಗದದಲ್ಲಿ ಸುತ್ತಿದ ಒಂದು ಕಟ್ಟನ್ನು ಮಿಸ್ಸೆಸ್ ಥಾಮ್ಸನ್ ಗೆ ಕೊಟ್ಟ. ಆಕೆಗೆ ಕುತೂಹಲ. ಅದನ್ನು ತರಗತಿಯಲ್ಲೇ ತೆರದು ನೋಡಿದಳು. ಅಲ್ಲಿ ಒಂದು ಚಿನ್ನದ ಹರಳುಗಳಿರುವ ಬ್ರೇಸ್ಲೆಟ್ ಮತ್ತು ಒಂದು ಸೆಂಟಿನ ಬಾಟ್ಲಿ. ಅದರಲ್ಲಿ ಅರ್ಧ ಬಾಟ್ಲಿ ಸೆಂಟ್ ಮಾತ್ರ ಇತ್ತು. ಬ್ರೇಸ್ಲೆಟ್ ನ ಎರಡು ಮೂರು ಹರಳುಗಳು ಕಿತ್ತು ಹೋಗಿತ್ತು. ಅದನ್ನು ನೋಡಿದ ಪೂರ್ತಿ ತರಗತಿ ಟೆಡ್ಡಿಯನ್ನು ಗೇಲಿ ಮಾಡಿತ್ತು. ಮಿಸ್ಸೆಸ್ಸ ಥಾಮ್ಸನ್ ಬ್ರೇಸ್ಲೆಟ್ ಕೈಗೆ ಧರಿಸಿ, ಸ್ವಲ್ಪ ಸೆಂಟನ್ನು ಸಿಂಪಡಿಸಿಕೊಂಡಳು. ಅಂದು ಸಂಜೆ ತರಗತಿ ಮುಗಿದು ಮನೆಗೆ ಹೊರಟ ಟೆಡ್ಡಿ ಟೀಚರ್ ಬಳಿ ಬಂದು "ಟೀಚರ್ ನೀವು ನನ್ನ ಅಮ್ಮನಂತೆಯೇ ಪರಿಮಳ ಬರುತ್ತಿದ್ದೀರಿ" ಎಂದು ಹೇಳಿದವನೇ ಮನೆ ಕಡೆ ಓಡಿದ. ಮುಂದೆ ವರ್ಷದ ಕೊನೆಯಲ್ಲಿ ತನ್ನ ಪ್ರೀತಿಯ ಟೀಚರಿಗೆ ಒಂದು ಗೌನನ್ನು ತಂದು ಕೊಟ್ಟಿದ್ದ. ಅದು ಆತನ ಅಮ್ಮನ ಇಷ್ಟದ ಗೌನು.

    ಸುಮಾರು ಐದು ವರ್ಷದ ನಂತರ, ಮಿಸ್ಸೆಸ್ ಥಾಮ್ಸನ್ ಗೆ ಒಂದು ಪತ್ರ ಬಂದಿತ್ತು. ಅದನ್ನು ಟೆಡ್ಡಿ ಬರೆದಿದ್ದ. ಆತ ಮೆಟ್ರಿಕ್ ಪರೀಕ್ಷೆ ಪಾಸಾಗಿದ್ದ. ತರಗತಿಗೆ ಥರ್ಡ್ ಬಂದಿದ್ದ. ಪತ್ರ ಬಿಡಿಸಿದಾಗ " ಮ್ಯಾಮ್, ನಾನು ಮೆಟ್ರಿಕ್ ಪಾಸಾದೆ, ಕ್ಲಾಸ್ ಗೆ ಥರ್ಡ್. ಆದರೆ ಇದುವರೆಗೂ ನೀವೇ ನನ್ನ ಅತ್ಯುತ್ತಮ ಟೀಚರ್" ಎಂದು ಬರೆದಿದ್ದ. ಆಕೆಗೆ ಪತ್ರ ನೋಡಿ ಟೆಡ್ಡಿ ಕಣ್ಣಮುಂದೆ ಹಾದು ಹೋದ. ಆತನ ಸಾಧನೆ ಕೇಳಿ ಸಂತಸಪಟ್ಟಳು.

