-->
ನನಗೆ ಸ್ಫೂರ್ತಿಯಾಗಿರುವ ಶಿಕ್ಷಕರು - ಹಿರಿಯರ ಬರಹಗಳು : ಸಂಚಿಕೆ - 01

ನನಗೆ ಸ್ಫೂರ್ತಿಯಾಗಿರುವ ಶಿಕ್ಷಕರು - ಹಿರಿಯರ ಬರಹಗಳು : ಸಂಚಿಕೆ - 01

ಶಿಕ್ಷಕರ ದಿನಾಚರಣೆಯ ವಿಶೇಷ - 2023
ನನಗೆ ಸ್ಫೂರ್ತಿಯಾಗಿರುವ ಶಿಕ್ಷಕರು
ಹಿರಿಯರ ಬರಹಗಳು : ಸಂಚಿಕೆ - 01


"ಕಲ್ಲುಕಲ್ಲೆಂಬುವಿರಿ,
ಕಲ್ಲೋಳಿಪ್ಪುದೆ ದೈವ?
ಕಲ್ಲಲ್ಲಿ ಕಳೆಯ ನಿಲಿಸಿದ,
ಗುರುವಿನ ಸೊಲ್ಲಲ್ಲೇ ದೈವ, ಸರ್ವಜ್ಞ."
          ಎಂಬ ಸರ್ವಜ್ಞರ ನುಡಿಯಂತೆ, ಒಬ್ಬ ಗುರು ಸಾಮಾನ್ಯ ಕಲ್ಲಿನಂತಿರುವ ಮಗುವನ್ನು, ಬೋಧನೆ ಎಂಬ ಉಳಿಯಿಂದ ಕೆತ್ತಿ, ತನ್ನ ಅಪಾರವಾದ ಜ್ಞಾನ, ಸಾಮರ್ಥ್ಯ ಹಾಗೂ ಪ್ರೀತಿಯೆಂಬ ಆಯುಧದಿಂದ ಹದಗೊಳಿಸಿ ಆ ಮಗುವನ್ನು ಒಂದು ಸುಂದರವಾದ ಶಿಲೆಯನ್ನಾಗಿ ರೂಪಗೊಳಿಸುತ್ತಾನೆ ಹಾಗೂ ಆ ಶಿಲೆಗೆ ಜೀವ ತುಂಬುತ್ತಾನೆ.
        ಇಂತಹ ಶ್ರೇಷ್ಠವಾದ ಸ್ಥಾನದಲ್ಲಿ ನಾನು ನನ್ನ ನೆಚ್ಚಿನ ಗುರುಗಳಾದ ಶ್ರೀ ಬಿಜು ಕೆ ಜೆ ಇವರನ್ನು ಸ್ಮರಿಸಲು ಇಚ್ಚಿಸುತ್ತಿದ್ದೇನೆ. ಗುರುಗಳ ಬಗ್ಗೆ ಅನಿಸಿಕೆ ಬರೆಯಲು ಸಿಕ್ಕಿದ್ದು ನನ್ನ ಪಾಲಿನ ಸುವರ್ಣಾವಕಾಶ.
      ಮೊದಲನೆಯದಾಗಿ "ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಸರ್" ಜೀವನದಲ್ಲಿ ಯಾವುದೇ ಒಂದು ನಿರ್ದಿಷ್ಟ ಗುರಿ ಇಲ್ಲದೆ, ನನ್ನ ಸಾಮರ್ಥ್ಯವೇನೆಂಬ ಅರಿವೇ ಇಲ್ಲದೆ, ಎಲ್ಲರೊಳು ಒಬ್ಬಳಾಗಿ ನಾನು ತರಗತಿಯಲ್ಲಿದ್ದೆ. ಆದರೆ ಇಂದು ನನ್ನ ಹೆಸರು ನಾಲ್ವರಿಗೆ ತಿಳಿದಿದೆ ಎಂದರೆ ಅದಕ್ಕೆ ಕಾರಣ ನನ್ನ ಗುರುಗಳು ಹಾಗೂ ಬೆಥನಿ ವಿದ್ಯಾಸಂಸ್ಥೆ. ವಿದ್ಯಾರ್ಥಿಗಳ ಬಾಳಿಗೆ ಸ್ಫೂರ್ತಿಯಾಗಿ, ಕತ್ತಲಲ್ಲಿ ಬೆಳಕಾಗಿ ನಿಂತವರು ನನ್ನ ನೆಚ್ಚಿನ ಗುರುಗಳು. ಹಲವಾರು ಕಷ್ಟಗಳನ್ನು ಅನುಭವಿಸಿ ದಿಟ್ಟತನದಿಂದ ಎದುರಿಸಿ ಮುಂದೆ ಬಂದ ಸರ್ ನ ಬದುಕು ನಮಗೆಲ್ಲಾ ಸ್ಪೂರ್ತಿ. ಸದಾ ಹಸನ್ಮುಖಿ, ಸಹೃದಯಿ, ಸಕಾರಾತ್ಮಕ ಚಿಂತಕ, ಸಹಕಾರಿ ಹೀಗೆ ಹಲವಾರು ಮೌಲ್ಯಗಳನ್ನು ಹೊಂದಿದ ಶ್ರೇಷ್ಠ ವ್ಯಕ್ತಿತ್ವ ಗುರುಗಳದು. ಅಂತೆಯೇ ಸರ್ ತಮ್ಮ ವಿದ್ಯಾರ್ಥಿಗಳಿಗೆ ಪುಸ್ತಕದ ಬದನೆಕಾಯಿಯ ಹೊರತಾಗಿ ಜೀವನ ಪಾಠ ಹಾಗೂ ಮೌಲ್ಯಗಳನ್ನು ಮನವರಿಕೆ ಮಾಡಿಸುತ್ತಾರೆ. ಸರ್ ತಮ್ಮ ವೃತ್ತಿ ಜೀವನವು ಸುಗಮವಾಗಿ ಸಾಗಲಿ ಎಂದು ಈ ಮೂಲಕ ಹಾರೈಸುತ್ತಿದ್ದೇನೆ.....
................................................... ದೀಪ್ತಿ ಬಿ
ದ್ವಿತೀಯ ಬಿ ಎ
ಸಂತ ಆಗ್ನೇಸ್ ಸ್ವಾಯತ್ತ ಕಾಲೇಜ
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
******************************************


       

     "ಗುರುವಿಂದ ಬಂಧುಗಳು ಗುರುವಿಂದ ಪರದೈವ ಗುರುವಿಂದ ನಾಗುವುದು ಪುಣ್ಯ ಲೋಕಕ್ಕೆ ಗುರುವಿಂದ ಮುಕ್ತಿ" ಸರ್ವಜ್ಞನ ಮಾತಿನಂತೆ ಶಿಕ್ಷಕರ ದಿನವನ್ನು ನೆನೆಯುತ್ತಾ ನಾನು ಒಬ್ಬ ಶಿಕ್ಷಕಿಯಾಗಿ ನನ್ನ ಬಾಲ್ಯದ ಜೀವನಕ್ಕೆ ಸ್ಫೂರ್ತಿಯಾಗಿರುವ ನನ್ನ ಆ ಶಿಕ್ಷಕಿ ಎಲ್ಲಿರುವರೋ ಗೊತ್ತಿಲ್ಲ ಮನದಲ್ಲಿ ಅವರಿಗೆ ಸಾಷ್ಟಾಂಗ ಪ್ರಣಾಮ ಸಲ್ಲಿಸುತ್ತಾ ಬಾಲ್ಯವನ್ನು ಮೆಲುಕು ಹಾಕುತ್ತಿದ್ದೇನೆ.
