-->
ಸ್ಫೂರ್ತಿಯಾಗಿರುವ ಶಿಕ್ಷಕರು - ಮಕ್ಕಳ ಬರಹಗಳು : ಸಂಚಿಕೆ - 03

ಸ್ಫೂರ್ತಿಯಾಗಿರುವ ಶಿಕ್ಷಕರು - ಮಕ್ಕಳ ಬರಹಗಳು : ಸಂಚಿಕೆ - 03

ಶಿಕ್ಷಕರ ದಿನಾಚರಣೆಯ ವಿಶೇಷ - 2023
ನನಗೆ ಸ್ಫೂರ್ತಿಯಾಗಿರುವ ಶಿಕ್ಷಕರು
ಮಕ್ಕಳ ಬರಹಗಳು : ಸಂಚಿಕೆ - 03ಗುರು ಬ್ರಹ್ಮ ಗುರು ವಿಷ್ಣು 
ಗುರು ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ 
ತಸ್ಮೈ ಶ್ರೀ ಗುರುವೇ ನಮಃ
     ಎಲ್ಲಾ ನನ್ನ ಗುರುವರಿಯರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.... ಪ್ರತಿವರ್ಷ ಸಪ್ಟೆಂಬರ್ 5 ರಂದು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ... ನಾನಿಂದು ನನ್ನ ಕಲಾ ಬದುಕಿನ ಕಲಾ ಗುರುಗಳ ಬಗ್ಗೆ ನನ್ನ ಮನದಾಳದ ಕೃತಜ್ಞತೆಗಳನ್ನು ಸಲ್ಲಿಸುತ್ತಾ  ಸ್ಪೂರ್ತಿದಾಯಕವಾದ ಬದುಕನ್ನು ನನಗೆ ನಿರೂಪಿಸಿದಂತಹ ನನ್ನ ಗುರುಗಳ ಬಗ್ಗೆ ಒಂದೆರಡು ಮಾತುಗಳನ್ನು ಈ ಬರವಣಿಗೆಯ ಮೂಲಕ ಸಲ್ಲಿಸುತ್ತಿದ್ದೇನೆ.
   ಮೇಕಪ್ ಆರ್ಟಿಸ್ಟ್ ಕಲಾ ಆರಾಧಕರು ಆದಂತಹ ಪ್ರೇಮ್ ರಾಜ್ ಆರ್ಲಪದವು ಅವರೇ ನನ್ನ ಕಲಾ ಜೀವನದ ಮೊದಲ ಗುರು. ನಾನು ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿದ್ದಾಗ ನನಗೆ ಪರಿಚಯವಾದ ಗುರುಗಳಿವರು. ನನ್ನಲ್ಲಿರುವಂತಹ ಪ್ರತಿಭೆಯನ್ನು ಹೊರ ಜಗತ್ತಿಗೆ ತೋರಿಸಿಕೊಟ್ಟಂತಹ ವ್ಯಕ್ತಿ ಇವರು. ಮೊದಲಿಗೆ ನನಗೆ ವೇದಿಕೆಗಳಲ್ಲಿ ನೃತ್ಯ ಮಾಡಲು ಅವಕಾಶ ಮಾಡಿಕೊಟ್ಟರು. ನನ್ನಲ್ಲಿದ್ದಂತಹ ಸಣ್ಣ ಸಣ್ಣ ತಪ್ಪುಗಳನ್ನು ತಿದ್ದಿ ಸರಿಪಡಿಸಿ ನಂತರ ನನಗೆ ಅಭಿನಯ ಮಾಡಲು ಕಲಿಸಿಕೊಟ್ಟರು. ನನ್ನ ಪ್ರತಿಭೆಗೆ ಪ್ರೋತ್ಸಾಹಿಸಿ ನನಗೆ ಕಿರು ಚಿತ್ರ ಹಾಗೂ ಆಲ್ಬಮ್ ಸಾಂಗ್ ಗಳಲ್ಲಿ ಅಭಿನಯಿಸಲು ಅವಕಾಶ ಹಾಗೂ ಅದರ ಬಗ್ಗೆ ಕಲಿಸಿಕೊಡುತ್ತಾ ಹಲವಾರು ಪ್ರಶಸ್ತಿ ಹಾಗೂ ಬಹುಮಾನ ಪಡೆಯುವಲ್ಲಿ ಪ್ರೇಮ್ ರಾಜ್ ಸರ್ ಅವರು ಕಾರಣಿಕರ್ತರು. ಇಂದಿಗೂ ನಾನು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವ ಮೊದಲು ಅವರ ಮಾರ್ಗದರ್ಶನದಲ್ಲಿ ಮುಂದುವರಿಯುತ್ತಿದ್ದೇನೆ. ನನ್ನ ಬೆಳವಣಿಗೆಗೆ ಸ್ಪೂರ್ತಿದಾಯಕ ಶಿಕ್ಷಕರು ಪ್ರೇಮ್ ರಾಜ್ ಸರ್. ನಾನು ಅವರನ್ನು ಪ್ರೀತಿಯಿಂದ ಪ್ರೇಮ್ ಮಾಮ ಎಂದೇ ಕರೆಯುವುದು. ಮಗದೊಮ್ಮೆ ನನ್ನ ಎಲ್ಲಾ ಗುರುವರ್ಯರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು..... ಧನ್ಯವಾದಗಳೊಂದಿಗೆ ನಿಮ್ಮ ಪ್ರೀತಿಯ ಶಿಷ್ಯೆ....
......................................... ಚೈತನ್ಯ ಬಿ ಎನ್ 
8ನೇ ತರಗತಿ 
ಸರಕಾರಿ ಮಾದರಿ ಉನ್ನತ ಹಿರಿಯ 
ಪ್ರಾಥಮಿಕ ಶಾಲೆ, ಉಪ್ಪಿನಂಗಡಿ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************      ಪ್ರತಿಯೊಬ್ಬ ಶಿಕ್ಷಕ/ಶಿಕ್ಷಕಿಯರು ವಿದ್ಯಾರ್ಥಿಗಳಿಗೆ ಮಾದರಿಯಾಗಿರುತ್ತಾರೆ. ಹಾಗೆಯೆ ನನ್ನ ಬಾಳಿಗೆ ಮಾದರಿಯಾದ ಸರಳ, ಸಜ್ಜನಿಕೆಯ ಅಪರೂಪದ ಮಾಣಿಕ್ಯ ಎಂದೆನ್ನಬಹುದಾದ ಶಿಕ್ಷಕಿ. ಇವರು ನಮಗೆ ಹಿಂದಿ ವಿಷಯವನ್ನು ಭೋದಿಸುತ್ತಿದ್ದರು. ತನ್ನ ವಿದ್ಯೆಯನ್ನು ಧಾರೆ ಎರೆದು ವಿದ್ಯೆ ಕಲಿಸುತ್ತಿದ್ದರು. ಇವರ ಹೆಸರು ಸುವಾಸಿನಿ ಬಿ. ನನ್ನ ಅಚ್ಚುಮೆಚ್ಚಿನ ಹಿಂದಿ ಶಿಕ್ಷಕಿಯೂ ಹೌದು. 
      ಇವರಿಗೆ ಕೋಪವಂತೂ ತೀರಾ ಕಡಿಮೆ. ಪಾಠವೂ ಕೂಡ ಚೆನ್ನಾಗಿ ಕಲಿಸುತ್ತಿದ್ದರು. ನಾವು ಹುಡುಕಿದರೂ ಸಿಗದ ಅಮೂಲ್ಯ ರತ್ನ. ವಜ್ರ, ಚಿನ್ನ, ಬೆಳ್ಳಿ, ಪ್ಲಾಟಿನಂಗಿಂತಲೂ ಮಿಗಿಲಾದ ವ್ಯಕ್ತಿತ್ವ ಇವರದು. ನಾನೊಮ್ಮೆ ನಿಮಗೆ ತುಳಸಿ ಕೈರಂಗಳ್ ಮೇಡಂ ಗೊತ್ತೇ ಎಂದಾಗ ಹೆಸರು ಕೇಳಿ ಗೊತ್ತಿಲ್ಲ ಆದ್ರೆ ಅಲ್ಲೊಂದು ಪುಸ್ತಕ ಇದೆ ಅದರಲ್ಲಿ ನೋಡಿ ಕೇಳು ಅಂದ್ರು. ನನ್ನ ಪುಣ್ಯ ಅದರಲ್ಲಿ ತುಳಸಿ ಮೇಡಂನ ಫೋಟೋ ನೋಡಿ ಹೇಳಿದ್ರು ಇದು  SSLC TEACHERS GROUP ಎಂದು ತಿಳಿಸಿದರು. ನಮ್ಮ ಪ್ರೀತಿಯ ಶಿಕ್ಷಕಿ ಕೇವಲ ಪಾಠ ಮಾತ್ರವಲ್ಲ ; ಶಾಲಾಕಛೇರಿ ಕೆಲಸದಲ್ಲೂ ಸೈ ಎನಿಸಿಕೊಂಡವರು. ಇವರು ತುಂಬಾ ತುಂಬಾ ಶ್ರಮಜೀವಿ. ಪ್ರತಿಯೊಂದು ಕೆಲಸದಲ್ಲೂ ತಾವೇ ಮುಂದು. ಇವರು ಉಡುಪಿಯ ಪಡುಬಿದ್ರಿಯಿಂದ ನಮ್ಮ ಶಾಲೆಯಾದ ಸರಕಾರಿ ಪದವಿ ಪೂರ್ವ ಕಾಲೇಜು ವಾಮದಪದವಿಗೆ ಬರುತ್ತಿದ್ದರು. ಸಮಯದ ಪರಿಜ್ಞಾನವೇ ಇರಲಿಲ್ಲ. ಸಂಜೆ ಗಂಟೆ 5:30ಆದರೂ ಕಛೇರಿ ಕೆಲಸ ಮುಗಿಸಿಯೇ ಮನೆಗೆ ಹೊರಡುತ್ತಿದ್ದರು. ಇವರು ನಮಗೆಲ್ಲಾ ಮಾದರಿಯಾಗಿದ್ದರು. ಈ ಅಮೂಲ್ಯ ವ್ಯಕ್ತಿಯನ್ನು ಬೀಳ್ಕೊಡಬೇಕಾದ ಸಂದರ್ಭ ಬಂದೇಬಿಟ್ಟಿತು. ಇವರ ಮನೆ ಹತ್ತಿರದ ಹಳೆಯಂಗಡಿ ಶಾಲೆಗೆ ವರ್ಗಾವಣೆಗೊಂಡರು. ಅಂದು ಹೇಳತೀರದ ಸಂಕಟ, ದುಃಖ. ಅವರ ಮುಂದೆ ಖುಷಿಯಲ್ಲಿದ್ದು ಮನಸ್ಸಿನೊಳಗೆ ಅತ್ತಿದ್ದೆವು. ಅವರನ್ನು ಕಳಿಸಿಕೊಡಲು ಮನಸ್ಸು ಏಕೋ ಹಿಂಜರಿಯುತ್ತಿತ್ತು. ನಾವು ಅವರಿಗೆ ಹೇಳಿದ ಮಾತೆಂದರೆ ಟೀಚರ್ ಸಮಯ ಸಿಕ್ಕಾಗ ನಮ್ಮ ಶಾಲೆಗೆ ಬನ್ನಿ ಈ ಶಾಲೆ ಸದಾ ನಿಮಗಾಗಿ ಕಾಯು ತ್ತಿರುತ್ತದೆ ಎಂದು. ನನ್ನ ಪ್ರೀತಿಯ ಹಿಂದಿ ಶಿಕ್ಷಕಿಗೆ ಅನಂತ ಅನಂತ ನಮಸ್ಕಾರಗಳು. ಶಿಕ್ಷಕರ ದಿನಾಚರಣೆಯ ಶುಭಾಶಯವನ್ನು ಕೋರುತ್ತಿದ್ದೇನೆ. ಮತ್ತು ನಿಮಗೆ ಮಾದರಿ ಶಿಕ್ಷಕಿ ಎಂಬ ಬಿರುದು ನೀಡಲು ಇಚ್ಛಿಸುತ್ತೇನೆ.
......................................... ಎಮ್. ಕೀರ್ತಿ 
10ನೇ ತರಗತಿ 
ಸರಕಾರಿ ಪದವಿ ಪೂರ್ವ ಕಾಲೇಜು 
(ಫ್ರೌಢಶಾಲಾ ವಿಭಾಗ) ವಾಮದ ಪದವು. 
ಬಂಟ್ವಾಳ ತಾಲೂಕು,  ದಕ್ಷಿಣ ಕನ್ನಡ ಜಿಲ್ಲೆ
*****************************************      "ಜ್ಞಾನ ಶಕ್ತಿ ಸಮಾರೂಢ 
       ತತ್ತ್ವ ಮಾಲಾ ವಿಭೂಷಿತಮ್ । 
       ಚ ತಸ್ಮೈ ಶ್ರೀ ಗುರ್ವೇ ನಮಃ ।" 
   ಎಂಬ ಮಾತಿನಂತೆ ಜ್ಞಾನದ ಶಕ್ತಿಯಿಂದ ಮೇಲೇರಿ ತತ್ವಗಳ ಮಾಲೆಯನ್ನು ಅಲಂಕರಿಸಿ ಎಲ್ಲ ಸಂತೋಷ ಮತ್ತು ಮುಕ್ತಿಯನ್ನು ದಯಪಾಲಿಸುವ  ಆಧ್ಯಾತ್ಮಿಕ ಗುರುವಿಗೆ ನನ್ನ ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತಿದ್ದೇನೆ. 
         "ಸೃಜನಶೀಲ ಅಭಿವ್ಯಕ್ತಿ ಮತ್ತು ಜ್ಞಾನದಲ್ಲಿ ಸಂತೋಷವನ್ನು ಜಾಗೃತಿಗಳಿಸುವುದು ಶಿಕ್ಷಕರ ಕಲೆ" ಎಂಬುದನ್ನ ಆಲ್ಬರ್ಟ್  ಐನ್ಸ್ಟ ನ್  ಸರಿಯಾಗಿಯೇ ಹೇಳಿದ್ದಾರೆ. ಶಿಕ್ಷಕರು ಇಲ್ಲದಿದ್ದರೆ ನಾವು ಹೇಗಿರುತ್ತಿದ್ದೆವೋ ತಿಳಿದಿಲ್ಲ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿಯನ್ನು ತುಂಬಿ ವಿದ್ಯೆಯನ್ನು ಕಲಿಸಿ ಜೀವನದ ಗುರಿಗೆ ಮಾರ್ಗದರ್ಶನ ನೀಡುವವರು ಶಿಕ್ಷಕರು ಅಂತಹ ಮಾರ್ಗದರ್ಶಕರಿಗೆ ಗೌರವ ನೀಡಿ ಧನ್ಯವಾದಗಳು ನಮ್ಮ ಕರ್ತವ್ಯವಾಗಿದೆ.
           ಯಾವುದೇ ವ್ಯಕ್ತಿಯ ಸಾಧನೆಯಲ್ಲಿ ಮಾರ್ಗದರ್ಶಕರು ಇದ್ದೇ ಇರುತ್ತಾರೆ. ಆ ಪಾತ್ರದಲ್ಲಿ ಶಿಕ್ಷಕರು ಎಲ್ಲರ ಜೀವನದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳು ಮಾಡುವ ತಪ್ಪುಗಳನ್ನು ಕ್ಷಮಿಸಿ ತಿದ್ದಿ ತೀಡಿ  ಬುದ್ಧಿಯನ್ನು ಹೇಳುತ್ತಾರೆ. 
