-->
ಸ್ಫೂರ್ತಿಯಾಗಿರುವ ಶಿಕ್ಷಕರು - ಹಿರಿಯರ ಬರಹಗಳು : ಸಂಚಿಕೆ - 02

ಸ್ಫೂರ್ತಿಯಾಗಿರುವ ಶಿಕ್ಷಕರು - ಹಿರಿಯರ ಬರಹಗಳು : ಸಂಚಿಕೆ - 02

ಶಿಕ್ಷಕರ ದಿನಾಚರಣೆಯ ವಿಶೇಷ - 2023
ನನಗೆ ಸ್ಫೂರ್ತಿಯಾಗಿರುವ ಶಿಕ್ಷಕರು
ಹಿರಿಯರ ಬರಹಗಳು : ಸಂಚಿಕೆ - 02


     ಎಲ್ಲರಿಗೂ ನಮಸ್ಕಾರಗಳು. ನಾನು ವಿದ್ಯಾಗಣೇಶ್ ಚಾಮೆತ್ತಮೂಲೆ. "ದೇಶ ಸುತ್ತಿ ನೋಡು, ಕೋಶ ಓದಿ ನೋಡು" ಎಂಬ ಗಾದೆಯನ್ನು ಬಹುಶಃ ಕೇಳದವರು ವಿರಳ. ಶಾಲಾ ದಿನಗಳಲ್ಲಂತೂ ಈ ನಾಣ್ಣುಡಿ ಸರ್ವೇ ಸಾಮಾನ್ಯವಾಗಿ ರಾರಾಜಿಸುವ ವಾಕ್ಯವಾಗಿದೆ. 'ಪುಸ್ತಕಗಳನ್ನು ಓದುವ ಹವ್ಯಾಸದಿಂದ ನಮ್ಮ ಜ್ಞಾನದ ಹಸಿವನ್ನು ಹೇಗೆ ನೀಗಿಸಿಕೊಳ್ಳಬಹುದೋ,  ಅಂತೆಯೇ ಹೊರಪ್ರಪಂಚದ ಅರಿವನ್ನೂ ಮೈಗೂಡಿಸಿಕೊಳ್ಳುವುದರಿಂದ ನಮ್ಮ ಜ್ಞಾನವು ಮತ್ತಷ್ಟು ಬಲಗೊಳ್ಳುತ್ತದೆ', ಎಂಬಂತಹ  ಸ್ಪೂರ್ತಿದಾಯಕವಾದ ಅಮೂಲ್ಯ ವಾಕ್ಯಗಳನ್ನು ಪ್ರತಿ ದಿನವೂ ನಮಗೆಲ್ಲಾ ಪ್ರೀತಿಯಿಂದ ಬೋಧಿಸುತ್ತಾ, ನಮ್ಮೆಲ್ಲರ ಬಾಳಿನ ಹಾದಿಗೆ ಚೈತನ್ಯ ತುಂಬಿದ ನನ್ನ  ಪ್ರೀತಿಯ ಗುರುವೃಂದದವರೆಲ್ಲರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
          ಮನುಷ್ಯನ ಜೀವನ ತುಂಬಾನೇ ಚಿಕ್ಕದಾಗಿರಬಹುದು, ಆದರೆ ನಮಗೆ ದೊರೆತ ಅದ್ಭುತವಾದ ಜೀವನ ಘಳಿಗೆಗಳನ್ನು ಚೊಕ್ಕತನದಿಂದಲೇ ಸವಿದರೆ ಪಡೆದ ಜನ್ಮಕ್ಕೂ ಸಾರ್ಥಕವಾಗಬಹುದೇನೋ? ಇಂತಹ ಸಾರ್ಥಕ ಜೀವನದ ಸಾಧಕರಾಗಲು ನಮಗೆ ಅದಷ್ಟೋ ಶಿಕ್ಷಕರು ಬೆನ್ನೆಲುಬುಗಳಾಗಿ, ಉತ್ತಮ ಮಾರ್ಗದರ್ಶಕರಾಗಿ, ಒಂದಲ್ಲಾ ಒಂದು ರೀತಿಯಲ್ಲಿ ಬಾಳಿಗೆ ಗೆಲುವಿನ ಬೆಳಕು ಚೆಲ್ಲುವ ದೀಪಗಳಾಗಿ ಹಾದಿ ತೋರಿದವರಿದ್ದಾರೆ. ನನ್ನ ವಿದ್ಯಾರ್ಥಿದೆಸೆಯಲ್ಲೂ ನಾ ಕಂಡಂತಹ ನನ್ನ ಎಲ್ಲಾ ಶಿಕ್ಷಕರನ್ನೂ ಮನಸಾ ಗೌರವಿಸುತ್ತಿದ್ದೇನೆ. ಆದರೆ ನನ್ನ ಜೀವನದ ಒಂದಷ್ಟು ಸಕಾರಾತ್ಮಕವಾದ ಬದಲಾವಣೆಗಳಿಗೆ ಸ್ಪೂರ್ತಿಯಾಗಿರುವ, ಇಂದಿಗೂ ನನ್ನ ಜೀವನದ ಸರಿತಪ್ಪುಗಳಿಗೆ ಸ್ಪಂದಿಸುತ್ತಿರುವ ನನ್ನ ಹಿತಚಿಂತಕರ ಬಗ್ಗೆ ನಾನಿಂದು ಬರೆಯ ಹೊರಟಿದ್ದೇನೆ.
        ಹತ್ತು ಹಲವು ಕನಸುಗಳಿಗೆ ಬಣ್ಣ ತುಂಬುತ್ತಾ, ಬಹಳ ಆಶಾವಾದಿಯಾಗಿಯೇ ವಿದ್ಯಾಭ್ಯಾಸದಲ್ಲಿ ನಾ ತೊಡಗಿಕೊಂಡಿದ್ದಂತಹ ದಿನಗಳವು. ಬಹಳ ಉತ್ಸಾಹದ ಚಿಲುಮೆಯಂತೆ ಕುಣಿದಾಡುತ್ತಿದ್ದ ನನಗೆ ಶಿಕ್ಷಕಿಯಾಗಬೇಕೆನ್ನುವುದು ಅಚಲವಾದ ಕನಸಾಗಿತ್ತು. ಒಳ್ಳೆಯ ಸಾಹಿತಿಯಾಗಿ , ಶಿಕ್ಷಕಿಯಾಗಿ ಸೇವೆ ಸಲ್ಲಿಸಬೇಕೆಂಬ ನನ್ನ ಕನಸಿನ ಗೋಪುರ ಕೆಲವೊಂದು ಕಾರಣಗಳಿಂದ ಮೇಲಕ್ಕೇರದೆ ಸ್ತಬ್ಧವಾದಂತಾಗಿತ್ತು. ಇದರಿಂದ ತುಂಬಾನೇ ಕೊರಗಿ - ಕರಗಿ ಹೋದ ನಾನು, ಜೀವನದ ಮೇಲಿರುವ ಆಸಕ್ತಿಯನ್ನೇ ಕಳೆದುಕೊಂಡಂತೆ ಆಯಾಸವಾಗಿ ಬದುಕತೊಡಗಿದೆ.
        ಇಂತಹ ಸಂಧಿಗ್ಧತೆಯಲ್ಲಿ ನನಗೆ ಹುರಿದುಂಬಿಸಿ, ಮೇಲಕ್ಕೆತ್ತಲು ಸಹಾಯ ಹಸ್ತ ನೀಡಿದ ನನ್ನ ಒಲವಿನ ಸೋದರಿಯೇ ಎಂದಿಗೂ ನನ್ನ "ಮನ ಮೆಚ್ಚಿದ ಶಿಕ್ಷಕಿ" ಎಂದು ನಾನು ಹೆಮ್ಮೆಯಿದ ಹೇಳಿಕೊಳ್ಳಬಲ್ಲೆ. ಅವಳ ಸ್ಪೂರ್ತಿಯ ಮಾತುಗಳು, ಕೈ ಚೆಲ್ಲಿ ಕೂತಾಗ ನೀಡಿದ ನೆರವು, ನನಗೂ ಜೀವನವನ್ನು ಅರ್ಥಪೂರ್ಣವಾಗಿಯೇ ಸಾಗಿಸಬೇಕೆಂಬ ಛಲವನ್ನು ತುಂಬುತ್ತಿತ್ತು. ನಾವು ಅಂದುಕೊಳ್ಳುವ ಕೆಲವೊಂದು ಕನಸುಗಳು ಮೇಲ್ಮಟ್ಟದಲ್ಲಿ ಕೈಗೂಡದೆ ಹೋದರೂ, ಅದಕ್ಕಾಗಿ ಪರಿತಪಿಸದೆ, ಮನಕೆ ಖುಷಿ ತರುವ ಪರ್ಯಾಯ ಹಾದಿಯಲ್ಲಿ  ನಡೆದರೂ ಯಶಸ್ಸಿನ ಬಾಗಿಲ ತಟ್ಟಬಹುದೆಂಬ ನಿರೀಕ್ಷೆಯಲ್ಲಿ, ನನ್ನ ಸೋದರಿಯ ಮಾರ್ಗದರ್ಶನದಂತೆ ಇದೀಗ ಮನೆಯಲ್ಲೇ ''ಟ್ಯೂಷನ್ ಕ್ಲಾಸ್ " ನಡೆಸುತ್ತಾ, ಒಂದಷ್ಟು ಧನ, ಜ್ಞಾನ, ಅನುಭವ, ಸಂತೋಷಗಳನ್ನು ಗಳಿಸುವ ಹಾದಿಯಲ್ಲಿದ್ದೇನೆ. ನಾನು ಸಾಗಿ ಬಂದ ಹಾದಿ ತೀರಾ ಕಲ್ಲು ಮುಳ್ಳುಗಳಿಂದ ಕೂಡಿದ್ದರೂ, ಬದುಕು ಇದೀಗ "ಮನಸ್ಸು ಮಾಡಿದರೆ ಎಲ್ಲವೂ ಸುಗಮ" ಎನ್ನುವುದನ್ನು ಕಲಿಸಿ ಕೊಟ್ಟಿದೆ. ರಾಜ್ಯಮಟ್ಟದ ಕೆಲವೊಂದು ಕತೆ, ಪ್ರಬಂಧ, ಕವನ ಸ್ಪರ್ಧೆಗಳಲ್ಲಿ ಭಾಗವಹಿಸಿದ ಖುಷಿಯೂ ನನಗಿದೆ. ಈ ಎಲ್ಲಾ ಬೆಳವಣಿಗೆಗೆ ಕಾರಣಕರ್ತೆಯಾಗಿ, ಪ್ರೇರಣಾ ಶಕ್ತಿಯಾಗಿ ಜೀವನಪಾಠ ಕಲಿಸುತ್ತಾ ಜೊತೆನಿಂತ ನನ್ನ ಸಹೋದರಿ "ವಿಜಯಾ" ಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರಲು ಬಯಸುತ್ತೇನೆ.
     ಶಾಲೆಯೊಳಗೆ ಕಲಿತರೆ ಮಾತ್ರ ಶಿಕ್ಷಣವಲ್ಲ. ನಾವು ಪ್ರತಿಕ್ಷಣವೂ ಪಡೆದುಕೊಳ್ಳುವ ಅನುಭವಗಳೆಲ್ಲವೂ ಶಿಕ್ಷಣವೇ. ಉತ್ತಮ ದಾರಿ ತೋರುವ ಎಲ್ಲರೂ ನಮ್ಮ ಗುರುಗಳೇ, ಎಂಬ ಗೌರವ ಭಾವನೆಯನ್ನು ಎಲ್ಲರೊಳು ಕಾಣುತ್ತಾ, ಉತ್ತಮ ಸಾಧಕರಾಗೋಣ. ಶಿಕ್ಷಕರ ದಿನಾಚರಣೆಯ ಕಾರಣಕರ್ತರಾದ ಸರ್ವಪಳ್ಳಿ ರಾಧಾಕೃಷ್ಣನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಹಾಗೂ ಜಗಕೆ ಜ್ಞಾನವ ಸುರಿಸುವ ಎಲ್ಲಾ ಶಿಕ್ಷಕರಿಗೂ ಮತ್ತೊಮ್ಮೆ, ಮಗದೊಮ್ಮೆ ಶುಭಾಶಯಗಳನ್ನು ಕೋರುತ್ತಿರುವ .......
.....................  ವಿದ್ಯಾಗಣೇಶ್ ಚಾಮೆತ್ತಮೂಲೆ
ಕೊಣಾಲು ಗ್ರಾಮ ಮತ್ತು ಅಂಚೆ 
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************



       ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಕಲಿಸಿದ ಗುರುಗಳೇ ನನಗೆ ಮಾಸದ ನೆನಪಾಗಿ ಜೀವನದುದ್ದಕ್ಕೂ ಸ್ಮರಣೆಯಲ್ಲಿ ಇರುವ ಹಾಗೆ ಮಾಡಿದೆ. ಅಂದು ದಂಡವೇ ದಶಗುಣ ಎಂಬ ಮಾತು ಸತ್ಯವಾಗಿತ್ತು. ನನಗೆ ಕಲಿಸಿದವರಲ್ಲಿ ಹನುಮಂತ ಗೋವಿಂದ ಭಟ್ಟ ಶಿಕ್ಷಕರು ಕಲಿಸುವ ರೀತಿಯೇ ಸೋಜಿಗ. ದುಂಡಾಗಿ ಬರೆಯುವ ಅವರ ಶೈಲಿ ನನ್ನನ್ನು ಆ ಕಡೆ ಸೆಳೆಯುವಂತೆ ಮಾಡಿತು. ನನ್ನ ಮೂವತ್ತು ವರ್ಷಗಳ ಸೇವೆಯಲ್ಲಿ ಅವರು ಹಾಕಿಕೊಟ್ಟ ಮಾರ್ಗವನ್ನೇ ಅನುಸರಿಸುತ್ತಿದ್ದೇನೆ. ಹಿರಿಯ ತರಗತಿಗೆ ಬಂದಂತೆ ಏ.ಕೆ.ಶೇಟ್. ಡ್ರಾಯಿಂಗ್ ಮಾಸ್ಟರ್. ಕ್ಷಣದಲಿ ಚಿತ್ರ ಬಿಡಿಸಿ ನಮಗೂ ಬಿಡಿಸಲು ಹೇಳುತ್ತಿದ್ದರು. ನಮ್ಮ ಚಿತ್ರಕ್ಕೆ ಗುಡ್ ಹಾಗೂ ವೆರಿ ಗುಡ್ ಬೀಳುತ್ತಿತ್ತು. ಆ ಕೌಶಲವನ್ನು ನಮ್ಮ ವಿದ್ಯಾರ್ಥಿಗಳಿಗೆ ತುಂಬುವ ಪ್ರಯತ್ನ ಮಾಡುತ್ತಿದ್ದೇನೆ. ವಿಜ್ಞಾನ ಶಿಕ್ಷಕರು ಶ್ರೀಯುತ ವಿ.ಎಸ್.ಹೆಗಡೆ. ಅವರು ಕಪ್ಪೆ ಸಿಗಿದು ಅದರ ಭಾಗಗಳನ್ನು ತೋರಿಸುವ ರೀತಿಯೇ ಅದ್ಭುತ! ಭೌತ ತುಲಾಯಂತ್ರ ತೋರಿಸಿ ಹೇಳಿದಾಗಲೇ ಪ್ರಯೋಗ ಸಕ್ಸಸ್. ಅವರು ಶಾಲೆಗೆ ಬಹಳ ಬೇಗನೆ ಬರುತ್ತಿದ್ದರು. ಶಾಲೆಯ ವಿವಿಧ ಚಟುವಟಿಕೆಗಳಲ್ಲಿ ತೊಡಗಿ ಕೊಳ್ಳುತ್ತಿದ್ದರು. ಅವರು ಯಾವತ್ತಿಗೂ ಇಪ್ಪತರ ಯುವಕ. ಸದಾ ಉತ್ಸಾಹಿ. ಅವರೇ ನನಗೆ ಸ್ಪೂರ್ತಿ. ಕಾಲೇಜಿಗೆ ಹೆಜ್ಜೆ ಇಟ್ಟೊಡನೇ ಕನ್ನಡ ಮೇಷ್ಟ್ರು ಶ್ರೀಯುತ ಜಿ.ಆರ್.ಭಟ್ಟ. ಅವರು ಕಲಿಸುವ ರೀತಿ ಎಷ್ಟೊಂದು ಸೊಗಸು. ನೀವು ಬಂಡಲ್ ಬಿಡಬೇಡಿ. ನಿಮ್ಮ ತಂಗಿ ತಮ್ಮನಿಗೆ ಏನು ಹೇಳುವಿರಿ? ಎನ್ನುತ್ತಾ ನಮ್ಮೊಡನೆ ಚರ್ಚೆಗಿಳಿಯುತ್ತಿದ್ದರು. ಅವರು ನನಗೆ ಇಂದು ರೋಲ್ ಮಾಡೆಲ್. ಪದವಿ ತರಗತಿಯಲ್ಲಿ  ಎಸ್.ಎಂ.ಹೆಗಡೆ ಇತಿಹಾಸ ಬಲ್ಲವರು. ಅವರು ಇತಿಹಾಸದ ಜೊತೆಗೆ ಇತಿಹಾಸಕಾರರ ಹೇಳಿಕೆಗಳನ್ನು ಫಟಾಫಟ್ ಎಂದು ಹೇಳುತ್ತಿದ್ದರು. ಪರೀಕ್ಷೆಯಲ್ಲಿ ಆ ಎಲ್ಲ ಸಂಗತಿಯನ್ನು ಬರೆದರೆ ನಮಗೆ ಪೂರ್ಣ ಅಂಕ. ಅಂದು ನೂರಕ್ಕೆ ಎಂಬತೈದು ಅಂಕ ಪಡೆದ ನನಗೆ ಗುರುಗಳಿಂದ ಶಹಬ್ಬಾಸ್. ನಾನು ಬರೆದ ಇತಿಹಾಸದ ಪೇಪರ್ ಬಿ.ಎ. ಒಂದನೇ ವರ್ಷದಿಂದ ಮೂರನೇ ವರ್ಷದ ಎಲ್ಲಾ ವಿದ್ಯಾರ್ಥಿಗಳ ಕೈಗೂ ಸಿಕ್ಕಿತ್ತು. ಅವರು ನೀಡಿದ ಪ್ರೋತ್ಸಾಹ ನನಗೆ ಇತಿಹಾಸ ವಿಷಯದಲ್ಲಿ ಆಸಕ್ತಿ ಬೆಳೆಯುವಂತೆ ಮಾಡಿತು. ನಮಗೆ ಕಲಿಸಿದ ನಮ್ಮ ಗುರುಗಳ ಮೌಲ್ಯಗಳು ನನ್ನ ನೈತಿಕತೆಗೆ ಶ್ರೀರಕ್ಷೆ. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಅವರಿಗೆ ನನ್ನ ನಮನಗಳು. 
...................................... ಎಂ.ಎಸ್.ಹೆಗಡೆ. 
ಶಿಕ್ಷಕರು
ಸ.ಹಿ.ಪ್ರಾ.ಶಾಲೆ. ಸ್ಥಿತಿಗಾರ,  ಹೊನ್ನಾವರ
ಮೊಬೈಲ್ ನಂ:  8762325438
****************************************