      ನಾನಾಗ ಉದ್ದ ಜಡೆಯ ಹುಡುಗಿ ಆದರೆ ಜಡೆಯನ್ನು ಕಟ್ಟಲಾಗದೆ ತುರುಬು ಹಾಕಿಕೊಂಡು ಶಾಲೆಗೆ ಹೋಗಿದ್ದೆ. ಮನೆಯಲ್ಲಿ ಅಮ್ಮನಿಗೆ ತೀವ್ರ ಅನಾರೋಗ್ಯ. ಪಾಪ ಅಪ್ಪ ಏನು ಮಾಡಿಯಾರು. ತಮಗೆ ಗೊತ್ತಿದ್ದ ಹಾಗೆ ನನ್ನ ಮತ್ತು ತಂಗಿಯ ಕೂದಲು ಕಟ್ಟಿ ಕಳಿಸುವರು. ನಾವಿಬ್ಬರು ನಡೆದುಕೊಂಡು ಶಾಲೆಗೆ ಹೋಗಬೇಕು. ನಾನಾಗ ಐದನೇ ತರಗತಿಯಲ್ಲಿದ್ದೆ. ನಾನು ಶಾಲೆ ಮುಟ್ಟಿದಾಗ ಆ ನನ್ನ ಶಿಕ್ಷಕಿ ನನ್ನನ್ನು ಕರೆದು ಮಾತೆಯಂತೆ ನನ್ನ ಕೂದಲನ್ನು ಸರಿಯಾಗಿ ಕಟ್ಟಿ, ತರಗತಿಗೆ ಕಳುಹಿಸಿದರು. ಶಾಲೆಯಲ್ಲಿ ಮಕ್ಕಳ ಹುಟ್ಟು ಹಬ್ಬವಿದ್ದಾಗ ಅವರಿಗೆ ನೀಡಿದ ಉಂಡೆಯನ್ನು ನನಗೆ ನೀಡಿ ತಿನ್ನು ಎಂದು ನಗೆ ಬೀರಿದ ಮಾತೆಯ ಹೃದಯವದು. ನನಗೆ ಓದಲು ಬಾರದಿರುವ ಸಂದರ್ಭದಲ್ಲಿ ನನಗೆ ಓದಲು ಬರೆಯಲು ಸ್ಪೂರ್ತಿ ನೀಡಿದ ಗುರು ನನ್ನ ಟೀಚರ್. ಒಂದು ದಿನ ನನಗೆ 7ನೇ ತರಗತಿಯ ಶುಲ್ಕ ಕಟ್ಟಲಾಗದಿದ್ದಾಗ ನನ್ನ ಶುಲ್ಕ ಕಟ್ಟಿದಾಗ ನನ್ನ ಟೀಚರನ್ನು ನೋಡಿ ಕಣ್ಣೀರು ಸುರಿಸಿದ್ದೆ. ಅವರು ಯಾವಾಗಲೂ ಹೇಳುತ್ತಿದ್ದರು... ಲಲಿತ ನೀನು ಸಹ ಟೀಚರ್ ಆಗಬೇಕೆಂದು. ಎತ್ತಣ ಮಾಮರ ಎತ್ತಣ ಕೋಗಿಲೆ ಎಂಬಂತೆ ನನ್ನ ಮತ್ತು ನನ್ನ ಟೀಚರ್ ಅನುಬಂಧ. ಅವರ ಮಾತಿನಿಂದಲೇ ನಾನು ಇಂದು ಶಿಕ್ಷಕಿಯಾಗಿ , ಆ ನನ್ನ ಶಿಕ್ಷಕಿಯ ನಗುವನ್ನು ಈ ಮುದ್ದು ಮಕ್ಕಳಲ್ಲಿ ಕಾಣುತ್ತಿದ್ದೇನೆ ಎಂದು ಹೇಳಲು ನನ್ನ ಕಣ್ಣು ಮಂಜಾಗಿ ಗದ್ಗದಿತಳಾಗಿದ್ದೇನೆ.
....................................................... ಲಲಿತ  
ಸಹ ಶಿಕ್ಷಕಿ
MKET'S LKEM ಸ್ಕೂಲ್
ಹರಿಹರ, ದಾವಣಗೆರೆ 
******************************************       "Smile Costs Nothing, But Buys Everything" ಇದನ್ನು ನನ್ನ ಬದುಕಿನಲ್ಲಿ ಪ್ರೀತಿಯ ಉಷಾ ಮೇಡಮ್ ರಿಂದ ಅರಿತಿದ್ದೇನೆ. ಇವರು ನನಗೆ ಪದವಿ ಹಂತದಲ್ಲಿ ಕಾರ್ಕಳ ಎಸ್.ವಿ.ಟಿ. ಮಹಿಳಾ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿದ್ದರು. ಸದಾ ನಗುಮೊಗದ ಲವಲವಿಕೆಯ ವ್ಯಕ್ತಿತ್ವದ ಇವರು ವಿದ್ಯಾರ್ಥಿಗಳಿಗೆಲ್ಲ ಅಚ್ಚುಮೆಚ್ಚಿನವರಾಗಿದ್ದರು. ಇವರ ಪಾಠದ ಅವಧಿ ಎಂದರೆ ನಾವೆಲ್ಲ ಕಾಯುವಂತೆ ರಸವತ್ತಾಗಿಯೂ, ಚೆನ್ನಾಗಿ ಅರ್ಥವಾಗುವಂತೆಯೂ ಇರುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲ ವಿದ್ಯಾರ್ಥಿಗಳ ಕಷ್ಟಸುಖಕ್ಕೆ ಸ್ಪಂದಿಸುತ್ತಿದ್ದರು. ನಮ್ಮ ಮಹಿಳಾ ಪದವಿ ಕಾಲೇಜಿನಲ್ಲಿ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿನಿಯರೇ ಹೆಚ್ಚಾಗಿದ್ದರು. ಕಾಲೇಜು ಫೀಸು ಕಟ್ಟಲು ಕಷ್ಟವಾದ ಸಂದರ್ಭ ಎಷ್ಟೋ ವಿದ್ಯಾರ್ಥಿನಿಯರಿಗೆ ಇವರು ಖಾಸಗಿ ಕಾಲೇಜಿನ ದುಡಿಮೆಯಲ್ಲಿ ತನ್ನ ಸ್ವಂತ ಅಲ್ಪ ಸಂಬಳದ ಹಣದಿಂದ ನೆರವಾಗಿರುವುದು ನಾನು ಬಲ್ಲೆ. ಕಾಲೇಜಿನ ವಿದ್ಯಾರ್ಥಿನಿಯರನ್ನು ಇವರು ಎಷ್ಟರಮಟ್ಟಿಗೆ ಮನೆಯ ಮಕ್ಕಳಂತೆ ಕಾಣುತ್ತಿದ್ದರೆಂದರೆ ಕಾಲೇಜ್ ಡೇ ದಿನ ತಮ್ಮ ಕುತ್ತಿಗೆಯಲ್ಲಿರುವ ಚಿನ್ನದ ನೆಕ್ಲೇಸನ್ನು ವಿದ್ಯಾರ್ಥಿ ನಾಯಕಿಯ ಕುತ್ತಿಗೆಗೆ ಹಾಕಿ ಸಂಭ್ರಮಿಸಿದ್ದನ್ನು ಕಣ್ಣಾರೆ ನೋಡಿದ್ದೇನೆ. ನಾನು ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿನಿಯಾಗಿದ್ದರೂ ಎಲ್ಲರೊಡನೆ ಬೆರೆಯುವ ಸ್ವಭಾವ ಹೊಂದಿರಲಿಲ್ಲ. ಇಂದು ನನ್ನಲ್ಲಿ ಎಲ್ಲರಲ್ಲಿ ಬೆರೆಯುವ ಗುಣ ಇದೆಯೆಂದಾದರೆ ಅದಕ್ಕೆ ಕಾರಣ ಇವರ ನೇತೃತ್ವದ ಎನ್.ಎಸ್.ಎಸ್. ಕ್ಯಾಂಪ್ ಗಳು.