      ನಮ್ಮ ಕಲಿಕೆಯ ಜೊತೆ ಶಿಕ್ಷಕರು ಮಕ್ಕಳಾಗಿ ಒಳ್ಳೆಯ ಸ್ನೇಹಿತರಾಗುತ್ತಾರೆ. ನಾಯಕತ್ವ, ಸತ್ಯ ,ತಾಳ್ಮೆ ಹೀಗೆ ಹಲವಾರು ಮೌಲ್ಯಗಳನ್ನು ತಿಳಿಸಿಕೊಡುತ್ತಾರೆ. ನಾವು ಯಾರನ್ನು ಮರೆತರು ಕಲಿಸಿದ ಗುರುವನ್ನು ಎಂದಿಗೂ ಮರೆಯಬಾರದು ನನ್ನ ಜೀವನದಲ್ಲಿ  ಪ್ರತಿಯೊಬ್ಬ ಶಿಕ್ಷಕರು ಮುಖ್ಯ ಪಾತ್ರವನ್ನು ವಹಿಸಿದ್ದಾರೆ. ಪ್ರತಿಯೊಬ್ಬ ಶಿಕ್ಷಕರಿಂದಲೂ ಹಲವಾರು ವಿಷಯಗಳನ್ನು, ಮೌಲ್ಯಗಳನ್ನು ಕಲಿತಿದ್ದೇನೆ. ನಮ್ಮ ದೈಹಿಕ ಶಿಕ್ಷಕರಾದ ವಿದ್ಯಾಲತಾ  ಮೇಡಂರವರು ಹೋದ ವರ್ಷ ವಿದ್ಯಾರ್ಥಿಗಳಿಗೆ ನಡೆದ ಖೋಖೋ ಪಂದ್ಯಾಟದಲ್ಲಿ ತಾಲೂಕು ಮಟ್ಟದಲ್ಲಿ ಎರಡನೇ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗದಿದ್ದಾಗ ತಮ್ಮ ಧೈರ್ಯವನ್ನು ಕಳೆದುಕೊಳ್ಳದೇ ವಿದ್ಯಾರ್ಥಿಗಳಿಗೆ ಉತ್ತಮವಾಗಿ ತರಬೇತಿಯನ್ನು ಕೊಟ್ಟು ವಿದ್ಯಾರ್ಥಿಗಳು ಈ ವರ್ಷ ತಾಲೂಕು ಮಟ್ಟದಲ್ಲಿ ಮೊದಲನೇ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ನಮ್ಮ ಶಾಲೆಯನ್ನು ಗುರುತಿಸಿ, ಶಾಲೆ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಹೀಗೆ ನಮ್ಮ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಿ ಎದೆಗುಂದದೆ ಧೈರ್ಯದಿಂದ ಮುನ್ನಡೆಯಬೇಕು ಎಂದು ತಿಳಿಸಿಕೊಟ್ಟಿದ್ದಾರೆ. ಹೀಗೆ ಪ್ರತಿಯೊಬ್ಬ ಶಿಕ್ಷಕರಿಂದಲೂ ಕಲಿಯಬೇಕಾದದ್ದು ತುಂಬಾ ಇದೆ. ಕೇವಲ ಪುಸ್ತಕ ಜ್ಞಾನವಿದ್ದರೆ ಮಾತ್ರ ಸಾಲದು ಪ್ರಪಂಚಜ್ಞಾನ ಇರಬೇಕು ಎಂದು ರಸಪ್ರಶ್ನೆ  ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಿ ನಮ್ಮ ಜ್ಞಾನವನ್ನು ಹೆಚ್ಚಿಸುತ್ತಾರೆ.           
          ನಮ್ಮ ವ್ಯಕ್ತಿತ್ವವನ್ನು ರೂಪಿಸಿ ನಮ್ಮ ಸಾಧನೆಯನ್ನು ಕಂಡು ಮೊದಲು ಮೆಚ್ಚುಗೆ ವ್ಯಕ್ತಪಡಿಸುವವರೇ ಶಿಕ್ಷಕರು.  "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂಬ ನಂಬಿಕೆಯ ತಳಹದಿಯಲ್ಲಿ ನಮ್ಮ ಬದುಕು ಸಾಗುತ್ತಿದೆ. ಈ ಮಾತು ಪ್ರತಿಯೊಬ್ಬರ ಬಾಳಿನಲ್ಲಿ ಗುರುಗಳ ಸ್ಥಾನ ಎಂತಹದ್ದು ಎಂಬುದಕ್ಕೆ ಸಾಕ್ಷಿ. ಗುರು ದೇವೋ ಭವ ಎಂಬ ಮಾತನ್ನು ಸ್ಮರಿಸಿಕೊಂಡು ನನಗೆ ವಿದ್ಯೆ ಕಲಿಸಿದ ಎಲ್ಲಾ ಗುರುಗಳಿಗೆ  ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಹೇಳುತ್ತಿದ್ದೇನೆ.
......................................... ನವ್ಯ ಎಸ್ ಕೆ 
10ನೇ ತರಗತಿ
ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು
ಮಂಗಳೂರು,  ದಕ್ಷಿಣ ಕನ್ನಡ ಜಿಲ್ಲೆ
*****************************************
ನಮಸ್ತೇ..... ಮಕ್ಕಳ ಜಗಲಿಯ ಮೂಲಕ ನನ್ನ ಪ್ರೀತಿಯ ಶಿಕ್ಷಕರ ನೆನಪು....  
      ಜೀವ ಕೊಟ್ಟವರು ಹೆತ್ತವರಾದರೂ ಜೀವನದ ಪಾಠ ಹೇಳಿಕೊಟ್ಟವರು ಶಿಕ್ಷಕರು. ತಪ್ಪು ದಾರಿ ತಡೆದು ಸರಿದಾರಿಗೆ ತಂದವರು ಶಿಕ್ಷಕರು. ಪೋಷಕರಂತೆ ಪ್ರೀತಿ ತೋರಿಸಿ ಸ್ನೇಹಿತರಂತೆ ಜೊತೆಗೂಡಿ ಸೋಲು ಗೆಲುವಿಗೆ ಧೈರ್ಯ ತುಂಬಿದ ನನ್ನ ಗುರುಗಳಿಗೆ ನಮನ ಹೇಳಲೇಬೇಕು. ಪ್ರೈಮರಿ ವಿದ್ಯಾಭ್ಯಾಸ ಮುಗಿಸಿ ಹೈಸ್ಕೂಲ್ ಗೆ ಹೋದಾಗ  ನನಗೆ ಎಲ್ಲೋ ಒಂದು ಕಡೆ ಭಯ ಬೇಸರ ಇತ್ತು. ಆದರೆ ಅಲ್ಲಿ ಶಿಕ್ಷಕರು ನನ್ನ ನಿರೀಕ್ಷೆಗೆ ಮೀರಿದ ಶಿಕ್ಷಕರಾಗಿದ್ದರು. ನನ್ನ ಜೀವನದ ಅತಿ ದೊಡ್ಡ ಸ್ಪೂರ್ತಿ ಎಂದರೆ ಹೈಸ್ಕೂಲ್ ಶಿಕ್ಷಕರು. ಇವರನ್ನು ನಾನು ಯಾವ ಕಡೆ ಮುಂದಿನ ವಿದ್ಯಾಭ್ಯಾಸಕ್ಕೆ  ಹೋದರೂ ಮರೆಯಲಾಗದ ನೆನಪು. ಶಿಕ್ಷಕರಾದರೆ ಇವರಂತೆ ಇರಬೇಕು ಎಂದು ಭಾವಿಸುತ್ತೇನೆ. ಇವರು ನನ್ನ ಜೀವನದ  ಕೇವಲ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಲಿಲ್ಲ, ಪ್ರತಿಯೊಂದು ವಿಷಯದ ಮೇಲೂ ಪ್ರಭಾವ ಬೀರಿದವರು. ನಾರ್ಶ ಮೈದಾನದ ಪ್ರೌಢಶಾಲಾ ಶಿಕ್ಷಕರು ಎಂದು ಹೆಮ್ಮೆಯಿಂದ ಹೇಳುತ್ತೇನೆ.
