-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 79

ಸ್ಫೂರ್ತಿಯ ಮಾತುಗಳು : ಸಂಚಿಕೆ - 79

ಸ್ಫೂರ್ತಿಯ ಮಾತುಗಳು : ಸಂಚಿಕೆ - 79
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 


    ಮಕ್ಕಳ ಜಗಲಿಯ ಎಲ್ಲಾ ಶಿಕ್ಷಕ ಬಂಧುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು
                
               
      ಶಿಕ್ಷಕರು ರಾಷ್ಟ್ರದ ಭಾವೀ ಸಂಪನ್ಮೂಲಗಳಿಗೆ ಜ್ಞಾನ ಶಕ್ತಿ ನೀಡಿ, ಅವರ ಭಾವನೆಗಳನ್ನು ಅರಳಿಸಿ, ಶಿಸ್ತಿನ ಪ್ರಜೆಗಳನ್ನಾಗಿ ರೂಪಾಂತರಿಸುವ ಮಹಾ ಚೇತನಗಳೆಂದು ಗೌರಾವಾದರಗಳಿಗೆ ಪಾತ್ರರಾಗಿದ್ದಾರೆ. ಶಿಕ್ಷಕರು ಎಂದಿಗೂ ಮಾಜಿಯಾಗದ, ನಿರಂತರ ಚಲಾವಣೆಯಲ್ಲೇ ಉಳಿಯುವ ಅತ್ಯಧಿಕ ಮೌಲ್ಯವುಳ್ಳ ಹೊಳೆಯುವ ನಾಣ್ಯ ಎಂಬ ಅರಿವು ಭಾರತೀಯ ಸಮಾಜದಲ್ಲಿದೆ. ಇದರಿಂದಾಗಿ ಗುರುವಿನ ಉತ್ತರದಾಯಿತ್ವ ಹಿರಿದು. ಶಿಕ್ಷಕನೊಬ್ಬ ಜಾರಿದರೆ ಸಮಾಜವೂ ಜಾರಿ ಪ್ರಪಾತ ಸೇರುತ್ತದೆಂಬ ಜಾಗೃತಿ ಪ್ರತಿಯೊಬ್ಬ ಬೋಧಕನಲ್ಲಿರಬೇಕು.
       ಬೋಧನೆಯ ಪರಿಣಾಮವೇ ವಿದ್ಯಾರ್ಥಿಯ ಬದುಕಿನ ಹಲವು ಸಾಧನೆಗಳಿಗೆ ತಳಪಾಯ. ಶಿಕ್ಷಕರೊಳಗಿನ ಸಾಮರಸ್ಯವು ಸಮಾಜದ ಸಾಮರಸ್ಯಕ್ಕೆ ಮೂಲ. ಪರಸ್ಪರ ದೂಷಣೆ, ಆರೋಪ ಪ್ರತ್ಯಾರೋಪ, ಕಾಲೆಳೆಯುವಿಕೆ ಶಿಕ್ಷಕ ಸಮುದಾಯದೊಳಗೆ ನುಸುಳಿದರೆ ಸಮಾಜದಲ್ಲಿಯೂ ಅದು ಪ್ರತಿಫಲನವಾಗುತ್ತದೆ. ವಿದ್ಯಾರ್ಥಿಗಳು ನೋಡಿದುದನ್ನೇ ಅನುಸರಿಸುತ್ತಾರೆ. ವ್ಯಕ್ತಿಗತ, ಕೌಟುಂಬಿಕ, ಸಾಮುದಾಯಿಕ, ಧಾರ್ಮಿಕ ಮುಂತಾದ ಶಿಕ್ಷಕರ ಯಾವುದೇ ಸಮಸ್ಯೆಗಳು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಬಾರದು.