     ಪದವಿ ಮುಕ್ತಾಯದ ಕೊನೆಯ ತರಗತಿಯಲ್ಲಿ ಇವರು ವಿದ್ಯಾರ್ಥಿನಿಯರಿಗೆಲ್ಲ ಮುಂದಿನ ಬದುಕಿಗೆ ಶುಭಹಾರೈಸಿ ತಾವೇ ಕಣ್ಣೀರಾದದ್ದು ಇನ್ನೂ ಕಣ್ಣಿಗೆ ಕಟ್ಟಿದಂತೆ ಇದೆ. ಎಲ್ಲರಿಗೂ ಬಯಸಿದಂತೆ ಬದುಕು ಸಿಗುವುದಿಲ್ಲ. ಯಾರಿಗೆ ಯಾವ ರೀತಿ ಬದುಕು ಸಿಗುತ್ತೋ ಹೇಳಲು ಬರದು. ಆದರೆ ಎಲ್ಲರೂ ಯಾವತ್ತೂ ಖುಷಿಯಾಗಿರಿ, ಏನೇ ಬಂದರೂ ಧೈರ್ಯವಾಗಿರಿ ಎಂಬ ಅರ್ಥದ ಮಾತುಗಳನ್ನು ಹೇಳುತ್ತ ಹೇಳುತ್ತ ಕಣ್ಣೀರಾಗಿದ್ದರು. ಇಷ್ಟರಮಟ್ಟಿಗೆ ಇವರು ನಮ್ಮನ್ನೆಲ್ಲ ಆಂತರ್ಯದಿಂದ ಪ್ರೀತಿಸುತ್ತಿದ್ದರು. ನಮ್ಮ ತರಗತಿಯಲ್ಲಿ ಮುಂಗೈಗಳಿಲ್ಲದೆ ಎರಡೂ ಅಂಗೈ ಜೋಡಿಸಿ ಬರೆಯುವ ಓರ್ವ ಪ್ರತಿಭಾನ್ವಿತ ವಿದ್ಯಾರ್ಥಿನಿಯಿದ್ದಳು. ಆ ವರ್ಷ ಕಾಲೇಜಿನ Best outgoing Student ಪ್ರಶಸ್ತಿ ಅವಳಿಗೆ ಸಿಗಲು ಮುಖ್ಯವಾಗಿ ಕಾರಣರಾಗಿ ನಮಗೆಲ್ಲ ಸಾಮಾಜಿಕ ಸ್ಪಂದನೆಯ ಮಾದರಿ ಪಂಕ್ತಿಯನ್ನು ಹಾಕಿ ಕೊಟ್ಟವರು ಇವರು.
      ಜೀವನದ ಏನೋ ಪರಿಸ್ಥಿತಿಯಿಂದ ಒಂದೆರೆಡು ದಿನಗಳಲ್ಲ. ಒಂದೆರೆಡು ತಿಂಗಳುಗಳ ಕಾಲ ಕಾಲೇಜಿನ ತರಗತಿಗಳಿಗೆ ಹಾಜರಾಗಲಾಗಿರಲಿಲ್ಲ. ಆ ಬಳಿಕ ಹೋದರೂ ಮೊದಲಿನ ಉತ್ಸಾಹವೂ, ಆತ್ಮವಿಶ್ವಾಸವೂ ಇರಲಿಲ್ಲ. ಈ ಸಂದರ್ಭ ನನ್ನಲ್ಲಿ ಮರಳಿ ಉತ್ಸಾಹ ಬರಲು ಕಾರಣರಾದವರು ನನ್ನ ಪ್ರೀತಿಯ ಉಷಾ ಮೇಡಂ. ಬಹಳ ತಾಳ್ಮೆಯಿಂದ ನನ್ನೆಲ್ಲ ನೋವು -ನಲಿವುಗಳಿಗೆ ಸ್ಪಂದಿಸಿ ಅಕ್ಕರೆಯ ಮಹಾಪೂರವನ್ನೇ ಹರಿಸಿ ಮೊದಲಿಗಿಂತ ದುಪ್ಪಟ್ಟು ಉತ್ಸಾಹವನ್ನು ಜೀವನದಲ್ಲಿ ತಂದರು. ಪಿ.ಯು.ಸಿ.ಯಲ್ಲಿ ತಾಲೂಕು ಮಟ್ಟಕ್ಕೆ ಪ್ರಥಮ ಸ್ಥಾನಿಯಾಗಿದ್ದರೂ ಅಂತಿಮ ವರ್ಷದ ಪದವಿಯಲ್ಲಿ ಬದುಕಿನ ಏರಿಳಿತಗಳಿಂದ ಕಲಿಕೆಯಲ್ಲಿ ಏಕಾಗ್ರತೆಯನ್ನೂ, ನನ್ನಿಷ್ಟದ ಗ್ರಂಥಾಲಯದ ಪುಸ್ತಕಗಳ ಓದಿನಲ್ಲೂ ಆಸಕ್ತಿಯನ್ನು ಕಳೆದುಕೊಂಡಿದ್ದ ನನ್ನಲ್ಲಿ ಮತ್ತೆ ಜೀವನೋತ್ಸಾಹ ತರಲು ಇವರು ಮಾಡುತ್ತಿದ್ದ ನನ್ನ ಮನೆಭೇಟಿಗೆ ಲೆಕ್ಕವೇ ಇಲ್ಲ. ನನ್ನ ಮುಖದಲ್ಲಿ ಖುಷಿ ಹೆಚ್ಚಬೇಕೆಂದು ಅವರು ಯಾವತ್ತೂ ಹಂಬಲಿಸುತ್ತಿದ್ದರೇ ವಿನಃ ಹೆಚ್ಚು ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತರಬೇಕು ಎನ್ನುವಂತಹ ಮಾತುಗಳನ್ನು ಯಾವತ್ತೂ ಆಡಿದ್ದೇ ಇಲ್ಲ. ಇವೆಲ್ಲವೂ ಶಿಕ್ಷಕಿಯಾಗಿ ಇಂದು ನನ್ನ ವಿದ್ಯಾರ್ಥಿಗಳಿಗೆ ಬದುಕಿನಲ್ಲಿ ಭರವಸೆ ತುಂಬುವಲ್ಲಿ ನಾನು ಯಾವ ರೀತಿ ಸ್ಪಂದಿಸಬೇಕು ಎನ್ನುವುದಕ್ಕೆ ಸ್ಫೂರ್ತಿಯಾಗಿದೆ. ನನ್ನ ಶಾಲಾಮಕ್ಕಳ ತೀವ್ರ ಅನಾರೋಗ್ಯದ ಸಂದರ್ಭ ಎಷ್ಟೋ ಬಾರಿ ನನಗೆ ಅಂದುಕೊಂಡಷ್ಟು