      ನನ್ನ ಪ್ರೀತಿಯ ಶಿಕ್ಷಕ ಶಿಕ್ಷಕಿಯರಾದ ಭಾರತಿ ಟೀಚರ್ ,  ಲತಾ ಟೀಚರ್ ,  ಶರತ್ ಸರ್ ,  ಶುಭ ಟೀಚರ್ ,  ಸರೋಜ ಟೀಚರ್ ,  ಗೋಪಾಲಕೃಷ್ಣ ಸರ್ ,   ರಫೀಕ್ ಸರ್ ,  ಅನಿಲ್ ಸರ್ ಇವರೆಲ್ಲಾರು ಕೇವಲ ಶಿಕ್ಷಕರಾಗದೆ ತಂದೆ ತಾಯಿಯ ಸ್ಥಾನದಲ್ಲಿ,  ಸ್ನೇಹಿತರಾಗಿ,  ಗುರುಗಳ ಪಾತ್ರ ವಹಿಸಿದವರು. ನನಗೆ ಅನಾರೋಗ್ಯದಿಂದ ಇದ್ದ  ಸಮಯದಲ್ಲಿ ಶಾಲೆಗೆ ಹೋಗಲು     ಅನುಕೂಲವಿಲ್ಲದಿದ್ದಾಗ ಅಂತಿಮವಾದ ಪಬ್ಲಿಕ್ ಪರೀಕ್ಷೆಯ ಸಮಯದಲ್ಲಿ ಪೋಷಕರು  ನಿರಾಕರಿಸಿದಾಗ ನನ್ನ ಪ್ರೀತಿಯ ಶಿಕ್ಷಕರ ಧೈರ್ಯ ಕಾಳಜಿ ಅವರ ಪ್ರೀತಿ ನಂಬಿಕೆ ಭರವಸೆಯ ಮುಂದೆ  ನನಗೆ ಯಾವುದೂ ಲೆಕ್ಕಕ್ಕಿಲ್ಲದೆ ಶಾಲೆಗೆ ಹೋದ ನೆನಪು  ಇವತ್ತಿಗೂ ಕಾಡುತ್ತಿದೆ. ಇಂತಹಾ ಶಿಕ್ಷಕರನ್ನು ಮರೆಯಲು ಸಾಧ್ಯವೇ....? ಕೇವಲ ಶಿಕ್ಷಕರಾಗಿ ಕೆಲಸ ನಿರ್ವಹಿಸದೆ ಸ್ವಂತ ಮಕ್ಕಳ ಬಗ್ಗೆ ಹೇಗೆ ತಂದೆ ತಾಯಿಯರು ನಿರೀಕ್ಷೆಗಳನ್ನು ಇಡುತ್ತಾರೆಯೋ ಹಾಗೆ ಸ್ವತಹ ಮಕ್ಕಳ ಹಾಗೆ ನಮ್ಮನ್ನು ಕಂಡವರು. ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯ ಸಮಯದಲ್ಲಿ ಅವರ ಸಮಯವನ್ನು ನಮ್ಮೊಂದಿಗೆ ಕಳೆದು ನಮಗೆ ಪ್ರೇರಣೆಯನ್ನು ಕೊಟ್ಟು ನಮ್ಮೊಂದಿಗೆ ಅವರು ಮಕ್ಕಳಾಗಿ ಬೆರೆತು ಉತ್ತಮ ರೀತಿಯಲ್ಲಿ ಉತ್ತೀರ್ಣರಾಗಿಸಿದವರು. ಶಿಕ್ಷಕರೆಂದರೆ ನಮ್ಮ ನಾರ್ಶ ಮೈದಾನದ ಶಿಕ್ಷಕರಂತೆ ಇರಬೇಕು ಎಂದು ಹೆಮ್ಮೆಯಿಂದ ಹೇಳುತ್ತೇನೆ. ನನ್ನ ಪಿಯುಸಿ ವಿದ್ಯಾಭ್ಯಾಸ ಬೇರೆ ಕಾಲೇಜ್ ನಲ್ಲಿ ಮುಂದುವರಿಸುತಿದ್ದರೂ ನನ್ನ ಹೈಸ್ಕೂಲ್ ಶಿಕ್ಷಕರ ಬಗ್ಗೆ ನೆನಪನ್ನು ಹಸಿರಾಗಿಸಿದ ಮಕ್ಕಳ ಜಗಲಿಯ ತಾರನಾಥ್ ಕೈರಂಗಳ ಸರ್ ಅವರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ನನ್ನ ಒಂದನೇ ತರಗತಿಯಿಂದ ಪಿಯುಸಿ ವರೆಗಿನ ಎಲ್ಲಾ ಅಧ್ಯಾಪಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು....
................................................ ಶಿಫಾನ
ಪ್ರಥಮ ಪಿಯುಸಿ
ಅನುಗ್ರಹ ವುಮೆನ್ಸ್ ಕಾಲೇಜ್ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************     ನಾನು ಎಂಟನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದೇನೆ. ನನಗೆ ಮೊದಲ ಅಕ್ಷರ ಅಭ್ಯಾಸ ಮಾಡಿಸಿದ ಶಿಕ್ಷಕಿ ಕಲ್ಪನಾ ಮೇಡಂ. ಪ್ರಪಂಚದಲ್ಲಿ ಅತ್ಯದ್ಭುತವಾದ ವ್ಯಕ್ತಿತ್ವ ಹೊಂದಿರುವವರು. ಪ್ರತಿದಿನವೂ ನನ್ನ ಸಾಧನೆಗೆ ಪೋಷಣೆ ನೀಡುತ್ತಿರುವವರು. ಈಗಲೂ ನನ್ನ ಪ್ರತಿಭೆಗೆ ಬೇಕಾದ ಯಾವುದೇ ಸಹಕಾರ ಬೇಕಾದರೂ ನನ್ನ ಮುದ್ದು ವಿದ್ಯಾರ್ಥಿಗೆ ನಾನು ಸಂತೋಷದಿಂದ ಮಾಡುವೆ ಎಂದು ಮಾಡುವರು. ಚಿತ್ರಕಲೆಗೆ ಬೇಕಾದ ಹಾಳೆ ಬಣ್ಣ ನೃತ್ಯಕ್ಕೆ ಬೇಕಾದ ಉಡುಪುಗಳನ್ನು ತಂದು ಕೊಡುವರು. ಹಾಡಿಗೆ ಮೊದಲ ಹೆಜ್ಜೆ ಹಾಕಿಸಿ ಇಂದು ಉತ್ತಮ ನೃತ್ಯ ಕಲಾವಿದೆಯಾಗಲು ದಾರಿ ತೋರಿದವರು. ನಾನು ಏನೇ ಸಾಂಸ್ಕೃತಿಕವಾಗಿ ಸಾಧನೆ ಮಾಡಿದರೂ ಮೊದಲ ಪ್ರಶಂಸೆ ಮಾಡುವವರಲ್ಲಿ ಅವರು ಮೊದಲಿಗರಾಗಿರುತ್ತಾರೆ. ಅವರನ್ನು ಮರೆಯಲು ಸಾಧ್ಯವಿಲ್ಲ. ನನ್ನನ್ನು ಮಗಳ ರೀತಿಯಲ್ಲಿ ನೋಡಿಕೊಳ್ಳುತ್ತಾರೆ. ಉತ್ತಮ ಶಿಕ್ಷಕರಾಗಿದ್ದು ಭದ್ರ ಬುನಾದಿ ಹಾಕಿದರು. ಅವರೊಂದಿಗೆ ಸುಂದರವಾದ ನೆನಪುಗಳಿವೆ. ನನಗೆ ಪ್ರತಿ ಸಲ ಅಮ್ಮನ ಸ್ಥಾನದಲ್ಲಿ ನಿಲ್ಲುತ್ತಾರೆ. ತುಂಬಾ ಕ್ರಿಯಾಶೀಲರು ಹೊಸ ವಿಷಯ ಕಲಿಸುವಲ್ಲಿ ತುಂಬಾ ಗಟ್ಟಿಗರು. ಕಲಿಯುವ ತನಕ ಬಿಡುವುದಿಲ್ಲ. ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಅವರ ಬಗ್ಗೆ ಹೇಳುತ್ತಾ ಹೋದರೆ ಪದಗಳು ಸಾಲವು. ನನ್ನ ಶಿಕ್ಷಣದ ಹಾದಿಗೆ ಮೊದಲ ಬೆಳಕಿನ ದೀಪ ಬೆಳಗಿಸಿದವರು. ಅವರು ಸದಾ ನನ್ನ ನೆಚ್ಚಿನ ಶಿಕ್ಷಕರು. ದೇವರು ಅವರಿಗೆ ಆರೋಗ್ಯ ಆಯಸ್ಸನ್ನು ನೀಡಲಿ ನನ್ನಂಥ ಸಾವಿರಾರು ವಿದ್ಯಾರ್ಥಿಗಳ ಜೀವನವನ್ನು ಬೆಳಗಲಿ. ದೇವರಿಗೆ ಸಮಾನರಾದ ನನ್ನ ಪ್ರಥಮ ಅಕ್ಷರಭ್ಯಾಸದಾತೆಗೆ ನನ್ನ ನಮನಗಳು. ವಂದನೆಗಳೊಂದಿಗೆ ನಿಮ್ಮ ಪ್ರೀತಿಯ ವಿದ್ಯಾರ್ಥಿನಿ.
