-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 17

ನಿಷ್ಪಾಪಿ ಸಸ್ಯಗಳು : ಸಂಚಿಕೆ - 17

ನಿಷ್ಪಾಪಿ ಸಸ್ಯಗಳು : ಸಂಚಿಕೆ - 17
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

        
ಪ್ರೀತಿಯ ಮಕ್ಕಳೇ, 
     ಹೇಗಿದ್ದೀರಿ...? ಪರೀಕ್ಷೆಗಳಿಗಾಗಿ ಅಕ್ಷರಲೋಕದೊಳಗೆ ಶಸ್ತ್ರಾಭ್ಯಾಸದಲ್ಲಿ ನಿರತರಾಗಿರುವಿರಾ...? ಓದಿನ ನಡುವಿನ ವಿರಾಮದಲ್ಲಿ ನಿಮಗೊಂದು ಸಿಹಿತಿಂಡಿ ಮಾಡಲು ಕಲಿಸಿಕೊಡುವೆ. ತಿಂದು ಹೇಗಿದೆ ಹೇಳಿ.
    ತೆಂಗಿನ ಕಾಯಿಯನ್ನರೆದು ಹಾಲು ತೆಗ್ದು ಅದಕ್ಕೆ ಆರಾರೂಟ್ ಪುಡಿ, ರುಚಿಗಾಗಿ ಬೆಲ್ಲ, ಪರಿಮಳಕ್ಕಾಗಿ ಏಲಕ್ಕಿ ಸೇರಿಸಿ ಒಲೆಯಲಿಟ್ಟು ಮಗುಚುತ್ತಾ ಗಟ್ಟಿಯಾದಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ಆರಲು ಬಿಡಿ. ನಂತರ ಕತ್ತರಿಸಿ ಬಾಯಿಗಿಟ್ಟು ನಿಧಾನಕ್ಕೆ ಆಸ್ವಾದಿಸಿ. ಇದು ಆರಾರೂಟ್ ಹಲ್ವ! 
      ಇಷ್ಟು ಸುಲಭದಲ್ಲಿ ತಿಂಡಿ ಮಾಡಲು ಸಹಾಯ ಮಾಡಿದ ಆರಾರೂಟ್ ಬಗ್ಗೆ ನಿಮಗೆ ಗೊತ್ತೇ? ಹಿಂದೆಲ್ಲ ಎಲ್ಲರ ಮನೆಗಳಲ್ಲೂ ಈ ವಸ್ತು ಅಡುಗೆಕೋಣೆಯಲ್ಲಿತ್ತು. ಒಮ್ಮೆ ಈ ಹುಡಿಯನ್ನು ಮಾಡಿಟ್ಟುಕೊಂಡರೆ ಹತ್ತು ವರ್ಷಗಳಾದರೂ ಕೆಡುವುದಿಲ್ಲ. ಮಗುವಿಗೆ ಆರು ತಿಂಗಳಾದಾಗ ಪೂರಕ ಆಹಾರವಾಗಿ ಏನನ್ನು ಕೊಡಲಿ... ಎಂದು ಅಮ್ಮಂದಿರು ಅಂಗಡಿ ಬಾಗಿಲು ಸುತ್ತುವ ಕಾಲ ಅದಾಗಿರಲಿಲ್ಲ. ಅವರಿಗೆ ಕೈಗೆ ಸಿಗುತ್ತಿದ್ದುದು ಈ ಆರಾರೂಟ್ ಹುಡಿ. ಬಹುಶ: ಆರಾರೂಟ್ ಮಣ್ಣಿ ತಿನ್ನದೆ ಬೆಳೆದ ಮಕ್ಕಳು ವಿರಳವೇನೊ.