      ಮತ್ತೆ ನಾಲ್ಕು ವರ್ಷ ಕಳೆದಿತ್ತು. ಟೆಡ್ಡಿಯಿಂದ ಮತ್ತೊಂದು ಪತ್ರ ಬಂದಿತ್ತು. "ಮೇಡಂ, ನಾನು ಪದವಿಯಲ್ಲಿ ಉತ್ತಮ ಅಂಕಗಳೊಂದಿಗೆ ಪಾಸಾಗಿದ್ದೇನೆ. ಈಗಲೂ ನೀವೇ ನನ್ನ ಬದುಕಿನ ಅತ್ಯುತ್ತಮ ಟೀಚರ್" ಎಂದು ಬರೆದಿದ್ದ. ಮತ್ತೊಮ್ಮೆ ಆಕೆಯ ಕಣ್ಣುಗಳು ತುಂಬಿಬಂದವು. ಮತ್ತೆ ನಾಲ್ಕು ವರ್ಷ ಕಳೆದಂತೆ ಮಿಸ್ಸೆಸ್ ಥಾಮ್ಸನ್ ಗೆ ಮತ್ತೊಂದು ಪತ್ರ ಟೆಡ್ಡಿಯಿಂದ ಬಂದಿತ್ತು. "ಮೇಡಂ, ನಾನು ಪಿಹೆಚ್ ಡಿ ಪೂರೈಸಿದ್ದೇನೆ. ಆದರೆ ನನ್ನ ಬದುಕಿನ ಅತ್ಯುತ್ತಮ ಟೀಚರ್ ಈಗಲೂ ನೀವೇ" ಎಂದು ಬರೆದಿದ್ದ. ಇದು ಆಕೆಯ ಜೀವನದ ಸಾರ್ಥಕ ಕ್ಷಣವಾಗಿತ್ತು.

       ಅಂದು ಮಿಸ್ಸೆಸ್ ಥಾಮ್ಸನ್ ಗೆ ಆಮಂತ್ರಣ ಪತ್ರವೊಂದು ಬಂದಿತ್ತು. ಅದು ಟೆಡ್ಡಿಯ ಮದುವೆಯ ಆಮಂತ್ರಣ. ಅದರಲ್ಲೊಂದು ಪತ್ರ ಬರೆದಿದ್ದ."ಮೇಡಂ, ನನ್ನ ಅಪ್ಪ ತೀರಿಕೊಂಡರು. ಈಗ ನನಗೆ ನನ್ನವರು ಅಂತ ಯಾರೂ ಇಲ್ಲ. ನನ್ನ ಮದುವೆಗೆ ಬಂದು ಅಮ್ಮನ ಸ್ಥಾನ ನೀವು ತುಂಬಬೇಕು. ನಿಮಗಾಗಿ ಕಾಯುತ್ತಿರುತ್ತೇನೆ."

      ಈ ದಿನ ಟೆಡ್ಡಿಯ ಮದುವೆ. ಟೆಡ್ಡಿ ಮದುವೆಗೆ ಮಿಸ್ಸೆಸ್ ಥಾಮ್ಸನ್ ಹೊರಟಿದ್ದಾರೆ. ಟೆಡ್ಡಿ ಕೊಟ್ಟಿದ್ದ, ಆತನ ಅಮ್ಮನ ಗೌನನ್ನು ಆಕೆ ಹಾಗೆಯೇ ತೆಗೆದಿಟ್ಟಿದ್ದಳು. ಇಂದು ಅದೇ ಗೌನನ್ನು ಆಕೆ ಧರಿಸುತ್ತಾಳೆ. ಕೈಗೆ ಟೆಡ್ಡಿ ಉಡುಗೊರೆ ಕೊಟ್ಟಿದ್ದ ಬ್ರೇಸ್ಲೆಟ್ ಧರಿಸುತ್ತಾಳೆ. ಹೊರಡುವಾಗ ಟೆಡ್ಡಿ ಕೊಟ್ಟಿದ್ದ ಸೆಂಟನ್ನು ಹಾಕಲು ಮರೆಯಲಿಲ್ಲ. 