................................... ನಮಿತಾಶ್ರೀ ಜೆ. ಎನ್ 
8ನೇ ತರಗತಿ.
ತರಳಬಾಳು ಸಿ ಬಿ ಎಸ್‌ ಸಿ ಸ್ಕೂಲ್
ಸಿರಿಗೆರೆ , ಚಿತ್ರದುರ್ಗ(ತಾ & ಜಿ)
******************************************      ಗುರು ಎಂದರೆ ಎರಡು ಅಕ್ಷರವಲ್ಲ ಗುರುಗಳನ್ನು ವರ್ಣಿಸಲು ಜನ್ಮವೇ ಸಾಲಲ್ಲ. ಯಾಕೆಂದರೆ ನಾವು ಏನೇ ಸಾಧಿಸಲಿ ಅದರಲ್ಲಿ ಗುರುಗಳ ಪಾತ್ರ ಇರುತ್ತದೆ. ನಮ್ಮನ್ನು ಯಶಸ್ವಿ ನೆಡೆಗೆ ಸಾಗಿಸುವವರು ಗುರುಗಳೇ. ಜೀವನದಲ್ಲಿ ಗುರುಗಳ ಮಹತ್ವ ಎಷ್ಟು ಮುಖ್ಯ ಅಲ್ವಾ... ನನಗೆ ತುಂಬಾ ಇಷ್ಟವಾದ ಗುರು ಎಂದರೆ ಭಾಗ್ಯಲಕ್ಷ್ಮಿ ಟೀಚರ್. ಯಾಕೆಂದರೆ ಇವರು ನಾನು 7ನೇ ತರಗತಿಯಲ್ಲಿರುವಾಗ ಕ್ಲಾಸ್ ಟೀಚರ್ ಆಗಿದ್ದರು. ನನಗೆ ಅಷ್ಟೊಂದು ಓದುವ ಆಸಕ್ತಿ ಇರಲಿಲ್ಲ. ಒಂದು ದಿನ ನನಗೆ ಓದಿನ ಮಹತ್ವ ತಿಳಿಸಿ ಜೀವನದಲ್ಲಿ ಯಾವ ರೀತಿ ಯಶಸ್ವಿಯಾಗಬೇಕು ನಾವು ಉತ್ತಮ ಸ್ಥಾನದಲ್ಲಿದ್ದರೆ ಸಮಾಜ ಯಾವ ರೀತಿ ಕಾಣುತ್ತದೆ ಮತ್ತು ಉತ್ತಮ ಇರಲಿಲ್ಲ ಅಂದರೆ ಯಾವ ರೀತಿ ಕಾಣುತ್ತದೆ ಸಮಾಜ ಎಂದು ನನಗೆ ಆ ದಿನದಂದು ಎಷ್ಟು ಮುತ್ತಿನ ಮಾತುಗಳಿಂದ ತಿಳಿಸಿಕೊಟ್ಟಿದ್ದಾರೆ. ಅದು ನನ್ನ ಟೀಚರ್ ಹೇಳಿದ ಮುತ್ತಿನ ಮಾತುಗಳಿಂದ ನನ್ನ ಕಿವಿಯಲ್ಲಿ ಕೇಳಿಸುತ್ತಾ ಇದೆ. ನಾನೊಂದು ದಿನ ಉತ್ತಮ ವ್ಯಕ್ತಿಯಾದರೆ ಮೊದಲು ನಾನು ನನ್ನ ಟೀಚರ್ಗೆ ಹೇಳಲು ಬಯಸುತ್ತೇನೆ. ನಿಜಕ್ಕೂ ಜೀವನದಲ್ಲಿ ಗುರುಗಳ ಮಹತ್ವ ಎಷ್ಟು ಮುಖ್ಯ ಅಲ್ವಾ...!!
ಗುರು ಬ್ರಹ್ಮ , ಗುರು ವಿಷ್ಣು
ಗುರುದೇವ ಮಹೇಶ್ವರಹಃ
ಗುರು ಸಾಕ್ಷಾತ್ ಪರಬ್ರಹ್ಮ,
ತಸ್ಮೈಶ್ರೀ ಗುರುವೇ ನಮಃ...