       ಬದುಕಿಗೆ ಒಂದು ಹಂತದಲ್ಲಿ ಆಧಾರ ನೀಡುತ್ತಿದ್ದ ಹಾಗೂ ಜನಸಾಮಾನ್ಯರಿಗೆ ಆಹಾರ ಹಾಗೂ ಔಷಧಿಯಾಗಿದ್ದ ಈ ಆರಾರೂಟ್ ಸಸ್ಯವು ಭಾರತದ ಎಲ್ಲಾ ಕಡೆ ಬೆಳೆಯುತ್ತದೆ. ಕೂವೆ ಹಾಗೂ ಆರಾರೂಟ್ ಸಸ್ಯವನ್ನು ಒಂದೇ ಎಂದು ಹೇಳುತ್ತಾರಾದರೂ ನಾವು ಸಣ್ಣವರಿದ್ದಾಗ ಕಂಡಂತೆ ಕೂವೆ ಅಡಿಕೆ ತೋಟ ಹಾಗೂ ಗುಡ್ಡಗಳ ಬದಿಗಳಲ್ಲಿ ತನ್ನಿಂತಾನಾಗಿ ಕಳೆ ಸಸ್ಯವಾಗಿ ಬೆಳೆಯುತ್ತಿತ್ತು. ಆರಾರೂಟನ್ನು ಸಾಲಾದ ಮಣ್ಣಿನ ದಿಣ್ಣೆ ಮಾಡಿ ಅದರಲ್ಲಿ ನೆಟ್ಟು ಹಟ್ಟಿಗೊಬ್ಬರ ಹಾಕಿ ಮಣ್ಣು ಹಾಕುತ್ತಿದ್ದರು. ನೋಡಲು ಎರಡೂ ಸಸ್ಯಗಳು ಒಂದೇ ರೀತಿ ಕಂಡರೂ ಕೂವೆಗಿಂತ ಆರಾರೂಟ್ ಎಲೆಗಳು ಗಾಢ ಹಸಿರು ಹಾಗೂ ಸ್ವಲ್ಪ ಉದ್ದನೆಯ ತೊಟ್ಟು ಇದ್ದು ಕೂವೆಯ ಗಡ್ಡೆಯ ಹುಡಿ ಸ್ವಲ್ಪ ಕಹಿಯಾಗಿರುತ್ತಿತ್ತು. ಎರಡನ್ನೂ ಬಳಸುತ್ತಿದ್ದರು. ಕೂವೆಯ ಗಡ್ಡೆಗೆ ಹುಡಿ ಜಾಸ್ತಿ ಎನ್ನುತ್ತಿದ್ದರು.
        ಈ ಆರಾರೂಟ್ ಗಿಡವು ವಿಶೇಷ ವಾದ ವಿನ್ಯಾಸ ಹೊಂದಿದ ಸಸ್ಯ. ಸಾಮಾನ್ಯವಾಗಿ ಅರಶಿನದಂತೆ ಕಾಣುವ ಈ ಗಿಡದ ಗಡ್ಡೆಗಳು ಶುಂಠಿಯನ್ನು ಹೋಲುವುದಾದರೂ ಮೂಲಂಗಿಯಂತೆ ಕಾಣಿಸುತ್ತವೆ. ಇದರ ಎಲೆಗಳು ಹತ್ತು ಹನ್ನೆರಡು ಇಂಚು ಉದ್ದವಿದ್ದು ಮಧ್ಯಭಾಗ ನಾಲ್ಕೈದು ಇಂಚು ಅಗಲವಿರುತ್ತದೆ. ಗಿಡವು ನಾಲ್ಕೈದು ಅಡಿಗಳೆತ್ತರ ಬೆಳೆಯುತ್ತದೆ. ಮಳೆಗಾಲದ ಆರಂಭದಲ್ಲಿ ನೆಟ್ಟರೆ ಮೂರು ತಿಂಗಳಾಗುತ್ತಲೇ ತೆನೆಯಂತೆ ಬಂದು ನಾಲ್ಕಾರು ಬಿಳಿಯ ಪುಟ್ಟ ಹೂಗಳಾಗುತ್ತವೆ. ನಂತರ ಗಿಡ ಬೆಳೆಯದೆ ಎಲೆಗಳೆಲ್ಲ ಹಳದಿಯಾಗಿ ಡಿಸೆಂಬರ್ ಜನವರಿಗೆಲ್ಲಾ ಒಣಗಿ ಬಿದ್ದು ಹೋಗುತ್ತವೆ.
     ಬಳಿಕ ಅದರ ಬುಡವನ್ನು ಅಗೆದು ಗಡ್ಡೆಗಳನ್ನು ಸಂಗ್ರಹಿಸಬೇಕು. ಒಂದೊಂದು ಗಿಡದಲ್ಲೂ ಒಂದು ಕೆ.ಜಿ ಗಿಂತ ಹೆಚ್ಚು ಗಡ್ಡೆಗಳಿರುತ್ತವೆ. ಅವುಗಳ ಮಣ್ಣು ಹೋಗುವಂತೆ ಚೆನ್ನಾಗಿ ತೊಳೆದು ಸಣ್ಣ ಸಣ್ಣ ಬಿಲ್ಲೆಗಳಾಗಿ ಕತ್ತರಿಸಬೇಕು ಅಥವಾ ತುರಿದುಕೊಳ್ಳಬೇಕು. ಬಳಿಕ ಕಲ್ಲಿಗೆ ಅಥವಾ ಮಿಕ್ಸಿಗೆ ಹಾಕಿ ರುಬ್ಬಿಕೊಂಡು ತೆಳುವಾದ ಬಟ್ಟೆಯಲ್ಲಿ ಸೋಸಬೇಕು.