ಶ್ರೀ ಗುರುಭ್ಯೋ ನಮಃ
ಗುರು ಬ್ರಹ್ಮ ಗುರು ವಿಷ್ಣು 
ಗುರು ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ 
ತಸ್ಮೈ ಶ್ರೀ ಗುರವೇ ನಮಃ
'ಮಾತೃದೇವೋಭವ' 'ಪಿತೃದೇವೋಭವ' 
ಆಚಾರ್ಯ ದೇವೋ ಭವ', 
ಭಾರತೀಯ ಸನಾತನ ಸಂಸ್ಕೃತಿಯು ಪ್ರಥಮವಾಗಿ ಮಾತೆಯನ್ನು ದೈವೀ ಸ್ಥಾನದಲ್ಲಿರಿಸಿದರೆ, ನಂತರ ಪಿತೃವನ್ನು ಪೂಜನೀಯವನ್ನಾಗಿಸಿದೆ. ತೃತೀಯ ಸ್ಥಾನವನ್ನು ಗುರುವಿಗೆ ಮೀಸಲಿರಿಸಿದೆ. ತಾಯಿ ತಂದೆಯಷ್ಟೇ ಪವಿತ್ರ ಪೂಜ್ಯ ಸ್ಥಾನವನ್ನು ಗುರುವಿಗೆ ನೀಡಲಾಗಿದೆ. ಇದು ಗುರುವಿನ ಮಹತ್ವವನ್ನು
ಸಾರಿ ಹೇಳುತ್ತದೆ. ಮಗುವಿನ ವ್ಯಕ್ತಿತ್ವ ವಿಕಸನದಲ್ಲಿ ತಾಯಿಯೇ ಪ್ರಥಮಳಾದರೆ, ನಂತರ ಶಾಲೆಯಲ್ಲಿ ಶಿಕ್ಷಕಿಯೇ ತಾಯಿಯಾಗುತ್ತಾಳೆ. ಇಂಥ ಶಿಕ್ಷಕರ ಸಾಲಿನಲ್ಲಿ ನನ್ನ ನೆಚ್ಚಿನ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಸುಶೀಲ, ಇವರು ನನ್ನ ಮನೆಗೆ ಭೇಟಿ ನೀಡಿದ ಆ ಕ್ಷಣ ಅವಿಸ್ಮರಣೀಯ. ಅಂದು ನಾನು ತುಂಬಾ ಜ್ವರದಿಂದ ಬಳಲಿದ್ದೆ, ಬಲಹೀನಳಾಗಿದ್ದೆ ನಾಲ್ಕು ದಿನ ಶಾಲೆಗೆ ಹೋಗಿರಲಿಲ್ಲ. ನನ್ನನ್ನು ಮಾತಾಡಿಸಲೆಂದೇ ಬಂದ ನನ್ನ ನೆಚ್ಚಿನ ಶಿಕ್ಷಕಿ ಇಂದಿಗೂ ಅಚ್ಚು ಮೆಚ್ಚು. ಇಂದು ನಾನು ಸಮಾಜದಲ್ಲಿ ಓರ್ವ ಮೌಲ್ಯಯುತ ವ್ಯಕ್ತಿಯಾಗಿ ಮನ್ನಣೆ ಪಡೆಯಲು ಕಾರಣ ನನ್ನ ಇಂಗ್ಲಿಷ್ ಶಿಕ್ಷಕರಾದ ಮೂರ್ತಿ ಸರ್.  ಅಂದು ಅವರು ತೋರಿದ ಒಲವು, ಅಕ್ಕರೆ ಹಾಗೂ ನನ್ನಲ್ಲಿ ಅವರು ತುಂಬಿದ ಆತ್ಮವಿಶ್ವಾಸ ಕಾರಣ ಎಂದರೆ ತಪ್ಪಾಗಲಾರದು. ನನ್ನ ಪ್ರತಿಭೆ ಗುರುತಿಸಿ ನನ್ನನ್ನು ಪ್ರತಿಯೊಂದು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದ ಶಿಕ್ಷಕ ವೃಂದ. ಮುಂದುವರೆದು, ಪದವಿ ಪೂರ್ವ ಹಂತದಲ್ಲಿ ನಮ್ಮ ತಪ್ಪುಗಳನ್ನು ತಿದ್ದಿ ಅಗತ್ಯ ಮಾಹಿತಿಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುವಾಗಲು ದಾರಿ ತೋರಿದ ಎಲ್ಲಾ ಉಪನ್ಯಾಸಕರಿಗೂ ನಾನು ಕೃತಜ್ಞಳು .
ಕೊನೆಯ ನುಡಿ: ಶಿಕ್ಷಕ ವೃತ್ತಿ ಕೇವಲ ವೃತ್ತಿಯಲ್ಲ, ಅದೊಂದು ಮಹೋನ್ನತ ಜವಾಬ್ದಾರಿ.
....................................... ರೇಖಾ ರಾವ್
ಪದವೀಧರ ಪ್ರಾಥಮಿಕ ಶಿಕ್ಷಕಿ
ದ ಕ ಜಿ ಪಂ ಉನ್ನತಿಕರಿಸಿದ ಹಿರಿಯ 
ಪ್ರಾಥಮಿಕ ಶಾಲೆ, ನಲ್ಕೆಮಾರ್. 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************



      ಅಜ್ಞಾನವೆಂಬ ಕುರುಡು ತನವನ್ನು ಜ್ಞಾನ ಮಯವಾದ ಶಲಾಕೆಯಿಂದ ಹೋಗಲಾಡಿಸುವ ಭಗವಾನ್  ಸ್ವರೂಪಿ, ಬ್ರಹ್ಮ ಸದೃಶನಾದವನೇ  ಗುರು. ಯಾವುದೇ ಕ್ಷೇತ್ರವಿರಲಿ ಅಲ್ಲಿರುವ ಮಂದಿ ತಮ್ಮ ಜೊತೆಗಿರುವವರ  ಏಳ್ಗೆಯನ್ನು ಎಂದೂ  ಬಯಸದವರು. ಕಂಪನಿ, ಬ್ಯಾಂಕ್, ಕ್ರೀಡಾಕ್ಷೇತ್ರ, ರಾಜಕೀಯ... ಯಾವುದೇ ಇರಲಿ ಸಹವರ್ತಿಗಳ  ಏಳ್ಗೆಯನ್ನು ಬಯಸದವರೇ ಎಲ್ಲಾ. ಆದರೆ ಗುರು ಹಾಗಲ್ಲ. ತನಗಿಂತಲೂ ತನ್ನ ಶಿಷ್ಯ ಬೆಳಿಯಬೇಕು  ಎಂದು ಬಯಸುವವನು. ಅಂಥ  ಶಿಷ್ಯನನ್ನು  ಕಂಡಾಗ ಆತಾನಿಗಾಗುವ  ಸಂತೋಷ ಅಪಾರ. ಹೀಗಿರುವ ಹಲವಾರು  ಶಿಕ್ಷಕರು ನಮ್ಮ  ಮುಂದೆ ಕಾಣಸಿಗುತ್ತಾರೆ. ಹೀಗಿದ್ದರೂ ಇತರ ಆಭರಣಗಳೆಡೆ ಯಲ್ಲಿರುವ ಸ್ಫಟಿಕ  ಮಣಿಯಂತೆ   ಇರುವವರು  ನನ್ನ  ಗುರು ಶ್ರೀ ಬನಾರಿ  ನಾರಾಯಣ ಭಟ್ ರವರು. 
       ಪೆರ್ಲ ಶ್ರೀ ಸತ್ಯ ನಾರಾಯಣ ಶಾಲೆಯ  ವಿದ್ಯಾರ್ಥಿಯಾಗಿದ್ದಾಗ (1972-77) ವಿಜ್ಞಾನ ವನ್ನು ಬೋಧಿಸಿದ  ಗುರುಗಳು. ಬೋಧನಾ  ರೀತಿ, ವಿಷಯ ಪ್ರಸ್ತುತಿ, ಸರಳ ಭಾಷಾ ಪ್ರಯೋಗ, ಸದಾ  ಲವಲವಿಕೆಯಿಂದಿರುವ  ಅವರು  ಒಬ್ಬ "ಮಾಂತ್ರಿಕ ಶಿಕ್ಷಕ" ಎನ್ನುವುದರಲ್ಲಿ  ಉತ್ಪ್ರೇಕ್ಷೆ ಇಲ್ಲ. ವಿದ್ಯಾರ್ಥಿಗಳೊಂದಿಗೆ ಆತ್ಮೀಯರಾಗಿದ್ದು ಅವರನ್ನು  ಪ್ರೋತ್ಸಾಹಿಸಿ, ಅವರ  ಪಠ್ಯೇತರ  ಚಟುವಟಿಕೆಗಳಿಗೂ  ನೀರುಣಿಸಿದವರು. ಗುರು ಶ್ರೀ ಬನಾರಿ ಯವರು  ಒಬ್ಬ ಅಪಾರ  ಅನುಭವದ  ಅಧ್ಯಾಪಕ. ಸುಮಾರು ಮೂರೂವರೆ    ದಶಕಗಳಿಂದ ಕೇಂದ್ರೀಯ ವಿದ್ಯಾಲಯಗಳಲ್ಲಿ   ಮುಖ್ಯೋಪಾಧ್ಯಾಯನಾಗಿ ಸೇವೆ ಸಲ್ಲಿಸಿ ನಿವೃತ್ತನಾದ  ನನಗೆ ಅವರಿನ್ನೂ ಒಬ್ಬ ಮಾಂತ್ರಿಕ ಬೋಧಕ. ಬೋಧನೆಯನ್ನ ಕೇವಲ  ಪುಸ್ತಕ ಗಳಿಗೆ  ಸೀಮಿತ ಗೊಳಿಸದ  ಅವರ ವೃತ್ತಿ -ವ್ಯಾಪ್ತಿ ಅಪಾರ. ತಣ್ಣನೆಯ  ಮಾತುಗಳಲ್ಲಿ  ಅಡಗಿರುವ ಮೌಲ್ಯಯುತ ಉಪದೇಶ  ಸಾರ್ವಕಾಲಿಕ ಸಂದೇಶದಂತೆ. ಸದಾ ಮಕ್ಕಳ ಬೆನ್ನು ತಟ್ಟಿ  ಅವರನ್ನು ಸಾಧನಾ ಪಥ ದಲ್ಲಿ ತೊಡಗಿಸಿಕೊಂಡ  ಅವರ  ವೃತ್ತಿ ಶೈಲಿ  ಅನನ್ಯ. ಇತ್ತೀಚೆಗಷ್ಟೇ ಅವರನ್ನು  ಭೇಟಿಯಾಗಿ ಅಭಿನಂದಿಸಿ ಗುರುವಂದನೆ ಮಾಡಿದಾಗ ನಾನು ಸಣ್ಣವಿದ್ಯಾರ್ಥಿಯಾದೆ. ಅಚ್ಚರಿಯೋ  ಎಂಬಂತೆ  ಆತ್ಮೀಯರಾದ ಅವರು ನನ್ನನ್ನು ಬಳಿ ಕೂರಿಸಿ  ಶಾಲು ಹೊದಿಸಿ ಅಭಿನಂದಿಸಿದಾಗ ಹೃದಯ  ತುಂಬಿ ಬಂದ ನಾನು ಮೂಕವಿಸ್ಮಿತನಾದೆ. ಗುರುವಂದನೆಯು ಶಿಷ್ಯಾಭಿನಂದನೆಯಾಯಿತು. ಸರ್ ಯು ಆರ್ ರಿಯಲಿ ಗ್ರೇಟ್. ನಿಮಗೆ  ನನ್ನ  ಹೃನ್ಮನದ ಭಾವಾಂಜಲಿ.
.................. ಯಸ್. ಎನ್. ಭಟ್, ಸೈಪಂಗಲ್ಲು
(ನಿವೃತ್ತ ಮುಖ್ಯೋಪಾಧ್ಯಾಯ, ಕೇಂದ್ರೀಯ ವಿದ್ಯಾಲಯ)
ಹೊಸಮನೆ, ಪಡ್ರೆ
ಕಾಸರಗೋಡು ಜಿಲ್ಲೆ
*****************************************




