-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 27

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 27

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 27
ಲೇಖಕರು : ತುಳಸಿ ಕೈರಂಗಳ
ಸಹಶಿಕ್ಷಕಿ
ಸರಕಾರಿ ಪ್ರೌಢ ಶಾಲೆ, ನಾರ್ಶ ಮೈದಾನ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
        

    "ಪ್ರೀತಿಯಿಂದ ಗೆಲ್ಲಲಾಗದ್ದು ಈ ಜಗತ್ತಿನಲ್ಲಿ ಯಾವುದೂ ಇಲ್ಲ" ಎಂಬ ಮಾತು ಜನಜನಿತ. ಕೋಪ... ಸಿಟ್ಟು... ಬೈಗುಳ... ಶಿಕ್ಷೆ ಇವೆಲ್ಲವುದರಿಂದ ಸಾಧಿಸಲಾಗದೇ ಇರುವುದನ್ನು ಪ್ರೀತಿಯಿಂದ ಗೆಲ್ಲಲು ಸಾಧ್ಯ ಎಂಬುದನ್ನು ನಾನು ನನ್ನ ವೃತ್ತಿ ಜೀವನದಲ್ಲಿ ಕಂಡುಕೊಂಡ ಸತ್ಯ...!    
     ಒಂದು ಕಡು ಬಡತನದ ಸಣ್ಣ ಕುಟುಂಬ. ಕೂಲಿ - ನಾಲಿಯೇ ಅವರಿಗೆ ಜೀವನಾಧಾರ. ಆ ಕುಟುಂಬಕ್ಕೆ ಆರತಿಗೊಂದು ಮಗಳು ಕೀರ್ತಿಗೊಂದು ಮಗ ಎಂಬಂತೆ ಇಬ್ಬರು ಮಕ್ಕಳು. ತಂದೆ ತಾಯಿಯ ಮುದ್ದಿನ ಹುಡುಗ ನರೇಶ (ಹೆಸರು ಬದಲಿಸಲಾಗಿದೆ). ದುರಾದೃಷ್ಟ ಎಂಬಂತೆ ನರೇಶನ ಅಕ್ಕ ಅನಾರೋಗ್ಯದಿಂದ ದೇವರ ಪಾದ ಸೇರಿದ್ದು ತುಂಬಾ ನೋವು ತಂದಿತು. ವಿಧಿ ಬರಹ ಯಾರಿಂದ ತಾನೇ ತಪ್ಪಿಸಲು ಸಾಧ್ಯ...??
      ಕುಟುಂಬಕ್ಕೆ ಆಧಾರವೆಂದು ಏಕೈಕ ಪುತ್ರ ನರೇಶನನ್ನು ಪ್ರೀತಿಯಿಂದಲೇ ಬೆಳೆಸಿದರು. ತಾವು ಕಷ್ಟ ಪಡುತ್ತಿದ್ದರೂ ಮಗನಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು. ಅಕ್ಕನ ಅಗಲುವಿಕೆ ನೋವು ತಂದಿತೋ ಅಥವಾ ತಂದೆ ತಾಯಿಯ ಸಲುಗೆ ಪ್ರೀತಿ ತುಸು ಹೆಚ್ಚಾಯಿತೇನೋ.... ನರೇಶ ಗೆಳೆಯರ ಸಹವಾಸಕ್ಕೆ ಬಿದ್ದ. ಶಾಲಾ ಕೆಲಸಗಳಗಳನ್ನು ಪ್ರಾಮಾಣಿಕತೆಯಿಂದ ಮಾಡುತ್ತಿದ್ದ ಹುಡುಗ ದಾರಿ ತಪ್ಪ ತೊಡಗಿದ. ನಿರಾಸಕ್ತಿ, ಓದಿನಲ್ಲಿ ತೊದಲುವಿಕೆ, ಶಾಲಾ ನೋಟ್ಸ್ ಗಳನ್ನು ಬಾಕಿ ಉಳಿಸುವುದು ಕಂಡು ಬರತೊಡಗಿತು. ಸೂಕ್ಷ್ಮವಾಗಿ ಗಮನಿಸುತ್ತಿದ್ದ ನಾನು, ನರೇಶನನ್ನು