      ಜ್ಞಾನಪಿಪಾಸುಗಳಾಗಿ, ಸೇವಾತತ್ಪರರಾಗಿ, ಸಮಾಜಹಿತಕಾರಿಗಳಾಗಿ ಮಕ್ಕಳನ್ನು ಭಾವನಾತ್ಮಕವಾಗಿ ಬೆಳೆಸುವ ಶಿಕ್ಷಕರು ಸದಾ ವಂದ್ಯರು. ಸಮಾಜವು ಹಾಳಾದಾಗ ಎಲ್ಲರ ದೃಷ್ಟಿ ಶಿಕ್ಷಕರತ್ತ ಹೊರಳುತ್ತದೆ. ಸಮಯದ ಪಾಲನೆ, ಸಿದ್ಧತೆಗಳು, ನಿರಂತರ ಶೈಕ್ಷಣಿಕ ಮತ್ತು ಸಹ ಶೈಕ್ಷಣಿಕ ಚಟುವಟಿಕೆಗಳು ನಡೆದರೆ ವಿದ್ಯಾರ್ಥಿಗಳು ಊರ್ಧ್ವಮುಖರಾಗುತ್ತಾರೆ, ಧೀರರೂ ಸಂಯಮಿಗಳೂ ಆಗುತ್ತಾರೆ. ಸಮಾಜ ಅಪೇಕ್ಷಿಸಿದಂತೆ ವಿದ್ಯಾರ್ಥಿಗಳನ್ನು ಬೆಳೆಸುವ ಕರ್ತೃತ್ವ ಶಿಕ್ಷಕರಲ್ಲಿಬೇಕು.
      ಶಿಕ್ಷಕರ ದಿನಾಚರಣೆಯೆಂಬುದು ಶಿಕ್ಷಕರ ಮಹತ್ವವನ್ನು ಬಿಂಬಿಸುವ ಕಾರ್ಯಕ್ರಮ. ವೈದ್ಯರ ದಿನ, ಇಂಜಿನಿಯರ್ ದಿನ ಮುಂತಾಗಿ ವಿವಿಧ ವೃತ್ತಿಪರ ದಿನಾಚರಣೆಗಳಿದ್ದರೂ ಅವು ಸಾಂಕೇತಿಕ. ಶಿಕ್ಷಕರ ದಿನದಂದು ರಾಜ್ಯ ಮತ್ತು ಕೇಂದ್ರ ಸರಕಾರಗಳು ದೇಶಾದ್ಯಂತ ನೂರಾರು ಶಿಕ್ಷಕರಿಗೆ ಪ್ರಶಸ್ತಿಗಳನ್ನು ನೀಡಿ ಅವರ ಸೇವಾ ಗರಿಮೆಯನ್ನು ಗೌರವಿಸುತ್ತದೆ. ಶಿಕ್ಷಕರ ಸೇವಾ ಜ್ಯೇಷ್ಠತೆ ಮತ್ತು ಶ್ರೇಷ್ಠತೆಯ ಕಾರಣಕ್ಕಾಗಿ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಗುತ್ತದೆ. ಪ್ರಶಸ್ತಿಗಳೂ ಉನ್ನತ ಜವಾಬ್ದಾರಿಗಳನ್ನು ಸಂಕೇತಿಸುತ್ತವೆ.