ಮೊದಲಿಗೆ ನಿಮಗೆ ನನ್ನ ನಮಸ್ಕಾರಗಳು..
    ನನ್ನ ಟೀಚರ್ ಬಗ್ಗೆ ಹೇಳಲಿಕ್ಕೆ ಈ 250 ಪದಗಳು ಸಾಲೋದೆ ಇಲ್ಲ. ಅಂತಹ ಸ್ವಭಾವ ಗುಣ ಅವ್ರದ್ದು.. ಒಂದು ಗ್ರಂಥಾನೆ ಬರಿಬಹುದು.. ಅದೇನೇ ಇರಲಿ ಇವತ್ತು ಅವ್ರನ್ನ ಎಲ್ಲರ್ಗು ಪರಿಚಯ ಮಾಡೋ ಒಂದ್ ಒಳ್ಳೇ ಅವಕಾಶ ಸಿಕ್ಕಿದೆ ಅದು ನನ್ನ ಪುಣ್ಯ ಅಂದುಕೊಳ್ಳುವೆ...
   ನನ್ನ ಟೀಚರ್ ಭೇಟಿ ಆಗಿದ್ದು ನಾನ್ ಹೈಸ್ಕೂಲ್ ನಲ್ಲಿ ಇರುವಾಗ.. ಅವ್ರ ಹೆಸರು ನಾಗರತ್ನ. ನನ್ನ ಜೀವನಕ್ಕೆ ಒಂದು ಅರ್ಥ ಸಿಕ್ಕಿದೆ ಇಲ್ಲಿ ಅಂತಾ ಹೇಳಿದ್ರೆ ತಪ್ಪಾಗಲ್ಲ... ಟೀಚರ್ ನನ್ ಜೀವನಕ್ಕೆ ಬರೋಕು ಮುಂಚೆ ನಾನ್ ಹೇಗೇಗೋ ಇದ್ದೆ... ಆದ್ರೆ ನನ್ನ ಒಂದು ಟ್ರಾಕ್ ಗೆ ಕರ್ಕೊಂಡು ಬಂದಿದ್ದು ನನ್ನ ಟೀಚರ್..
     ಹನುಮಂತನಿಗೆ ಅವನ ಸಾಮರ್ಥ್ಯನ ತಿಳಿಸೋಕೆ ಜಾಂಬವಂತ ಅನ್ನೋ ಗುರುವಿನ ಅವಶ್ಯಕತೆ ಹೇಗಿತ್ತೋ ನನ್ ಲೈಫ್ ಅಲ್ಲಿ ನಾನೂ ಒಬ್ಬ ಮನುಷ್ಯಳಾಗಲೂ ನನ್ ಟೀಚರ್ ಬರ್ಲೆ ಬೇಕಿತ್ತು..
    The worst student ಅಂತಾ ಹೇಳಿದ್ರು Frist ಗೆ ನಂಗ್ ಇನ್ನೂ ನೆನಪಿದೆ.. ಮತ್ತೇ ಹೈಸ್ಕೂಲ್ ಮುಗಿವಾಗ ಅವ್ರೆ ಹೇಳಿದ್ರು The Best Student ಅಂತಾ..
  ನನಗೆ ಸಾಮರ್ಥ್ಯ ಇದ್ದಿತ್ತು ಆದ್ರೆ ಉದಾಸೀನ ಅದಕ್ಕೂ ಜಾಸ್ತಿ ಇದ್ದಿತ್ತು.. ಆ ಉದಾಸೀನಕ್ಕೇ ಮೆಡಿಸಿನ್ ಆಗಿ ಟೀಚರ್ ಬಂದ್ರು.. ಯಾವ್ದೇ ಪ್ರೋಗ್ರಾಂ ಇದ್ರು ನನ್ನ ಕಳಿಸ್ತಾ ಇದ್ರು.. ಯಾವ್ದೇ ಭಾಷಣ ಇದ್ರು ನನ್ ಹೆಸರನ್ನ ಅವ್ರೆ ಹಾಕ್ತಾ ಇದ್ರು.. ತುಂಬಾ ಭಯ ಆಗೋದು.. ನನ್ನಲ್ಲಿ ಇದ್ದ ಭಯನ ಹೋಗಿಸಿದ್ರು ಅವ್ರು.. ಈಗ ನಾನೂ ಸಾವಿರ ಜನ ಇದ್ರು ಎಲ್ಲರ ಎದ್ರಿಗೆ ದೈರ್ಯದಿಂದ ಮಾತಾಡ್ತೀನಿ ಇದಕ್ಕೆ ಕಾರಣ ನನ್ ಟೀಚರ್.. ನಾನೂ ಕವಿತೆ ಕವನ ಕಥೆಗಳನ್ನ ಬರೀತೀನಿ.. ಅದನ್ನ ಮೊದಲು ಗುರುತಿಸಿದ್ದು ಅವ್ರೆ.. ಇವತ್ತು ನಾನ್ ಎಷ್ಟೋ ಪ್ರಶಸ್ತಿಗಳನ್ನ ಪಡ್ಕೊಂದು ಇದೀನಿ ಇದೆಲ್ಲ ಟೀಚರ್ ಇಂದನೆ ಸಾಧ್ಯ..
     ಅವ್ರೂ ನಂಗೆ ಮಾತ್ರಾ ಅಲ್ಲಾ ಎಷ್ಟೋ ಜನಕ್ಕೆ ಫೇವರೆಟ್... ಎಷ್ಟೋ ನನ್ ಅಂತಾ ಮಕ್ಕಳಿಗೆ ಒಳ್ಳೇ ದಾರಿ ತೋರಿಸಿದ್ದಾರೆ.. ನಾನ್ ಅವ್ರನ್ನ ಅಮ್ಮನ ಸ್ಥಾನದಲ್ಲಿ ನೋಡ್ತೀನಿ... ಅವ್ರೂ ಯಾವಾಗಲೂ ಖುಷಿಯಾಗಿರ ಬೇಕು...
Advance Happy Teacher's Day Teacher... 
      ಮತ್ತೆ ನಿಮಗೂ ಕೂಡ ತುಂಬಾ Thanks. ನನ್ ಟೀಚರ್ ಬಗ್ಗೆ ಮಾತಾಡೋಕೆ ಅವಕಾಶ ಮಾಡಿ ಕೊಟ್ಟಿದ್ದಕ್ಕೆ... ಪ್ರತೀ ಒಬ್ಬ ವಿದ್ಯಾರ್ಥಿ ಜೀವನದಲ್ಲು ನನ್ ನಾಗರತ್ನ ಟೀಚರ್ ತರ ಟೀಚರ್ ಸಿಕ್ಕಿದ್ರೆ ಆ ಸ್ಟೂಡೆಂಟ್ ಲೈಫ್ ತುಂಬಾ ಚೆನ್ನಾಗಿರುತ್ತೆ.
................................................... ಪಲ್ಲವಿ
ಗುಡ್ಡಿ ಮನೆ ಗಿರಿಜಾ ನಿಲಯ
ಕೋಟ ಪಡುಕರೆ, ಉಡುಪಿ ಜಿಲ್ಲೆ 
*****************************************

                     

