-->
ಹಕ್ಕಿ ಕಥೆ : ಸಂಚಿಕೆ - 118

ಹಕ್ಕಿ ಕಥೆ : ಸಂಚಿಕೆ - 118

ಹಕ್ಕಿ ಕಥೆ : ಸಂಚಿಕೆ - 118
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

              
      ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಕಳೆದ ವರ್ಷ ಬೇಸಗೆಯಲ್ಲಿ ಒಂದು ಕೌಟುಂಬಿಕ ಕಾರ್ಯಕ್ರಮ ಇದ್ದುದರಿಂದ ಊರಿಗೆ ಹೋಗಿದ್ದೆ. ಕಾರ್ಯಕ್ರಮ ನಡೆಯುವ ಹಾಲ್ ಮನೆಯಿಂದ ಎಂಟು ಕಿಲೋಮೀಟರ್ ದೂರ ಇದ್ದುದರಿಂದ ಮನೆಯವರನ್ನು ಅಲ್ಲಿಯವರೆಗೆ ತಲುಪಿಸುವ ಜವಾಬ್ದಾರಿ ನನ್ನದಾಗಿತ್ತು. ಎರಡು-ಮೂರು ಬಾರಿ ಆಕಡೆ ಈಕಡೆ ಹೋಗಿ ಬರಬೇಕಾಯಿತು. ಹೋಗುವ ದಾರಿಯಲ್ಲಿ ಒಂದು ಕೆರೆ ಕಾಣಿಸಿತು. ಸಹಜವಾಗಿ ನನ್ನ ಗಮನ ಆ ಕೆರೆಯ ಕಡೆಗೆ ಹೋಯಿತು. ಕೊನೆಯಬಾರಿ ಬರಬೇಕಾದವರು ಇನ್ನೂ ತಯಾರಾಗಲು ಸ್ವಲ್ಪ ಸಮಯ ಇದ್ದುದರಿಂದ ದಾರಿ ಮಧ್ಯೆ ಕೆರೆಯ ಹತ್ತಿರ ಕಾರನ್ನು ನಿಲ್ಲಿಸಿದೆ. ಯಾವುದಕ್ಕೂ ಇರಲಿ ಎಂದು ಬೈನಾಕುಲಾರ್ ಹಿಡಿದುಕೊಂಡೇ ಹೋಗಿದ್ದೆ. ಕಾರಿನಿಂದ ಇಳಿದರೆ ಹಕ್ಕಿಗಳು ಬೆದರಿ ಹಾರಿ ಹೋಗುವ ಸಾದ್ಯತೆ ಇದ್ದುದರಿಂದ ಅಲ್ಲೇ ಕುಳಿತು ಕೆರೆಯನ್ನು ಗಮನಿಸಲು ಪ್ರಾರಂಭಿಸಿದೆ. ಆ ವರ್ಷ ಮಳೆ ಚೆನ್ನಾಗಿ ಬಂದಿತ್ತು, ಹಾಗಾಗಿ ಕೆರೆಯಲ್ಲಿ ಇನ್ನೂ ಸಾಕಷ್ಟು ನೀರು ತುಂಬಿಕೊಂಡಿತ್ತು. ಕೆರೆಯ ಒಂದು ಬದಿಯಲ್ಲಿ ಕೆಲವು ಎಮ್ಮೆಗಳ ಹಿಂಡು ನೀರಿನಲ್ಲಿ ಮುಳುಗಿಕೊಂಡು ಮೈ ತಣಿಸಿಕೊಳ್ಳುತ್ತಿದ್ದವು.  ಕೆರೆಯ ಇನ್ನೊಂದು ಬದಿಯಲ್ಲಿ ಒಂದಷ್ಟು ಮರಗಳ ನೆರಳಿತ್ತು. ಆ ಕಡೆ ಗಮನಿಸುತ್ತಾ ಹೋದಾಗ ದೊಡ್ಡಗಾತ್ರದ ಹಕ್ಕಿಯೊಂದು ಅಲ್ಲಿ ಕಾಣಿಸಿತು. ಆದರೆ ಅದರ ಬಣ್ಣ ಹೇಗಿತ್ತೆಂದರೆ ತಕ್ಷಣ ಅದನ್ನು ಗುರುತಿಸುವುದು ಸಾಧ್ಯವೇ ಇರಲಿಲ್ಲ. ಕೆಲವೊಂದು ನಾಯಿ ಮರಿಗಳು ಆಟವಾಡುತ್ತಾ ಅಲ್ಲಿಗೆ ಬಂದದ್ದರಿಂದ ಹೆದರಿ ಆ ಪಕ್ಷಿ ಅಲ್ಲಿಂದ ಹಾರಿತು. ಆಗಲೇ ಅಲ್ಲೊಂದು ಪಕ್ಷಿ ಇರುವುದು ತಿಳಿದದ್ದು. ಹಾರಿದ ಪಕ್ಷಿ ಕೊಳದ ಇನ್ನೊಂದು ಕಡೆ ಕೆಸರಿನ ಹತ್ತಿರ ಬಂದು ಇಳಿಯಿತು. ಅಲ್ಲಿ ಸ್ವಲ್ಪ ಬೆಳಕೂ ಚೆನ್ನಾಗಿದ್ದುದರಿಂದ ಹಕ್ಕಿ ಈಗ ಸರಿಯಾಗಿ ಕಾಣಿಸುತ್ತಿತ್ತು. ಭರ್ಚಿಯಂತಹ ಕೊಕ್ಕು, ಉದ್ದದ ಕಂದು ಬಣ್ಣದ ಕುತ್ತಿಗೆ, ಉದ್ದನೆಯ ಕಾಲುಗಳು, ತಕ್ಷಣ ಅಲ್ಲೊಂದು ಹಕ್ಕಿ ಇದೆ ಎಂದು ಗುರುತು ಹಿಡಿಯುವುದು ಕಷ್ಟ. ಜೌಗು ಪ್ರದೇಶದಲ್ಲಿ, ಸ್ವಲ್ಪ ನೀರು ಇರುವ ಕಡೆಗಳಲ್ಲಿ ನಿಶ್ಚಲವಾಗಿ ನಿಂತುಕೊಂಡು ನೀರಿನಲ್ಲಿ ಗಮನ ಕೇಂದ್ರೀಕರಿಸಿ ನಿಂತುಕೊಂಡಿತ್ತು. ಸುಮಾರು ನಿಮಿಷ ಅಲುಗಾಡದೇ ನಿಂತಿದ್ದ ಹಕ್ಕಿಗೆ ನೀರಿನಲ್ಲಿ ಅದೇನು ಕಂಡಿತೋ ತಕ್ಷಣ ತನ್ನ ಉದ್ದ ಕೊಕ್ಕನ್ನು ನೀರಿಗೆ ಎಸೆದು, ಮೀನೊಂದನ್ನು ಹಿಡಿದೇ ಬಿಟ್ಟಿತು. ಮೀನು ಹಿಡಿಯುವ ಅದರ ತಾಳ್ಮೆ ನೋಡಿ ಆಶ್ಚರ್ಯವಾಯಿತು.
      ಮನೆಗೆ ಬಂದ ನಂತರ ಸಲೀಂ ಅಲಿಯವರ ಪಕ್ಷಿಪುಸ್ತಕ ತೆರೆದು ಅದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಂಡೆ. ಜೂನ್ ತಿಂಗಳಿನಿಂದ ಮಾರ್ಚ್ ತಿಂಗಳಿನ ನಡುವೆ ಈ ಹಕ್ಕಿಯ ಸಂತಾನೋತ್ಪತ್ತಿ ಕಾಲ. ಕೊಕ್ಕರೆ, ಬಕಪಕ್ಷಿ ಮೊದಲಾದ ತನ್ನ ಹತ್ತಿರದ ಸಂಬಂಧಿಗಳ ಜೊತೆ, ಮರದ ಮೇಲೆ ಮರದ ಕಡ್ಡಿಗಳಿಂದ ಅಟ್ಟಳಿಗೆಯಂತಹ ಗೂಡನ್ನು ಮಾಡಿ ಅಲ್ಲಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಗಂಡು ಮತ್ತು ಹೆಣ್ಣು ಹಕ್ಕಿಗಳು ನೋಡಲು ಸಮಾನವಾಗಿರುತ್ತವೆ. ಆದರೆ ಆಹಾರ ಹುಡುಕಲು ಹೋಗುವಾಗ ಗುಂಪಾಗಿ ಹೋಗುವುದಿಲ್ಲ. ಇವುಗಳು ಯಾವಾಗಲೂ ಒಂಟಿಯಾಗಿ ಆಹಾರ ಹುಡುಕುತ್ತವೆ. ಮೀನು, ಕಪ್ಪೆ ಮತ್ತು ಹಾವುಗಳು ಇದರ ಮುಖ್ಯ ಆಹಾರ. ಆ ಮೂಲಕ ಮೀನು, ಕಪ್ಪೆಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿ ಇಡುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ನೀರು ನಿಲ್ಲುವ ಕೆರೆಗಳು, ಮಳೆಗಾಲದಲ್ಲಿ ನೀರು ನಿಲ್ಲುವ ಗದ್ದೆಯ ಬದಿಗಳಲ್ಲಿ ಇವುಗಳನ್ನು ಕಾಣಬಹುದು. ಹುಡುಕಿದರೆ ನಿಮ್ಮ ಆಸುಪಾಸಿನಲ್ಲಿ ಖಂಡಿತಾ ಕಾಣಲು ಸಿಗುತ್ತವೆ. 
ಕನ್ನಡ ಹೆಸರು: ಕೆನ್ನೀಲಿ ಬಕ
ಇಂಗ್ಲೀಷ್ ಹೆಸರು: Purple Heron
ವೈಜ್ಷಾನಿಕ ಹೆಸರು: Ardea purpurea
ಚಿತ್ರ: ಅರವಿಂದ ಕುಡ್ಲ
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************Ads on article

Advertise in articles 1

advertising articles 2

Advertise under the article