ಕರೆದು, "ನಾಳೆ ನಿನ್ನ ಪೋಷಕರನ್ನು ಕಡ್ಡಾಯವಾಗಿ ಕರೆದುಕೊಂಡು ಬರಬೇಕು" ಎಂದು ತಿಳಿಸಿದೆ. ನರೇಶನ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದ ತಂದೆ ತಾಯಿಗೆ ನರೇಶನ ಬಗ್ಗೆ ಹೇಳಿದ ದೂರುಗಳು ಸಹಿಸದಾದವು. ಏರು ದನಿಯಲ್ಲಿ ಮಾತನಾಡಿದ ನರೇಶನ ತಂದೆ ತಾಯಿಗೆ ಪೈಪೋಟಿ ಎಂಬಂತೆ ನನ್ನ ಬಾಯಿಂದಲೂ ಪ್ರತ್ಯುತ್ತರ ಅದೇ ಧಾಟಿಯಲ್ಲಿ ಹೊರಹೊಮ್ಮಿತ್ತು...!! 
      ಫಲಿತಾಂಶ ಮಾತ್ರ ಶೂನ್ಯವಾಗಿತ್ತು. ನರೇಶನ ವರ್ತನೆಯಲ್ಲಿ ಏನೇನೂ ಪರಿಣಾಮ ಬೀರಲಿಲ್ಲ. ಸಿಟ್ಟಿನ ಮಾತುಗಳು ಯಾವುದೇ ಪ್ರಭಾವ ಬೀರಲಿಲ್ಲ. ಪಶ್ಚಾತಾಪದ ಭಾವನೆಯೇ ನರೇಶನ ಮುಖದಲ್ಲಿ ಕಾಣಲಿಲ್ಲ...!! ಕಲಿಕಾ ಚೇತರಿಕೆಯಲ್ಲಿ ಕಲಿಕಾ ಮಟ್ಟವನ್ನು ಏರಿಸಬೇಕೆನ್ನುವ ನನ್ನ ತುಡಿತಕ್ಕೆ ಸ್ಪಂದಿಸಲೇ ಇಲ್ಲ...!! ಎಲ್ಲಾ ಶಿಕ್ಷಕರ ಬಾಯಿಗೆ ದಿನಾ ತುತ್ತಾಗುವ ಪ್ರಸಂಗ ಅವನದಾಗಿತ್ತು....!! ಎಲ್ಲರಿಗೂ ಒಂದೇ ಚಿಂತೆ... ಮುಂದಿನ ವರುಷ ಹತ್ತನೇ ತರಗತಿಯಲ್ಲಿ ಇವನನ್ನು ಆಳುವುದು ಹೇಗೆ...? ಪ್ರತಿಯೊಬ್ಬರ ಆತಂಕದ ಪ್ರಶ್ನೆಗಳಿಗೆ ಉತ್ತರವೇ ಸಿಗಲಿಲ್ಲ...!
      ಅಂತೂ ಇಂತೂ ಹತ್ತನೆಗೆ ಬಂದಾಯ್ತು...!!
ದಿನಾ ಒಂದಲ್ಲ ಒಂದು ರೀತಿಯ ಸಮಸ್ಯೆ... ಕಲ್ಲು ಬಿಸಾಡಿದ, ಶಾಲೆಯ ಕಿಟಕಿ ಕನ್ನಡಿ ಮುರಿದ ಹೀಗೆ ಹಲವಾರು ದೂರುಗಳು. 
     ಹೇಗಪ್ಪಾ ...?? ಅನ್ನೋದರ ಹಿಂದೆ ನನ್ನ ಬದಲಾವಣೆಯೆಡೆಗೆ ಆಲೋಚಿಸಿದೆ. ಹತ್ತನೆಯ ವಿದ್ಯಾರ್ಥಿಗಳನ್ನು ಸ್ನೇಹಿತರಂತೆಯೇ ನೋಡಬೇಕು... ಮಾತನಾಡಬೇಕು.... ನಿತ್ಯ ಕಥೆಗಳನ್ನು ಹೇಳಬೇಕು.... ಪ್ರೇರಣಾದಾಯಕ ಘಟನೆಗಳನ್ನು ತಿಳಿಸಬೇಕು ಹೀಗೆ ಒಂದಷ್ಟು ನಿರ್ಧಾರಗಳನ್ನು ತೆಗೆದುಕೊಂಡೆ. ಪಠ್ಯ ಬೋಧನೆಯ ಜೊತೆ ಈ ರೀತಿಯ ನಡೆಯಿಂದ ಒಂದಷ್ಟು ಒತ್ತಡ ನಿವಾರಣೆ ಆಗಬಹುದು ಎನ್ನುವ ನನ್ನ ಕಲ್ಪನೆಯನ್ನು ಪ್ರಾಯೋಗಿಕವಾಗಿ ರಂಗಕ್ಕಿಳಿಸಿದೆ. ನಿಧಾನಕ್ಕೆ ಫಲಿತಾಂಶವೂ ದೊರೆಯಿತು. 