      ಗುರುವಿನ ಗುಲಾಮನಾಗುವ ತನಕ       
      ದೊರೆಯದಣ್ಣ ಮುಕುತಿ 
      ಪರಿಪರಿ ಶಾಸ್ತ್ರವನೋದಿದರೇನು 
      ವ್ಯರ್ಥವಾಯ್ತು ಭಕುತಿ.
'ಗುರು' ಎಂದರೆ ವಿದ್ಯಾರ್ಥಿಗಳನ್ನು ತಿದ್ದಿ ತೀಡಿ ಸತ್ಪಥದಲ್ಲಿ ನಡೆಸುವವರು. ನಾವು ಜೀವನದಲ್ಲಿ ಏನಾದರೂ ಸಾಧನೆ ಮಾದಿದ್ದೇವೆಂದರೆ ಅದರ ಹಿಂದೆ ಕಾಣದ ಕೈ ಗುರುವೆಂದರೆ ತಪ್ಪಾಗಲಾರದು. ಹೀಗೆ ವಿದ್ಯಾರ್ಥಿಗಳ ಸಾಧನೆಗೆ ಕೈಗನ್ನಡಿಯಾಗಿರುವ, ಆಗುತ್ತಿರುವ ಗುರುವರ್ಯರು ಸದಾ ನಮ್ಮ ನೆನಪಿನಲ್ಲಿ ಮರುಕಳಿಸುತ್ತಾರೆ.
       ಪ್ರಾಥಮಿಕ ಶಿಕ್ಷಣದ ಹಂತವು ಅನುಭವಗಳನ್ನು ಕಟ್ಟಿಕೊಡುವ, ಘಟನೆಗಳು ಸ್ಮೃತಿಪಟಲದಲ್ಲಿ ಅಚ್ಚೊತ್ತಿರುವ ಸಮಯ. ನನಗೆ ಸ್ಪೂರ್ತಿ ನೀಡಿದ ಶಿಕ್ಷಕರು ಅನೇಕರಿದ್ದಾರೆ. ಅವರಲ್ಲಿ ಕೆಲವರನ್ನು ಈ ಕ್ಷಣದಲ್ಲಿ ನೆನಪಿನ ಅಂಗಳಕ್ಕೆ ಕೈಚಾಚಿ ಕರೆಯುತ್ತಿದ್ದೇನೆ.
      ನನ್ನ ಮೇಲೆ ಪ್ರಭಾವ ಬೀರಿದ ಮೊದಲ ಶಿಕ್ಷಕರೆಂದರೆ ಸುಬ್ಬಯ್ಯ ಮೇಷ್ಟ್ರು. ನಾನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಯ್ಕನಕಟ್ಟೆ ಇಲ್ಲಿ ಓದುತ್ತಿರುವಾಗ ಮುಖ್ಯ ಶಿಕ್ಷಕರಾಗಿದ್ದವರು. ನಾನು 3ನೇ ತರಗತಿಯಲ್ಲಿದ್ದಾಗ ಅವರು ಅ ಶಾಲೆಗೆ ಬಂದ ಹೊಸತು. ನಾನು ತರಗತಿ ಲೀಡರ್ ಆಗಿದ್ದೆ. ತರಗತಿ ಶಿಕ್ಷಕರಾದ ಗಣಪತಿ ಮೇಷ್ಟ್ರು  ತಿಳಿಸಿದಂತೆ ಗಲಾಟೆ ಮಾಡಿದ ವಿದ್ಯಾರ್ಥಿಗಳ ಹೆಸರು ಬರೆಯುತ್ತಿದ್ದೆ. ತರಗತಿಯಲ್ಲಿ ತುಂಬಾ ತೊಂದರೆ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಗಲಾಟೆ ಮಾಡಬೇಡ ಎಂದು ಅವನ ಹತ್ತಿರ ಹೇಳುತ್ತಿರುವಾಗಲೆ ಸುಬ್ಬಯ್ಯ ಮೇಷ್ಟ್ರು ತರಗತಿಗೆ ಬಂದವರೇ ನಾನೇ ಮಾತನಾಡುತ್ತಿರುವೆನೆಂದು ಹಿಂದಿನಿಂದ ಬೆನ್ನಿನ ಮೇಲೊಂದು ಹೊಡೆದು ಬಿಟ್ಟರು. ಇದುವರೆಗೆ ಏನೂ ತಪ್ಪು ಮಾಡದೇ ಒಂದು ಪೆಟ್ಟು ತಿನ್ನದ ನನಗೆ ದುಃಖ ಸಹಿಸಲಾಗಲಿಲ್ಲ. ತುಂಬಾ ಅತ್ತು ಬಿಟ್ಟೆ. ಉಳಿದ ವಿದ್ಯಾರ್ಥಿಗಳೆಲ್ಲರೂ ಸರ್ ಅವಳು ತರಗತಿ ಲೀಡರ್ ಹೆಸರು ಬರೆಯುತ್ತಿದ್ದಾಳೆ. ಅವಳು ಅವನ ಹತ್ತಿರ ಮಾತನಾಡಬೇಡ ಎಂದು ಹೇಳುತ್ತಿದ್ದಾಳೆ ಎಂದರು. ಆಗ ಅವರು ಏನೂ ಹೇಳದೆ ತರಗತಿಯಿಂದ ಹೊರನಡೆದರು. ಸಂಜೆ ಘಂಟೆ ಆದ ನಂತರ 7ನೇ ತರಗತಿ ವಿದ್ಯಾರ್ಥಿಯೊಬ್ಬ ಬಂದು ಮುಖ್ಯ ಶಿಕ್ಷಕರು ನನ್ನನ್ನು ಕರೆಯುತ್ತಿರುವುದಾಗಿ ತಿಳಿಸಿದ. ನಾನು ಭಯದಿಂದಲೇ ಹೋದೆ. ಆಗ ಅವರು ನನ್ನ ಬೆನ್ನು ಸವರಿ ತಪ್ಪಾಯಿತಮ್ಮ, ಗೊತ್ತಾಗದೆ ನಿನಗೆ ಹೊಡೆದು ಬಿಟ್ಟೆ ಎಂದರು. ಆದರೆ ನನ್ನ ಬಾಯಿಯಿಂದ ಮಾತೆ ಹೊರಡಲಿಲ್ಲ.
     ನಾನು ಆಗ ಐದನೇ ತರಗತಿಯಲ್ಲಿ ಇದ್ದೆ. ಸುಬ್ಬಯ್ಯ ಮೇಷ್ಟ್ರು ಏಳನೇ ತರಗತಿಯಲ್ಲಿ ಆಂಗ್ಲ ಭಾಷೆ ಪಾಠ ಮಾಡುತ್ತಿದ್ದರು ಅಲ್ಲಿ ವಿದ್ಯಾರ್ಥಿಗಳಿಗೆ ಕೆಲವೊಂದು ಉಕ್ತಲೇಖನಗಳನ್ನು ನೀಡಿದ್ದರು. ಹೆಚ್ಚಿನ ವಿದ್ಯಾರ್ಥಿಗಳು ಕೆಲವು ಪದಗಳನ್ನು ತಪ್ಪಾಗಿ ಬರೆದಿದ್ದರು.ಅವರು ನನ್ನನ್ನು ಕರೆಸಿ ಆ ಪದಗಳನ್ನು ಹೇಳಿ ಕಪ್ಪುಹಲಗೆ ಮೇಲೆ ಬರೆಯಲು ಹೇಳಿದರು ನಾನು ಹತ್ತು ಪದಗಳನ್ನು ಸರಿಯಾಗಿ ಬರೆದೆ. ಆಗ ಅವರು ಐದನೇ ತರಗತಿ ವಿದ್ಯಾರ್ಥಿನಿ ಎಷ್ಟು ಚೆನ್ನಾಗಿ ಇಂಗ್ಲಿಷ್ ಪದಗಳನ್ನು ಬರೆದಿದ್ದಾಳೆ ನೋಡಿಎಂದರು. ಒಂದನೇ ತರಗತಿ ಯಲ್ಲಿರುವಾಗಲೆ ಶಿಕ್ಷಕಿಯಾಗಬೇಕೆಂಬ ಆಸೆ ಹೊತ್ತಿದ್ದ ನನಗೆ ಕಪ್ಪು ಹಲಗೆಯ ಮೇಲೆ ಶಿಕ್ಷಕರು ಹೇಳಿದ ಪದಗಳನ್ನು ತಪ್ಪಿಲ್ಲದೆ ಬರೆದಾಗ ಶಿಕ್ಷಕಿ ಆದಷ್ಟೆ ಖುಷಿ ಆಯಿತು.
       ಮುಂದೆ ಅವರು ನನಗೆ ಏಳನೇ ತರಗತಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ವಿಷಯಕ್ಕೆ ಶಿಕ್ಷಕರಾಗಿದ್ದರು. ಬಹಳ ಚೆನ್ನಾಗಿ ಈ ವಿಷಯಗಳನ್ನು ಕಲಿಸುತ್ತಿದ್ದರು. ನಾನು ಏಳನೇ ತರಗತಿಯನ್ನು ಉತ್ತಮ ಅಂಕಗಳನ್ನು ಪಡೆಯಲು ಹಾಗೂ ಕಲಿಕೆಯಲ್ಲಿ ಮುಂದೆ ಹೋಗಲು ಅವರೇ ಕಾರಣವೆಂದರೆ ತಪ್ಪಾಗಲಾರದು. ಇವರ ಜೊತೆಯಲ್ಲಿ ಒಂದನೇ ತರಗತಿಯಲ್ಲಿ ನನಗೆ ಅಕ್ಷರಾಭ್ಯಾಸ ಮಾಡಿಸಿದ ಲೀಲಾವತಿ ಟೀಚರ್, ಐದನೇ ತರಗತಿಯಲ್ಲಿ ಇಂಗ್ಲಿಷ್ ಕಲಿಸಿದ ಭಾಗೀರಥಿ ಟೀಚರ್, ಎಂಟನೇ ತರಗತಿಯಲ್ಲಿ ಗಣಿತ ಕಲಿಸಿದ ರೇವಣ್ಣ ಮೇಷ್ಟ್ರು 9ನೇ ತರಗತಿ ಯಲ್ಲಿ ಇಂಗ್ಲಿಷ್ ಕಲಿಸಿದ ಅನಂತ ಮೇಷ್ಟ್ರು ಹೀಗೆ  ಅನೇಕ ಶಿಕ್ಷಕರು ಇಂದು ನಾನು ಶಿಕ್ಷಕ ವೃತ್ತಿಗೆ ಬರಲು ಹಾಗೂ ಪ್ರಾಮಾಣಿಕವಾಗಿ ಶಿಕ್ಷಕ ಸೇವೆ ಸಲ್ಲಿಸಲು ನನಗೆ ಸ್ಫೂರ್ತಿಯಾಗಿದ್ದಾರೆ. ನನಗೆ ಕಲಿಸಿದ ಜೊತೆಗೆ ಮಾರ್ಗದರ್ಶನ ಮಾಡಿದ ಗುರುಗಳೆಲ್ಲರ ಪಾದಾರವಿಂದಗಳಿಗೆ ಶಿಕ್ಷಕ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಭಕ್ತಿಪೂರ್ವಕ ನಮನಗಳನ್ನು  ಸಮರ್ಪಿಸುತ್ತಿದ್ದೇನೆ.
....................................... ಲಕ್ಷ್ಮೀ, ಸಹಶಿಕ್ಷಕಿ 
ಸ. ಉ. ಹಿ. ಪ್ರಾಥಮಿಕ ಶಾಲೆ 
ಕಿಲೆಂಜಾರು. ಕುಪ್ಪೆಪದವು.
ಮಂಗಳೂರು,  ದಕ್ಷಿಣ ವಲಯ.
ದಕ್ಷಿಣ ಕನ್ನಡ ಜಿಲ್ಲೆ 
ಮೊಬೈಲ್ ಸಂಖ್ಯೆ: 9535641515
*****************************************           