ಮನೆಭೇಟಿ ಮಾಡಿ ಧೈರ್ಯ ತುಂಬಲು, ಅಕ್ಕರೆ ತೋರಲು ಸಾಧ್ಯವಾಗಿಲ್ಲ. ಇಂತಹ ಸಂದರ್ಭ ನನಗೆ ಪ್ರತಿ ಬಾರಿಯೂ ನನ್ನ ಪ್ರೀತಿಯ ಉಷಾ ಮೇಡಂ ನೆನಪಾಗುತ್ತಾರೆ. ಅವತ್ತು ನನ್ನೊಬ್ಬಳ ಮನೆಗೆ ಎಷ್ಟು ಬಾರಿ ಮೇಡಂ ಬಂದಿದ್ದರಲ್ಲ.. ಈ ಸಾಧ್ಯತೆಗೆ ಅವರಲ್ಲಿ ತಮ್ಮ ವಿದ್ಯಾರ್ಥಿಗಳ ಬಗ್ಗೆ ಎಷ್ಟೊಂದು ಕಾಳಜಿಯಿತ್ತು ಎಂದು ಕೃತಜ್ಞತೆಯಿಂದ ಮನ ನೆನೆಯುತ್ತದೆ. ಕೆಲವು ಅಸಹಾಯಕ ಪರಿಸ್ಥಿತಿಯಲ್ಲಿರುವ, ಯಾರೊಂದಿಗೂ ಹೇಳಿಕೊಳ್ಳಲಾಗದ ಬದುಕಿನ ತೊಳಲಾಟಗಳಲ್ಲಿ ಸಂಕಟಪಡುವ ವಿದ್ಯಾರ್ಥಿಗಳ ಬದುಕಿನಲ್ಲಿ ಶಿಕ್ಷಕರ ಒಂದು ಸಣ್ಣ ಸ್ಪಂದನೆ, ಕಾಳಜಿ, ಅಕ್ಕರೆ ಎಂಥಹ ಸಕಾರಾತ್ಮಕ ಬದಲಾವಣೆಯನ್ನು ತರಬಲ್ಲದು ಎನ್ನುವುದನ್ನು ನನ್ನ ಜೀವನದಲ್ಲಿ ಅರ್ಥ ಮಾಡಿಸಿದವರು ನನ್ನ ಉಷಾ ಮೇಡಂ. ನನ್ನ ವಿದ್ಯಾರ್ಥಿಗಳ ನೋವುನಲಿವುಗಳಿಗೆ ನಾನು ಕಿಂಚಿತ್ತಾದರೂ ಸ್ಪಂದಿಸುತ್ತೇನೆ ಎಂದಾದರೆ ನನಗೆ ಸ್ಫೂರ್ತಿಯಾದವರು ನನ್ನ ಉಷಾ ಮೇಡಂ.
......................................... ವಿದ್ಯಾ ಕಾರ್ಕಳ  
ಸಹ ಶಿಕ್ಷಕಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,
ಹೊಕ್ಕಾಡಿಗೋಳಿ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************      ಬಾಲ್ಯದ ಸವಿನೆನಪಿಗಾಗಿ ಪ್ರೀತಿಯ ಅಪ್ಪನಿಗಾಗಿ ನನ್ನ ಜೀವನದ ಮಹಾನ್ ಗುರುವಿಗಾಗಿ ಈ ಲೇಖನ ಅರ್ಪಣೆ
      ಕಾಳಿ ದಂಡೆಯ ಮೇಲಿನ ಪುಟ್ಟ ಗ್ರಾಮ ಈ ಊರು ನಿಸರ್ಗದ ಸೌಂದರ್ಯದ ತವರೂರು ನಮ್ಮೂರು. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಪುಟ್ಟ ಊರು, ಗೋವಾ ರಾಜ್ಯದ ಗಡಿ ಭಾಗವಾದ್ದರಿಂದ ಕೊಂಕಣಿಯೇ ಇವರ ಪಂಚಪ್ರಾಣ ಮಾತೃ ಭಾಷೆ. ಬದುಕನ್ನು ಅರಸಿ ಹೊನ್ನಾವರದಿಂದ ಕಾರವಾರಕ್ಕೆ ನಮ್ಮ ಅಪ್ಪನ ಪಯಣ. ಬಟ್ಟೆ ಅಂಗಡಿಯಲ್ಲಿ ಕೆಲಸ. ಬಡತನದಲ್ಲೂ ಕಲಿತದ್ದು ಪಿಯುಸಿ ಸೈನ್ಸ್.
     ಶ್ರೀ ಮಹಾಮಾಯ ಪ್ರೌಢಶಾಲೆ ಬಾಳ್ನಿ
ಉತ್ತರ ಕನ್ನಡ ಬಾಳ್ನಿ ಗ್ರಾಮದ ತುತ್ತ ತುದಿಗೆ ದೊಡ್ಡ ಮೈದಾನ. ಆ ಮೈದಾನದಲ್ಲಿ ವಿರಾಜಸುತ್ತಿದೆ ಮಹಾಮಾಯ ಪ್ರೌಢಶಾಲೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾ ದಾನವನ್ನು ನೀಡಿದ ಸಂಸ್ಥೆ. ಗುಮಾಸ್ತ ಹುದ್ದೆಗಾಗಿ ಅರ್ಜಿಯನ್ನು ಆಹ್ವಾನಿಸಿದರು ಅದರಂತೆ ನಮ್ಮ ಅಪ್ಪ ಈ ಪ್ರೌಢಶಾಲೆಯನ್ನು ತಮ್ಮ ಬದುಕಿನ ಅಂಗವಾಗಿಸಿ ಒತ್ತಾಸೆಯಂತೆ ಗುರುಗಳ ಕೆಲಸವನ್ನು ಸಹ ನಿಭಾಯಿಸುತ್ತಾ ಅಪರಿಮಿತ ಸೇವೆಯನ್ನು ನೀಡಿದರು. 