      ಕೆಲವು ಬೋಧಕರಿಗೆ ಬೋಧನಾ ಹಂತದಲ್ಲಿ ಸಣ್ಣ ಪುಟ್ಟ ಸಂದೇಹಗಳು ಉದ್ಭವಿಸುವುದು ಸಹಜ. ಶಿಕ್ಷಕರೊಬ್ಬರು ಸವರ್ಣ ದೀರ್ಘ ಸಂಧಿಗೆ ಸಂಬಂಧಿಸಿ ನನಗೊಂದು ಸಂದೇಹ ಕಳುಹಿಸಿದ್ದರು. ಅವರು ಮಹಾಮಾರಿಯನ್ನು ಮಹಾ+ ಅಮಾರಿ ಎಂದು ವಿಂಗಡಿಸಿದರೆ ಅದು ಸಮಂಜಸವೇ? ಸವರ್ಣ ದೀರ್ಘ ಸಂಧಿಯ ಪ್ರಕ್ರಿಯೆ ಇಲ್ಲಿ ನಡೆಯುವುದೇ ಎಂದು ಕೇಳಿದ್ದರು. ಬೋಧಕರೊಬ್ಬರು ಈ ಶಿಕ್ಷಕರ ಮಗುವಿಗೆ ಇದೇ ಉದಾಹರಣೆ ನೀಡಿದ ಕಾರಣಕ್ಕಾಗಿ ಅವರಿಗೆ ಈ ಸಂದೇಹ ಮೂಡಿದೆ. ಇನ್ನೊಬ್ಬ ಪಾಲಕಿ ಸ್ವಾತಂತ್ರ್ಯ ಈ ಪದದ ವಿರುದ್ದಾರ್ಥಕವಾಗಿ “ಪರಾತಾಂತ್ರ್ಯ” ಎಂದು ಮಕ್ಕಳಿಗೆ ತಿಳಿಸಿದ್ದಾರೆ. ಸರಿಯಾದ ಪದವೇನು ಅಂತ ನನಗೆ ಕರೆ ಮಾಡಿದ್ದಾರೆ. ಸಣ್ಣ ತರಗತಿಗಳಲ್ಲಿ “ಕಾಗೆಯ ಬಾಯಾರಿಕೆ ಹಿಂಗಿತು” ಎಂದು ಕಥೆ ವಿವರಿಸಿದರೆ ಆ ಮಕ್ಕಳು ಇಂಗುವರೇ ಹೊರತು ಹಿಗ್ಗುವುದಿಲ್ಲ. ಇಂತಹ ಗೊಂದಲಗಳಿಗೆ ತರಗತಿ ಬೋಧನೆ ಅವಕಾಶ ನೀಡಲೇ ಬಾರದು.
     ಹುಟ್ಟಿನಿಂದ ಯಾರೂ ಜ್ಞಾನಿಗಳಲ್ಲ. ಅದು ಶ್ರಮದ ಗಳಿಕೆ. ಕಲಿಕೆ ನಿರಂತರವೆಂಬ ಮಾತು ಶಿಕ್ಷಕರಿಗೂ ಹೊರತಲ್ಲ. ಶಿಕ್ಷಕರಾಗಿ ಉದ್ಯೋಗಕ್ಕೆ ಸೇರಿದ ಮೇಲೆ ಅವರು ಇತರರಲ್ಲಿ ವಿಮರ್ಶಿಸುವುದು ಅಥವಾ ಸಂಶಯಗಳನ್ನು ಪರಿಹರಿಸುವುದು ಅವರ ಗೌರವವನ್ನು ಹೆಚ್ಚಿಸುತ್ತದೆಯೇ ಹೊರತು ಗೌಣಗೊಳಿಸುವುದಿಲ್ಲ. ಬೋಧನೆಯಲ್ಲಿ ನೀಡಿದ ತಪ್ಪು ಮಾಹಿತಿಗಳು ಶಿಕ್ಷಕರ ಬಗ್ಗೆ ತಪ್ಪು ಸಂದೇಶವನ್ನು ಹರಡುತ್ತವೆ. ಸಾಕಷ್ಟು ತಯಾರಿ ಮಾಡಿ ತರಗತಿಗೆ ಹೋಗದ ಶಿಕ್ಷಕ ಅಥವಾ ಶಿಕ್ಷಕಿಯರಿಂದ ಹೆಚ್ಚು ಹೆಚ್ಚು ಅಯಾಚಿತ ಮತ್ತು ಅನುದ್ದೇಶಿತ ತಪ್ಪುಗಳೇ ಘಟಿಸುತ್ತವೆ. ತಮ್ಮನ್ನು ತಾವು ತಿದ್ದಿ ಬೆಳೆಸದೆ ಇರುವ ಶಿಕ್ಷಕ ಆ ವೃತ್ತಿಗೆ ಅನರ್ಹನೇ ಆಗಿರುತ್ತಾನೆ ಎಂಬ ಪ್ರಜ್ಞೆ ಅಗತ್ಯ. ಓದದವರು, ಆಲಿಸದವರು ಬೋಧನೆಗೆ ಅಸಮರ್ಥರು ಎಂಬುದು ಕಟು ಸತ್ಯ.
