-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 26

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 26

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 26
ಲೇಖಕರು : ರಾಜೇಶ್ ನೆಲ್ಯಾಡಿ
ಶಿಕ್ಷಕರು
ಸ ಹಿ ಪ್ರಾ ಶಾಲೆ ಪೆರಿಂಜೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 93797 93722

               ಕಲಿಕೆ ಆಸಕ್ತಿದಾಯಕವಾಗಿರಲಿ
     ಆತ 6ನೇ ತರಗತಿಯ ವಿದ್ಯಾರ್ಥಿ. ಆತನಿಗೆ ಶಾಲೆಗೆ ಬರುವುದೆಂದರೆ ಅದೇಕೋ ಹಿಂಸೆ. ಪ್ರತಿ ಬಾರಿ ಹಾಜರಿ ಹಾಕುವಾಗಲು "ಅವನು ಶಾಲೆಗೆ ಬರುವುದಿಲ್ಲ ಸಾರ್" ಎಂದು ಮಕ್ಕಳೆಲ್ಲ ಹೇಳುವಂತೆ ಆಗಿ ಹೋಗಿತ್ತು ಆ ತರಗತಿಯ ಪರಿಸ್ಥಿತಿ. ಬಹುಶಃ ಇದು ನಮ್ಮ ಶಾಲೆಯಲ್ಲಿ ಮಾತ್ರ ಅಲ್ಲ ಸಾರ್ವತ್ರಿಕವಾಗಿ ಹೆಚ್ಚಿನ ಶಾಲೆಗಳಲ್ಲಿ ಕಂಡು ಬರುವ ಸಮಸ್ಯೆ. ಈ ಸಮಸ್ಯೆಗೆ ಸಿದ್ಧೌಷಧವಾಗಿ ಎಲ್ಲರೂ ಹೇಳುವುದು ಆತನ ಮನೆ ಭೇಟಿ, ವಸ್ತುಸ್ಥಿತಿ ಅಧ್ಯಯನ ಹಾಗೂ ಮನ ಒಲಿಸುವ ತಂತ್ರ. ಅದರಂತೆ ಅನೇಕ ಬಾರಿ ಆತನ ಮನೆ ಭೇಟಿಯು ನಡೆದು ಹೋಗಿತ್ತು, ಕೆಲವು ಬಾರಿ ಪುಸಲಾಯಿಸಿ, ಮತ್ತೆ ಕೆಲವು ಬಾರಿ ಗದರಿಸಿ, ಹೀಗೆ ಮಾಡಿದ್ರೆ ದೂರದ ಹಾಸ್ಟೆಲಿಗೆ ನಿನ್ನನ್ನು ಸೇರಿಸಬೇಕಾಗುತ್ತದೆ ಎಂದೆಲ್ಲ ಹೇಳಿಯೂ ನಾನಾ ಥರದ ಪ್ರಯತ್ನಗಳಾದರೂ ಆತನನ್ನು ನಿರಂತರವಾಗಿ ಶಾಲೆಗೆ ಬರಿಸುವಲ್ಲಿ ಯಶಸ್ಸು ನಮ್ಮಿಂದ ಸಾಧ್ಯವಾಗಿರಲಿಲ್ಲ. ಅಂತೂ ಇಂತೂ ಈ ಪ್ರಯತ್ನದಲ್ಲಿ ಸುಮಾರು ದಿನಗಳು ಕಳೆದು ಹೋಯಿತು. ಮತ್ತೊಂದಿಷ್ಟು ಬಾರಿ ಪೋಷಕರಿಗೆ ಪದೇ ಪದೇ ಕರೆ ಮಾಡಿ ಪೀಡಿಸಿದರಿಂದಲೋ ಏನೋ ಒಂದು ದಿನ ಆತ ಇದ್ದಕ್ಕಿದ್ದಂತೆ ಶಾಲೆಯಲ್ಲಿ ಪ್ರತ್ಯಕ್ಷವಾಗಿದ್ದ. ವಿವಿಧ ಕ್ರೀಡಾಕೂಟಗಳಿಗೆ ಶಾಲೆಯ ವಿದ್ಯಾರ್ಥಿಗಳು ಸಜ್ಜಾಗುತ್ತಿದ್ದ ಸಮಯವದು. ತರಗತಿಯೊಳಗಿದ್ದರೂ ಈತನ ಗಮನವೆಲ್ಲ ಆಟದ ಬಯಲಿನ ಕಡೆಗೆ ಇದ್ದದ್ದನ್ನು ಗಮನಿಸಿ, "ನಿನಗೂ ಆಡುವ ಆಸೆಯೇ?" ಕೇಳಿದೆ. ಹೌದೆಂಬಂತೆ ಹೇಳಿತು ಆತನ ಆ ನೋಟ. "ನೀನು ಶಾಲೆಗೂ ಸರಿಯಾಗಿ ಬರುವುದಿಲ್ಲ , ಪ್ರಾಕ್ಟಿಸ್ ಗೂ ಬಾರದೆ ಇದ್ದರೆ ಮುಂದೆ ಆಟದ ದಿನ ನಿನ್ನನ್ನು ಎಲ್ಲಿ ನಾವು ಹುಡುಕುವುದು ಮಾರಾಯ" ಎಂದು ನೇರವಾಗಿ ಹೇಳಬೇಕು ಎನಿಸಿದರೂ, ಆ ರೀತಿ ಹೇಳದೆ ನೀನು ಪ್ರತಿದಿನ ಶಾಲೆಗೆ ಬರುವುದಾದರೆ ನಿನಗೂ ಆಡಲು ಅವಕಾಶ ನೀಡುತ್ತೇನೆ ಎಂದೆ. ಪ್ರತಿದಿನ ತಾನು ಬರುವುದಾಗಿ ಆತ ಹೇಳಿದಾಗ ಆತನಿಗೆ ಒಂದು ಅವಕಾಶ ನೀಡುವುದರಲ್ಲಿ ತಪ್ಪೇನಿದೆ ಎನಿಸಿ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವಂತೆ ಆತನಿಗೆ ತಿಳಿಸಲಾಯಿತು. ಮುಂದಿನ ಫಲಿತಾಂಶ ಮಾತ್ರ ನಮಗೆ ಬಹಳ ಖುಷಿ ಕೊಡುವಂತೆ ಇತ್ತು. ಪ್ರಾಕ್ಟೀಸಿನ ನೆಪದಿಂದ ಆದರೂ ಆತ ಪ್ರತಿದಿನ ಶಾಲೆಗೆ ಬರುವಂತಾಯಿತು. ಮುಂದಿನ ಪಂದ್ಯಾಟಗಳಲ್ಲೂ ಉತ್ತಮ ಪ್ರದರ್ಶನವನ್ನೇ ತೋರಿದ. ಮುಂದೆ ಅಥ್ಲೆಟಿಕ್ಸ್ ನಲ್ಲೂ ಆತನನ್ನು ತೊಡಗಿಸಿಕೊಳ್ಳುವಂತೆ ಮಾಡಿ ಮುಂದೆಯೂ ಆತ ನಿರಂತರವಾಗಿ ಶಾಲೆಗೆ ಬರುವಂತಾದಾಗ ನನಗನಿಸಿದ್ದು ಮಕ್ಕಳ ಆಸಕ್ತಿಯ ಕ್ಷೇತ್ರದಲ್ಲಿ ಅವರನ್ನು ತೊಡಗಿಸಿಕೊಳ್ಳುವಂತೆ ಮಾಡಿದಾಗ ಮತ್ತು ಒಂದಷ್ಟು ಜವಾಬ್ದಾರಿಗಳನ್ನು ಅವರಿಗೆ ನೀಡಿದಾಗ ಶಾಲಾ ವಾತಾವರಣ ಹಾಗೂ ಕಲಿಕೆ ಅವರಿಗೆ ನಿಜವಾದ ಅರ್ಥದಲ್ಲಿ ಸಂತಸದಾಯಕವಾಗುತ್ತದೆ. ವಿದ್ಯಾರ್ಥಿಗಳ ಆಸಕ್ತಿಯ ಕ್ಷೇತ್ರಗಳನ್ನು ಗುರುತಿಸಿ ಅದರಲ್ಲಿ ಆ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವಂತಹ ವಾತಾವರಣ ಶಾಲೆಯಲ್ಲಿ ನಿರ್ಮಿಸಿ ಕೊಡಬೇಕಾದದ್ದು ಶಿಕ್ಷಕರಾಗಿ ನಮ್ಮ ಬಹುಮುಖ್ಯ ಜವಾಬ್ದಾರಿಯಾಗಿದೆ.
................................... ರಾಜೇಶ್ ನೆಲ್ಯಾಡಿ
ಶಿಕ್ಷಕರು
ಸ ಹಿ ಪ್ರಾ ಶಾಲೆ ಪೆರಿಂಜೆ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 93797 93722
*******************************************



Ads on article

Advertise in articles 1

advertising articles 2

Advertise under the article