ಗುರುಭ್ಯೋ ನಮಃ
................................................ ಚೈತ್ರ ಯು
10 ನೇ ತರಗತಿ
ಸರಕಾರಿ ಪ್ರೌಢಶಾಲೆ ತೋರಣಗಲ್ಲು 
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ
*****************************************     ಪೂರ್ವ ಪ್ರಾಥಮಿಕದಿಂದ ಮೂರನೇ ತರಗತಿಯವರೆಗೂ ಕಲಿಯುತ್ತಿದ್ದ ಸಂದರ್ಭದಲ್ಲಿ ಸ್ಫೂರ್ತಿಯಾಗಿರುವ, ನನ್ನ ವ್ಯಕ್ತಿತ್ವದಲ್ಲಿ
ಬದಲಾವಣೆಗೆ ಕಾರಣರಾಗಿರುವ ಕುಂದಾಪುರ ತಾಲೂಕಿನ ಸಿದ್ದಾಪುರದ ಸರಸ್ವತಿ ವಿದ್ಯಾಲಯದ ಶಾಲೆಯ ಶಿಕ್ಷಕಿಯರು. ಶಿಕ್ಷಕರೆಂದರೆ ಪಾಠ ಬೋಧಿಸುವವರು ಮಾತ್ರವಲ್ಲ, ಸನ್ಮಾರ್ಗದಲ್ಲಿ ನಡೆಯುವಂತೆ ದಾರಿ ತೋರುವ ಮಾರ್ಗದರ್ಶಕರು. ಕಲ್ಲನ್ನು ಶಿಲ್ಪವನ್ನಾಗಿಸಿದವರು. ಪಠ್ಯದ ಜೊತೆಗೆ ಜೀವನ ಮೌಲ್ಯ ತುಂಬುವ ಗುರುಗಳು. ಗುರುಗಳು ಎಂಬ
ಪದದ ಅರ್ಥವೇ ಸೂಚಿಸುವಂತೆ "ಗು" ಎಂದರೆ ಅಂಧಕಾರ ಮತ್ತು "ರು" ಎಂದರೆ ದೂರವಾಗಿಸುವವರು. ಹಾಗೆಯೇ ನನ್ನ ನೆಚ್ಚಿನ ಶಿಕ್ಷಕರೆಂದರೆ ಸಿದ್ದಾಪುರ ಸರಸ್ವತಿ ಶಾಲೆಯ ಪ್ರಜ್ಞಾ ಮಿಸ್ ಮತ್ತು ಸ್ಮಿತಾ ಮಿಸ್. ಅವರೆಂದರೆ ನಮ್ಮ ತರಗತಿಯ ಎಲ್ಲರಿಗೂ ಒಂದು ರೀತಿಯ ಭಯ. ಇವರು ಉತ್ತಮವಾಗಿ ಮಾತ್ರವಲ್ಲದೆ ಅವರ ಅತ್ಯುತ್ತಮ ಬೋಧನಾ ಶೈಲಿ ಗಾಂಭೀರ್ಯತೆ, ತರಗತಿ ಹೊರಗಿನ ಬಾಂಧವ್ಯ, ಪ್ರೀತಿ, ಮಿತ್ರರಂತೆ ಮಾತನಾಡಿಸುವ ಮನೋಭಾವ, ಕರುಣೆ ಸಹನೆಯ ಗುಣ. ಇಷ್ಟು ಮಾತ್ರವಲ್ಲದೆ, ಅವರು ನಾನು ಮಾಡಿದ ತಪ್ಪು ಕೆಲಸವನ್ನು ಗುರುತಿಸಿ ಆ ಕ್ಷಣವೇ ಸರಿಪಡಿಸುವಂತೆ ನನ್ನನ್ನು ಪ್ರೇರೇಪಿಸುತ್ತಾರೆ. ಹಾಗಾಗಿ ನಾನು ಇವತ್ತು ನನ್ನ ವಿದ್ಯಾರ್ಥಿ ದೆಸೆಯಲ್ಲಿ ಪಾಠದ ವಿಷಯವೇ ಆಗಿರಲಿ, ಬೇರೆ ವಿಷಯವೇ ಆಗಿರಲಿ, ಅದನ್ನು ನಾನೇ ತಿದ್ದಿಕೊಂಡು ಸರಿಪಡಿಸಲು ಅವರು ಆ ದಿನಗಳಲ್ಲಿ ನೀಡಿದ ಸಲಹೆ ಸೂಚನೆ ಮಾರ್ಗದರ್ಶನಗಳೇ ನನಗೆ ಇಂದಿನ ದಿನಗಳಲ್ಲಿ ಪ್ರೇರಣೆಯಾಗಿದೆ. ಇವರಿಬ್ಬರೂ ನನಗೆ ಪತ್ಯೇತರ ಚಟುವಟಿಕೆಯಲ್ಲಿ ಅವರಂತೆ ಭಾಗವಹಿಸಲು ಉತ್ತೇಜನ ನೀಡಿದವರು. ಹಾಗಾಗಿ ನಾನು ಇವರಿಬ್ಬರನ್ನು ಯಾವತ್ತೂ ನನ್ನ ಜೀವನದಲ್ಲಿ ಮರೆಯುವುದಿಲ್ಲ. ಇವರಿಬ್ಬರೂ ನನಗೆ ಜೀವನದಲ್ಲಿ
ಒಳ್ಳೆಯ ಹಾದಿಯನ್ನು ತೋರಿಸಿದವರು.
ವಂದನೆಗಳೊಂದಗೆ
.................................................. ರಚನ
5ನೇತರಗತಿ
ದುರ್ಗಾ ಆಂಗ್ಲ ಮಾಧ್ಯಮ ಶಾಲೆ ಕೊಕ್ಕರ್ಣೆ
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ
******************************************
     ಶಿಕ್ಷಕರು ಎಂದರೆ ಇಡೀ ಜಗತ್ತೇ ಗೌರವದಿಂದ ತಲೆಬಾಗುತ್ತದೆ. ಅಂತಹ ಸ್ಥಾನವನ್ನು ಹೊಂದಿರುವುದು ಕೇವಲ ಶಿಕ್ಷಕರು ಮಾತ್ರ. ಪ್ರತಿ ವ್ಯಕ್ತಿಯ ಜೀವನದಲ್ಲಿ ತಂದೆ- ತಾಯಿಯ ನಂತರದ ಸ್ಥಾನವನ್ನು ಶಿಕ್ಷಕರಿಗೆ ನೀಡಿರುತ್ತಾರೆ. ಅಕ್ಷರ ಕಲಿಸುತ್ತಾ ಧೈರ್ಯ, ಸ್ಥೈರ್ಯ ತುಂಬುವರು. ನಗುವಿನಲ್ಲೇ ಮಕ್ಕಳ ಸಂತೋಷವನ್ನು ಕಾಣುತ್ತಾರೆ. ಶಿಕ್ಷಕರು ಎನ್ನುವುದು ವ್ಯಕ್ತಿಯಾಗಿರದೆ, ವಿದ್ಯಾರ್ಥಿಗಳ ಜೀವನದ ಅತಿದೊಡ್ಡ ಶಕ್ತಿಯಾಗಿರುತ್ತಾರೆ. ಮಕ್ಕಳಲ್ಲಿರುವ ಪ್ರತಿಭೆಗಳನ್ನು ಉಳಿಸಲು, ಬೆಳೆಸಲು ಕಷ್ಟ ಪಡುತ್ತಾರೆ. ಅಮ್ಮನಂತೆ ಮಮತೆಯಿಂದ, ಪ್ರೀತಿಯಿಂದ ಪಾಠ ಹೇಳುವ ಗುರುಗಳು. ವಿದ್ಯಾರ್ಥಿಗಳ ಕಲಿಕೆ ಎಂಬ ಜೀವನದ ಪ್ರತಿ ಹೆಜ್ಜೆ - ಹೆಜ್ಜೆಯಲ್ಲೂ ತಿದ್ದಿತೀಡಿ ಅರಿವು ಮೂಡಿಸುತ್ತಾರೆ. ಶಿಕ್ಷಣವೆಂದರೆ ಶಿಕ್ಷೆಯಲ್ಲ ನಮ್ಮನ್ನು ಕಾಪಾಡುವ ರಕ್ಷೆ ಎಂದು ಹೇಳುವರು. ಮುಂದೆ ಗುರಿ ಇರಬೇಕು. ಹಿಂದೆ ಗುರು ಇರಬೇಕು , ಶೃದ್ದೆಯಿಂದ ಕಲಿತರೆ ಸಾಕು ಸಾರ್ಥಕ ಬದುಕು. ಶಿಕ್ಷಕರು ಎಂದರೆ ಕೇವಲ ಪುಸ್ತಕದ ಪುಟಗಳನ್ನು ಕಲಿಸುವವರಲ್ಲ; ಶಿಕ್ಷಣದ ಮೂಲಾರ್ಥವನ್ನು ತಿಳಿಸಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಜೀವನ ಬೆಳಗುವವರಾಗುತ್ತಾರೆ. ಶಿಕ್ಷಕರು ಹೇಳಿರುವ ಎಲ್ಲಾ ಅಂಶಗಳು ನಮ್ಮ ಭವಿಷ್ಯದ ಶಿಕ್ಷಣಕ್ಕೆ ಮಾದರಿಯಾಗಿದೆ. ವಿದ್ಯೆ ಬುದ್ದಿಯನ್ನು ಕಲಿಸುವ, ಉತ್ತಮ ದಾರಿಯನು ತೋರಿಸುವ, ತಮ್ಮ ಉತ್ತಮ ಬೋಧನೆಗಳ ಮೂಲಕ ನೈತಿಕ ಮೌಲ್ಯಗಳನ್ನು ಕಲಿಸುವ, ಶಿಸ್ತಿನ ಮೂಲಕ ಜೀವನದ ಪಾಠ ಹೇಳಿಕೊಡುವ ನನ್ನ ಎಲ್ಲಾ ಪ್ರೀತಿಯ ಶಿಕ್ಷಕರಿಗೆ ಹಾಗೂ ಶಿಕ್ಷಕಿಯರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ನನ್ನ ಬದುಕಿನ ದಾರಿ ಉದ್ದಕ್ಕೂ ತಿದ್ದಿ ತೀಡಿದ ಎಲ್ಲಾ ಶಿಕ್ಷಕರಿಗೂ ಹೃದಯ ಪೂರ್ವಕವಾಗಿ ಧನ್ಯವಾದಗಳು. ಆದ್ದರಿಂದ, ನನಗೆ ಎಲ್ಲಾ ಶಿಕ್ಷಕರು ಸ್ಪೂರ್ತಿಯಾಗಿದ್ದಾರೆ.