   ಶ್ರೀ ಮಹಾಮಾಯ ಪ್ರೌಢಶಾಲೆ ಹೆಮ್ಮರವಾಗಿ ಬೆಳೆಯಿತು. ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿ ಸುತ್ತಮುತ್ತಲ ಗ್ರಾಮದ ಮಕ್ಕಳು ಬಹಳ ಸಂತೋಷದಿಂದ ಈ ಶಾಲೆಗೆ ವಿದ್ಯಾರ್ಥಿಗಳಾಗಿ ತಮ್ಮ ಕನಸುಗಳಿಗೆ ರೆಕ್ಕೆ ಪುಕ್ಕ ಕಟ್ಟಲು ಸಜ್ಜಾಗಿ ನಿಂತರು. ನೂರಾರು ಹೊಂಗನಸುಗಳಿಗೆ ಸರಿಯಾದ ಮಾರ್ಗದರ್ಶನ ನೀಡಿದ ಸಂಸ್ಥೆ ಈ ಸಂಸ್ಥೆ. ನಾನು ಸಾವಿರದ ಒಂಬೈನೂರ ತೊಂಬತ್ತೆರಡರಲ್ಲಿ ಈ ಸಂಸ್ಥೆಗೆ ಎಂಟನೇ ತರಗತಿಗೆ ಪ್ರವೇಶವನ್ನು ಹೊಂದಿದೆ ನಮ್ಮ ಅಪ್ಪ ಇದ್ದಾರೆ ಎನ್ನುವ ಅಭಿಮಾನ ತುಂಬಿ ತುಳುಕುತ್ತಿತ್ತು. ಎಲ್ಲಾ ಗುರು ವರ್ಗದವರು ನಮ್ಮ ನೆರೆಹೊರೆಯವರು ಶಿಕ್ಷಕರ ಓಣಿಯವರು ಹಾಗೆ ತುಂಬಾ ಪ್ರೀತಿ ವಾತ್ಸಲ್ಯ ಮಾರ್ಗದರ್ಶನ ನನಗೆ ಶಾಲೆಗೆ ಸೇರುವ ಮುನ್ನವೇ ಎಲ್ಲಾ ಗುರುಗಳ ಸರ್ವ ಗುಣಗಳ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು. ಜೊತೆಗೆ ಅಂಜಿಕೆಯು ಕೂಡ ನನ್ನ ಲೋಪದೋಷಗಳನ್ನು ತಿದ್ದುವ ಹೊಣೆಗಾರಿಕೆ ನಮ್ಮ ಗುರುಗಳ ಮೇಲಿತ್ತು. ಬಂದ ದಿನವೇ ಮುಖ್ಯ ಗುರುಗಳಾದ ಅರವಿಂದ್ ಸರ್ ಅವರು ಈ ಶಾಲೆಗೆ ಕೀರ್ತಿ ತರುವ ವಿದ್ಯಾರ್ಥಿನಿಯಾಗಿ ನೀನು ಮುಂದುವರಿಯಬೇಕು ಎಂದು ಕಿವಿಮಾತು ಹೇಳಿದ್ದರು. ಗಣಿತ ವಿಜ್ಞಾನ ಶಿಕ್ಷಕರಾದ ಹೆಬ್ಬಾರ್ ಸರ್ ಅವರ ಸಂಪೂರ್ಣ ಮಾರ್ಗದರ್ಶನ ಪ್ರೀತಿ ನನ್ನ ಮೇಲಿತ್ತು. ಗುರವ್ ಸರ್ ಅವರ ಶಿಸ್ತಿನ ಸಿಪಾಯಿ ಆಗಲು ಪಣತೊಟ್ಟಿದ್ದೆ. ಕನ್ನಡ ಪಂಡಿತರಾದ ಪಾಠದ ವೈಖರಿಗೆ ಮೈಮರೆತಿದ್ದೆ. ಹಿಂದಿ ಶಿಕ್ಷಕಿ ರಾಯ್ಕರ್ ಬಾಯಿ ಅವರು ತಾಯಿಯ ಸಮಾನ ವಿದ್ಯೆಯೊಂದಿಗೆ ಪ್ರತಿಯೊಂದು ಮಾರ್ಗದರ್ಶನವನ್ನು ನೀಡುತ್ತಿದ್ದರು. ಹೊಲಿಗೆ ಶಿಕ್ಷಕಿ ಸರೂರವರು ತಮ್ಮ ಎಲ್ಲ ಪ್ರೀತಿಯನ್ನು ಮಮತೆಯನ್ನು ಧಾರೆ ಎರೆದಿದ್ದರು. 
     ನಮ್ಮ ತಂದೆಯವರ ಶಿಸ್ತು ಸಮಯ ಪ್ರಜ್ಞೆ 
ಗಣಿತ ಶಿಕ್ಷಕಿ ಆಗಲು ನನ್ನನ್ನು ಪ್ರೇರೇಪಿಸಿತು. 
ಎಂಟನೇ ತರಗತಿಯಲ್ಲಿ ಗಣಿತದ ಮೂಲ ಅನುಭವವನ್ನು ಪಡೆದುಕೊಂಡದ್ದು ನಮ್ಮ ಅಪ್ಪಾಜಿಯವರ ಪಾಠ ಮಾರ್ಗದರ್ಶನದಲ್ಲಿ
 ಅಂದೇ ನನಗೆ ಬಿಂದು ಅಂದರೆ ಏನು? ಅದರ ವಿಶೇಷತೆ ಏನು? ರೇಖಾ ಗಣಿತದ ಮೂಲ ಪರಿಕಲ್ಪನೆಗಳನ್ನು ಮನಸ್ಸಿಗೆ ತಟ್ಟುವ ಹಾಗೆ ವಿವರಿಸಿದ ಅಂದಿನ ನನ್ನ ಅಪ್ಪನ ಪಾಠಗಳು ಇಂದಿಗೂ ಕಣ್ಣಮುಂದಿದೆ. ಒಂದು ದಿನ ಪೆನ್ಸಿಲ್ ಮೊನಚು ಮಾಡದೇ ಅವರಿಂದ ಪಡೆದ ಕಠಿಣ ಶಿಕ್ಷೆ ಎಂದಿಗೂ ಮರೆಯಲಾಗದ ಪಾಠ. ಹೀಗೆ ಮೂರು ವರ್ಷಗಳು ಈ ಶಾಲೆಯಲ್ಲಿ ಈ ಸಂಸ್ಥೆಯಲ್ಲಿ ಕಳೆದದ್ದು ಇಂದಿಗೂ ಸ್ಮೃತಿ ಪಟಲದಲ್ಲಿ ಅಜರಾಮರ ಕನ್ನಡ ಪಂಡಿತರಿಂದ ಭಾಷಾ ಕೌಶಲ್ಯ ಮಾತಿನ ಕೌಶಲ್ಯ ಭಾಷಣ ಕೌಶಲ್ಯ ವ್ಯಾಕರಣ ಕೌಶಲ್ಯ ಅವರ ಪಾಠವೇ ಯಕ್ಷಗಾನದ ಆಟದಂತೆ. ಒಂದು ಸಲ ಕೇಳಿದರೆ ಎಂದೆಂದಿಗೂ ಆ ಪಾಠದ ತಾತ್ಪರ್ಯವನ್ನು ಮರೆಯಲಾರೆವು ಅಂತಹ ಕಂಠ ಮಾಧುರ್ಯ ಗಾಂಭೀರ್ಯ ಅವರದಾಗಿತ್ತು. ಆ ಎಲ್ಲಾ ಕಲೆಗಳನ್ನು ನಮ್ಮಲ್ಲಿ ವಿದ್ಯಾರ್ಥಿಗಳಾದ ನಮ್ಮಲ್ಲಿ ಅಚ್ಚು ಒತ್ತಿದರು ಗಣಿತ ವಿಜ್ಞಾನ ಶಿಕ್ಷಕರಾದ ಹೆಬ್ಬಾರ್ ರವರು. 9 ಮತ್ತು 10ನೇಗೆ ಗಣಿತ ಪಾಠ ಮತ್ತು ಎಲ್ಲಾ ತರಗತಿಗಳಿಗೆ ವಿಜ್ಞಾನ ಪಾಠವನ್ನು ಪ್ರಯೋಗಗಳ ಮೂಲಕ ಸುಲಲಿತವಾಗಿ ವಿವರಿಸುತ್ತಿದ್ದ ಅವರ ಪಾಠ ಕೌಶಲ್ಯ ಎಂದಿಗೂ ನನ್ನಲ್ಲಿ ಅಚ್ಚು ಒತ್ತಿದೆ. ಸಮಾಜ ಶಿಕ್ಷಕರಾದ ಎಂ ಬಿ ನಾಯಕ್ ಸರ್ ಅವರು ಎಂಟನೇ ತರಗತಿಗೆ ಮಾತ್ರ ನಮ್ಮೊಂದಿಗಿದ್ದರು. ದುರ್ದೈವ ವಿಧಿ ಅವರನ್ನು ಬಲಿ ತೆಗೆದುಕೊಂಡಿತು. ಹಿಂದಿ ಶಿಕ್ಷಕಿ ರಾಯ್ಕರ್ ಬಾಯಿಯವರು ಹಿಂದಿ ಭಾಷೆಯ ಮೇಲಿನ ಅವರ ಪಾಂಡಿತ್ಯ ಪಾಠ ಮಾಡುವಾಗ ಹಿಂದಿಯಲ್ಲಿ ಹಾಡಿದ ಹಾಡುಗಳು ಸುಲಲಿತವಾಗಿ ಹಿಂದಿಯನ್ನು ಓದಲು ಬರೆಯಲು ಹೇಳಿಕೊಟ್ಟ ಮಹಾ ಗುರು ಅವರು ಅದರ ಜೊತೆಗೆ ಜೀವನದ ಪಾಠವನ್ನು ಅರುಹಿದ ಮಹಾತಾಯಿ ಇನ್ನು ಹೊಲಿಗೆ ಶಿಕ್ಷಕಿ ಸರೋಜಿನಿ ಯವರು ನಮಗೆ ಹೊಲಿಗೆಯನ್ನು ಕಲಿಸುವುದರೊಂದಿಗೆ ಸರ್ವ ವಿಧದ ನೈತಿಕ ಪಾಠಗಳನ್ನು ಹೇಳಿಕೊಡುತ್ತಿದ್ದರು ನಮ್ಮ ಬಗ್ಗೆ ವಿಶೇಷ ಪ್ರೀತಿ ಅಭಿಮಾನವನ್ನು ಹೊಂದಿದ್ದರು.  