    “ನಾನು ಹೇಳುವ ಪದಗಳನ್ನು ಯಾರಾದರೂ ಕರಿ ಹಲಗೆಯಲ್ಲಿ ಬರೆಯಿರಿ” ಎಂದು ಕಮ್ಮಟವೊಂದರಲ್ಲಿ ಪಾಲ್ಗೊಂಡ ಶಿಕ್ಷಕರಿಗೆ ವಿನಂತಿಸಿದಾಗ ಯಾರೂ ಮುಂದೆ ಬರಲೇ ಇಲ್ಲ. ಅವರ ಹಿಂಜರಿಕೆಗೆ ಕಾರಣ ಸ್ಪಷ್ಟವಿದೆ. ಎಲ್ಲಿ ತಪ್ಪುವೆನೋ ಎಂಬ ಅಳುಕು ಅವರೆಲ್ಲರದು. ನಮ್ಮ ಅಳುಕು, ಭಯ ಅಥವಾ ಸಂಕೋಚ ನಮ್ಮನ್ನು ಅಜ್ಞಾನದ ಕೂಪಕ್ಕೆ ತಳ್ಳುವುದೇ ಹೊರತು ಸುಜ್ಞಾನದ ಶೀಖರವನ್ನೇರಿಸದು. ತಪ್ಪಾದರೆ ತಿದ್ದಿದರಾಯಿತು ಎಂಬ ಸರಳತೆ ಪ್ರತಿಯೊಬ್ಬರಲ್ಲೂ ಇರಬೇಕು. ಇಂತಹ ವೇದಿಕೆಗಳು ಪರಸ್ಪರರ ‘ತಪ್ಪು’ಗಳನ್ನು ‘ಒಪ್ಪು’ ಗೊಳಿಸಲು ಇರುವ ಸುಂದರ ಅವಕಾಶ ಎಂದರಿಯುವ ಶಿಕ್ಷಕರು ಧನ್ಯರು ಮತ್ತು ಗೌರವಾರ್ಹರು. ಸಮಾಜವು ನೀಡುತ್ತಿರುವ ಗೌರವಕ್ಕೆ ಪಾತ್ರತ್ವ ಒದಗಲು ಸರಿ ತಪ್ಪುಗಳ ಅರಿವು, ತಪ್ಪುಗಳನ್ನು ಅಳಿಸುವ ಸತತ ಶ್ರಮ ಇರಬೇಕು. 
      ಬಹಳಷ್ಟು ಬೋಧಕರು ತಮ್ಮ ವಿದ್ಯಾರ್ಥಿಗಳ ವಿಕಾಸಕ್ಕಾಗಿ ಕಠಿಣ ಪರಿಶ್ರಮ ನೀಡುತ್ತಿದ್ದಾರೆ, ಕೆಲವರ ಜಳ್ಳುತನವು ಶಿಕ್ಷಕ ಸಮುದಾಯಕ್ಕೆ ಅಗೌರವವನ್ನು ತರಲು ಕಾರಣವಾಗುತ್ತಿದೆ. ಶಿಕ್ಷಕರ ದಿನದಂದು ನಾವೆಲ್ಲರೂ ಗೌರವವನ್ನು ಕಾಪಿಡುವ ಮತ್ತು ಜ್ಞಾನ ಸಮೃದ್ಧಿಯ ಮೂಲಕ ಉನ್ನತಿಯತ್ತ ಸಾಗುವ ಸಂಕಲ್ಪ ಮಾಡೋಣ. ನಮಸ್ಕಾರ. 
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 



Ads on article

Advertise in articles 1

advertising articles 2

Advertise under the article