............................................. ಭಾಗ್ಯಲಕ್ಷ್ಮಿ
9ನೇ ತರಗತಿ 
ಸರಕಾರಿ ಪ್ರೌಢಶಾಲೆ ಕೊಕ್ರಾಡಿ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
      ನನಗೆ  ಸ್ಪೂರ್ತಿಯಾದ  ಶಿಕ್ಷಕರ  ಹೆಸರು  ಶೋಭಾ H D, ಇವರು  ಚಿತ್ರಕಲಾ  ಶಿಕ್ಷಕರು. 
        ನಾನು ಇಂದು ಒಬ್ಬ  ರಾಜ್ಯಮಟ್ಟದ  ಚಿತ್ರಕಲೆಗಾರ. ಅದಕ್ಕೆ  ಕಾರಣ ಇವರೇ, ಚಿತ್ರಕಲೆಯಲ್ಲಿ ನನ್ನ ತಪ್ಪುಗಳ ವಿಮರ್ಶೆ ಮಾಡಿ, ಸ್ಥಳೀಯ ಹಾಗೂ ತಾಲೂಕುಮಟ್ಟ ಜಿಲ್ಲಾಮಟ್ಟಗಳಲ್ಲಿ ಸ್ಪರ್ಧಿಸಿ, ನಾನು ರಾಜ್ಯಮಟ್ಟದಲ್ಲಿ ದ್ವಿತೀಯ ಬಹುಮಾನ  ಹಾಗೂ  ₹8,500 ಪಡೆಯಲು ಸಹಕಾರಿಯಾಯಿತು. ಹಾಗೂ ಸಾರ್ವಜನಿಕ  ಶಿಕ್ಷಣ  ಇಲಾಖೆ ನನ್ನನ್ನು  ಗುರ್ತಿಸಿ  ₹10.000 ಸಹಾಯಧನ ನೀಡಿರುತ್ತಾರೆ. ಇವೆಲ್ಲದಕ್ಕೂ ನನ್ನ  ಟೀಚರಾದ ಶೋಭಾ  ಮೆಮ್ ರವರೇ ಕಾರಣ, ಎಂದು  ನಾನು  ಸ್ಮರಿಸುತ್ತೇನೆ, ಈ ಮೂಲಕ  ಅವರಿಗೆ  ಗೌರವ   ಸಮರ್ಪಿಸುತ್ತೇನೆ.
................................ ಲಿಖಿತ್ ರಾಜ್ ಜಿ ಎನ್
9ನೇತರಗತಿ
ಸರ್ಕಾರಿ  ಪ್ರೌಢಶಾಲೆ ಅರ್ಕೇಶ್ವರ ನಗರ
ಗುತ್ತಲು, ಮಂಡ್ಯ ಜಿಲ್ಲೆ
******************************************     ನನ್ನ ಪ್ರೀತಿಯ ಭಗವದ್ಗೀತೆಯ ಗುರುಗಳಾದ ಶ್ರೀಮತಿ ಲತಾ ಅವರಿಗೆ ಆದ್ಯ ಮಾಡುವ ನಮಸ್ಕಾರಗಳು. ತಾವು ಕಲಿತ ವಿದ್ಯೆಯನ್ನು ಹತ್ತು ಮಕ್ಕಳಿಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ಕಲಿಸಿ ಕೊಡುವ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. ನೀವು ಕಲಿಸಿ ಕೊಡುವ ಶ್ಲೋಕ, ಭಜನೆ, ಭಗವದ್ಗೀತೆ ಆನ್ಲೈನ್ ಕ್ಲಾಸ್ ಆದರೂ ನಮಗೆ ಮನಮುಟ್ಟುವ ಹಾಗೆ ಹೇಳಿ ಕೊಡುತ್ತೀರಿ. ಈ ಮೊಬೈಲ್ ಯುಗದಲ್ಲಿ ಸನಾತನ ಧರ್ಮವನ್ನು ಬೋದಿಸುವ ನಿಮ್ಮಂತಹ ಶಿಕ್ಷಕರು ಅತಿ ವಿರಳ. ಇಂತಹ ಒಳ್ಳೆಯ ಆನ್ಲೈನ್ ತರಗತಿಯನ್ನು ಉಚಿತವಾಗಿ ಕಲಿಸಿ ಕೊಡುವ ನಿಮಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇನೆ. ನಾನು ಈ ಶಿಕ್ಷಕರ  ದಿನಾಚಣೆಯಂದು ಈ ಮಕ್ಕಳ ಜಗಲಿಯ ಮುಖಾಂತರ ಅಭಿನಂದನೆಯನ್ನು ಹೇಳಲು ಇಷ್ಟಪಡುತ್ತೇನೆ. ಇತಿ ನಿಮ್ಮ ಶಿಷ್ಯೆ 
.................................................. ಆದ್ಯ. ಜೆ.
6ನೇ ತರಗತಿ. 
ಸೆಕ್ರೆಡ್ ಹಾರ್ಟ್ ಆಂಗ್ಲ ಮಾದ್ಯಮ 
ಶಾಲೆ, ಮಡಂತ್ಯಾರು
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************


 
     ನಮಸ್ಕಾರ  ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ನಾನು ಭವಿತ್ ಕುಲಾಲ್. ನಮಗೆ ಸ್ಫೂರ್ತಿ ಯಾಗಿರುವ  ಶಿಕ್ಷಕಿ  ಸೌಮ್ಯಲತಾ ಮಿಸ್. ನಾನು ಮತ್ತು ತಂಗಿ ಅವರನ್ನ ತುಂಬಾ ಗೌರವಿಸಿ , ಪ್ರೀತಿಸುತ್ತೇವೆ. ಸೌಮ್ಯಲತಾ ಮಿಸ್ ಮಾಡುವ ಪಾಠಗಳು ತುಂಬಾ ಇಷ್ಟ.