           ಸೋಸಿದ ನೀರನ್ನು ನಾಲ್ಕಾರು ಗಂಟೆ ನಿಶ್ಚಲವಾಗಿರಿಸಿ ನೀರನ್ನು ಬಸಿದರೆ ಅಡಿಯಲ್ಲಿ ಆರಾರೂಟ್ ನ ಬಿಳಿಯದಾದ ನಯವಾದ ಹಿಟ್ಟು ದೊರಕುತ್ತದೆ. ಇದನ್ನು ಎರಡು ಮೂರು ಬಾರಿ ಪುನರಾವರ್ತಿಸಿದರೆ ಹಿಟ್ಟಿನ ಬಣ್ಣ ಮತ್ತೂ ಶುಭ್ರವಾಗುತ್ತದೆ. ಬಳಿಕ ಈ ಹಿಟ್ಟನ್ನು ಬಿಸಿಲಿಗಿಟ್ಟು ಒಣಗಿಸಿ ಡಬ್ಬಗಳಲ್ಲಿ ಮುಚ್ವಿಟ್ಟರೆ ಬಹುಕಾಲ ಹಾಳಾಗುವುದೇ ಇಲ್ಲ.
       ಎಂತಹ ವಿಶಿಷ್ಠವಾದ ಸಸ್ಯವಲ್ಲವೇ! ಮೇಲ್ನೋಟಕ್ಕೆ ಬರಿಯ ಗಿಡ ಕಾಣಿಸಿಕೊಂಡರೆ ಈ ನಿಷ್ಪಾಪಿ ಸಸ್ಯ ತನ್ನೊಡಲಲ್ಲಿ ಅಮೃತವನ್ನೇ ಶೇಖರಣೆ ಮಾಡಿಕೊಂಡಿರುತ್ತದೆ. ಇಂತಹ ಸಸ್ಯದ ಶಾಸ್ತ್ರೀಯ ಹೆಸರು ಮರಾಂಟ ಅರುಂಡಿನೇಸಿಯೆ.(Maranta arundinacea). ಆರಾರೂಟ್ ನ ಕುಟುಂಬ ಮರಾಂಟಾಸಿಯೆ. (Marantaceae)
ಇದು ದ.ಅಮೆರಿಕ, ಬ್ರಜಿಲ್, ವೆಸ್ಟ್ ಇಂಡೀಸ್, ಏಷ್ಯಾ, ಆಫ್ರಿಕಾ ಹೀಗೆ ಜಗತ್ತಿನ ಬಹುಪಾಲು ಭಾಗದಲ್ಲಿ ಕಾಣಸಿಗುವ ಸಸ್ಯ. ಹೆಚ್ಚು ಆರೈಕೆ ನೀರು, ಗೊಬ್ಬರದ ಅವಶ್ಯಕತೆ ಇರದ ಬೆಳೆ. ಇಲಿ ಹೆಗ್ಗಣಗಳ ತೊಂದರೆ ಬರಬಹುದೇ ಹೊರತು ಇತರ ತೊಂದರೆಗಳು ಕಾಣಿಸುವುದಿಲ್ಲ. ಹುಡಿಗೆ ಕೆ.ಜಿ ಗೆ 350.00 ರುಪಾಯಿಗಿಂತಲೂ ಹೆಚ್ಚಿದೆ. ಬಿಸ್ಕತ್, ಐಸ್ ಕ್ರೀಮ್, ಹಲ್ವಾ, ಹಪ್ಪಳ, ಸಂಡಿಗೆ, ದೋಸೆ, ಪಾಯಸವಾಗಿಯೂ ಬಳಸುವುದಲ್ಲದೇ ನಿಸರ್ಗವೇ ನೀಡಿರುವ ಶಿಶು ಆಹಾರವಾಗಿದೆ. ಇದರ ಮಣ್ಣಿಯನ್ನು ಅಬಾಲ ವೃದ್ಧರು ಇಷ್ಟಪಡುತ್ತಾರೆ. ನೀರಾಗಿ ಪಾನೀಯದಂತೆಯೂ ಸೇವಿಸಬಹುದು.
     ಆರಾರೂಟ್ ಮನಷ್ಯನಿಗೆ ಔಷಧೀಯ ರೂಪದಲ್ಲೂ ಸಹಾಯಕವಾಗಿದೆ. ಹೇರಳವಾಗಿ ಕಾರ್ಬೋಹೈಡ್ರೇಟ್, ಕೊಬ್ಬು ಅತ್ಯಲ್ಪ ಪ್ರಮಾಣದಲ್ಲಿರುವ ಇದರ ಹುಡಿಯಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪೊಟಾಸಿಯಂ, ಫಾಸ್ಪರಸ್, ಮೆಗ್ನೀಶಿಯಂ, ಮ್ಯಾಂಗನೀಸ್, ಜಿಂಕ್, ತಾಮ್ರ, ಸೋಡಿಯಂ, ವಿಟಮಿನ್ B1, 5, 6, 9 ಗಳಿದ್ದು ರೋಗ ನಿರೋಧಕ ಶಕ್ತಿ ಹೊಂದಿದೆ. ಮಕ್ಕಳಿಗೆ ಹಸಿವಿಗೆ ಮಾತ್ರವಲ್ಲದೆ ಭೇದಿ, ಮಲಬದ್ಧತೆಗೂ ದೊಡ್ಡವರಿಗೆ ನಿಶ್ಯಕ್ತಿ, ಹೃದಯದ ಆರೋಗ್ಯ, ರಕ್ತದೊತ್ತಡ, ಹೃದಯ ಬಡಿತ ನಿಯಂತ್ರಣ, ಜೀರ್ಣಾಂಗ ವ್ಯೂಹದ ಸಮಸ್ಯೆ, ಹೃದಯಾಪಘಾತದಿಂದ ರಕ್ಷಣೆ, ಚರ್ಮದ ಆರೋಗ್ಯ, ಹಲ್ಲಿನ ರಕ್ಷಣೆ, ಗೊನೊರಿಯಾ, ಮೂಲವ್ಯಾಧಿ, ಜಠರಾಮ್ಲ, ಉರಿಮೂತ್ರ ಇತ್ಯಾದಿಗಳಿಗೆ ಉತ್ತಮ ಫಲಿತಾಂಶ ನೀಡುತ್ತದೆ.
         ಇಂದಿನ ಧಾವಂತದ ಯುಗದಲ್ಲಿ ನಮ್ಮದು "ಪುರ್ಸೊತ್ತಿಲ್ಲ" ಎನ್ನುವುದೇ ಮಂತ್ರ. ಗಡ್ಡೆಯನ್ನು ಹುಡಿಯ ರೂಪಕ್ಕಿಳಿಸುವ ತಾಳ್ಮೆಯೂ ಇಲ್ಲ. ಗಿಡಗಳ ಜೊತೆಗೆ ಸಖ್ಯವೂ ಇಲ್ಲ. ನಮ್ಮದೇನಿದ್ದರೂ ತಕ್ಷಣಕ್ಕೆ ಸಿಗುವುದಾದರೆ ಬೇಕೆನುವ ಮನಸ್ಥಿತಿ. ಅದು ಕಲಬೆರಕೆಯಾಗಿರಬಹುದೇ ? ಎಂದು ಯೋಚಿಸಲೂ ಸಮಯ ನೀಡಲಾರೆವು.
     ಮಕ್ಕಳೇ, ಇಂತಹ ಓಟದಿಂದ ನಾವು ಒಂದಿಷ್ಟು ವಿರಾಮ ಪಡೆದು ನಮ್ಮ ಹಿತ್ತಿಲಲ್ಲಿ ಕನಿಷ್ಟ ಹತ್ತಾದರೂ ಆರಾರೂಟ್ ಗಿಡ ನೆಟ್ಟು ಬೆಳೆಸಿ ನಮಗೆ ನಾವೇ ಒಡೆಯರಾದರೆ ಎಂತಹ ಮಧುರ ಅನುಭವ ಒದಗಬಹುದು ಯೋಚಿಸಿ ನೋಡಿ. ಬೇರೆ ಗಿಡಗಳ ನಡುವೆಯೂ ನಿರುಪದ್ರವಿಯಾಗಿ ಬೆಳೆಯಬಲ್ಲುದು. ಪ್ಲಾಸ್ಟಿಕ್ ಗೋಣಿಗಳಲ್ಲೂ ಬೆಳೆಸಬಹುದು. ನಮ್ಮ ಆಹಾರ ನಮ್ಮ ಕೈಯಲ್ಲಿ ಬೆಳೆದಾಗ ಮಾತ್ರ ಪೂರ್ಣ ಪ್ರಮಾಣದ ಆಹಾರ ಅಥವಾ ಔಷಧಿಯಾಗಬಲ್ಲದು ಅಲ್ಲವೇ... ಏನಂತೀರಾ?
    ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ನಿಮ್ಮನ್ನು ಭೇಟಿಯಾಗುವೆ... ನಮಸ್ತೆ
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************

Ads on article

Advertise in articles 1

advertising articles 2

Advertise under the article