     ಇಂದಿನ ಶಿಕ್ಷಕ ವೃತ್ತಿಗೆ ನಾನು ಪಾದಾರ್ಪಣೆ ಮಾಡಲು ಆಗ ಪ್ರೌಢಶಾಲೆಯಲ್ಲಿ ನನ್ನ ಎಲ್ಲ ಗುರುಗಳು ನೀಡಿದ ಸಲಹೆ ಮಾರ್ಗದರ್ಶನ ಸಂಪೂರ್ಣ ಸಹಕಾರವನ್ನು ಆತ್ಮವಿಶ್ವಾಸವನ್ನು ನೀಡಿತ್ತು. ಆದರೆ ಮೊನ್ನೆ ಅಪ್ಪಾಜಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದಾಗ ಬೇಸರದ ಸಂಗತಿ ಬಯಲಾಯಿತು ಅಳಿವಿನ ಅಂಚಿನಲ್ಲಿ ನಮ್ಮ ಕನ್ನಡ ಮಾಧ್ಯಮದ ಪ್ರೌಢಶಾಲೆ ಎಂಬ ವಿಷಯ ತಿಳಿದು ಅಪ್ಪನಿಗೆ ಅತೀವ ವೇದನೆ ಅವರ ಕೊರಗಿನ ಮಾತುಗಳು ನನಗೆ ಸಹ ಬೇಸರವಾಯಿತು. ನಾನು ಕಲಿತ ಶಾಲೆ ನನ್ನ ಎಲ್ಲಾ ಕನಸುಗಳಿಗೆ ಜೀವ ಕಟ್ಟಿದ ಶಾಲೆ ಇವತ್ತು ಕೇವಲ 8ನೇ ತರಗತಿಗೆ ಐದು ವಿದ್ಯಾರ್ಥಿಗಳು ಪ್ರವೇಶಾತಿಯನ್ನು ಹೊಂದಿದ್ದಾರೆ ಎಂಬ ವಿಷಯ ತಿಳಿದು ತುಂಬಾ ಬೇಸರವಾಯಿತು. ಶ್ರೀ ಮಹಾಮಾಯಿದೇವಿಯೇ ಈ ಸಂಸ್ಥೆಯನ್ನು ಕಾಪಾಡಲಿ ಇಲ್ಲಿರುವ ಶಿಕ್ಷಕರಿಗೆ ಸ್ಪೂರ್ತಿಯನ್ನು ನೀಡಲಿ ಇನ್ನು ಮುಂಬರುವ ದಿನಗಳಲ್ಲಿ ನೂರಾರು ವಿದ್ಯಾರ್ಥಿಗಳು ಈ ಶಾಲೆಗೆ ಪ್ರವೇಶಾತಿಯನ್ನು ಹೊಂದಲಿ ಅವರ ಹೊಂಗನಸುಗಳಿಗೆ ಈ ಸಂಸ್ಥೆ ಬೆಳಕಾಗಲಿ ಎಂದು ಆಶಿಸುತ್ತೇನೆ.
......................... ಶ್ರೀಮತಿ ಶ್ವೇತಾ ಹಳದೀಪುರ
ಸಹ ಶಿಕ್ಷಕಿ
ಸರಕಾರಿ ಪದವಿ ಪೂರ್ವ ಕಾಲೇಜು 
ಪ್ರೌಢಶಾಲಾ ವಿಭಾಗ ಕಾಟಿಪಳ್ಳ 
7ನೇ ವಿಭಾಗ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
*****************************************        ನಾನು ಇತ್ತೀಚೆಗೆ ಯುಟ್ಯೂಬ್ ನಲ್ಲಿ 'ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಸರೆಯಾದ ನಾರಾಯಣ ಮೇಷ್ಟ್ರು ಎಂಬ ವಿಡಿಯೋ ನೋಡಿದೆ. ಇದು ಯಾವ ನಾರಾಯಣ ಮೇಷ್ಟ್ರು... ನಮಗೆ ಹೈಸ್ಕೂಲಿನಲ್ಲಿ ಮುಖ್ಯ ಗುರುಗಳಾಗಿದ್ದ ನಾರಾಯಣ ಸರ್ ಅವರ ಎಂದು ನೋಡಿದರೆ ಹೌದು ಅವರೇ...! ನಮ್ಮ ಪ್ರೀತಿಯ ಮುಖ್ಯ ಗುರುಗಳಾಗಿದ್ದ ಸಿದ್ಧಕಟ್ಟೆ ನಾರಾಯಣ ನಾಯಕ್ ಸರ್. ಅವರಿಗೆ ಈಗ 80 ವರ್ಷ. ಅವರು ನನ್ನ ಅಚ್ಚುಮೆಚ್ಚಿನ ಶಿಕ್ಷಕರು. ನಾನು 1991-92ನೇ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆ ಸಜೀಪ ಮೂಡ ಇಲ್ಲಿ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ನಮಗೆ ಅವರು ಇಂಗ್ಲೀಷ್ ಅಧ್ಯಾಪಕರು ಹಾಗು ಶಾಲಾ ಮುಖ್ಯೋಪಾಧ್ಯಾಯರಾಗಿದ್ರು. ನಮ್ಮ ಶಾಲೆಯಲ್ಲಿ ಮೈಸೂರಿಗೆ ಪ್ರವಾಸ ಆಯೋಜಿಸಿ ಎಲ್ಲಾ ಮಕ್ಕಳನ್ನು ಪ್ರವಾಸಕ್ಕೆ ಬರಲು ಪ್ರೋತ್ಸಾಹಿಸುತ್ತಿದ್ದರು. ಯಾರಿಗಾದರೂ ಆರ್ಥಿಕ ಅನನುಕೂಲತೆಗಳಿದ್ದರೆ ತಾವೇ ಸ್ವಂತ ಖರ್ಚಿನಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿ ನಿರಾಶರಾಗದಂತೆ ನೋಡಿಕೊಳ್ಳುತ್ತಿದ್ದರು. ಅವರು ಕೃಷಿಕರಾಗಿದ್ದು ಭತ್ತ, ಕಬ್ಬು, ಅಡಿಕೆ ಬೆಳೆಯುತ್ತಿದ್ದರು. ಅವರ ಕಬ್ಬು ಬೆಳೆಯ ಕಟಾವಿನ ಸಮಯದಲ್ಲಿ ಒಂದು ಲೋಡು ಕಬ್ಬನ್ನು ನಮ್ಮ ಶಾಲೆಗೆ ತರಿಸಿ ಮಕ್ಕಳಿಗೆಲ್ಲಾ ತಿನ್ನಲು ತೃಪ್ತಿಯಾಗುವಷ್ಟು ಕಬ್ಬನ್ನು ಹಂಚುತ್ತಿದ್ಡರು. ಇದು ಪ್ರತಿ ವರ್ಷ ನಡೆಯುತ್ತಿತ್ತು. ಪ್ರತೀ ವರ್ಷ ಹತ್ತನೇಯ ತರಗತಿಯಲ್ಲಿದ್ದ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಮುಗಿದ ನಂತರ ತನ್ನ ಮನೆ ಸಿದ್ಧಕಟ್ಟೆಗೆ ವಿದ್ಯಾರ್ಥಿಗಳನ್ನು ಕರೆಸಿಕೊಂಡು ಒಂದು ದಿನ ಪೂರ್ತಿ ತನ್ನ ಮನೆಯಲ್ಲಿಯೇ ಇರಿಸಿ ಒಳ್ಳೆಯ ಆತಿಥ್ಯ ನೀಡಿ, TV V.C.R. ನಲ್ಲಿ ಚಲನಚಿತ್ರ ತೋರಿಸಿ ನಮ್ಮನ್ನೆಲ್ಲ ಖುಷಿ ಪಡಿಸಿ ಮರುದಿನ ನಮ್ಮ ನಮ್ಮ ಮನೆಗೆ ಕಳುಹಿಸಿಕೊಡುತ್ತಿದ್ದರು. ಗುರುಗಳು