       ಪಾಠದ ವಿವರಣೆ, ಅಂಶಗಳು ಸಂಯುಕ್ತವಾಗಿ ಬಿಡಿಸಿ ಮನ ಮುಟ್ಟುವಂತೆ ವಿವರಿಸುತ್ತಾರೆ. ನಾನು ಕಂಡ ಹಾಗೆ ನಮ್ಮ ಮಿಸ್ ಎಲ್ಲಾ ವಿದ್ಯಾರ್ಥಿಗಳನ್ನು ಒಂದೇ ಭಾವದಿಂದ ಪ್ರೀತಿಸುತ್ತಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಅವರೆಂದರೆ ತಂಬಾ......  ಪ್ರೀತಿ. ಇದಲ್ಲದೆ ಅವರು ಎಲ್ಲಾ ವಿದ್ಯಾರ್ಥಿಗಳ ಪೋಷಕರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ. ಮಕ್ಕಳ ಚಟುವಟಿಕೆಗಳನ್ನು ಗುರುತಿಸಿ ಬೆಂಬಲ, ಪ್ರೋತ್ಸಾಹ ನೀಡುತ್ತಾರೆ. ನಮ್ಮ ಮಿಸ್ ಯಾವಾಗಲೂ ನಗುತ್ತಲೇ ಆರೋಗ್ಯದಿಂದ ಇರಲಿ ಎಂದು ಬೇಡುತ್ತೇನೆ.  ಇಂತಹ ಮಿಸ್ ಸಿಕ್ಕಿದ ನಾವೇ ಧನ್ಯರು. ಧನ್ಯವಾದಗಳು.
......................................ಭವಿತ್ ಕುಲಾಲ್ 
8ನೇ ತರಗತಿ 
ದ. ಕ. ಜಿ. ಪಂ. ಹಿರಿಯ 
ಪ್ರಾಥಮಿಕ ಶಾಲೆ ಕಲ್ಲಡ್ಕ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************"ಗುರು ಬ್ರಹ್ಮ ಗುರು ವಿಷ್ಣು 
ಗುರು ದೇವೋ ಮಹೇಶ್ವರ
ಗುರು ಸಾಕ್ಷಾತ್ ಪರಬ್ರಹ್ಮ , 
ತಸ್ಮೈ ಶ್ರೀಗುರುವೇ ನಮಃ"
     ನಮ್ಮ ಸಂಸ್ಕೃತಿಯಲ್ಲಿ ಗುರುಗಳನ್ನು ದೇವರ ಸಮಾನ ಹೋಲಿಸಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಗುರುಗಳ ಪಾತ್ರ ಮಹತ್ವದದ್ದಾಗಿದೆ. ಶಿಕ್ಷಕರು ವಿದ್ಯಾರ್ಥಿಗಳನ್ನು ಕತ್ತಲಿನಿಂದ ಜ್ಞಾನವೆಂಬ ಬೆಳಕಿನೆಡೆಗೆ ಕರೆದೊಯ್ಯುವಲ್ಲಿ ಗುರುಗಳ ಪಾತ್ರ ಮಹತ್ತರವಾಗಿದೆ. ಮುಂದಿನ ಜನಾಂಗದ ಶಿಲ್ಪಿಗಳನ್ನು ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಶಿಕ್ಷಕರ ಪ್ರತಿಯೊಂದು ಮಾತು ನಮಗೆ ಪ್ರೇರಣೆ, ಉತ್ಸಾಹಗಳನ್ನು ನೀಡುತ್ತದೆ. ಕಲಿಕೆಯಲ್ಲಿ ಎಡವಿದಾಗ ಯಾವುದಾದರೂ  ವಿಷಯದಲ್ಲಿ ಹಿಂದೆ ಬಿದ್ದಾಗ ಅವರ ಮಾತುಗಳಿಂದ ನಮ್ಮನ್ನು ಹುರಿದುಂಬಿಸಿ "ನಿನ್ನ ಕೈಯಲ್ಲಿ ಸಾಧ್ಯವಾಗುತ್ತೆ ನಿನ್ನಿಂದ ಯಾವುದು ಅಸಾಧ್ಯವಿಲ್ಲ" ಎಂದು ಹುರಿದುಂಬಿಸಿ ನಮ್ಮನ್ನು ಮುಂದೆ ಬಂದು ಮಾತನಾಡಲು ಧೈರ್ಯದಿಂದ ಸವಾಲುಗಳನ್ನು ಎದುರಿಸಲು ಪ್ರೇರಣೆ, ಸ್ಪೂರ್ತಿಯನ್ನು ನೀಡುತ್ತಾರೆ ನಾನು ಮೂರನೇ ತರಗತಿಯಲ್ಲಿರುವಾಗ ಮುಂದೆ ಬಂದು ವೇದಿಕೆ ಮೇಲೆ ನಿಂತು ಮಾತನಾಡಲು ಭಯವಾಗುತ್ತಿತ್ತು. ಆಗ ನನಗೆ ಧೈರ್ಯ ನೀಡಿ "ನಿನ್ನಿಂದ ಸಾಧ್ಯ. ನಿನ್ನ ಧ್ವನಿ ತುಂಬಾ ಚೆನ್ನಾಗಿದೆ. ಭಾಷಣ ಚೆನ್ನಾಗಿ ಮಾಡ್ತೀಯಾ. ನೀನು ಹೆದರಬೇಡ" ಎಂದು ಹುರಿದುಂಬಿಸಿ ವೇದಿಕೆ ಮೇಲೆ ನಿಂತು ಮಾತನಾಡಲು ಸ್ಪೂರ್ತಿ ನೀಡಿದರು. ಈಗಲೂ ನಾನು ಭಯವಿಲ್ಲದೆ ಮುಂದೆ ನಿಂತು ಮಾತನಾಡಲು ಅದೇ ಮೇಡಂ ಕಾರಣ ನನ್ನ ಎಲ್ಲಾ ಪ್ರಾಥಮಿಕ ಶಿಕ್ಷಕರಿಂದ ನಾನು ಹಲವಾರು ವಿಷಯಗಳಲ್ಲಿ ಕಲಿತಿದ್ದೇನೆ. ಹಾಗೆಯೇ ಪ್ರೌಢಶಾಲಾ ಶಿಕ್ಷಕರು ಜೀವನದಲ್ಲಿ ಒಳ್ಳೆಯ ಮಾರ್ಗದಲ್ಲಿ ನಡೆದು ಯಶಸ್ಸು ಗಳಿಸುವ ದಾರಿಗಳನ್ನು ಹೇಳಿದ್ದಾರೆ. 'ಪರೀಕ್ಷೆಯಲ್ಲಿ ಫೇಲಾದರೂ ಜೀವನದಲ್ಲಿ ಫೇಲಾಗಬೇಡಿ ' ಎಂದು ಹೇಳಿ ನಮ್ಮ ಎಲ್ಲಾ ಪ್ರತಿಭೆಗಳಿಗೆ ಫ್ರೋತ್ಸಾಹ ನೀಡಿ ನಮ್ಮ ಸರ್ವಾಂಗೀಣ ಬೆಳವಣಿಗೆಗೆ ಕಾರಣರಾದ ನನ್ನ ಎಲ್ಲಾ ಗುರುವೃಂದಕ್ಕೆ ಧನ್ಯವಾದಗಳು 'ನಿಮ್ಮ ಪ್ರೋತ್ಸಾಹ , ಆಶೀರ್ವಾದ ಹೀಗೆ ಇರಲಿ. ಧನ್ಯವಾದಗಳು...
............................................. ವಸಂತ ಲಕ್ಷ್ಮಿ
ಪ್ರಥಮ ಪಿಯುಸಿ 
ಗೋವಿಂದದಾಸ ಪ್ರಿ- ಯೂನಿವರ್ಸಿಟಿ 
ಕಾಲೇಜು, ಸುರತ್ಕಲ್
ಮಂಗಳೂರು,  ದಕ್ಷಿಣ ಕನ್ನಡ ಜಿಲ್ಲೆ
******************************************Ads on article

Advertise in articles 1

advertising articles 2

Advertise under the article