-->
ಹಕ್ಕಿ ಕಥೆ : ಸಂಚಿಕೆ - 117

ಹಕ್ಕಿ ಕಥೆ : ಸಂಚಿಕೆ - 117

ಹಕ್ಕಿ ಕಥೆ : ಸಂಚಿಕೆ - 117
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

              
    ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಒಂದು ದಿನ ಸಂಜೆ ವಾಕಿಂಗ್ ಹೋಗಿದ್ದೆ. ಹೋಗುವಾಗ ದಾರಿಯಲ್ಲಿ ಒಂದು ಕಡೆ ವಿದ್ಯುತ್ ತಂತಿಯ ಮೇಲೆ ಐದಾರು ಹಕ್ಕಿಗಳು ಒತ್ತೊತ್ತಾಗಿ ಕುಳಿತುಕೊಂಡು ಪರಸ್ಪರ ಮಾತನಾಡಿಕೊಳ್ಳುತ್ತಿರುವಂತೆ ಕಂಡಿತು. ನಮ್ಮ ಹಳ್ಳಿಗಳಲ್ಲಿ ಸರ್ವೀಸ್ ಜೀಪು ಅಥವಾ ರಿಕ್ಷಾದಲ್ಲಿ ಜನ ಒತ್ತೊತ್ತಾಗಿ ಕುಳಿತಿರುವುದು ನೆನೆಪಿಗೆ ಬಂತು. ಕುಳಿತ ಹಕ್ಕಿಗಳು ಅಕ್ಕಪಕ್ಕದ ಹಕ್ಕಿಗಳ ಜೊತೆ ಪರಸ್ಪರ ಕೊಕ್ಕು ತಾಗಿಸಿ ಅದೇನೋ ಗಹನವಾದ ವಿಚಾರವನ್ನು ಮಾತನಾಡಿಕೊಂಡಂತೆ ಕಾಣುತ್ತಿತ್ತು. ಸ್ವಲ್ಪ ಹೊತ್ತಿನಲ್ಲಿ ಅವುಗಳಲ್ಲಿ ಒಂದೆರಡು ಹಕ್ಕಿಗಳು ಕುಳಿತಲ್ಲಿಂದ ಫಟ್ಟನೆ ಆಕಾಶಕ್ಕೆ ನೆಗೆದವು. ಬಾಣಬಿಟ್ಟಂತೆ ಆಕಾಶಕ್ಕೆ ನೆಗೆದು ಆನಂತರ ರೆಕ್ಕೆಯನ್ನು ಬಿಡಿಸಿ ತೇಲಾಡುತ್ತಾ ಆಕಾಶವನ್ನು ಅಳತೆ ಮಾಡಲಾರಂಭಿಸಿದವು. ಸ್ವಲ್ಪ ಹೊತ್ತಿನ ನಂತರ ಹಾರಾಡುತ್ತಲೇ ಯಾವುದೋ ಕೀಟವನ್ನು ಹಿಡಿದು ಮತ್ತೆ ಕುಳಿತಿದ್ದ ಜಾಗಕ್ಕೇ ಮರಳಿ ಬಂದವು. ಹಾರುತ್ತಲೇ ಅದು ಹೇಗೆ ಕೀಟಗಳನ್ನು ಹಿಡಿದವೋ ಗೊತ್ತಿಲ್ಲ. ಬಾಯಿಯಲ್ಲಿ ಒಂದಷ್ಟು ಕೀಟಗಳಿದ್ದವು. ತಂದ ಕೀಟಗಳನ್ನು ಅಲ್ಲಿ ಕುಳಿತಿದ್ದ ಹಕ್ಕಿಗಳಿಗೆ ತಿನ್ನಿಸಿದವು. ಅಲ್ಲಿ ಕುಳಿತ ಮರಿಗಳಿಗೆ ತಂದೆ ತಾಯಿಗಳು ಆಹಾರ ತಂದುಕೊಡುತ್ತಿದ್ದವು ಎಂಬ ವಿಷಯ ನನಗೂ ಅರ್ಥವಾಯಿತು.
      ಮುಂದಿನ ದಿನವೂ ವಾಕಿಂಗ್ ಹೋಗುವಾಗ ಅದೇ ಜಾಗದ ಆಸುಪಾಸಿನಲ್ಲಿ ಈ ಹಕ್ಕಿಗಳು ಕಾಣಸಿಕ್ಕಿದವು. ಸಂಜೆ ಬೆಳಕಿನ ಕೊರತೆ ಇದ್ದುದರಿಂದ ತೆಗೆದ ಫೊಟೋ ಅಷ್ಟು ಸ್ಪಷ್ಟವಾಗಿ ಬರಲಿಲ್ಲ. ಆದರೂ ಹಕ್ಕಿಯ ಗುರುತುಹಿಡಿಯಲು ಸಾಧ್ಯವಾಯಿತು. Ashy Woodswallow ಎಂಬ ಈ ಹಕ್ಕಿಗೆ ಕನ್ನಡದಲ್ಲಿ ಬೂದು ಅಂಬರಕೀಚುಗ ಎಂಬ ಹೆಸರಿದೆ. ಈ ಹಕ್ಕಿ ಹಾರಾಡುತ್ತಲೇ ಕೀಟಗಳನ್ನು ಹಿಡಿಯುವುದರಿಂದ swallow ಎಂಬ ಹೆಸರು ಬಂದಿದೆ. ಸುಮಾರು ಬುಲ್ಬುಲ್ ಗಾತ್ರದ ಹಕ್ಕಿ. ಆದರೆ ಬುಲ್ಬುಲ್ ನಂತೆ ತೆಳ್ಳಗೆ ದೇಹದ ಹಕ್ಕಿಯಲ್ಲ. ಬಾಲ್ ನಂತೆ ಗುಂಡಗೆ ದೇಹ. ತಲೆ, ಮುಖ, ಕತ್ತು, ಬೆನ್ನು, ರೆಕ್ಕೆ ಮತ್ತು ಬಾಲಗಳೆಲ್ಲ ಗಾಢಬೂದು ಬಣ್ಣ (slaty grey) ಹೊಟ್ಟೆಯ ಭಾಗ ತಿಳಿ ಬೂದು ಬಣ್ಣ. ಕಣ್ಣಿನ ಸುತ್ತ ಚಂದದ ಕಾಡಿಗೆ ಕಪ್ಪು ಬಣ್ಣ, ಚೌಕ ಆಕಾರದ ಪುಟಾಣಿ ಮೊಂಡುಬಾಲ. ಕೊಂಬೆ ಅಥವಾ ತಂತಿಯ ಮೇಲೆ ಕುಳಿತುಕೊಂಡರೆ ಬಾಲವನ್ನು ರೆಕ್ಕೆಗಳು ಮರೆಮಾಚುತ್ತವೆ. ಆದರೂ ಕುಳಿತಾಗ ಆಕಡೆ ಈಕಡೆ ನೋಡುತ್ತಾ ಬಾಲವನ್ನು ಕುಣಿಸುತ್ತಿರುತ್ತದೆ. ಗುಬ್ಬಚ್ಚಿಯ ಕೊಕ್ಕಿನ ಆಕಾರದ ತುಸು ಉದ್ದವಾದ ಬೆಳ್ಳಿಬಣ್ಣದ ಹೊಳೆಯುವ ಕೊಕ್ಕುಗಳು. ಹಾರಾಡುವಾಗ ಚೀಕ್ ಚೀಕ್ ಎಂದು ಜೋರಾಗಿ ಕೂಗುತ್ತಿರುತ್ತವೆ.
     ಅನೇಕಬಾರಿ ಮೊಬೈಲ್ ಟವರ್ ನಂತಹ ಎತ್ತರವಾದ ಜಾಗಗಳಲ್ಲಿ ಕುಳಿತಿರುವುದನ್ನು ನಾನು ನೋಡಿದ್ದೇನೆ. ತೆಂಗು, ಅಡಿಕೆ ಮೊದಲಾದ ತಾಳೆ ಜಾತಿಯ ಮರಗಳ ಕೊಂಬೆಗಳ ನಡುವೆ ಹುಲ್ಲು, ನಾರುಗಳಿಂದ ಬುಟ್ಟಿಯಾಕಾರದ ಗೂಡುಮಾಡಿ ಮೊಟ್ಟೆ ಇಟ್ಟು ಮರಿಮಾಡುತ್ತವೆ. ಸಿಡಿಲು ಬಡಿದು ಬೋಳಾದ ಮರದ ತುದಿಯಲ್ಲೂ ಗೂಡು ಕಟ್ಟುತ್ತದೆಯಂತೆ. ಗೂಡು ಕಟ್ಟಿದ ಕಾಲದಲ್ಲಿ ತನ್ನ ಗೂಡಿನ ಆಸುಪಾಸಿಗೆ ಕಾಗೆ, ಹದ್ದು ಮೊದಲಾದ ಯಾವುದೇ ಬೇರೆ ಹಕ್ಕಿಗಳು ಬರದಂತೆ ಎಚ್ಚರವಹಿಸುತ್ತವೆ. ಬಂದರೂ ಜೋರಾಗಿ ಕೂಗುತ್ತಾ ಧಾಳಿಮಾಡಿ ಅವುಗಳನ್ನು ಓಡಿಸುತ್ತವೆ. ಅವುಗಳ ಬಗ್ಗೆ ಅಧ್ಯಯನ ಮಾಡಿದ ಮೈಸೂರಿನ ಗೆಳೆಯ ಡಾ.ಅಭಿಜಿತ್ “ಅಂಬರದೊಳಗಾಡುವ ಕೀಚುಗನ ಗುಟ್ಟು” ಎಂಬ ಸುಂದರವಾದ ಪುಟ್ಟ ಪುಸ್ತಕ ಬರೆದಿದ್ದಾರೆ. ನೀವೂ ಓದಿ, ಸೊಗಸಾಗಿದೆ. ನಿಮ್ಮ ಆಸುಪಾಸಿನಲ್ಲೂ ಈ ಪುಟಾಣಿ ಹಕ್ಕಿ ಖಂಡಿತ ನೋಡಲು ಸಿಗುತ್ತದೆ. ಹುಡುಕ್ತೀರಲ್ಲ.
ಕನ್ನಡ ಹೆಸರು: ಬೂದು ಅಂಬರ ಕೀಚುಗ
ಇಂಗ್ಲೀಷ್ ಹೆಸರು: Ashy Woodswallow
ವೈಜ್ಞಾನಿಕ ಹೆಸರು: Artamus fuscus 
ಚಿತ್ರಕೃಪೆ: ಅರಿಜಿತ್ ದಾಸ್ ಮತ್ತು ಸಂಜಯ್ ಪಂಡಿತ್
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************


Ads on article

Advertise in articles 1

advertising articles 2

Advertise under the article