ಹಾಗೂ ಅವರ ಮನೆಯವರು ನಮ್ಮನ್ನು ಪ್ರೀತಿ, ಗೌರವದಿಂದ ನಡೆಸಿಕೊಂಡ ರೀತಿ ನಾವೆಂದು ಮರೆಯಲಾಗದು. ನಮ್ಮ ಗುರುಗಳಾದ ನಾರಾಯಣ ನಾಯಕ್ ಅವರ ಸರಳತೆ, ಹೃದಯ ವೈಶಾಲ್ಯತೆ, ಪ್ರಾಮಾಣಿಕತೆ ವಿದ್ಯಾರ್ಥಿಗಳಾದ ನಮಗೆ ಸ್ಪೂರ್ತಿಯಾಗಿ ಮುಂದೆ ನಾವು ಸಮಾಜದಲ್ಲಿ ಒಳ್ಳೆಯ ರೀತಿಯಿಂದ ಬದುಕಲು ಪ್ರೇರಣೆಯಾಯಿತು. ಇಂತಹ ಶಿಕ್ಷಕರ ವಿದ್ಯಾರ್ಥಿಯಾಗಿದ್ದ ನಾನು ಧನ್ಯೆ. ನಮ್ಮ ಗುರುಗಳು ನಿವೃತ್ತಿಯ ತರುವಾಯ ಸಮಾಜಮುಖಿ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವುದು ನಮಗೆ ಹೆಮ್ಮೆಯ ವಿಚಾರ. ಈಗಲೂ ಮನೆಯಿಂದ ಬೆಳಿಗ್ಗೆ 7 ಗಂಟೆಗೆ ಬ್ಯಾಗ್ ಹಾಕಿಕೊಂಡು ಬೈಕಿನಲ್ಲಿ ಹೊರಟು ಶಾಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರಿಗೆ ವಿದ್ಯಾರ್ಥಿವೇತನದ ಮಾಹಿತಿ ನೀಡುತ್ತಿದ್ದಾರೆ. ಬಡವರು, ಕಟ್ಟಡ ಕಾರ್ಮಿಕರು ಇರುವಲ್ಲಿಗೆ ಹೋಗಿ ಸರ್ಕಾರದಿಂದ ಅವರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಕಳೆದ 22 ವರ್ಷಗಳಿಂದ ಈ ಅದ್ಭುತ ಸೇವೆ ಮಾಡುತ್ತಿದ್ದಾರೆ. ಪರೋಪಕಾರಂ ಇದಂ ಶರೀರಂ ಎನ್ನುವಂತೆ ಬದುಕುತ್ತಿದ್ದಾರೆ. ತನ್ನ ಪಿಂಚಣಿ ಹಣದಲ್ಲಿ ಶೇಕಡಾ 50 ಭಾಗವನ್ನು ವಿದ್ಯಾರ್ಥಿಗಳಿಗೆ ಖರ್ಚು ಮಾಡಿ ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ ನಿಸ್ವಾರ್ಥ ಸೇವೆ ಮಾಡುತ್ತಿರುವ ನನ್ನ ಪ್ರೀತಿಯ ಗುರುಗಳಾದ ನಾರಾಯಣ ನಾಯಕ್ ಸರ್ ಅವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು .
................................... ಕವಿತಾ ಶ್ರೀನಿವಾಸ 
W/o ಶ್ರೀನಿವಾಸ ದೈಪಲ 
'ಚೈತನ್ಯ ' ನೆಲ್ಯಡ್ಕ, ಅಂತರ, 
ನರಿಕೊಂಬು ಅಂಚೆ ಮತ್ತು ಗ್ರಾಮ  
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************

   

       ನಾನು ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವಾಗ ನನಗೆ ಮಾತೃ ಸ್ವರೂಪಿಯಾದ ತುಂಬಾ ತಾಳ್ಮೆ ಇರುವ ಮಕ್ಕಳೊಂದಿಗೆ ಮಕ್ಕಳಂತೆ ಬೆರೆಯುವ ಶಿಕ್ಷಕರು ಕನ್ನಡ ಅಧ್ಯಾಪಕರಾಗಿ ಬಂದರು. ಅವರು ಪಾಠ ಮಾಡುವ ರೀತಿ ಮಂತ್ರ ಮುಗ್ಧರನ್ನಾಗಿಸುತ್ತಿತ್ತು. ಕನ್ನಡ ಎಂಥ ಸುಲಲಿತ ಸುಂದರ ಭಾಷೆ ಸರಾಗವಾಗಿ ಸ್ವರಭಾರಯುಕ್ತವಾಗಿ ಓದುವುದನ್ನು ಕಲಿತಿದ್ದು ಆ ಶಿಕ್ಷಕರಿಂದ. ಖಾಲಿ ಗೋಣಿಚೀಲವಾದ ನನ್ನ ತಲೆಗೆ ವಿದ್ಯೆಯ ಮಹತ್ವ ತಿಳಿಸಿ ಜೀವನದಲ್ಲಿ ಅದೆಷ್ಟು ಪ್ರಾಮುಖ್ಯತೆ ಎಂದು ತಿಳಿಸಿಕೊಟ್ಟವರೇ ನನ್ನ ನೆಚ್ಚಿನ ಗುರುಗಳು. ಪಾಠ ಮಾಡುವುದರ ಜೊತೆ ನೈತಿಕ ಕಥೆಗಳು ಮತ್ತು ನೈಜ ಉದಾರಣೆಗಳಿಂದ ಜೀವನವನ್ನು ಕಟ್ಟಿಕೊಳ್ಳುವುದರ ಬಗ್ಗೆ ತಿಳಿಸುತ್ತಿದ್ದರು. ಗುರು ಹಿರಿಯರಿಗೆ ಗೌರವಿಸುವ ರೀತಿ ನಮ್ಮ ನಡೆ ನುಡಿಯಲ್ಲಿ ವಿಧೇಯೆತೆ ವಿನಯತೆ ಸಂಸ್ಕಾರ ಸಂಸ್ಕೃತಿಯನ್ನು ನಮ್ಮ ಜೀವನದಲ್ಲಿ ಅಚ್ಚೊತ್ತಿದಂತೆ ಕಲಿಸಿದವರು ನನ್ನ ಮೆಚ್ಚಿನ ಗುರುಗಳು. ಹರ ಮುನಿದರೂ ಗುರು ಕಾಯುವನು ಎನ್ನುವಂತೆ ನನ್ನ ಪ್ರೌಢ ಶಿಕ್ಷಣ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದಾಗ ನನ್ನ ಮನೆಯಲ್ಲಿ ನಿನ್ನ ಶಿಕ್ಷಣ ಮುಗಿಸಬೇಕೆಂದು ತಿಳಿಸಿದಾಗ ನನ್ನ ಕನಸುಗಳೆಲ್ಲ ನುಚ್ಚು ನೂರಾದವು ಎನ್ನುವ ಹತಾಶ ಭಾವನೆ ಮೂಡಿ ಸುಮ್ಮನಾಗಿದ್ದೆ. ವಿಷಯ ತಿಳಿದ ಗುರುಗಳು ಮನೆಗೆ ಬಂದು ನನ್ನ ತಂದೆ ತಾಯಿಗಳ ಮನಃಪರಿವರ್ತನೆ ಮಾಡಿ ಮುಂದಿನ ವಿದ್ಯಾಭ್ಯಾಸಕ್ಕೆ ದಾರಿ ಮಾಡಿಕೊಟ್ಟಂತಹ ನನ್ನ ಪಾಲಿನ ದೇವರು ನನ್ನ ಶಿಕ್ಷಕರು.