       
     ನಾನಾಗ  ಸ. ಹಿ. ಪ್ರಾ. ಶಾಲೆ, ಪುಳಿತ್ತಡಿಯಲ್ಲಿ ಆರನೇ  ತರಗತಿ ಓದುತ್ತಿದ್ದ ಸಮಯ. ಆಗ ಮಧ್ಯಾಹ್ನದ ಊಟಕ್ಕೆ ಬುತ್ತಿ ತೆಗೆದುಕೊಂಡು ಹೋಗಿ ಎಲ್ಲಾ ಸಹಪಾಠಿಗಳೊಂದಿಗೆ ಹಂಚಿ ಉಣ್ಣುವ ಪರಿಪಾಠವಿತ್ತು. ಹಳ್ಳಿಯ ಮನೆಗಳಿಂದ ಶಾಲೆಗೆ ಹೋಗುವ ನಮ್ಮ ಬುತ್ತಿಯಲ್ಲಿ ಅನ್ನ ಸಾರು, ವಿವಿಧ ತಿಂಡಿತಿನಿಸುಗಳು ಇರುತ್ತಿರಲೇ ಇಲ್ಲ. ತಂಗಳನ್ನ, ಮೊಸರು, ಉಪ್ಪಿನಕಾಯಿ, ಉಪ್ಪು ಮೆಣಸುಗಳದ್ದೇ ದರ್ಬಾರ್.
      ಮಧ್ಯಾಹ್ನ ಆಯಿತೆಂದರೆ ಅಲ್ಲಲ್ಲಿ ಗುಂಪು ಕಟ್ಟಿಕೊಂಡು ಊಟ ಮಾಡುವ ತರಾತುರಿಯಲ್ಲಿದ್ದ ನನಗೂ ನನ್ನ ಸಹಪಾಠಿ ಕಮಲಾಕ್ಷಿಗೂ ಆ ದಿನ ಅಚ್ಚರಿಯೊಂದು ಕಾದಿತ್ತು. ಬುತ್ತಿಯಲ್ಲಿ ಅಮ್ಮ ಹಾಕಿಕೊಟ್ಟ ಉಪ್ಪು ಮೆಣಸು ಕಾಣೆಯಾಗಿತ್ತು. ಒಂದೆರಡು ದಿನಗಳ ಹಿಂದೆ ಹಿಡಿಯಷ್ಟು ಕಡಿಮೆಯಾಗುತ್ತಿದ್ದ ಉಪ್ಪು ಮೆಣಸಿನ ಬಜ್ಜಿ ಅಂದು ಮಾತ್ರ ಪೂರ್ತಿ ಮಂಗ ಮಾಯ.. ಈ ವಿಷಯ ಅಂದಿನ ಬ್ರೇಕಿಂಗ್ ನ್ಯೂಸ್ ಆಯಿತು. ಸುದ್ದಿ ಆಫೀಸ್ ರೂಂನಲ್ಲಿ ಊಟ ಮಾಡಲು ತಯಾರಿ ನಡೆಸುತ್ತಿದ್ದ ಶಿಕ್ಷಕರ ಬಳಿಯೂ ತಲುಪಿತು. ತನಿಖೆಯೂ ನಡೆಯಿತು. ಉಪ್ಪು- ಮೆಣಸು ಕದ್ದು ತಿಂದ ಕಳ್ಳರ ಸುಳಿವೇ ಸಿಗಲಿಲ್ಲ. ನಮ್ಮ ಬುತ್ತಿಯಲ್ಲಿದ್ದ ಬರೀ ಅನ್ನವನ್ನು ನೋಡಿದ ನಮ್ಮ ಪ್ರೀತಿಯ ಪೆಲ್ಸಿ ಟೀಚರ್ ನೇರ ಆಫೀಸ್ ರೂಮ್ ಗೆ ಹೋಗಿ ತಾನು ತಂದ ಬಟಾಟೆ- ಬಟಾಣಿ ಪಲ್ಯವನ್ನು ನಮ್ಮಿಬ್ಬರ ಬುತ್ತಿಗೆ ಹಾಕಿಯೇ ಬಿಟ್ಟರು. ನಾವೆಲ್ಲರೂ ತಬ್ಬಿಬ್ಬು. ಬೇಡವೆಂದು ಎಷ್ಟು ಹೇಳಿದರೂ ಕೇಳದೆ ಊಟ ಮಾಡಿಸಿಯೇ ಬಿಟ್ಟರು. ಟೀಚರ್ ಎಂದರೆ ಭಯದ ವಾತಾವರಣ ಸೃಷ್ಟಿಸಿಕೊಂಡ ನಮಗೆ ಅಂದು ಅವರಿಗೆ ನಮ್ಮ ಮೇಲಿದ್ದ ಕಾಳಜಿಯ ಇನ್ನೊಂದು ಮುಖ ಅರಿವಾಯಿತು.
      ಆ ನನ್ನ ಪ್ರೀತಿಯ ಪೆಲ್ಸಿ ಡಾಯಸ್ ಟೀಚರ್  ಪುತ್ತೂರು ತಾಲೂಕಿನ ಹೊಸಗದ್ದೆ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ  ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಅಕ್ಷರಾಭ್ಯಾಸದಿಂದ ಹಿಡಿದು ಹಾಡು, ನೃತ್ಯ, ನಾಟಕ, ಆಟ ಎಲ್ಲದರಲ್ಲೂ ಸೈ ಎನಿಸಿಕೊಂಡ ನಮ್ಮ ಟೀಚರ್ ನಮ್ಮೆಲ್ಲಾ ಪ್ರತಿಭೆಗಳಿಗೆ ನೀರೆರೆದು ಪೋಷಿಸಿ ಬೆಳೆಸಿದವರು. ಊರಿನ ಹಿರಿಯರಿಂದ ಹಿಡಿದು ಕಿರಿಯರವರೆಗೂ  ಪೆಲ್ಸಿ ಟೀಚರ್ ಎಂದರೆ ಇಂದಿಗೂ ಅಪಾರ ಗೌರವ. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ನಾನು ಅವರ ಎದುರು ಸಿಕ್ಕಿದರೆ, ನನಗೆ ಅವರೇ ಮೊದಲು ನಮಸ್ಕಾರ ಹೇಳಿ ಮಾತನಾಡಿಸುವ ಅವರ ಗುಣಗಳು ನಮಗೆಲ್ಲಾ ದಾರಿದೀಪ. 
     ನನ್ನ ಪ್ರೀತಿಯ ಪೆಲ್ಸಿ ಟೀಚರ್ ನೀವೆಲ್ಲೇ ಇರಿ, ಆರೋಗ್ಯವಾಗಿರಿ... ನಿಮ್ಮ ಬಾಳಲ್ಲಿ ಸುಖ ಶಾಂತಿ ನೆಮ್ಮದಿ ತುಂಬಿರಲಿ..... ನಿಮಗಿದೋ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.... ಇತೀ ತಮ್ಮ ಪ್ರೀತಿಯ ಶಿಷ್ಯೆ,
...................  ದೀಪಶ್ರೀ ಸಂತೋಷ್ , ಸಹ ಶಿಕ್ಷಕಿ 
ಸ. ಹಿ ಪ್ರಾ ಶಾಲೆ, ಕರಂಬಾರು, 
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************