       ನರೇಶನನ್ನು ಆರಂಭದಿಂದಲೇ ಬಹುವಾಗಿ ಗಮನಿಸಿ ಆಗಾಗ ಕರೆದು ಮಾತಾನಾಡಿಸುವುದು ರೂಢಿಯಾಯಿತು. ಅವನ ಕಲಿಕೆಯ ಬಗ್ಗೆ, ವರ್ತನೆಯ ಬಗ್ಗೆ ಅದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಮಾತಾನಾಡುತ್ತಾ ಅವನಲ್ಲಿ, "ನೀನು ಮುಂದೆ ಒಬ್ಬ ಪೋಲಿಸ್ ಅಧಿಕಾರಿಯಾಗಿ ಆಯ್ಕೆಗೊಳ್ಳಬೇಕು" ಎಂದು ಪ್ರೀತಿಯಿಂದ ತರಗತಿಯ ಅವಧಿಯಲ್ಲಿ ಕನಸನ್ನು ತುಂಬುತ್ತಾ ಪ್ರೇರಣೆಯನ್ನು ನೀಡುತ್ತಾ ಬಂದಿದ್ದೇನೆ. 
     ಆಶ್ಚರ್ಯಕರ ಬೆಳವಣಿಗೆಯಲ್ಲಿ ಇತ್ತೀಚೆಗೆ ನರೇಶನ ವರ್ತನೆಯಲ್ಲಿ ಬಹಳಷ್ಟು ಸುಧಾರಣೆಯಾಗಿದೆ... ನೋಟ್ಸ್ ಸರಿಯಾದ ಸಮಯಕ್ಕೆ ಪೂರ್ತಿ ಗೊಳಿಸುವ, ಯಾರಿಗೂ ಏನೂ ಹಾನಿಗೊಳಿಸದ ರೀತಿಯ ಮನಸ್ಥಿತಿಗೆ ಬದಲಾವಣೆಯಾಗಿದೆ. "ಯಾರು ಬದಲಾದರೂ ಅವನು ಬದಲಾಗಲ್ಲ" ಅನ್ನುತ್ತಿದ್ದವರ ಮಾತಿಗೆ ನರೇಶ ಸವಾಲಾಗಿ ಬೆಳೆಯುತ್ತಿದ್ದಾನೆ. 
      ಶಿಕ್ಷಕರ ದಿನಾಚರಣೆಗೆ ಬೆಳ್ಳಂಬೆಳಗ್ಗೆ Happy teacher's day my favourite teacher... ಸಂದೇಶ ಕಳುಹಿಸಿದ್ದ.... ನಾನು ಬಹಳ ಸಂಭ್ರಮಪಟ್ಟೆ. ನಾನು ಖಂಡಿತಾ ಕನಸಲ್ಲಿಯೂ ಊಹಿಸಿರಲಿಲ್ಲ ಅವನಿಂದ ಈ ಸಂದೇಶ ಬರಬಹುದು ಎಂದು. ದೊಡ್ಡದೊಂದು ಪ್ರಶಸ್ತಿ ಬಂದಷ್ಟು ಸಂಭ್ರಮ ನನಗೆ. 
      ದಾರಿ ತಪ್ಪುವ ಆ ಮಗುವನ್ನು ಎಲ್ಲಾ ಮಕ್ಕಳೊಂದಿಗೆ ತುಂಬಾ ಪ್ರೀತಿಸುವ, ಕಾಳಜಿ ವಹಿಸುವ ಮನಸ್ಸು ನನ್ನಲ್ಲಿ ತನ್ನಿಂತಾನೇ ಒಡಮೂಡಿದೆ... ಒಂದಿನಿತು ಪರಿವರ್ತನೆ ಆಗುತ್ತಿದೆ ನರೇಶನಲ್ಲಿ.... ಜೊತೆಗೆ ನನ್ನಲ್ಲಿ..!!
.......................................... ತುಳಸಿ ಕೈರಂಗಳ
ಶಿಕ್ಷಕರು
ಸರಕಾರಿ ಪ್ರೌಢ ಶಾಲೆ, ನಾರ್ಶ ಮೈದಾನ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : 9480288214
*******************************************



Ads on article

Advertise in articles 1

advertising articles 2

Advertise under the article