     ಅವತ್ತು ಆ ದಿನ ತೋರಿದ ದಾರಿದೀಪ ನನ್ನ ಜೀವನವನ್ನೇ ಬೆಳಗಿಸಿತು. ಅವರು ಪಾಠ ಮಾಡುವಾಗ ನನ್ನಲ್ಲಿ ಸಾಹಿತ್ಯದ ಅಭಿರುಚಿ ಬೆಳಸಿದರು. ಅವರು ಅಂದು ನನ್ನ ಮನದಲ್ಲಿ ಸಾಹಿತ್ಯದ ಸಸಿ ನೆಟ್ಟು ನೀರೆರೆದು ಪೋಷಿಸಿದ್ದರಿಂದ ಇಂದು ಬೆಳೆದು ಹೆಮ್ಮರವಾಗಿ ಹಲವಾರು ಪ್ರಶಸ್ತಿಗಳು ಅಂದರೆ ಸಾಹಿತ್ಯ ರತ್ನ ಸಾಹಿತ್ಯ ಭೂಷಣ, ಅತ್ಯುತ್ತಮ ಸಾಹಿತಿ ಎಂಬ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳಲು ಸಾಧ್ಯವಾಯಿತು.
      ಇನ್ನೊಂದು ಮುಖ್ಯವಾದ ಮಹತ್ವವಾದ ನನ್ನ ಜೀವನಕ್ಕೆ ಬಂಗಾರದ ಬೆಳಕನ್ನು ನೀಡುವಲ್ಲಿ ಭವಿಷ್ಯವನ್ನು ಉಜ್ವಲವಾಗಿಸಿದ ನನ್ನ ಜೀವನ ಪರ್ಯಂತ ಹೃನ್ಮನದಲ್ಲಿ ನೆನೆಯುವಂತೆ ಮಾಡಿದವರು ನನ್ನ ನೆಚ್ಚಿನ ಗುರುಗಳು. ಕಾಲೇಜು ಶಿಕ್ಷಣ ಮುಗಿಸಿದ ನಂತರ ನನ್ನ ವಿದ್ಯಾಭ್ಯಾಸ ಕೊನೆಗೊಳ್ಳುವ ಹಂತದಲ್ಲಿದ್ದಾಗ ಮತ್ತೆ ಪ್ರವೇಶ ಮಾಡಿ ಶಿಕ್ಷಣ ಮುಗಿಸಿ ಪವಿತ್ರವಾದ ಶಿಕ್ಷಕ ಹುದ್ದೆಗೆ ಆಯ್ಕೆಯಾಗಿ ಇಂದು ಸಾರ್ಥಕ 26 ವರ್ಷಗಳ ಸೇವೆ ಸಲ್ಲಿಸುವಲ್ಲಿ ಕಾರಣೀ ಭೂತರಾದಂತವರು. ನನ್ನ ಬೆನ್ನೆಲುಬಾಗಿ ನಿಂತು ಪ್ರೇರಣೆ ಪ್ರೋತ್ಸಾಹ ನೀಡಿದವರು ನನ್ನ ಗುರುಗಳು. ಶಿಕ್ಷಕ ಒಬ್ಬ ಮಾಂಸದ ಮುದ್ದೆಯನ್ನು ತಿದ್ದಿ ತೀಡಿ ಸುಂದರ ವಿಗ್ರಹವನ್ನಾಗಿಸುವ ಕಲಾವಂತ. ನಾನು ಇವತ್ತು ಸಾಮಾಜಿಕ ಜೀವನದಲ್ಲಿ ಉತ್ತಮ ಹೆಸರು ಗಳಿಸಲು ಆರ್ಥಿಕವಾಗಿ ಭದ್ರವಾಗಿರಲು ನನ್ನ ಶಾಲೆಯ ಮಕ್ಕಳ ಮನಸ್ಸಿನಲ್ಲಿ ಉತ್ತಮ ಶಿಕ್ಷಕಿಯಾಗಿ ಉಳಿದಿದ್ದೀನಿ ಅಂದರೆ ಸಾಹಿತ್ಯ ಕ್ಷೇತ್ರದಲ್ಲಿ ನನ್ನನ್ನು ಗುರುತಿಸಿಕೊಂಡಿದ್ದೇನೆ ಅಂದ್ರೆ ಜ್ಯೋತಿಯಂತೆ ಬೆಳಕನ್ನು ನೀಡಿದವರು ನನ್ನ ಗುರುಗಳು. ನನ್ನ ಸ್ಪೂರ್ತಿಯ ಚಿಲುಮೆ ಅವರನ್ನು ಸದಾ ಪ್ರತಿನಿತ್ಯ ಸ್ಮರಿಸಿ ಬೆಳಗಿನ ಕೆಲಸಗಳನ್ನು ಪ್ರಾರಂಭಿಸುತ್ತೇನೆ. ಅವರ ಆಶೀರ್ವಾದದ ಫಲದಿಂದ ಉತ್ತಮ ಜೀವನ ನಡೆಸುತ್ತಿದ್ದೇನೆ. ಅವರಂತಹ ಉಪಾಧ್ಯಾಯರು ಎಲ್ಲಾ ಮಕ್ಕಳಿಗೂ ಸಿಗುವಂತೆ ಮಾಡು ಭಗವಂತ. ನನ್ನ ನೆಚ್ಚಿನ ಗುರುಗಳಿಗೆ ಕೋಟಿ ಕೋಟಿ ನಮನಗಳು. ಧನ್ಯವಾದಗಳೊಂದಿಗೆ ನಿಮ್ಮ ಪ್ರೀತಿಯ ವಿದ್ಯಾರ್ಥಿನಿ
....................................... ಎಸ್ ಜ್ಯೋತಿಲಕ್ಷ್ಮಿ 
ಸಾಹಿತಿ, ಶಿಕ್ಷಕಿ 
ಸಿರಿಗೆರೆ, ಚಿತ್ರದುರ್ಗ ತಾಲೂಕು
ಚಿತ್ರದುರ್ಗ ಜಿಲ್ಲೆ
*****************************************

Ads on article

Advertise in articles 1

advertising articles 2

Advertise under the article