     ನನ್ನ ಬದುಕಿನ ಅತಿ ದೊಡ್ಡ ಪ್ರೆರಣೆ - ರಮಾ ಮ್ಯಾಡಮ್. ತುಂಬಾ ಇಷ್ಟಪಟ್ಟು ಆರಿಸಿಕೊಂಡ ವೃತ್ತಿ ಉಪನ್ಯಾಸಕಿ ವೃತ್ತಿ. ಯಾವತ್ತೂ ಮನಸ್ಸಿನೊಳಗೊಂದು ಉತ್ಸಾಹವನ್ನು ತುಂಬುವ ವೃತ್ತಿಯ ಬಗ್ಗೆ ನಂಗೊಂಥರಾ ಅಭಿಮಾನ. ಆದರೆ ಅಭಿಮಾನದಿಂದ ಈ ವೃತ್ತಿಯನ್ನು ಆರಿಸಿಕೊಳ್ಳಿಕ್ಕೆ ಅತಿ ದೊಡ್ಡ ಪ್ರೇರಣೆಯಾದವರು ನನ್ನ ಪ್ರೀತಿಯ ರಮಾ ಮ್ಯಾಡಮ್. ಬಹುಶಃ ಅವರ ಬಗ್ಗೆ ಹೇಳ್ಲಿಕ್ಕೆ ಹೋದ್ರೆ ಪದಗಳೇ ಸಾಲುವುದಿಲ್ಲ‌. ಅವರ ಬಗ್ಗೆ ಹೇಳಿಕೊಂಡಷ್ಟು ಅವರ ಬಗ್ಗೆ ನನ್ನ ಅಭಿಮಾನ ಹೆಚ್ಚುತ್ತಾ ಹೋಗುತ್ತೆ...
      ಕಾಲ ಸರಿದಂತೆ ವಿದ್ಯಾರ್ಥಿ ಶಿಕ್ಷಕರ ಬಾಂಧವ್ಯ ಮಾಸುತ್ತಾ ಹೋಗುತ್ತೆ. ಆದ್ರೆ ನಮ್ಮ ವಿಷಯದಲ್ಲಿ ಮಾತ್ರ ಕಾಲ ಸರಿದಂತೆ ನಮ್ಮ ಬಾಂಧವ್ಯ ಗಟ್ಟಿಯಾಗುತ್ತಾ ಹೋಗಿದೆ. ವಿದ್ಯಾರ್ಥಿಯಾಗಿದ್ದಾಗ ನನಗೆ ಮ್ಯಾಡಮ್ ಬಗ್ಗೆ ವಿಪರೀತ ಭಯ. ಆದ್ರೆ ಅದರ ಜೊತೆಗೆ ಅಷ್ಟೇ ಗೌರವ. ಆದ್ರೆ ಅವರೊಟ್ಟಿಗೆ ಕೆಲಸ ಮಾಡುವ ಅವಕಾಶ ನನಗೆ ದೊರೆತಾಗ ಅವರ ವ್ಯಕ್ತಿತ್ವ ಎಷ್ಟು ಉನ್ನತವಾದದ್ದು ಎಂಬುದು ಮತ್ತಷ್ಟು ಅರಿವಾಯಿತು. ನನ್ನನ್ನೂ ಸೇರಿ ಅದೆಷ್ಟೋ ವಿದ್ಯಾರ್ಥಿಗಳು ಅವರ ಸಹಾಯದಿಂದಲೇ ವಿದ್ಯಾಭ್ಯಾಸ ಪೂರೈಸಿದ್ದಾರೆ. ತಾವು ಮಾಡಿದ, ಮಾಡುವ ಸಹಾಯವನ್ನು ಯಾರಲ್ಲೂ ಹೇಳಿಕೊಳ್ಳದ ಅವರ ವ್ಯಕ್ತಿತ್ವ ನನಗ್ಯಾವತ್ತು ಆಶ್ಚರ್ಯ ಉಂಟುಮಾಡುತ್ತೆ.
     ಒಟ್ಟಿನಲ್ಲಿ ಗಣಿತ ಪಾಠದ ಜೊತೆಗೆ ಜೀವನ ಪಾಠವನ್ನೂ ಹೇಳಿಕೊಟ್ಟ ಮ್ಯಾಡಮ್ ನನ್ನ ಜೀವನದಲ್ಲಿ ಮಾಡಿದ ಪ್ರಭಾವ ಬಹಳ. ನನ್ನ ಸ್ನೇಹಿತರೆಲ್ಲ ನೀನು ರಮಾ ಮ್ಯಾಡಮ್ ನ ಅಪ್ಪಟ ಶಿಷ್ಯೆ ಎಂದು ಹೇಳುತ್ತಿದ್ದಾಗ ನನಗೊಂದು ರೀತಿಯ ಪುಳಕ. ಆದ್ರೆ ಇತ್ತೀಚೆಗೊಂದು ದಿನ ಮ್ಯಾಡಮ್ ಅವರ ಪರಿಚಯದವರೊಂದಿಗೆ ಮಾತನಾಡುವಾಗ ನಾವಿಬ್ಬರು ಜೊತೆಯಾಗಿ ಹೋಗುವಾಗ ಕಾಲೇಜಿನಲ್ಲಿ ನಮ್ಮನ್ನು ಅಮ್ಮ ಮಗಳು ಅಂತಾ ಹೇಳ್ತಾ ಇದ್ರು ಅಂದಾಗ ನಂಗೊಂತರ ಖುಷಿ....!! ನಾವು ಅಪಾರ ಅಭಿಮಾನ ಇಟ್ಟುಕೊಂಡವರು ನಮ್ಮ ಬಗ್ಗೆಯೂ ಅದೇ ಅಭಿಮಾನ ಇಟ್ಕೊಂಡಿದ್ದಾರೆ ಅಂದಕೊಂಡಾಗ ಆಗುವ ಖುಷಿ ಹೇಳಿಕೊಳ್ಲಿಕ್ಕಾಗದ್ದು.. ಮತ್ತೆ ಮತ್ತೆ ನೆನಪಿಸಿಕೊಂಡಾಗ ಸುಂದರ ಅನುಭೂತಿ...
....................................... ಕವಿತಾ ಯಾದವ್
ಉಪನ್ಯಾಸಕಿ
ಅರಮನೆ, ಕಜಿಪಿತ್ಲು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*****************************************


Ads on article

Advertise in articles 1

advertising articles 2

Advertise under the article