      ಮಿಸ್ಸೆಸ್ ಥಾಮ್ಸನ್ ಮದುವೆ ಹಾಲ್ ತಲುಪುತ್ತಾಳೆ. ಆಕೆಯನ್ನು ಸ್ವೀಕರಿಸಲು ಕೆಲವರನ್ನು ಆತ ಮೊದಲೇ ನಿಲ್ಲಿಸಿದ್ದ. ಅವರು ಪೂರ್ಣ ಗೌರವದೊಂದಿಗೆ ಆಕೆಯನ್ನು ಹಾಲ್ ಮುಂಭಾಗಕ್ಕೆ ಕರೆದುಕೊಂಡು ಬರುತ್ತಾರೆ. ಪೂರ್ತಿ ಭರ್ತಿಯಾದ ಹಾಲ್ ನ ಮುಂಭಾಗದಲ್ಲಿ ಕೇವಲ ಒಂದು ಕುರ್ಚಿ ಮಾತ್ರ ಖಾಲಿಯಿತ್ತು. ಆಶ್ಚರ್ಯವೆಂದರೆ ಅದರಲ್ಲಿ "ಅಮ್ಮನಿಗಾಗಿ" ಎಂದು ಸ್ಟಿಕ್ಕರ್ ಅಂಟಿಸಲಾಗಿತ್ತು. ಒಬ್ಬ ಶಿಕ್ಷಕನಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದು ಇರಲಾರದು.

     ಟೆಡ್ಡಿ ಮಹೂರ್ತ ಮೀರುತ್ತಿದ್ದರೂ, ಮಿಸ್ಸೆಸ್ ಥಾಮ್ಸನ್ ಬಾರದೆ ಮದುವೆ ಮಂಟಪಕ್ಕೆ ಬಂದಿರಲಿಲ್ಲ. ಟೀಚರ್ ಬರುತ್ತಿದ್ದಂತೆ, ವೇದಿಕೆಗೆ ಬಂದ ಮದುಮಗ ಟೆಡ್ಡಿ, ವೇದಿಕೆಯಿಂದ ಇಳಿದು ಆಕೆಯ ಬಳಿ ಬಂದು, ಅಪ್ಪಿಕೊಳ್ಳುತ್ತಾನೆ. ಅದೊಂದು ಅದ್ಭುತ ಹಾಗೂ ರೋಮಾಂಚನ ಕ್ಷಣ. ಆಕೆ ಹಾಕಿದ್ದ ಸೆಂಟ್ ನ ಪರಿಮಳ, ಧರಿಸಿದ್ದ ಗೌನ್ ಕಂಡು, ಆತನಿಗೆ ಬಾಲ್ಯದಲ್ಲಿ ಕಳೆದು ಹೋದ ಅಮ್ಮನೇ ಮತ್ತೆ ಬಂದಂತೆ ಭಾಸವಾಯಿತು. ಆ ಕ್ಷಣ ಅವರಿಬ್ಬರು ಮಾತ್ರವಲ್ಲದೆ ಅಲ್ಲಿ ನೆರೆದಿದ್ದ ಪ್ರತಿಯೊಬ್ಬರ ಕಣ್ಣುಗಳೂ ತೇವಗೊಂಡವು. ಸೇರಿದ್ದ ಎಲ್ಲರೂ ಎದ್ದು ನಿಂತು ದೀರ್ಘ ಕರತಾಡನಗೈದರು. 

     ಟೆಡ್ಡಿ, ಆಕೆಯ ಕೈ ಹಿಡಿದು ವೇದಿಕೆಯ ಮೇಲೆ ಕರೆದುಕೊಂಡು ಹೋದ. ನನ್ನ ಅಮ್ಮನಾಗಿ ನನ್ನ ಮದುವೆ ಕಾರ್ಯ ನಡೆಸಿಕೊಡುವಂತೆ ಬೇಡಿಕೊಂಡ. ಮದುವೆ ಕಾರ್ಯ ಮುಗಿಸಿ, ಆಕೆಯಿಂದ ಆಶೀರ್ವಾದ ಪಡೆದು, ಆಕೆಯನ್ನು ಕಣ್ಣೀರಿನೊಂದಿಗೆ ಬೀಳ್ಕೊಟ್ಟ. ಭಾರವಾದ ಹೃದಯದೊಂದಿಗೆ ಮಿಸ್ಸೆಸ್ ಥಾಮ್ಸನ್ ಅಲ್ಲಿಂದ ಬೀಳ್ಕೊಟ್ಟಳು. ಇಂದು ಜಗತ್ತಿನ ಅತ್ಯಂತ ಧನ್ಯಳು ಆಕೆಯಾಗಿದ್ದಳು.
...................... ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************
Ads on article

Advertise in articles 1

advertising articles 2

Advertise under the article