-->
ಹಕ್ಕಿ ಕಥೆ : ಸಂಚಿಕೆ - 115

ಹಕ್ಕಿ ಕಥೆ : ಸಂಚಿಕೆ - 115

ಹಕ್ಕಿ ಕಥೆ : ಸಂಚಿಕೆ - 115
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ

              
    ಎಲ್ಲರಿಗೂ ನಮಸ್ತೇ.. ಈ ವಾರದ ಹಕ್ಕಿಕಥೆಗೆ ಸ್ವಾಗತ.. ಜುಲೈ ತಿಂಗಳಿನಲ್ಲಿ ಅಬ್ಬರಿಸಿ ರಜೆ ಕೊಡಿಸಿದ ಮಳೆ ಆಗಸ್ಟ್ ತಿಂಗಳಿನಲ್ಲಿ ತಾನೇ ರಜೆ ಹಾಕಿಕೊಂಡು ಎಲ್ಲಿಗೋ ಹೋಗಿತ್ತು. ಮತ್ತೆ ಸೆಖೆ ಪ್ರಾರಂಭ ಆಗಿ, ಮೇ ತಿಂಗಳಿನ ಬಿರು ಬೇಸಗೆಯ ಅನುಭವ ಆಗ್ತಾ ಇತ್ತು. ಒಂದು ದಿನ ಮಧ್ಯಾಹ್ನ ನನ್ನ ಶಾಲೆಯ ಕೈತೊಳೆಯುವ ನೀರಿನ ಟ್ಯಾಂಕ್ ನಲ್ಲಿ ನೀರು ಎಷ್ಟಿದೆ ಅಂತ ನೋಡ್ಲಿಕ್ಕೆ ಆ ಕಡೆ ಹೋಗಿದ್ದೆ. ಪಕ್ಕದಲ್ಲೇ ನಮ್ಮ ಶಾಲಾ ಸಭಾಂಗಣ. ಒಳಗಡೆ ಇಣುಕಿ ನೋಡಿದರೆ ತೋಟದ ಕಡೆಯ ಕಿಟಕಿಗಳೆಲ್ಲ ತೆರೆದೇ ಇವೆ. ಅರೆ ಮಕ್ಕಳಿಗೆ ಆಗ ನೆನಪಿಸಿದ್ರೂ ಕಿಟಕಿ ಹಾಕದೇ ಹೋಗಿದ್ದಾರಲ್ಲಾ, ಈ ಪಾರಿವಾಳಗಳು ಒಳಗಡೆ ಬಂದು ಹಿಕ್ಕೆ ಹಾಕಿದರೆ ಏನಪ್ಪಾ ಗತಿ ಎಂದು ನಾನೇ ಗೊಣಗಿಕೊಳ್ಳುತ್ತಾ ಒಂದೊಂದಾಗಿ ಕಿಟಕಿ ಹಾಕಲು ಪ್ರಾರಂಭ ಮಾಡಿದೆ. ಕಿಟಕಿಯಿಂದ ನಮ್ಮ ಶಾಲೆಯ ತೆಂಗಿನ ತೋಟ, ತೋಟದ ಆ ಕಡೆಯ ಗುಡ್ಡದಲ್ಲಿ ಇರುವ ಚಂದದ ಕಾಡು ಅಲ್ಲಿ ಹಸುರಾಗಿ ನಿಂತ ಮರಗಿಡಗಳನ್ನು ಕ್ಷಣಕಾಲ ನೋಡದೇ ಇರುವುದು ಆಗದ ಮಾತು. 
ಒಮ್ಮೆ ಸುತ್ತಲೂ ಕಣ್ಣು ಹಾಯಿಸಿದೆ. ತೋಟದ ಕೊನೆಯಲ್ಲಿರುವ ಆಲದ ಮರದಲ್ಲಿ ಏನೋ ಒಂದಷ್ಟು ಕುಪ್ಪಳಿಸುತ್ತಾ ಓಡಾಡುತ್ತಿರುವುದು ಕಾಣಿಸಿತು. ಅರೆ ಮತ್ತೆ ಈ ಮಂಗಗಳೇನಾದ್ರೂ ತೋಟಕ್ಕೆ ಬಂತೇ ಅಂತ ಸರಿಯಾಗಿ ಕಣ್ಣರಳಿಸಿ ನೋಡಿದೆ. ಅಲ್ಲ ಮಂಗಗಳಲ್ಲ, ಹಕ್ಕಿಗಳು. ಅದಾಗಲೇ ಕೀಂ... ಕೀಂ.. ಎಂಬ ತೀಕ್ಷ್ಣವಾದ ಧ್ವನಿ ಆ ಕಡೆಯಿಂದ ಕೇಳಿಸಿತು. ಮಳೆಗಾಲದಲ್ಲಿ ಗಿಳಿಗಳು ಬರುವುದು ಅಪರೂಪ. ಮತ್ತದು ಗಿಳಿಗಳ ಶಬ್ದವೂ ಅಲ್ಲ. ಯಾವುದಿರಬಹುದು ಎಂದು ಯೋಚಿಸುವಾಗಲೇ ಎರಡು ಹಕ್ಕಿಗಳು ಹಾರಿ ಬಂದು ಕಿಟಕಿಯ ನೇರಕ್ಕಿರುವ ಮೇ ಫ್ಲವರ್ ಮರದಲ್ಲಿ ಕುಳಿತುಕೊಂಡವು. ಈಗ ಹಕ್ಕಿಗಳು ಸರಿಯಾಗಿ ಕಾಣಿಸುತ್ತಿದ್ದವು. ದಟ್ಟವಾದ ಕಪ್ಪು ಮಿಶ್ರಿತ ಕಂದುಬಣ್ಣದ ದೇಹ. ರೆಕ್ಕೆಯ ಕೆಳಗೆ ಬಿಳೀ ಬಣ್ಣದ ದೊಡ್ಡ ಮಚ್ಚೆ ಹಾರುವಾಗ ಸರಿಯಾಗಿ ಕಾಣುತ್ತಿತ್ತು. ಗಾಢ ಹಳದಿ ಬಣ್ಣದ ಕೊಕ್ಕು, ತಲೆಯ ಹಿಂಭಾಗದಲ್ಲಿ ಹಳದೀ ಬಣ್ಣದ್ದೇ ವಿಶಿಷ್ಟವಾದ ರಚನೆಗಳು. ಆ ರಚನೆಗಳನ್ನು ನೋಡಿದಾಗ ಯಕ್ಷಗಾನದ ಬಣ್ಣದವೇ಼ಷದ ರಾಕ್ಷಸನ ಮುಖದ ಮೇಲೆ ಬಿಡಿಸುವ ಚುಟ್ಟಿ ಎಂಬ ವಿಶಿಷ್ಟ ಮೇಕಪ್ ನೆನಪಾಯಿತು.
       ಇಷ್ಟು ಲಕ್ಷಣಗಳನ್ನು ನೋಡಿದಾಗ ಇದು ಕಾಮಳ್ಳಿ ಅಥವಾ ಹಿಲ್ ಮೈನಾ ಎಂಬುದು ಖಚಿತವಾಯಿತು. ಹಕ್ಕಿಗಳು ಕೀಂವ್.. ಕೀಂವ್ ಎಂದು ಪರಸ್ಪರ ಮಾತನಾಡಿಕೊಂಡಾಗ ಮನುಷ್ಯರೇ ಮಾತನಾಡಿದಂತೆ ಕೇಳಿಸುತ್ತಿತ್ತು. ಕೇರಳದಲ್ಲಿ ಹಿಂದೆ ಗಿಳಿಗಳಂತೆಯೇ ಈ ಹಕ್ಕಿಗಳನ್ನು ಸಾಕುತ್ತಿದ್ದರಂತೆ. ಇವು ತರಬೇತಿ ನೀಡಿದರೆ ಮನುಷ್ಯರ ಧ್ವನಿಯನ್ನೂ ಅನುಕರಿಸಬಲ್ಲವು ಎಂದು ಯಾರೋ ಹೇಳಿದ್ದು ನೆನಪಿಗೆ ಬಂತು. ಆದರೆ ಈಗ ವನ್ಯಜೀವಿ ಸಂರಕ್ಷಣಾ ಅಧಿನಿಯಮದ ಪ್ರಕಾರ ಈ ಹಕ್ಕಿಯನ್ನು ಪಂಜರದಲ್ಲಿ ಸಾಕುವಂತಿಲ್ಲ. ಕೀಟಗಳು, ಹಣ್ಣುಗಳು ಮತ್ತು ದೊಡ್ಡ ಮರದ ಹೂವುಗಳ ಮಕರಂದವೇ ಇದರ ಆಹಾರ. ಮರದ ಪೊಟರೆಗಳಲ್ಲಿ ಎಪ್ರಿಲ್ ನಿಂದ ಜುಲೈ ತಿಂಗಳ ನಡುವೆ ಮೊಟ್ಟೆ ಇಟ್ಟು ಮರಿಮಾಡುವ ಈ ಹಕ್ಕಿಗಳ ಗಂಡು ಮತ್ತು ಹೆಣ್ಣುಗಳೆರಡೂ ನೋಡಲು ಒಂದೇ ಸಮಾನವಾಗಿರುತ್ತವೆ. ಬಾರತದ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಮಾತ್ರ ಕಾಣಸಿಗುವ ಈ ಹಕ್ಕಿಯ ಪ್ರಭೇದವನ್ನು ನೀವೆಂದಾದರೂ ನೋಡಿದ್ದೀರಾ..?
ಕನ್ನಡದ ಹೆಸರು: ಕಾಮಳ್ಳಿ
ಇಂಗ್ಲೀಷ್ ಹೆಸರು: Lesser Hill Myna
ವೈಜ್ಞಾನಿಕ ಹೆಸರು: Gracula indica
ಚಿತ್ರ : ಅರವಿಂದ ಕುಡ್ಲ
ಮುಂದಿನ ವಾರ ಇನ್ನೊಂದು ಹಕ್ಕಿಯನ್ನು ನೋಡಿದ ಕಥೆಯೊಂದಿಗೆ ಮತ್ತೆ ಸಿಗೋಣ.           
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************



Ads on article

Advertise in articles 1

advertising articles 2

Advertise under the article